ಜಮಾತ್​ ಎ ಇಸ್ಲಾಮಿ ಪಾಕ್​ನ ಐಎಸ್​ಐನೊಂದಿಗೆ ಸಂಬಂಧ ಹೊಂದಿದೆ

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ನಿಷೇಧಕ್ಕೊಳಪಟ್ಟಿರುವ ಜಮ್ಮು ಮತ್ತು ಕಾಶ್ಮೀರದ ಜಮಾತ್​ ಎ ಇಸ್ಲಾಮಿ ಸಂಘಟನೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐನೊಂದಿಗೆ ಸಂಬಂಧ ಹೊಂದಿದೆ ತಿಳಿದು ಬಂದಿದೆ.

ಜಮಾತ್​ ಎ ಇಸ್ಲಾಮಿ ಸಂಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿತ್ತು ಮತ್ತು ತನ್ನ ಉದ್ದೇಶ ಸಾಧನೆಗಾಗಿ ನವದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಕಚೇರಿಯ ಮೂಲಕ ಪಾಕ್​ ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿತ್ತು. ಜತೆಗೆ ಕಾಶ್ಮೀರಿ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲು, ಅವರಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಪೂರೈಸಲು ಐಎಸ್​ಐನಿಂದ ಅಗತ್ಯ ನೆರವನ್ನು ಪಡೆಯುತ್ತಿತ್ತು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಮಾತ್​ ಎ ಇಸ್ಲಾಮಿ ಸಂಘಟನೆ ಕಾಶ್ಮೀರದಲ್ಲಿ ಹತ್ತಾರು ಶಾಲೆಗಳನ್ನು ಹೊಂದಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಭಾರತ ವಿರೋಧಿ ಮನೋಭಾವವನ್ನು ಬೆಳೆಸಲಾಗುತ್ತಿತ್ತು. ಜಮಾತ್​ ಎ ಇಸ್ಲಾಮಿಯ ಯುವ ಸಂಘಟನೆ ಜಮೈತ್​ ಉಲ್​ ತುಲ್ಬಾ ಮೂಲಕ ಕಾಶ್ಮೀರಿ ಯುವಕರು ಉಗ್ರ ಸಂಘಟನೆಗಳಿಗೆ ಸೇರುವಂತೆ ಪ್ರೇರೇಪಿಸಲಾಗುತ್ತಿತ್ತು ಎಂಬುದು ಗುಪ್ತಚರ ಇಲಾಖೆಯ ವರದಿಯಿಂದ ತಿಳಿದು ಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಉಗ್ರನ ದಾಳಿ ನಡೆದ ನಂತರದಲ್ಲಿ ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಜಮಾತ್​ ಎ ಇಸ್ಲಾಮಿ ಸಂಘಟನೆಯನ್ನು ಐದು ವರ್ಷ ನಿಷೇಧಿಸಿ ಕೇಂದ್ರ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿತ್ತು.

ಜಮಾತೆ ಎ ಇಸ್ಲಾಮಿ ಹಿಂದ್​ನ ಸಹಸಂಘಟನೆಯಾಗಿ ಜಮಾತ್​ ಎ ಇಸ್ಲಾಮಿ 1945ರಲ್ಲಿ ಸ್ಥಾಪನೆಗೊಂಡಿತ್ತು. ರಾಜಕೀಯ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ತನ್ನ ಮೂಲ ಸಂಘಟನೆಯೊಂದಿಗೆ ಜಮಾತ್​ ಎ ಇಸ್ಲಾಮಿ 1953ರಲ್ಲಿ ಸಂಬಂಧ ಕಡಿದುಕೊಂಡಿತು. 1990ರಲ್ಲಿ ಮೊದಲ ಬಾರಿಗೆ ನಿಷೇಧಕ್ಕೆ ಒಳಪಟ್ಟಿತ್ತು. ಆದರೆ, 1995ರಲ್ಲಿ ಇದರ ನಿಷೇಧದ ಅವಧಿ ಮುಕ್ತಾಯವಾದ ಬಳಿಕ ಮತ್ತೆ ಕಾರ್ಯಚಟುವಟಿಕೆ ಆರಂಭಿಸಿತ್ತು. (ಏಜೆನ್ಸೀಸ್​)