ಜಲಿಯನ್​ ವಾಲಾಬಾಗ್​ ಹತ್ಯಾಕಾಂಡಕ್ಕೆ 100 ವರ್ಷ: ಸಂತಾಪ ಸೂಚಿಸಿದ ಪ್ರಧಾನಿ, ರಾಷ್ಟ್ರಪತಿ, ರಾಹುಲ್

ಅಮೃತಸರ್​: ಜಲಿಯನ್​ ವಾಲಾಬಾಗ್​ ಹತ್ಯಾಕಾಂಡ ನಡೆದು 100 ವರ್ಷಗಳಾದ ಹಿನ್ನೆಲೆಯಲ್ಲಿ ಅದರಲ್ಲಿ ಮಡಿದವರಿಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ರಾಹುಲ್​ ಗಾಂಧಿಯವರು ಅಮೃತಸರ್​ದಲ್ಲಿರುವ ಹುತಾತ್ಮರ ಸ್ಮಾರಕ್ಕೆ ಗೌರವ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿಯವರು ಈ ಬಗ್ಗೆ ಟ್ವೀಟ್​ ಮಾಡಿದ್ದು, ಜಲಿಯನ್​ ವಾಲಾಬಾಗ್​ ಹತ್ಯಾಕಾಂಡಕ್ಕೆ ಇಂದು 100 ವರ್ಷವಾಯಿತು. ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ ಹಾಗೂ ತ್ಯಾಗವನ್ನು ಮರೆಯಲಾಗದು. ಅವರು ಕನಸು ಕಂಡಂತೆ ಭಾರತವನ್ನು ಕಟ್ಟಲು ಹೋರಾಟಗಾರರ ನೆನಪೇ ಸ್ಫೂರ್ತಿ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರೂ ಕೂಡ ಹುತಾತ್ಮರಿಗೆ ನಮನ ಸಲ್ಲಿಸಿ ಟ್ವೀಟ್​ ಮಾಡಿದ್ದಾರೆ. ನಮ್ಮ ಪ್ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾಗಿದ್ದನ್ನು ಮರೆಯಲಾಗದು. ಅವರ ಹತ್ಯೆ ನಾಗರಿಕತೆಗೇ ಒಂದು ಕಪ್ಪುಚುಕ್ಕೆ. ಭಾರತ ಈ ದುರ್ಘಟನೆಯನ್ನು ಮರೆಯುವುದಿಲ್ಲ ಎಂದಿದ್ದಾರೆ.

ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ರಾಹುಲ್​ ಗಾಂಧಿ ಕೂಡ ಈ ಬಗ್ಗೆ ಟ್ವೀಟ್​ ಮಾಡಿದ್ದು, ಪ್ರಪಂಚವನ್ನೇ ದಿಗ್ಭ್ರಮೆಗೊಳಿಸಿದ ಜಲಿಯನ್​ ವಾಲಾಬಾಗ್​ ಹತ್ಯಾಕಾಂಡಕ್ಕೆ 100 ವರ್ಷಗಳಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೇ ಬದಲಿಸಿದ ಘಟನೆ ಇದು. ಇದರಲ್ಲಿ ಮಡಿದವರು ಎಂದಿಗೂ ಅಮರ ಎಂದು ಟ್ವೀಟ್​ ಮಾಡಿದ್ದಾರೆ.

ಬ್ರಿಟಿಷ್ ಹೈಕಮಿಷನರ್ ಗೌರವ

ಬ್ರಿಟಿಷ್​ ಹೈ ಕಮಿಷನರ್​ ಸರ್​ ಡೊಮಿನಿಕ್​ ಅಸ್ಕ್ವಿತ್​ ಅವರು ಶನಿವಾರ ಅಮೃತಸರಕ್ಕೆ ಭೇಟಿ ನೀಡಿ ಜಲಿಯನ್​ ವಾಲಾಬಾಗ್​ ಹತ್ಯಾಕಾಂಡದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದರು. ಆ ಘಟನೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅದರ ಬಗ್ಗೆ ತುಂಬ ದುಃಖವಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *