ಹಣಕ್ಕಾಗಿ ನಿಮ್ಮ ಮತ ಮಾರಿಕೊಳ್ಳಬೇಡಿ

ಝಳಕಿ: ಲೋಕಸಭೆ ಚುನಾವಣೆಯಲ್ಲಿ ಮತದಾರರು ಆಸೆ, ಆಮಿಷಕ್ಕೆ ಒಳಗಾಗದೇ ದೇಶದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗೆ ಮತ ನೀಡಬೇಕೆಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ ಪಾದಂಗಳವರು ಹೇಳಿದರು.

ಉತ್ತರ ಕರ್ನಾಟಕದ ಪರಮಪಾವನ ಸುಕ್ಷೇತ್ರವಾದ ಜೇವೂರದ ಶ್ರೀ ಹಠಯೋಗಿ ರೇವಣಸಿದ್ಧೇಶ್ವರ ಮಹಾಸ್ವಾಮೀಜಿಗಳ 33ನೇ ಪುಣ್ಯಾರಾಧನೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ, ಅದು ಭಾಗ್ಯವಂತರ ಮದುವೆ. ವೈಯಕ್ತಿಕ ಮದುವೆ ಮಾಡಲು ಸಾಲ ಮಾಡಿ ವಿಜೃಂಭಣೆಯಿಂದ ಮದುವೆ ಮಾಡಿಕೊಂಡು ಮುಂದೆ ಸಾಲ ತೀರಿಸಲು ನರಕಯಾತನೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಾಮೂಹಿಕ ವಿವಾಹದಲ್ಲಿ ತೊಡಗಿ ದುಂದುವೆಚ್ಚ ಮಾಡದೆ ಸುಖಕರ ಜೀವನ ಸಾಗಿಸಬಹುದು ಎಂದರು.

ಹಿರೂರಿನ ಜಯಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ಒಂದು ಪ್ರಾಣಿಗೆ ಇನ್ನೊಂದು ಪ್ರಾಣಿಯೇ ವೈರಿಯಾಗಿ ಮಾಡಿದ ಭಗವಂತ. ಆದರೆ, ಮನುಷ್ಯ ಪ್ರಾಣಿಗೆ ಇನ್ನೊಂದು ಮನುಷ್ಯ ಪ್ರಾಣಿಯೇ ವೈರಿ ಎಂದರಲ್ಲದೆ, ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆ ಮಾಡಿಕೊಂಡ ಜೋಡಿಗಳು ನೂರು ಕಾಲ ಸುಖಕರವಾಗಿರಲೆಂದು ಹಾರೈಸಿದರು.

ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಂ.ಆರ್. ಪಾಟೀಲ ಮಾತನಾಡಿ, ಪವಾಡ ಪುರುಷ ದೇವರೆಂದೇ ಹೆಗ್ಗಳಿಕೆಗೆ ಪಾತ್ರರಾಗಿರುವ ಹಠಯೋಗಿ ರೇವಣಸಿದ್ಧೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಮದುವೆ ಮಾಡಿಕೊಂಡ ನವದಂಪತಿಗಳು ಉತ್ತಮವಾಗಿ ಜೀವನ ಸಾಗಿಸಬೇಕು ಎಂದರು.

ಮಂದ್ರೂಪದ ರೇಣುಕಾ ಶಿವಾಚಾರ್ಯರು, ಹತ್ತಳ್ಳಿ ಶ್ರೀಗಳು, ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಹಿಂಗಣಿಯ ಮಾತೋಶ್ರೀ ರುಕ್ಮೀಣಿ ತಾಯಿ, ಶಾಸಕ ಯಶವಂತರಾಯಗೌಡ ಪಾಟೀಲ, ಸಂಭಾಜಿರಾವ ಮಿಸಾಳೆ, ಬಿ.ಎಂ. ಕೋರೆ, ಶ್ರೀಮಂತ ಕಾಪಸೆ, ಶಿವಗೊಂಡ ಬಿರಾದಾರ, ರಾಜುಗೌಡ ಬಿರಾದಾರ, ಗ್ರಾಪಂ ಸದಸ್ಯ ಮಹಾದೇವ ಮೇಲಿನಮನಿ, ಗುರುಬಾಳಪ್ಪ ಬಿರಾದಾರ,ಧನರಾಜ ಮುಜಗೊಂಡ, ದಾನಪ್ಪ ಕಟ್ಟಿಮನಿ ಮತ್ತಿತರರಿದ್ದರು.