Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ದೇಹವನು ಹೀಗಳೆಯಬೇಡ, ಹೀಗೆ-ಅಳೆಯಬೇಡ

Sunday, 21.01.2018, 3:05 AM       No Comments

ಕವಿ ಲಕ್ಷ್ಮಣರಾಯರು ಈಚೆಗೊಂದು ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ, ಅದರಲ್ಲಿ ತಮ್ಮ ಕವಿತೆಗಳನ್ನು ತಾವೇ ಹಾಡಿದ್ದಾರೆ. ಆ ಹಾಡುಗಳನ್ನು ಕೇಳುವಾಗ ಅವರ ಮಾತು, ಕವಿತೆ, ನಡವಳಿಕೆಗಳನ್ನು ಬಲ್ಲವರಿಗೆ ಒಂದು ವಿಶೇಷವಾದ ಅನುಭವವಾಗುತ್ತದೆ. ಅಂಥ ಅನುಭವಕ್ಕೆ ಲೇಖನ ರೂಪ ಕೊಟ್ಟಿದ್ದೇನೆ, ಮುಂದೆ ಓದಿ…

ನಮ್ಮ ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರಿದ್ದಾರಲ್ಲ, ಅವರಿಗೆ ಎಪ್ಪತ್ತು ತುಂಬಿದ್ದರೂ ಈಗಲೂ ಎಷ್ಟೋ ಮಂದಿ ಅವರನ್ನು ‘ತುಂಟ ಕವಿ’ ಅಂತಲೇ ಕರೆಯುತ್ತಾರೆ. ಹಾಗೆಂದು ಕರೆಯುವವರಿಗೆ ಅದರಿಂದ ಅದೇನು ಖುಷಿ ಸಿಗುತ್ತದೋ, ಬಿಡುತ್ತದೋ, ಆದರೆ, ಲಕ್ಷ್ಮಣ ರಾಯರಿಗೆ ಮಾತ್ರ ನಿಜವಾಗಿಯೂ ಖುಷಿ ಸಿಗುತ್ತಿರುವಂತೆ ಕಾಣುತ್ತಿದೆ. ಆ ತುಂಟತನವನ್ನು ಅವರು ಈಗಲೂ ಜೋಪಾನವಾಗಿ ಕಾಪಿಟ್ಟುಕೊಂಡಿರುವುದರಿಂದಲೇ ಈಗ ಪದ್ಯ ಬರೆದರೂ ಮಾತುಗಳನ್ನು ಬೇಲಿ ಹಾರಿಸಿ ತನ್ನ ಓದುಗರಿಗೆ ಖುಷಿ ಕೊಡಬಲ್ಲರು. ಪಡಲಿ ಬಿಡಿ. ಐವತ್ತಕ್ಕೇ ಬಾರದ ಮುಪ್ಪನ್ನು ಬರಿಸಿಕೊಂಡು ಬಣ್ಣ ರುಚಿ ವಾಸನೆಗಳಿಲ್ಲದ ಬದುಕು ಸವೆಸುವ, ಭಾಷಣ ಕೊರೆಯುವ ಎಷ್ಟೋ ಮಂದಿಯ ನಡುವೆ ಎಪ್ಪತ್ತರಲ್ಲೂ ತುಂಟನಾಗುಳಿಯುವ ‘ಸೌಭಾಗ್ಯ’ ಎಷ್ಟು ಮಂದಿ ಕವಿಗಳಿಗಿದ್ದೀತು! ಇರಲಿ ಬಿಡಿ.

ಲಕ್ಷ್ಮಣರಾಯರು ಈಚೆಗೊಂದು ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿದ್ದಾರೆ. ವಿಶೇಷವೆಂದರೆ, ಅದರಲ್ಲಿ ತಮ್ಮ ಕವಿತೆಗಳನ್ನು ತಾವೇ ಹಾಡಿದ್ದಾರೆ. ಲಕ್ಷ್ಮಣರಾಯರಿಗೆ ಹಾಡಲು ಬರುತ್ತದೆ ಎಂಬುದು ಅವರನ್ನು ಚೆನ್ನಾಗಿ ಬಲ್ಲವರಿಗೆ ಗೊತ್ತಿತ್ತು. ಅವರು ಇಷ್ಟು ಚೆಂದ ಹಾಡುತ್ತಾರೆಂಬುದು ಮಾತ್ರ ಬಹಳ ಮಂದಿಗೆ ಗೊತ್ತಿರಲಿಲ್ಲ. ಹಾಗೆಂದ ಮಾತ್ರಕ್ಕೆ ಅವರೊಬ್ಬ ಶ್ರೇಷ್ಠ ಗಾಯಕ ಅಂತ ನಾನು ಹೇಳುತ್ತಿಲ್ಲ. ಆದರೆ, ಆ ಹಾಡುಗಳನ್ನು ಕೇಳುವಾಗ ಅವರ ಮಾತು, ಕವಿತೆ, ನಡವಳಿಕೆಗಳನ್ನುಬಲ್ಲವರಿಗೆ ಒಂದು ವಿಶೇಷವಾದ ಅನುಭವವಾಗುತ್ತದೆ. ಅದು ಯಾಕೆಂದರೆ ಅವು ಕನ್ನಡದ ಪದ್ಯಗಳೇ ಆದರೂ ಆ ನುಡಿ, ನುಡಿಗಟ್ಟುಗಳು, ಆ ಮಾತುಗಳ ಒಗರು, ಹೊಗರು, ರುಚಿಗಳೆಲ್ಲವೂ ಲಕ್ಷ್ಮಣರಾಯರವೇ. ಆ ಅಕ್ಷರಗಳನ್ನು ಅವರೇ ಉಚ್ಚರಿಸಿದಾಗ ಅವು ಅವರವೇ ಖಾಸಗಿ ಅನ್ನಿಸುತ್ತವೆ. ಹಾಗಾಗಿ ಅವರ ಪದ್ಯಗಳನ್ನು ಅವರೇ ಹಾಡುವಾಗ ಕವಿ ತನ್ನನ್ನೇ ಹಾಡಿಕೊಳ್ಳುವಂತೆ ತನ್ನನ್ನೇ ತಾನು ತೋಡಿಕೊಳ್ಳುವಂತೆ ಕೇಳಿಸುತ್ತವಾಗಿ ಅವುಗಳನ್ನು ಕೇಳುವುದೊಂದು ವಿಶೇಷ ಅನುಭವ. ಆದ್ದರಿಂದ ಆ ಹಾಡುಗಳನ್ನು ನಾನು ಅದೆಷ್ಟೆಷ್ಟು ಬಾರಿ ಕೇಳಿದ್ದೇನೆಯೋ ಲೆಕ್ಕವಿಟ್ಟಿಲ್ಲ.

ಇರಲಿ, ನಾನು ಈವತ್ತು ಮಾತಾಡ ಹೊರಟ ವಿಷಯವೇ ಬೇರೆ. ಆ ಧ್ವನಿ ಸಾಂದ್ರಿಕೆಯಲ್ಲಿ ಒಂದು ಪದ್ಯ ಇದೆ. ‘ದೇಹವನು ಹೀಗಳೆಯಬೇಡ/ ಗೆಳೆಯಾ, ದೇಹವನು ಹೀ-ಗಳೆಯಬೇಡ’ ಅಂದ ಆರಂಭವಾಗುತ್ತದೆ. ಅದು ಇಲ್ಲಿ ‘ಹೀಗಳೆಯಬೇಡ’ ಅನ್ನುವ ಪದದಲ್ಲಿ ಒಂದು ಶ್ಲೇಷೆ ಇದೆ. ಹೀಗಳೆಯಬೇಡ ಅಂದರೆ ತಾತ್ಸಾರ ಮಾಡಬೇಡ, ಹೀಯಾಳಿಸಬೇಡ, ಆಕ್ಷೇಪಿಸಬೇಡ ಎಂಬುದೊಂದು ಅರ್ಥವಾದರೆ ದೇಹವನ್ನು ಹೀಗೆ-ಅಳೆಯಬೇಡ ಎಂಬ ಅರ್ಥವೂ ಇದೆ. ‘ನೀನಾಗಿ ಕಲ್ಪಿಸಿದ ಮಾಪಕಗಳಿಂದ’ ಎಂಬ ಅದರ ಮುಂದಿನ ಸಾಲು ಈ ಎರಡನೇ ಅರ್ಥವನ್ನು ದೃಢಪಡಿಸುತ್ತದೆ.

ಲಕ್ಷ್ಮಣರಾಯರ ಧೋರಣೆಗೆ ತಕ್ಕಹಾಗೇ ಇದೆ ಈ ಮಾತು. ಆದರೆ ನಮ್ಮ ಪರಂಪರೆಯನ್ನು ದೇಹವನ್ನು ಹಾಗೆ ಹೀಗಳೆದುದೇ ಹೆಚ್ಚು. ಕನಕದಾಸರ ಹರಿಭಕ್ತಿಸಾರದ ಈ ಪದ್ಯವನ್ನು ನೋಡಿ – ‘ಎಂಟು ಗೇಣಿನ ದೇಹ ರೋಮಗ/ಳೆಂಟುಕೋಟಿ ಕೀಲ್ಗಳಿರುವ/ತ್ತೆಂಟುಮಾಂಸಗಳಿಂದ ಮಾಡಿದ ಮನೆಯ ಮನವೊಲಿದು/ನೆಂಟ ನೀನಿರ್ದಗಲಿದೊಡೆ ಒಣ/ ಹೆಂಟೆಯಲಿ ಮುಚ್ಚುವರು ದೇಹದ/ ಲುಂಟೆ ಫಲ ಪುರುಷಾರ್ಥ ರಕ್ಷಿಸು ನಮ್ಮ ನನವರತ/’

ಇದು ಎಂಟು ಗೇಣಿನ ದೇಹ, ರೋಮಗಳೆಂಟು ಕೋಟಿ, ಕೀಲುಗಳಿಪ್ಪತ್ತೆಂಟು, ಮಾಂಸಗಳಿಂದ ಮಾಡಿದ ಮನೆಯಿದು. ಇದರಲ್ಲಿ ನೆಂಟ – ಇಲ್ಲಿ ಭಗವಂತ- ಇದ್ದು ಅಗಲಿದರೆ ಈ ದೇಹವನ್ನು ಒಣಮಣ್ಣ ಹೆಂಟೆಗಳಿಂದ ಮುಚ್ಚುವರು. ಆದ್ದರಿಂದ ಈ ದೇಹದಲ್ಲಿ ಯಾವ ಫಲ ಪುರುಷಾರ್ಥವಿದೆ, ಶ್ರೀಹರಿಯೇ ನಮ್ಮನ್ನು ಅನವರತವೂ ರಕ್ಷಿಸು ಅನ್ನುವುದು ಈ ಪದ್ಯದ ತಾತ್ಪರ್ಯಾರ್ಥ. ಇದೊಂದು ಉದಾಹರಣೆಯಷ್ಟೆ. ಇಂಥ ಅರ್ಥ ಬರುವ ಬೇಕಾದಷ್ಟು ಪದ್ಯಗಳು ಸಿಗುತ್ತವೆ.

‘ಮಾನವಾ, ದೇಹವೂ ಮೂಳೆ ಮಾಂಸದ ತಡಿಕೆ’ ಅನ್ನುವ ಹುಣಸೂರು ಕೃಷ್ಣಮೂರ್ತಿಯವರು ಭಕ್ತ ಕುಂಬಾರ ಚಿತ್ರಕ್ಕಾಗಿ ಬರೆದ ಈ ಹಾಡೂ ಕನಕದಾಸರು ಹೇಳಿದ್ದನ್ನೇ ಬೇರೆಯ ಮಾತುಗಳಲ್ಲಿ ಹೇಳುತ್ತದೆ. ಪಾಶ್ಚಿಮಾತ್ಯರಲ್ಲೂ ಈ ಶರೀರವನ್ನು ಕುರಿತು ಇಂಥದ್ದೇ ಮಾತುಗಳಿವೆ – ‘ಆಧ್ಯಾತ್ಮಿಕ ಅನುಭೂತಿಯು ನಿತ್ಯವಾದುದಾಗಬೇಕಾದರೆ, ನಾವೆಲ್ಲರೂ ಮನುಷ್ಯದೇಹದಲ್ಲಿ ಕೆಲಸಮಯವಷ್ಟೇ ವಾಸಿಸಲು ಬಂದಿರುವ ಆತ್ಮಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಂಡಿರಬೇಕು’.

‘ಮನುಷ್ಯ ಶರೀರಕ್ಕೆ ಮಿತಿಗಳಿವೆ. ಮನುಷ್ಯಚೈತನ್ಯಕ್ಕೆ ಎಲ್ಲೆಯೇ ಇಲ್ಲ’ ‘ಮನುಷ್ಯ ಶರೀರವು ಹುಟ್ಟಿದ ಕ್ಷಣದಿಂದಲೇ ಇಷ್ಟಿಷ್ಟು ಸಾಯಲೂ ತೊಡಗುತ್ತದೆ. ಶರೀರಕ್ಕೆ ಸಾವೂ ಒಡಹುಟ್ಟೇ ಆಗಿದೆ’. ಹಾಗೆಂದ ಮಾತ್ರಕ್ಕೆ ಇಂಥ ಮಾತುಗಳಿಗೆ ಭಿನ್ನವಾದ ವಿರುದ್ಧವಾದ ಅಭಿಪ್ರಾಯಗಳು ನಮ್ಮಲ್ಲಿಯಾಗಲೀ, ಪಾಶ್ಚಿಮಾತ್ಯರಲ್ಲಿಯಾಗಲೀ ಇಲ್ಲವೇ ಇಲ್ಲವೆಂದಲ್ಲ. ‘ಶರೀರಮಾದ್ಯಂ ಖಲು ಧರ್ಮಸಾಧನಂ’ (ಶರೀರವೇ ಧರ್ಮದ ಮೊದಲ ಸಾಧನ) ಎಂಬುದು ಕಾಳಿದಾಸನ ಬಹು ಪ್ರಸಿದ್ಧವಾದ ಮಾತು.

‘ಮೈ ಒಂದು ಜನ್ಮಕ್ಕೆ ನಾವು ಹೊದೆದು ಬಂದಿರುವ ಒಂದು ವಸ್ತ್ರ. ಅದನ್ನು ಅಲಕ್ಷ್ಯವಾಗಿ ಕಾಣಬಾರದು. ಏಕೆಂದರೆ ಈ ಜನ್ಮಕ್ಕೆ ಇದು ಒಂದೇ ವಸ್ತ್ರ. ಹಾಗೆಯೇ ಅದರ ಕಷ್ಟ ಸುಖವೇ ದೊಡ್ಡದೆಂದು ಅದಕ್ಕೆ ಸೋತುಕೊಳ್ಳಬಾರದು. ಏಕೆ? ಅದು ವಸ್ತ್ರ ಅಷ್ಟೇ. ಒಳಗೆ ನಾನು ಬೇರೆ ಇದ್ದೇನೆ. ನನಗಾಗಿ ಅದು ಇದೆ. ನಾನಿರುವುದು ಅದಕ್ಕಾಗಿ ಅಲ್ಲ. ಇದು ಜೀರ್ಣ ಆದಾಗ ನಾನು ಇದನ್ನು ಕಳಚಿ ಎಸೆಯುತ್ತೇನೆ. ಬೇರೆ ವಸ್ತ್ರವನ್ನು ಹೊದೆಯುತ್ತೇನೆ’. ಹೀಗೆಂದು ಮಾಸ್ತಿ ಬರೆಯುತ್ತಾರೆ – ಇದರಲ್ಲಿ ಹೊಸದೇನೂ ಇಲ್ಲ. ಭಗವದ್ಗೀತೆಯಲ್ಲಿ ಹೇಳಿರುವ ‘ವಾಸಾಂಸಿ ಜೀರ್ಣಾನಿ ಯಥಾ ವಿಹಾಯ…’ ಶ್ಲೋಕದ ವಿಸ್ತರಣೆಯಷ್ಟೇ ಅದು. ‘ನನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ’ ಎಂದು ಶರೀರವನ್ನು ವ್ಯಾಖ್ಯಾನಿಸಿದ ಬಸವಣ್ಣ ಶರೀರಕ್ಕೆ ಕೊಟ್ಟ ಗೌರವ ಬಹಳ ದೊಡ್ಡದು. ಅಮೆರಿಕದ ಕವಿ ವಾಲ್ಟ್ ವಿಚ್​ವುನ್ “If anything sacred, human body is sacred’ (ಪವಿತ್ರವೆನ್ನುವುದೇನಾದರೂ ಇರುವುದಾದರೆ ಅದು ಮನುಷ್ಯ ಶರೀರವಷ್ಟೇ) ಎಂದು ಹೇಳಿದ್ದಾನೆ.

ಇರಲಿ, ಇಂಥ ಮಾತುಗಳನ್ನು ನೀವು ಕೇಳಿಯೇ ಇರುತ್ತೀರಿ. ಮೊನ್ನೆ ಲಕ್ಷ್ಮಣರಾಯರ ದನಿಯಲ್ಲಿ ‘ದೇಹವನು ಹೀ-ಗಳೆಯಬೇಡ’ ಅನ್ನುವ ಹಾಡು ಕೇಳಿದಾಗ ಈ ದೇಹದ ಬಗ್ಗೆ ನಾನೊಂದಿಷ್ಟು ಬರೆಯಬೇಕೆನ್ನಿಸಿತು. ಬಹಳ ಹಿಂದೆ ವಿ.ಸ.ಖಾಂಡೇಕರರ ಯಯಾತಿಯನ್ನು ಓದಿದ್ದು ನೆನಪಾಯಿತು. ಆ ಕಾದಂಬರಿಯಲ್ಲಿ ಯಯಾತಿಯ ಅಣ್ಣ ‘ಯತಿ’ ಅನ್ನುವವನೊಬ್ಬ ಬರುತ್ತಾನೆ. ಅವರಿಬ್ಬರೂ ನಹುಷನ ಮಕ್ಕಳು. ‘ಈ ನಹುಷನ ಮಕ್ಕಳು ಯಾವತ್ತೂ ಸುಖವಾಗಿರದಿರಲಿ’ ಅನ್ನುವುದು ಅವರಿಗಂಟಿದ ಶಾಪ. ಅಲ್ಲಿ ಯಯಾತಿ ಸಕಲ ಐಹಿಕ ಭೋಗಗಳಲ್ಲಿ ಮುಳುಗಿಯೂ ‘ಸುಖ’ ಕಾಣದೆ ಪರಿತಪಿಸುತ್ತಾನೆ. ಆ ಭೋಗದ ದಾಹ ಎಷ್ಟು ಮಾತ್ರಕ್ಕೂ ತಣಿಯದೇ ತನ್ನ ಮಗನಿಂದಲೇ ‘ಯೌವನ’ವನ್ನು ಸಾಲ ಪಡೆಯುತ್ತಾನೆ. ಆದರೂ ಅವನಿಗೆ ‘ಸುಖ’ ಸಿಗುತ್ತಿಲ್ಲ. ಇತ್ತ ಅವನಣ್ಣ ‘ಯತಿ’. ಅರಮನೆಯಿಂದ ವಿಮುಖನಾಗಿ ದೇಹಕ್ಕೆ ಒಂದಿಷ್ಟು ಸುಖ ಕೊಡಬಾರದು ಎಂದು ಕಾಡು ಗುಹೆಗಳಲ್ಲಿ, ಬಿಸಿಲು, ಚಳಿ ಮಳೆಗಳಲ್ಲಿ ಅಲೆದಾಡುತ್ತಾರೆ. ನೊರಜುಗಲ್ಲಿನ ಮೇಲೆ, ಮುಳ್ಳುಗಳ ಮೇಲೆ ಮಲಗುತ್ತಾನೆ. ಒಂದೇ ಜಾಗದಲ್ಲಿದ್ದು, ಒಂದೇ ಒರಟು ಕಲ್ಲಿನ ಮೇಲೆ ಮಲಗಿದರೆ ಈ ಹಾಳು ಶರೀರ ಅದಕ್ಕೇ ಎಲ್ಲಿ ಹೊಂದಿಕೊಂಡು ‘ಸುಖ’ ಕಂಡುಕೊಂಡು ಬಿಡುತ್ತದೋ ಎಂದು ಇನ್ನಷ್ಟು, ಮತ್ತಷ್ಟು ಅನನಕೂಲವಿರುವ ಕಡೆಗೆ ಹೋಗಿಬಿಡುತ್ತಾನೆ. ಒಟ್ಟಿನಲ್ಲಿ ಸುಖವನ್ನು ಬಯಸುವವನಿಗೂ ಸುಖವಿಲ್ಲ. ಸುಖವನ್ನು ನಿರಾಕರಿಸಿದವನ ದೇಹಕ್ಕೂ ಸುಖವಿಲ್ಲ. ಈ ಎರಡೂ ಪಾತ್ರಗಳನ್ನುಎದುರಾ ಎದುರಾಗಿಸುತ್ತಲೇ ಕಾದಂಬರಿ ಘನ ಗಂಭೀರ ವಿಷಯಗಳನ್ನು ರ್ಚಚಿಸುತ್ತದೆ.

ಲಕ್ಷ್ಮಣರಾಯರ ಪದ್ಯದ ಪೂರ್ತಾ ಏನು ಹೇಳುತ್ತದೋ ಒಮ್ಮೆ ನೋಡಿ ಬಿಡಿ –

ದೇಹವನು ಹೀಗಳೆಯಬೇಡ – ಗೆಳೆಯಾ / ದೇಹವನು ಹೀ-ಗಳೆಯಬೇಡ / ಮೂಳೆ ಮಾಂಸದ ತಡಿಕೆ- ಇದು ಪಂಜರ / ಎಂದು ನೀನೆಂದರೂ ಇದು ಸುಂದರ / ಭವದೆಲ್ಲ ಅನುಭವ ಇದರ ಕೊಡುಗೆ / ಅನುಭಾವಕೂ ಇದೇ ಚಿಮ್ಮು ಹಲಗೆ ||

ಪಠಿಸುವಾಗಲೂ ನೀನು ತಾರಕದ ಮಂತ್ರ / ತನ್ನ ಪಾಡಿಗೆ ತಾನು ದುಡಿವುದೇ ಯಂತ್ರ / ಇದಕಿತ್ತರೂ ನಿನ್ನ ನಾಮಧೇಯ / ನಿನಗಿಂತಲೂ ಪ್ರಕೃತಿಗೆ ಇದು ವಿಧೇಯ ||

ಈ ಏಣಿಯನೆ ಬಳಸಿ ನೀನಿರುವೆ / ಕಡೆಗಿದನೆ ತೊಡಕೆಂದು ನೀ ದೂರುವೆ / ದೇಹವನು ತೊರೆದು ನೀನು ಪಾರಾದ ಬಳಿಕ / ಏನಿದ್ದರೇನು ಎಲ್ಲ ಸಂಪರ್ಕ||

ಪದ್ಯ ಸರಳವಾಗಿರುವುದರಿಂದ ಅದರ ಅರ್ಥ ವಿವರಿಸಬೇಕಾಗಿಲ್ಲ. ಒಟ್ಟಿನಲ್ಲಿ ಅನುಭಾವಕೂ ಚಿಮ್ಮುಹಲಗೆಯಾಗುವ ಈ ದೇಹದ ಕಾಂತಿ, ಸೊಬಗು, ಶಕ್ತಿ, ಸಾಮರ್ಥ್ಯ, ಕೌಶಲಗಳನ್ನು ಕಡೆಗಣಿಸಬೇಕಾಗಿಲ್ಲವೆಂಬುದನ್ನೇ ಕವಿ ಬಗೆಬಗೆಯಾಗಿ ಹೇಳುತ್ತಿರುವುದು ನಮಗೆ ಕೇಳಿಸುತ್ತದೆ.

ಹೌದೌದು. ಒಂದಿಷ್ಟು ಯೋಚಿಸಿದರೂ ಸಾಕು. ಈ ನಮ್ಮದೇ ದೇಹ ಅದೆಂಥ ವಿಸ್ಮಯತರವಾದದ್ದು ಅನ್ನುವುದು ಧ್ಯಾಸವಾಗುತ್ತ ಹೋಗುತ್ತದೆ. ಒಂದು ಸಣ್ಣ ಉದಾಹರಣೆ- ನನ್ನ ಸ್ನೇಹಿತನೊಬ್ಬನ ಮನೆ ಎರಡನೇ ಮಹಡಿಯಲ್ಲಿದೆ. ನಾನು ಪ್ರತೀಬಾರಿ ಅವನ ಮನೆಗೆ ಹೋದಾಗಲೂ ಸುಮಾರು ಮೂವತ್ತು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕು. ಸಾಮಾನ್ಯವಾಗಿ ಎಲ್ಲ ಕಡೆಯೂ ಮಹಡಿಯ ಮೆಟ್ಟಿಲುಗಳ ಎತ್ತರ ಒಂದೊಂದು ಸಮನಾಗಿರುತ್ತದೆ. ಆದರೆ ನನ್ನ ಸ್ನೇಹಿತನ ಮನೆಯ ಮೂವತ್ತು ಮೆಟ್ಟಿಲುಗಳಲ್ಲಿ ಹದಿನಾರನೆಯದೊಂದು ಮೆಟ್ಟಿಲು ಮಾತ್ರ ಅರ್ಧ ಅಂಗುಲ, ಕೇವಲ ಅರ್ಧ ಅಂಗುಲ ಎತ್ತರವಿದೆ. ಆಶ್ಚರ್ಯವೇನೆಂದರೆ ನಾನು ಪ್ರತೀಬಾರಿ ಮೆಟ್ಟಿಲನ್ನು ಹತ್ತಿ ಹೋಗುವಾಗಲೂ ಆ ಅರ್ಧ ಅಂಗುಲ ಎತ್ತರ ನನ್ನ ಕಾಲಿಗೆ ತಿಳಿದುಬಿಡುತ್ತದೆ. ಅಲ್ಲಿ ಕಾಲು ತನ್ನ ನಡಿಗೆಯ ಲಯ ತಪ್ಪಿಸಿಕೊಳ್ಳುತ್ತದೆ. ಕಣ್ಣಿಗೆ ಆ ಅರ್ಧ ಅಂಗುಲ ಎತ್ತರ ಗೊತ್ತಾಗದಿದ್ದರೂ ಕಾಲಿಗೆ ಅದು ಗೊತ್ತಾಗಿ ಬಿಡುತ್ತದೆ. ಇಂಥದನ್ನೆಲ್ಲ ನೆನೆದಾಗ ಈ ದೇಹದ ಅಚ್ಚರಿಗಳೆಲ್ಲ ನೆನಪಾಗಿ ಬಿಡುತ್ತವೆ. ಹಾಮೋನಿಯಮ್ಮನ್ನೋ, ವೀಣೆ, ಗಿಟಾರ್, ಕೊಳಲು, ತಬಲ, ಘಟಂ ಮುಂತಾದ ವಾದ್ಯಗಳನ್ನೋ ನುಡಿಸುವ ಬೆರಳಿಗೆ ಆ ಕ್ಷಿಪ್ರತೆ, ಆ ಕೌಶಲ, ಆ ವೇಗದಲ್ಲೂ ಅದದೇ ಮನೆಗಳನ್ನು ಮುಟ್ಟುವ, ಅದದೇ ತಂತಿಗಳನ್ನು ಮೀಟುವ ಶಿಕ್ಷಣ ಅದು ಹೇಗೆ ಬರುತ್ತದೆ ನೋಡಿ! ವಿಸ್ಮಯವಾಗುವುದಿಲ್ಲವಾ? ನಮ್ಮ ಹಲ್ಲುಗಳ ನಡುವೆ ನಾಲಗೆ ಸಲೀಸಾಗಿ ಓಡಾಡುವುದನ್ನು ನೋಡಿ, ಮೂರು ಜನ ಹಳ್ಳಿಯ ಹೆಣ್ಣು ಮಕ್ಕಳು ಒಂದೇ ಬೆರಳಿನಲ್ಲಿ ಬತ್ತ ಕುಟ್ಟುವುದನ್ನು ನೋಡಿ, ಹೂ ಕಟ್ಟುವ, ಮಗ್ಗ ನೇಯುವ, ಮಡಕೆ ತಟ್ಟುವ, ಹುಲ್ಲು ಕುಯ್ಯುವ, ಬಾವಿಯಿಂದ ನೀರು ಸೇದುವ, ಕೂದಲು ಕತ್ತರಿಸುವ, ಕುಕ್ಕೆ ನೇಯುವ, ಕಸೂತಿ ಹಾಕುವ, ರಂಗೋಲೆ ಬಿಡುವ ಕೌಶಲಗಳಲ್ಲಿ ನಮ್ಮ ಶರೀರದ ಲಯಬದ್ಧ, ಲೆಕ್ಕಾಚಾರದ ಚಲನೆಗಳೆಲ್ಲವೂ ನನಗೆ ಅಚ್ಚರಿಯೇ! ಅಷ್ಟೇ ಯಾಕೆ? ಈ ಶರೀರದ ಅಂಗಾಂಗಗಳನ್ನು ಬಳಸಿಯೇ ಅಂಥದೊಂದು ನೃತ್ಯ, ಕುಣಿತ ಹುಟ್ಟುವುದು, ಈ ಶರೀರದ ಕಂಠದಲ್ಲೇ ಅಂಥದೊಂದು ಹಾಡು ಹರಿಯುವುದು ವಿಸ್ಮಯವಲ್ಲವಾ? ಎಳೆಯ ಕಂದಮ್ಮನ ಮೈಯ ಮೃದುತ್ವ, ತಿಪ್ಪ ತಿಪ್ಪ ಹೆಜ್ಜೆ, ತೊದಲು ಮಾತು, ಚಿಗುರು ಬೆರಳುಗಳ ಸ್ಪರ್ಶ, ಕಣ್ಣೀರ ತುಳುಕು, ನಗೆಯ ಕುಲುಕು, ಎಂಥ ಆನಂದಾನುಭೂತಿಯನ್ನೂ ಹುಟ್ಟಿಸಿಬಿಡುತ್ತದಲ್ಲವಾ?

ಲಕ್ಷ್ಮಣರಾಯರು ಹೇಳುವುದರಲ್ಲಿ ನ್ಯಾಯ ಇದೆ. ಇಂಥದೊಂದು ಶರೀರವನ್ನು ಹೀಯಾಳಿಸುವುದು, ನಾವೇ ಕಲ್ಪಿಸಿದ ಮಾಪಕಗಳಿಂದ ಅಳೆದು ಇದಿಷ್ಟೇ ಅಂದುಬಿಡುವುದು ಸರಿಯಲ್ಲ ಅಲ್ಲವಾ? ನಮಗೆ ತಿಳಿಯದ ಈ ಶರೀರದ ವಿಸ್ಮಯಗಳು ಇನ್ನೂ ಬೇಕಾದಷ್ಟಿವೆಯಲ್ಲವಾ? ಏನೇನು ಸಿಗಬಹುದು ನೋಡೋಣ ಅಂತ ಅಂತರ್ಜಾವನ್ನೊಮ್ಮೆ ಇಣುಕಿದೆ.

ಅಬ್ಬ! ಸಾವಿರ ಪುಟ ಬರೆಯಬಹುದಾದಷ್ಟು ಮಾಹಿತಿ ಅಲ್ಲಿದೆ. ಸ್ಯಾಂಪಲ್ಲಿಗೆ ಒಂದಿಷ್ಟು ನೋಡಿ –

 • ನಮ್ಮ ದೇಹಕ್ಕಾಗುವ ರೂಪ, ರಸ, ಗಂಧ, ಸ್ಪರ್ಶ ಮುಂತಾದ ಅನುಭವಗಳು ನಮ್ಮ ಮಿದುಳಿಗೆ ತಲುಪುವುದು ನರಗಳ ಮೂಲಕ ಅಲ್ಲವಾ? ಆ ಸಂದೇಶದ ವೇಗ ಗಂಟೆಗೆ 170 ಮೈಲಿಗಳಂತೆ!
 • ನಮ್ಮದೊಂದು ಮಿದುಳಿನಲ್ಲಿ ಒಂದು ಬಹುದೊಡ್ಡ ಗ್ರಂಥಾಲಯದಷ್ಟು ಮಾಹಿತಿ ಸಂಗ್ರಹವಾಗಿರುತ್ತದೆಯಂತೆ! ಕಂಪ್ಯೂಟರ್ ಪರಿಭಾಷೆಯಲ್ಲಿ ಅದನ್ನು ಸುಮಾರು ಒಂದು ಸಾವಿರ ಟೆರಾ ಬೈಟ್ಸ್ ಅಂತ ಹೇಳುತ್ತಾರೆ. ಹಾಳಾದ್ದು! ಪರೀಕ್ಷೆ ಸಮಯದಲ್ಲಿ ಮಾತ್ರ ಆ ಗ್ರಂಥಾಲಯ ಮುಚ್ಚಿರುತ್ತದೆ!
 • ನಮ್ಮ ಮಿದುಳು ನಮ್ಮ ಎಚ್ಚರಾವಸ್ಥೆಗಿಂತಲೂ ನಿದ್ರಾವಸ್ಥೆಯಲ್ಲೇ ಹೆಚ್ಚು ಕೆಲಸ ಮಾಡುತ್ತಿದೆಯಂತೆ. ಅದಕ್ಕೆಷ್ಟು ಜವಾಬ್ದಾರಿ ಪಾಪ!
 • ನಸು ಗುಲಾಬಿ ಬಣ್ಣದ ಮಡಿಕೆ, ಮಡಿಕೆಯಾಗಿರುವ ಮೃದು ಮಾಂಸದ ಮುದ್ದೆಯಂತಿರುವ ನಮ್ಮ ಮಿದುಳಿನ ಎಂಭತ್ತು ಶೇಕಡ ಭಾಗ ಬರೀ ನೀರಂತೆ!
 • ಶರೀರದಲ್ಲಿ ಸಣ್ಣ ಕರುಳು ಅಂತ ಇದೆಯಲ್ಲ, ಅದರ ಉದ್ದ ನಮ್ಮ ಉದ್ದದ ನಾಲ್ಕರಷ್ಟಿರುತ್ತದೆಯಂತೆ. ಅಂದರೆ ನಾನು ಆರು ಅಡಿ ಎತ್ತರ ಇದ್ದರೆ ನನ್ನ ಕರುಳಿನ ಉದ್ದ ಇಪ್ಪತ್ತನಾಲ್ಕು ಅಡಿ. ಕರುಳು ಉದ್ದವಾದಷ್ಟೂ ಕರುಣೆ, ಕಕ್ಕುಲಾತಿ ಹೆಚ್ಚು ಅಂತ ತಿಳಕೊಳ್ಳಬೇಡಿ.
 • ನಮ್ಮ ಹೃದಯ ಅದೆಷ್ಟು ಒತ್ತಡದಲ್ಲಿ ರಕ್ತವನ್ನು ಪಂಪ್ ಮಾಡುತ್ತದೆ ಎಂದರೆ ಆ ರಕ್ತ ಹೊರಕ್ಕೆ ಚಿಮ್ಮಿದರೆ 30 ಅಡಿ ದೂರ ಚಿಮ್ಮುತ್ತದೆಯಂತೆ. ಸಿನಿಮಾದವರಿಗೆ ಹೇಳಬೇಡಿ. ಅವರು ಚಿಮ್ಮಿರುವುದೇ ಸಾಕು!
 • ನಮ್ಮ ಜಠರದಲ್ಲಿ ಜೀರ್ಣಕ್ರಿಯೆಗೆಂದು ಸ್ರವಿಸುವ ಆಮ್ಲ(ಅಜಿಛ) ಅದೆಷ್ಟು ಸ್ಟ್ರಾಂಗು ಅಂದರೆ ಅದರೊಳಗೆ ರೇಜರ್ ಬ್ಲೇಡುಗಳು ಬಿದ್ದರೂ ಕರಗಿ ಹೋಗುತ್ತವೆಯಂತೆ. ಹಾಗಾದರೆ ಜಠರದ ಒಳಪದರವೇಕೆ ಸುಡುವುದಿಲ್ಲ ಅನ್ನುತ್ತೀರೇನೋ? ಅದು ಸುಡುವ ಮೊದಲೇ ಹೊಸ ಪದರಗಳನ್ನು ಹುಟ್ಟಿಸಿಕೊಳ್ಳುತ್ತದೆಯಂತೆ. ಯಾರ್ಯಾರೋ ಏನೇನೋ ನುಂಗಿ ಅರಗಿಸಿಕೊಳ್ಳುತ್ತಾರಲ್ಲ, ಹೇಗೆ ಅಂತ ಗೊತ್ತಾಯಿತಾ?
 • ನಾವು ಒಂದು ಬಾರಿ ಸೀನಿದರೆ ಅದು ಗಂಟೆಗೆ ನೂರು ಮೈಲಿ ವೇಗದಲ್ಲಿ ಹೊರಗೆ ಬರುತ್ತದೆಯಂತೆ. ಕರವಸ್ತ್ರ ಇಟ್ಟುಕೊಂಡು ಸೀನಿ ಅದು ಒಳ್ಳೇ ಸ್ಪೀಡ್ ಬ್ರೇಕರ್!
 • ನಾವು ಒಂದು ಇಡೀ ಜೀವಮಾನದಲ್ಲಿ ಸ್ರವಿಸುವ ಜೊಲ್ಲು ರಸ (ಲಾಲಾರಸ) ಎರಡು ಸ್ವಿಮ್ಮಿಂಗ್ ಪೂಲ್​ಗಳನ್ನು ತುಂಬಿಸುವಷ್ಟಾಗುತ್ತದೆಯಂತೆ! ಆ ಸ್ವಿಮ್ಮಿಂಗ್ ಪೂಲ್​ನಲ್ಲಿ ಯಾರು ಈಜಾಡಬೇಕು?!
 • ಪ್ರತಿಯೊಬ್ಬರ ಫಿಂಗರ್ ಪ್ರಿಂಟ್ ಭಿನ್ನವಾಗಿರುವಂತೆ ನಾಲಿಗೆ ಪ್ರಿಂಟ್ ಕೂಡ ಭಿನ್ನವಾಗಿರುತ್ತದೆಯಂತೆ. ಅಂದರೆ ನಿಮ್ಮ ನಾಲಿಗೆಯ ಮೇಲೂ ನಿಮ್ಮ ವ್ಯಕ್ತಿತ್ವ ಮುದ್ರೆಯಾಗಿರುತ್ತದೆ ಎಚ್ಚರ!
 • ತುಂಬ ಊಟ ಮಾಡಿದ ಮೇಲೆ ಕಿವಿ ಸ್ವಲ್ಪ ಮಂದವಾಗುತ್ತದೆ. ಮೇಷ್ಟರುಗಳು ಹೊಟ್ಟೆ ತುಂಬಿದ ಹುಡುಗರಿಗೆ ಸ್ವಲ್ಪ ಜೋರಾಗಿ ಪಾಠ ಹೇಳಬೇಕು. ತುಂಬ ಜೋರಾಗಿ ಬೇಡ ಮಲಗಿರು ವವರಿಗೆ ಎಚ್ಚರವಾಗಿ ಬಿಟ್ಟೀತು!
 • ಗಂಡಸರಿಗಿಂತ ಹೆಣ್ಣು ಮಕ್ಕಳಿಗೆ ವಾಸನಾ ಶಕ್ತಿ ಹೆಚ್ಚು. ಇದನ್ನು ಹೇಳುವುದಕ್ಕೆ ವಿಜ್ಞಾನಿಯೇ ಬೇಕಾ? ಪ್ರತೀ ಗೃಹಸ್ಥನಿಗೂ ಅದು ಗೊತ್ತೇ ಗೊತ್ತು
 • ಪ್ರತೀ ಮನುಷ್ಯನ ದೇಹಕ್ಕೂ ಅದರದೇ ಆದ ಒಂದು ವಾಸನೆ ಇರುತ್ತದೆ. ಕುಡಿದಿದ್ದರೆ ಆ ವಾಸನೆಗೊತ್ತಾಗುವುದಿಲ್ಲ. ಈ ಪಟ್ಟಿ ಹೀಗೇ ಬೆಳೆಯುತ್ತದೆ. ಅಂಕಣದ ಜಾಗ ಮುಗಿದಿದೆ. ಏನೇ ಇರಲಿ. ದೇಹವನ್ನು ಹೀಗಳೆಯುವುದು ಬೇಡ, ಹೀಗೆ ಅಳೆಯುವುದೂ ಬೇಡ!

(ಲೇಖಕರು ಕನ್ನಡ ಪ್ರಾಧ್ಯಾಪಕರು, ಖ್ಯಾತ ವಾಗ್ಮಿ)

Leave a Reply

Your email address will not be published. Required fields are marked *

Back To Top