ಜೇಟ್ಲಿ-ಮಲ್ಯ ಭೇಟಿ ಕುರಿತು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರಾಹುಲ್​​

ನವದೆಹಲಿ: ದೇಶ ಬಿಡುವ ಮುನ್ನ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರನ್ನು ಭೇಟಿಯಾಗಿದ್ದೇ ಎಂಬ ಉದ್ಯಮಿ ವಿಜಯ್​ ಮಲ್ಯ ಅವರ ಹೇಳಿಕೆ ಸಂಬಂಧ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಜೇಟ್ಲಿ ಅವರನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯ ಮಲ್ಯ ಲಂಡನ್​​ಗೆ ಪಲಾಯನ ಮಾಡುವ ವಿಚಾರ ಜೇಟ್ಲಿ ಅವರಿಗೆ ಗೊತ್ತಿದ್ದರು ಕೇಂದ್ರ ತನಿಖಾ ಸಂಸ್ಥೆಗಳಿಗೇಕೆ ಮಾಹಿತಿ ನೀಡಲಿಲ್ಲ ಎಂದು ಪ್ರಶ್ನಿಸುವ ಮೂಲಕ ಟೀಕಾ ಪ್ರಹಾರ ನೆಡೆಸಿದರು.

ಮಾರ್ಚ್​ 1, 2016ರಂದು ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ಜೇಟ್ಲಿ ಮತ್ತು ಮಲ್ಯ ನಡುವೆ ನಡೆದ ಮಾತುಕತೆಯನ್ನು ಕಾಂಗ್ರೆಸ್​​ ಮುಖಂಡ ಪಿ.ಎಲ್​. ಪುನಿಯಾ ಅವರು ನೋಡಿದ್ದಾರೆಂದು ರಾಹುಲ್​ ಪ್ರತಿಪಾದಿಸಿದರು.

ಜೇಟ್ಲಿ ಅವರ ರಾಜೀನಾಮೆಗೆ ಆಗ್ರಹಿಸಿರುವ ರಾಹುಲ್​, ಇದೊಂದು ಒಳಸಂಚು ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಅವರಿಬ್ಬರ ನಡುವೆ ಕೆಲವು ಒಪ್ಪಂದಗಳು ನಡೆದಿದೆ. ಕೂಡಲೇ ಜೇಟ್ಲಿ ಅವರು ರಾಜಿನಾಮೆ ನೀಡಬೇಕು. ಈ ಸಂಬಂಧ ತನಿಖೆ ನಡೆಯಬೇಕೆಂದು ರಾಹುಲ್​ ಒತ್ತಾಯಿಸಿದ್ದಾರೆ.

ಮಲ್ಯ ಅವರ ಹಸ್ತಾಂತರ ಕುರಿತಾಗಿ ಲಂಡನ್​ನ ವೆಸ್ಟ್​ಮಿನಿಸ್ಟರ್ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ನಡೆದ ವಿಚಾರಣೆಗೂ ಮುಂಚೆಯೇ ದೇಶ ಬಿಡುವ ಮುನ್ನಾ ಜೇಟ್ಲಿ ಅವರನ್ನು ಭೇಟಿ ಮಾಡಿದ್ದೆ ಎಂದು ಮಲ್ಯ ಆರೋಪಿಸಿದ್ದರು.

ಮಲ್ಯ ಲೋಕಸಭೆ ಮೊಗಸಾಲೆಯಲ್ಲಿ ನನ್ನನ್ನು ಅನೌಪಚಾರಿಕವಾಗಿ ಭೇಟಿ ಮಾಡಿದ್ದು ನಿಜ. ಸಾಲ ಮರು ಪಾವತಿಯ ಬಗ್ಗೆ ಬ್ಯಾಂಕರ್​ಗಳ ಜತೆ ಮಾತನಾಡಿ ಎಂದಷ್ಟೇ ಹೇಳಿದ್ದೆ ಎಂದು ಅರುಣ್​​ ಜೇಟ್ಲಿ ಅವರು ಸಮರ್ಥನೆ ನೀಡಿದ್ದರು.

ಭಾರತದ ವಿವಿಧ ಬ್ಯಾಂಕ್​ಗಳಿಂದ 9000 ಕೋಟಿ ರೂ. ಸಾಲ ಮಾಡಿರುವ ಮಲ್ಯ ಮರುಪಾವತಿ ಮಾಡದೆ ದೇಶ ಬಿಟ್ಟು ಲಂಡನ್​ನಲ್ಲಿ ನೆಲೆಸಿದ್ದಾರೆ. (ಏಜೆನ್ಸೀಸ್​)