ಪಾಕ್​ ಸರ್ಕಾರಗಳ ನೆರವಿನಿಂದ ನಿರ್ಮಾಣವಾಗಿದೆ ಉಗ್ರರ ಕಾರಸ್ಥಾನ ಮರ್ಕಜ್​ ಸುಭಾನಲ್ಲಾ

ಶ್ರೀನಗರ: ಪಾಕಿಸ್ತಾನ ಭಯೋತ್ಪಾದಕರ ಸುರಕ್ಷಿತ ಅಡಗುದಾಣವಾಗಿದೆ ಎಂಬುದು ಇಡೀ ಜಗತ್ತಿಗೇ ತಿಳಿದಿರುವ ವಿಷಯ. ಆದರೂ ಪಾಕಿಸ್ತಾನದ ಪ್ರಾಂತೀಯ ಮತ್ತು ಕೇಂದ್ರ ಸರ್ಕಾರಗಳು ಇದನ್ನು ಅಲ್ಲಗಳೆಯುತ್ತಲೇ ಇವೆ. ತಾವು ಎಂದೆಂದಿಗೂ ಉಗ್ರರಿಗೆ ಕುಮ್ಮಕ್ಕು ಕೊಟ್ಟವರಲ್ಲ. ಅವರನ್ನು ಸಾಕಿಕೊಂಡಿಲ್ಲ. ಅವರಿಗೆ ಆಶ್ರಯ ನೀಡಿಲ್ಲ ಎಂದು ಹೇಳಿಕೊಳ್ಳುತ್ತಲೇ ಇರುತ್ತವೆ. ಆದರೆ, ಅವುಗಳ ನರಿಬುದ್ಧಿಗೆ ಮತ್ತೊಂದು ಸಾಕ್ಷ್ಯವಾಗಿ ನಿಂತಿದೆ ಮರ್ಕಜ್​ ಸುಭಾನಲ್ಲಾ ಎಂಬ ಕಟ್ಟಡ.

ಅಂದಾಜು 3 ಎಕರೆ ವಿಸ್ತೀರ್ಣದ ಈ ಕಟ್ಟಡ ಪಾಕಿಸ್ತಾನದ ಪಂಜಾಬ್​ ಪ್ರಾಂತ್ಯದ ಭಹಾವಾಲ್​ಪುರ್​ ಎಂಬಲ್ಲಿದೆ. ಇದು ಉಗ್ರ ಮಸೂದ್​ ಅಜರ್​ ನೇತೃತ್ವದ ಜೈಷ್​ ಎ ಮೊಹಮ್ಮದ್​ ಭಯೋತ್ಪಾದನೆ ಸಂಘಟನೆಯ ಕೇಂದ್ರ ಕಾರಸ್ಥಾನ ಇದಾಗಿದೆ. ಅತ್ಯಾಧುನಿಕ ಜಿಮ್​ ಮತ್ತು ಈಜುಕೊಳ ಸೇರಿ ಎಲ್ಲ ಬಗೆಯ ಸೌಲತ್ತುಗಳು ಇಲ್ಲಿವೆ. ಅಂದಾಜು 600 ಜನರ ವಸತಿಗೆ ಅನುಕೂಲವಿರುವ ಈ ಕಟ್ಟಡವು ಜೈಷ್​ ಉಗ್ರ ಸಂಘಟನೆಗೆ ಸೇರ್ಪಡೆಗೊಳ್ಳುವ ಹೆಬ್ಬಾಗಿಲು ಎನಿಸಿಕೊಂಡಿದೆ.

ಉಗ್ರ ಮಸೂದ್​ ಅಜರ್​ ಆತನ ಸಹೋದರರು ಹಾಗೂ ಆತನ ಸಂಬಂಧಿಕರು ಕೂಡ ಇದೇ ಕಟ್ಟಡದಲ್ಲಿ ವಾಸವಾಗಿದ್ದಾರೆ. ಜೈಷ್​ಗೆ ಸೇರ್ಪಡೆಗೊಳ್ಳುವವರಿಗೆ ಪ್ರತಿ ಶುಕ್ರವಾರ ಜಿಹಾದ್​ನತ್ತ ಸೆಳೆಯುವ ಪ್ರಚೋದನಾಕಾರಿ ಧಾರ್ಮಿಕ ಬೋಧನೆಯೂ ಇದೇ ಕಟ್ಟಡದಲ್ಲಿ ನಡೆಯುತ್ತದೆ. ಮಸೂದ್​ ಅಜರ್​ನ ಸಹೋದರ ಮುಫ್ತಿ ಅಬ್ದುಲ್​ ರೌಫ್​ ಅಥವಾ ಜೈಷ್​ನ ಬೇರಾವುದಾದರೂ ಹಿರಿಯ ನಾಯಕರು ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಹೊಸದಾಗಿ ಸೇರ್ಪಡೆಗೊಂಡವರ ಮಿದುಳಿನ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಾಗಿದೆ ಎಂಬುದು ಖಚಿತವಾದ ಬಳಿಕ ಅವರೆಲ್ಲರನ್ನು ಬಾಲಾಕೋಟ್​ ಕೇಂದ್ರದಲ್ಲಿ ಹೆಚ್ಚಿನ ತರಬೇತಿಗೆ ಕಳುಹಿಸಲಾಗುತ್ತದೆ.

ಸರ್ಕಾರದ ಧನಸಹಾಯ: ಮರ್ಕಜ್​ ಸುಭಾನಲ್ಲಾ ಎಂಬ ಹೆಸರಿನ ಜೈಷ್​ನ ಕಾರಸ್ಥಾನದ ನಿರ್ಮಾಣ 2012ರಲ್ಲಿ ಆರಂಭವಾಯಿತು. ಪಾಕಿಸ್ತಾನದ ಕೇಂದ್ರ ಸರ್ಕಾರ ಹಾಗೂ ಪಂಜಾಬ್​ನ ಪ್ರಾಂತೀಯ ಸರ್ಕಾರಗಳು ಇದಕ್ಕೆ ಧನಸಹಾಯ ಒದಗಿಸಿದವು. ಹಣ ಕಡಿಮೆ ಬಿದ್ದಾಗ ಮಸೂದ್​ ಅಜರ್​ ಮತ್ತಾತನ ಸಹೋದರರು ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಬ್ರಿಟನ್​ನಲ್ಲಿರುವ ತಮ್ಮ ಅನುಯಾಯಿಗಳ ಮೂಲಕ ದೇಣಿಗೆ ಸಂಗ್ರಹಿಸಿ ಕಟ್ಟಡವನ್ನು ನಿರ್ಮಿಸಿದ್ದಾರೆ. 2015ರಲ್ಲಿ ಈ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. (ಏಜೆನ್ಸೀಸ್​)