ಪುಲ್ವಾಮಾಕ್ಕಿಂತಲೂ ದೊಡ್ಡ ದಾಳಿ ಸಂಘಟಿಸಲು ಸನ್ನದ್ಧವಾಗುತ್ತಿದೆ ಜೈಷ್​ ಎ ಮೊಹಮ್ಮದ್​

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರಿದ್ದ ವಾಹನದ ಮೇಲಿನ ದಾಳಿಯಿಂದ ಉತ್ತೇಜಿತಗೊಂಡಿರುವ ಜೇಷ್​ ಎ ಮೊಹಮ್ಮದ್​ ಮತ್ತೊಂದು ಬೃಹತ್​ ದಾಳಿಗೆ ಸನ್ನದ್ಧವಾಗುತ್ತಿದೆ ಎಂದು ಹೇಳಲಾಗಿದೆ. ಈ ದಾಳಿ ಕೂಡ ಭಾರತೀಯ ಸೇನಾಪಡೆಯನ್ನು ಗುರಿಯಾಗಿಸಿಕೊಂಡು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿರುವ ಜೈಷ್​ ಎ ಮೊಹಮ್ಮದ್​ ಮುಖಂಡರು ಮತ್ತು ಕಾಶ್ಮೀರದಲ್ಲಿ ಅಡಗಿರುವ ಉಗ್ರರ ನಡುವಿನ ದೂರವಾಣಿ ಮಾತುಕತೆಯಿಂದ ಇದು ಖಚಿತವಾಗಿರುವುದಾಗಿ ಬೇಹುಗಾರಿಕೆ ಪಡೆ ಮೂಲಗಳು ಎಚ್ಚರಿಕೆ ನೀಡಿವೆ.

ಬುಧವಾರ ನಡೆದಿರುವ ಈ ಮಾತುಕತೆಯ ಕುರಿತು ವಿವಿಧ ಮೂಲಗಳಿಂದ ಮಾಹಿತಿ ಬರುತ್ತಿದೆ. ಈ ದಾಳಿಯು ಜಮ್ಮು ಅಥವಾ ಜಮ್ಮು ಮತ್ತು ಕಾಶ್ಮೀರದ ಹೊರಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪುಲ್ವಾಮಾ ದಾಳಿ ಸಿದ್ಧತೆಯ ವಿಡಿಯೋ ರಿಲೀಸ್​ ಸಾಧ್ಯತೆ
ಜೈಷ್​ ಎ ಮೊಹಮ್ಮದ್​ ಪುಲ್ವಾಮಾದ ದಾಳಿಗಾಗಿ ಮಾಡಿಕೊಂಡ ಸಿದ್ಧತೆಯ ವಿಡಿಯೋ ತುಣಕನ್ನು ಬಿಡುಗಡೆ ಮಾಡಿ, ಉಗ್ರ ಆದಿಲ್​ ದರ್​ನನ್ನು ಬಹೊದಡ್ಡ ಹೀರೋ ಎಂಬಂತೆ ಬಿಂಬಿಸಲು ಯತ್ನಿಸಲಿರುವುದಾಗಿ ಹೇಳಲಾಗುತ್ತಿದೆ. ಇದರಿಂದಾಗಿ ಭವಿಷ್ಯದ ದಾಳಿಗಳನ್ನು ಸಂಘಟಿಸಲು ಹೊಸ ನೇಮಕಾತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂಬುದು ಜೈಷ್​ನ ನಂಬಿಕೆಯಾಗಿದೆ.

ಚಿತ್ರೇಶ್​ ಹತ್ಯೆ ಮಾಡಿದ್ದೂ ನಾವೇ: ರಾಜೌರಿಯಲ್ಲಿ ಕಳೆದ ವಾರ ಸಂಭವಿಸಿದ ನೆಲಬಾಂಬ್​ ಸ್ಫೋಟದಲ್ಲಿ ಸೇನಾಪಡೆಯ ಮೇಜರ್​ ಚಿತ್ರೇಶ್​ ಬಿಸ್ಟ್​ ಅವರನ್ನು ಹತ್ಯೆ ಮಾಡಿದ್ದು ತಾವೇ ಎಂದು ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆ ಒಪ್ಪಿಕೊಂಡಿದೆ. ತನ್ನ ಕಾರ್ಯಾಚರಣೆ ಕಮಾಂಡರ್​ ಮೊಹಮದ್​ ವಕಾಸ್​ ದರ್​ ಈ ಬಾಂಬ್​ ಅನ್ನು ಇರಿಸಿದ್ದಾಗಿಯೂ ಹೇಳಿಕೊಂಡಿದೆ.

ಮಾನಸಿಕ ಯುದ್ಧವಾಗಿದ್ದರೂ ಗಂಭೀರವಾಗಿ ಪರಿಗಣನೆ
ಪುಲ್ವಾಮಾ ಉಗ್ರ ದಾಳಿಯ ನಂತರದಲ್ಲಿ ಮೂಡಿರಬಹುದಾದ ಆತಂಕ ಮತ್ತು ಒತ್ತಡ ಕಡಿಮೆಯಾಗದಂತೆ ತಡೆಯಲು ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆ ಇಂತಹ ಮಾತುಕತೆ ನಡೆಸಿ, ಇನ್ನೂ ದೊಡ್ಡದಾದ ದಾಳಿ ಸಂಘಟಿಸುವ ಬೆದರಿಕೆ ಒಡ್ಡಿರಬಹುದು. ಆದ್ದರಿಂದ, ಇದನ್ನು ಮಾನಸಿಕ ಯುದ್ದವೆಂಬ ಭಾವನೆ ಇದ್ದರೂ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)