ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಕೊಂದು ಹಾಕಲಾಗುತ್ತದೆ: ಕಾಶ್ಮೀರಿ ಯುವಕರಿಗೆ ಸೇನೆಯ ಖಡಕ್​ ಎಚ್ಚರಿಕೆ

ನವದೆಹಲಿ: ಕೈಯಲ್ಲಿ ಯಾರೇ ಬಂದೂಕು ಹಿಡಿದರೂ ಅವರನ್ನು ಕೊಂದು ಹಾಕಲಾಗುತ್ತದೆ ಎಂದು ಕಾಶ್ಮೀರಿ ಯುವಕರಿಗೆ ಭಾರತೀಯ ಸೇನೆಯ ಚಿನಾರ್ ಸೈನ್ಯದಳದ ಕಮಾಂಡರ್​​ ಕನ್ವಾಲ್​ ಜೀತ್​ ಸಿಂಗ್​ ಧಿಲಾನ್ ಖಡಕ್​​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.​

ಮಂಗಳವಾರ ಸಿಆರ್​ಪಿಎಫ್​, ಸೇನೆ ಹಾಗೂ ಪೊಲೀಸರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಶ್ಮೀರಿ ಸಮಾಜದಲ್ಲಿ ತಾಯಂದಿರ ಪಾತ್ರ ಪ್ರಮುಖವಾಗಿದೆ. ಹೀಗಾಗಿ ನಿಮ್ಮಲ್ಲಿ ಮನವಿ ಮಾಡುವುದೇನೆಂದರೆ, ಉಗ್ರ ಸಂಘಟನೆ ಜತೆ ಸಕ್ರೀಯರಾಗಿರುವ ನಿಮ್ಮ ಮಕ್ಕಳನ್ನು ಶರಣಾಗುವಂತೆ ಮನವಿ ಮಾಡಿ, ಮುಖ್ಯವಾಹಿನಿಗೆ ಕರೆ ತನ್ನಿ. ಶರಣಾಗದೇ ಬಂದೂಕು ಹಿಡಿದು ಸೇನೆಯ ವಿರುದ್ಧ ನಿಂತಲ್ಲಿ ಅವರನ್ನು ಕೊಂದು ಹಾಕಲಾಗುವುದು ಎಂದು ಹೇಳಿದರು.

ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ದಾಳಿ ಪಾಕ್ ಪ್ರೇರಿತ ದಾಳಿಯಾಗಿದೆ. ಘಟನೆ ನಡೆದ 100 ಗಂಟೆಯೊಳಗೆ ಜೈಷ್ ಎ ಮಹಮ್ಮದ್​ ಸಂಘಟನೆಯ ಉಗ್ರರನ್ನು ಕೊಂದಿದ್ದೇವೆ ಎಂದು ಸೇನಾ ಸಾಮರ್ಥ್ಯದ ಬಗ್ಗೆ ತಿಳಿಸಿದರು.

ಜೈಷ್ ಮೂಲವನ್ನು ನಾವು ಕಾಶ್ಮೀರದಲ್ಲಿ ಪತ್ತೆ ಹಚ್ಚಿದ್ದೇವೆ. ಕಾಶ್ಮೀರದಲ್ಲಿ ಜೈಷ್ ಸಂಘಟನೆಯ ಕಮಾಂಡರ್ ಆಗಿದ್ದ, ದಾಳಿಯ ಸಂಚುಕೋರ ರಷೀದ್ ಘಾಜಿ ಅಲಿಯಾಸ್ ಕಮ್ರಾನ್​ನನ್ನು ಕೊಂದಿದ್ದೇವೆ. ನಿಮ್ಮ ಮಕ್ಕಳನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಬೇಡಿ ಎಂದು ಕಾಶ್ಮೀರದ ತಾಯಂದಿರಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಉಗ್ರರು ಶರಣಗಾಬೇಕು
ಕಾಶ್ಮೀರದಲ್ಲಿ ಅಡಗಿರುವ ಉಗ್ರರು ಶರಣಗಾಬೇಕು. ಇಲ್ಲದಿದ್ದರೆ ಕೊಲ್ಲುತ್ತೇವೆ. ಕಾಶ್ಮೀರದಲ್ಲಿ ಯಾರೇ ಬಂದೂಕು ಹಿಡಿದರು ಅವರನ್ನು ಕೊಂದು ಹಾಕುತ್ತೇವೆ. ಉಗ್ರರನ್ನು ನಾವು ಬುಡ ಸಮೇತ ಕಿತ್ತು ಹಾಕುತ್ತೇವೆ. ನಮ್ಮ ಕಾರ್ಯಾಚರಣೆಯಲ್ಲಿ ಯಾವುದೇ ಕಾಶ್ಮೀರ ನಾಗರಿಕನಿಗೂ ತೊಂದರೆ ಆಗಿಲ್ಲ. ತೊಂದರೆ ಉಂಟುಮಾಡುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟನೆ ನೀಡಿದರು.

ಪಾಕಿಸ್ತಾನ ಸೇನೆಯ ಸಂತಾನ
ಜೈಷ್ ಉಗ್ರಗಾಮಿ ಸಂಘಟನೆ ಪಾಕಿಸ್ತಾನ ಸೇನೆಯ ಸಂತಾನವಾಗಿದೆ. ಕಮ್ರಾನ್, ಹಿಲಾಲ್ ಅಹ್ಮದ್ ಹಾಗೂ ಮತ್ತೊಬ್ಬ ಉಗ್ರನನ್ನು ಸೇನೆ ಕೊಂದು ಹಾಕಿದೆ. ಜೈಷ್ ಉಗ್ರ ಸಂಘಟನೆ ಪಾಕ್ ಸೇನೆ ಮತ್ತು ಐಎಸ್​ಐ ನಿಯಂತ್ರಣದಲ್ಲಿದೆ. ಪುಲ್ವಾಮಾ ದಾಳಿಯಲ್ಲಿ ಪಾಕ್ ಸೇನೆ ಭಾಗಿಯಾಗಿರುವುದು ದೃಢಪಟ್ಟಿದೆ. ಇಷ್ಟು ಪ್ರಮಾಣದ ಸ್ಫೋಟ ಈ ಹಿಂದೆ ಆಗಿರಲಿಲ್ಲ, ಇದೇ ಮೊದಲಾಗಿದ್ದು, ಶಸ್ತ್ರಾಸ್ತ್ರ ಹಿಡಿಯುವುದನ್ನು ಕೈಬಿಡುವಂತೆ ಕಾಶ್ಮೀರಿ ಯುವಕರಿಗೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *