ಜೈಷ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಸಾವು? ಭಾರತೀಯ ವಾಯುಪಡೆ ದಾಳಿಗಳ ಬಳಿಕ ಹರಡಿದ ವದಂತಿ

ನವದೆಹಲಿ: ಭಯೋತ್ಪಾದನಾ ಸಂಘಟನೆ ಜೈಷ್​ ಎ ಮೊಹಮ್ಮದ್​ನ ಪ್ರಮುಖ ಉಗ್ರ ಮಸೂದ್​ ಅಜರ್​ ಇರುವಿಕೆ ಕುರಿತು ಭಾನುವಾರ ಭಾರಿ ಊಹಾಪೋಹಗಳು ಎದ್ದಿವೆ. ಕೆಲವು ಮೂಲಗಳ ಪ್ರಕಾರ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಆತ ರಾವಲ್ಪಿಂಡಿಯಲ್ಲಿರುವ ಪಾಕ್​ ಸೇನಾ ಆಸ್ಪತ್ರೆಯಲ್ಲಿ ಸತ್ತಿದ್ದಾನೆ ಎನ್ನಲಾಗಿದೆ.

ಇನ್ನು ಕೆಲವು ಮೂಲಗಳು ಲಿವರ್​ ಕ್ಯಾನ್ಸರ್​ನಿಂದ ಆತ ಸತ್ತಿದ್ದಾನೆ ಎನ್ನುತ್ತಿವೆ. ಇವುಗಳೆಲ್ಲವುಗಳ ಮಧ್ಯೆ, ಕಳೆದ ಮಂಗಳವಾರ ಭಾರತೀಯ ವಾಯುಪಡೆ ಯುದ್ಧವಿಮಾನಗಳು ಬಾಲಾಕೋಟ್​ನಲ್ಲಿ ಜೈಷ್​ ಕಾರಸ್ಥಾನದ ಮೇಲೆ ನಡೆಸಿದ ದಾಳಿಯಲ್ಲಿ ಈತ ಹತನಾಗಿದ್ದಾನೆ ಎಂಬ ವದಂತಿಯೂ ದಟ್ಟವಾಗಿ ಹಬ್ಬಿದೆ.
ಆದರೆ, ಈತನ ಸಾವಿನ ಬಗ್ಗೆ ಪಾಕಿಸ್ತಾನದ ಯಾವೊಬ್ಬ ನಾಯಕನೂ ಬಾಯ್ಬಿಡುತ್ತಿಲ್ಲ. ಹೀಗಾಗಿ ಈತ ಸತ್ತಿರುವ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದೆ.

ಒಂದೆರಡು ದಿನಗಳಲ್ಲಿ ಸಾಕ್ಷ್ಯ ಬಿಡುಗಡೆ?: ಬಾಲಾಕೋಟ್​ನಲ್ಲಿ ಭಾರತೀಯ ವಾಯುಪಡೆ ಯೋಧರು ನಡೆಸಿರುವ ದಾಳಿಗಳ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ಪ್ರತಿಪಕ್ಷಗಳು ಈ ಕುರಿತಯು ಸಾಕ್ಷ್ಯ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿವೆ. ಇದೇ ವೇಳೆ ಸೇನಾಪಡೆಯ ಬೇಹುಗಾರಿಕಾ ವಿಭಾಗ ಸಂಗ್ರಹಿಸಿರುವ ರೇಡಾರ್​ ದೃಶ್ಯಗಳ ಪ್ರಕಾರ ಉಗ್ರರ ತರಬೇತಿ ನೆಲೆಗೆ ಭಾರಿ ಹಾನಿಯಾಗಿದೆ ಎನ್ನಲಾಗಿದೆ. ಈ ದೃಶ್ಯಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸುವ ಬಗ್ಗೆ ಭಾರತೀಯ ವಾಯುಪಡೆ ಚಿಂತನೆ ನಡೆಸಿದೆ. ಈ ದೃಶ್ಯಗಳನ್ನು ಬಿಡುಗಡೆ ಮಾಡುವ ಕುರಿತು ಸರ್ಕಾರ ನಿರ್ಧರಿಸಬೇಕಾಗಿದೆಯಾದ್ದರಿಂದ, ವಾಯುಪಡೆ ಅಧಿಕಾರಿಗಳು ದೃಶ್ಯಗಳನ್ನು ಬಿಡುಗಡೆ ಮಾಡುತ್ತಿಲ್ಲ ಎನ್ನಲಾಗಿದೆ. (ಏಜೆನ್ಸೀಸ್​)