ಜೈಪುರದ 29 ಜನರಲ್ಲಿ ಜಿಕಾ ವೈರಸ್​: ವರದಿ ಕೇಳಿದ ಪ್ರಧಾನಿ ಕಚೇರಿ

ನವದೆಹಲಿ: ರಾಜಸ್ತಾನದ ಜೈಪುರದಲ್ಲಿ ಒಟ್ಟು 29 ಜನರಲ್ಲಿ ಜಿಕಾ ವೈರಸ್​ ಪತ್ತೆಯಾಗಿದ್ದು ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಕೇಂದ್ರ ಆರೋಗ್ಯ ಸಚಿವಾಲಯದಿಂದ ವರದಿ ಕೇಳಿದೆ.

ಗರ್ಭಾವಸ್ಥೆಯಲ್ಲಿರುವಾಗಲೇ ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಿರುವ ಜಿಕಾ ವೈರಸ್ (ಸೊಳ್ಳೆಯಿಂದ ಹರಡುವ ರೋಗಾಣು) ​ ಪತ್ತೆಯಾಗಿರುವುದನ್ನು ಭಾರತೀಯ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ಸಂಸ್ಥೆ ಸ್ಪಷ್ಟಪಡಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಜೈಪುರದಲ್ಲಿ 22 ಜನರ ರಕ್ತ ಪರೀಕ್ಷೆ ಮಾಡಿದಾಗ ಎಲ್ಲರಲ್ಲೂ ಪಾಸಿಟಿವ್​ ಎಂದು ವೈದ್ಯಕೀಯ ವರದಿ ಬಂದಿದೆ. ಕೇಂದ್ರದಿಂದ ಏಳು ಜನರ ತಂಡವನ್ನು ಅಲ್ಲಿಗೆ ಕಳಿಸಲಾಗಿದ್ದು ಅವರು ವೈರಸ್​ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಪರಾಮರ್ಶಿಸಲಾಗುತ್ತಿದ್ದು, ಪ್ರತಿದಿನದ ಬೆಳವಣಿಗೆಯನ್ನು ಆರೋಗ್ಯ ಇಲಾಖೆ ಕಾರ್ಯದರ್ಶಿಯಿಂದ ಪಡೆಯಲಾಗುತ್ತಿದೆ ಎಂದು ಆರೋಗ್ಯ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ.

ಕೇಂದ್ರ ತಜ್ಞರ ತಂಡ ರಾಜಸ್ಥಾನದಲ್ಲಿ ಅಕ್ಟೋಬರ್​ 5ರಿಂದಲೇ ಬೀಡುಬಿಟ್ಟಿದ್ದು ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಹಾಗೇ ವೈರಸ್​ಗೆ ತುತ್ತಾದವರ ಆರೋಗ್ಯ ಸುಧಾರಣೆ ಬಗ್ಗೆ ರಾಜ್ಯಸರ್ಕಾರದೊಂದಿಗೆ ಸೇರಿ ಕ್ರಮ ಕೈಗೊಳ್ಳುತ್ತಿದೆ. ಗರ್ಭಿಣಿಯರೂ ಜಿಕಾಗೆ ತುತ್ತಾಗಿದ್ದಾರೆ. ಭಯ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.

ಬಿಹಾರದಲ್ಲಿ ಓರ್ವ ವಿದ್ಯಾರ್ಥಿಗೆ ಜಿಕಾ ವೈರಸ್​ ಕಾಣಿಸಿಕೊಂಡಿತ್ತು. ಆತ ಜೈಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಆತ ಮನೆಗೆ ಹೋದಾಗ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆ ಮಾಡಿದ ಬಳಿಕ ಜಿಕಾ ವೈರಸ್​ ಇರುವುದು ಪತ್ತೆಯಾಗಿತ್ತು. ಈಗ ಬಿಹಾರ್​ನ ಜನರಿಗೂ ಕೂಡ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಹಾಗೇ ರೋಗಕ್ಕೆ ತುತ್ತಾದವರು ಇರುವ ಪ್ರದೇಶಗಳಲ್ಲಿ ಚಿಕಿತ್ಸೆಗಾಗಿ, ಪರೀಕ್ಷೆಗಾಗಿ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗಿದೆ. ರಾಷ್ಟ್ರೀಯ ರೋಗ ನಿಯಂತ್ರಣಾ ಕೇಂದ್ರದ ನೇತೃತ್ವದಲ್ಲಿ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದೆ.

ಜಿಕಾ ವೈರಸ್​ ಭಾರತದಲ್ಲಿ ಮೊದಲ ಬಾರಿಗೆ 2017ರ ಫೆಬ್ರವರಿಯಲ್ಲಿ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಪತ್ತೆಯಾಗಿತ್ತು.