More

    ಜೈನರಗುತ್ತಿ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನ

    ಹಳೇಬೀಡು: ಮುನಿವರೇಣ್ಯರು ಹಾಗೂ ಜಿನಧರ್ಮ ಪ್ರವರ್ತಕರು ಸಂಚರಿಸಿರುವ ಜೈನರಗುತ್ತಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
    ಅಡಗೂರು ಸಮೀಪದ ಜೈನರಗುತ್ತಿ ಕ್ಷೇತ್ರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಅಲ್ಪಸಂಖ್ಯಾತರಾಗಿರುವ ಜೈನರು ತಮ್ಮ ಆರ್ಥಿಕ ಇತಿಮಿತಿಗಳ ನಡುವೆಯೂ ಇಂತಹ ಜನೋಪಕಾರಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಹಾಗಾಗಿ ಈ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗುವುದು. ನೀರಿನ ಸೌಲಭ್ಯ, ಸಮುದಾಯ ಭವನ, ರಸ್ತೆ ಸಂಪರ್ಕ ಮುಂತಾದ ಅಗತ್ಯ ಕಾರ್ಯಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದರು.
    ಅನೇಕ ಮುನಿಗಳು ಇಲ್ಲಿಗೆ ಬಂದು ತಂಗುವ ಪ್ರಕ್ರಿಯೆ ಇರುವುದರಿಂದ ಶೀಘ್ರದಲ್ಲಿ ತ್ಯಾಗಿ ನಿವಾಸ ನಿರ್ಮಾಣವಾಗಬೇಕಿದೆ. ಅದಕ್ಕೆ ಜೈನ ಸಮಾಜದ ಗಣ್ಯರು ಸಹಾಯಹಸ್ತ ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
    108 ಮುನಿಶ್ರೀ ಪುಣ್ಯಸಾಗರ ಮಹಾರಾಜ್ ಆಶೀರ್ವಚನ ನೀಡಿದರು. ತಾಪಂ ಅಧ್ಯಕ್ಷ ರಂಗೇಗೌಡ ಮಾತನಾಡಿದರು. ಜೈನ ಸಮಾಜದ ಜಿನಚಂದ್ರ, ರತ್ನರಾಜು, ವಿಜಯ್‌ಕುಮಾರ್ ದಿನಕರ, ಸುಪ್ರಭಾ ಜೈನ್, ಜೆ.ಪಿ.ಮಹಾವೀರ್ ಮತ್ತು ಶೀತಲನಾಥ ಟ್ರಸ್ಟ್‌ನ ಪದಾಧಿಕಾರಿಗಳು ಇನ್ನಿತರರು ಹಾಜರಿದ್ದರು.

    ಆರೋಗ್ಯ ಉಚಿತ ತಪಾಸಣಾ ಶಿಬಿರ: ಜೈನರಗುತ್ತಿ ಕ್ಷೇತ್ರದ ವಾರ್ಷಿಕೋತ್ಸವದ ಪ್ರಯುಕ್ತ ಶೀತಲನಾಥ ಟ್ರಸ್ಟ್, ಹಾಸನದ ರಾಜೀವ್ ಆಸ್ಪತ್ರೆ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಸಾವಿರಾರು ಜನರು ವಿವಿಧ ರೀತಿಯ ಪರೀಕ್ಷೆಗಳನ್ನು ಮಾಡಿಸಿಕೊಂಡರು.
    600ಕ್ಕೂ ಹೆಚ್ಚು ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು. ಕಣ್ಣಿನ ಪೊರೆ ಬೆಳೆದು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲ್ಪಟ್ಟ 22ರೋಗಿಗಳನ್ನು ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ದೃಷ್ಟಿ ಸಮಸ್ಯೆಯಿದ್ದವರಿಗೆ ಅಗತ್ಯ ಔಷಧ ಹಾಗೂ ಕನ್ನಡಕವನ್ನು ಸ್ಥಳದಲ್ಲೇ ವಿತರಿಸಲಾಯಿತು. 400ಕ್ಕೂ ಹೆಚ್ಚು ಜನರು ಬಿ.ಪಿ., ಡಯಾಬಿಟಿಸ್ ಹಾಗೂ ರಕ್ತ ಪರೀಕ್ಷೆ ಮಾಡಿಸಿಕೊಂಡು ಔಷಧಗಳನ್ನು ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts