ಪರ್ತಕರ್ತನ ಕೊಲೆ ಪ್ರಕರಣದಲ್ಲಿ ದೇವಮಾನವ ರಾಮ್​ ರಹೀಂ ತಪ್ಪಿತಸ್ಥ

ನವದೆಹಲಿ: ಅನುಯಾಯಿಗಳ ಮೇಲೆ ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಗುರ್ಮೀತ್​ ರಾಮ್​ ರಹೀಂ ಮತ್ತು ಇನ್ನೂ ಮೂವರನ್ನು ಹರಿಯಾಣ ವಿಶೇಷ ನ್ಯಾಯಾಲಯ ಪತ್ರಕರ್ತನ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಿದೆ.

2002ರಲ್ಲಿ ನಡೆದಿದ್ದ ಪತ್ರಕರ್ತ ರಾಮ್​ ಚಂದೇರ್​ ಛತ್ರ​ಪತಿ ಕೊಲೆಯಲ್ಲಿ ಡೇರ ಸಚ್ಚಾ ಸೌದದ ಮುಖ್ಯಸ್ಥನಾಗಿದ್ದ 51 ವರ್ಷದ ರಾಮ್​ ರಹೀಂ ತಪ್ಪಿತಸ್ಥ ಎಂದು ಶುಕ್ರವಾರ ನ್ಯಾಯಾಲಯ ತಿಳಿಸಿದೆ. ಶಿಕ್ಷೆ ಪ್ರಮಾಣವನ್ನು ಜನವರಿ 17ರಂದು ಪ್ರಕಟಿಸಲಿದೆ.

ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಸದ್ಯ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್​ ರಹೀಂ, ರೋಹ್​ಟಕ್​ ಸುನಾರಿಯ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ.

ವಿಚಾರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಬಿಐ ವಕೀಲ ಎಚ್​ಪಿಎಸ್​ ವರ್ಮ, ಪಂಚಕುಲದ ನ್ಯಾಯಾಧೀಶ ಜಗದೀಪ್​ ಸಿಂಗ್​ ಅವರು ನಾಲ್ವರನ್ನೂ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದ್ದಾರೆ ಎಂದರು.

ಕಳೆದ ವರ್ಷ ರಾಮ್​ ರಹೀಂ ವಿರುದ್ಧ ಹೊರಬಿದ್ದಿದ್ದ ಅತ್ಯಾಚಾರ ತೀರ್ಪನ್ನು ವಿರೋಧಿಸಿ ಪಂಚಕುಲದಲ್ಲಿ ಆತನ ಅನುಯಾಯಿಗಳು ಪ್ರತಿಭಟನೆ ನಡೆಸಿದ್ದರು. ಈ ಗಲಭೆಯಲ್ಲಿ 30 ಮಂದಿ ಮೃತಪಟ್ಟಿದ್ದರು. ಸಾಕಷ್ಟು ಪ್ರಮಾಣದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವಾಗಿತ್ತು. (ಏಜೆನ್ಸೀಸ್)

Leave a Reply

Your email address will not be published. Required fields are marked *