ಹುಕ್ಕೇರಿ: ಜೈಲಿನ ಕಿಟಕಿ ಮುರಿದು ಇಬ್ಬರು ಕೈದಿಗಳು ಪರಾರಿ

ಹುಕ್ಕೇರಿ: ಸ್ಥಳೀಯ ಉಪ ಕಾರಾಗೃಹದಲ್ಲಿದ್ದ ಇಬ್ಬರು ಕೈದಿಗಳು ಗುರುವಾರ ಮಧ್ಯರಾತ್ರಿ ಜೈಲಿನ ಕಿಟಕಿಯ ಸರಳು ಮುರಿದು ಪರಾರಿಯಾಗಿದ್ದಾರೆ. ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಪರಶುರಾಮ ಅಶೋಕ ಕಮಟೇಕರ ಮತ್ತು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ ತಮ್ಮಣ್ಣ ಲಂಬುಗೋಳ ಪರಾರಿಯಾದ ಕೈದಿಗಳು.

ಚಿಕ್ಕೋಡಿ ಮತ್ತು ಅಂಕಲಿ ಪೊಲೀಸರು ಈ ಇಬ್ಬರು ಮನೆಗಳ್ಳರನ್ನು ಬಂಸಿದ್ದರು. ಅಲ್ಲಿಯ ಕಾರಾಗೃಹ ರಿಪೇರಿ ನಡೆದಿರುವುದರಿಂದ ಹುಕ್ಕೇರಿ ಉಪ ಕಾರಾಗೃಹದಲ್ಲಿಟ್ಟಿದ್ದರು. ಶುಕ್ರವಾರ ಬೆಳಗ್ಗೆ ಸುದ್ದಿ ತಿಳಿದ ಪೊಲೀಸರು ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚುವರಿ ಎಸ್‌ಪಿ ಅರಸಿದ್ದಿ, ಗೋಕಾಕ ವಲಯ ಡಿವೈಎಸ್‌ಪಿ ಡಿ.ಟಿ.ಪ್ರಭು, ತಹಸೀಲ್ದಾರ್ ರೇಷ್ಮಾ ತಾಳಿಕೋಟೆ, ಸಿಪಿಐ ಸುಂದರೇಶ ಹೊಳೆನ್ನವರ ಸ್ಥಳಕ್ಕೆ ಭೇಟಿ ನೀಡಿದರು. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪರಾರಿ ಪ್ರಕರಣ ದಾಖಲಾಗಿದೆ. ಕೈದಿಗಳು ಪರಾರಿಯಾಗಲು ಬಳಸಿದ ಸರಳು ಕಟಿಂಗ್ ಬ್ಲೇಡ್ ಅವರಿಗೆ ದೊರೆತದ್ದಾದರೂ ಹೇಗೆ, ಸರಳು ಕತ್ತರಿಸುವಾಗ ಸದ್ದು ಗೊತ್ತಾಗಲಿಲ್ಲವೇ, ರಾತ್ರಿ ಗಸ್ತು ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.