ಸೋಮವಾರಪೇಟೆ: ಬಾಲಕಿಯನ್ನು ಕಿಡ್ನಾಪ್ ಮಾಡಿದ್ದ ಹೊರರಾಜ್ಯದವನಿಗೆ ಮಡಿಕೇರಿಯ 1ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ 5 ವರ್ಷ ಕಠಿಣ ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಅಸ್ಸಾಂ ಮೂಲದ ಸುರಜ್ ಅಲಿಯಾಸ್ ಸುರಸ್ ಆಲಿ ಶಿಕ್ಷೆಗೊಳಪಟ್ಟವ. ಮತ್ತಿಕಾಡು ಗ್ರಾಮದ ಅತ್ತೂರು-ನಲ್ಲೂರು ಗೇರುಬಾಣೆಯ ಬಿ ಎಸ್ಟೇಟ್ ಲೈನ್‌ಮನೆಯಲ್ಲಿ ವಾಸವಿದ್ದ ಈತ ವಾಸವಿದ್ದು, ಅದೇ ಲೈನ್‌ಮನೆಯಲ್ಲಿ ವಾಸವಿದ್ದ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದ. ಬಾಲಕಿಯ ಪಾಲಕರು ನೀಡಿದ ದೂರಿನಂತೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ 2021ರ ಆಗಸ್ಟ್‌ನಲ್ಲಿ ಪೋಕ್ಸೋ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಈತನನ್ನು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಎಚ್.ಎಂ.ಶೈಲೇಂದ್ರ ಅವರು ಅರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಎನ್.ಪಿ.ದೇವೆಂದ್ರನ್ ಅಪ್ರಾಪ್ತೆಯ ಪರ ವಾದಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಪ್ರಶಾಂತಿ ಅವರು ಅರೋಪಿಗೆ 5 ವರ್ಷ ಜೈಲು, 5 ಸಾವಿರ ರೂ., ದಂಡ, ದಂಡ ಪಾವತಿಸದಿದ್ದರೆ ಹೆಚ್ಚುವರಿ 6 ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.