ಬೆಂಗಳೂರು: ಸ್ನೇಹಿತನ ಮನೆಗೆ ಪಾರ್ಟಿ ಮಾಡಲು ಬಂದು ಕೊನೆಗೆ ಆತನ ಮನೆಯಲ್ಲಿಯೇ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಉತ್ತರಹಳ್ಳಿಯ ಮೂಕಾಂಬಿಕಾನಗರದ ನಿವಾಸಿ ಭರತ್ ಬಂಧಿತ. ಈತ ದೊಡ್ಡಗೌಡನಪಾಳ್ಯ ವೈ.ಸಿ. ಕೆಂಪಣ್ಣ ಲೇಔಟ್‌ನಲ್ಲಿ ನೆಲೆಸಿದ್ದ ಸ್ನೇಹಿತ ಮಣಿ ಎಂಬಾತನ ಮನೆಯಲ್ಲಿ 35 ಲಕ್ಷ ರೂ.ಮೌಲ್ಯದ 453 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ. ಏರೋನಾಟಿಕಲ್ ಇಂಜಿನಿಯರ್ ಓದಿದ್ದ ಭರತ್, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತನಿಂದ ಕದ್ದ ಆಭರಣ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 4ರಂದು ಮಣಿಯ ಪಾಲಕರು, ಸಂಬಂಧಿಕರ ಮದುವೆ ಸಲುವಾಗಿ ಆಂಧ್ರಪ್ರದೇಶದ ಚಿತ್ತೂರಿಗೆ ಹೋಗಿದ್ದರು. ಮನೆಯಲ್ಲಿ ಒಬ್ಬನೇ ಇದ್ದ ಮಣಿ, ತನ್ನ ಸ್ನೇಹಿತರಾದ ಭರತ್ ಸೇರಿ ಮೂವರನ್ನು ಮನೆಗೆ ಕರೆದು ಪಾರ್ಟಿ ಮಾಡಿದ್ದ.
ರಾತ್ರಿ ಎಲ್ಲರೂ ಸೇರಿಕೊಂಡು ಮದ್ಯದ ಪಾರ್ಟಿ ಏರ್ಪಡಿಸಿದ್ದರು. ಇತ್ತ ಮಣಿಗೆ ಮದುವೆ ನಿಶ್ಚಯ ಆಗಿದ್ದ ಕಾರಣಕ್ಕೆ 453 ಗ್ರಾಂ ಖರೀದಿಸಿ ಮನೆಯಲ್ಲಿ ಇಟ್ಟಿದ್ದರು. ಇದನ್ನು ತಿಳಿದ ಆರೋಪಿ ಭರತ್, ತಡರಾತ್ರಿ ಎಲ್ಲರು ಮಲಗಿರುವಾಗ ಬೀರುವಿನಲ್ಲಿದ್ದ ಚಿನ್ನ ದೋಚಿದ್ದ.
ಚಿನ್ನಾಭರಣ ಕದ್ದ ಮೇಲೂ ಭರತ್, ಅನುಮಾನ ಬಾರದಂತೆ ರಾತ್ರಿ ಅಲ್ಲೇ ಉಳಿದುಕೊಂಡಿದ್ದ. ಬೆಳಗ್ಗೆ ಮಣಿ ಜತೆ ಪುಷ್ಟ-2 ಸಿನಿಮಾ ನೋಡಿದ್ದ. ಮಾರನೇ ದಿನ ಮಣಿ ಪಾಲಕರು ಮನೆಗೆ ಬಂದು ನೋಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.
ಈ ವಿಚಾರವನ್ನು ಮಣಿ ಕಡೆಯಿಂದ ತಿಳಿದ ಭರತ್, ಖುದ್ದು ಆರೋಪಿಯೇ ಪೊಲೀಸ್ ಠಾಣೆಗೆ ತೆರಳಿ ದೂರು ಕೊಡಿಸಿದ್ದ. ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಎಂ.ಎಸ್.ರಾಜು ನೇತೃತ್ವದ ತಂಡ ಪಾರ್ಟಿ ಮಾಡಲು ಮನೆಗೆ ಬಂದಿದ್ದ ಮೂವರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದಾಗ ಭರತ್ ಬಣ್ಣ ಬಯಲಾಗಿದೆ. ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಜಪ್ತಿ ಮಾಡಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.