ಜಗನ್ನಾಥ ವಿಠ್ಠಲ್ ಪ್ರಶಸ್ತಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ವಿಶ್ವ ಮಧ್ವ ಮಹಾ ಪರಿಷತ್ ಅಂಗ ಸಂಸ್ಥೆಯಾದ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ 18ನೇ ವಾರ್ಷಿಕೋತ್ಸವ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಜಗನ್ನಾಥ ವಿಠ್ಠಲ್ ಪ್ರಶಸ್ತಿ ಹಾಗೂ ಮಠ, ಮಂದಿರದಲ್ಲಿ ಅರ್ಚಕ ಸೇವೆ ಸಲ್ಲಿಸಿದ ಇಬ್ಬರಿಗೆ ವಿಪ್ರ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ನ್ಯೂ ರಾಘವೇಂದ್ರ ಕಾಲನಿ ವೆಂಕಟೇಶ್ವರ ಮಂದಿರದಲ್ಲಿ ಭಾನುವಾರ ಜರುಗಿತು.
ರಾಮರಾವ ಪಾಟೀಲ್ ಸ್ಮರಣಾರ್ಥ ಹಿರಿಯ ಪತ್ರಕರ್ತ ರಾಮಕೃಷ್ಣ ಬಡಶೇಷಿ (ಪತ್ರಿಕಾ ಕ್ಷೇತ್ರ), ಜಗನ್ನಾಥರಾವ ಚಂಡ್ರಿಕಿ ಸ್ಮರಣಾರ್ಥ ಪ್ರಕಾಶ ಕುಲ್ಕರ್ಣಿ (ಸಾಮಾಜಿಕ ಸೇವೆ), ವಸಂತರಾವ ನಾಡಗೌಡ ಸ್ಮರಣಾರ್ಥ ಮಾಲಾ ಕಮಲಾಪುರ(ಶಿಕ್ಷಣ ಕ್ಷೇತ್ರ), ಶ್ರೀನಿವಾಸರಾವ ಕುಲಕರ್ಣಿ ಬಳೂಂಡಗಿ ಸ್ಮರಣಾರ್ಥ ಡಾ.ಜಯಲಕ್ಷ್ಮೀ(ಸಾಹಿತ್ಯ ಕ್ಷೇತ್ರ)ದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಜಗನ್ನಾಥ ವಿಠ್ಠಲ್ ಪ್ರಶಸ್ತಿ ಮತ್ತು ಮಠ-ಮಂದಿರಗಳಲ್ಲಿ ಅರ್ಚಕರಾಗಿ ಸನಾತನ ವೈದಿಕ ಧರ್ಮ ಉಳಿಸಿಕೊಂಡು ಬರುತ್ತಿರುವ ಪುರೋಹಿತರಾದ ರಂಗಾಚಾರ್ಯ ಮಣೂರ ಸ್ಮರಣಾರ್ಥ ವೆಂಕಟೇಶಾಚಾರ್ಯ ಅಹಂಕಾರಿ ಹಾಗೂ ಬದರಿನಾಥ ದೇವನಳ್ಳಿ ಸ್ಮರಣಾರ್ಥ ಮಾಣಿಕಪ್ರಭು ಜೋಶಿ ಹೊನಗುಂಟಿ ಅವರಿಗೆ ವಿಪ್ರಶ್ರೀ ಪ್ರಶಸ್ತಿ ಹಾಗೂ ಹಣಮಂತಾಚಾರ್ಯ ಭೂತಪುರ ಹಾಗೂ ರಮೇಶ ಭಟ್ ಜೋಶಿ ಇಬ್ಬರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್, ವೆಂಕಟೇಶ್ವರ ದೇವಸ್ಥಾನದ ಕಾರ್ಯದರ್ಶಿ ಪಿ.ಎನ್. ಜೋಶಿ, ವಾಹಿನಿ ಸಂಚಾಲಕ ಬೆಂಕಿ ಭೀಮಭಟ್ಟ, ವೆಂಕಟೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ನಾರಾಯಣರಾವ ಕುಲಕರ್ಣಿ, ಅರ್ಚಕರಾದ ಶ್ರೀನಿವಾಸ ಜೋಶಿ, ಜಯತೀರ್ಥ ವಿವಿಧ ಮಹಿಳಾ ಭಜನಾ ಮಂಡಳಿ ಸದಸ್ಯೆಯರು ಪಾಲ್ಗೊಂಡಿದ್ದರು. ವಾಹಿನಿ ಅಧ್ಯಕ್ಷ ಪಂ.ಗೋಪಾಲಾಚಾರ್ಯ ಅಕಮಂಚಿ ಅಧ್ಯಕ್ಷತೆ ವಹಿಸಿದ್ದರು. ವ್ಯಾಸರಾಜ ಸಂತೆಕೆಲ್ಲೂರ ನಿರೂಪಣೆ ಮಾಡಿದರು.
ಗಮನ ಸೆಳೆದ ಶೋಭಾಯಾತ್ರೆ: ಹರಿದಾಸ ಪ್ರಚಾರ ವಾಹಿನಿಯ 18ನೇ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಸಂಜೆ ನಗರದ ಬ್ರಹ್ಮಪುರ ಉತ್ತರಾದಿ ಮಠ, ವಿಠ್ಠಲ್ ರುಕ್ಮಿಣಿ ಮಂದಿರದಿಂದ ನ್ಯೂ ರಾಘವೇಂದ್ರ ಕಾಲನಿ ವೆಂಕಟೇಶಸ್ವರ ಮಂದಿರದವರೆಗೆ ಭೂದೇವಿ-ಶ್ರೀದೇವಿ ಸಮೇತ ಶ್ರೀನಿವಾಸ ದೇವರ ಭಾವಚಿತ್ರ ಹಾಗೂ ದಾಸರ ಭಾವಚಿತ್ರಗಳ ಭವ್ಯ ಶೋಭಾಯಾತ್ರೆ ಗಮನ ಸೆಳೆಯಿತು. ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯೆಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.