ವೈ ಎಸ್‌ ಜಗನ್‌ರೆಡ್ಡಿ ಚಿಕ್ಕಪ್ಪ ವೈ ಎಸ್‌ ವಿವೇಕಾನಂದ ರೆಡ್ಡಿ ಅನುಮಾನಾಸ್ಪದ ಸಾವು, ಕೊಲೆ ಎಂದ ಮರಣೋತ್ತರ ಪರೀಕ್ಷೆ

ನವದೆಹಲಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ ಎಸ್‌ ರಾಜಶೇಖರ ರೆಡ್ಡಿ ಸೋದರ ಮತ್ತು ಮಾಜಿ ಸಚಿವ ವೈ ಎಸ್‌ ವಿವೇಕಾನಂದ ರೆಡ್ಡಿ ಅವರ ಮೃತದೇಹ ಕಡಪದ ಅವರ ನಿವಾಸದಲ್ಲಿ ಪತ್ತೆಯಾಗಿದ್ದು, ಕುಟುಂಬಸ್ಥರು ಇದು ಸ್ವಾಭಾವಿಕ ಸಾವಲ್ಲ ಎಂದು ದೂರಿದ್ದಾರೆ.

ಈ ಕುರಿತು ವಿವೇಕಾನಂದ ರೆಡ್ಡಿ ಅವರ ಸಹಾಯಕ ಎಂ ವಿ ಕೃಷ್ಣ ರೆಡ್ಡಿ ಪುಲಿವೆಂದುಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಿವೇಕಾನಂದ ರೆಡ್ಡಿ ಅವರ ಕೋಣೆ ಮತ್ತು ಸ್ನಾನಗೃಹದಲ್ಲಿ ರಕ್ತ ಹೆಪ್ಪುಗಟ್ಟಿರುವ ಕಲೆಗಳು ಕಂಡುಬಂದಿವೆ ಹಾಗಾಗಿ ಇದು ಸ್ವಾಭಾವಿಕ ಸಾವಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ವೈಎಸ್‌ಆರ್‌ ಕಾಂಗ್ರೆಸ್ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪರಾಗಿರುವ 68 ವರ್ಷದ ವಿವೇಕಾನಂದ ರೆಡ್ಡಿ ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.

ತಲೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡು ಗಾಯಗಳಾಗಿದ್ದು, ಸಾವಿನ ಹಿಂದಿನ ಕಾರಣವನ್ನು ತಿಳಿಯಲು ಸಂಪೂರ್ಣ ತನಿಖೆಯ ಅಗತ್ಯವಿದ್ದು, ಹತ್ಯೆಯ ಪಿತೂರಿ ಎಸಗಿರುವ ದೃಷ್ಟಿಕೋನದಲ್ಲಿ ತನಿಖೆ ಮಾಡಬೇಕಾಗಿದೆ ಎಂದು ಪುಲಿವೆಂದುಲ ಠಾಣೆಯ ಅವಿನಾಶ್‌ ರೆಡ್ಡಿ ತಿಳಿಸಿದ್ದಾರೆ.

ಅಸ್ವಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದ್ದು, ಪುಲಿವೆಂದುಲ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ರೆಡ್ಡಿ ಅವರ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದು, ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ದೇಹದಲ್ಲಿ ಏಳು ಬಾರಿ ತಿವಿದಿರುವ ಗಾಯಗಳಾಗಿವೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಸುದ್ದಿ ತಿಳಿಯುತ್ತಲೇ ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ ವೈ ಎಸ್‌ ಜಗನ್ಮೋಹನ್‌ ರೆಡ್ಡಿ ಮತ್ತು ಆತನ ತಾಯಿ ವಿಜಯಮ್ಮ ಪುಲಿವೆಂದುಲ ಆಸ್ಪತ್ರೆಗೆ ಧಾವಿಸಿದ್ದಾರೆ.

ಕಡಪದ ಪುಲಿವೆಂದುಲದಲ್ಲಿರುವ ಅವರ ನಿವಾಸಕ್ಕೆ ತೆರಳಿದಾಗ ಮುಂಜಾನೆ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಹೈದರಾಬಾದ್‌ನಲ್ಲಿದ್ದ ಅವರ ಹೆಂಡತಿಗೆ ಕರೆ ಮಾಡಿ ಕೇಳಿದೆ ಅದಕ್ಕವರು ಅವರಿಗೆ ತೊಂದರೆ ಕೊಡಬೇಡ ಎಂದರು. ನಂತರ ಅಡುಗೆಯವರು ಮತ್ತು ಮನೆಕೆಲಸದವರು ಬಂದು ಕೂಗಿದರೂ ಕೂಡ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಬಳಿಕ ಹಿಂಬಾಗಿಲಿನಿಂದ ಹೋಗಿ ನೋಡಿದಾಗ ವಿವೇಕಾನಂದ ರೆಡ್ಡಿ ಅವರ ಮೃತ ದೇಹ ಸ್ನಾನದ ಗೃಹದಲ್ಲಿ ರಕ್ತದ ಕಲೆಯಲ್ಲಿ ಪತ್ತೆಯಾಯಿತು. ಅವರ ಕೋಣೆಯಲ್ಲೂ ರಕ್ತ ಹೆಪ್ಪುಗಟ್ಟಿದ ಕಲೆಗಳಿದ್ದವು ಎಂದು ಆಪ್ತ ಸಹಾಯಕ ಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಸೌಜನ್ಯಕ್ಕೆ ಹೆಸರಾಗಿದ್ದ ರೆಡ್ಡಿ ಅವರು 1989 ರಿಂದ 1994ರವರೆಗೂ ತಮ್ಮ ಪುಲಿವೆಂದುಲ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದರು. 1999 ರಿಂದ 2004ರ ಅವಧಿಗೆ ಕಡಪ ಲೋಕಸಭಾ ಕ್ಷೇತ್ರದಿಂದ ಮತ್ತು 2009ರಲ್ಲಿ ಆಂಧ್ರ ಪ್ರದೇಶ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಎನ್‌ ಕಿರಣ್‌ ಕುಮಾರ್ ರೆಡ್ಡಿ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. (ಏಜೆನ್ಸೀಸ್)