ವೈಎಸ್​ ಜಗನ್​ ಮೋಹನ್​ ರೆಡ್ಡಿ ಆಸ್ತಿ 375 ಕೋಟಿ: ಒಂದೂ ವಾಹನವಿಲ್ಲದ ಜಗನ್​ ಮೇಲೆ 31 ಕ್ರಿಮಿಲ್​ ಕೇಸ್​ಗಳು

ಅಮರಾವತಿ: ಕಡಪಾ ಜಿಲ್ಲೆಯ ಪುಲಿವೆಂದುಲಾ ವಿಧಾನಸಭೆ ಕ್ಷೇತ್ರದಿಂದ ವೈಎಸ್ಆರ್​ ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ವೈಎಸ್​ ಜಗನ್​ಮೋಹನ್​ ರೆಡ್ಡಿ ಅವರು 375 ಕೋಟಿ ರೂಪಾಯಿಗಳ ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ, ಅವರ ಬಳಿ ಒಂದೇ ಒಂದೂ ವಾಹನವಿಲ್ಲ.

ತಮ್ಮ ತಂದೆ ವೈ ಎಸ್​ ರಾಜಶೇಖರ ರೆಡ್ಡಿ ಅವರು ಪ್ರತಿನಿಧಿಸುತ್ತಿದ್ದ ಪುಲಿವೆಂದುಲದಿಂದಲೇ ಜಗನ್​ ಈ ಬಾರಿಯೂ ಕಣಕ್ಕಿಳಿದಿದ್ದು, ಶುಕ್ರವಾರ ನಾಮ ಪತ್ರ ಸಲ್ಲಿಕೆ ಮಾಡಿದರು.

ಜಗನ್​ ಆಸ್ತಿ ವಿವರ ಹೀಗಿದೆ…

  • ಚರಾಸ್ತಿ – 339 ಕೋಟಿ ರೂ.
  • ಸ್ಥಿರಾಸ್ತಿ – 35 ಕೋಟಿ ರೂ.
  • ಪತ್ನಿ ಭಾರತಿ ರೆಡ್ಡಿ ಅವರು ಉದ್ಯಮಿಯಾಗಿದ್ದು, ಅವರ ಬಳಿ 124 ಕೋಟಿ ರೂ.ಗಳ ಆಸ್ತಿ ಇದೆ. 2014ರಲ್ಲಿ ಅವರ ಆಸ್ತಿ 71 ಕೋಟಿ ರೂ.ಗಳಾಗಿದ್ದವು.
  • ಜಗನ್​ ಮತ್ತು ಭಾರತಿ ದಂಪತಿಯ ಇಬ್ಬರು ಪುತ್ರಿಯರ ಬಳಿ 11 ಕೋಟಿ ರೂಪಾಯಿಗಳ ಚರಾಸ್ತಿ ಇದೆ.
  • ಗುಂಡು ನಿರೋಧಕ ವ್ಯವಸ್ಥೆಯಿರುವ ನಾಲ್ಕು ವಾಹನಗಳು ಜಗನ್​ಮೋಹನ್​ ರೆಡ್ಡಿ ಹೆಸರಿನಲ್ಲಿದ್ದು, ಅವುಗಳು ಬೇರೆಯವರ ಒಡೆತನದ್ದಾಗಿದೆ ಎಂದು ಜಗನ್​ ತಮ್ಮ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ.
  • ಜಗನ್​ ಅವರು ಒಟ್ಟಾರೆ 317 ಕೋಟಿ ರೂಪಾಯಿಗಳಷ್ಟು ಹೂಡಿಕೆ ಮಾಡಿದ್ದಾರೆ.
  • 8.42 ಕೋಟಿ ರೂಪಾಯಿ ಮೌಲ್ಯದ ಕೃಷಿಯೇತರ ಜಮೀನು, 14 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡ, 12 ಕೋಟಿ ಮೌಲ್ಯದ ನಿವಾಸವನ್ನು ಅವರು ಹೊಂದಿದ್ದಾರೆ.
  • 1.19 ಕೋಟಿ ರೂ.ಗಳ ಹಕ್ಕು ಬಾಧ್ಯತೆಗಳನ್ನು ಜಗನ್​ ಹೊಂದಿದ್ದಾರೆ. ಅಲ್ಲದೆ, ವಾಣಿಜ್ಯ ತೆರಿಗೆ ಇಲಾಖೆಯೊಂದಿಗೆ 66.68 ಕೋಟಿ ರೂ. ಹಕ್ಕು ಬಾಧ್ಯತೆಗಳ ವ್ಯಾಜ್ಯ ಹೊಂದಿರುವುದಾಗಿಯೂ ಅವರು ಘೋಷಿಸಿಕೊಂಡಿದ್ದಾರೆ.
  • ತಮ್ಮ ಮೇಲೆ 31 ಕ್ರಿಮಿನಲ್​ ಕೇಸ್​ಗಳಿರುವುದನ್ನೂ ಜಗನ್​ ಅಫಿಡವಿಟ್​ನಲ್ಲಿ ಘೋಷಿಸಿದ್ದಾರೆ.
  • 2014ರಲ್ಲಿ ಜಗನ್​ ಮೋಹನ್​ ರೆಡ್ಡಿ ಅವರು 343 ಕೋಟಿ ರೂಪಾಯಿಗಳ ಆಸ್ತಿ ಇರುವುದಾಗಿ ಅಫಿಡವಿಟ್​ ಸಲ್ಲಿಸಿದ್ದರು.