ದೊಡ್ಡಬೊಮ್ಮನಳ್ಳಿಯಲ್ಲಿ ಕ್ರೀಡೋತ್ಸವ

ಜಗಳೂರು: ಗ್ರಾಮೀಣ ಭಾಗದ ಕ್ರೀಡಾಪಟುಗಳ ಕನಸು ಅರಳಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ದೊಡ್ಡಬೊಮ್ಮನಳ್ಳಿ ಗ್ರಾಪಂ ಸದಸ್ಯ ಶಿವಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾ ಯುವ ಸಬಲೀಕರಣ ಹಾಗೂ ಕರುನಾಡ ಕಲಾ ವೈಭವ ಸಾಂಸ್ಕೃತಿಕ ಯುವ ವೇದಿಕೆ ಸಹಯೋಗದಲ್ಲಿ ತಾಲೂಕಿನ ದೊಡ್ಡಬೊಮ್ಮನಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮೀಣ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ ಎಂದರು.

ಪತ್ರಕರ್ತ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಕ್ಷೀಣಿಸುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಪುನಃ ವಿದ್ಯಾರ್ಥಿಗಳಿಗಾಗಿ ಗ್ರಾಮಿಣ ಮಟ್ಟದ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರಬೇಕು ಎಂದು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ, ಗ್ರಾಪಂ ಸದಸ್ಯರಾದ ಶಾಂತಮ್ಮ, ಸುರೇಂದ್ರನಾಯ್ಕ, ಶ್ರೀನಿವಾಸ, ದೈಹಿಕ ಶಿಕ್ಷಕ ಅಶೋಕ, ಸಂಗೀತ ಶಿಕ್ಷಕ ಅಶೋಕ, ಕರುನಾಡ ಕಲಾವೈಭವ ಯುವ ವೇದಿಕೆ ಅಧ್ಯಕ್ಷ ರವಿಚಂದ್ರ, ಶ್ರೀನಿವಾಸ, ಅಜ್ಜಯ್ಯ ಮುಂತಾದವರು ಇದ್ದರು.