ಜಗಳೂರು: ಉತ್ತರ ಕರ್ನಾಟಕದಲ್ಲಿ ಮಳೆ ಆರ್ಭಟಕ್ಕೆ ಸೂರು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರಿಗೆ ಹಣ ನೀಡುವುದಕ್ಕಿಂತ ಬಟ್ಟೆ, ಬೆಡ್ಶೀಟ್, ಆಹಾರ ಧಾನ್ಯ ಸೇರಿ ಅಗತ್ಯ ಸೌಕರ್ಯ ಒದಗಿಸುವ ಕುರಿತು ಗುರುಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಆಡಳಿತ, ತಾಲೂಕಿನ ವಿವಿಧ ಸಂಘಗಳಿಂದ ಆಯೋಜಿಸಿದ್ದ ಸಭೆಯಲ್ಲಿ ನಮ್ಮ ನಡೆ ಸಂತ್ರಸ್ತರ ಕಡೆ ಎಂಬ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ಶಿಕ್ಷಕರು, ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಹಿರಿಯ ನಾಗರಿಕರು, ಸಮಾಜ ಸೇವಕರು, ವಿದ್ಯಾರ್ಥಿ ಸಂಘಟನೆ, ಪತ್ರಕರ್ತರು ಸೇರಿ ಹಲವರು ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು.
ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಸತತ ಬರದಿಂದ ತಾಲೂಕಿನ ಜನ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ. ಆದರೂ ನೆರೆ ಸಂತ್ರಸ್ತರಿಗೆ ಕೈಲಾದಷ್ಟು ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಮೂರು ಲಕ್ಷ ಹಣ ಸಂಗ್ರಹ: ಪಪಂ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್ ಹಾಗೂ ಸಿಬ್ಬಂದಿ ಒಂದು ದಿನ ವೇತನ ಹಾಗೂ ಒಂದು ಸಾವಿರ ರೊಟ್ಟಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಎಪಿಎಂಸಿಯಿಂದ 50 ಸಾವಿರ, ಹಿರಿಯ ನಾಗರಿಕರ ಸಂಘದಿಂದ 10 ಸಾವಿರ, ಬಿಇಒರಿಂದ 21 ಸಾವಿರ, ನಿವೃತ್ತ ನೌಕರರಿಂದ 10 ಸಾವಿರ, ಪತ್ರಕರ್ತರ ಸಂಘದಿಂದ 5 ಸಾವಿರ ರೂ. ನೀಡುವುದಾಗಿ ತಿಳಿಸಲಾಯಿತು. ಇದರ ಜತೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಗ್ರಹಿಸಿದ 25, 670 ದೇಣಿಗೆ ಸೇರಿ 3.25 ಲಕ್ಷ ರೂಪಾಯಿ ಆಗಿದೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜ್ಜಯ್ಯ ನಾಡಿಗೇರ್, ಎಪಿಎಂಸಿ ಸದಸ್ಯ ಎನ್.ಎಸ್.ರಾಜು, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ, ಬಿಇಒ ಯುವರಾಜ ನಾಯ್ಕ, ಡಾ.ರಂಗಪ್ಪ, ಸದಸ್ಯ ಬಿ.ಆರ್.ಚಂದ್ರಪ್ಪ, ಅಶೋಕ್, ಪತ್ರಾಂಕಿತ ವ್ಯವಸ್ಥಾಪಕ ಮಹೇಶ್ವರಪ್ಪ, ಪಿಎಸ್ಐ ಇಮ್ರಾನ್ ಬೇಗ್, ಬಿಇಒ ಯುವರಾಜ ನಾಯ್ಕ, ಜಾಗೃತಿ ಸಮಿತಿ ಸದಸ್ಯ ಅರವಿಂದನ್ ಇದ್ದರು.