ಅದ್ದೂರಿ ಗವಿ ಶಾಂತಲಿಂಗೇಶ್ವರ ರಥೋತ್ಸವ

ಜಗಳೂರು: ತಾಲೂಕಿನ ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದಲ್ಲಿ ಧನುರ್ಮಾಸ ಪೂಜೆ, ಮಕರ ಸಂಕ್ರಾಂತಿ, ಗವಿ ಶಾಂತಲಿಂಗೇಶ್ವರ ರಥೋತ್ಸವ ಸಾವಿರಾರು ಭಕ್ತ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಜಗದ್ಗುರು ಕೇದಾರನಾಥ ರಾವಲ್ ಭೀಮಾಶಂಕರ ಲಿಂಗ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಧನುರ್ಮಾಸ ಪೂಜೆ, ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರದ ಧಾರ್ಮಿಕ ವಿಧಿ-ವಿಧಾನಗಳು, ಕ್ಷೇತ್ರದ ಕರ್ತೃ ಗದ್ದುಗೆಗಳ ಮೇಲೆ ನೂತನ ಶಿಲಾಮೂರ್ತಿಗಳ ಪ್ರತಿಷ್ಠಾಪನೆ. ಮಕರ ಸಂಕ್ರಾಂತಿಯ ವಿಶೇಷ ಮಕರ ಜ್ಯೋತಿಯ ದರ್ಶನ ಹಾಗೂ ಶಾಂತಿ ಹೋಮಗಳು, ನೂತನ ಮಹಾದ್ವಾರ ಉದ್ಘಾಟನೆ ನೆರವೇರಿತು.

ಸಂಜೆ 5ಕ್ಕೆ ಗವಿ ಶಾಂತಲಿಂಗೇಶ್ವರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಭಕ್ತರು ತೆಂಗಿನ ಕಾಯಿ, ಬಾಳೆಹಣ್ಣು ಎಸೆದು ಸ್ವಾಮಿಯ ಕೃಪೆಗೆ ಪಾತ್ರರಾದರು. ನಂತರ ಕೇದಾರನಾಥ ರಾವಲ್ ಭೀಮಾಶಂಕರ ಲಿಂಗ ಶಿವಾಚಾರ್ಯ ಭಗವತ್ಪಾದರ ಆಶೀರ್ವಾದ ಪಡೆದುಕೊಂಡರು. ಮಠದ ಆವರಣದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು.

ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಶಿವಮೊಗ್ಗ, ಆಂದ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಕುಡಿವ ನೀರು ಮತ್ತು ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.