ಖಾತ್ರಿ ಕೆಲಸ, ಹಣ ಪಾವತಿಗೆ ಆಗ್ರಹ

ಜಗಳೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಹಾಗೂ ಕೆಲಸ ಮಾಡಿದ ಕೂಲಿಕಾರರ ಖಾತೆಗೆ ಹಣ ಜಮೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಚಿಕ್ಕಉಜ್ಜನಿ ಗ್ರಾಮಸ್ಥರು ಶುಕ್ರವಾರ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ತೀವ್ರ ಬರಗಾಲದಿಂದ ಜೀವನ ಕಷ್ಟವಾಗಿದ್ದು, ಬೆಳೆಗಳು ಹಾನಿಯಾಗಿವೆ. ಗ್ರಾಮದ ಬಹುತೇಕ ಜನರು ಕೆಲಸವಿಲ್ಲದೇ ಮನೆಯಲ್ಲಿದ್ದಾರೆ. ಕೇವಲ ನೂರು ಮಂದಿಗೆ ಕೆಲಸ ನೀಡಲಾಗಿದೆ. ಸರ್ಕಾರ 50 ಮಾನವ ದಿನ ಹೆಚ್ಚಿಸಿದ್ದರೂ, ತಾಂತ್ರಿಕ ನೆಪವೊಡ್ಡಿ ಕೆಲಸ ನೀಡಲು ವಿಳಂಬ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು.

ಎರಡು ತಿಂಗಳ ಹಿಂದೆ ಕೆಲಸ ಮಾಡಿದ ಕೆಲವು ಕೂಲಿಕಾರರಿಗೆ ಹಣ ಕೊಟ್ಟಿಲ್ಲ. ಆದರೆ, ಬೇರೆಯವರಿಗೆ ಹಣ ಜಮೆ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ಕೂಲಿ ಪಾವತಿಸಬೇಕು. ಮನೆಯಲ್ಲಿರುವವರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿದರು.

ಗ್ರಾಮಸ್ಥರಾದ ವೀರಭದ್ರಪ್ಪ, ಹನುಮಂತಪ್ಪ, ಮಲ್ಲಾಚಾರಿ, ಮಹಾಂತೇಶ್, ಚನ್ನಕೇಶವ್, ಪರಸಪ್ಪ, ಮರುಳಸಿದ್ದಪ್ಪ, ಮಡಿವಾಳಪ್ಪ, ಚಂದ್ರಪ್ಪ, ಮಂಗಳಮ್ಮ, ಮಡಿವಾಳಪ್ಪ, ಚಂದ್ರಪ್ಪ, ಕೆಂಚಮ್ಮ ಇತರಿದ್ದರು.