ಪಟ್ಟಣಕ್ಕೆ ಒಂದೇ ಗಣೇಶ ಪ್ರತಿಷ್ಠಾಪನೆ

ಜಗಳೂರು: ಪಟ್ಟಣದಲ್ಲಿ ಒಂದೇ ಗಣಪತಿ ಮೂರ್ತಿ ಕೂರಿಸಿ ಶಾಂತಿ ಸೌಹಾರ್ದತೆ ಕಾಪಾಡಲು ಎಲ್ಲರ ಸಹಕಾರ ಅಗತ್ಯ ಎಂದು ಸಿಪಿಐ ದುರುಗಪ್ಪ ಅಭಿಪ್ರಾಯಪಟ್ಟರು.

ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಅನೇಕ ವರ್ಷಗಳಿಂದಲೂ ವಿವಿಧ ಬಡಾವಣೆಗಳಲ್ಲಿ ನೂರಾರು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಣ, ಸಮಯ ವ್ಯರ್ಥ ಆಗುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತದೆ ಎಂದರು.

ಅಲ್ಲದೇ ಮೂರ್ತಿ ವಿಸರ್ಜನೆ ವೇಳೆ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಆದ್ದರಿಂದ ಎಲ್ಲರು ಒಟ್ಟಾಗಿ ಒಂದು ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ, ಮನರಂಜನೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸಬಹುದು ಎಂದು ಸಲಹೆ ನೀಡಿದರು.

ಗಣೇಶ ಮೂರ್ತಿ ಕೂರಿಸಲೇ ಬೇಕೆನ್ನುವವರು ಪೊಲೀಸ್, ಬೆಸ್ಕಾಂ ಇಲಾಖೆ, ಪಟ್ಟಣ ಪಂಚಾಯಿತಿಯಿಂದ ಅನುಮತಿ ಪಡೆದುಕೊಳ್ಳಬೇಕು. ಧ್ವನಿ ವರ್ಧಕಗಳನ್ನು ರಾತ್ರಿ 10 ಗಂಟೆಯೊಳಗೆ ನಿಲ್ಲಿಸಬೇಕು. ರಸ್ತೆಗೆ ಅಡ್ಡಲಾಗಿ ಕೂರಿಸುವಂತಿಲ್ಲ, ಸಿಸಿ ಕ್ಯಾಮೆರಾ ಅಳವಡಿಸಬೇಕು. ರಸ್ತೆಗಳಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಹಾಕುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ಏಕಾಕಿ ಎಲ್ಲ ಕಡೆ ಮೂರ್ತಿ ಪ್ರತಿಷ್ಠಾಪನೆ ನಿಲ್ಲಿಸುವುದು ಕಷ್ಟ. ಇದನ್ನು ಕ್ರಮೇಣ ಕಡಿಮೆ ಮಾಡಬಹುದು. ಒಂದೇ ವೇದಿಕೆ ಅಡಿ ಎಲ್ಲರನ್ನು ಒಗ್ಗೂಡಿಸಬಹುದು ಎಂದು ಸಾರ್ವಜನಿಕರು ಅನಿಸಿಕೆ ವ್ಯಕ್ತಪಡಿಸಿದರು.

ಪಿಎಸ್‌ಐ ಇಮ್ರಾನ್ ಬೇಗ್, ಉಮೇಶ್ ಬಾಬು, ಪ.ಪಂ.ಮಾಜಿ ಅಧ್ಯಕ್ಷ ಮಂಜುನಾಥ್, ಆರೋಗ್ಯ ನಿರೀಕ್ಷಕ ಕಿಫಾಯಿತ್, ಸದಸ್ಯ ಲುಕ್ಮಾನ್, ನಾಯಕ ಸಮಾಜದ ಮಾಜಿ ಕಾರ್ಯದರ್ಶಿ ಬಿ.ಲೋಕೇಶ್, ಪೊಲೀಸ್ ಗೋವಿಂದ್‌ರಾಜ್ ಇತರರಿದ್ದರು.

Leave a Reply

Your email address will not be published. Required fields are marked *