jagalur women protest water problem

ಖಾಲಿ ಕೊಡದೊಂದಿಗೆ ನಾರಿಯರ ಪ್ರತಿಭಟನೆ

ಜಗಳೂರು: ಕುಡಿವ ನೀರಿಗಾಗಿ ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಮಹಿಳೆಯರು ಹಾಗೂ ಗ್ರಾಮಸ್ಥರು ಮಂಗಳವಾರ ಪಟ್ಟಣದ ಪಂಚಾಯತ್‌ರಾಜ್ ಇಲಾಖೆಗೆ ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಗ್ರಾಮದಿಂದ ಬಿಂದಿಗೆ, ಬಕೆಟ್‌ನೊಂದಿಗೆ ಆಗಮಿಸಿದ ಮಹಿಳೆಯರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಕೇಂದ್ರ. ಇದಕ್ಕೆ ಹೊಂದಿಕೊಂಡಿರುವ ಗೊಲ್ಲರಹಟ್ಟಿಯಲ್ಲಿ 200 ಕ್ಕೂ ಹೆಚ್ಚು ಕುಟುಂಬಗಳಿವೆ. ನಿತ್ಯವೂ ಟ್ಯಾಂಕರ್ ಮೂಲಕ ಕುಡಿವ ನೀರು ತರಿಸಿಕೊಳ್ಳಬೇಕಿದೆ. ಈ ಬಗ್ಗೆ ಸಾಕಷ್ಟು ಬಾರಿ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಟ್ಯಾಂಕರ್ ನೀರು ಹಿಡಿದುಕೊಳ್ಳಲು ಪರದಾಡಬೇಕು. ಗಂಟೆಗಟ್ಟಲೆ ಕಾದರೂ ಒಂದು ಕೊಡ ನೀರು ಸಿಗುವುದಿಲ್ಲ. ಸಿಕ್ಕ ನೀರು ಕುಡಿಯಲು ಯೋಗ್ಯವಿರುವುದಿಲ್ಲ. ಇದರಿಂದ ಹಲವರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಗ್ರಾಮಸ್ಥ ಮಹಾಲಿಂಗಪ್ಪ ಆರೋಪಿಸಿದರು. ಕಳೆದ ಬಾರಿ ಪ್ರತಿಭಟನೆ ನಂತರ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಿರುವ ಪಂಚಾಯಿತಿ, 20 ದಿನಗಳಾದರೂ ಅದಕ್ಕೆ ಮೋಟರ್, ಪೈಪ್‌ಲೈನ್ ಅಳವಡಿಸಿಲ್ಲ. ಜಿಪಂ ಸದಸ್ಯರ ಗಮನಕ್ಕೆ ತಂದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಧನ್ಯಕುಮಾರ್, ಎಚ್.ಸಿ. ನಿಂಗಪ್ಪ, ಶೇಖರಪ್ಪ, ಕರಿಶಿವಣ್ಣ, ಮಂಡಜ್ಜರ ರೇವಣ್ಣ, ಎತ್ನೆರು ಚಂದ್ರಪ್ಪ, ಚಂದ್ರಪ್ಪ, ಶರಣಮ್ಮ, ಬಾಲಮ್ಮ, ಹೇಮಾವತಿ, ಹರೀಶ್ ಮತ್ತಿತರರಿದ್ದರು.