ವಸತಿ ನಿಲಯಗಳ ಮೂಲ ಸೌಕರ್ಯ ಪರಿಶೀಲನೆ

ಜಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಿಕ ಸದಸ್ಯ ಕೆ.ಬಿ. ಚಂಗಪ್ಪ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು.

ಹಾಸ್ಟೆಲ್‌ನ ಕೊಠಡಿಗಳು, ಆಹಾರ, ಶುದ್ಧ ಕುಡಿಯುವ ನೀರು, ಹಾಸಿಗೆ, ಹೊದಿಕೆ, ಬಿಸಿನೀರಿನ ವ್ಯವಸ್ಥೆ ಮತ್ತಿತರ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ಅಡುಗೆ ಸಿಬ್ಬಂದಿ ಶುಚಿ-ರುಚಿಯಾಗಿ ಅಡುಗೆ ತಯಾರಿಸಬೇಕು. ಯಾವುದೇ ಕಾರಣಕ್ಕೆ ಅಲಕ್ಷ್ಯ ತೋರಬಾರದು ಎಂದು ಸೂಚಿಸಿದರು.

ಬಿಸಿಎಂ ಹಾಸ್ಟೆಲ್‌ನಲ್ಲಿ ಅಲ್ಲಲ್ಲಿ ಬಿದ್ದಿದ್ದ ವಸ್ತುಗಳು, ಮುರುಕಲು ಮಂಚ, ವಾಸನೆ ಬೀರುವ ಹೊದಿಕೆಗಳನ್ನು ಕಂಡು ಇಲಾಖೆ ವಿಸ್ತರಣಾಧಿಕಾರಿ, ನಿಲಯಪಾಲಕರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಆಸ್ಪತ್ರೆಗೆ ಭೇಟಿ: ಇದಕ್ಕೂ ಮುನ್ನ ಚಂಗಪ್ಪ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಫಿಜಿಷಿಯನ್, ರೇಡಿಯಾಲಜಿಸ್ಟ್ ನೇಮಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು.

ನೂರು ಹಾಸಿಗೆಯುಳ್ಳ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮೆಷಿನ್ ಇದ್ದರೂ ಸೇವೆ ನೀಡುತ್ತಿಲ್ಲ. ಖಾಸಗಿ ಕೇಂದ್ರಗಳಲ್ಲಿ ಸ್ಕಾೃನಿಂಗ್ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ರೇಡಿಯಾಲಾಜಿಸ್ಟ್ ಹುದ್ದೆ ಇಲ್ಲ ಎನ್ನುತ್ತಿದ್ದಾರೆ. ರೇಡಿಯಾಲಜಿಸ್ಟ್ ನೇಮಕಕ್ಕೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ತಹಸೀಲ್ದಾರ್ ಶ್ರೀಧರಮೂರ್ತಿ, ಪಪಂ ಮುಖ್ಯಾಧಿಕಾರಿ ರಾಜು ಬಣಕಾರ್, ಸಮಾಜ ಕಲ್ಯಾಣಾಧಿಕಾರಿ ಅಶೋಕ್, ಕಚೇರಿಯ ವ್ಯವಸ್ಥಾಪಕ ಬಿ. ಮಹೇಶ್ವರಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಬಣಕಾರ್, ಬಿಸಿಎಂ ವಿಸ್ತರಣಾಧಿಕಾರಿ ವೆಂಕಟೇಶ್ ಮೂರ್ತಿ, ಹಾಸ್ಟೆಲ್ ಮೇಲ್ವಿಚಾರಕ ಹನುಮಂತಪ್ಪ ಇತರರಿದ್ದರು.