ಹಳ್ಳಿಗಳು ಕತ್ತಲ ಮುಕ್ತವಾಗಬೇಕು

ಜಗಳೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪಿಡಬ್ಲುೃಡಿ ವತಿಯಿಂದ 17.42 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭಾನುವಾರ ಸಂಸದ ಜಿ.ಎಂ ಸಿದ್ದೇಶ್ವರ್ ಭೂಮಿ ಪೂಜೆ ನೆರವೇರಿಸಿದರು.

ಮುಗ್ಗಿದರಾಗಿಹಳ್ಳಿಯಲ್ಲಿ ಮಾತನಾಡಿದ ಸಿದ್ದೇಶ್ವರ್, ತಾಲೂಕಿನ ಪ್ರತಿ ಹಳ್ಳಿಯು ಕತ್ತಲ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಗ್ರಾಮಗಳಿಗೆ ಸಂಸದರ ಅನುದಾನದಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.

ಕೆರೆಗೆ ನೀರು ತುಂಬಿಸುವ ಯೋಜನೆಯಡಿ 53 ಕೆರೆಗಳ ಜತೆ ಹೆಚ್ಚುವರಿಯಾಗಿ 3 ಕೆರೆ ಸೇರಿಸಲಾಗಿದ್ದು, ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.

6 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಜಗಳೂರು ಶಾಖಾ ಕಾಲುವೆ ಮಾರ್ಗದ ವಿಚಾರವಾಗಿ ಸರ್ಕಾರ ಹೋರಾಟಗಾರರ ಬೇಡಿಕೆಗೆ ಸ್ಪಂದಿದೆ. ಈ ಯೋಜನೆ ಸಂಬಂಧಪಟ್ಟಂತೆ ವರದಿ ನೀಡುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಾಕೀತು ಮಾಡಿದ್ದಾರೆ ಎಂದು ಹೇಳಿದರು.

ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ತಾಲೂಕಿನಲ್ಲಿ ಬೇಸಿಗೆಯ ಮುನ್ನವೇ ನೀರಿನ ಸಮಸ್ಯೆ ಎದುರಾಗಿದ್ದು, ಗ್ರಾಮಗಳಲ್ಲಿ ನೀರಿನ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಎಲ್ಲೆಲ್ಲಿ ಕಾಮಗಾರಿ: ಮುಗ್ಗಿದರಾಗಿಹಳ್ಳಿ ಮುಚ್ಚನೂರು ರಸ್ತೆ ಡಾಂಬರೀಕರಣ 1.27 ಕೋಟಿ, ಭರಮಸಾಗರ, ಬಿಳಿಚೋಡು, ಬಸವನಕೋಟೆ -4.50, ರಾಷ್ಟ್ರೀಯ ಹೆದ್ದಾರಿ 65ರಿಂದ ಕೆಚ್ಚೇನಹಳ್ಳಿ ರಸ್ತೆ ವರೆಗೆ-4, ಅರಬಾವಿಯಿಂದ ಚಳ್ಳಕೆರೆ ಮಾರ್ಗ-1.25, ರಂಗಾಪುರದಿಂದ ಗಡಿಮಾಕುಂಟೆ ವರೆಗೆ-2, ಹೊಸಕರೆಯಿಂದ ಅರಸಿಕೆರೆ ವರೆಗೆ ರಸ್ತೆ ಡಾಂಬರೀಕರಣಕ್ಕೆ 4.39 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ತಾಪಂ ಇಒ ಮಲ್ಲನಾಯ್ಕ, ಪಿಡಬ್ಲುೃಡಿ ಎಇಇ ರುದ್ರಪ್ಪ, ಜಿಪಂ ಸದಸ್ಯ ಎಸ್.ಕೆ.ಮಂಜುನಾಥ್, ಬಿಜೆಪಿ ತಾಲೂಕಾಧ್ಯಕ್ಷ ಡಿ.ವಿ.ನಾಗಪ್ಪ, ಮುಖಂಡರಾದ ಬಿಸ್ತುವಳ್ಳಿ ಬಾಬು, ಎಚ್.ಸಿ.ಮಹೇಶ್, ಗುತ್ತಿಗೆದಾರ ಹನುಮಂತನಾಯ್ಕ, ಪಿಡಿಒ ಲೋಹಿತ್, ಸೋಮನಹಳ್ಳಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಸಂಸದರ ಕಾರು ತಡೆದು ಮನವಿ ಸಲ್ಲಿಕೆ: ಮುಗ್ಗಿದರಾಗಿಹಳ್ಳಿಗೆ ಸಿದ್ದೇಶ್ವರ್ ಪ್ರವೇಶಿಸುತ್ತಿದ್ದಂತೆ ಗ್ರಾಮದ ಮಹಿಳೆಯರು ಕಾರು ತಡೆದು, ಕುಡಿವ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು. ಕಾರಿನಿಂದ ಇಳಿದ ಸಂಸದರು ಮಹಿಳೆಯರ ಅಹವಾಲು ಆಲಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

Leave a Reply

Your email address will not be published. Required fields are marked *