ಇಲ್ಲಿ ಕುಡಿಯುವ ನೀರು ಕೆಂಪು!

ಲೋಕೇಶ್.ಎಂ ಐಹೊಳೆ ಜಗಳೂರು
ಶುದ್ಧ ನೀರು ಕುಡಿದರೇ ಅನಾರೋಗ್ಯ ಕಾಡುತ್ತದೆ. ಇಂಥದ್ದರಲ್ಲಿ ನಾಲ್ಕೈದು ತಿಂಗಳಿಂದ ಮಣ್ಣು ಮಿಶ್ರಿತ ಕಲುಷಿತ ನೀರು ಕುಡಿದವರ ಗತಿ ಏನಾಗಬೇಡ. ತಾಲೂಕಿನ ತೋರಣಗಟ್ಟೆ ಗ್ರಾಪಂ ವ್ಯಾಪ್ತಿಯ ಜಮ್ಮಾಪುರ ಗೊಲ್ಲರಹಟ್ಟಿ ಮತ್ತು ಹೊಸೂರು ಗ್ರಾಮಸ್ಥರು ರೋಗದ ಭೀತಿಯಲ್ಲಿ ಬದುಕುತ್ತಿದ್ದಾರೆ.

ಗೊಲ್ಲರಹಟ್ಟಿ, ಹೊಸೂರು ಎರಡೂ ಗ್ರಾಮಗಳಲ್ಲಿ 100 ಕುಟುಂಬಗಳಿದ್ದು, 600ಕ್ಕೂ ಅಧಿಕ ಜನಸಂಖ್ಯೆ ಇದೆ. ಗೊಲ್ಲರಹಟ್ಟಿಯಲ್ಲಿ ಕೊಳವೆಬಾವಿಗಳನ್ನು ಕೊರೆದಿದ್ದು, ತೋರಣಗಟ್ಟೆ, ಮರೇನಹಳ್ಳಿಯಂಥ ದೊಡ್ಡ ಹಳ್ಳಿಗಳಿಗೆ ಪೈಪ್‌ಲೈನ್ ಮೂಲಕ ಇಲ್ಲಿಂದಲೇ ನೀರು ಪೂರೈಕೆಯಾಗುತ್ತಿದೆ. ಆದರೆ, ಈ ಗ್ರಾಮಗಳಿಗೆ ಕುಡಿಯಲು ಒಳ್ಳೆ ನೀರು ಸಿಗುತ್ತಿಲ್ಲವೆಂಬುದು ಜನರ ಅಳಲು ಆಗಿದೆ.

ಬೀದಿ ನಳಗಳಲ್ಲಿ ಬೆಳಗ್ಗೆ ನೀರು ಹಿಡಿಯಲು ಹೋದವರಿಗೆ ಇದೇನು ನೀರೋ ಅಥವಾ ಕೆಸರೋ ಎಂಬ ಅನುಮಾನವಾಗಿದೆ. ಪಾತ್ರೆ, ಕೊಡ, ಡ್ರಮ್‌ಗಳಲ್ಲಿ ನೀರು ತುಂಬಿಸಿ, ಕೆಲವೇ ಕ್ಷಣಗಳಲ್ಲಿ ಮಣ್ಣಿನ ತಿಳಿ ಕೂರುತ್ತದೆ. ನೀರೆಲ್ಲ ಕೆಂಪಾಗಿದ್ದು, ಇದೇ ನೀರು ಕುಡಿಯುವುದು ಅನಿವಾರ್ಯವಾಗಿದೆ.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಗ್ರಾಮದಲ್ಲಿ ಕಲುಷಿತ ನೀರು ಬರುತ್ತಿರುವ ಬಗ್ಗೆ ಗ್ರಾಪಂ, ತಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಈ ನೀರು ಕುಡಿದು ಮನೆಗೆ ಒಬ್ಬರಿಬ್ಬರು ಶೀತ, ಜ್ವರ, ಕಾಲರಾದಿಂದ ಬಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಅಧಿಕಾರಿಗಳಾಲೀ, ಜನಪ್ರತಿನಿಧಿಗಳಾಗಲಿ ಒಮ್ಮೆಯೂ ಭೇಟಿ ನೀಡಿ ಸಮಸ್ಯೆ ಕೇಳಿಲ್ಲ. ಆದರೆ, ಚುನಾವಣೆಗಳಲ್ಲಿ ಮಾತ್ರ ವೋಟಿಗಾಗಿ ಬಂದು ಕೈ ಮುಗಿಯುತ್ತಾರೆ.

ಕೆಲಸ ಮುಗಿದ ಮೇಲೆ ಇತ್ತ ತಲೆ ಹಾಕುವುದಿಲ್ಲ. ಆದ್ದರಿಂದ ನಮಗೆ ಶುದ್ಧ ನೀರು ಕೊಡುವವರೆಗೂ ಹೋರಾಟ ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪಂಪ್‌ಸೆಟ್ ಅಳವಡಿಸದ ಸಿಬ್ಬಂದಿ
ಗ್ರಾಮದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಲಾಗಿದ್ದು, ಇದುವರೆಗೂ ಮೋಟರ್ ಪಂಪ್‌ಸೆಟ್ ಅಳವಡಿಸಿದ ಲಕ್ಷಾಂತರ ರೂ. ಪೋಲು ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.

ನೀರು ಕುಡಿದರೆ ಗಂಟಲು ಹಿಡಿದು ಆಯಾಸ, ದಮ್ಮು-ಕೆಮ್ಮು ಬರುತ್ತದೆ. ಜಗಳೂರು ಆಸ್ಪತ್ರೆಯಲ್ಲಿ ಗುಣವಾಗದ ಕಾರಣ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದೇನೆ. ನಾವು ರೋಗದಿಂದ ಸತ್ತರೂ ನಮ್ಮನ್ನು ಕೇಳೋರು ಯಾರೂ ಇಲ್ಲ.
ತಿಮ್ಮಜ್ಜ ಹಿರಿಯ ನಾಗರಿಕ

ಚುನಾವಣೆಯಲ್ಲಿ ವೋಟ್ ಬೇಕು. ನಮಗೆ ನೀರು ಮಾತ್ರ ಬೇಡ. ನಮ್ಮ ಊರಿನ ನೀರು ತಗೊಂಡು ಬೇರೆ ಊರುಗಳಿಗೆ ಕಳಿಸ್ತಾರೆ. ನಮಗೆ ಮಾತ್ರ ಶುದ್ಧ ನೀರು ಸಿಗುತ್ತಿಲ್ಲ. ಚುನಾವಣೆಯಲ್ಲಿ ಮತ ಕೇಳಲು ಗ್ರಾಮಕ್ಕೆ ಕಾಲಿಡಲಿ, ಪಾಠ ಕಲಿಸುತ್ತೇವೆ.
ಬಾಲಮ್ಮ ಗ್ರಾಮಸ್ಥೆ

3 ತಿಂಗಳ ಹಿಂದೆ ಗ್ರಾಮದಲ್ಲಿ ಪೈಪ್‌ಲೈನ್ ಒಡೆದು ಕಲುಷಿತ ನೀರು ಪೂರೈಕೆಯಾಗಿತ್ತು. ಅದನ್ನು ಸರಿಪಡಿಸಲಾಗಿತ್ತು. ಆದರೆ, ಮತ್ತೀಗ ಮಣ್ಣು ಮಿಶ್ರಿತ ನೀರು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸರಿಪಡಿಸಲಾಗುವುದು.
ಮರುಳಸಿದ್ದಪ್ಪ
ಪಿಡಿಒ ತೋರಗಟ್ಟೆ ಗ್ರಾಮ ಪಂಚಾಯಿತಿ