Friday, 16th November 2018  

Vijayavani

Breaking News

ಮಡಗಿದ ಹಾಗಿರುವ ಬಡವನಾಗದ್ದರ ಪರಿಣಾಮ

Wednesday, 20.06.2018, 3:03 AM       No Comments

| ಪ್ರೇಮಶೇಖರ

ಶೀತಲ ಸಮರ ಕಾಲದಲ್ಲಿ ಪಶ್ಚಿಮದ ದೇಶಗಳಲ್ಲಿ ಎಡಪಂಥೀಯ ವಿಚಾರವಾದಿಗಳು/ಬರಹಗಾರರು ‘ಲಿಬರಲ್ಸ್’ ಎಂಬ ಹಣೆಪಟ್ಟಿ ಹಚ್ಚಿಕೊಂಡು ಕೆಜಿಬಿಗಾಗಿ ಲೇಖನಗಳನ್ನು ಬರೆದು ಪ್ರಚುರಪಡಿಸುವಲ್ಲಿ ಪರಿಣಿತರಾಗಿದ್ದರಷ್ಟೇ. ಲೇಖನಿ ಮತ್ತು ನಾಲಿಗೆಯನ್ನಷ್ಟೇ ಉಪಯೋಗಿಸುತ್ತಿದ್ದ ಇವರ ಚಟುವಟಿಕೆ ಹೆಚ್ಚೆಂದರೆ ‘ಬೌದ್ಧಿಕ ಭಯೋತ್ಪಾದನೆ’ಯಷ್ಟೇ.

ಸ್ವತಂತ್ರ ಭಾರತದ ರಾಜಕಾರಣ ಹಾಗೂ ಆರ್ಥಿಕ ಕ್ಷೇತ್ರದಲ್ಲಿ 1990ರ ದಶಕ ಮಹತ್ತರ ಸಂಕ್ರಮಣ ಕಾಲ. ರಾಷ್ಟ್ರದ ಇತಿಹಾಸ, ಸಮಾಜ-ಆರ್ಥಿಕ ವ್ಯವಸ್ಥೆಯ ಕುರಿತಾಗಿ ಕೆಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಟ್ಟಭದ್ರ ಹಿತಾಸಕ್ತಿಗಳು ಜತನದಿಂದ ಕಾಪಾಡಿಕೊಂಡು ಬಂದಿದ್ದ ಹಲವು ಮಿಥ್ಯೆಗಳು ಚೂರಾಗತೊಡಗಿದ ಕಾಲ ಅದು. ದೇಶ ಸ್ವತಂತ್ರಗೊಂಡ ದಿನದಿಂದ ಶೀತಲ ಸಮರ ಅಂತ್ಯಗೊಂಡ ಕಾಲ ಅಂದರೆ 1990ರ ದಶಕದ ಆರಂಭದವರೆಗೆ ವಿವಿಧ ಸರ್ಕಾರಗಳು ಪಂಚವಾರ್ಷಿಕ ಯೋಜನೆಗಳೂ ಸೇರಿದಂತೆ ಅದೆಷ್ಟೇ ಬಗೆಯ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರೂ ದೇಶದ ವಾರ್ಷಿಕ ಆರ್ಥಿಕ ಅಭಿವೃದ್ಧಿ ದರ ಶೇಕಡ 3.5ಕ್ಕಿಂತ ಎಂದೂ ಹೆಚ್ಚಾಗಲಿಲ್ಲ. ಅಂದರೆ ಭಾರತ ಪಶ್ಚಿಮದ ದೇಶಗಳ ಹಾಗೆ ಎಂದೂ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದಲಾರದು ಎಂಬ ಅಭಿಪ್ರಾಯ ಆರ್ಥಿಕ ಪಂಡಿತ ವಲಯದಲ್ಲಿ ಸಾರ್ವತ್ರಿಕವಾಗಿತ್ತು. ಹೀಗೆ ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಮೂಲವನ್ನು ಭಾರತೀಯ ಧಾರ್ವಿುಕ ಚಿಂತನೆ ಹಾಗೂ ಭಾರತೀಯರ ಮನೋಭಾವದಲ್ಲಿ ಹುಡುಕಲು ಹೋದ ಕೆಲ ಎಡಪಂಥೀಯ ಅರ್ಥಶಾಸ್ತ್ರಜ್ಞರು ಭಾರತದ ನಿಧಾನ ಅಭಿವೃದ್ಧಿ ದರವನ್ನು ‘ಹಿಂದೂ ಅಭಿವೃದ್ಧಿ ದರ’ ಎಂದು ಹೀಗಳೆದರು. ಆದರೆ, 1991-92ರಲ್ಲಿ ನರಸಿಂಹರಾವ್-ಮನಮೋಹನ್ ಸಿಂಗ್ ಜೋಡಿ ಆರ್ಥಿಕ ಉದಾರೀಕರಣವನ್ನು ಚಾಲನೆಗೊಳಿಸಿದ ಪರಿಣಾಮವಾಗಿ ವಾರ್ಷಿಕ ಆರ್ಥಿಕ ಅಭಿವೃದ್ಧಿ ದರ ಏರುತ್ತ ಹೋಗಿ ಮುಂದಿನ ಐದೇ ವರ್ಷಗಳಲ್ಲಿ ಶೇ. 8ಕ್ಕೇರಿತು. ಇದು ಎತ್ತಿತೋರಿಸಿದ್ದು ಕಳೆದ ನಾಲ್ಕು ದಶಕಗಳಲ್ಲಿ ದೇಶದ ಕಳಪೆ ಆರ್ಥಿಕ ಪ್ರಗತಿಗೆ ಕಾರಣ ಭಾರತೀಯರ ಮನೋಭಾವವಲ್ಲ, ಬದಲಿಗೆ ಸರ್ಕಾರಗಳು ಅನುಸರಿಸಿದ ಲೈಸನ್ಸ್ ರಾಜ್ ಹಾಗೂ ರಕ್ಷಣಾತ್ಮಕ ಆರ್ಥಿಕ ನೀತಿಗಳು. ಈ ದೋಷಪೂರ್ಣ ಆರ್ಥಿಕ ನೀತಿಗಳನ್ನು ರೂಪಿಸಿದ್ದು ಸಮಾಜವಾದಿ ಕಾಂಗ್ರೆಸ್ಸಿಗರು ಮತ್ತು ಕಮ್ಯೂನಿಸ್ಟರು, ಆದರೆ ಅದಕ್ಕೆ ಹೆಸರಿಟ್ಟದ್ದು ‘ಹಿಂದೂ ಅಭಿವೃದ್ಧಿ ದರ’ ಅಂತ! ನಂತರ ಇಬ್ಬರು ಜಗತ್ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಪಾಲ್ ಬೈರೋಖ್ ಮತ್ತು ಆಂಗಸ್ ಮ್ಯಾಡಿಸನ್ ವ್ಯಾಪಕ ಸಂಶೋಧನೆ ಹಾಗೂ ಅಧ್ಯಯನಗಳ ಮೂಲಕ ಜಗತ್ತಿಗೆ ಸಾರಿದ್ದು- ಭಾರತೀಯ ಮನೋಭಾವ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದು. ಇವರ ಅಧ್ಯಯನಗಳು ಹೇಳಿದ್ದೇನೆಂದರೆ, ಕ್ರಿಸ್ತಶಕದ ಆರಂಭದಿಂದ ತೆಗೆದುಕೊಂಡರೂ 15ನೇ ಶತಮಾನದವರೆಗೆ ಭಾರತ ಜಗತ್ತಿನ ಅತಿ ಬಲಾಢ್ಯ ಅರ್ಥವ್ಯವಸ್ಥೆಯಾಗಿತ್ತು, ನಂತರದ ಮೂರು ಶತಮಾನಗಳಲ್ಲಿ ಮೊದಲ ಸ್ಥಾನಕ್ಕಾಗಿ ಭಾರತ ಮತ್ತು ಚೀನಾಗಳ ನಡುವೆ ಹಗ್ಗಜಗ್ಗಾಟದ ಸ್ಥಿತಿ ಏರ್ಪಟ್ಟಿತು. ಇಂತಹ ಬಲಾಢ್ಯ ಅರ್ಥವ್ಯವಸ್ಥೆಯ ಅವನತಿ ಆರಂಭವಾದದ್ದು 19ನೇ ಶತಮಾನದ ಆರಂಭದಲ್ಲಿ, ಬ್ರಿಟಿಷ್ ವಸಾಹತುಶಾಹಿ ಆರ್ಥಿಕ ನೀತಿಗಳಿಂದಾಗಿ. ಮುಂದಿನ ಒಂದೇ ಶತಮಾನದಲ್ಲಿ ಅದೆಷ್ಟು ಅವನತಿ ಕಂಡಿತೆಂದರೆ ಕಳೆದ 18 ಶತಮಾನಗಳಿಂದಲೂ ಜಾಗತಿಕ ವ್ಯಾಪಾರದಲ್ಲಿ ಶೇ. 27ರಿಂದ 35ರಷ್ಟಿದ್ದ ಭಾರತದ ಪಾಲು 20ನೇ ಶತಮಾನ ಅರಂಭವಾಗುವ ಹೊತ್ತಿಗೆ ಶೇ. 2.5ಕ್ಕಿಳಿದು ಸ್ವಾತಂತ್ರ್ಯದ ಹೊತ್ತಿಗೆ ಅದರ ಅರ್ಧವಾಯಿತು. ನಂತರದ ನಾಲ್ಕು ದಶಕಗಳಲ್ಲಿ ಅದು ಹೆಚ್ಚೇನೂ ವೃದ್ಧಿಯಾಗಲಿಲ್ಲ. (Paul Bairoch: Economics and World History, 1993 ÊÜáñÜᤠAngus Madison: The World Economy: Historical Statistics, 2004).
.

ಇನ್ನು ರಾಜಕೀಯ ಕ್ಷೇತ್ರದತ್ತ ನೋಡೋಣ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಮ್ಮ ರಾಜಕೀಯ ಭವಿಷ್ಯಕ್ಕೆ ಪ್ರಬಲ ಹಾಗೂ ಏಕೈಕ ಕಂಟಕ ಎಂದು ಭಾವಿಸಿದ್ದ ಜವಾಹರಲಾಲ್ ನೆಹರು ಜನಾಭಿಪ್ರಾಯವನ್ನು ಅದರ ವಿರುದ್ಧ ತಿರುಗಿಸಲು ಹೂಡಿದ ಕಾನೂನಾತ್ಮಕ, ಆಡಳಿತಾತ್ಮಕ ಹಾಗೂ ಭಾವನಾತ್ಮಕ ಷಡ್ಯಂತ್ರಗಳು ಮತ್ತು ಅವುಗಳ ಅನುಷ್ಠಾನಕ್ಕಾಗಿ ಎಡಪಂಥೀಯ ಚಿಂತಕ-ಸಾಹಿತಿಗಳನ್ನು ಬಳಸಿಕೊಂಡದ್ದೀಗ ಇತಿಹಾಸ. ಈ ಪಿತೂರಿಯನ್ನು ಮತ್ತಷ್ಟು ವ್ಯವಸ್ಥಿತವಾಗಿ ಮತ್ತು ಉಗ್ರವಾಗಿ ಕಾರ್ಯರೂಪಕ್ಕಿಳಿಸಿದ್ದು ಇಂದಿರಾ ಗಾಂಧಿ-ನೂರುಲ್ ಹಸನ್-ಅಶೋಕ್ ವಾಜಪೇಯಿ. ಈ ಕಾಕ ಪಿತೂರಿಗಾರರು ಒಟ್ಟಿಗೆ ರೂಪಿಸಿದ ಕಲುಷಿತ ಶಿಕ್ಷಣ ಕ್ರಮ ಹಾಗೂ ಸೃಷ್ಟಿಸಿದ, ತಿರುಚಿದ ಸಾಹಿತ್ಯಕ-ಸಾಂಸ್ಕೃತಿಕ ಕಥನ ಹೊಸ ತಲೆಮಾರಿನ ಬಹುಸಂಖ್ಯಾತ ಭಾರತೀಯರು ತಮ್ಮ ಇತಿಹಾಸ, ಧಾರ್ವಿುಕ ನಂಬುಗೆಗಳು, ಆಚಾರ-ವಿಚಾರಗಳ ಬಗ್ಗೆಯೇ ಅಸಹ್ಯ ಹಾಗೂ ತಿರಸ್ಕಾರವನ್ನು ರೂಢಿಸಿಕೊಳ್ಳುವಂತೆ ಮಾಡಿದವು.

ವಿದೇಶಿ ಶಕ್ತಿಗಳ ಪ್ರಭಾವ: ದೇಶದೊಳಗಿನ ಈ ಬೆಳವಣಿಗೆ ಹಲವು ವಿದೇಶಿ ರಾಜಕೀಯ, ಧಾರ್ವಿುಕ ಹಾಗೂ ಸೈದ್ಧಾಂತಿಕ ಶಕ್ತಿಗಳಿಗೆ ಸಮ್ಮತವೇ ಆಗಿತ್ತು. ಕಾಕಗಳು ರೂಪಿಸಿದ್ದ ಭಾರತ ಆರ್ಥಿಕವಾಗಿ ವಿದೇಶಿ ಶಕ್ತಿಗಳಿಗೆ ಸವಾಲೊಡ್ಡುತ್ತಿರಲಿಲ್ಲ, ಅದಕ್ಕೆ ಸ್ವತಂತ್ರ ವಿದೇಶಿ ನೀತಿ ಇರಲಿಲ್ಲ, ರಕ್ಷಣೆಯಲ್ಲಿ ಸ್ವಾವಲಂಬನೆಯೂ ಇರಲಿಲ್ಲ. ಒಟ್ಟಿನಲ್ಲಿ ಕಾಕಗಳ ಭಾರತ ‘ಬಡವಾ ನೀ ಮಡಗಿದ ಹಾಗಿರು’ ಅನ್ನುವಂತಿತ್ತು. ಈ ‘ಬಡವ’ನನ್ನು ತಮ್ಮಿಚ್ಛೆಯಂತೆ ಕುಣಿಸುತ್ತಿದ್ದುದು ಒಂದಕ್ಕಿಂತ ಹೆಚ್ಚು ವಿದೇಶಿ ಶಕ್ತಿಗಳು. ನೆಹರು ಯುಗದಲ್ಲಿ ದಶಕದವರೆಗೆ ಬ್ರಿಟನ್ನಿನ ಪ್ರಭಾವದಲ್ಲಿದ್ದ ಭಾರತ ಮುಂದಿನ ಒಂದು ದಶಕದಲ್ಲಿ ಅಮೆರಿಕದ ಪ್ರಭಾವದ ಒಳಗೆ ಹೊರಗೆ ಉರುಳಾಡಿ 1960ರ ದಶಕದ ಅಂತ್ಯದ ಹೊತ್ತಿಗೆ ಸೋವಿಯತ್ ಕಪಿಮುಷ್ಟಿಗೆ ಸಿಲುಕಿಹೋಯಿತು. ಆದಾಗ್ಯೂ, ಎಡಪಂಥೀಯರು ತಮ್ಮ ಬೇರುಗಳನ್ನು ಭದ್ರಪಡಿಸಿಕೊಳ್ಳಲು ಉತ್ಪ್ರೇಕ್ಷಿಸುತ್ತಿದ್ದ ಸಾಮಾಜಿಕ ಅಸಮಾನತೆ, ತಾರತಮ್ಯಗಳೇ ಒಂದು ವಿರೋಧಾಭಾಸದಂತೆ ಹಿಂದೂ ಸಮಾಜದ ಬಿರುಕುಗಳನ್ನು ದಿನೇದಿನೆ ಅಗಲ ಮಾಡುತ್ತಿದ್ದುದರಿಂದಾಗಿ ವಿದೇಶಿ ಧಾರ್ವಿುಕ ಸಂಸ್ಥೆಗಳಿಗೆ ಮತಾಂತರಕ್ಕೆ ವಿಪುಲ ಅವಕಾಶಗಳಿದ್ದೇ ಇದ್ದವು. ಹೀಗಾಗಿ, ಏಕಕಾಲದಲ್ಲಿ ಎಡ ಸೈದ್ಧಾಂತಿಕ ಹಾಗೂ ಬಲ ಧಾರ್ವಿುಕ ಕಾರಸ್ಥಾನಗಳಿಗೆ ಭಾರತ ಆಡುಂಬೊಲವಾಗುವ ವಿರೋಧಾಭಾಸದ ಸ್ಥಿತಿ ನಿರ್ವಣವಾಯಿತಷ್ಟೇ ಅಲ್ಲ ಅವೆರಡೂ ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸತೊಡಗಿದ ಚೋದ್ಯವನ್ನೂ ನಾವಿಲ್ಲಿ ಕಂಡೆವು. ರಾಜಕೀಯ ಅಧಿಕಾರವನ್ನು ಬಲಪಡಿಸಿಕೊಳ್ಳಲು ಕಾಂಗ್ರೆಸ್ ರಾಜಕಾರಣಿಗಳು ಮತ್ತು ಸಮಾಜದಲ್ಲಿ ತಮ್ಮ ಉಜಿಠಿಛಿ ಸ್ಥಾನವನ್ನೂ, ಸವಲತ್ತುಗಳನ್ನೂ ಅನೂಚಾನಗೊಳಿಸಿಕೊಳ್ಳಲು ಎಡಪಂಥೀಯ ಸಾಹಿತಿ-ಚಿಂತಕರು ಜಂಟಿಯಾಗಿ 4 ದಶಕಗಳವರೆಗೆ ಯಶಸ್ವಿಯಾಗಿ ನಡೆಸಿಕೊಂಡು ಬಂದ ಸ್ವಾರ್ಥಪೂರ್ಣ ದುರಾಚಾರ ಅಂತಿಮವಾಗಿ ವಿಫಲಗೊಳ್ಳುತ್ತಿರುವ ನಿರ್ಣಾಯಕ ಸೂಚನೆ ಕಂಡುಬಂದದ್ದು 1996ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ.

ತೀವ್ರಗೊಂಡ ಷಡ್ಯಂತ್ರಗಳು: ಬಿಜೆಪಿ ನೇತೃತ್ವದ ಭಾರತ, ಹೊರಗಿನ ಶಕ್ತಿಗಳು ‘ಮಡಗಿದಂತೆ ಇರಲೊಲ್ಲದ’ ಸ್ವಾಭಿಮಾನಿ ರಾಷ್ಟ್ರವಾಗಿ ಬದಲಾಗುವ ಸೂಚನೆಯನ್ನೂ, ಪರಿಣಾಮವಾಗಿ ಅದರಲ್ಲಿ ತಾವು ಅಪ್ರಸ್ತುತರಾಗುವ ಅಪಾಯವನ್ನೂ ಕಂಡು ಎಚ್ಚೆತ್ತುಕೊಂಡ ಕಾಕಗಳು ತಕ್ಷಣ ಕಾರ್ಯಪ್ರವೃತ್ತರಾದರು. ಲಾಗಾಯ್ತಿನ ವಿದೇಶಿ ಬೆಂಬಲಿಗರ ಸಹಕಾರವಂತೂ ಇತ್ತು. ಮುಂದಿನ ಮೂರು ವರ್ಷಗಳಲ್ಲಿ ಬಿಜೆಪಿ ತನ್ನ ಜನಪ್ರಿಯತೆಯನ್ನು ಹಂತಹಂತವಾಗಿ ವೃದ್ಧಿಸಿಕೊಳ್ಳುತ್ತ ಸಾಗಿದರೆ, ‘ಮತದಾರ’ರನ್ನು ಬಿಜೆಪಿಯಿಂದ ವಿಮುಖಗೊಳಿಸುವ ಕಾಕಗಳ ಷಡ್ಯಂತ್ರಗಳೂ ತೀವ್ರವಾದವು. ಬಿಜೆಪಿಯ ಕಾರ್ಯಕ್ಷೇತ್ರ ಭಾರತ ಹಾಗೂ ಶಕ್ತಿಯ ಮೂಲ ಸಾಮಾನ್ಯ ಭಾರತೀಯನಾದರೆ ಕಾಕಗಳ ಕಾರ್ಯಕ್ಷೇತ್ರ ಲಾಗಾಯ್ತಿನಂತೆ ವಿದೇಶಗಳು ಹಾಗೂ ಶಕ್ತಿಯ ಮೂಲ ಅಲ್ಲಿನ ಮಾಧ್ಯಮಗಳು ಮತ್ತು ಎಡಪಂಥೀಯ ಸಂಘಟನೆಗಳಾದವು. ಹಿಂದೂಯೇತರ, ಹಿಂದೂ-ವಿರೋಧಿ ಬರಹಗಾರ/ಗಾರ್ತಿಯರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ, ಆ ಮೂಲಕ ಅವರನ್ನು ‘ಭಾರತದ ದನಿಗಳು’ ಎಂದು ಹೊರಜಗತ್ತಿನಲ್ಲಿ ಪ್ರತಿಷ್ಠಾಪಿಸುವ, ಅವುಗಳಿಗೆ ವಿರುದ್ಧವಾದ ದನಿಗಳು ಹೊರಜಗತ್ತಿಗೆ ಇನಿತೂ ತಲುಪದಂತೆ ತಡೆಯುವ ಪ್ರಯತ್ನಗಳು ಆರಂಭವಾದವು. ಅದು ಯಶಸ್ವಿಯಾಗುತ್ತಿದ್ದಂತೆಯೇ, ‘ವಿದೇಶಿಯರಿಂದ ಮಾನ್ಯತೆ ಪಡೆದ ಭಾರತದ ದನಿ’ಗಳನ್ನು ಭಾರತೀಯರೂ ಸ್ವೀಕರಿಸುವಂತೆ ಪ್ರೇರೇಪಿಸಲು, ಆ ಮೂಲಕ ಆ ದನಿಗಳನ್ನು ಬಿಜೆಪಿಯ ವಿರುದ್ಧದ ಕಹಳೆಗಳನ್ನಾಗಿ ಮೊಳಗಿಸಲು ವ್ಯವಸ್ಥಿತ ಕಾರಸ್ಥಾನಗಳ ಅಂಗವಾಗಿ ಇಂಗ್ಲಿಷ್ ವಾಹಿನಿಯೊಂದರ ಚಾಲನೆ, ನಿಯತಕಾಲಿಕವೊಂದರ ಪ್ರಕಟಣೆ ಆರಂಭವಾಯಿತು.

ಎರಡು ಪರಸ್ಪರ ವಿರೋಧಿ ಮೌಲ್ಯಗಳ ನೇರಸಂಘರ್ಷದ ಅನಾವರಣದಂತೆ ಒಂದು ಕಡೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿ ಕಾಕಗಳು ಸೃಷ್ಟಿಸಿದ್ದ ಮಿಥ್ಯೆಗಳನ್ನು ಒಂದೊಂದಾಗಿ ಒಡೆಯತೊಡಗಿದರೆ, ಅದಕ್ಕೆ ವಿರುದ್ಧವಾಗಿ ಬಿಜೆಪಿಯನ್ನು ಸಮಾಜಘಾತಕ ಶಕ್ತಿಯಂತೆ ಬಿಂಬಿಸಲು ಕಾಕಗಳು ಹೊಸಹೊಸ ಮಿಥ್ಯೆಗಳನ್ನು ನಿರಂತರವಾಗಿ ಸೃಷ್ಟಿಸಿ ಹರಡತೊಡಗಿದರು. ಇಂಗ್ಲಿಷ್ ಮುದ್ರಣ ಮಾಧ್ಯಮದ ಬಹುದೊಡ್ಡ ಪಾಲು ವಿದೇಶಿ ಎಡಪಂಥೀಯ ಬೌದ್ಧಿಕ ಹಾಗೂ ಧಾರ್ವಿುಕ ಸಂಸ್ಥೆಗಳ ಹಿಡಿತಕ್ಕೆ ಸಿಲುಕಿಹೋದಂತೇ ದೇಶದಲ್ಲಿನ ಘಟನೆಗಳ/ಬೆಳವಣಿಗೆಗಳ ಒಂದು ಮುಖ ಮಾತ್ರ ಜನತೆಗೆ ಪರಿಚಯಿಸಲ್ಪಡತೊಡಗಿತು. ಈ ಸಂಘರ್ಷದಲ್ಲಿ ವಿದೇಶಿ ಶಕ್ತಿಗಳು ದೇಶದ ಬದುಕಿನಲ್ಲಿ ಬಹಿರಂಗವಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ಪಕ್ಷವನ್ನೂ, ರಹಸ್ಯವಾಗಿ ಕಾರ್ಯನಿರ್ವಹಿಸಲು ನಕ್ಸಲರನ್ನೂ ಆಯ್ಕೆಮಾಡಿಕೊಂಡವು.

ಶೀತಲ ಸಮರದ ಕಾಲದಲ್ಲಿ ಎಡಪಂಥೀಯ ಹಿನ್ನೆಲೆ ಹೊಂದಿದ, ಶೀತಲ ಸಮರೋತ್ತರ ಕಾಲದಲ್ಲಿ ಕ್ರಿಶ್ಚಿಯನ್ ಹಿಡಿತಕ್ಕೆ ಸಿಲುಕಿಹೋದ, ಆರ್ಥಿಕ ಉದಾರೀಕರಣ ಕಾಲದಲ್ಲಿ ಬಿಲಿಯನ್​ಗಟ್ಟಲೆ ಭಾರತೀಯ ಹಣವನ್ನು ಗುಟ್ಟಾಗಿ ವಿದೇಶಿ ಬ್ಯಾಂಕ್​ಗಳಲ್ಲಿರಿಸಿ, ಬಂಡವಾಳದ ಕೊರತೆ ಅನುಭವಿಸುತ್ತಿದ್ದ ವಿದೇಶಿ ಸರ್ಕಾರಗಳಿಗೆ ಮತ್ತು ಸಂಸ್ಥೆಗಳಿಗೆ ಕೇವಲ ಶೇ. 2ರ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ದೊರೆಯಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಏಕಕಾಲದಲ್ಲಿ ವಿದೇಶಿ ಎಡಪಂಥೀಯರಿಗೂ, ಕ್ರಿಶ್ಚಿಯನ್ ಬಲಪಂಥೀಯರಿಗೂ, ಎಲ್ಲೆಡೆಯ ಬಂಡವಾಳಶಾಹಿಗಳಿಗೂ ಪ್ರಿಯವಾದದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ಇವರಿಗೆ ನಕ್ಸಲರು ಅಂದರೆ ಉಗ್ರ ಎಡಪಂಥೀಯ ಹಿಂಸಾವಾದಿಗಳು ಪ್ರಿಯವಾದದ್ದರ ಬಗ್ಗೆ ಸ್ವಲ್ಪ ವಿವರಣೆಯ ಅಗತ್ಯವಿದೆ.

ಶೀತಲ ಸಮರ ಕಾಲದಲ್ಲಿ ಪಶ್ಚಿಮದ ದೇಶಗಳಲ್ಲಿ ಎಡಪಂಥೀಯ ವಿಚಾರವಾದಿಗಳು/ಬರಹಗಾರರು ‘ಲಿಬರಲ್ಸ್’ ಎಂಬ ಹಣೆಪಟ್ಟಿ ಹಚ್ಚಿಕೊಂಡು ಕೆಜಿಬಿಗಾಗಿ ಲೇಖನಗಳನ್ನು ಬರೆದು ಮಾಧ್ಯಮದಲ್ಲಿ, ಗೋಷ್ಠಿಗಳಲ್ಲಿ ಪ್ರಚುರಪಡಿಸುವಲ್ಲಿ ಪರಿಣಿತರಾಗಿದ್ದರಷ್ಟೇ. ಲೇಖನಿ ಮತ್ತು ನಾಲಿಗೆಯನ್ನಷ್ಟೇ ಉಪಯೋಗಿಸುತ್ತಿದ್ದ ಇವರ ಚಟುವಟಿಕೆ ಹೆಚ್ಚೆಂದರೆ ‘ಬೌದ್ಧಿಕ ಭಯೋತ್ಪಾದನೆ’ಯಷ್ಟೇ. ಶೀತಲ ಸಮರೋತ್ತರ ಕಾಲದಲ್ಲಿ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಗಳ ವಿವಿಧೆಡೆ ಅಶಾಂತಿಯನ್ನುಂಟುಮಾಡುವ ಮೂಲಕ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹೆಣಗತೊಡಗಿದ ಪಶ್ಚಿಮದ ಸುದ್ದಿಬಾಕ ಮಾಧ್ಯಮಗಳು ಈ ಬೌದ್ಧಿಕ ಭಯೋತ್ಪಾದಕರ ನಿಷ್ಠೆಯನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳುವಲ್ಲಿ ಯಶಸ್ವಿಯಾದವೇನೋ ನಿಜ. ಅಲ್ಲಿಗೆ ಅವುಗಳ ಸುದ್ದಿಬಾಕತನ ತಣಿಯುವಂತಿರಲಿಲ್ಲ. ಹೀಗಾಗಿ ಅವು, ಬಂದೂಕು ಹಿಡಿದು ಆಂತರಿಕ ಅಶಾಂತಿ ಉಂಟುಮಾಡುವ ಮೂಲಕ 24ಗಿ7 ಸುದ್ದಿಗಳಿಗೆ ವಸ್ತುವಿಷಯಗಳ ಪೂರೈಕೆದಾರರನ್ನಾಗಿ ಜಗತ್ತಿನಾದ್ಯಂತ ಭಯೋತ್ಪಾದಕ ಹಾಗೂ ವಿಭಜನಾ ಸಂಘಟನೆಗಳನ್ನು ಆಯ್ಕೆಮಾಡಿಕೊಂಡವು. ಆಗ ಅವರಿಗೆ ಭಾರತದಲ್ಲಿ ಸಿಕ್ಕಿದ ರೆಡಿಮೇಡ್ ಸುದ್ದಿ ಪೂರೈಕೆದಾರರೇ ನಕ್ಸಲರು. ಹೀಗೆ ಪಶ್ಚಿಮದ ಮಾಧ್ಯಮಗಳಿಗೆ, ಅವುಗಳ ಭಾರತೀಯ ಅವತಾರಗಳಿಗೆ ಉಪಯುಕ್ತವೆನಿಸಿದ ನಕ್ಸಲರು ಆ ಮಾಧ್ಯಮಗಳ ಮೂಲಕವೇ ಪಶ್ಚಿಮದ ಎಡಪಂಥೀಯ ವಿಚಾರವಾದಿಗಳ ಅಂದರೆ ಬೌದ್ಧಿಕ ಭಯೋತ್ಪಾದಕರ ಸಂಪರ್ಕಕ್ಕೂ ಬಂದರು. ಒಂದುಕಾಲದಲ್ಲಿ ಪರಸ್ಪರರ ಬಗ್ಗೆ ತಿರಸ್ಕಾರ ತೋರುತ್ತಿದ್ದ ಎಡಪಂಥೀಯ ವಿಚಾರವಾದಿಗಳು ಮತ್ತು ಉಗ್ರ ಎಡಪಂಥೀಯ ಹಿಂಸಾವಾದಿಗಳು ಅಂದರೆ ನಕ್ಸಲರು ಹೀಗೆ ಒಬ್ಬರನ್ನೊಬ್ಬರು ಒಪ್ಪಿಕೊಂಡರು. ಅಷ್ಟೇ ಅಲ್ಲ, ಇತರ ದೇಶಗಳಲ್ಲಿನ ಭಯೋತ್ಪಾದಕ ಹಾಗೂ ವಿಭಜನವಾದಿ ಸಂಘಟನೆಗಳ ಜತೆಗೂ ಸಂಪರ್ಕ ಸ್ಥಾಪಿಸಿಕೊಳ್ಳಲು ನಕ್ಸಲರಿಗೆ ಪ್ರೋತ್ಸಾಹ, ಸಹಕಾರ ದೊರೆಯಿತು. ಭಾರತದ ನಕ್ಸಲರು, ಶ್ರೀಲಂಕಾದ ಎಲ್​ಟಿಟಿಇ, ಕಾಶ್ಮೀರದ ಭಯೋತ್ಪಾದಕರು, ಪ್ಯಾಲೆಸ್ತೈನ್​ನ ಹಮಸ್, ಯುರೋಪಿನ ಶಸ್ತ್ರಾಸ್ತ್ರ ಮಾಫಿಯಾ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಅಮೆರಿಕದ ಡ್ರಗ್ ಮಾಫಿಯಾಗಳ ನಡುವೆ ಸಹಕಾರವೇರ್ಪಟ್ಟದ್ದು ಹೀಗೆ. ನಕ್ಸಲರು ಮತ್ತು ಅವರಂಥವರೇ ಜಾಗತಿಕ ಉಗ್ರ ಎಡಪಂಥೀಯ ಹಿಂಸಾವಾದಿಗಳ ನಡುವೆ ಈಗ ಎಂತಹ ಮಟ್ಟದ ಸಹಕಾರ ಏರ್ಪಟ್ಟಿದೆಯೆಂದರೆ ಮತ್ತು ಅವರ ಹಣಕಾಸಿನ ಸ್ಥಿತಿ ಅದೆಷ್ಟು ಉತ್ತಮಗೊಂಡಿದೆಯೆಂದರೆ ಇವರ ಬಹಿರಂಗ ಅಂತಾರಾಷ್ಟ್ರೀಯ ಸಮ್ಮೇಳನಗಳು, ರಹಸ್ಯ ಸಮಾಲೋಚನೆಗಳು ಜರುಗುವುದು ಹ್ಯಾಂಬರ್ಗ್, ಪ್ಯಾರಿಸ್, ಜಿನಿವಾ, ಸ್ಟಾಕ್​ಹೋಮ್ಂತಹ ಪಶ್ಚಿಮ ಯುರೋಪಿಯನ್ ನಗರಗಳಲ್ಲಿ.

ಹೀಗೆ ರೂಪಾಂತರಗೊಂಡ ನಕ್ಸಲ್ ಮುಖ, 2014ರಲ್ಲಿ ಅದಕ್ಕೆ ಬಿದ್ದ ಹಠಾತ್ ಕಡಿವಾಣ, ಹತಾಶೆಗೊಂಡ ನಕ್ಸಲರು 2025ರ ಹೊತ್ತಿಗೆ ಇಡೀ ದೇಶದಲ್ಲಿ ಸಶಸ್ತ್ರ ಕ್ರಾಂತಿಯನ್ನೆಸಗಲು ರೂಪಿಸಿದ ಭಯಾನಕ ಮಾಸ್ಟರ್ ಪ್ಲಾನ್, ಇದರಲ್ಲಿ ‘ಅರ್ಬನ್ ನಕ್ಸಲ್’ಗಳ ಪಾತ್ರ ಇವೆಲ್ಲದರ ವಿವರ ಮುಂದಿನವಾರ, ಲೇಖನದ ಮೂರನೆಯ ಹಾಗೂ ಅಂತಿಮ ಕಂತಿನಲ್ಲಿ.

Leave a Reply

Your email address will not be published. Required fields are marked *

Back To Top