More

    ಜಗದೀಶ ಶೆಟ್ಟರ್ – ಲಕ್ಷ್ಮಣ ಸವದಿ ಬಗ್ಗೆ ಗೊತ್ತಿಲ್ಲ, ನಾ ಪಕ್ಷ ಬಿಡಲ್ಲ

    ವಿಜಯಪುರ: ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಯಾವ ಕಾರಣಕ್ಕಾಗಿ ಪಕ್ಷ ತೊರೆದರೋ ಗೊತ್ತಿಲ್ಲ. ಆದರೆ, ನನ್ನ ಮನಸ್ಸು ಮಾತ್ರ ಬಿಜೆಪಿ ತೊರೆಯಲು ಒಪ್ಪಲಿಲ್ಲ. ಹೀಗಾಗಿ ಟಿಕೆಟ್ ಸಿಗದಿದ್ದರೂ ಪಕ್ಷದಲ್ಲಿಯೇ ಇದ್ದುಕೊಂಡು ಮತ್ತೊಮ್ಮೆ ನಿಷ್ಠೆ ಪ್ರದರ್ಶಿಸುವುದಾಗಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡದಿದ್ದರೂ ಅನ್ಯರಂತೆ ಬೇರೊಂದು ಪಕ್ಷಕ್ಕೆ ಸೇರ್ಪಡೆಯಾಗಿ ತತ್ವ, ಸಿದ್ಧಾಂತ ಗಾಳಿಗೆ ತೂರಿ, ಪಕ್ಷದ ಅಭ್ಯರ್ಥಿಯನ್ನು ಸೋಲಿಸುವ ಜಾಯಮಾನ ನನ್ನದಲ್ಲ. ಆದರೆ, ನಗರ ಕ್ಷೇತ್ರದಿಂದ ಈವರೆಗೂ ಯಾರೊಬ್ಬರೂ ನನಗೆ ಪ್ರಚಾರಕ್ಕೆ ಕರೆದಿಲ್ಲ. ನನ್ನ ಅವಶ್ಯಕತೆ ಈ ಕ್ಷೇತ್ರಕ್ಕಿಲ್ಲ ಎಂದು ಭಾವಿಸಿದ್ದೇನೆ. ಹೀಗಾಗಿ ಈ ಚುನಾವಣೆಯಲ್ಲಿ ನಗರ ಕ್ಷೇತ್ರ ಬಿಟ್ಟು ಎಲ್ಲ ಕಡೆ ಪ್ರಚಾರ ಮಾಡುವುದಾಗಿ ತಿಳಿಸಿದರು.

    ನಗರ ಕ್ಷೇತ್ರದಿಂದ ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಆದರೆ, ಈ ಬಾರಿಯೂ ಪಕ್ಷ ನನ್ನ ನಿಷ್ಠೆ ಗುರುತಿಸಲಿಲ್ಲ. ಹೀಗಾಗಿ ಸಹಜವಾಗಿಯೇ ಬೇಸರವಾಗಿದ್ದರಿಂದ ಬೆಂಬಲಿಗರು, ಅಭಿಮಾನಿಗಳು ಬೇರೊಂದು ಪಕ್ಷ ಅಥವಾ ಪಕ್ಷೇತರವಾಗಿ ನಾಮಪತ್ರ ಸಲ್ಲಿಸುವಂತೆ ಒತ್ತಾಯಿಸಿದರು. ಆದರೆ ಬಿಜೆಪಿ ನನಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಹೀಗಾಗಿ ಪಕ್ಷದಲ್ಲಿಯೇ ಉಳಿಯುವ ತೀರ್ಮಾನ ಕೈಗೊಂಡಿದ್ದೇನೆ. ಪ್ರಸಕ್ತ ಚುನಾವಣೆಯಲ್ಲಿ ನನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರು ತಮಗೆ ಬೇಕಾದ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು. ಈ ವಿಷಯದಲ್ಲಿ ಯಾವುದೇ ನಿರ್ಧಾರ ಅವರ ಮೇಲೆ ಹೇರಲು ಬಯಸಲ್ಲ ಎಂದರು.

    ಜಾತಿ ರಾಜಕಾರಣ, ಒಳಪಂಗಡ ಯಾವುದೂ ನಮಗೆ ಗೊತ್ತಿಲ್ಲ. ರಾಷ್ಟ್ರವೇ ನಮಗೆಲ್ಲ ಮುಖ್ಯ. ಹೀಗಾಗಿ ರಾಷ್ಟ್ರಕ್ಕಾಗಿ ಶ್ರಮಿಸುವ ಬಿಜೆಪಿ ಜತೆಯಿರಲು ಬಯಸುವೆ. ಬಿಜೆಪಿ ಬಗೆಗಿನ ಬಣಜಿಗ ಸಮುದಾಯದ ಆಕ್ರೋಶ ಸಹಜ. ತಮ್ಮ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ ಎಂಬ ನೋವು ಇರಬಹುದು. ಚುನಾವಣೆಯಲ್ಲಿ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು. ಆ ಬಗ್ಗೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts