ಭಿನ್ನಮತೀಯರಿಂದ ಸರ್ಕಾರ ಪತನವಾದರೆ ನಾವು ಕಾರಣರಲ್ಲ: ಜಗದೀಶ್ ಶೆಟ್ಟರ್

ಕೊಪ್ಪಳ: ನಾವು ಆಪರೇಷನ್ ಕಮಲ ಮಾಡುತ್ತಿಲ್ಲ. ಭಿನ್ನಮತೀಯರಿಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾದರೆ ಅದಕ್ಕೆ ನಾವು ಕಾರಣರಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಬಿಎಸ್‌ವೈ ಆಡಿಯೋ ಬಿಡುಗಡೆ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಮುಖ್ಯ ಪಾತ್ರಧಾರಿ. ಶರಣಗೌಡರಿಗೆ ಮುಖ್ಯಮಂತ್ರಿಯೇ ರೆಕಾರ್ಡ್ ಮಾಡಲು ಹೇಳಿದ್ದು ಅಕ್ಷಮ್ಯ ಅಪರಾಧ. ಅಲ್ಲದೆ, ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆ ಕೇಳಿರುವುದೂ ಕದ್ದಾಲಿಕೆ ಅಪರಾಧ. ರೆಕಾರ್ಡ್ ಮಾಡಿ ಬಿಡುಗಡೆ ಮಾಡಿರುವುದು ಮತ್ತೊಂದು ಅಪರಾಧ. ಇಂತಹ ಪ್ರಕರಣದಲ್ಲಿ ಮಾಜಿ ಸಿಎಂ ರಾಮಕೃಷ್ಣ ಹೆಗ್ಡೆ ರಾಜೀನಾಮೆ ನೀಡಬೇಕಾಯಿತು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸ್ಪೀಕರ್‌ರನ್ನು ಬೀದಿಗೆ ತಂದು ನಿಲ್ಲಿಸಿದ್ದು ಎಚ್.ಡಿ.ಕುಮಾರಸ್ವಾಮಿ. ಅಧಿವೇಶನದ ಸಮಯದಲ್ಲಿ ಬಜೆಟ್ ಬಳಿಕ ಅವರ ಹೆಸರು ಪ್ರಸ್ತಾಪವಾಗಿರುವುದನ್ನು ಹೇಳಬಹುದಿತ್ತು. ಆಡಿಯೋ ಬಿಡುಗಡೆ ವಿಚಾರದಲ್ಲಿ ಮುಖ್ಯಮಂತ್ರಿಯೇ ನಂಬರ್ 1 ಆರೋಪಿಯಾಗಿದ್ದಾರೆ. ತನಿಖೆಗೆ ನಾವು ಬೇಡ ಎಂದಿಲ್ಲ. ಎಸ್‌ಐಟಿ ಮೂಲಕ ತನಿಖೆ ವಿಳಂಬವಾಗುತ್ತದೆ, ಈ ಹಿನ್ನೆಲೆಯಲ್ಲಿ ಸದನ ಸಮಿತಿ ಮೂಲಕ ತನಿಖೆ ಮಾಡಲು ಒತ್ತಾಯಿಸಿದ್ದೇವೆ. ರಾಜಕೀಯ ದ್ವೇಷ ಸಾಧನೆಗಾಗಿ ಎಸ್‌ಐಟಿ ತನಿಖೆಗೆ ವಹಿಸಲು ಹೊರಟಿದ್ದಾರೆ. ಇದರಿಂದ ಸಿಎಂ ಹಾಗೂ ಸಿದ್ದರಾಮಯ್ಯರ ದ್ವಂದ್ವ ನೀತಿ ಸ್ಪಷ್ಟವಾಗಿದೆ. ಈ ಹಿಂದೆ ಕುಮಾರಸ್ವಾಮಿಯವರು ವಿಜುಗೌಡ, ಸುಭಾಷ್ ಗುತ್ತೇದಾರಗೆ ಹಣ ಕೇಳಿದ್ದರು ಎಂದರು.