ಜಗದೀಶ್ ಉಡುಪಿ ಹೊಸ ಜಿಲ್ಲಾಧಿಕಾರಿ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ವರ್ಗಾವಣೆಗೊಂಡಿದ್ದು, ಕೋಲಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ಅವರನ್ನು ನೂತನ ಜಿಲ್ಲಾಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಸೋಮವಾರ ಆದೇಶ ಹೊರಡಿಸಿದೆ.

ಶಿವಮೊಗ್ಗ ಜಿಲ್ಲೆ ಸೊರಬ ನಿವಾಸಿಯಾಗಿರುವ ಜಿ.ಜಗದೀಶ್ 13 ವರ್ಷ ಸೇವಾನುಭವ ಹೊಂದಿದ್ದಾರೆ. ಕೆಎಎಸ್ ಅಧಿಕಾರಿಯಾಗಿದ್ದು, 2012ರಲ್ಲಿ ಐಎಎಸ್ ಬಡ್ತಿ ಪಡೆದವರು. ಉಡುಪಿ ಜಿಲ್ಲೆಯಲ್ಲಿ 2006-07ರಲ್ಲಿ ಪ್ರೊಬೆಷನರಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಸವಣೂರು, ಶಿರಸಿಯಲ್ಲಿ ಉಪವಿಭಾಗಾಧಿಕಾರಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಆಯುಕ್ತರಾಗಿ, ಹಾವೇರಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ಸಿಟಿ ಕಾರ್ಪೊರೇಶನ್ ಕಮಿಷನರ್, ಹಾಸನ ಜಿ.ಪಂ ಸಿಇಒ, ಕೋಲಾರ ಜಿ.ಪಂ ಸಿಇಒ ಆಗಿದ್ದರು.

ಗಮನ ಸೆಳೆದಿದ್ದ ಕೊರ್ಲಪಾಟಿ: ಉಡುಪಿ ಜಿಲ್ಲಾಧಿಕಾರಿಯಾಗಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಇದೇ ವರ್ಷದ ಫೆ.7ರಂದು ಅಧಿಕಾರ ಸ್ವೀಕರಿಸಿದ್ದರು. ತಮ್ಮ ಅಲ್ಪ ಅಧಿಕಾರದ ಅವಧಿಯಲ್ಲಿ ಮಾದರಿ ಕಾರ್ಯಗಳ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದರು. ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಅಧಿಕಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದರು.

ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನದಲ್ಲಿ ಐಎಎಸ್ ಅಧಿಕಾರಿಯ ಜತೆಗೆ ಸರಳ ವಿವಾಹವಾಗಿದ್ದರು. ಸಮೂಹ ಸಾರಿಗೆ ಪರಿಕಲ್ಪನೆಯಲ್ಲಿ ಸರ್ಕಾರಿ, ಖಾಸಗಿ ವಾಹನ ಬಳಸದೆ ವಾರಕ್ಕೊಮ್ಮೆ ಬಸ್ಸಿನಲ್ಲಿ ಸಂಚರಿಸಿ ಸಿಬ್ಬಂದಿಗೂ ಪ್ರೇರಣೆಯಾಗಿದ್ದರು. ರಸ್ತೆ ಸುರಕ್ಷತಾ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿದ್ದರು. ಮಳೆಗಾಲದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಮಧ್ಯರಾತ್ರಿಯೂ ಭೇಟಿ ನೀಡಿ ಸಂತ್ರಸ್ತರ ಬಗ್ಗೆ ನಿಗಾ ವಹಿಸುತ್ತಿದ್ದರು. ಸದ್ಯ ವರ್ಗಾವಣೆ ಆದೇಶದಲ್ಲಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಯಾವ ಸ್ಥಾನ ಎಂಬುದನ್ನು ತಿಳಿಸಿಲ್ಲ.

Leave a Reply

Your email address will not be published. Required fields are marked *