More

    ಇಬ್ಬರು ನೂಪುರ್ ಶರ್ಮಾರ ಸಂಕಷ್ಟದ ಮರ್ಮ…

    ಇಬ್ಬರು ನೂಪುರ್ ಶರ್ಮಾರ ಸಂಕಷ್ಟದ ಮರ್ಮ...ನೂಪುರ ಅಂದರೆ ಕಾಲಂದಿಗೆ, ಕಾಲ್ಗೆಜ್ಜೆ. ಇವು ಕಾಣಸಿಗುವುದು ಜೋಡಿಯಾಗಿಯೇ. ರಾಷ್ಟ್ರದ ಇಂದಿನ ಸ್ಥಿತಿಗೆ ರೂಪಕವಾಗಿ ನಮಗೆ ಕಾಣುತ್ತಿರುವುದೂ ಜೋಡಿ ನೂಪುರಗಳೇ. ಒಬ್ಬರು ರಾಜಕಾರಣಿ ನೂಪುರ್, ಇನ್ನೊಬ್ಬರು ಪತ್ರಕರ್ತೆ ನೂಪುರ್. ಮೊದಲಿಗೆ, ರಾಜಕಾರಣಿ ನೂಪುರ್ ಶರ್ಮಾರ ವಿಷಯವನ್ನೇ ಎತ್ತಿಕೊಳ್ಳೋಣ. ಅವರ ಬಗೆಗಿನ ಪ್ರಸ್ತಾಪವನ್ನು ಇದೇ ಜುಲೈ 1ರಂದು ಸವೋಚ್ಚ ನ್ಯಾಯಾಲಯದ ಖಂಡಪೀಠವೊಂದರಲ್ಲಿ ಕೇಳಿಬಂದ ಮಾತುಗಳಿಂದಲೇ ಆರಂಭಿಸುವುದು ಸೂಕ್ತ.

    ಆಂಗ್ಲ ಸುದ್ದಿವಾಹಿನಿಯ ಚರ್ಚೆಯೊಂದರಲ್ಲಿ ತಾವಾಡಿದ ಮಾತೊಂದರಿಂದಾಗಿ ತಮ್ಮ ವಿರುದ್ಧ ಒಂದಕ್ಕಿಂತ ಹೆಚ್ಚು ಕಡೆ ಎಫ್​ಐಆರ್​ಗಳು ದಾಖಲಾಗಿರುವುದಾಗಿಯೂ, ಜೀವ ಬೆದರಿಕೆ ಇರುವುದರಿಂದ ಎಲ್ಲೆಡೆ ತಾವು ಪ್ರಯಾಣಿಸುವುದು ಅಪಾಯಕರವೆಂದೂ, ಆ ಕಾರಣದಿಂದ ತಮ್ಮ ವಿರುದ್ಧದ ಕಾನೂನುಕ್ರಮವನ್ನು ತಾವಿರುವ ದೆಹಲಿಯಲ್ಲೇ ಜರುಗಿಸಲು ಅವಕಾಶವಾಗುವಂತೆ ಎಲ್ಲ ಎಫ್​ಐಆರ್​ಗಳನ್ನೂ ಒಟ್ಟುಗೂಡಿಸಬೇಕೆಂದು ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಸವೋಚ್ಚ ನ್ಯಾಯಾಲಯದಲ್ಲಿ ಯಾಚಿಕೆ ಸಲ್ಲಿಸಿದ್ದರಷ್ಟೇ. ಇಂತಹ ಯಾಚಿಕೆಗಳು ಹೊಸವೇನಲ್ಲ ಮತ್ತು ಅವುಗಳ ಬಗ್ಗೆ ನ್ಯಾಯಾಲಯ ಸಕಾರಾತ್ಮಕ ತೀರ್ಮಾನ ತೆಗೆದುಕೊಂಡ ಉದಾಹರಣೆಗಳೂ ಇವೆ. ಆದರೆ ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಜೆ.ಬಿ. ಪರ್ದೀವಾಲಾರ ಖಂಡಪೀಠ ಯಾಚಿಕೆಯನ್ನು ತಿರಸ್ಕರಿಸಿ ತೀರ್ಪು ನೀಡಿತು. ಸಂವಿಧಾನ ತಮಗೆ ನೀಡಿರುವ ಹಕ್ಕುಗಳನ್ನು ಅನುಭವಿಸಲು ಈ ತೀರ್ಪು ಅವಕಾಶ ನೀಡುವುದಿಲ್ಲ ಎಂದು ಪ್ರತಿಪಾದಿಸಿ, ತೀರ್ಪನ್ನು ಪುನರ್ವಿಮಶಿಸಬೇಕೆಂದು ಮತ್ತೆ ನ್ಯಾಯಾಲಯದ ಮೊರೆಹೋಗುವ ಅವಕಾಶ ಯಾಚಿಕೆದಾರರಿಗಿ ರುತ್ತದೆ. ಆದರೆ ನ್ಯಾಯಾಲಯದ ಯಾವುದೇ ತೀರ್ಪನ್ನು ಟೀಕಿಸುವ ಹಕ್ಕು ಯಾಚಿಕೆದಾರರಿಗೂ ಇಲ್ಲ, ಇತರರಿಗೂ ಇಲ್ಲ. ನ್ಯಾಯಾಲಯದ ತೀರ್ಪಗಳು ಟೀಕಾತೀತ. ಇದು ನಿಯಮ. ಇದನ್ನು ಪಾಲಿಸಬೇಕಾದ್ದು ಭಾರತೀಯ ನಾಗರಿಕರೆಲ್ಲರ ಕರ್ತವ್ಯ. ನಿಯಮವನ್ನು ಉಲ್ಲಂಘಿಸಿದರೆ ಅದು ನ್ಯಾಯಾಲಯ ನಿಂದನೆಯಾಗುತ್ತದೆ ಮತ್ತು ಶಿಕ್ಷಾರ್ಹವಾಗಿರುತ್ತದೆ.

    ಆದರೆ ಯಾಚಿಕೆಯ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶರು ಆಡುವ, ಆದರೆ ತೀರ್ಪಿನಲ್ಲಿ ದಾಖಲಾಗದ ಮಾತುಗಳ ಬಗ್ಗೆ ರ್ಚಚಿಸಲು, ಟೀಕೆಟಿಪ್ಪಣಿ ಮಾಡಲು ನಾಗರಿಕರಿಗೆ ಅವಕಾಶವಿರುತ್ತದೆ. ಇದು ನ್ಯಾಯಾಲಯ ನಿಂದನೆಯಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜಸ್ಟಿಸ್ ಸೂರ್ಯಕಾಂತ್ ಆಡಿದ, ನ್ಯಾಯಿಕ ಪರಿಭಾಷೆಯಲ್ಲಿ Obiter Dictum ಎಂದು ಕರೆಯಲಾಗುವ ಮಾತುಗಳು ವಿಶ್ಲೇಷಣಯೋಗ್ಯ ವಾಗುತ್ತವೆ. ದೇಶದಲ್ಲಿ ಇಂದಿರುವ ವಿಷಮಸ್ಥಿತಿಗೆ ನೂಪುರ್ ಶರ್ವರನ್ನು ಏಕೈಕ ಕಾರಣವೆಂದು ‘ಆಪಾದಿಸಿದ’ ನ್ಯಾಯಾಧೀಶರು ಉದಯಪುರದಲ್ಲಾದ ಭೀಭತ್ಸ ಘಟನೆಗೂ ನೂಪುರ್​ರೇ ಕಾರಣವಾಗಿದ್ದಾರೆಂದೂ ಅಭಿಪ್ರಾಯಪಟ್ಟರು. ಯಾಚಿಕೆದಾರರ ಜೀವಕ್ಕೆ ಅಪಾಯವಿದೆ ಎನ್ನುವುದನ್ನು ಒಪ್ಪದ ನ್ಯಾಯಾಧೀಶರು, ಯಾಚಿಕೆದಾರರೇ ರಾಷ್ಟ್ರದ ಸುರಕ್ಷೆಗೆ ಅಪಾಯವಾಗಿದ್ದಾರಲ್ಲವೇ ಎಂದೂ ಪ್ರಶ್ನಿಸಿದರು. ನಾವು ಪ್ರಶ್ನಿಸಬೇಕಾದ್ದು ಇದನ್ನೇ. ನಮ್ಮ ಪ್ರಶ್ನೆಗಳು ಅರ್ಥವಾಗಬೇಕಾದರೆ ಇಡೀ ಪ್ರಕರಣವನ್ನು ಆರಂಭದಿಂದಲೂ ಪರಿಶೀಲಿಸಬೇಕು.

    ಎಲ್ಲ ಆರಂಭವಾದದ್ದು ಮೇ 26ರಂದು. ಅಂದು ಆಂಗ್ಲ ಸುದ್ದಿವಾಹಿನಿಯಲ್ಲಿ ಜ್ಞಾನವಾಪಿ ಮಸೀದಿ ಮತ್ತದರಲ್ಲಿ ಪತ್ತೆಯಾದ ಶಿವಲಿಂಗದ ಆಕಾರದ ಶಿಲಾಕೃತಿಯ ಕುರಿತಾಗಿ ನಡೆಯುತ್ತಿದ್ದ ಚರ್ಚೆಯಲ್ಲಿ ಇತರ ಕೆಲವರೊಂದಿಗೆ ನೂಪುರ್ ಶರ್ಮಾ ಭಾಗವಹಿಸುತ್ತಿದ್ದರು. ಚರ್ಚೆಯ ಒಂದು ಹಂತದಲ್ಲಿ ತಸ್ಲೀಂ ರೆಹಮಾನಿ ಅವರು ಶಿವಲಿಂಗದ ಆರಾಧನೆಯ ಹಿಂದೂ ಧಾರ್ವಿುಕ ನಂಬಿಕೆಯನ್ನು ಲೇವಡಿ ಮಾಡಿದರು. ಇದರಿಂದ ಪ್ರಚೋದನೆಗೊಂಡ ನೂಪುರ್ ಶರ್ವ, ‘ನಿಮ್ಮ ನಂಬಿಕೆಗಳ ಬಗ್ಗೆ ನಾವೂ ಮಾತಾಡಬಹುದು’ ಎಂದು ಹೇಳುತ್ತಾ ಇಸ್ಲಾಮಿಕ್ ಧಾರ್ವಿುಕ ಗ್ರಂಥಗಳಲ್ಲಿರುವ ಮೂರು ಅಂಶಗಳನ್ನು ಪ್ರಸ್ತಾಪಿಸಿದರು. ನಿಷ್ಪಕ್ಷಪಾತವಾಗಿ ನೋಡಿದಾಗ ತಸ್ಲೀಂ ರೆಹಮಾನಿ ಮತ್ತು ನೂಪುರ್ ಶರ್ಮಾ ಇಬ್ಬರೂ ಮಾಡಿದ್ದು ತಪ್ಪು ಎಂದು ಗೊತ್ತಾಗುತ್ತದೆ.

    ಭಾರತವಲ್ಲದೇ ಆಗ್ನೇಯ ಏಶಿಯಾದ ಉದ್ದಗಲಕ್ಕೂ ಶಿವಲಿಂಗದ ಆರಾಧನೆ ಅನಾದಿಕಾಲದಿಂದಲೂ ಇತ್ತು ಎಂಬ ಕುರುಹುಗಳು ಅಗಾಧವಾಗಿಯೇ ಕಾಣಸಿಗುತ್ತವೆ. ಈ ನಾಡಿನ ಪುರಾಣಗಳ ಬಗ್ಗೆ ಹೇಳುವುದಾದರೆ ಶ್ರೀರಾಮ ಲಂಕೆಗೆ ಹೊರಡುವ ಮೊದಲು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಆರಾಧಿಸಿದ್ದರ ಪ್ರಸ್ತಾಪ ರಾಮಾಯಣದಲ್ಲಿ ದೊರೆಯುತ್ತದೆ. ಒಟ್ಟಿನಲ್ಲಿ, ಶಿವಲಿಂಗ ಹಿಂದೂಗಳಿಗೆ ಪವಿತ್ರ, ಪೂಜಾರ್ಹ. ಹಿಂದೂಗಳು ಶಿವಲಿಂಗವನ್ನು ಪೂಜಿಸುವುದಷ್ಟೇ ಅಲ್ಲ, ಅದನ್ನು ತಮ್ಮ ಹೆಸರಾಗಿಯೂ ಸ್ವೀಕರಿಸುತ್ತಾರೆ. ಶಿವನದಷ್ಟೇ ಅಲ್ಲ, ಅವನ ವಾಹನವಾದ ನಂದಿ ಅಂದರೆ ಬಸವನನ್ನೂ ತಮ್ಮ ಹೆಸರಾಗಿಸಿಕೊಳ್ಳುತ್ತಾರೆ. ಶಿವಲಿಂಗ ಪವಿತ್ರ ಎನ್ನುವುದನ್ನು ಪುರಾಣಕಾಲದ ಶ್ರೀರಾಮ, ಐತಿಹಾಸಿಕ ಕಾಲದ ಜಗಜ್ಯೋತಿ ಬಸವೇಶ್ವರ ಮತ್ತು ಈ ಕಾಲದ ಸದ್ಗುರು ಸೇರಿದಂತೆ ಸಹಸ್ರಾರು ಮಹಾತ್ಮರು ಹೇಳಿದ್ದಾರೆ, ಆರಾಧಿಸಿದ್ದಾರೆ. ಅದನ್ನೇ ಕೋಟ್ಯಂತರ ಹಿಂದೂಗಳು ಒಪ್ಪಿ ಪಾಲಿಸುತ್ತಾ ಬಂದಿದ್ದಾರೆ. ಹೀಗೆ ಹಿಂದೂಗಳಿಗೆ ಪವಿತ್ರವಾದ ಶಿವಲಿಂಗವನ್ನು ಲೇವಡಿ ಮಾಡಿದ್ದು, ಆ ಮೂಲಕ ಹಿಂದೂಗಳ ಧಾರ್ವಿುಕತೆಯನ್ನೇ ಹೀಯಾಳಿಸಿದ್ದು ತಸ್ಲೀಂ ರೆಹಮಾನಿಯವರು ಎಸಗಿದ ತಪ್ಪು. ನಿಜವಾದ ಆಸ್ತಿಕ ತನ್ನದಷ್ಟೇ ಅಲ್ಲ ಇತರರ ಧಾರ್ವಿುಕತೆಯನ್ನೂ ಗೌರವಿಸುತ್ತಾನೆ, ತನ್ನ ತಾಯಿಗೆ ನೀಡುವಷ್ಟೇ ಗೌರವವನ್ನೇ ಇತರರ ತಾಯಿಗೂ ನೀಡುತ್ತಾನೆ.

    ಇಂತಹ ಉದಾತ್ತತೆಯನ್ನು ರೆಹಮಾನಿ ಸಾರ್ವಜನಿಕ ವೇದಿಕೆಯಲ್ಲಾದರೂ ಪ್ರದರ್ಶಿಸದೇ ಹೋದಾಗ ಹಿಂದೂ ಆಗಿ ನೂಪುರ್ ಶರ್ಮಾ ಆಕ್ರೋಶಗೊಂಡದ್ದು ಸಹಜವೇ. ಅವರು ಉಲ್ಲೇಖಿಸಿದ ವಿಷಯಗಳು ಸತ್ಯವೇ ಆಗಿದ್ದರೂ, ಅವುಗಳು ಧರ್ಮಗ್ರಂಥಗಳಲ್ಲೇ ಉಲ್ಲೇಖಗೊಂಡಿದ್ದರೂ ಅವುಗಳನ್ನು ಸಂಯಮಯುಕ್ತ ವಿಧಾನದಲ್ಲಿ ವ್ಯಕ್ತಪಡಿಸುವುದು ಅವರ ಜವಾಬ್ದಾರಿಯಾಗಿತ್ತು. ರೆಹಮಾನಿಯವರಂತೇ ಲೇವಡಿಯ ಭಾವ ಮತ್ತು ಅನುಚಿತ ಪದಪ್ರಯೋಗವೊಂದರ ಮೊರೆಹೋಗಿ ಅವರೂ ತಪ್ಪೆಸಗಿದರು. ಅವರ ತಪ್ಪಿಗೆ ಇನ್ನೊಂದು ಆಯಾಮವೂ ಇದೆ. ಇಂದಿನ ನೀತಿನಿಯಮಗಳ ಆಧಾರದ ಮೇಲೆ ಹಿಂದೆ ನಡೆದುಹೋಗಿರುವುದನ್ನು ನಾವು ವಿಶ್ಲೇಷಿಸುವುದು ಸರಿಯಾಗದು. ಇಂದು ಬಾಲ್ಯವಿವಾಹ, ಬಾಲಿಕೆಯೊಂದಿಗೆ ಲೈಂಗಿಕ ಸಂಪರ್ಕ ಅನೈತಿಕ, ಕಾನೂನುಬಾಹಿರ ಆಗಿರಬಹುದು. ಹಿಂದೆ ಹಾಗೇನೂ ಇರಲಿಲ್ಲ. ಆಧುನಿಕವೆನಿಸುವ ಅಮೆರಿಕಾದಲ್ಲೇ ಹತ್ತೊಂಬತ್ತನೇ ಶತಮಾನದಲ್ಲೂ ಸಹ ಲೈಂಗಿಕ ಸಂಪರ್ಕಕ್ಕಾಗಿ ಸ್ತ್ರೀಗೆ ಇದ್ದ ಕನಿಷ್ಠ ವಯೋಮಿತಿ ಕೇವಲ ಹತ್ತು! ಹೀಗಿರುವಾಗ ಸಾವಿರ ವರ್ಷಗಳಿಗೂ ಹಿಂದಿನ ಅರಬ್ ಮರಳುಗಾಡಿನಲ್ಲಿ ಸ್ಥಿತಿ ಹೇಗಿದ್ದಿರಬಹುದು? ಐತಿಹಾಸಿಕ ವ್ಯಕ್ತಿಗಳ, ಘಟನೆಗಳ ಬಗ್ಗೆ ಮಾತಾಡುವಾಗ ನಾವು ಇದೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಅಷ್ಟೇಕೆ, ತೀರಾ ಇತ್ತೀಚಿನವರೆಗೂ ಬಾಲ್ಯವಿವಾಹ ಹಿಂದೂಗಳಲ್ಲೇ ವ್ಯಾಪಕವಾಗಿತ್ತು ಮತ್ತು ಉಷ್ಣವಲಯದಲ್ಲಿ ಹೆಣ್ಣುಮಕ್ಕಳು ಕಡಿಮೆ ವಯಸ್ಸಿನಲ್ಲೇ ಋತುಮತಿಯಾಗುವುದರಿಂದ ಅವರೊಂದಿಗೆ ವೈವಾಹಿಕ ಲೈಂಗಿಕ ಸಂಪರ್ಕವೂ ಸಾಧುವೇ ಆಗಿತ್ತು. ಪ್ರಾಚೀನ ಅರೇಬಿಯಾದಲ್ಲಿ, ಆಧುನಿಕ ಅಮೆರಿಕಾದಲ್ಲಿ, ಇತ್ತೀಚಿನವರೆಗೂ ಭಾರತದಲ್ಲಿ ಪ್ರಚಲಿತವಿದ್ದ ಈ ನಡವಳಿಕೆ ವಿಜ್ಞಾನಕ್ಕೆ ವಿರೋಧ, ನಿಜ. ಆದರೆ ಎಳೆಯ ಬಾಲೆಯ ದೇಹ ಲೈಂಗಿಕ ಸಂಪರ್ಕದ ಪರಿಣಾಮವಾದ ಗರ್ಭ, ಪ್ರಸವ ಮತ್ತು ಶಿಶುಪೋಷಣೆಗೆ ತಕ್ಕುದಾಗಿರುವುದಿಲ್ಲ ಎಂಬ ವೈಜ್ಞಾನಿಕ ಅರಿವು ನಮಗೆ ಸಾರ್ವತ್ರಿಕವಾಗಿ, ಅಧಿಕೃತವಾಗಿ ದೊರೆತದ್ದೇ ಇತ್ತೀಚೆಗೆ.

    ಹೀಗಾಗಿ ಆ ಚರ್ಚೆಯಲ್ಲಿ ಮೊದಲು ತಸ್ಲೀಂ ರೆಹಮಾನಿ ಮತ್ತು ನಂತರ ನೂಪರ್ ಶರ್ಮಾ ಇಬ್ಬರೂ ತಪ್ಪೆಸಗಿದರು. ಸರಿ, ತಪ್ಪುಗಳ ಸರಣಿ ಅಲ್ಲಿಗೆ ನಿಂತಿತೇ? ಇಲ್ಲವೆನ್ನುವುದೇ ದುರಂತ. ಆಲ್ಟ್​ನ್ಯೂಸ್ ವೆಬ್​ಸೈಟ್​ನ ಸಹಸ್ಥಾಪಕ ಮಹಮದ್ ಝುುಬೇರ್ ವಾಹಿನಿ ಚರ್ಚೆಯಲ್ಲಿನ ನೂಪುರ್ ಶರ್ವರ ಮಾತುಗಳನ್ನಷ್ಟೇ ಪ್ರತ್ಯೇಕಿಸಿ, ಅದನ್ನು ಅರಬ್ಬೀ ಭಾಷೆಗೆ ಅನುವಾದಿಸಿ, ಅರಬ್ ಜಗತ್ತಿಗೆ ತಲುಪುವಂತೆ ಮಾಡಿದ್ದು, ಅದನ್ನು ಕತಾರ್​ನ ವಾರ್ತಾವಾಹಿನಿ ಅಲ್-ಜಝೀರಾ ಇಡೀ ಜಗತ್ತಿಗೆ ಹರಡಿಬಿಟ್ಟಿತು. ಝುುಬೇರ್ ಮಾಡಿದ ಅನುವಾದ ಭಾಷಿಕವಾಗಿ ಸಮರ್ಪಕವಾಗಿತ್ತೇ ಎಂದು ನನಗೆ ಗೊತ್ತಿಲ್ಲ. ಆದರೆ ತಸ್ಲೀಂ ರೆಹಮಾನಿಯವರ ಕ್ರಿಯೆಯನ್ನು ಮರೆಮಾಚಿ ನೂಪುರ್ ಶರ್ವರ ಪ್ರತಿಕ್ರಿಯೆಯನ್ನಷ್ಟೇ ಪ್ರಸಾರ ಮಾಡಿದ್ದು ದೊಡ್ಡ ತಪ್ಪಾಗಿತ್ತು. ಅದರಿಂದಾಗಿ ತಪ್ಪು ಇಡಿಯಾಗಿ ನೂಪುರ್ ಶರ್ವರದ್ದೇ ಎಂದು ತಿಳಿದ ಮುಸ್ಲಿಂ ಜಗತ್ತಿನ ಒಂದು ಭಾಗ ತಪ್ಪಾಗಿ ನಂಬಿತು; ನೂಪುರ್ ವಿರುದ್ಧ, ಬಿಜೆಪಿ ವಿರುದ್ಧ, ಭಾರತದ ವಿರುದ್ಧ ಕೂಗೆತ್ತಿತು. ಭಾರತದಲ್ಲೇ ಕೆಲವರು ಮುಸ್ಲಿಮರು ನೂಪುರ್ ಪ್ರವಾದಿಯವರ ವಿರುದ್ಧ ದೈವನಿಂದೆಯೆಸಗಿದ್ದಾರೆ ಎಂದು ಆಪಾದಿಸಿ, ಶಿರಚ್ಛೇದನದ ಕರೆನೀಡಿದರು. ಅದನ್ನು ಗಂಭೀರವಾಗಿ ತೆಗೆದುಕೊಂಡ ಇನ್ನೊಂದಿಷ್ಟು ಜನ ನೂಪುರ್​ರ

    ಪರವಾಗಿ ಪೂರ್ಣ ಅರಿವಿದ್ದೋ ಇಲ್ಲದೆಯೋ ದನಿಯೆತ್ತಿದವರ ಶಿರಚ್ಛೇದನಕ್ಕೂ ಮುಂದಾದರು, ಎರಡು ಶಿರಚ್ಛೇದನಗಳು ನಡೆದೂಹೋದವು. ಇನ್ನೊಂದಿಷ್ಟು ಜನ ಕ್ಷಮೆಯಾಚಿಸಿ, ಗೋಗರೆದು ಜೀವ ಉಳಿಸಿಕೊಂಡಂತೆ ವರದಿಗಳಿವೆ. ಈ ಹಿನ್ನೆಲೆಯಲ್ಲಿ ನೂಪುರ್ ಜೀವಭಯದಿಂದ ನ್ಯಾಯಾಲಯದ ಮುಂದೆ ನಿಲ್ಲುವಂತಾಯಿತು. ಇದಕ್ಕೆ ವಿರುದ್ಧವಾಗಿ ಹಿಂದೂ ಧರ್ಮದಲ್ಲಿ ದೈವನಿಂದೆಯ ಪರಿಕಲ್ಪನೆ ಇಲ್ಲದ ಕಾರಣ ತಸ್ಲೀಂ ರೆಹಮಾನಿ ಯಾವ ಜೀವಭಯವೂ ಇಲ್ಲದೇ ಆರಾಮವಾಗಿ ಓಡಾಡಿಕೊಂಡಿದ್ದಾರೆ. ಇದು ಜನಸಾಮಾನ್ಯರಿಗೆ ಅರ್ಥವಾಗದಿರಬಹುದು, ಅರ್ಥ ಮಾಡಿಕೊಳ್ಳುವ ವ್ಯವಧಾನವೂ ಅವರಿಗಿಲ್ಲದಿರಬಹುದು. ಆದರೆ ತಮ್ಮ ಮುಂದೆ ಅಧಿಕೃತವಾಗಿ ಬಂದ ವಿಷಯದ ಎಲ್ಲ ಆಯಾಮಗಳನ್ನೂ ಗಮನವಿಟ್ಟು ಅವಲೋಕಿಸಿ, ಸಮಚಿತ್ತದಿಂದ ವಿಶ್ಲೇಷಿಸಿ, ಪೂರ್ಣ ಅರಿವಿನಿಂದ ಮಾತಾಡಬೇಕಾದ ನ್ಯಾಯಾಧೀಶರಿಗೂ ಅರ್ಥವಾಗದೇಹೋದರೆ ಹೇಗೆ?

    ಖಂಡಪೀಠದ ಮತ್ತೊಬ್ಬ ನ್ಯಾಯಾಧೀಶ ಜೆ.ಬಿ. ಪರ್ದೀವಾಲಾ ಜುಲೈ 3ರಂದು ವೆಬಿನಾರ್ ಒಂದರಲ್ಲಿ ‘ನ್ಯಾಯಾಧೀಶರು ಮಾತಾಡುವುದು ತಮ್ಮ ನಾಲಿಗೆ ಮೂಲಕ ಅಲ್ಲ, ತೀರ್ಪಿನ ಮೂಲಕ’ ಎಂದು ಹೇಳಿದರು. ಆದರೆ ಕಳೆದ ಐದು ದಿನಗಳಲ್ಲಿ ದೇಶ ರ್ಚಚಿಸುತ್ತಿರುವುದು ಅವರ ತೀರ್ಪಿನ ಬಗ್ಗೆ ಅಲ್ಲ, ಅವರ ನಾಲಿಗೆಯಿಂದ ಬಂದ ಮಾತುಗಳ ಬಗ್ಗೆ. ನೂಪುರ್ ಶರ್ವಗೆ ಸವೋಚ್ಚ ನ್ಯಾಯಾಲಯ ಚಾಟಿಯೇಟು ನೀಡಿದೆ, ಛೀಮಾರಿ ಹಾಕಿದೆ, ತರಾಟೆಗೆ ತೆಗೆದುಕೊಂಡಿದೆ ಎಂದೆಲ್ಲಾ ಮಾಧ್ಯಮದ ಒಂದು ಭಾಗ, ತಥಾಕಥಿತ ಪ್ರಗತಿಪರ-ಉದಾರವಾದಿಗಳ ಗುಂಪು ಕೂಗುತ್ತಿದೆ!

    ಆ ಇಬ್ಬರು ನ್ಯಾಯಾಧೀಶರ Obiter Dictum ಅನ್ನು ಪ್ರಶ್ನಿಸಿ ಲೀಗಲ್ ರೈಟ್ಸ್ ಪೊ›ಟೆಕ್ಷನ್ ಫೋರಂ ರಾಷ್ಟ್ರಪತಿಗಳಿಗೆ ಅಹವಾಲು ಸಲ್ಲಿಸಿ ಭಾರತದ ಮುಖ್ಯ ನ್ಯಾಯಾಧೀಶರೊಂದಿಗೆ ಈ ಬಗ್ಗೆ ರ್ಚಚಿಸುವಂತೆ ಕೇಳಿಕೊಂಡಿದೆ. ಆ ಇಬ್ಬರು ನ್ಯಾಯಾಧೀಶರ ಮಾತುಗಳನ್ನು ನ್ಯಾಯಾಲಯದ ಕಡತಗಳಿಂದ ತೆಗೆಯುವಂತೆ ಜಮ್ಮು ಮತ್ತು ಕಾಶ್ಮೀರದ ಹದಿನೇಳು ನಿವೃತ್ತ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ಮುಖ್ಯ ನ್ಯಾಯಾಧೀಶರಿಗೆ ಪಿಟಿಷನ್ ಸಲ್ಲಿಸಿದ್ದಾರೆ. ಇಂತಹದೇ ಮನವಿಯನ್ನು ದೇಶದ 77 ಮಾಜಿ ಆಡಳಿತಾಧಿಕಾರಿಗಳು, 25, ಸೇನಾ ಮತ್ತು ಪೊಲೀಸ್ ನಿವೃತ್ತಾಧಿಕಾರಿಗಳು ಹಾಗೂ 15 ನಿವೃತ್ತ ನ್ಯಾಯಾಧೀಶರು ಸಾರ್ವಜನಿಕ ಪ್ರಕಟಣೆಯ ಮೂಲಕ ಮಾಡಿದ್ದಾರೆ.

    ಈಗ ಇನ್ನೊಂದು ನೂಪುರದತ್ತ ಹೊರಳೋಣ. ಪತ್ರಕರ್ತೆ ನೂಪರ್ ಶರ್ಮಾ ಆಪ್​ಇಂಡಿಯಾ ಎಂಬ ಜಾಲತಾಣದ ಸಂಪಾದಕಿ. ಇವರ ವಿರುದ್ಧ ನ್ಯಾಯಾಲಯ ನಿಂದನೆಯ ಆರೋಪ ಹೊರಿಸಿ ದಾವೆ ದಾಖಲಿಸಲು ರಾಜಕೀಯ ಪಕ್ಷವೊಂದರ ನಾಯಕರೊಬ್ಬರು ಅಟಾರ್ನಿ ಜನರಲ್​ರ ಅನುಮತಿ ಕೋರಿದ್ದಾರೆ. ಎಲ್ಲರನ್ನೂ ಬಿಟ್ಟು ಈ ಪತ್ರಕರ್ತೆ ನೂಪುರ್ ಮೇಲೆ ಯಾಕೆ ದಾವೆ? ರಾಜಕಾರಣಿ ನೂಪುರ್ ಬಗ್ಗೆ ಸತ್ಯಚಿತ್ರವನ್ನು ತಿರುಚಿ ಪ್ರಚಾರ ಮಾಡಿದ್ದೇ ತನ್ನನ್ನು ತಾನು ಫ್ಯಾಕ್ಟ್ ಚೆಕರ್ ಎಂದು ಕರೆದುಕೊಳ್ಳುವ ಮಹಮದ್ ಝುುಬೇರ್. ಇವರ ಫ್ಯಾಕ್ಟ್​ಗಳನ್ನು ಆಪ್​ಇಂಡಿಯಾ ಈಗ ಚೆಕ್ ಮಾಡಿ ಫಲಿತಾಂಶಗಳನ್ನು ಹೊರಹಾಕುತ್ತಿದೆ! ತನ್ನ ತಪ್ಪುಗಳ ಗಂಟು ಬಿಚ್ಚುತ್ತಿದೆಯೆಂದು ತಿಳಿದೊಡನೇ ಝುುಬೇರ್ ತಮ್ಮ ಫೇಸ್​ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿಬಿಟ್ಟಿದ್ದರು. ಆದರೆ ಈಗ ಆಪ್​ಇಂಡಿಯಾದ ಪತ್ತೆದಾರಿಕೆಯಿಂದಾಗಿ ಈಗಾಗಲೇ ಬೇರೊಂದು ಕೇಸ್​ನಲ್ಲಿ ಬಂಧಿತರಾಗಿರುವ ಝುುಬೇರ್​ರ ಪರಿಸ್ಥಿತಿ, ಮುಖ್ಯವಾಗಿ ವಿದೇಶಗಳಿಂದ ಅನಧಿಕೃತವಾಗಿ ಹಣ ಪಡೆದ ಆಪಾದನೆಗೆ ಸಂಬಂಧಿಸಿದಂತೆ, ಹದಗೆಡುತ್ತಿದೆ. ಅದನ್ನು ತಥಾಕಥಿತ ಪ್ರಗತಿಪರರಿಗೆ ನೋಡಲಾಗುತ್ತಿಲ್ಲ. ರಾಜಕಾರಣಿ ನೂಪುರ್ ವಿರುದ್ಧ ಎಲ್ಲೆಡೆ ಅಪಪ್ರಚಾರವನ್ನು ತಾವೂ ಮಾಡಿ, ಝುುಬೇರ್ ಮಾಡಿದ್ದನ್ನೂ ಸಮರ್ಥಿಸುವ ಇವರಿಗೆ ಈಗ ಅದೇ ಝುುಬೇರ್ ಬೋನಿಗೆ ಬಿದ್ದಿರುವುದು, ಬೋನಿನ ಸರಳುಗಳು ದಪ್ಪವಾಗಲು ಪತ್ರಕರ್ತೆ ನೂಪುರ್ ಸಹಕರಿಸುತ್ತಿರುವುದನ್ನು, ಆ ಮೂಲಕ ತಮ್ಮ ಇಕೋಸಿಸ್ಟಂಗೆ ಆಘಾತ ನೀಡುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ಹಾಗಾಗಿ ಎಂದಿನ ಚಾಳಿಯಂತೆ ವಿರೋಧಿಗಳನ್ನು ಕೋಟಲೆಗೆ ಸಿಕ್ಕಿಸಿ ತಮ್ಮ ದಾರಿಯಿಂದ ಅವರನ್ನು ವಿಮುಖಗೊಳಿಸಲು ಹಂಚಿಕೆ ಹೂಡುತ್ತಿದ್ದಾರೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts