Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ದೇಶಕ್ಕಾಗಿ ದುಡಿದ ಜಿನ್​ಪಿಂಗ್​ಗೆ ಜೀವಾವಧಿ ಅಧ್ಯಕ್ಷಗಿರಿ

Wednesday, 14.03.2018, 3:05 AM       No Comments

ಕ್ಸಿ ಜಿನ್​ಪಿಂಗ್ ನೀತಿಗಳು ಚೀನಾವನ್ನು ಹೊಸ ಮಾರ್ಗದಲ್ಲಿ ಕೊಂಡೊಯ್ಯುತ್ತಿವೆ. ಅದಕ್ಕೆಂದೆ ಮಾವೋ ನಂತರದ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದು, ಜೀವಾವಧಿ ಅಧ್ಯಕ್ಷಗಿರಿ ಒಲಿದಿದೆ. ಕ್ಸಿ ಯೋಜನೆಗಳು ಚೀನಾಕ್ಕೆ ಲಾಭ ತಂದುಕೊಟ್ಟಿರುವುದು ನಿಚ್ಚಳವಾದರೂ ಭಾರತ ಮತ್ತು ಜಗತ್ತಿನ ಇತರ ದೇಶಗಳ ಪಾಲಿಗೆ ಹಾನಿಯೇ ಹೆಚ್ಚು.

‘‘ಆತ ಡೆಂಗ್ ಝಿಯಾವೋ ಪಿಂಗ್ ನಂತರ ಚೀನಾದ ಅತ್ಯಂತ ಪ್ರಬಲ ನಾಯಕನಾಗಲಿದ್ದಾರೆ ಎಂದು ನಾನು ಐದು ವರ್ಷಗಳ ಹಿಂದೆ ಹೇಳಿದ್ದೆ. ನನ್ನ ಆ ಮಾತುಗಳು ತಪ್ಪಾಗಿದ್ದವು. ಆತ ಮಾವೋ ಝೆ ಡಾಂಗ್ ನಂತರ ಚೀನಾದ ಅತ್ಯಂತ ಪ್ರಬಲ ನಾಯಕನಾಗಿದ್ದಾರೆ’.

ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಪ್ರಧಾನಮಂತ್ರಿ ಕೆವಿನ್ ರಡ್ ನಾಲ್ಕು ತಿಂಗಳ ಹಿಂದೆ ‘ಫೈನಾನ್ಸಿಯಲ್ ಎಕ್ಸ್​ಪ್ರೆಸ್’ ಪತ್ರಿಕೆಯಲ್ಲಿ ಬರೆದ ಮಾತುಗಳಿವು. ಚೀನೀ ಕಮ್ಯೂನಿಸ್ಟ್ ಪಕ್ಷದ ಪಾಲಿಟ್​ಬ್ಯೂರೋದ ಏಳು ಸದಸ್ಯರ ಉಚ್ಚ ಆಡಳಿತ ಸಮಿತಿ ಇದೇ ಭಾನುವಾರ ಚೀನೀ ಅಧ್ಯಕ್ಷರಿಗಿರುವ ಎರಡೇ ಆವಧಿಯ ಮಿತಿಯ ನೀತಿಯನ್ನು ಬದಲಾಯಿಸಿ, ಜಿನ್​ಪಿಂಗ್ ಜೀವಮಾನಪೂರ್ತಿ ಅಧ್ಯಕ್ಷರಾಗಿರುವಂತೆ ತೆಗೆದುಕೊಂಡ ನಿರ್ಣಯದ ಹಿನ್ನೆಲೆಯಲ್ಲಿ ಕೆವಿನ್ ರಡ್​ರ ಈ ಮಾತುಗಳು ಮತ್ತಷ್ಟು ಅರ್ಥ ಪಡೆದುಕೊಳ್ಳುತ್ತವೆ.

ಹಾಗೆ ನೋಡಿದರೆ ನವೆಂಬರ್ 2012ರಲ್ಲಿ ಅಧಿಕಾರಕ್ಕೆ ಬಂದಾಗ ಮುಂದೊಂದು ದಿನ ಜಿನ್​ಪಿಂಗ್ ಚೀನಾದ ಜೀವಾವಧಿ ಅಧ್ಯಕ್ಷರಾಗುತ್ತಾರೆ ಎಂದು ನಿರೀಕ್ಷಿಸಿದ್ದವರು ಬಹಳ ವಿರಳ. ಆದರೆ ಮುಂದಿನ ಅರವತ್ತು ತಿಂಗಳುಗಳಲ್ಲಿ ಜಿನ್​ಪಿಂಗ್ ಚೀನಾವನ್ನು ಆರ್ಥಿಕ ಮುಗ್ಗಟ್ಟಿನಿಂದ ಹೊರತಂದದ್ದಲ್ಲದೇ, ಜಾಗತಿಕ ಆಗುಹೋಗುಗಳನ್ನು ಪ್ರಭಾವಿಸುವ ಪ್ರಮುಖ ಅಂತಾರಾಷ್ಟ್ರೀಯ ಪಾತ್ರಧಾರಿಯನ್ನಾಗಿಯೂ ಬೆಳೆಸಿದ್ದು ಅವರ ಈಗಿನ ಸ್ಥಾನಕ್ಕೆ ಭದ್ರ ಮೆಟ್ಟಲುಗಳಾದವು ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ, ಜಿನ್​ಪಿಂಗ್​ರ ಸಾಧನೆಗಳ ಮಹತ್ವ ಮತ್ತು ಅವು ಹೇಗೆ ಅವರಿಗೆ ಜೀವಮಾನ ಅಧ್ಯಕ್ಷಾವಧಿಯನ್ನು ತಂದುಕೊಟ್ಟವು ಎನ್ನುವುದನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದು ಈ ಲೇಖನದ ವಸ್ತುವಿಷಯ.

ಮಾವೋ ನಿರಂಕುಶ ಆಡಳಿತ: ಮಾವೋ ಒತ್ತುಕೊಟ್ಟದ್ದು ಸೇನಾ ಸಾಮರ್ಥ್ಯ ವೃದ್ಧಿಗೆ. ಆಂತರಿಕವಾಗಿ ಅತೀವ ದಮನಕಾರಿ ನಿರಂಕುಶ ಸರ್ವಾಧಿಕಾರತ್ವದ ನೇತೃತ್ವ ವಹಿಸಿದ್ದ ಮಾವೋ, ದೇಶದ ಆರ್ಥಿಕ ಪ್ರಗತಿಯ ಬಗ್ಗೆ ಸುಳ್ಳು ಅಂಕಿಅಂಶಗಳನ್ನು ನೀಡುತ್ತ ತಮ್ಮ ಇಡೀ ಆಡಳಿತಾವಧಿಯನ್ನು ಕಳೆದದ್ದೀಗ ಇತಿಹಾಸ. ಎಪ್ಪತ್ತರ ದಶಕದ ಆದಿಯಲ್ಲಿ ತನ್ನ ಜನತೆಗೆ ಅಗತ್ಯವಿರುವಷ್ಟು ಆಹಾರವನ್ನು ಉತ್ಪಾದಿಸುವಲ್ಲಿ ಚೀನಾ ಯಶಸ್ವಿಯಾಗಿದೆಯೆಂದು ಮಾವೋ ಸರ್ಕಾರ ಅಂತಾರಾಷ್ಟ್ರೀಯ ರಂಗದಲ್ಲಿ ಅಬ್ಬರಿಸಿ ಹೇಳುತ್ತಿದ್ದ ದಿನಗಳಲ್ಲಿ ವಾಸ್ತವವಾಗಿ ಒಂದು ಕೋಟಿಯಷ್ಟು ಚೀನಿಯರು ಹಸಿವಿನಿಂದ ಸತ್ತ ಸುದ್ದಿ ಹೊರಜಗತ್ತಿಗೆ ತಿಳಿದದ್ದು ಮಾವೋ ಸತ್ತ ಮೇಲೆಯೇ.

ಆರ್ಥಿಕ ಅಭಿವೃದ್ಧಿಯ ಮಹತ್ವವನ್ನು ಮಾವೋ ನಂತರದ ಚೀನೀ ನಾಯಕತ್ವ ಅರಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ನೆರೆಯ ಕಮ್ಯೂನಿಸ್ಟ್ ದೈತ್ಯ ಸೋವಿಯೆತ್ ಯೂನಿಯನ್​ನ

ಆರ್ಥಿಕ ಸಂಕಷ್ಟ, ಅದರ ಭೀಕರ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ಚಾಣಾಕ್ಷ ಚೀನೀ ನಾಯಕ ಡೆಂಗ್ ಝಿಯಾವೋ ಪಿಂಗ್ 1978ರಲ್ಲೇ ಆರ್ಥಿಕ ರಂಗದಲ್ಲಿ ಉದಾರೀಕರಣದ ಪ್ರಕ್ರಿಯೆ ಆರಂಭಿಸಿದರು. ನಮಗೆ ಅಗತ್ಯವಾದ ಆರ್ಥಿಕ ಸೌಲಭ್ಯಗಳನ್ನು ಕೊಡುವುದರಲ್ಲಿ ಕಮ್ಯೂನಿಸಂ ವಿಫಲವಾದಾಗ ಅಗತ್ಯವಿರುವಷ್ಟು ಬಂಡವಾಳಶಾಹಿ ವ್ಯವಸ್ಥೆಯನ್ನು ನಾವು ಅಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಆ ಹೊಸಮಾರ್ಗ ಪ್ರವರ್ತಕ ವಾದಿಸಿದರು. ನಮಗೆ ಬೇಕಾಗಿರುವುದು ಆರ್ಥಿಕ ಪ್ರಗತಿ, ಅದಕ್ಕೆ ಕಮ್ಯೂನಿಸಂ ಮಾರ್ಗವಾದರೇನು, ಬಂಡವಾಳಶಾಹಿ ಮಾರ್ಗವಾದರೇನು ಎಂದು ಸೂಚಿಸಲು ಅವರು ಬಳಸಿದ ‘ಇಲಿ ಹಿಡಿಯಬಲ್ಲ ಬೆಕ್ಕು ಕಪ್ಪಾಗಿದ್ದರೇನು, ಬಿಳಿದಾಗಿದ್ದರೇನು?’ ಎಂಬ ಮಾತು ಚೀನೀ ಕಮ್ಯೂನಿಸ್ಟರಿಗಷ್ಟೇ ಅಲ್ಲ, ಜಗತ್ತಿನ ಎಲ್ಲರಿಗೂ ಒಂದು ಹೊಸ ದಿಕ್ಕನ್ನೇ ತೋರಿಸಿತು. ತಮ್ಮ ಮಾತನ್ನು ತಮ್ಮ ನಿರ್ದೇಶನದಲ್ಲೇ ಅನುಷ್ಠಾನಕ್ಕೆ ತಂದ ಡೆಂಗ್ ರಾಜಕೀಯರಂಗದಲ್ಲಿ ಕಮ್ಯೂನಿಸಂ, ಆರ್ಥಿಕ ರಂಗದಲ್ಲಿ ಅಗತ್ಯವಿರುವಷ್ಟು ಕ್ಯಾಪಿಟಲಿಸಮ್ ಎಂಬ ನೀತಿ ರೂಪಿಸಿದರು. ಪರಿಣಾಮ ಅದ್ಭುತ. ‘ವಿಶೇಷ ಆರ್ಥಿಕ ವಲಯ’ಗಳನ್ನೊಳಗೊಂಡಂತೆ ಚೀನಾ ನೀಡಿದ ಸವಲತ್ತುಗಳನ್ನು ಉಪಯೋಗಿಸಿಕೊಂಡ ವಿಶ್ವದ ಅನೇಕ ಕೈಗಾರಿಕೋದ್ಯಮಿಗಳು ಆ ದೇಶದಲ್ಲಿ ಭಾರಿ ಬಂಡವಾಳ ಹೂಡಿದರು. ತತ್ಪರಿಣಾಮವಾಗಿ ಚೀನಾದ ನಿವ್ವಳ ರಾಷ್ಟ್ರೀಯ ಉತ್ಪಾದನೆ ಹಲವು ಪಟ್ಟು ಏರಿ ಹೊಸ ಶತಮಾನದ ಆರಂಭದ ಹೊತ್ತಿಗೆ ಆ ದೇಶ ವಿಶ್ವದ ಬೃಹತ್ ಆರ್ಥಿಕಶಕ್ತಿಗಳಲ್ಲೊಂದಾಗಿ ಬೆಳೆದು ನಿಂತಿತು.

ಬದಲಾದ ಚೀನಾ ಪರಿಸ್ಥಿತಿ: ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗತೊಡಗಿತು. ಹಿಂದಿನ ಕಾಲು ಶತಮಾನದ ಅದ್ಭುತ ಆರ್ಥಿಕ ಪ್ರಗತಿಯಲ್ಲಿ ಚೀನಾಗೆ ವರದಾನವಾಗಿದ್ದ ಅತಿಮುಖ್ಯ ಅಂಶವೆಂದರೆ ಕಡಿಮೆ ಕೂಲಿಗೆ ದುಡಿಯಬಲ್ಲ ಅರೆಕುಶಲ ಕೆಲಸಗಾರರು ಬೃಹತ್ ಸಂಖ್ಯೆಯಲ್ಲಿ ಲಭ್ಯವಿದ್ದದ್ದು. ಕಡಿಮೆ ಕೂಲಿಯಿಂದಾಗಿ ಉತ್ಪಾದನಾ ವೆಚ್ಚವೂ ಕಡಿಮೆಯಾಗಿ, ಉತ್ಪಾದಿತ ವಸ್ತುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರುವ ಅನುಕೂಲ ಒದಗಿದ್ದರಿಂದಾಗಿ ಚೀನಾ ಅತ್ಯಲ್ಪ ಕಾಲದಲ್ಲಿ ಸಿದ್ಧ ಉಡುಪುಗಳು, ಪಾದರಕ್ಷೆಗಳು, ಎಲೆಕ್ಟ್ರಾನಿಕ್ ಉಪಕರಣಗಳು ಮತ್ತಿತರ ಗೃಹಬಳಕೆ ವಸ್ತುಗಳ ಕ್ಷೇತ್ರಗಳಲ್ಲಿ ವಿಶ್ವಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿತ್ತು. ಇದರಿಂದ ಬಂದ ಅಗಾಧ ವಿದೇಶಿ ವಿನಿಮಯವನ್ನು ಚೀನಾ ಬಳಸತೊಡಗಿದ್ದು ದೇಶದೊಳಗೆ ಸಾರಿಗೆ ಸೌಲಭ್ಯಗಳು, ಬೃಹತ್ ವಸತಿ ಸಮುಚ್ಛಯಗಳು ಮುಂತಾದ ಜನೋಪಯೋಗಿ ಅಭಿವೃದ್ಧಿ ಕಾರ್ಯಕ್ರಮಗಳ ಜತೆ ಹೊಸಹೊಸ ಉತ್ಪಾದನಾ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗಾಗಿ.

ಚೀನಾ ಕಂಡುಕೊಂಡ ಕಡಿಮೆ ಕೂಲಿಯ ಅದ್ಭುತ ಅನುಕೂಲಗಳನ್ನು ಹೊಸ ಶತಮಾನದಲ್ಲಿ ಇತರ ಹಲವು ದೇಶಗಳು ಕಂಡುಕೊಂಡವು. ಅಲ್ಲಿಯವರೆಗೂ ಚೀನಾದ ಕಾರ್ಖಾನೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವುದರಲ್ಲೇ ತಮ್ಮ ಸಾರ್ಥಕತೆ ಕಂಡುಕೊಳ್ಳುತ್ತ ಮತ್ತು ಚೀನೀ ಬಂಡವಾಳಕ್ಕೆ ಅವಕಾಶ ನೀಡುವುದೇ ತಮ್ಮ ಅದೃಷ್ಟವೆಂದು ನಂಬಿದ್ದ ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕದ ಅನೇಕ ದೇಶಗಳು ತಮ್ಮ ಆರ್ಥಿಕ ನೀತಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿಕೊಳ್ಳತೊಡಗಿದವು. ಇಂಡೋನೇಷ್ಯಾ, ಬಾಂಗ್ಲಾದೇಶ, ಲಾವೋಸ್, ಶ್ರೀಲಂಕಾ, ಮ್ಯಾನ್ಮಾರ್, ಪೆರು ಮತ್ತು ತಾಂಜಾನಿಯಾಗಳು ತಮ್ಮಲ್ಲಿನ ಅಗಾಧ ಅರೆಕುಶಲ ಕೆಲಸಗಾರ ವರ್ಗವನ್ನು ಉಪಯೋಗಿಸಿಕೊಂಡು ಈ ದಶಕದ ಆರಂಭದ ಹೊತ್ತಿಗೆ ಜಾಗತಿಕ ಮಾರುಕಟ್ಟೆಗೆ ಲಗ್ಗೆಯಿಡತೊಡಗಿದವು. ಅಂದರೆ ಅಷ್ಟರಮಟ್ಟಿಗೆ ಚೀನೀ ಉತ್ಪಾದನೆಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯಿತು. ಇದು ಸಾಲದೆಂಬಂತೆ, ಈ ದೇಶಗಳ ಜತೆಗೆ ವಿಯೆಟ್ನಾಮ್ ಮೆಕ್ಸಿಕೋ ಮತ್ತು ಭಾರತ ಒದಗಿಸುವ ಅರೆಕುಶಲ ಕೆಲಸಗಾರ ವರ್ಗವನ್ನು ಕಡಿಮೆ ವೇತನಕ್ಕೆ ದುಡಿಸಿಕೊಳ್ಳಬಹುದಾದ ಅವಕಾಶವನ್ನು ಮನಗಂಡು ವಸ್ತ್ರಗಳು, ಪಾದರಕ್ಷೆಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಜಾಗತಿಕ ದೈತ್ಯ ಸಂಸ್ಥೆಗಳು ತಮ್ಮ ಘಟಕಗಳನ್ನು ಚೀನಾದಿಂದ ಈ ದೇಶಗಳಿಗೆ ವರ್ಗಾಯಿಸಲಾರಂಭಿಸತೊಡಗಿದರು. ಅನತಿಕಾಲದಲ್ಲೇ ಇವುಗಳ ಹಾದಿಯನ್ನೇ ಮೊಬೈಲ್ ಫೋನ್ ಕಂಪೆನಿಗಳೂ ಹಿಡಿಯತೊಡಗಿದವು. ಇದೆಲ್ಲದರ ಪರಿಣಾಮವಾಗಿ ಜಾಗತಿಕ ಉತ್ಪಾದನೆಯಲ್ಲಿ ಚೀನಾ ಪಾತ್ರ ವೇಗವಾಗಿ ಕುಗ್ಗತೊಡಗಿತು. ಈ ಬೆಳವಣಿಗೆಗಳು ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಚೀನಾವನ್ನು ಹಿಂದೆ ಸರಿಸಿ ಆ ಸ್ಥಾನದಲ್ಲಿ ಭಾರತವನ್ನು ಕೂರಿಸಿಯೂಬಿಟ್ಟವು. ಚೀನಾದ ಆರ್ಥಿಕ ಪವಾಡ ಇತಿಹಾಸವಾಗುವ ಸೂಚನೆ 2010-12ರಲ್ಲಿ ಕಾಣತೊಡಗಿತ್ತು.

ಜಿನ್​ಪಿಂಗ್ ಹೊಸನೀತಿ: ಆದರೆ, ಈ ಹಿಂಜರಿತಗಳನ್ನೇ ಹೊಸ ಅವಕಾಶಗಳನ್ನಾಗಿ ಪರಿವರ್ತಿಸುವುದು ಹಾಗೂ ಆ ಮೂಲಕ ಚೀನಾವನ್ನು ಜಾಗತಿಕವಾಗಿ ಮತ್ತಷ್ಟು ಉನ್ನತ ಸ್ಥಾನಕ್ಕೇರಿಸುವುದು ತಮ್ಮ ಗುರಿ ಎಂಬ ಸೂಚನೆಗಳನ್ನು ಜಿನ್​ಪಿಂಗ್ ತಾವು ಅಧಿಕಾರಕ್ಕೆ ಬಂದಾಗಲೇ ಕೊಡತೊಡಗಿದರು. ತಮ್ಮ ನಿರ್ಧಾರಗಳಿಗೆ ಬದ್ಧರಾಗಿದ್ದ ಜಿನ್​ಪಿಂಗ್ ಅಮೆರಿಕದ ಆಗಿನ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿಯಾದ ಪ್ರತಿಯೊಂದು ಸಂದರ್ಭದಲ್ಲೂ ಹಠದಿಂದೆಂಬಂತೆ ಹೇಳಿದ್ದು ‘ಜಿನ್ ಜಿಂಗ್ ದ ಗ್ವೊ ಗ್ವನ್ ಜಿ’ ಅಂದರೆ ‘ಮಹಾಶಕ್ತಿಗಳ ನಡುವಿನ ಹೊಸ ಬಗೆಯ ಸಂಬಂಧಗಳು’ ಎಂಬ ತನ್ನ ಹೃದಯಕ್ಕೆ ಅತಿ ಹತ್ತಿರವಾದ ನೀತಿಯನ್ನು. ಆ ಮೂಲಕ ಅವರು ಅಮೆರಿಕಗೆ ಮನಗಾಣಿಸಹೋದದ್ದು ಚೀನಾ ಜಾಗತಿಕ ರಂಗದಲ್ಲಿ ಒಂದು ಮಹಾಶಕ್ತಿ, ಅದನ್ನು ಅಮೆರಿಕ ಒಪ್ಪಿಕೊಳ್ಳಬೇಕು ಮತ್ತು ಆ ಪ್ರಕಾರ ಚೀನಾದ ಜತೆಗಿನ ಸಂಬಂಧಗಳನ್ನು ರೂಪಿಸಿಕೊಳ್ಳಬೇಕು ಎಂದು. ವರ್ಷದ ಹಿಂದೆ ಶ್ವೇತಭವನಕ್ಕೆ ಡೋನಾಲ್ಡ್ ಟ್ರಂಪ್ ಪ್ರವೇಶಿಸಿದಾಗ ಅವರನ್ನು ದೂರವಾಣಿಯಲ್ಲಿ ಅಭಿನಂದಿಸಿದ ಜಿನ್​ಪಿಂಗ್ ಎರಡೂ ದೇಶಗಳು ತಮ್ಮ ನಡುವಿನ ಭೇದಗಳನ್ನು ಪಕ್ಕಕ್ಕಿಟ್ಟು ಪರಸ್ಪರ ಸಹಕಾರಗಳ ಆಧಾರದ ಮೇಲೆ ಸಂಬಂಧವೃದ್ಧಿ ಮಾಡಿಕೊಳ್ಳಬೇಕು ಎಂದು ನೇರವಾಗಿ ಹೇಳಿದರು.

ಸಾಹಸಪೂರ್ಣ ನಡೆ: ಜಿನ್​ಪಿಂಗ್ ಈ ಹಂತಕ್ಕೆ ತಲುಪಿದ್ದರ ಹಿಂದೆ ನಾಲ್ಕು ವರ್ಷಗಳ ಚಾಲಾಕಿ ಹಾಗೂ ಸಾಹಸಪೂರ್ಣ ನಡೆಗಳಿವೆ. ವಿದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದ್ದಂತೆ ತನ್ನ ದೇಶದಲ್ಲಿ ಈಗಾಗಲೇ ಇದ್ದ ಅಗಾಧ ವಿದೇಶಿ ವಿನಿಮಯದ ಒಂದು ಭಾಗವನ್ನು ವಿಶ್ವಾದ್ಯಂತ ತಾವೇ ಬಂಡವಾಳ ಹೂಡಲು, ಆ ಮೂಲಕ ತಮ್ಮ ದೇಶಕ್ಕೆ ಎಲ್ಲೆಡೆ ಆರ್ಥಿಕ ಹಾಗೂ ಸಾಮರಿಕ ಸೌಲಭ್ಯಗಳನ್ನು ಗಳಿಸಿಕೊಳ್ಳಲು ಮಹತ್ವಾಕಾಂಕ್ಷಿ ಜಿನ್​ಪಿಂಗ್ ಉಪಯೋಗಿಸತೊಡಗಿದರು. ಕಜಾಕಿಸ್ತಾನ್, ತುರ್ಕ್​ವೆುನಿಸ್ತಾನ್, ಪಾಕಿಸ್ತಾನ, ಲಾವೋಸ್, ಜಿಂಬಾಬ್ವೆ ಮುಂತಾದ ಹಲವು ಹತ್ತು ದೇಶಗಳಲ್ಲಿ ವಿಸ್ತಾರ ನೆಲವನ್ನೇ ಚೀನಾ ಖರೀದಿಸಿ ಅಲ್ಲಿ ಸ್ಥಳೀಯ ಕಚ್ಚಾವಸ್ತುಗಳನ್ನೂ, ಕೆಲಸಗಾರರನ್ನೂ ಉಪಯೋಗಿಸಿ ಅಗತ್ಯವಸ್ತುಗಳನ್ನು ಉತ್ಪಾದಿಸಿ ಆ ದೇಶಗಳಲ್ಲೇ ಮಾರಿ, ಸುತ್ತಲ ಬೇರೆ ದೇಶಗಳಿಗೂ ರಫ್ತು ಮಾಡುವ ಮೂಲಕ ವಿದೇಶಿ ವಿನಿಮಯ ಗಳಿಕೆಯ ಹೊಸ ಮಾರ್ಗವನ್ನೇ ಜಿನ್​ಪಿಂಗ್ ಹಿಡಿದಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಇಡೀ ದ್ವೀಪವೊಂದನ್ನೇ ಜಿನ್​ಪಿಂಗ್​ರ ಚೀನಾ ಖರೀದಿಸಿದೆ. ಅದನ್ನು ಜಾಗತಿಕ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸಿ ಹಣ ಬಾಚುವ ಯೋಜನೆ ಅದರದು. ಇತ್ತೀಚೆಗಂತೂ ಚೀನಾ ಆಗ್ನೇಯ ಯುರೋಪ್​ನ ಪುಟ್ಟ ದೇಶಗಳಿಗೆ ಬಿರುಗಾಳಿಯಂತೆ ನುಗ್ಗುತ್ತಿದೆ. ಗ್ರೀಸ್ ಅಂತೂ ಸರಿಸುಮಾರು ಚೀನಾದ ಆರ್ಥಿಕ ಕಪಿಮುಷ್ಟಿಗೆ ಸಿಲುಕಿಹೋಗುವಂತಿದೆ. ಇದೆಲ್ಲಕ್ಕೆ ಚೀನಾ 2016ರ ಒಂದೇ ಆರ್ಥಿಕ ವರ್ಷದಲ್ಲಿ ಹೂಡಿದ ಬಂಡವಾಳ 175 ಬಿಲಿಯನ್ ಡಾಲರ್​ಗಳು. ಇಂತಹ ಮಹತ್ವಾಕಾಂಕ್ಷಿ ಆರ್ಥಿಕ ಸಾಹಸಗಳಿಂದಾಗಿ ಚೀನಾದ ವಿದೇಶಿ ವಿನಿಮಯ ರಾಶಿ ಮತ್ತಷ್ಟು ಹೆಚ್ಚಿ ಅದೀಗ ಮೂರು ಟ್ರಿಲಿಯನ್ ಡಾಲರ್​ಗಳನ್ನು ದಾಟಿದೆ, ಚೀನಾ ವಿಶ್ವದ ಎರಡನೆಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಬೆಳೆದು ನಿಂತಿದೆ.

ಹೆಚ್ಚಿದ ಪ್ರಾಬಲ್ಯ: ಇನ್ನು ಜಿನ್​ಪಿಂಗ್​ರ ರಾಜಕೀಯ ಹಾಗೂ ಸಾಮರಿಕ ನಡೆಗಳತ್ತ ಹೊರಳೋಣ. ಪಾಕಿಸ್ತಾನ ಹಾಗೂ ಜಿಬೂತಿಗಳಲ್ಲಿ ಚೀನಾ ಸೇನಾ ನೆಲೆಗಳನ್ನು ಪಡೆದುಕೊಂಡಿದೆ. ಪಾಕಿಸ್ತಾನದಲ್ಲಂತೂ ಚೀನಾದ

ಪ್ರಭಾವ ಯಾವ ಮಟ್ಟಕ್ಕೇರಿದೆಯೆಂದರೆ ಅಲ್ಲೀಗ ಚೀನೀ ಅಧಿಕೃತ ಭಾಷೆಯ ಸ್ಥಾನ ಪಡೆದುಕೊಂಡಿದೆ! ತಾನು ಬಂಡವಾಳ ಹೂಡಿರುವ ಏಷ್ಯಾ,

ಆಫ್ರಿಕಾ, ಲ್ಯಾಟಿನ್ ಅಮೆರಿಕಗಳ ಹಲವಾರು ದೇಶಗಳ ವಿದೇಶನೀತಿಯನ್ನು ಚೀನಾದ ಪರವಾಗಿ ಹೊರಳಿಸಿಕೊಳ್ಳುವ ಸಾಮರ್ಥ್ಯ ಗಳಿಸಿಕೊಳ್ಳುವುದರ ಜತೆಗೆ ಚೀನಾದ ಸುತ್ತಲೂ ಇರುವ ಅಮೆರಿಕ ಪರವಾದ ದೇಶಗಳ ಶಕ್ತಿಗುಂದಿಸಲು ಹಂಚಿಕೆ ಹೂಡುತ್ತಿದ್ದಾರೆ. ಅಮೆರಿಕದ ಒಂದು ಕಾಲದ ಪ್ರಮುಖ ರಕ್ಷಣಾ ಸಹಯೋಗಿ ಪಿಲಿಫೀನ್ಸ್ 2016ರಲ್ಲಿ ಅಮೆರಿಕವನ್ನು ತೊರೆದು ಚೀನಾದ ಪಕ್ಷ ಸೇರಿದ್ದನ್ನು ನೀವು ಗಮನಿಸಿರಬಹುದು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ವಿಯೆಟ್ನಾಮ್ಳಿಗೆ ಆತಂಕ ಹುಟ್ಟಿಸುವ ಮಟ್ಟದಲ್ಲಿ ಶಕ್ತಿ ಪ್ರದರ್ಶನ ಮಾಡಿ, ನಿರಂತರ ಒತ್ತಡದಿಂದ

ಅವುಗಳ ಸ್ಥೈರ್ಯವನ್ನು ಕುಂದಿಸಿ ಅವೂ ಪಿಲಿಫೀನ್ಸ್​ನ ಹಾದಿಯನ್ನೇ ಹಿಡಿಯುವಂತೆ ಮಾಡುವುದರಲ್ಲಿ ಜಿನ್​ಪಿಂಗ್ ತಣ್ಣಗೆ ತೊಡಗಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಚೀನಾ ಬಗೆಗಿನ ಸಲಹೆಗಾರ ಪೀಟರ್ ನವಾರ್ ಚೀನಾವನ್ನು ‘ವಿಶ್ವದ ಅತ್ಯಂತ ಸಮರ್ಥ ಹಂತಕ’ ಎಂದು ಬಣ್ಣಿಸಿದ್ದು ಈ ಕಾರಣಕ್ಕಾಗಿ.

ಹೀಗೆ ವಿಶ್ವಾದ್ಯಂತ ತನ್ನ ದೇಶದ ಪ್ರಭಾವವನ್ನು ಸುನಾಮಿಯಂತೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಜಿನ್​ಪಿಂಗ್ ಮತ್ತೊಂದು ಮಹತ್ವಾಕಾಂಕ್ಷೆಯ ನಡೆ ಪ್ರದರ್ಶಿಸಿದ್ದಾರೆ. ಜಾಗತೀಕರಣದಿಂದ ಅಮೆರಿಕ ಹಿಂತೆಗೆಯುವ ಸೂಚನೆಯನ್ನು ಅಧ್ಯಕ್ಷ ಟ್ರಂಪ್ ನೀಡುತ್ತಿದ್ದಂತೆ ಹಾಗೇನಾದರೂ ಆದರೆ ಅಮೆರಿಕ ಖಾಲಿ ಮಾಡುವ ಸ್ಥಾನವನ್ನು ತುಂಬಲು ಚೀನಾ ತಯಾರಾಗಿದೆಯೆಂದು ವರ್ಷದ ಹಿಂದೆ ಡಾವೋಸ್​ನಲ್ಲಿ ಸ್ಪಷ್ಟವಾಗಿ ಘೊಷಿಸಿದರು.

ಚೀನೀ ಕಮ್ಯೂನಿಸ್ಟ್ ಪಕ್ಷದಲ್ಲಿ ಜಿನ್​ಪಿಂಗ್​ರ ಸ್ಥಾನಮಾನ ಅಗಣಿತವಾಗಿ ವೃದ್ಧಿಯಾದದ್ದು ಅವರ ಈ ಎಲ್ಲ ಸಾಧನೆಗಳಿಂದ. ಮಾವೋಗೆ ಮಾತ್ರ ಮೀಸಲಾಗಿದ್ದ ‘ಚೇರ್ಮನ್’ ಉಪಾಧಿಯನ್ನು ಜಿನ್​ಪಿಂಗ್ ಅವರಿಗೂ ಪಕ್ಷ ಕಳೆದ ಸೆಪ್ಟೆಂಬರ್​ನಲ್ಲಿ ಬಳಸತೊಡಗಿದ್ದು ಇನ್ನೆರಡು ತಿಂಗಳುಗಳಲ್ಲಿ ನಡೆಯಲಿದ್ದ ಪಕ್ಷದ ಮಹಾಸಭೆಯಲ್ಲಿ ಜಿನ್​ಪಿಂಗ್ ಅನಭಿಷಿಕ್ತ ಸಾಮ್ರಾಟರಾಗುವ ಸ್ಪಷ್ಟ ಸೂಚನೆಯನ್ನು ಹೊರಜಗತ್ತಿಗೆ ನೀಡಿತು. ನಂತರ, ಸಮಾಜವಾದವನ್ನು ಚೀನೀ ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ಹೊಂದಿಸಬೇಕೆಂಬ ‘ಜಿನ್​ಪಿಂಗ್ ಚಿಂತನೆ’ಗಳನ್ನು ತನ್ನ ಅಧಿಕೃತ ನೀತಿಯ ಭಾಗವನ್ನಾಗಿಸಿಕೊಳ್ಳಲು ಪಕ್ಷ ಮುಂದಾಯಿತು. ಇಂತಹ ಗೌರವ ಹಿಂದೆ ದಕ್ಕಿರುವುದು ಕಮ್ಯೂನಿಸ್ಟ್ ಸತ್ತೆಯ ಸ್ಥಾಪಕ ಮಾವೋ ಮತ್ತು ಆರ್ಥಿಕ ಅಭ್ಯುದಯದ ಹರಿಕಾರ ಡೆಂಗ್ ಅವರುಗಳಿಗೆ ಮಾತ್ರ.

ಜಿನ್​ಪಿಂಗ್​ರ ಈ ಎಲ್ಲ ಸಾಧನೆಗಳು ಚೀನಾಕ್ಕೇ ವರದಾನವಾದವು, ನಿಜ. ಆದರೆ ಇವುಗಳಿಂದ ಜಗತ್ತಿಗಾಗಲೀ, ಭಾರತಕ್ಕಾಗಲೀ ಒಳ್ಳೆಯದಾಗುವ ಸಾಧ್ಯತೆ ಇಲ್ಲ. ಇದರ ವಿಶ್ಲೇಷಣೆ ಮುಂದಿನವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

 

Leave a Reply

Your email address will not be published. Required fields are marked *

Back To Top