ಭಾರತ ಮತ್ತು ಭಾರತ ದ್ವೀಪಸ್ತೋಮಗಳ ಮರುಮೈತ್ರಿ

ಹಿಂದೂ ಮಹಾಸಾಗರದಲ್ಲಿ ಚೀನೀ ಪ್ರಭಾವಕ್ಕೆ ಕಡಿವಾಣ ಹಾಕಲು ಮೋದಿ ಹಲವಾರು ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಪಶ್ಚಿಮದಲ್ಲಿ ಇರಾನ್​ನ ಚಬಹಾರ್ ಬಂದರಿನ ಅಭಿವೃದ್ಧಿಯೊಂದಿಗೆ ಮಾರಿಷಸ್ ಮತ್ತು ಸೇಶಲ್ಸ್​ಗಳಲ್ಲಿ ನೌಕಾ ಸೌಲಭ್ಯಗಳನ್ನು ಭಾರತಕ್ಕಾಗಿ ಗಳಿಸಿಕೊಂಡಿದ್ದಾರೆ. ಸುಮಾತ್ರಾ ತೀರದಲ್ಲೂ ಭಾರತದ ನೌಕಾಪ್ರಭಾವ ನಿರ್ವಣವಾಗುವುದು ಮಹತ್ವದ ಬೆಳವಣಿಗೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂಡೋನೇಷ್ಯಾಗೆ ಕಳೆದ ವಾರ ನೀಡಿದ ಭೇಟಿಯು ಸಮಯ ಮತ್ತು ಉದ್ದೇಶಗಳ ದೃಷ್ಟಿಯಲ್ಲಿ ಮಹತ್ವಪೂರ್ಣ. ಹಲವು ದಶಕಗಳಿಂದಲೂ ಭಾರತ ಸರಿಸುಮಾರು ಮರೆತೇಬಿಟ್ಟಂತಿದ್ದ ಪೂರ್ವದ ಈ ದ್ವೀಪರಾಷ್ಟ್ರ ತನ್ನ ಆಯಕಟ್ಟಿನ ಸ್ಥಳದಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾಮರಿಕವಾಗಿ ಬಹಳ ಮಹತ್ವ ಗಳಿಸಿಕೊಂಡಿರುವುದನ್ನು ಗುರುತಿಸಿರುವ ಸ್ವಾಗತಾರ್ಹ ಬೆಳವಣಿಗೆಯ ಅವಲೋಕನದೊಂದಿಗೆ, ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯಗಳನ್ನೂ ಪರಿಚಯಿಸುವುದು ಇಂದಿನ ‘ಜಗದಗಲ’ದ ವಸ್ತುವಿಷಯ.

ಐತಿಹಾಸಿಕವಾಗಿ ‘ಸಾಂಸ್ಕೃತಿಕ ಬೃಹದ್​ಭಾರತ’ದ ಬಹುಮುಖ್ಯ ಭಾಗವಾಗಿದ್ದ ಇಂಡೋನೇಷ್ಯಾ ದ್ವೀಪಸ್ತೋಮ ಒಂದು ಕಾಲದಲ್ಲಿ ಭಾರತೀಯ ಹಿಂದೂ-ಬೌದ್ಧ ಸಂಸ್ಕೃತಿಯ ಅವಳಿ. ಇಂಡೋನೇಷ್ಯಾ ಹೆಸರಿನ ಮೂಲ ‘ಇಂಡಸ್’ ಅಂದರೆ ಇಂಡಿಯಾ ಮತ್ತು ‘ನೇಸಸ್’ ಅಂದರೆ ದ್ವೀಪಗಳು ಎಂಬ ಎರಡು ಗ್ರೀಕ್ ಪದಗಳು. ಅಂದರೆ, ಇಂಡೋನೇಷ್ಯಾ ಅಂದರೆ ‘ಭಾರತ ದ್ವೀಪಸ್ತೋಮ’ ಎಂದರ್ಥ.

ಜೀವನವಿಧಾನಕ್ಕೆ ರಾಮಾಯಣವೇ ಸ್ಪೂರ್ತಿ: ಮಧ್ಯಯುಗದಲ್ಲಿ ಅಲ್ಲಿಗೆ ಇಸ್ಲಾಮ್ ಕಾಲಿಟ್ಟು, ಇಂದು ಇಪ್ಪತ್ತಾರು ಕೋಟಿ ಜನಸಂಖ್ಯೆಯ ಇಂಡೋನೇಷ್ಯಾ ವಿಶ್ವದ ಬಹುದೊಡ್ಡ ಮುಸ್ಲಿಂ ರಾಷ್ಟ್ರವಾಗಿದ್ದರೂ ಅಲ್ಲಿನ ಜನ ತಮ್ಮ ಹಿಂದೂ ಬೇರುಗಳನ್ನು ಮರೆತಿಲ್ಲ. ಪೂರ್ವದ ಇರಿಯನ್ ಜಯ (ಪಶ್ಚಿಮ ನ್ಯೂಗಿನಿ) ಪರ್ಯಾಯ ದ್ವೀಪದಿಂದ ಹಿಡಿದು ಪಶ್ಚಿಮದ ಸುಮಾತ್ರಾ ದ್ವೀಪದವರೆಗೆ ಇಡಿ ದ್ವೀಪಸ್ತೋಮದ ಎಲ್ಲೆಡೆ ಇಂದಿಗೂ ರಾಮಾಯಣ ರಾಷ್ಟ್ರೀಯ ಮಹಾಕಾವ್ಯ. ಸಾಹಿತ್ಯ, ಸಂಗೀತ, ನಾಟಕ, ಕಲೆ, ಶಿಲ್ಪಕಲೆ ಮುಂತಾದ ತಮ್ಮ ಬದುಕಿನ ಎಲ್ಲ ಸಾಂಸ್ಕೃತಿಕ ರಂಗಗಳಿಗೆ, ಒಟ್ಟಾರೆ ಜೀವನವಿಧಾನಕ್ಕೆ ಇಂಡೋನೇಷಿಯನ್ನರು ಸ್ಪೂರ್ತಿ ಪಡೆಯುವುದು ರಾಮಾಯಣದಿಂದ. ರಾಮಾಯಣದ ಪಾತ್ರಗಳು ಅವರಿಗೆ ಪ್ರೀತಿವಾತ್ಸಲ್ಯ, ಹಕ್ಕುಬಾಧ್ಯತೆ, ಧೈರ್ಯಸಾಹಸ ಹಾಗೂ ಅಧ್ಯಾತ್ಮದ ಅಪ್ರತಿಮ ಪ್ರತೀಕಗಳು. ಐದಾರು ಶತಮಾನಗಳಿಂದ ಇಸ್ಲಾಮನ್ನು ಅನುಸರಿಸಿಕೊಂಡು ಬಂದಿರುವ ಇಂಡೋನೇಷಿಯನ್ನರಿಗೆ ರಾಮಾಯಣ ಇಷ್ಟೊಂದು ಪ್ರಿಯವಾಗಲು ಕಾರಣವೇನೆಂದು ಹುಡುಕಹೊರಟರೆ ಅವರ ಜೀವನವಿಧಾನ ಹಾಗೂ ಆಲೋಚನಾಕ್ರಮಗಳಲ್ಲೇ ಉತ್ತರ ಸಿಗುತ್ತದೆ. ಹಿಂದೂ ಮತ್ತು ಬೌದ್ಧ ತಾತ್ವಿಕತೆ ಒತ್ತುಕೊಡುವುದು ಬಹುತ್ವಕ್ಕೆ. ಇಲ್ಲಿ ಯಾವುದೂ ತಿರಸ್ಕಾರಾರ್ಹವಲ್ಲ. ವಿರೋಧಾಭಾಸಗಳ ಸಹಅಸ್ತಿತ್ವ, ಸಹಬಾಳ್ವೆ ಅತ್ಯಂತ ಸಹಜ. ಈ ಬಹುತ್ವದ ತಳಪಾಯದ ಮೇಲೆ ರಚಿತವಾದ ಇಂಡೋನೇಷಿಯನ್ ಮನೋಭಾವ ಇಸ್ಲಾಮನ್ನೂ ಅದೇ ಬಗೆಯಲ್ಲಿ ಅರ್ಥೈಸುತ್ತದೆ ಮತ್ತು ಆಚರಿಸುತ್ತದೆ. ಇಂಡೋನೇಷಿಯನ್ನರ ದೈನಂದಿನ ಜೀವನವಿಧಾನ ಹಿಂದೂ-ಮುಸ್ಲಿಂ ನಂಬಿಕೆ ಮತ್ತು ಆಚರಣೆಗಳ ಸಂಗಮವಾದದ್ದು ಹೀಗೆ. ಇದನ್ನು ಇಂಡೋನೇಷ್ಯಾದ ಸ್ವಾತಂತ್ರ್ಯ ಹೋರಾಟದ ಮುಂದಾಳು ಮತ್ತು ದೇಶದ ಮೊದಲ ಅಧ್ಯಕ್ಷ ಸುಕರ್ನೇ (ಸಂಸ್ಕೃತದ ಸುಕರ್ಣ) 1946ರ ಜನವರಿ 4ರಂದು ‘ದ ಹಿಂದೂ’ ಆಂಗ್ಲ ದೈನಿಕಕ್ಕೆ ಬರೆದ ವಿಶೇಷ ಲೇಖನದಲ್ಲಿ ಹೀಗೆ ವಿವರಿಸುತ್ತಾರೆ:

‘‘ನನ್ನ ಜನರಲ್ಲಿ ಪ್ರತಿಯೊಬ್ಬರ ರಕ್ತನಾಳಗಳಲ್ಲೂ ಹರಿಯುತ್ತಿರುವುದು ಭಾರತೀಯ ಪೂರ್ವಜರ ರಕ್ತ… ಎರಡು ಸಾವಿರ ವರ್ಷಗಳ ಹಿಂದೆ ನಿಮ್ಮ ದೇಶದ ಜನ ಸಹೋದರತ್ವದ ಪ್ರೀತಿಯನ್ನು ಹೊತ್ತು ಜಾವಾದ್ವೀಪ ಮತ್ತು ಸುವರ್ಣದ್ವೀಪಕ್ಕೆ ಬಂದರು. ಅವರು ಶ್ರೀವಿಜಯ, ಮಾತರಾಂ ಮತ್ತು ಮಾಯಾಪಹಿತ್​ನಂತಹ ಶಕ್ತಿಶಾಲಿ ಸಾಮ್ರಾಜ್ಯಗಳ ಸ್ಥಾಪನೆಗೆ ಚಾಲನೆ ನೀಡಿದರು. ನೀವು ಈಗಲೂ ಪೂಜಿಸುತ್ತಿರುವ ದೇವರುಗಳನ್ನೇ ಪೂಜಿಸಲು ನಾವಾಗ ಕಲಿತೆವು ಮತ್ತು ಇಂದಿಗೂ ನಿಮ್ಮ ಸಂಸ್ಕೃತಿಯ ಪಡಿಯಚ್ಚಿನಂತೇ ಇರುವ ಸಂಸ್ಕೃತಿಯನ್ನು ಸೃಷ್ಟಿಸಿಕೊಂಡೆವು. ಅನಂತರ ನಾವು ಇಸ್ಲಾಂನ ಕಡೆ ತಿರುಗಿದೆವು. ಆ ಧರ್ಮವನ್ನು ಸಹ ನಮ್ಮಲ್ಲಿಗೆ ತಂದವರು ಸಿಂಧೂನದಿಯ ಆಚೀಚಿನ ಕಡೆಯವರೇ’.

ಹಲವು ಶತಮಾನಗಳ ಕಾಲ ರಾಜಕೀಯವಾಗಿ ದೂರದೂರ ಸರಿದ ಭಾರತ ಮತ್ತು ಇಂಡೋನೇಷ್ಯಾಗಳನ್ನು ದ್ವಿತೀಯ ಮಹಾಯುದ್ಧಾನಂತರದ ವಸಾಹತುಶಾಹಿ ನಿಮೂಲನ ಪ್ರಕ್ರಿಯೆ ಮತ್ತೆ ಹತ್ತಿರವಾಗಿಸಿತು. ಸ್ವತಂತ್ರ ಭಾರತ ಇಂಡೋನೇಷ್ಯಾ ಸ್ವಾತಂತ್ರ್ಯದ ಬಹುದೊಡ್ಡ ಸಮರ್ಥಕನಾಗಿತ್ತು. ಆಗಿನ ಪ್ರಧಾನಮಂತ್ರಿ ಜವಾಹರ್​ಲಾಲ್ ನೆಹರು 1949ರಲ್ಲಿ ನವದೆಹಲಿಯಲ್ಲಿ ‘ದ್ವಿತೀಯ ಏಷ್ಯಾ ಭದ್ರತಾ ಸಮ್ಮೇಳನ’ವನ್ನು ಆಯೋಜಿಸಿದ್ದೇ ಡಚ್ಚರ ವಿರುದ್ಧ ಹೋರಾಡುತ್ತಿದ್ದ ಇಂಡೋನೇಷಿಯನ್ನರಿಗೆ ಹೊಸದಾಗಿ ಸ್ವತಂತ್ರಗೊಂಡಿದ್ದ ಏಶಿಯನ್ ದೇಶಗಳಲ್ಲಿ ಸಮರ್ಥನೆ ಮೂಡಿಸುವ ಉದ್ದೇಶದಿಂದ. ಆ ದಿನಗಳಲ್ಲಿ ಸುಕರ್ನೇ ನೇತೃತ್ವದ ಇಂಡೋನೇಷಿಯನ್ ಸ್ವಾತಂತ್ರ್ಯ ಸೇನೆಗೂ ಭಾರತ ಸಹಕಾರ ನೀಡಿತು. ನಂತರ ಎರಡು ದೇಶಗಳೂ ಯುಗೋಸ್ಲಾವಿಯಾ ಜತೆ ಸೇರಿ ಅಲಿಪ್ತ ಚಳವಳಿ ಹುಟ್ಟುಹಾಕಿದವು. ಆ ಚಳವಳಿಯ ಪೂರ್ವಭಾವಿ ಸಮಾವೇಶ ಜರುಗಿದ್ದೇ ಇಂಡೋನೇಷ್ಯಾದ ಬಾಂಡುಂಗ್​ನಲ್ಲಿ, ಏಪ್ರಿಲ್ 1955ರಲ್ಲಿ, ನೆಹರುರ ಪೂರ್ಣ ಮನಸ್ಸಿನ ಸಹಕಾರ ಹಾಗೂ ಪಾತ್ರದಿಂದ. ಒಟ್ಟಿನಲ್ಲಿ 1950ರ ದಶಕ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಸುವರ್ಣ ಕಾಲ.

ಚೀನಾ-ಪಾಕ್​ನೊಂದಿಗೆ ದೋಸ್ತಿ: ಆದರೆ, ಇದೇ ವಿಶ್ವಾಸ, ಮೈತ್ರಿ ಹೆಚ್ಚುಕಾಲ ಉಳಿಯಲಿಲ್ಲ. ಎಡಪಂಥೀಯರಾಗಿದ್ದ ಅಧ್ಯಕ್ಷ ಸುಕರ್ನೇ ತಾತ್ವಿಕವಾಗಿ ಮಾವೋ ತ್ಸೆ ತುಂಗ್​ರತ್ತ ವಾಲಿದ್ದಲ್ಲದೆ ತಮ್ಮ ದೇಶವನ್ನು ರಾಜಕೀಯ ಹಾಗೂ ಸಾಮರಿಕವಾಗಿ ಚೀನಾಗೆ ಹತ್ತಿರವಾಗಿಸಿದರು. ಅಂದರೆ ಭಾರತದ ವಿರುದ್ಧ ನಿಂತರು. ಇದು ಇಷ್ಟಕ್ಕೇ ನಿಲ್ಲದೆ, ಇಸ್ಲಾಂ ಸುಕರ್ನೇರನ್ನು ಪಾಕಿಸ್ತಾನಕ್ಕೂ ಹತ್ತಿರವಾಗಿಸಿತು. ಸುಕರ್ನೇರ ಚೀನಾ-ಪಾಕಿಸ್ತಾನ ಪ್ರೀತಿ ಯಾವ ಮಟ್ಟ ತಲುಪಿತೆಂದರೆ 1962ರ ಭಾರತ-ಚೀನಾ ಯುದ್ಧದಲ್ಲಿ ಅವರು ಬಹಿರಂಗವಾಗಿ ಚೀನಾದ ಪರ ನಿಂತರು ಮತ್ತು 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲೂ ಪಾಕಿಸ್ತಾನವನ್ನು ಬೆಂಬಲಿಸಿದರು. ಇಂಡೋನೇಷ್ಯಾದ ಸುಮಾತ್ರಾ ದ್ವೀಪಕ್ಕೆ ಕೇವಲ ನೂರೈವತ್ತು ಮೈಲು ಹತ್ತಿರದಲ್ಲಿದ್ದ ನಮ್ಮ ನಿಕೋಬಾರ್ ದ್ವೀಪಗಳ ಮೇಲೆ ದಾಳಿಯೆಸಗಿ ಭಾರತೀಯ ನೌಕಾಪಡೆಯ ಗಮನವನ್ನು ತಾನು ಅತ್ತ ಸೆಳೆಯುವುದಾಗಿಯೂ, ಪಾಕಿಸ್ತಾನ ಅವಕಾಶವನ್ನು ಉಪಯೋಗಿಸಿಕೊಂಡು ಭಾರತದ ಮೇಲೆ ನೌಕಾದಾಳಿ ನಡೆಸಬೇಕೆಂದೂ ಸುಕರ್ನೇ ಹೇಳಿದ್ದರೆಂದು ಪಾಕಿಸ್ತಾನದ ವಾಯುದಳದ ಮಾಜಿ ನೇತಾರ ಏರ್ ಮಾರ್ಷಲ್ ಅಸ್ಗರ್ ಖಾನ್ ಬರೆಯುತ್ತಾರೆ. ಆದರೆ ಏನು ಕಾರಣವೋ, ನಿಕೋಬಾರ್ ಮೇಲೆ ಇಂಡೋನೇಷ್ಯಾ ದಾಳಿಯೆಸಗಲಿಲ್ಲ. ಆದರೆ ತನ್ನ ಕುಬುದ್ಧಿಯನ್ನದು ನಮ್ಮ ರಾಜಧಾನಿ ದೆಹಲಿಯಲ್ಲೇ ತೋರಿಸಲು ನೋಡಿತು. ಯುದ್ಧದ ದಿನಗಳಲ್ಲಿ ಪಾಕ್ ಯುದ್ಧವಿಮಾನಗಳಿಗೆ ಗುರುತಾಗಬಾರದೆಂದು ರಾತ್ರಿಯ ವೇಳೆ ದೆಹಲಿ ನಗರ ಕತ್ತಲಲ್ಲಿ ಮುಳುಗಿರಬೇಕಾಗಿತ್ತು. ಬ್ಲಾಕ್ ಔಟ್ ನಿಯಮಗಳಿಗನುಗುಣವಾಗಿ ಎಲ್ಲೂ ದೀಪಗಳಿರಬಾರದಾಗಿತ್ತು. ಆದರೆ ಚಾಣಕ್ಯಪುರಿಯಲ್ಲಿನ ಇಂಡೋನೇಷಿಯನ್ ಮತ್ತು ಚೀನೀ ರಾಯಭಾರ ಕಚೇರಿಗಳು ತಮ್ಮ ಕಟ್ಟಡದ ಸುತ್ತಲೂ ಪ್ರಖರ ವಿದ್ಯುತ್ ದೀಪಗಳನ್ನು ಅಳವಡಿಸಿ ರಾತ್ರಿಯಿಡೀ ಉರಿಸತೊಡಗಿದವು. ಅವರ ಈ ಆಟ ನಿಂತದ್ದು ವಿದ್ಯುತ್ ಪೂರೈಕೆಯನ್ನು ಕತ್ತರಿಸುವುದಾಗಿ ದೆಹಲಿ ಆಡಳಿತ ಎಚ್ಚರಿಕೆ ನೀಡಿದಾಗ.

ಕ್ಷಿಪ್ರಕ್ರಾಂತಿ ಫಲ: ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತದಂತೆ. ಸುಕರ್ನೇರ ಹುಚ್ಚಾಟಗಳು ಅದಕ್ಕೆ ನಿದರ್ಶನ. ಚೀನಾದ ಪರವಾಗಿದ್ದ ಅವರ ಆಡಳಿತವನ್ನು ಕೊನೆಗೊಳಿಸಲು ದೇಶದಲ್ಲಿದ್ದ ಅವರ ವಿರೋಧಿಗಳು ಮತ್ತು ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ) ಒಟ್ಟುಗೂಡಿ 1965ರಲ್ಲಿ ವ್ಯೂಹ ರಚಿಸಿದವು. ಜನರಲ್ ಸುಹಾರ್ತೇ ಕ್ಷಿಪ್ರಕ್ರಾಂತಿಯನ್ನೆಸಗಿ ಸುಕರ್ನೇರ ಆಡಳಿತಕ್ಕೆ ಮಂಗಳ ಹಾಡಿದರು. ಅಷ್ಟಾಗಿಯೂ ನಮ್ಮೆರಡು ದೇಶಗಳ ನಡುವೆ ತಕ್ಷಣಕ್ಕೆ ಸಂಬಂಧಗಳು ಸುಧಾರಣೆಯಾಗಲಿಲ್ಲ. ಅದಕ್ಕೆ ಕಾರಣ ಅಂತಾರಾಷ್ಟ್ರೀಯ ರಾಜಕಾರಣ. ವಿಯೆಟ್ನಾಂನಲ್ಲಿ ಅಮೆರಿಕ ನಡೆಸುತ್ತಿದ್ದ ಯುದ್ಧವನ್ನು ಭಾರತ ವಿರೋಧಿಸಿದರೆ ಇಂಡೋನೇಷ್ಯಾದ ಸುಹಾರ್ತೇ ಆಡಳಿತ ಬೆಂಬಲಿಸಿತು. ಇತರ ಆಗ್ನೇಯ ಏಷ್ಯಾದ ದೇಶಗಳ ಜತೆ ಸೇರಿ ಇಂಡೋನೇಷ್ಯಾ 1967ರಲ್ಲಿ ‘ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಶನ್ಸ್’ (ಆಸಿಯಾನ್) ಸ್ಥಾಪಿಸಿದಾಗ ಅದಕ್ಕೆ ಸೇರಲು ಭಾರತಕ್ಕೂ ಆಹ್ವಾನವಿತ್ತು. ಆದರೆ, ಅಮೆರಿಕ ಬೆಂಬಲಿತ ಕೂಟಕ್ಕೆ ಸೇರಿದರೆ ಸೋವಿಯತ್ ಯೂನಿಯನ್ ಜತೆಗಿನ ತನ್ನ ಮೈತ್ರಿಗೆ ಕಂಟಕ ಒದಗಬಹುದೆಂದು ಅನುಮಾನಿಸಿದ ಭಾರತ ಆಸಿಯಾನ್​ನಿಂದ ದೂರ ಉಳಿಯಿತು. ಸೋವಿಯೆತ್ ಬೆಂಬಲಿತ ವಿಯೆಟ್ನಾಮ್ ಲಾವೋಸ್ ಮತ್ತು ಕಾಂಬೋಡಿಯಾಗಳ ಕಮ್ಯೂನಿಸ್ಟ್ ಸರ್ಕಾರಗಳ ಪರವಾಗಿ ನವದೆಹಲಿ ನಿಂತದ್ದರಿಂದಾಗಿ ಮುಂದಿನ ಎರಡು ದಶಕಗಳವರೆಗೆ ಇಂಡೋನೇಷ್ಯಾ ಸೇರಿದಂತೆ ಆಸಿಯಾನ್ ದೇಶಗಳ ಜತೆಗೂ ಭಾರತದ ಸಂಬಂಧಗಳು ಕಹಿಯಾಗಿಯೇ ಉಳಿದವು. 90ರ ದಶಕದಲ್ಲಿ ಶೀತಲಸಮರದ ಅಂತ್ಯದೊಂದಿಗೆ ಆಗ್ನೇಯ ಏಷ್ಯಾದಲ್ಲಿನ ಪ್ರಮುಖ ಬಿಕ್ಕಟ್ಟುಗಳು ತಹಬಂದಿಗೆ ಬಂದ ಕಾರಣ ನವದೆಹಲಿ ಮತ್ತು ಜಕಾರ್ತಾ ನಡುವೆ ಸ್ನೇಹವರ್ಧನೆಗೆ ಕಾಲ ಸನ್ನಿಹಿತವಾಗುತ್ತಿದೆಯೆನ್ನಿಸುವ ಹೊತ್ತಿಗೆ ಇಂಡೋನೇಷ್ಯಾ ರಾಜಕೀಯ ಅಸ್ಥಿರತೆಗೆ ಸಿಲುಕಿತು. ಛಿದ್ರಛಿದ್ರವಾಗಿ ಭೂಪಟದಿಂದಲೇ ಮಾಯವಾಗುವ ಅಪಾಯವನ್ನೂ ಆ ದ್ವೀಪರಾಷ್ಟ್ರ ಎದುರಿಸಿತು. ಛಿದ್ರಗೊಂಡ ಇಂಡೋನೇಷ್ಯಾದ ದ್ವೀಪಗಳು ಚೀನೀ ಸೇನಾ-ರಾಜಕೀಯ ಪ್ರಭಾವಕ್ಕೆ ಸಿಲುಕಬಹುದೆಂದು, ತತ್ಪರಿಣಾಮವಾಗಿ ಮಲಕ್ಕಾ ಜಲಸಂಧಿಯ ಮೂಲಕ ಸಾಗುವ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವಿನ ಬೃಹತ್ ವ್ಯಾಪಾರ ಮಾರ್ಗದಲ್ಲಿ ಮುಕ್ತಸಂಚಾರಕ್ಕೆ ಅವಕಾಶವಿಲ್ಲದಂತಾಗಬಹುದೆಂದು ಶಂಕಿಸಿದ ಅಮೆರಿಕದ ರಕ್ಷಣಾ ತಜ್ಞರು ಸುಮಾತ್ರಾ ಮತ್ತು ಜಾವಾ ದ್ವೀಪಗಳ ಮೇಲೆ ಹತೋಟಿ ಸ್ಥಾಪಿಸಲು ಭಾರತಕ್ಕೆ ಅಮೆರಿಕ ಸಹಕರಿಸಬೇಕೆಂದು ಸಲಹೆ ನೀಡಿದ್ದರು.

ಅದೃಷ್ಟವಶಾತ್, ಕಂಟಕಗಳು ದೂರವಾದಂತೆ ಇಂಡೋನೇಷ್ಯಾ ಐಕ್ಯತೆ ಕಾಪಾಡಿಕೊಂಡಿತು. 2004-14ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಸುಶೀಲೋ ಬಾಂಬಾಂಗ್ ಯುಧೊಯೊನೋ ರಾಜಕೀಯ ಸ್ಥಿರತೆಯನ್ನು ಬಲಗೊಳಿಸಿದ್ದಲ್ಲದೆ ರಾಷ್ಟ್ರವನ್ನು ಆರ್ಥಿಕ ಯಶಸ್ಸಿನ ಹಾದಿಯಲ್ಲೂ ಮುನ್ನಡೆಸಿದರು. ಅವರ ಸಕಾರಾತ್ಮಕ ಯೋಜನೆಗಳನ್ನು ಪ್ರಸಕ್ತ ಅಧ್ಯಕ್ಷ ಜೋಕೋ ವಿಡೋಡೋ (ಜೋಕೋವಿ) ಮತ್ತಷ್ಟು ವಿಸ್ತರಿಸಿದ್ದಾರೆ. ಇಂಡೋನೇಷ್ಯಾ ಇಂದು ಪ್ರಪಂಚದ ಹದಿನಾರನೇ ಬೃಹತ್ ಅರ್ಥವ್ಯವಸ್ಥೆ.

ಫಲಪ್ರದ ಭೇಟಿ: ನರೇಂದ್ರ ಮೋದಿ ಹಾಗೂ ಜೊಕೋವಿ ತಂತಮ್ಮ ದೇಶಗಳ ಚುಕ್ಕಾಣಿ ಹಿಡಿದದ್ದು ಸರಿಸುಮಾರು ಒಂದೇ ಸಮಯದಲ್ಲಿ (ಮೇ, ಜುಲೈ 2014). ಇಬ್ಬರು ನಾಯಕರೂ ವಿದೇಶ ಹಾಗೂ ರಕ್ಷಣಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ರಾಂತಿಕಾರಕ ಅಷ್ಟೇ ಸಕಾರಾತ್ಮಕ ಆಲೋಚನೆಗಳನ್ನು ಹೊಂದಿದ್ದಾರೆ. ಚೀನಾ ವಿರುದ್ಧ ಭಾರತದ ರಕ್ಷಣಾ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಮಜಬೂತುಗೊಳಿಸಬೇಕೆಂದು ಮೋದಿಯವರ ಗುರಿಯಾದರೆ, ಎರಡು ಮಹಾಸಾಗರಗಳು ಸಂಧಿಸುವ ಆಯಕಟ್ಟಿನ ಜಾಗದಲ್ಲಿರುವ ತನ್ನ ದೇಶವನ್ನು ಈ ವಲಯದ ಪ್ರಮುಖ ರಕ್ಷಣಾ ಹಾಗೂ ವ್ಯಾಪಾರದ ಕೊಂಡಿಯಾಗಿಸಬೇಕೆಂದು ಜೋಕೋವಿ ಬಯಸುತ್ತಾರೆ. ತಂತಮ್ಮ ಆಶಯಗಳು ಒಂದಕ್ಕೊಂಡು ತಳುಕು ಹಾಕಿಕೊಂಡಿವೆ ಹಾಗೂ ಅವುಗಳ ಈಡೇರಿಕೆಗೆ ಪರಸ್ಪರ ಸಹಕಾರ ಅತ್ಯಗತ್ಯ ಎಂದು ಇಬ್ಬರೂ ನಾಯಕರು ಅರಿತಿದ್ದಾರೆ. ಅದರ ಫಲವೇ ಕಳೆದ ಬುಧವಾರದ ಭೇಟಿ ಮತ್ತು ಮಾತುಕತೆ.

ಉಭಯ ದೇಶಗಳ ನಡುವೆ ಸಾಮರಿಕ, ಆರ್ಥಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಸ್ತೃ ಸಹಕಾರದ ಬಗೆಗಿನ ಒಪ್ಪಂದಗಳಿಗೆ ಸಹಿ ಬಿದ್ದಿದೆ. ಪ್ರಮುಖವಾಗಿ ನಾವು ಗಮನಿಸಬೇಕಾದದ್ದು ರಕ್ಷಣಾ ಕ್ಷೇತ್ರದಲ್ಲಿನ ಸಹಕಾರವನ್ನು. ಹತ್ತುಸಾವಿರಕ್ಕೂ ಮಿಕ್ಕಿದ ಸಣ್ಣ-ದೊಡ್ಡ ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾದ ರಕ್ಷಣೆಗೆ ಅಗತ್ಯವಿರುವುದು ಪ್ರಬಲ ನೌಕಾಸೇನೆ ಎಂದು ಅಧ್ಯಕ್ಷ ಜೋಕೋವಿ ಲೆಕ್ಕಾಚಾರ. ಜತೆಗೆ, ಉತ್ತರದ ಮಲೇಷ್ಯಾ ಜತೆಗಿನ ನೆಲ ಹಾಗೂ ಜಲ ಗಡಿ ಈಗ ಶಾಂತವಾಗಿದ್ದರೂ 60ರ ದಶಕದ ಆರಂಭದಲ್ಲಿ ಎದುರಾಗಿದ್ದ ಉದ್ರಿಕ್ತ ಸ್ಥಿತಿ ಹಾಗೂ ಯುದ್ಧದ ಅಪಾಯ ಮುಂದೊಂದು ದಿನ ಮರುಕಳಿಸಿದರೆ ಅಚ್ಚರಿಯಿಲ್ಲ. ಇದಲ್ಲದೆ, ದಕ್ಷಿಣ ಚೀನಾ ಸಮುದ್ರದಲ್ಲಿ ವೃದ್ಧಿಸುತ್ತಿರುವ ಚೀನೀ ಕುಕೃತ್ಯಗಳೂ ಇಂಡೋನೇಷ್ಯಾದ ಹಿತಾಸಕ್ತಿಗಳಿಗೆ ಅಪಾಯ ಒಡ್ಡಬಹುದು. ಇಂತಹ ಪರಿಸ್ಥಿತಿಯಲ್ಲಿ ಇಂಡೋನೇಷ್ಯಾದಲ್ಲಿ ರಕ್ಷಣಾ ಸೌಲಭ್ಯಗಳ ಅಭಿವೃದ್ಧಿಗೆ, ಶಸ್ತ್ರಾಸ್ತ್ರ ಉತ್ಪಾದನಾ ಸಮುಚ್ಚಯಗಳ ಸ್ಥಾಪನೆ ಜತೆಗೆ ಸುಮಾತ್ರಾದಲ್ಲಿ ಬಂದರುಗಳ ನಿರ್ವಣಕ್ಕೂ ಮೋದಿ ಮುಂದಾಗಿದ್ದಾರೆ.

ಇದು ಭಾರತಕ್ಕೂ ಪ್ರಯೋಜನಕಾರಿ. ಹಿಂದೂ ಮಹಾಸಾಗರದಲ್ಲಿ ವೃದ್ಧಿಸುತ್ತಿರುವ ಚೀನೀ ಪ್ರಭಾವಕ್ಕೆ ಕಡಿವಾಣ ಹಾಕಲು ಮೋದಿ ಹಲವಾರು ಕಾರ್ಯಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಪಶ್ಚಿಮದಲ್ಲಿ ಇರಾನ್​ನ ಚಬಹಾರ್ ಬಂದರಿನ ಅಭಿವೃದ್ಧಿಯೊಂದಿಗೆ ಮಾರಿಷಸ್ ಮತ್ತು ಸೇಶಲ್ಸ್​ಗಳಲ್ಲಿ

ನೌಕಾ ಸೌಲಭ್ಯಗಳನ್ನು ಭಾರತಕ್ಕಾಗಿ ಮೋದಿ ಗಳಿಸಿಕೊಂಡಿದ್ದಾರೆ. ಹಾಗೇ ಪೂರ್ವದಲ್ಲಿ ಮ್ಯಾನ್ಮಾರ್​ನ ತೀರದಲ್ಲೂ ಭಾರತದ ನೌಕಾಪಡೆ ಸಕ್ರಿಯವಾಗಿದೆ. ಈಗ ನಮ್ಮ ಅಂಡಮಾನ್-ನಿಕೋಬಾರ್ ದ್ವೀಪಗಳಿಗೆ ಹತ್ತಿರವಿರುವ ಹಾಗೂ ಪ್ರಮುಖ ಅಂತಾರಾಷ್ಟ್ರೀಯ ವ್ಯಾಪಾರಮಾರ್ಗವಾದ ಮಲಕ್ಕಾ ಜಲಸಂಧಿಗೆ ಹೊಂದಿಕೊಂಡೇ ಇರುವ ಸುಮಾತ್ರಾ ತೀರದಲ್ಲೂ ಭಾರತದ ನೌಕಾಪ್ರಭಾವ ನಿರ್ವಣವಾಗುವುದು ದೇಶದ ದೂರಗಾಮಿ ರಕ್ಷಣಾ ಹಿತಾಸಕ್ತಿಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *