ಮಾಲ್ದೀವ್ಸ್​ನಲ್ಲಿ ಕೊನೆಗೂ ಬಿದ್ದ ಚೀನಿ ವಿಕೆಟ್

| ಪ್ರೇಮಶೇಖರ

‘ಅಭಿವೃದ್ಧಿ ಯೋಜನೆಗಾಗಿ ನೆರವು’ ಎಂಬ ಅಮಾಯಕ ಹಣೆಪಟ್ಟಿಯಡಿಯಲ್ಲಿ ವಿದೇಶಗಳಲ್ಲಿ ಚೀನಾ ಆರಂಭಿಸಿರುವ ಬಹುತೇಕ ಯೋಜನೆಗಳು ನಿರರ್ಥಕ. ಈ ಯೋಜನೆಗಳ ವೆಚ್ಚದ ಒಂದಂಶವಷ್ಟೇ ನೆರವು; ದೊಡ್ಡ ಅಂಶ ಆ ದೇಶಗಳಿಗೆ ಚೀನಾದ ಸಾಲದ ರೂಪದಲ್ಲಿರುತ್ತದೆ ಮತ್ತು ಬಡ್ಡಿದರ ಅಂತಾರಾಷ್ಟ್ರಿಯ ಹಣಕಾಸು ಸಂಸ್ಥೆಗಳು ವಿಧಿಸುವ ಬಡ್ಡಿದರಕ್ಕಿಂತ ಹೆಚ್ಚಾಗಿರುತ್ತದೆ!

ಹಿಂದೂ ಮಹಾಸಾಗರದ ದ್ವೀಪರಾಷ್ಟ್ರ ಮಾಲ್ದೀವ್ಸ್​ನಲ್ಲಿ ಅಧಿಕಾರದ ಹಸ್ತಾಂತರಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 23ರ ಚುನಾವಣೆಯಲ್ಲಿ ಮತದಾರರಿಂದ ತಿರಸ್ಕೃತಗೊಂಡ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಇದೇ ನವೆಂಬರ್ 17ರಂದು ಅಧಿಕಾರ ತ್ಯಜಿಸಲಿದ್ದಾರೆ ಮತ್ತು ವಿಜಯಿ ಇಬ್ರಾಹಿಂ ಸೋಲಿಹ್ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಜರಿರುವುದಾಗಿ ಪ್ರಧಾನಮಂತ್ರಿಗಳ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ. ಮಾಲ್ದೀವ್ಸ್​ನಲ್ಲಿನ ರಾಜಕೀಯ ಬದಲಾವಣೆಯನ್ನು ಭಾರತ ತನಗೆಷ್ಟು ಮುಖ್ಯವೆಂದು ಪರಿಗಣಿಸಿದೆ ಎನ್ನುವುದು ಇದರಿಂದ ವೇದ್ಯವಾಗುತ್ತದೆ.

ಹೌದು, ಮಾಲ್ದೀವ್ಸ್​ನಲ್ಲಿ ಜರುಗಲಿರುವ ಈ ಅಧಿಕಾರ ಹಸ್ತಾಂತರ ಭಾರತಕ್ಕೆ ಮಹತ್ವಪೂರ್ಣ. ಇದು ಮನದಟ್ಟಾಗಬೇಕಾದರೆ ಅಧ್ಯಕ್ಷ ಯಮೀನ್ ಕಾಲದಲ್ಲಿ ಮಾಲ್ದೀವ್ಸ್ ಅನುಸರಿಸಿದ ವಿದೇಶನೀತಿಯ ಕಿರುಪರಿಚಯ ಅಗತ್ಯ. ತೀರಾ ಇತ್ತೀಚಿನವರೆಗೂ ಮಾಲ್ದೀವ್ಸ್​ನ ಪ್ರಮುಖ ರಾಜಕೀಯ ಹಾಗೂ ಆರ್ಥಿಕ ಸಹಯೋಗಿ ಭಾರತವಾಗಿತ್ತು. ಆದರೆ ಅದೆಲ್ಲವನ್ನೂ ಬದಲಾಯಿಸಿದ ಯಮೀನ್ ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಮಾಲ್ದೀವ್ಸ್ ಅನ್ನು ಭಾರತದಿಂದ ದೂರ ಒಯ್ದು ಚೀನಾಗೆ ಹತ್ತಿರಾಗಿಸಿದರು. ಈ ಬೆಳವಣಿಗೆಯ ವೇಗ ಕೌತುಕ ಹುಟ್ಟಿಸುವಂತಿದೆ. ಇದೆಲ್ಲವೂ ಆರಂಭವಾದದ್ದು 2014ರ ಸೆಪ್ಟೆಂಬರ್​ನಲ್ಲಿ, ಚೀನೀ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ರ ಮಾಲ್ದೀವ್ಸ್ ಭೇಟಿಯೊಂದಿಗೆ. ಮೂರು ವರ್ಷಗಳ ನಂತರ 2017ರ ಡಿಸೆಂಬರ್​ನಲ್ಲಿ ಅಧ್ಯಕ್ಷ ಯಮೀನ್ ಚೀನಾಗೆ ಭೇಟಿ ನೀಡಿ ಆ ದೇಶದ ಜತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕುವ ಹೊತ್ತಿಗೆ ಉತ್ತರದ ಆ ಕಮ್ಯೂನಿಸ್ಟ್ ದೇಶ ಮಾಲ್ದೀವ್ಸ್​ನ ಘನಿಷ್ಠ ಮಿತ್ರನಾಗಿಹೋಗಿತ್ತು ಮತ್ತು ಭಾರತ ಆ ದ್ವೀಪರಾಷ್ಟ್ರದಿಂದ ಬಹುದೂರ ಸರಿದುಹೋಗಿತ್ತು.

ನಮ್ಮ ವಿಶ್ಲೇಷಣೆಗೆ ಪೀಠಿಕೆಯಾಗಿ, ಯಮೀನ್ ತನ್ನ ದೇಶವನ್ನು ಭಾರತದಿಂದ ದೂರ ಒಯ್ದು ಚೀನಾಗೆ ಹತ್ತಿರಾಗಿಸಿದ್ದರ ಪ್ರಮುಖ ಹಂತಗಳನ್ನಿಲ್ಲಿ ಗುರುತಿಸೋಣ. ದೇಶದ ಏಕೈಕ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ವಿಸ್ತರಣಕ್ಕಾಗಿ ಭಾರತಿಯ ನಿರ್ಮಾಣ ಸಂಸ್ಥೆಯೊಂದಕ್ಕೆ ನೀಡಿದ್ದ ಕಾಂಟ್ರಾ್ಯಕ್ಟ್ ಅನ್ನು ರದ್ದುಪಡಿಸಿ ಅದನ್ನು ಚೀನಿ ಕಂಪನಿಯೊಂದಕ್ಕೆ ನೀಡುವುದರೊಂದಿಗೆ ಆರಂಭವಾದ ಯಮೀನ್​ರ ಚೀನಿಸಖ್ಯ ಮುಂದುವರಿದದ್ದು ರಾಜಧಾನಿ ಮಾಲೆ ಮತ್ತು ವಿಮಾನ ನಿಲ್ದಾಣವಿರುವ ಹುಲ್​ಹುಲೇ ದ್ವೀಪಗಳನ್ನು ಸಂರ್ಪಸುವ 2.1 ಕಿ.ಮೀ. ಉದ್ದದ ಸೇತುವೆಯ ನಿರ್ಮಾಣ ಕಾರ್ಯವನ್ನು ಚೀನಿ ಸರ್ಕಾರಿ ನಿಯಂತ್ರಿತ ‘ಸಿಸಿಸಿಸಿ ಸೆಕೆಂಡ್ ಹಾರ್ಬರ್ ಇಂಜಿನಿಯರಿಂಗ್’ ಕಂಪನಿಗೆ ಒಪ್ಪಿಸುವ ಮೂಲಕ. ಆಸಕ್ತಿಕರ ವಿಷಯವೆಂದರೆ ಫಿಲಿಪೀನ್ಸ್​ನಲ್ಲಿ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ದುರ್ವ್ಯಹಾರ ನಡೆಸಿದ ಆಪಾದನೆ ಮೇಲೆ ಈ ಚೀನಿ ಕಂಪನಿಯನ್ನು ವಿಶ್ವಬ್ಯಾಂಕ್ ಕಪ್ಪುಪಟ್ಟಿಯಲ್ಲಿಟ್ಟಿದೆ! ಇದೇ ಆಗಸ್ಟ್ 30ರಂದು ಉದ್ಘಾಟನೆಯಾದ ಈ ಸೀನಾಮಾಲೆ ಸೇತುವೆ ಅಥವಾ ‘ಚೈನಾ-ಮಾಲ್ದೀವ್ಸ್ ಸ್ನೇಹಸೇತುವೆ’ಗಾಗಿ ಮಾಲ್ದೀವ್ಸ್​ಗೆ ಚೀನಾ 100 ದಶಲಕ್ಷ ಡಾಲರ್ ಸಾಲ ನೀಡಿದೆ. ಜತೆಗೆ, ಮಾಲೆಯಲ್ಲಿ 25 ಅಂತಸ್ತುಗಳ ಆಸ್ಪತ್ರೆಯೊಂದರ ನಿರ್ವಣಕ್ಕೆ ತಗುಲುತ್ತಿರುವ 140 ದಶಲಕ್ಷ ಡಾಲರ್ ವೆಚ್ಚದ ದೊಡ್ಡಭಾಗವನ್ನು ಚೀನಾ ಸಾಲವಾಗಿ ನೀಡುತ್ತಿದೆ. ಇವೆರಡು ಯೋಜನೆಗಳ ಜತೆಗೆ ಇತರ ಸಣ್ಣಪುಟ್ಟ ನಿರ್ಮಾಣ ಕಾರ್ಯಗಳಿಗಾಗಿ ಪುಟ್ಟ ಮಾಲ್ದೀವ್ಸ್​ಗೆ ಚೀನಾ ನೀಡಿರುವ ಒಟ್ಟು ಸಾಲಕ್ಕೆ ವಾರ್ಷಿಕ ಬಡ್ಡಿ ಪಾವತಿಸುವುದೂ ಮಾಲ್ದೀವ್ಸ್​ಗೆ ಅಸಾಧ್ಯ ಎನ್ನುವುದು ವಿಶ್ವಬ್ಯಾಂಕ್ ಅಷ್ಟೇ ಅಲ್ಲ, ಮಾಲ್ದೀವ್ಸ್​ನ ಕೇಂದ್ರೀಯ ಬ್ಯಾಂಕ್​ನ ಅಭಿಪ್ರಾಯ ಕೂಡ. ಹಾಗಿದ್ದರೆ, ತಾನು ನೀಡಿದ ಹಣ ತನಗೆ ಹಿಂದಕ್ಕೆ ಬರಲಾರದು ಎಂದು ಸ್ಪಷ್ಟವಾಗಿ ಅರಿತಿದ್ದರೂ ಮಾಲ್ದೀವ್ಸ್​ನಲ್ಲಿ ಚೀನಾ ಇಷ್ಟು ಹಣವನ್ನೇಕೆ ಸುರಿಯುತ್ತಿದೆ? ಇದಕ್ಕೆ ಉತ್ತರಕ್ಕಾಗಿ ನಾವು ಮಾಲ್ದೀವ್ಸ್​ನ ಆಚೆಗೆ ಹೋಗಬೇಕು.

ಚೀನೀ ಅಧ್ಯಕ್ಷ ಜಿನ್​ಪಿಂಗ್ ತಮ್ಮ ಮಹತ್ವಾಕಾಂಕ್ಷಿ ಆದರೆ ಕರಾಳ ‘ಬೆಲ್ಟ್ ಆಂಡ್ ರೋಡ್’ ಯೋಜನೆಯ ಅಂಗವಾಗಿ ಬೀಜಿಂಗ್ ಸಂಗ್ರಹಿಸಿಟ್ಟಿರುವ ಮೂರು ಟ್ರಿಲಿಯನ್ ಡಾಲರ್​ಗಳ ಬೃಹತ್ ವಿದೇಶಿ ವಿನಿಮಯದ ಒಂದಂಶವನ್ನು ಬಳಸಿ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಅಷ್ಟೇಕೆ ಆಗ್ನೇಯ ಯುರೋಪ್​ನಲ್ಲಿನ ದೇಶಗಳನ್ನೂ ಆರ್ಥಿಕವಾಗಿ ಚೀನಾ ಜತೆ ಬಂಧಿಸಲು ವ್ಯಾಪಕ ಹಾಗೂ ದೂರಗಾಮಿ ಯೋಜನೆ ರೂಪಿಸಿದ್ದಾರೆ. ಇದರ ಅಂಗವಾಗಿ ಅವರು ಅನೇಕ ದೇಶಗಳಲ್ಲಿ ದೀರ್ಘರಸ್ತೆಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳ ನಿರ್ವಣಕಾರ್ಯ ಆರಂಭಿಸಿ ಅವೆಲ್ಲವುಗಳ ನಿರ್ಮಾಣ ಗುತ್ತಿಗೆಯನ್ನು ಚೀನಿ ಕಂಪನಿಗಳಿಗೆ ದೊರಕಿಸಿಕೊಟ್ಟಿದ್ದಾರೆ. ಅಷ್ಟೇ, ಅಲ್ಲ, ಅವೆಲ್ಲವುಗಳಲ್ಲೂ ಚೀನಿ ಕೆಲಸಗಾರರೇ ಅಧಿಕವಾಗಿರುವಂತೆಯೂ ವ್ಯವಸ್ಥೆ ಮಾಡಿದ್ದಾರೆ. ಚೀನಿ ಕಾರ್ಖಾನೆಗಳಿಗೆ ಜಗತ್ತಿನ ಎಲ್ಲೆಡೆಯಿಂದ ಕಚ್ಚಾವಸ್ತುಗಳ ಪೂರೈಕೆ, ಚೀನಿ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆಗಳ ವಿಸ್ತರಣೆ, ಚೀನಾದಲ್ಲಿ ನಿರುದ್ಯೋಗವನ್ನು ಕಡಿಮೆ ಮಾಡುವ ಹೊಸ ಉಪಾಯಗಳು ಜಿನ್​ಪಿಂಗ್​ರ ಯೋಜನೆಯ ಉದ್ದೇಶ ಎಂದು ಮೊದಮೊದಲು ನಂಬಲಾಗಿತ್ತು, ಅಥವಾ ಚೀನಿ ಮಾಧ್ಯಮಗಳ ಪ್ರಚಾರದ ಮೂಲಕ ಜಗತ್ತನ್ನು ಹಾಗೆ ನಂಬಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಬೆಕ್ಕು ಚೀಲದಿಂದ ಹೊರಬಿತ್ತು ಮತ್ತು ಜಿನ್​ಪಿಂಗ್​ರ ದುಷ್ಟ ಹುನ್ನಾರ ಜಗತ್ತಿಗೆ ಮನವರಿಕೆಯಾಯಿತು.

‘ಅಭಿವೃದ್ಧಿ ಯೋಜನೆಗಾಗಿ ನೆರವು’ ಎಂಬ ಅಮಾಯಕ ಹಣೆಪಟ್ಟಿಯಡಿಯಲ್ಲಿ ಚೀನಾ ವಿದೇಶಗಳಲ್ಲಿ ಆರಂಭಿಸಿರುವ ಬಹುತೇಕ ಯೋಜನೆಗಳು ನಿರರ್ಥಕ. ನೌಕಾಸಂಚಾರವೇನೂ ಹೆಚ್ಚಿಗಿರದ ಬಂದರು (ಶ್ರೀಲಂಕಾ), ಕಡಿಮೆ ಸಂಚಾರವಿರುವ ರಸ್ತೆ (ಮಾಂಟೆನೀಗ್ರೋ), ಲಾಭದಾಯಕವಲ್ಲದ ವಿಮಾನ ನಿಲ್ದಾಣಗಳು (ಝಾಂಬಿಯಾ, ಶ್ರೀಲಂಕಾ)- ಇಂತಹ ನಿರರ್ಥಕ ಯೋಜನೆಗಳಲ್ಲಿ ಕೆಲವು. ಜತೆಗೆ ತನಗಷ್ಟೇ ಉಪಯೋಗವಾಗುವ ಬಂದರುಗಳು, ದೀರ್ಘರಸ್ತೆ ಮತ್ತು ರೈಲುಮಾರ್ಗಗಳನ್ನು ಲಾವೋಸ್, ಕಾಂಬೋಡಿಯಾ, ಪಾಕಿಸ್ತಾನ, ಕೀನ್ಯಾ, ಜಿಬೂತಿ ಸೇರಿದಂತೆ ಹಲವಾರು ದೇಶಗಳಲ್ಲಿ ಚೀನಾ ನಿರ್ವಿುಸುತ್ತಿದೆ. ಈ ಯೋಜನೆಗಳ ವೆಚ್ಚದ ಒಂದಂಶವಷ್ಟೇ ನೆರವು; ದೊಡ್ಡ ಅಂಶ ಆ ದೇಶಗಳಿಗೆ ಚೀನಾದ ಸಾಲದ ರೂಪದಲ್ಲಿರುತ್ತದೆ ಮತ್ತು ಬಡ್ಡಿದರ ಅಂತಾರಾಷ್ಟ್ರಿಯ ಹಣಕಾಸು ಸಂಸ್ಥೆಗಳು ವಿಧಿಸುವ ಬಡ್ಡಿದರಕ್ಕಿಂತ ಹೆಚ್ಚಾಗಿರುತ್ತದೆ! ಇದೆಲ್ಲದರ ಅರ್ಥ, ಲಾಭದಾಯಯಕವಲ್ಲದ ಯೋಜನೆಗಳಿಗಾಗಿ ಸಾಲ ಮಾಡಿ ಹೂಡಿದ ಹಣ ಆ ದೇಶಗಳಿಗೆ ವಾಪಸ್ ಬರುವುದಿಲ್ಲ! ಅಂದರೆ ಚೀನಾದ ಸಾಲವನ್ನು ತೀರಿಸಲು ಆ ದೇಶಗಳಿಗೆ ಎಂದೂ ಸಾಧ್ಯವಾಗುವುದಿಲ್ಲ! ಜಿನ್​ಪಿಂಗ್​ರಿಗೆ ಬೇಕಾಗಿರುವುದು ಇದೇ.

ಮರುಪಾವತಿಯಾಗದ ಸಾಲಕ್ಕೆ ಬದಲಾಗಿ ತಾನು ನಿರ್ವಿುಸಿದ ಬಂದರು, ವಿಮಾನ ನಿಲ್ದಾಣ, ರಸ್ತೆಗಳನ್ನು ತನಗೆ ದೀರ್ಘಕಾಲಿಕ ಗುತ್ತಿಗೆಗೆ ನೀಡುವಂತೆ ಸಾಲಗಾರ ದೇಶಗಳನ್ನು ಒತ್ತಾಯಿಸಿ ಆ ದೇಶಗಳ ನೆಲದ ಮೇಲೆ ಚೀನಿ ಅಧಿಕಾರ ಸ್ಥಾಪಿಸುವುದು ಜಿನ್​ಪಿಂಗ್

ಹುನ್ನಾರ. ಇದನ್ನವರು ಈಗಾಗಲೇ ಶ್ರೀಲಂಕಾ, ಜಿಬೂತಿ, ಕೀನ್ಯಾದಲ್ಲಿ, ಲಾವೋಸ್, ಕಾಂಬೋಡಿಯಾದಲ್ಲಿ ಮಾಡಿದ್ದಾರೆ. ಮಾಂಟೆನೀಗ್ರೋ, ಪಾಕಿಸ್ತಾನಗಳಲ್ಲಿ ಮಾಡಹೊರಟಿದ್ದಾರೆ. ಈ ದೇಶಗಳು ಹೀಗೆ ತಿಳಿದೂತಿಳಿದೂ ಚೀನಿ ಸಾಲಸಂಕೋಲೆಯಲ್ಲಿ ಸಿಲುಕಿಹೋಗುತ್ತಿರುವುದರ ಮರ್ಮವೇನು? ಈ ಎಲ್ಲ ದೇಶಗಳಲ್ಲಿನ ಭ್ರಷ್ಟ ನಾಯಕರಿಗೆ ಹೇರಳ ಲಂಚ ನೀಡುವ ಮೂಲಕ ಅವರನ್ನು ತಮ್ಮ ಬುಟ್ಟಿಗೆ ಕೆಡವಿಕೊಂಡು ಅವರು ತಮ್ಮ ದೇಶಕ್ಕೇ ಹಾನಿಕಾರಕವಾದ ಒಪ್ಪಂದಗಳನ್ನು ಚೀನಾ ಜತೆ ಮಾಡಿಕೊಳ್ಳುವಂತೆ ಜಿನ್​ಪಿಂಗ್ ಮಾಡಿದ್ದಾರೆ. ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಷ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್, ಸಿಯೆರ್ರಾ ಲಿಯೋನ್​ನ ಮಾಜಿ ಅಧ್ಯಕ್ಷ ಎರ್ನೆಸ್ಟ್ ಬಾಯ್ ಕೊರೊಮಾ, ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್ ರಜಾಕ್, ಮಾಂಟೆನೀಗ್ರೋದ ಅಧ್ಯಕ್ಷ ಮಿಲೋ ಬುಕಾನೋವಿಚ್ ಅಂತಹ ಕೆಲವರು. ಅವರಲ್ಲೊಬ್ಬರು ಮಾಲ್ದೀವ್ಸ್​ನ

ಅಧ್ಯಕ್ಷ ಅಬ್ದುಲ್ಲಾ ಯಮೀನ್.

ತಮ್ಮ ಸ್ವಂತಲಾಭಕ್ಕಾಗಿ ಮಾಲ್ದೀವ್ಸ್ ಅನ್ನು ಚೀನಾದ ಸಾಲಸಂಕೋಲೆಗೆ ಸಿಲುಕಿಸಿದ ಯಮೀನ್ ಸಾಲಕ್ಕೆ ಬದಲಾಗಿ ಫೇದೂ ಫಿನೋಲ್ಹೂ ದ್ವೀಪವನ್ನು ಚೀನಾಗೆ ಗುತ್ತಿಗೆ ಕೊಟ್ಟಿದ್ದಾರೆ. ಈ ದ್ವೀಪ ಭಾರತದ ತೀರಕ್ಕೆ ಹತ್ತಿರದಲ್ಲಿದೆ ಎನ್ನುವುದು ನಾವು ಗಮನಿಸಬೇಕಾದ ಅಂಶ. ಪಾಕಿಸ್ತಾನದ ಗ್ವಾದಾರ್ ಬಂದರು, ಶ್ರೀಲಂಕಾದ ಹಂಬನ್​ತೋಟ, ಮ್ಯಾನ್ಮಾರ್​ನ ಕೋಕೋ ದ್ವೀಪಗಳಲ್ಲಿರುವ ಚೀನಿ ಸೇನಾನೆಲೆಗಳ ಜತೆ ಭಾರತಕ್ಕೆ ತೀರಾ ಹತ್ತಿರದಲ್ಲಿರುವ ಫೇದೂ ಫಿನೋಲ್ಹೂ ದ್ವೀಪವನ್ನೂ ಸೇರಿಸುವುದು ಜಿನ್​ಪಿಂಗ್​ರ ಉದ್ದೇಶ. ಈ ದ್ವೀಪವನ್ನು ಪಡೆದುಕೊಳ್ಳುವ ದೂರಗಾಮಿ ಹುನ್ನಾರದಿಂದಲೇ ಅವರು ಮಾಲ್ದೀವ್ಸ್​ಗೆ ಅಗಾಧ ಪ್ರಮಾಣದ ಸಾಲ ಕೊಟ್ಟದ್ದು, ಅಧ್ಯಕ್ಷ ಯಮೀನ್​ಗೆ ಕೈತುಂಬ ಲಂಚ ಕೊಟ್ಟದ್ದು! ಅಬ್ದುಲ್ಲಾ ಯಮೀನ್ ಸತ್ತೆಯಿಂದ ಕೆಳಗಿಳಿಯಬೇಕೆಂದು ಭಾರತ ಬಯಸಿದ್ದು ಈ ಕಾರಣಕ್ಕಾಗಿ.

ಯಮೀನ್ ಅಧಿಕಾರದಲ್ಲಿ ಮುಂದುವರಿದಿದ್ದೇ ಆದರೆ ಭಾರತಕ್ಕೆ ತಟ್ಟಬಹುದಾದ ಅನಾಹುತದ ಒಂದು ಚಿತ್ರಣವನ್ನು ನಿಮಗೆ ಕೊಡುತ್ತೇನೆ. 496 ಯುದ್ಧನೌಕೆಗಳನ್ನು ಹೊಂದಿರುವ ಬಲಿಷ್ಠ ಚೀನಿ ನೌಕಾಸೇನೆ 2012ರಲ್ಲಿ ತನ್ನ ಮೊಟ್ಟಮೊದಲ ವಿಮಾನವಾಹಕ ನೌಕೆಯನ್ನು ಪಡೆದುಕೊಂಡಿತು. ಅದಕ್ಕಿಂತಲೂ ಬೃಹತ್ತಾದ ಮತ್ತೆರಡು ನೌಕೆಗಳು ಈಗ ನಿರ್ವಣದ ಹಂತದಲ್ಲಿವೆ. ಅಷ್ಟೇ ಅಲ್ಲ, 2025ರ ಹೊತ್ತಿಗೆ 6 ಬೃಹತ್ ವಿಮಾನವಾಹಕ ನೌಕೆಗಳನ್ನು ಪಡೆದುಕೊಳ್ಳುವುದು ಮತ್ತು ತನ್ನ ನೌಕಾಸೇನೆಯ ಅರ್ಧವನ್ನು ಹಿಂದೂ ಮಹಾಸಾಗರದಲ್ಲಿ ನೆಲೆಗೊಳಿಸುವುದು ಚೀನಾದ ಯೋಜನೆ. ಆಗ ವಿಮಾನವಾಹಕ ನೌಕೆಯನ್ನೊಳಗೊಂಡ ಚೀನಿ ನೌಕಾಪಡೆ ಫೇದೂ ಫಿನೋಲ್ಹೂ ದ್ವೀಪದಲ್ಲಿ ಅಂದರೆ ನಮ್ಮ ನೌಕಾಪಡೆಯ ದಕ್ಷಿಣ ಕಮ್ಯಾಂಡ್ ಇರುವ ಕೊಚ್ಚಿ ಮತ್ತು ಕಾರವಾರದ ಸೀ-ಬರ್ಡ್ ನೌಕಾನೆಲೆಗಳ ಎದುರು! ಹೀಗೆ ಪುಟ್ಟದೇಶಗಳನ್ನು ತನ್ನ ಸಾಲಸಂಕೋಲೆಯೊಳಗೆ ಸಿಲುಕಿಸಿಕೊಂಡು ಅವುಗಳ ನೆಲವನ್ನು ಕಬಳಿಸಿ ಹೊಸ ವಸಾಹತುಶಾಹಿ ಯುಗವೊಂದನ್ನು ಆರಂಭಿಸುತ್ತಿರುವ ಚೀನಾದಿಂದ ತನಗೆ ತಟ್ಟಬಹುದಾದ ಅಪಾಯದ ಅರಿವು ಕೊನೆಗೂ ಅಮೆರಿಕಕ್ಕೆ ಆಗಿದೆ. ಹಿಂದಿನ ಒಬಾಮ ಸರ್ಕಾರದ ನಿರ್ಲಿಪ್ತತೆಗೆ ವಿರುದ್ಧವಾಗಿ ಪ್ರಸಕ್ತ ಟ್ರಂಪ್ ಸರ್ಕಾರ ಹಿಂದೂ ಮಹಾಸಾಗರ ವಲಯದಲ್ಲಿ ಭಾರತಕ್ಕೂ, ಫೆಸಿಫಿಕ್ ವಲಯದಲ್ಲಿ ಅಮೆರಿಕಕ್ಕೂ ಚೀನಾದಿಂದ ಒದಗಬಹುದಾದ ಅಪಾಯವನ್ನು ಸರಿಯಾಗಿ ಗುರುತಿಸಿ ಅದನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿದೆ. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ತನ್ನ ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ ನೌಕಾಪಡೆಗಳನ್ನು ಒಂದುಗೂಡಿಸಿದೆ ಮತ್ತು ಭಾರತದ ಜತೆ ಸಹಕಾರಕ್ಕೆ ಮುಂದಾಗಿದೆ. ಮಾಲ್ದೀವ್ಸ್​ನಲ್ಲಿ ಚೀನಿಪರ ಸರ್ಕಾರವನ್ನು ಅಂತ್ಯಗೊಳಿಸುವುದು ಹೀಗೆ ಭಾರತ ಮತ್ತು ಅಮೆರಿಕಗಳ ಜಂಟಿ ಹಿತಾಸಕ್ತಿಗಳ ಭಾಗವಾಗಿದೆ.

ಆಸಕ್ತಿಕರ ವಿಷಯವೆಂದರೆ ಚೀನಿ ಹುನ್ನಾರವನ್ನು ಅಮಾಯಕ ಸಾಲಗಾರ ದೇಶಗಳು ಒಂದೊಂದಾಗಿ ಅರ್ಥ ಮಾಡಿಕೊಳ್ಳುತ್ತಿರುವುದು, ಭಾರತ ಮತ್ತು ಅಮೆರಿಕಗಳ ಯೋಜನೆಗೆ ಪರೋಕ್ಷವಾಗಿ ಸಹಕಾರಿಯಾಗುತ್ತಿದೆ. ಸಿಯೆರ್ರಾ ಲಿಯೋನ್​ನ ಹೊಸ ಅಧ್ಯಕ್ಷ ಜ್ಯೂಲಿಯಸ್ ಮಾದಾ ಬಿಯೋ ಹಿಂದಿನ ಅಧ್ಯಕ್ಷ ಎರ್ನೆಸ್ಟ್ ಕೊರೊಮಾ ಚೀನಾ ಜತೆ ಮಾಡಿಕೊಂಡಿದ್ದ ಒಪ್ಪಂದಗಳನ್ನೆಲ್ಲ ರದ್ದುಪಡಿಸಿದ್ದಾರೆ. ಅಂತಹದೇ ತಪರಾಕಿಯನ್ನು ಮಲೇಷ್ಯಾದ ಹೊಸ ಪ್ರಧಾನಿ ಮಹತಿರ್ ಮಹಮದ್ ಚೀನಾಗೆ ನೀಡಿದ್ದಾರೆ. ಶರೀಫ್ ನಂತರ ಅಧಿಕಾರಕ್ಕೆ ಬಂದ ಶಾಹಿದ್ ಕಾಖನ್ ಅಬ್ಬಾಸಿ ಪಾಕಿಸ್ತಾನದಲ್ಲಿ ಯಾವುದೇ ಹೊಸ ಚೀನಿ ಯೋಜನೆಗಳಿಗೆ ಅನುಮತಿ ನೀಡುವುದನ್ನು ವರ್ಷದ ಹಿಂದೆಯೇ ತಡೆಹಿಡಿದುಬಿಟ್ಟರು. ಅದನ್ನೇ ಇಂದು ಇಮ್ರಾನ್ ಖಾನ್ ಮುಂದುವರಿಸಿದ್ದಾರೆ. ಬೊಲಿವಿಯಾದ ಸ್ವಾಭಿಮಾನಿ ಅಧ್ಯಕ್ಷ ಜುವಾನ್ ಇವೋ ಮೊರಾಲೆಸ್ ಐಮಾ ಅಂತೂ ಜಿನ್​ಪಿಂಗ್ ಒಡ್ಡಿದ ಎಲ್ಲ ಅಮಿಷಗಳನ್ನೂ ತಿರಸ್ಕರಿಸಿ ಚೀನಾವನ್ನು ದೂರ ಇಟ್ಟಿದ್ದಾರೆ.

ತಾನು ಕಟ್ಟಹೊರಟ ಸೌಧದ ಇಟ್ಟಿಗೆಗಳು ಹೀಗೆ ಒಂದೊಂದಾಗಿ ಕುಸಿಯುತ್ತಿರುವುದನ್ನು ನೋಡಿ ಜಿನ್​ಪಿಂಗ್ ಕೈಕಟ್ಟಿ ಕೂರುತ್ತಿಲ್ಲ. ಸುಲಭವಾಗಿ ಸೊಲೊಪ್ಪಿಕೊಳ್ಳುವ ಜಾಯಮಾನದವರಲ್ಲದ ಆತ ಮಾಲ್ದೀವ್ಸ್ ಸುಪ್ರೀಂ ಕೋರ್ಟ್ ತೀರ್ಮಾನ ಯಮೀನ್ ವಿರುದ್ಧ ಬಂದು ಆತ ಅಧಿಕಾರ ತ್ಯಜಿಸುವುದು ನಿಶ್ಚಿತವಾಗುತ್ತಿದ್ದಂತೆಯೇ ನೆರೆಯ ಶ್ರೀಲಂಕಾದಲ್ಲಿ ಕೈಚಳಕ ನಡೆಸಿದ್ದಾರೆ. ಮೂರು ವರ್ಷಗಳ ಹಿಂದೆ ಭಾರತವೇ ರಹಸ್ಯ ನಡೆಗಳಿಂದ ಕೊಲಂಬೋದಲ್ಲಿ ಅಧಿಕಾರಕ್ಕೇರಿಸಿದ್ದ ಮೈತ್ರಿಪಾಲ ಸಿರಿಸೇನರನ್ನು ಜಿನ್​ಪಿಂಗ್ ತಮ್ಮತ್ತ ಸೆಳೆದುಕೊಂಡು ಅವರನ್ನು ತಮ್ಮ ಹಳೆಯ ನಂಬಿಗಸ್ತ ಮಿತ್ರ ಮಹಿಂದ ರಾಜಪಕ್ಷರ ಜತೆಗೂಡಿಸಿಬಿಟ್ಟಿದ್ದಾರೆ. ಭಾರತದ ಮಿತ್ರ ರನಿಲ್ ವಿಕ್ರಮಸಿಂಘ ಅಧಿಕಾರ ಕಳೆದುಕೊಂಡಿದ್ದಾರೆ, ಅದೂ ದೆಹಲಿಗೆ ಬಂದು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಹಿಂತಿರುಗಿದ ಮರುಘಳಿಗೆಯೇ. ಇದೆಲ್ಲವನ್ನೂ ಜಿನ್​ಪಿಂಗ್ ಸಾಧಿಸಿದ್ದು ಭಾರತದ ಮೂಗಿನ ಕೆಳಗೇ!

ಶ್ರೀಲಂಕಾ ಈಗ ಭಾರತ ಮತ್ತು ಚೀನಾಗಳ ನಡುವಿನ ರಾಜತಾಂತ್ರಿಕ ಕಾಳಗದ ಕಣವಾಗಿದೆ. ಚೀನಾದ ಅಸ್ತ್ರ ಹಣವಾಗಿದ್ದರೆ ಭಾರತದ ಬೆನ್ನಿಗಿರುವುದು ಅಮೆರಿಕ ಮತ್ತು ಐರೋಪ್ಯ ಒಕ್ಕೂಟಗಳ ರಾಜತಾಂತ್ರಿಕ ಬೆಂಬಲ. ಈ ಬೆಂಬಲ ಆರ್ಥಿಕ ರೂಪವನ್ನೂ ಪಡೆದುಕೊಳ್ಳುತ್ತಿದೆ.