ಬದುಕೇ ಒಂದು ಶಾಶ್ವತ ಸಂದೇಶವಾದ ಶ್ರೀ ಅರವಿಂದರು

|ಪ್ರೇಮಶೇಖರ್​

ಅರವಿಂದರು ಸ್ವಾತಂತ್ರಾ್ಯಂದೋಲನದ ಕುರಿತಾಗಿ ಜನಜಾಗೃತಿ ಮೂಡಿಸಲು ದೇಶದಾದ್ಯಂತ ಸದಾ ಸಂಚಾರನಿರತರಾಗಿರುತ್ತಿದ್ದರು. ಜನಜಾಗೃತಿಗಾಗಿ ಕೈಗೊಂಡ ಈ ದೇಶಸಂಚಾರ ಅರವಿಂದರಲ್ಲಿ ಆಧ್ಯಾತಿಕ ಜಾಗೃತಿಗೆ ನಾಂದಿಹಾಡಿದ್ದು ಅವರ ಬದುಕಿನಲ್ಲಷ್ಟೇ ಅಲ್ಲ, ರಾಷ್ಟ್ರದ ಇತಿಹಾಸದಲ್ಲೂ ಒಂದು ಮಹತ್ತರ ತಿರುವು.

‘ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ಶ್ರೀ ಅರವಿಂದರು ಪ್ರವಾದಿ, ದಾರ್ಶನಿಕ, ರಾಜನೀತಿಜ್ಞ ಮತ್ತು ರಾಜಕಾರಣಿಯ ಪಾತ್ರಗಳನ್ನು ಪರಿಪೂರ್ಣ ಮತ್ತು ಕೌಶಲಪೂರ್ಣ ಸಹಜತೆಯಿಂದ ತಮ್ಮೊಳಗೆ ಒಟ್ಟುಗೂಡಿಸಿಕೊಂಡಿದ್ದರು. ರಾಷ್ಟ್ರದ ಭವಿಷ್ಯದ ಬಗ್ಗೆ ಅವರಿಗಿದ್ದ ಸ್ಪಟಿಕಶುಭ್ರ, ದೂರಗಾಮಿ ದೃಷ್ಟಿಯು ಅವರ ಚಿಂತನೆಯನ್ನು ತಕ್ಷಣದ ಅಗತ್ಯಗಳಿಗಷ್ಟೇ ಸೀಮಿತಗೊಳಿಸಲಿಲ್ಲ. ಅವರದು ಆದರ್ಶವಾದಿ ರಾಜಕೀಯ ಸಿದ್ಧಾಂತವಾದರೂ ಅದು ಸ್ವರಾಜ್ಯದ ಗುರಿಸಾಧನೆಗೆ ಪ್ರಾಯೋಗಿಕವಾಗಿ ಉಪಯುಕ್ತವೆನಿಸುವ ರಣತಂತ್ರವನ್ನು ಬಳಸಲು ಅವರನ್ನೇನೂ ತಡೆಯಲಿಲ್ಲ. ಒಬ್ಬ ಪ್ರವಾದಿ ಮತ್ತು ದಾರ್ಶನಿಕನಾಗಿ ಅವರಿಗೆ ‘ಪೂರ್ಣಸ್ವರಾಜ್’ ಅಂದರೆ ಪೂರ್ಣಸ್ವಾತಂತ್ರ್ಯವಷ್ಟೇ ಅಲ್ಲದೆ ರಾಷ್ಟ್ರದ ಭವಿಷ್ಯದ ಬಗೆಗೂ ಸ್ಪಷ್ಟ ದೃಷ್ಟಿಯಿತ್ತು. ಅವರ ಸಮಕಾಲೀನ ನಾಯಕರು ತಮ್ಮ ಗಮನವನ್ನು ರಾಷ್ಟ್ರದ ರಾಜಕೀಯ ಸ್ವಾತಂತ್ರ್ಯಕ್ಕಷ್ಟೇ ಸೀಮಿತಗೊಳಿಸಿಕೊಂಡಿದ್ದರೆ, ಶ್ರೀ ಅರವಿಂದರ ದೃಷ್ಟಿ ತಕ್ಷಣದ ಗುರಿಯನ್ನು ದಾಟಿ ಭಾರತ ವಿಶ್ವಗುರುವಾಗುವ ಬಗ್ಗೆ, ಮಾನವ ಜನಾಂಗವನ್ನು ಬೌದ್ಧಿಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ ಪರಿಪೂರ್ಣಗೊಳಿಸುವ ದೈವನಿಯಾಮಕ ಗುರಿಯ ಬಗ್ಗೆ ವಿಸ್ತರಿಸಿತ್ತು. ಆದರೆ, ರಾಷ್ಟ್ರದ ಈ ಉನ್ನತ ಗುರಿಯನ್ನು ಸಾಧಿಸಲು ಮೊದಲಿಗೆ ಅತ್ಯಗತ್ಯವಾಗಿ ಬೇಕಾಗಿರುವುದು ರಾಜಕೀಯ ಸ್ವಾತಂತ್ರ್ಯ ಎಂದು ಶ್ರೀ ಅರವಿಂದರ ತೀಕ್ಷ್ಣ ರಾಜಕೀಯ ಹೊಳಹು ಗುರುತಿಸಿತ್ತು’.

ಕವಿ, ನಾಟಕಕಾರ, ಚಿಂತಕ, ಸ್ವಾತಂತ್ರ್ಯ ಹೋರಾಟಗಾರ, ಮಹಾಯೋಗಿ ಅರವಿಂದರ ಬಗ್ಗೆ ಗೌರವಾನ್ವಿತ ಇತಿಹಾಸಕಾರ ಆರ್.ಸಿ. ಮಜುಂದಾರ್ ಹೇಳುವ ಮಾತುಗಳಿವು. ಅರವಿಂದರ 68ನೇ ಪುಣ್ಯಸ್ಮರಣೆಯ ದಿನವಾದ ಇಂದು ಆ ದಿವ್ಯಚೇತನದ ಬಗೆಗಿನ ಈ ಬರಹಕ್ಕೆ ಮಜುಂದಾರ್​ರ

ಈ ಅವಲೋಕನ ಸೂಕ್ತ ಪೀಠಿಕೆಯಾಗುತ್ತದೆ. ನಮಗೆ ತಿಳಿದಿರುವ ಇತರೆಲ್ಲ ಸ್ವಾತಂತ್ರ್ಯ ಹೋರಾಟಗಾರರಿಗಿಂತಲೂ ಅರವಿಂದರು ಹಲವು ಬಗೆಯಲ್ಲಿ ವಿಶಿಷ್ಟವೆನಿಸಿದ್ದರು ಎಂಬ ಸ್ಪಷ್ಟ ಸುಳಿವನ್ನು ಈ ಮಾತುಗಳು ನೀಡುತ್ತವೆ.

‘ಶ್ರೀ ಅರವಿಂದರು’ ಎಂದು ನಮಗೆ ಪರಿಚಿತರಾಗಿರುವ ಆರಬಿಂದೋ ಘೊಷ್ ಹುಟ್ಟಿದ್ದು ಕೊಲ್ಕತಾದಲ್ಲಿ. ತಂದೆ ಕೃಷ್ಣಧನ್ ಘೊಷ್ ವೈದ್ಯಕೀಯ ವೃತ್ತಿಯಲ್ಲಿದ್ದವರು ಮತ್ತು ಬ್ರಹ್ಮಸಮಾಜದ ಸದಸ್ಯರಾಗಿದ್ದವರು. ತಾಯಿ ಸ್ವರ್ಣಲತಾ ದೇವಿಯವರ ತವರಿನ ಕಡೆಯಿಂದಲೂ ಅರವಿಂದರಿಗೆ ಬ್ರಹ್ಮಸಮಾಜದ ನಂಟಿತ್ತು.

ಅರವಿಂದರ ಶಿಕ್ಷಣವೆಲ್ಲ ಪಾಶ್ಚಾತ್ಯ ಶಿಕ್ಷಣಕ್ರಮದಂತೆ ನಡೆಯಿತು. ತಂದೆ ಕೃಷ್ಣಧನ್ ತಮ್ಮ ಇಬ್ಬರು ಹಿರಿಯ ಗಂಡುಮಕ್ಕಳ ಜತೆ ಐದು ವರ್ಷದ ಬಾಲಕ ಅರವಿಂದರನ್ನು ಡಾರ್ಜಿಲಿಂಗ್​ಗೆ ಪ್ರಾಥಮಿಕ ಶಿಕ್ಷಣಕ್ಕಾಗಿ ಕಳುಹಿಸಿದರು. ಮುಂದಿನ 2 ವರ್ಷಗಳಲ್ಲಿ ಅರವಿಂದ ಇಂಗ್ಲೆಂಡಿಗೆ ಪ್ರಯಾಣ ಮಾಡಿದರು. ಅಲ್ಲಿ ಮೊದಲಿಗೆ ಲಂಡನ್​ನ ಸೈಂಟ್ ಪಾಲ್ ಶಾಲೆ ನಂತರ ಕೇಂಬ್ರಿಜ್​ನ ಕಿಂಗ್ಸ್ ಕಾಲೇಜ್​ನಲ್ಲಿ ಅರವಿಂದರ ಶಿಕ್ಷಣ ಸಾಗಿತು. ವಿವಿಧ ಕಾರಣಗಳಿಂದಾಗಿ ಕೃಷ್ಣಧನ್​ರ ಆದಾಯ ಸೀಮಿತವಾಗುತ್ತ ಸಾಗಿ, ಜತೆಗೆ ಪತ್ನಿಯ ನಿರಂತರ ಅನಾರೋಗ್ಯವೂ ಸೇರಿಕೊಂಡದ್ದರಿಂದಾಗಿ ಅವರು ಅರವಿಂದರಿಗೆ ಹಣ ಕಳುಹಿಸುವುದು ಕಷ್ಟವಾಗತೊಡಗಿತು. ‘ನನ್ನಿಂದ ಹಣ ಕಳುಹಿಸಲಾಗುತ್ತಿರಲಿಲ್ಲ. ಆದರೆ ನಾನು ಮಗನಿಗೆ ಬೇರೊಂದನ್ನು ಕಳುಹಿಸಿದೆ’ ಎಂದು ನಂತರ ಬರೆಯುವ ಕೃಷ್ಣಧನ್, ಬ್ರಿಟಿಷ್ ವಸಾಹತುಶಾಹಿ ಆಡಳಿತ ಭಾರತೀಯರ ಮೇಲೆ ಎಸಗುತ್ತಿದ್ದ ದೌರ್ಜನ್ಯಗಳ ವಿವರಗಳಿದ್ದ ಪೇಪರ್ ಕ್ಲಿಪಿಂಗ್​ಗಳನ್ನು ಮಗನಿಗೆ ಕಳುಹಿಸುತ್ತಿದ್ದುದಾಗಿ ಹೇಳುತ್ತಾರೆ. ಅಷ್ಟರಲ್ಲಾಗಲೆ ಇಂಗ್ಲಿಷ್ ಜತೆಗೆ ಲ್ಯಾಟಿನ್ ಹಾಗೂ ಗ್ರೀಕ್​ನಲ್ಲೂ ಪ್ರಭುತ್ವ ಗಳಿಸಿದ್ದ, ನಾಟಕ, ಕವಿತೆಗಳನ್ನು ರಚಿಸುತ್ತಿದ್ದ, ಐಸಿಎಸ್ ಪರೀಕ್ಷೆಯನ್ನು ಪಾಸ್ ಮಾಡಿ ಬ್ರಿಟಿಷ್ ಭಾರತದಲ್ಲಿ ಕೈತುಂಬ ಸಂಬಳ ತರುವ ಉದ್ಯೋಗದ ಕನಸು ಕಾಣುತ್ತಿದ್ದ ಇಪ್ಪತ್ತರ ಅರವಿಂದ ತನ್ನ ಬದುಕಿನ ಗುರಿಯನ್ನು ಬದಲಿಸಿಕೊಳ್ಳಲು ಪ್ರೇರಣೆ ದೊರೆತದ್ದು ಆಗ.

ಲಂಡನ್​ನಲ್ಲಿ ರಹಸ್ಯವಾಗಿ ಕಾರ್ಯನಿರತವಾಗಿದ್ದ ಬ್ರಿಟಿಷ್-ವಿರೋಧಿ ಭಾರತೀಯರ ಸಂಘಟನೆಯೊಂದರ ಸದಸ್ಯರಾದ ಅರವಿಂದರು ಬ್ರಿಟಿಷ್ ಸತ್ತೆಯ ಅಂತ್ಯದ ಬಗ್ಗೆ, ದೇಶದ ಸ್ವಾತಂತ್ರ್ಯದ ಬಗ್ಗೆ ಗಂಭೀರವಾಗಿ ಚಿಂತಿಸತೊಡಗಿದರು. ಐಸಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಕಡ್ಡಾಯವಾಗಿದ್ದ ಕುದುರೆ ಸವಾರಿಗೆ ಹಾಜರಾಗದೆ ಅರವಿಂದರು ಬ್ರಿಟಿಷ್ ದಮನಕಾರಿ ಸರ್ಕಾರದ ನೌಕರನಾಗುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡರು. ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಉದಯವಾಗಿತ್ತು. 1893ರಲ್ಲಿ ಇಂಗ್ಲೆಂಡ್ ತೊರೆದು ಭಾರತಕ್ಕೆ ಹಿಂದಿರುಗಿದ ಅರವಿಂದರು ಬರೋಡಾದ ಮಹಾರಾಜರ ಆಹ್ವಾನವನ್ನು ಸ್ವೀಕರಿಸಿ ಅಲ್ಲಿನ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್ ಸಾಹಿತ್ಯದ ಬೋಧಕರಾದರು. ಅದೇ ವೇಳೆಗೆ ಅಸಕ್ತಿಯಿಂದ ಸಂಸ್ಕೃತವನ್ನು ಕಲಿಯತೊಡಗಿ ಕ್ಷಿಪ್ರಕಾಲದಲ್ಲೇ ಪ್ರಭುತ್ವ ಸಾಧಿಸಿ ಮಹಾಭಾರತದ ಭಾಗವೊಂದನ್ನು ಇಂಗ್ಲಿಷ್​ಗೆ ಅನುವಾದಿಸಿದರು. ಅದಾಗಲೇ ಆಳವಾಗಿ ಪರಿಚಯಿಸಿಕೊಂಡಿದ್ದ ಪಾಶ್ಚಿಮಾತ್ಯ ಸಾಹಿತ್ಯ ಮತ್ತು ದರ್ಶನಶಾಸ್ತ್ರಗಳ ಜತೆ ಪೌರ್ವಾತ್ಯ ಸಾಹಿತ್ಯ ಮತ್ತು ತತ್ತ್ವಶಾಸ್ತ್ರವನ್ನು ಮೂಲಗ್ರಂಥಗಳಿಂದಲೇ ಅರಿಯುವ ಅವರ ಪ್ರಯತ್ನ ಆರಂಭವಾದದ್ದು ಹೀಗೆ. ಆ ಆವಧಿಯಲ್ಲಿ ಹೋಮರ್, ಶೇಕ್ಸ್​ಪಿಯರ್ ಮುಂತಾದ ಯುರೋಪಿಯನ್ ಕವಿ-ನಾಟಕಕಾರರು ಮತ್ತು ವ್ಯಾಸ, ಕಾಳಿದಾಸರಂತಹ ಭಾರತೀಯ ಕವಿ-ನಾಟಕಕಾರರ ತೌಲನಿಕ ಅಧ್ಯಯನ ಅವರ ಅಭಿರುಚಿಯಾಗಿದ್ದೂ ಉಂಟು. ನಂತರ ಬಂಗಾಲಕ್ಕೆ ಹಿಂದಿರುಗಿ ಬಿಪಿನ್​ಚಂದ್ರ ಪಾಲ್ ಜತೆ ಸೇರಿ ‘ಬಂದೇ ಮಾತರಂ’ ಪತ್ರಿಕೆಯನ್ನು ಹುಟ್ಟುಹಾಕಿದ ಮೇಲೆ ಅವರ ತೌಲನಿಕ ಅಧ್ಯಯನ ಹಾಗೂ ವಿಶ್ಲೇಷಣೆ ಪೂರ್ವ-ಪಶ್ಚಿಮಗಳ ಐತಿಹಾಸಿಕ ಸಹಕಾರ ಮತ್ತು ಸಂಘರ್ಷಕ್ಕೂ ವಿಸ್ತರಿಸಿತು. ಮಂಚೂರಿಯಾ ಮೇಲೆ ರಷ್ಯಾದ ಆಕ್ರಮಣ, ಅದೇ ರಷ್ಯಾದ ಮೇಲೆ ಜಪಾನ್​ನ ವಿಜಯದಂತಹ ಸಮಕಾಲೀನ ಪ್ರಕರಣಗಳು, ಪೌರ್ವಾತ್ಯ ಜಗತ್ತಿನ ಮೇಲೆ ಪಾಶ್ಚಿಮಾತ್ಯ ಜಗತ್ತಿನ ದಬ್ಬಾಳಿಕೆ, ಪಾಶ್ಚಿಮಾತ್ಯ ಜಗತ್ತಿನ ಮೇಲೆ ಪೌರ್ವಾತ್ಯ ಜಗತ್ತಿನ ವಿಜಯ, ಅದು ಅಂತಿಮವಾಗಿ ಆಧ್ಯಾತ್ಮಿಕ ಮಾರ್ಗದರ್ಶನವಾಗಿ ಬದಲಾಗುವ ಪರಿ ಅರವಿಂದರ ಲೇಖನಗಳಲ್ಲಿ ಮತ್ತೆಮತ್ತೆ ಪ್ರಖರವಾಗಿ ಕಾಣಿಸಿಕೊಂಡು ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಲು ಭಾರತೀಯರನ್ನು ಉಗ್ರವಾಗಿ ಪ್ರೇರೇಪಿಸತೊಡಗಿತು. ಸ್ವಾತಂತ್ರ್ಯಕ್ಕಾಗಿ ಹೋರಾಡುವ ತಮ್ಮ ಮನದಿಂಗಿತವನ್ನು, ಪತ್ನಿ ಮೃಣಾಲಿನಿ ದೇವಿಯವರಿಗೆ 1905ರ ಆಗಸ್ಟ್

ನಲ್ಲಿ ಬರೆದ ಪತ್ರದಲ್ಲಿ ಅರವಿಂದರು ಹೀಗೆ ಬಣ್ಣಿಸುತ್ತಾರೆ- ‘ನನ್ನ ದೇಶವನ್ನು ನಾನು ನನ್ನ ತಾಯಿಯಾಗಿ ಕಾಣುತ್ತೇನೆ. ನಾನಾಕೆಯನ್ನು ಪ್ರೀತಿಸುತ್ತೇನೆ, ಪೂಜಿಸುತ್ತೇನೆ. ರಕ್ಕಸನೊಬ್ಬ ತನ್ನ ತಾಯಿಯ ಎದೆಯ ಮೇಲೆ ಕುಳಿತು ರಕ್ತ ಹೀರುತ್ತಿದ್ದರೆ ಮಗನಾದವನು ಏನು ಮಾಡುತ್ತಾನೆ?’.

ಅರವಿಂದರು ಸ್ವಾತಂತ್ರಾ್ಯಂದೋಲನದಲ್ಲಿ ನೇರವಾಗಿ ಸಕ್ರಿಯರಾಗಿದ್ದ 1906-10ರ ಆವಧಿಯಲ್ಲಿ ಅವರು ಬೆಂಬಲವಾಗಿ ನಿಂತದ್ದು ಲೋಕಮಾನ್ಯ ತಿಲಕರ ತತ್ತ್ವಗಳ ಪರವಾಗಿ. ಆ ಸಮಯದಲ್ಲಿ ಕಾಂಗ್ರೆಸ್ ‘ಮಂದಗಾಮಿಗಳು’ ಮತ್ತು ‘ಉಗ್ರಗಾಮಿಗಳು’ ಎಂದು 2 ಬಣಗಳಾಗಿ ಸೀಳಿತ್ತು. ಗೋಪಾಲಕೃಷ್ಣ ಗೋಖಲೆಯವರ ನೇತೃತ್ವದಲ್ಲಿನ ಮಂದಗಾಮಿಗಳು ಹಂತಹಂತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ಮುಂದೆ ಪಿಟಿಷನ್ ಸಲ್ಲಿಸುತ್ತ, ಬ್ರಿಟಿಷ್ ಸರ್ಕಾರ ಆಗಾಗ ನೀಡುತ್ತಿದ್ದ ಸುಧಾರಣೆಗಳೆಂಬ ತಾತ್ಕಾಲಿಕ ಶಮನಕಾರಕಗಳನ್ನು ‘ಜೀಯ, ಹಸಾದ’ವೆಂದು ಸ್ವೀಕರಿಸುತ್ತಿದ್ದ ಪರಿ ಅರವಿಂದರಿಗೆ ಸಮ್ಮತವಾಗಲಿಲ್ಲ. ಉಗ್ರಗಾಮಿ ಬಣದ ನಾಯಕನಾಗಿ, ‘ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು, ನಾನದನ್ನು ಪಡೆದೇ ತೀರುತ್ತೇನೆ’ ಎಂದು ಘೊಷಿಸಿದ ತಿಲಕರು ಅರವಿಂದರಿಗೆ ಗೌರವಾರ್ಹವೆನಿಸಿದರು. ತಿಲಕರ ತತ್ತ್ವಗಳನ್ನು ಮತ್ತಷ್ಟು ಹರಿತಗೊಳಿಸಿದ ಅರವಿಂದರು ‘ಪೂರ್ಣ ಸ್ವರಾಜ್’ ಬೇಡಿಕೆಯನ್ನು ಸ್ವಾತಂತ್ರ್ಯಾಂದೋಲನದಲ್ಲಿ ಮುನ್ನೆಲೆಗೆ ತಂದರು.

ಆ ದಿನಮಾನಗಳಲ್ಲಿ ದೇಶವಾಸಿಗಳ ಮನದಲ್ಲಿ ಸ್ವಾತಂತ್ರಾ್ಯಂದೋಲನದ ಕಿಚ್ಚು ಹೊತ್ತಿಸುವ ಉದ್ದೇಶದಿಂದ ಅರವಿಂದರು ದೇಶಸಂಚಾರ ಕೈಗೊಂಡರು. ಆ ದಿನಗಳನ್ನು ನೆನಪಿಸಿಕೊಂಡು ಮೃಣಾಲಿನಿ ದೇವಿಯವರು ನಂತರ ಬರೆಯುವುದು ಹೀಗೆ- ‘ನಮಗೆ ವೈವಾಹಿಕ ಬದುಕು ಎನ್ನುವುದೇ ಇರಲಿಲ್ಲ. ಅರವಿಂದರು ಸ್ವಾತಂತ್ರಾ್ಯಂದೋಲನದ ಕುರಿತಾಗಿ ಜನಜಾಗೃತಿ ಮೂಡಿಸಲು ದೇಶದಾದ್ಯಂತ ಸದಾ ಸಂಚಾರನಿರತರಾಗಿರುತ್ತಿದ್ದರು’.

ಜನಜಾಗೃತಿಗಾಗಿ ಕೈಗೊಂಡ ಈ ದೇಶಸಂಚಾರ ಅರವಿಂದರಲ್ಲಿ ಆಧ್ಯಾತಿಕ ಜಾಗೃತಿಗೆ ನಾಂದಿಹಾಡಿದ್ದು ಅವರ ಬದುಕಿನಲ್ಲಷ್ಟೇ ಅಲ್ಲ, ರಾಷ್ಟ್ರದ ಇತಿಹಾಸದಲ್ಲೂ ಒಂದು ಮಹತ್ತರ ತಿರುವು. ವಿಷ್ಣು ಭಾಸ್ಕರ ಲೇಲೆ ಎಂಬ ಸಂತರ ಪರಿಚಯವಾಗಿ ಅವರಿಂದ ಅರವಿಂದರು ಮನಸ್ಸನ್ನು ಮೌನವಾಗಿಸುವ ಸಾಧನೆಯ ಮೂಲಪಾಠವನ್ನು ಅರಿತರು. ಮೂರೇ ದಿನಗಳ ಸಾಧನೆಯಲ್ಲಿ ತಮಗಾದ ಅನುಭೂತಿಯನ್ನು ಅರವಿಂದರು ಸಾನೆಟ್ ಒಂದರಲ್ಲಿ ವರ್ಣಿಸಿದ್ದಾರೆ. ಇಂಗ್ಲೆಂಡ್​ನಲ್ಲಿದ್ದಾಗಲೇ ಮೊಳಕೆಯೊಡೆದಿದ್ದ ಆಧ್ಯಾತ್ಮಿಕ ಜಿಜ್ಞಾಸೆ ದೇಶಸಂಚಾರದಲ್ಲಿ ಹೀಗೆ ತೀವ್ರವಾಗಿ ಜಾಗೃತಗೊಂಡಿತು. ನಂತರ ಅವರೇ ಹೇಳುವ ಪ್ರಕಾರ ಅವರಿಗೆ ಎಲ್ಲೆಲ್ಲೂ ಕಾಣಿಸಿಕೊಂಡದ್ದು ದೈವಿಕತೆ. ಕಾಶ್ಮೀರದ ಶಂಕರ ಪರ್ವತದಲ್ಲಿ ವಾಸುದೇವ-ವಿಷ್ಣು ಕಂಡರೆ, ಕಾಳಿಯ ಚಿತ್ರಗಳನ್ನು ಎಲ್ಲಿ ನೋಡಿದರೂ ಅವರ ಕಣ್ಣೆದುರಿಗೆ ನಿಂತದ್ದು ಜಗನ್ಮಾತೆ ಶಕ್ತಿ. ನಂತರ ಅಲಿಪುರ್ ಬಾಂಬ್ ಸ್ಫೋಟ ಆಪಾದನೆ ಹೊತ್ತು ಬಂಧಿತರಾದಾಗ, ಅಂತಿಮವಾಗಿ ದೇಶವಿರೋಧಿ ಲೇಖನಗಳನ್ನು ಬರೆದ ಆರೋಪ ಹೊತ್ತು ಒಂದು ವರ್ಷ ಕಾರಾಗೃಹದಲ್ಲಿದ್ದಾಗಲೂ ಅವರಿಗೆ ಕಂಡದ್ದು ವಾಸುದೇವ. ಕಾರಾಗೃಹದ ಗೋಡೆಗಳಲ್ಲಿ, ಗೋಡೆಯಾಚೆಯ ಮರದಲ್ಲಿ, ಜೈಲಿನಲ್ಲಿದ್ದ ಕಳ್ಳರು, ಕೊಲೆಗಡುಕರಲ್ಲಿ, ಜೈಲರ್​ನಲ್ಲಿ ನನಗೆ ಕಂಡದ್ದು ವಾಸುದೇವ-ಕೃಷ್ಣ-ವಿಷ್ಣು ಎಂದು ಅರವಿಂದರು ಬರೆಯುತ್ತಾರೆ. ಉಗ್ರಗಾಮಿ ಸ್ವಾತಂತ್ರ್ಯಹೋರಾಟಗಾರನೊಬ್ಬ ಸಂತನಾದದ್ದು, ಯೋಗಿಯಾದದ್ದು ಹೀಗೆ.

ಕಾರಾಗೃಹದಿಂದ ಬಿಡುಗಡೆಯಾದದ್ದೇ 1910ರಲ್ಲಿ ಅರವಿಂದರು ವೇಷ ಮರೆಸಿಕೊಂಡು ದಕ್ಷಿಣದ ಫ್ರೆಂಚ್ ವಸಾಹತು ಪಾಂಡಿಚೆರಿಗೆ ಪಯಣಿಸಿದರು. ಮುಂದಿನ 30 ವರ್ಷಗಳವರೆಗೆ ಪಾಂಡಿಚೆರಿ ಅವರ ಸಾಧನಾಭೂಮಿಯಾಯಿತು. ಇತ್ತ ದೇಶದಲ್ಲಿ ಸ್ವಾತಂತ್ರ್ಯಾಂದೋಲನದ ಗಾಳಿ ದಿನೇದಿನೆ ಪ್ರಬಲವಾಗತೊಡಗಿದರೆ ಅತ್ತ ಅರವಿಂದರು ಏಕಾಂತದಲ್ಲಿ ಧ್ಯಾನನಿರತರಾದರು. ಈ ತಪಸ್ಸು ಭಾರತದ ಸ್ವಾತಂತ್ರ್ಯದ ಬಗೆಗಷ್ಟೇ ಅಲ್ಲದೆ, ಅವರ ಅಂತಿಮ ಆಶಯವಾದ ‘ವಿಶ್ವಕ್ಕೆ ಭಾರತ ಆಧ್ಯಾತ್ಮಿಕ ಮಾರ್ಗದರ್ಶಿಯಾಗುವತ್ತ’ ಕೇಂದ್ರೀಕೃತವಾಗಿತ್ತು. ಆ ಸಾಧನೆಯ ಆಧಾರಸ್ತಂಭವಾಗಿ, ಮಾನವ ಬದುಕನ್ನು ದೈವಿಕ ಬದುಕಾಗಿಸುವ ಸಂಯೋಜಿತ ಯೋಗವಿಧಾನವನ್ನು ಶ್ರೀ ಅರವಿಂದರು ಅವಿಷ್ಕರಿಸಿದರು.

ಅರವಿಂದರ ಈ ತಪಸ್ಸಿನಲ್ಲಿ ಅವರಿಗೆ ಜತೆಯಾದದ್ದು ಮುಂದೆ ಅರವಿಂದಾಶ್ರಮದ ‘ಮಾತೆ’ ಎಂದು ಪ್ರಸಿದ್ಧರಾದ ಮೀರಾ ಅಲ್ಪಾಸಾ ಎಂಬ ತುರ್ಕಿ ಮೂಲದ ಫ್ರೆಂಚ್ ಮಹಿಳೆ. ಮಾತೆಯವರಿಗೆ ಬಾಲ್ಯದಿಂದಲೂ ಆಧ್ಯಾತ್ಮಿಕ ಅನುಭವಗಳಾಗುತ್ತಿದ್ದವು ಮತ್ತು ವಾಸುದೇವ-ಕೃಷ್ಣ ಅವರಿಗೆ ಅಡಿಗಡಿಗೆ ಕಾಣಿಸಿಕೊಂಡದ್ದುಂಟು ಎಂದು ಹೇಳುತ್ತಾರೆ. 1914ರ ಮಾರ್ಚ್ ತಿಂಗಳ ಒಂದು ದಿನ ತಾವು ಅರವಿಂದರ ಶಾಂತ ಮುಖಮುದ್ರೆಯನ್ನು ಕಂಡಾಗ ತಮ್ಮ ಒಳಗಣ್ಣಿಗೆ ಅಡಿಗಡಿಗೆ ಗೋಚರವಾಗುತ್ತಿದ್ದ ವಾಸುದೇವ-ಕೃಷ್ಣ ನನ್ನೆದುರಿಗಿದ್ದ ಎಂದು ಮಾತೆ ಬರೆಯುತ್ತಾರೆ. ಅರವಿಂದರು ಮತ್ತು ಮಾತೆ ಒಟ್ಟಿಗೆ 1926ರಲ್ಲಿ ಆಶ್ರಮವನ್ನು ಸ್ಥಾಪಿಸಿದರು. ಈ ಆಶ್ರಮ ಮುಂದಿನ 24 ವರ್ಷಗಳಲ್ಲಿ ಅರವಿಂದರ ಆಧ್ಯಾತ್ಮಿಕ ಸಾಧನೆಯೂ ಸೇರಿದಂತೆ ಅವರ ಮೇರುಕೃತಿ ‘ಸಾವಿತ್ರಿ’ಯೂ ಸೇರಿದಂತೆ ಹಲವು ಮಹತ್ವದ ಕೃತಿಗಳ ರಚನೆಯನ್ನು ಕಂಡಿತು.

1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾದಾಗ ಆಲ್ ಇಂಡಿಯಾ ರೇಡಿಯೋದಲ್ಲಿ ಅರವಿಂದರು ರಾಷ್ಟ್ರಕ್ಕೆ ನೀಡಿದ ಸಂದೇಶದಲ್ಲಿ ಹೇಳಿದ ಈ ಮಾತುಗಳು ಮನನೀಯವಷ್ಟೇ ಅಲ್ಲ, ಭಾರತದ ಬಗ್ಗೆ ಜಗತ್ತಿನ ಬಗ್ಗೆ ಅವರಿಗಿದ್ದ ದೃಷ್ಟಿಯನ್ನೂ ಅನಾವರಣಗೊಳಿಸುತ್ತವೆ- ‘ಆಗಸ್ಟ್ 15 ಸ್ವತಂತ್ರ ಭಾರತದ ಜನ್ಮದಿನ. ಇದು ಹಳೆಯದೊಂದು ಯುಗದ ಅಂತ್ಯ ಮತ್ತು ಹೊಸದೊಂದು ಯುಗದ ಆದಿಯನ್ನು ಸೂಚಿಸುತ್ತದೆ. ಇದು ನಮಗಷ್ಟೇ ಅಲ್ಲ, ಇಡೀ ಏಷ್ಯಾಕ್ಕೆ, ಇಡೀ ಜಗತ್ತಿಗೆ ಮಹತ್ವವಾದದ್ದು. ಏಕೆಂದರೆ ಮಾನವಜನಾಂಗದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಭವಿಷ್ಯವನ್ನು ನಿರ್ದೇಶಿಸುವಲ್ಲಿ ಮಹತ್ತರ ಕೊಡುಗೆ ನೀಡಲು ಅಗತ್ಯವಾದ ಅಪರಿಮಿತ ಸಾಮರ್ಥ್ಯನ್ನು ಹೊಂದಿದ ಹೊಸಶಕ್ತಿಯೊಂದು ರಾಷ್ಟ್ರಗಳ ಸಮುದಾಯಕ್ಕೆ ಅಡಿಯಿಡುತ್ತಿರುವುದರ ಕುರುಹು ಇದಾಗಿದೆ…’.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)