Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ದಮನಿತರ ಅದಮ್ಯದನಿ ಆಸ್ಮಾ ಜಹಾಂಗೀರ್

Wednesday, 14.02.2018, 3:03 AM       No Comments

| ಪ್ರೇಮಶೇಖರ

ಪ್ರಭುತ್ವದಿಂದ, ಅದು ಒಡ್ಡುವ ಆಮಿಷಗಳಿಂದ ದೂರವಿದ್ದು, ತಾನು ನಂಬಿದ ಮೌಲ್ಯಗಳ ಆಚರಣೆಯಲ್ಲಿ ವೈಯಕ್ತಿಕ ರಾಗದ್ವೇಷ, ಲಾಲಸೆಗಳು ನುಸುಳದಂತೆ ನೋಡಿಕೊಂಡ ಆಸ್ಮಾ ಜಹಾಂಗೀರ್ ಬಾಳಿದ ಆದರ್ಶಮಯ ಬದುಕನ್ನು ನೋಡಿದರೆ, ಭಾರತದ ಮಾನವಹಕ್ಕುಗಳ ಹೋರಾಟಗಾರ/ಗಾರ್ತಿಯರು ಅವರಿಂದ ಕಲಿಯುವುದು ಬಹಳಷ್ಟಿದೆ ಅನಿಸುತ್ತದೆ.

ವಿಶ್ವಮಾನ್ಯ ಪಾಕಿಸ್ತಾನಿ ಧೀಮಂತ ವಕೀಲೆ, ನಿಷ್ಪಕ್ಷಪಾತಿ ಮಾನವ ಹಕ್ಕುಗಳ ಹೋರಾಟಗಾರ್ತಿ, ನಿಸ್ವಾರ್ಥಿ ಸಾಮಾಜಿಕ ಕಾರ್ಯಕರ್ತೆ ಆಸ್ಮಾ ಜಹಾಂಗೀರ್ ಇದೇ ಭಾನುವಾರ, ಫೆಬ್ರವರಿ 11ರಂದು 66ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈ ಸುದ್ದಿ ಅವರ ಮಗಳು, ಟಿವಿ ಪತ್ರಕರ್ತೆ ಮುನೀಝೇ ಜಹಾಂಗೀರ್ ಅವರಿಂದ ಘೊಷಿತವಾಗುತ್ತಿದ್ದಂತೆಯೇ ಪಾಕಿಸ್ತಾನ ಸೇರಿದಂತೆ ಉಪಖಂಡದ ಎಲ್ಲ ನಿಷ್ಪಕ್ಷಪಾತಿ, ನೈಜ ಮಾನವಹಕ್ಕುಗಳ ಹೋರಾಟಗಾರರು ಆಘಾತಕ್ಕೊಳಗಾಗಿದ್ದಾರೆ. ಆಸ್ಮಾ ನಿಧನದೊಂದಿಗೆ ಉಪಖಂಡದ ಮಾನವ ಹಕ್ಕುಗಳ ಹೋರಾಟದ ಒಂದು ಅಮೋಘ ಯುಗ ಅಂತ್ಯಗೊಂಡಿದೆ. ಆಕೆ ಬಿಟ್ಟುಹೋಗಿರುವ ಶೂನ್ಯವನ್ನು ತುಂಬುವಂಥವರು ಉಪಖಂಡದಲ್ಲಿ ಸದ್ಯಕ್ಕೆ ಕಾಣಬರುತ್ತಿಲ್ಲ. ಇದು ಆಸ್ಮಾ ನಮಗೆಷ್ಟು ಮುಖ್ಯವಾಗಿದ್ದರು ಎಂಬುದನ್ನು ತೋರಿಸುತ್ತದೆ.

ಹೋರಾಟದ ಬದುಕು: ಪಾಕಿಸ್ತಾನದಲ್ಲಿ ಸೇನಾ ಸರ್ವಾಧಿಕಾರದ ವಿರುದ್ಧ ಜೀವನಪೂರ್ತಿ ಹೋರಾಡಿದ್ದ ಮಲಿಕ್ ಘುಲಾಮ್ ಜಿಲಾನಿ ಅವರ ಹಿರಿಯ ಮಗಳಾಗಿ ಆಸ್ಮಾ ಹುಟ್ಟಿದ್ದು 1952ರ ಜನವರಿ 27ರಂದು, ಲಾಹೋರ್​ನಲ್ಲಿ. ಅದೇ ಷಹರದ ಕಾನ್ವೆಂಟ್ ಆಫ್ ಜೀಸಸ್ ಆಂಡ್ ಮೇರಿ ವಿದ್ಯಾಕೇಂದ್ರದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಆಸ್ಮಾ, ಕಿನೇರ್ಡ್ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡಿದರು. ನಂತರ 1978ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್​ಎಲ್​ಬಿ ಪದವಿ ಪಡೆದು ವಕೀಲಿ ವೃತ್ತಿಯನ್ನು ಆರಂಭಿಸುತ್ತಿದ್ದಂತೆ ಆಸ್ಮಾ ಮಾನವ ಹಕ್ಕುಗಳ ಹೋರಾಟದಲ್ಲಿ ತೊಡಗಿಸಿಕೊಂಡರು. ವರ್ಷದ ಹಿಂದಷ್ಟೇ ಸೇನಾಕ್ರಾಂತಿಯ ಮೂಲಕ ತನ್ನ ಸರ್ವಾಧಿಕಾರ ಸ್ಥಾಪಿಸಿ, ದೇಶವನ್ನು ಇಸ್ಲಾಮೀಕರಣಗೊಳಿಸುವ ಹುಮ್ಮಸ್ಸಿನಲ್ಲಿ ಅಲ್ಪಸಂಖ್ಯಾತರ, ಮಹಿಳೆಯರ ವಿರುದ್ಧ ದಿನಕ್ಕೊಂದು ಕ್ರೂರಕಾನೂನು ತರುತ್ತಿದ್ದ ಜನರಲ್ ಜಿಯಾ-ಉಲ್-ಹಕ್​ನ ದುರಾಡಳಿತ ಆಸ್ಮಾರ ಹೋರಾಟದ ಬದುಕಿಗೆ ಸೂಕ್ತ ಹಿನ್ನೆಲೆಯಾಗುತ್ತದೆ.

ಪಾಕಿಸ್ತಾನದ ಆ ದಿನಗಳ ಗೊಂದಲಮಯ ಸಮಾಜೋ-ರಾಜಕೀಯ ಪರಿಸ್ಥಿತಿಯಲ್ಲಿ ಅಸ್ಮಾರ ಗಮನವನ್ನು ಮೊದಲಿಗೆ ಸೆಳೆದದ್ದು ಜಿಯಾ ಆಡಳಿತದಲ್ಲಿ ಮಹಿಳೆಯರ ಮೇಲೆ ಏಕಾಏಕಿ ಹೆಚ್ಚಾದ ಕಾನೂನಾತ್ಮಕ ದೌರ್ಜನ್ಯ. ಅವಿಭಜಿತ ಭಾರತದಲ್ಲಿ ಚಾಲ್ತಿಯಲ್ಲಿದ್ದ ಸಾಮಾಜಿಕ ಪದ್ಧತಿಗಳ ಆಧಾರದ ಮೇಲೆ ಬ್ರಿಟಿಷ್ ವಸಾಹತುಶಾಹಿ ನ್ಯಾಯವ್ಯವಸ್ಥೆ ರೂಪಿಸಿದ್ದ ಪೀನಲ್ ಕೋಡ್ ಪ್ರಕಾರ ವ್ಯಭಿಚಾರದ ಆರೋಪದಡಿ ಶಿಕ್ಷೆಯಾಗುತ್ತಿದ್ದುದು ಪುರುಷನಿಗೆ ಮಾತ್ರ. ಇದನ್ನು ಬದಲಿಸಿದ ಜಿಯಾ, 1979ರಲ್ಲಿ ‘ಝೀನಾ ಸುಗ್ರೀವಾಜ್ಞೆ’ಯ ಮೂಲಕ ವ್ಯಭಿಚಾರಕ್ಕೆ ಸ್ತ್ರೀಯನ್ನೇ ಸಂಪೂರ್ಣವಾಗಿ ಬಾಧ್ಯಸ್ಥಳನ್ನಾಗಿಸಿ ಕೇವಲ ಅವಳಿಗೆ ಮಾತ್ರ ಶಿಕ್ಷೆಯಾಗುವಂತೆ, ಪುರುಷ ನಿರಪರಾಧಿಯಾಗಿ ಹೊರಹೋಗುವಂತೆ ಮಾಡಿದ. ಇದು ಸಾಲದು ಎಂಬಂತೆ, ಯಾರು ಬೇಕಾದರೂ ಮಹಿಳೆಯೊಬ್ಬಳ ಮೇಲೆ ಅಕಾರಣವಾಗಿ ವ್ಯಭಿಚಾರದ ಆರೋಪ ಹೊರಿಸಬಹುದಾದ, ಸುಳ್ಳುಸಾಕ್ಷಿಗಳ ಮೂಲಕ ಆಪಾದನೆಯನ್ನು ಸಾಬೀತುಪಡಿಸಬಹುದಾದ ಅವಕಾಶಗಳಿದ್ದ ಕಾರಣ ಅಮಾಯಕ, ಅನಕ್ಷರಸ್ತ ಮಹಿಳೆಯರು ಈ ಝೀನಾ ಸುಗ್ರೀವಾಜ್ಞೆಗೆ ಹೇರಳ ಸಂಖ್ಯೆಯಲ್ಲಿ ಬಲಿಪಶುಗಳಾಗತೊಡಗಿದರು. 1988ರಲ್ಲಿ ಜಿಯಾ ಸತ್ತು, ಪಾಕಿಸ್ತಾನದಲ್ಲಿ ಮೊತ್ತಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನಮಂತ್ರಿಯಾಗುವ ಹೊತ್ತಿಗೆ ಜನಬಾಹುಳ್ಯ ಪಂಜಾಬ್ ಪ್ರಾಂತ್ಯದ ಕಾರಾಗೃಹಗಳಲ್ಲಿ ಕೊಳೆಯುತ್ತಿದ್ದ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ವ್ಯಭಿಚಾರದ ಆರೋಪದಡಿ ಶಿಕ್ಷೆಗೊಳಗಾದವರು ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ದುರುಳ ಝೀನಾ ಸುಗ್ರೀವಾಜ್ಞೆ ಎಷ್ಟರ ಮಟ್ಟಿಗೆ ದುರುಪಯೋಗಕ್ಕೊಳಗಾಗಿರಬಹುದೆಂಬ ಅಂದಾಜು ಸಿಗುತ್ತದೆ.

ಸಿಡಿದೆದ್ದ ಆಸ್ಮಾ: ಸಂವೇದನಾಶೀಲೆ, ಹೋರಾಟದ ಮನೋಭಾವದ ಆಸ್ಮಾ ಈ ಕುಶಾಸನದ ವಿರುದ್ಧ ಸಿಡಿದೆದ್ದದ್ದರಲ್ಲಿ ಅಚ್ಚರಿಯೇನಿಲ್ಲ. ಝೀನಾ ಸುಗ್ರೀವಾಜ್ಞೆಯ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ, ಆಪಾದಿತ ಮಹಿಳೆಯರಿಗೆ ಕಾನೂನಿನ ನೆರವು ನೀಡುವುದರಲ್ಲಿ ಆಸ್ಮಾ ತೊಡಗಿಕೊಂಡರು. 1982ರಲ್ಲಿ ಜಿಯಾ ವಿರುದ್ಧ ರಾಷ್ಟ್ರದಾದ್ಯಂತ ಪ್ರಜಾಪ್ರಭುತ್ವವಾದಿ ಆಂದೋಲನ ಭುಗಿಲೇಳುತ್ತಿದ್ದಂತೆ ಆಸ್ಮಾ ತಮ್ಮ ಮಹಿಳಾಪರ ಹೋರಾಟವನ್ನು ಸರ್ವಾಧಿಕಾರದ ವಿರುದ್ಧದ ಹೋರಾಟವನ್ನಾಗಿ ವಿಸ್ತರಿಸಿದರು. ಪರಿಣಾಮವಾಗಿ 1983ರಲ್ಲಿ ಅವರ ದಸ್ತಗಿರಿಯಾಗಿ ಕೆಲಕಾಲ ಜೈಲುವಾಸ ಅನುಭವಿಸಬೇಕಾಯಿತು. ಈ ನಡುವೆ 1980ರಲ್ಲಿ ಪಂಜಾಬ್ ಹೈಕೋರ್ಟ್​ಗೆ, 1982ರಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್​ಗೆ ನಾಮಾಂಕನಗೊಂಡಾಗ ಸಿಕ್ಕಿದ ಹೊಸ ಅವಕಾಶಗಳನ್ನು ಆಸ್ಮಾ ಬಳಸಿಕೊಂಡದ್ದು ತಮ್ಮ ಹೋರಾಟಗಳಿಗೆ ಮತ್ತಷ್ಟು ಕಸುವು ನೀಡಲು. ಈ ಹೋರಾಟಗಳನ್ನು ಮತ್ತಷ್ಟು ವ್ಯವಸ್ಥಿತವಾಗಿ ನಡೆಸುವ ಮತ್ತು ಸುಶಿಕ್ಷಿತ ಜನರನ್ನು ಅದರಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಆಸ್ಮಾ 1987ರಲ್ಲಿ ಪಾಕಿಸ್ತಾನಿ ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಿದರು ಮತ್ತು ಮುಂದಿನ 6 ವರ್ಷಗಳವರೆಗೆ ಅದರ ಪ್ರಧಾನ ಕಾರ್ಯದರ್ಶಿಯಾಗಿ ಸಂಸ್ಥೆಯನ್ನು ಮುನ್ನಡೆಸಿದರು. ಸೇನಾ ಸರ್ವಾಧಿಕಾರವಿರಲಿ, ಪ್ರಜಾಪ್ರಭುತ್ವವಾದಿ ಸರ್ಕಾರವಿರಲಿ, ಅದು ಅಲ್ಪಸಂಖ್ಯಾತರ ವಿರುದ್ಧ ಎಸಗುವ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಈ ಆಯೋಗ ದಾಖಲಿಸಿ ಜಗತ್ತಿನ ಮುಂದಿಡುತ್ತಿದೆ. ಅದರ ವಾರ್ಷಿಕ ವರದಿಗಳು ಸಮಕಾಲೀನ ಪಾಕಿಸ್ತಾನದಲ್ಲಿ ಸರ್ಕಾರವೇ ಧರ್ಮದ್ವೇಷವನ್ನೂ, ಕೋಮುದ್ವೇಷವನ್ನೂ ಹುಟ್ಟುಹಾಕಿ ಪೋಷಿಸುತ್ತಿರುವುದರ ವಿಶ್ವಾಸಾರ್ಹ ದಾಖಲೆಗಳಾಗಿವೆ. ಬಲೂಚಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಗಳಿಂದಾಗಿ 35,000ಕ್ಕೂ ಮೇಲ್ಪಟ್ಟು ಜನರು ಕಾಣೆಯಾಗಿರುವುದನ್ನು ಆಯೋಗದ ವಿವಿಧ ವರದಿಗಳು ದಾಖಲಿಸಿ, ಕಾನೂನಿಗೆ ಹೊರತಾದ ಈ ಹತ್ಯೆಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿವೆ. ಬಾಲಕಾರ್ವಿುಕರ ವಿಷಯವನ್ನೆತ್ತಿಕೊಂಡ ಆಯೋಗ ಲಾಹೋರ್ ಮತ್ತು ಭೀಲ್​ಗಳ ಇಟ್ಟಿಗೆಗೂಡುಗಳಲ್ಲಿ ದುಡಿಯುವ ಮಕ್ಕಳ ದುರವಸ್ಥೆ, ಸಿಂಧ್​ನ ಕೊಹ್ಲಿ ಸಮುದಾಯದ ಮಕ್ಕಳನ್ನು ಜಮೀನುದಾರರು ಗುಲಾಮರಾಗಿ ನಡೆಸಿಕೊಳ್ಳುತ್ತಿರುವ ಅಮಾನವೀಯ ಪದ್ದತಿಗಳ ಬಗೆಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರ ಗಮನ ಸೆಳೆದಿದೆ. ಜತೆಗೆ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಸಿಂಧ್​ನ ಥಾರ್​ಪಾರ್ಕರ್ ಜಿಲ್ಲೆಯ ಹಿಂದೂಗಳಿಗೆ ಲಷ್ಕರ್-ಎ-ತೊಯ್ಬ (ಎಲ್​ಇಟಿ) ನೇತಾರ ಹಫೀಜ್ ಸಯೀದ್ ನೀಡಿದ ಆಮಿಷಗಳು ಹಾಗೂ ಒತ್ತಾಯಗಳನ್ನೂ ಜಗಜ್ಜಾಹೀರುಗೊಳಿಸಿದೆ. ದೇಶದೊಳಗೆ ಕೋಮುದ್ವೇಷ ಹರಡಲು ಹಾಗೂ ನೆರೆನಾಡುಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನೆಸಗಲು ಪಾಕ್ ಕೇಂದ್ರ ಸರ್ಕಾರ ಲಷ್ಕರ್​ನಂತಹ ಭಯೋತ್ಪಾದಕ ಸಂಘಟನೆಗಳನ್ನು ಉಪಯೋಗಿಸುತ್ತಿರುವುದನ್ನೂ, ಈ ಬಗ್ಗೆ ಪಾಕಿಸ್ತಾನದ ನ್ಯಾಯಾಂಗ ಜಾಣಕಿವುಡು, ಜಾಣಕುರುಡು ನೀತಿ ಅನುಸರಿಸುತ್ತಿರುವುದನ್ನೂ ಆಯೋಗ ನೇರವಾಗಿ, ದಿಟ್ಟವಾಗಿ ಪ್ರಶ್ನಿಸುತ್ತಿದೆ. ಅಂದರೆ, ಅನ್ಯಾಯಕ್ಕೊಳಗಾದವರು ಯಾರೇ ಆಗಿರಲಿ ಮಾನವ ಹಕ್ಕುಗಳ ಆಯೋಗ ಅವರ ಪರವಾಗಿ ನಿಲ್ಲುತ್ತಿದೆ ಹಾಗೂ ಅನ್ಯಾಯವೆಸಗುತ್ತಿರುವವರು ಯಾರೇ ಆಗಿರಲಿ ಅವರನ್ನು ದಿಟ್ಟವಾಗಿ ಪ್ರಶ್ನಿಸುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ಸರ್ಕಾರದ್ದಷ್ಟೇ ಅಲ್ಲ, ಅದರ ಕೃಪಾಪೋಷಿತ ಭಯೋತ್ಪಾದಕ ಸಂಘಟನೆಗಳ ವಿರೋಧವನ್ನು ಆಸ್ಮಾ ಎಂದೋ ಕಟ್ಟಿಕೊಂಡರು. ಅದು ಎಷ್ಟರಮಟ್ಟಿಗೆ ಹೋಯಿತೆಂದರೆ ಆಸ್ಮಾರ ಮನೆಯ ಮೇಲೆ ಸ್ಪೋಟಕಗಳನ್ನು ಎಸೆಯುವುದೂ ನಡೆದಿದೆ. ಇದಕ್ಕೆ ಕಾರಣ ಎಲ್​ಇಟಿ ಆಗಿದ್ದರೂ ಅದರ ಹಿಂದೆ ಮುಷರ್ರಫ್ ಸರ್ಕಾರವಿತ್ತು ಎಂಬುದೇನೂ ಈಗ ರಹಸ್ಯವಾಗಿ ಉಳಿದಿಲ್ಲ. 2012ರ ಮೇ ತಿಂಗಳಲ್ಲಿ, ಆಸ್ಮಾರ ಹತ್ಯೆಗೆ ಕುಖ್ಯಾತ ಐಎಸ್​ಐ ಸಂಚು ರೂಪಿಸಿತ್ತು. ಆದರೆ, ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಮುಂಚಿತವಾಗಿಯೇ ಸಿಕ್ಕಿದ ಸಂಚಿನ ಸುಳಿವನ್ನು ಅಂತಾರಾಷ್ಟ್ರಿಯ ಮಟ್ಟದ ಪಿತೂರಿಗಳ/ಹಗರಣಗಳ ವರದಿಗಾರ ಎಡ್ವರ್ಡ್ ಸ್ನೋಡೆನ್ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗೆ ತಲುಪಿಸಿ, ಸುದ್ದಿ ಜಗಜ್ಜಾಹೀರಾದ ಕಾರಣ ಪಿತೂರಿಗಾರರು ಹಿಂದೆಗೆಯುವಂತಾಯಿತು.

ಆಸ್ಮಾರ ವಿರುದ್ಧ ನಿಂತಿರುವ ಶಕ್ತಿಗಳು ಆ ಮಹಾನ್ ಮಾನವ ಹಕ್ಕುಗಳ ಹೋರಾಟಗಾರ್ತಿಯ ಸಂಬಂಧಿಗಳ ವಿರುದ್ಧ ಕತ್ತಿ ಮಸೆಯುವುದೂ ನಡೆದಿದೆ. ಜಮಾತ್-ಇ-ಇಸ್ಲಾಮಿಯ ಯುವ ಅಂಗ ಶಬಾಬ್-ಇ-ಮಿಲ್ಲೀ, 1997ರ ಏಪ್ರಿಲ್ 11ರಂದು ಅಸ್ಮಾರ ತಂಗಿ, ಖುದ್ದು ಮಾನವ ಹಕ್ಕುಗಳ ಹೋರಾಟಗಾರ್ತಿ ಹಿನಾ ಜಿಲಾನಿ ನೊಂದ ಮಹಿಳೆಯರಿಗಾಗಿ ನಡೆಸುತ್ತಿದ್ದ ‘ದಸ್ತಕ್’ ಎಂಬ ಆಶ್ರಯತಾಣದ ಮುಂದೆ ಹಿಂಸಾತ್ಮಕ ಧರಣಿ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ತಂದೆಯ ಅನುಮತಿಯಿಲ್ಲದೆಯೇ ತನಗಿಷ್ಟವಾದವನೊಂದಿಗೆ ವಿವಾಹವಾದ ಸಲೀಮಾ ಎಂಬ ಹೆಣ್ಣುಮಗಳಿಗೆ ಆಶ್ರಯ ಕೊಟ್ಟದ್ದೇ ದಸ್ತಕ್ ವಿರುದ್ಧ ಶಬಾಬ್-ಇ-ಮಿಲ್ಲೀ ಆಕ್ರೋಶಗೊಳ್ಳಲು ಕಾರಣವಾಗಿತ್ತು. ಕೆಲವು ಕೊಲೆಗಳ ಆರೋಪವನ್ನು ತಲೆಗಂಟಿಸಿಕೊಂಡಿದ್ದ ವಿದ್ಯಾರ್ಥಿಯೊಬ್ಬನ ಮುಂದಾಳತ್ವದಲ್ಲಿ ನಡೆದ ಆ ಧರಣಿಯಲ್ಲಿ ದಸ್ತಕ್ ಅಷ್ಟೇ ಅಲ್ಲ, ಆಸ್ಮಾರ ವಿರುದ್ಧವೂ ಜನಾಭಿಪ್ರಾಯ ಮೂಡಿಸುವ ಪ್ರಯತ್ನಗಳು ನಡೆದವು. ದಸ್ತಕ್ ಆಶ್ರಯತಾಣವು ವ್ಯಭಿಚಾರಕ್ಕೆ ಅವಕಾಶ ನೀಡುತ್ತಿದೆಯೆಂದೂ, ಅದು ಖದಿಯಾನೀ ನಾಸ್ತಿಕರಿಂದ ನಡೆಸಲ್ಪಡುತ್ತಿದೆಯೆಂದೂ, ಅದಕ್ಕೆ ಯೆಹೂದಿಗಳಿಂದ ಹಣ ಬರುತ್ತಿದೆಯೆಂದೂ ಆಪಾದಿಸುವ ಪ್ಲಕಾರ್ಡ್​ಗಳು ಕಾಣಿಸಿಕೊಂಡಿದ್ದವು. ಪಾಕಿಸ್ತಾನದಲ್ಲಿ ಯಾರ ವಿರುದ್ಧವಾದರೂ ಮತಾಂಧ ಜನರನ್ನು ಛೂ ಬಿಡಬೇಕೆಂದರೆ ಅವರು ಇಸ್ಲಾಮನ್ನು ತೊರೆದಿದ್ದಾರೆ ಹಾಗೂ ಯೆಹೂದಿಗಳ ಜತೆ ಸಂಪರ್ಕದಲ್ಲಿದ್ದಾರೆ ಅಂದುಬಿಟ್ಟರೆ ಸಾಕು. ಇನ್ನು ವ್ಯಭಿಚಾರದ ಅಪಾದನೆಯೆತ್ತಿ ಮಹಿಳೆಯರನ್ನು ತುಳಿಯುವುದು ಜಿಯಾನ ಕಾಲದಿಂದಲೂ ನಡೆಯುತ್ತಲೇ ಇದೆ. ಆಸ್ಮಾರ ವಿರುದ್ಧ ಶಬಾಬ್-ಇ-ಮಿಲ್ಲೀ ನಡೆಸಿದ ಕಿತಾಪತಿ ಏನೆಂದರೆ ಆ ಮಾನವ ಹಕ್ಕುಗಳ ಹೋರಾಟಗಾರ್ತಿ ಪಶ್ಚಿಮದ ದೇಶಗಳ ಕಣ್ಮಣಿಯೆಂದೂ, ಪವಿತ್ರ ಪ್ರವಾದಿಯವರು ತೋರಿದ ಮಾರ್ಗದಿಂದ ಪಾಕಿಸ್ತಾನಿಯರನ್ನು ವಿಮುಖಗೊಳಿಸುವ ಷಡ್ಯಂತ್ರದಲ್ಲಿ ಪಶ್ಚಿಮದ ದೇಶಗಳಿಗೆ ಆಸ್ಮಾ ಸಹಕರಿಸುತ್ತಿದ್ದಾರೆಂದೂ ಕೂಗಿದ ಘೊಷಣೆಗಳು ಮತ್ತು ಪ್ರದರ್ಶಿಸಿದ ಪ್ಲಕಾರ್ಡ್​ಗಳು.

ರಾಗದ್ವೇಷಗಳಿಗೆ ಅವಕಾಶವಿಲ್ಲ: ಆಸ್ಮಾರ ಮತ್ತೊಂದು ಹೆಗ್ಗಳಿಕೆಯೆಂದರೆ, ತಮ್ಮ ನ್ಯಾಯಪರ ಹೋರಾಟಗಳಲ್ಲಿ ವೈಯಕ್ತಿಕ ರಾಗದ್ವೇಷಗಳು ನುಸುಳಲು ಅವರು ಅವಕಾಶ ನೀಡಲೇ ಇಲ್ಲ. ಆಸ್ಮಾರ ಮಾನವ ಹಕ್ಕುಗಳ ಪರವಾಗಿನ ಹೋರಾಟಗಳು ದೇಶವಿರೋಧಿ ಎಂಬ ಆಪಾದನೆಯನ್ನು ಮಾಡಿದ ಮಾಜಿ ಪ್ರಧಾನಿ ನವಾಜ್ ಶರೀಫ್ ಆ ಹೋರಾಟಗಾರ್ತಿಯ ವಿರುದ್ಧ ಸರ್ಕಾರದ/ಸೇನೆಯ ಕ್ರಮಗಳಿಗೆ ಬೆಂಬಲವಾಗಿ ನಿಂತದ್ದುಂಟು. ಆದರೆ, ನವಾಜ್ ಶರೀಫರ ರಾಜೀನಾಮೆಗೆ ಒತ್ತಾಯಿಸಿ ತೆಹ್ರೀಕ್-ಇ-ಇನ್ಸಾಫ್ ನೇತಾರ ಇಮ್ರಾನ್ ಖಾನ್ 2014ರಲ್ಲಿ ಹಮ್ಮಿಕೊಂಡ ಆಂದೋಲನವನ್ನು ಆಸ್ಮಾ ವಿರೋಧಿಸಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷ ಶರೀಫ್​ರನ್ನು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಸುಪ್ರೀಂ ಕೋರ್ಟ್ ಕ್ರಮವನ್ನೂ ಆಸ್ಮಾ ಖಂಡಿಸಿದ್ದರು. ಚುನಾಯಿತ ಸರ್ಕಾರವೊಂದು ಪೂರ್ಣಾವಧಿ ಪೂರೈಸುವುದಕ್ಕೆ ಅಡ್ಡಿಯಾಗಬಾರದೆಂದೂ, ಸರ್ಕಾರಗಳನ್ನು ಉರುಳಿಸಲು ಕುಖ್ಯಾತ ಜಿಯಾ-ಉಲ್-ಹಕ್ ಸಂವಿಧಾನಕ್ಕೆ ತಂದ ತಿದ್ದುಪಡಿಯನ್ನೇ ಇನ್ನೂ ಉಪಯೋಗಿಸುತ್ತಿರುವುದು ತಪ್ಪೆಂದೂ ಆಸ್ಮಾ ಬಲವಾಗಿ ವಾದಿಸಿದ್ದರು. ಹೃದಯಾಘಾತಕ್ಕೆ ಬಲಿಯಾದ ಸಮಯದಲ್ಲಿ ಆಸ್ಮಾ ಅವರು ಶರೀಫ್​ರ ವಕೀಲರೊಬ್ಬರೊಂದಿಗೆ ಫೋನಿನಲ್ಲಿ ಮಾತಾಡುತ್ತಿದ್ದರು. ಹೀಗೆ, ಅನ್ಯಾಯದ ವಿರುದ್ಧ ದನಿಯೆತ್ತುವುದರಲ್ಲಿ ತೋರುವ ನಿಷ್ಪಕ್ಷಪಾತ ಧೋರಣೆಗಳಿಂದಾಗಿ ಆಸ್ಮಾ ದೇಶ-ವಿದೇಶಗಳ ಪ್ರಜ್ಞಾವಂತರ ಆದರ, ಗೌರವಕ್ಕೆ ಪಾತ್ರರಾಗಿದ್ದಾರೆ. ತಮ್ಮ ಆಂದೋಲನಕ್ಕೆ ವಿರೋಧ ವ್ಯಕ್ತಪಡಿಸಿದರೂ ಆಸ್ಮಾರ ನ್ಯಾಯಯುತ ಮೌಲ್ಯಗಳಿಂದಾಗಿ ಅವರ ಬಗ್ಗೆ ತಮಗೆ ಅಪಾರ ಗೌರವವಿರುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಗೌರವಗಳ ಬಗ್ಗೆ ಹೇಳುವುದಾದರೆ, ಧಾರ್ವಿುಕ ಸ್ವಾತಂತ್ರ್ಯದ ಕುರಿತಾಗಿ ತನ್ನ ವಿಶೇಷ ದೂತೆಯನ್ನಾಗಿ ವಿಶ್ವಸಂಸ್ಥೆ ಆಸ್ಮಾರನ್ನು 2004ರಿಂದ 2010ರವರೆಗೆ ನೇಮಕ ಮಾಡಿಕೊಂಡಿತ್ತು. ಅದೇ ವಿಶ್ವಸಂಸ್ಥೆ ಆಸ್ಮಾರನ್ನು ಇರಾನ್​ನಲ್ಲಿ ಮಾನವ ಹಕ್ಕುಗಳ ಹರಣವನ್ನು ಪರಿಶೀಲಿಸಲು ತನ್ನ ವಿಶೇಷ ದೂತೆಯನ್ನಾಗಿಯೂ 2016ರಲ್ಲಿ ಆರಿಸಿಕೊಂಡಿತ್ತು. 2014ರಲ್ಲಿ ಎಡ್ವರ್ಡ್ ಸ್ನೋಡೆನ್ ಜತೆ ಆಸ್ಮಾ ರೈಟ್ಸ್ ಲೈವ್ಲಿಹುಡ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ತಮ್ಮ ವೃತ್ತಿಜೀವನಕ್ಕೆ ಹೊರತಾದ ಯಾವ ಸ್ಥಾನಮಾನವನ್ನೂ ಆಸ್ಮಾ ಸ್ವೀಕರಿಸಲಿಲ್ಲ. ವಕೀಲೆಯಾಗಿದ್ದ ಕಾರಣ ತಮಗೆ ಬಂದ ಪಾಕಿಸ್ತಾನ್ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್​ನ ಅಧ್ಯಕ್ಷಸ್ಥಾನವನ್ನು ಒಪ್ಪಿಕೊಂಡ ಅವರು 2013ರ ಚುನಾವಣೆಗಳಿಗೆ ಮೊದಲು ಪಂಜಾಬ್ ಪ್ರಾಂತ್ಯದ ಹಂಗಾಮಿ ಮುಖ್ಯಮಂತ್ರಿಯಾಗಲು ಬಂದ ಆಹ್ವಾನವನ್ನು ತಿರಸ್ಕರಿಸಿ ತಮ್ಮ ಹಿರಿಮೆ, ಉದಾತ್ತ ಮೌಲ್ಯಗಳನ್ನು ಮೆರೆದರು.

ಪ್ರಭುತ್ವದಿಂದ ದೂರವಿದ್ದು, ಅದು ಒಡ್ಡುವ ಆಮಿಷಗಳನ್ನು ತಿರಸ್ಕರಿಸುವ, ತಾನು ನಂಬಿದ ಮೌಲ್ಯಗಳ ಆಚರಣೆಯಲ್ಲಿ ವೈಯಕ್ತಿಕ ರಾಗದ್ವೇಷಗಳೂ, ಲಾಲಸೆಗಳೂ ನುಸುಳದಂತೆ ನೋಡಿಕೊಂಡ ಆಸ್ಮಾ ಜಹಾಂಗೀರ್ ಬಾಳಿದ ಆದರ್ಶಮಯ ಬದುಕನ್ನು ನೋಡಿದರೆ, ಭಾರತದ ಮಾನವಹಕ್ಕುಗಳ ಹೋರಾಟಗಾರ/ಗಾರ್ತಿಯರು ಅವರಿಂದ ಕಲಿಯುವುದು ಬಹಳಷ್ಟಿದೆ ಅನಿಸುತ್ತದೆ. ಆದರೆ, ಎರಡು ವರ್ಷಗಳ ಹಿಂದೆ ಲಾಹೋರ್ ಸಾಹಿತ್ಯೋತ್ಸವದಲ್ಲಿ ಆಸ್ಮಾರನ್ನು ಮೋದಿ ವಿರುದ್ಧದ ತಮ್ಮ‘ಅಸಹಿಷ್ಣುತಾ ನೌಟಂಕಿ’ಯೊಳಕ್ಕೆ ಸೆಳೆಯಲು ರೊಮಿಲಾ ಥಾಪರ್ ಸೇರಿದಂತೆ ನಮ್ಮ ‘ಇನ್​ಟಾಲರೆನ್ಸ್ ಬ್ರಿಗೇಡ್’ನ ಕೆಲವು ಸದಸ್ಯ/ಸದಸ್ಯೆಯರು ಪ್ರಯತ್ನಿಸಿದ್ದನ್ನು ನೋಡಿದರೆ ಆಸ್ಮಾರ ಮೌಲ್ಯಗಳನ್ನು ಇವರೆಂದೂ ಕಲಿಯಲಾರರು ಅಂತಲೂ ಅನಿಸುತ್ತದೆ. ಆಸ್ಮಾರ ನಿಧನ ಎಂತಹ ಶೂನ್ಯವನ್ನು ಉಂಟುಮಾಡಿದೆ ಎನ್ನುವುದನ್ನು ಇದರಿಂದ ಅರಿಯಬಹುದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top