Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಯಾವುದು ಶ್ರೇಯಸ್ಕರ-ಕ್ರಾಂತಿ ಅಥವಾ ಉತ್ಕ್ರಾಂತಿ?

Wednesday, 19.09.2018, 3:03 AM       No Comments

| ಪ್ರೇಮಶೇಖರ

ಕ್ರಾಂತಿಗಳು ಎಂತಹ ಜೀವಹಾನಿಗೆ, ಸಾಮಾಜಿಕ ಅಲ್ಲೋಲಕಲ್ಲೋಲಕ್ಕೆ ಕಾರಣವಾಗುತ್ತವೆಂದು ಫ್ರಾನ್ಸ್, ರಷಿಯಾ, ಚೀನಾಗಳಲ್ಲಿ ನಾವು ನೋಡಿಯೇ ಇದ್ದೇವೆ. ಅದೀಗ ಹಲವು ಪಟ್ಟು ದೊಡ್ಡದಾಗಿ 130 ಕೋಟಿ ಜನರ ಈ ದೇಶದಲ್ಲಿ ಆಗುವುದು ಬೇಡ. ವಿಕಾಸದ ಮೂಲಕವೇ ನಾವು ಬದಲಾವಣೆ ತರೋಣ.

ರಾಷ್ಟ್ರದ ರಾಜಧಾನಿಯೂ ಸೇರಿದಂತೆ ವಿವಿಧ ನಗರಗಳಲ್ಲಿ ನೆಲೆಸಿ, ಭೂಗತ ನಕ್ಸಲರೊಂದಿಗೆ ಸಂಬಂಧವಿರಿಸಿಕೊಂಡು, ಅವರ ಹಿಂಸಾಕೃತ್ಯಗಳಿಗೆ ಸಹಕಾರ ಒದಗಿಸುತ್ತಿರುವ ಆಪಾದನೆಯ ಮೇಲೆ ಕಳೆದ ಮೂರು ತಿಂಗಳಲ್ಲಿ ಹತ್ತು ಜನರನ್ನು ಬಂಧಿಸಲಾದ ಹಿನ್ನೆಲೆಯಲ್ಲಿ ನಗರ ನಕ್ಸಲ್ ಚಟುವಟಿಕೆಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಚರ್ಚೆಗಳು ಅತ್ಯಗತ್ಯ ಹಾಗೂ ಪ್ರಜಾಸತ್ತಾತ್ಮಕತೆ ಪ್ರಬುದ್ಧವಾಗಿ ಬೆಳೆಯಲು ಇವುಗಳ ಕೊಡುಗೆ ಅಪಾರ. ಆದರೆ, ಈಗಿನ ಚರ್ಚೆ ನಕ್ಸಲರ, ನಗರ ನಕ್ಸಲರ ಇರುವಿಕೆ ಅಥವಾ ಇಲ್ಲದಿರುವಿಕೆ, ಅವರು ಇರುವುದೇ ಆದರೆ ಅವರ ಚಟುವಟಿಕೆಗಳು ಮತ್ತು ಇಂದಿನ ದಿನಮಾನಗಳಲ್ಲಿ ದೇಶಕ್ಕೆ ಅವುಗಳ ಅಗತ್ಯ ಅಥವಾ ಅನಗತ್ಯದ ಕುರಿತಾದ ಗಂಭೀರ ವಿಷಯಗಳ ಬಗ್ಗೆ ನಡೆಯುತ್ತಿಲ್ಲ ಎನ್ನುವುದೇ ವಿಷಾದದ ಸಂಗತಿ. ಮೇಲೆ ಉಲ್ಲೇಖಿಸಿದ ಬಂಧನಗಳನ್ನು ಮಾಡಿರುವ ಪೊಲೀಸರು ಸೇವೆ ಸಲ್ಲಿಸುತ್ತಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿರುವುದರಿಂದ ಹಾಗೂ ಬಂಧಿತರು ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಬಿಜೆಪಿಯ ಘೊಷಿತ ವಿರೋಧಿಗಳಾಗಿರುವ ಕಾರಣ ಈ ಬಂಧನಗಳ ಬಗೆಗಿನ ಚರ್ಚೆ ಬಿಜೆಪಿ-ಪರ ಹಾಗೂ ಬಿಜೆಪಿ-ವಿರೋಧಿ ಎಂಬ ಸೀಮಿತ ನೆಲೆಗಟ್ಟಿನಲ್ಲಷ್ಟೇ ನಡೆಯುತ್ತಿದೆ. ಹೀಗಾಗಿ, ಈ ಹಾದಿ ತಪ್ಪಿದ ಚರ್ಚೆ ರಾಜಕೀಯ ಸ್ವಾರ್ಥಿಗಳ ಕ್ಷಣಿಕ ಹಗ್ಗಜಗ್ಗಾಟವಾಗಷ್ಟೇ ಆಗುಳಿಯುವ, ರಾಷ್ಟ್ರದ ರಾಜಕೀಯ ಪ್ರಬುದ್ಧತೆಗೆ ಸಂಬಂಧಿಸಿದಂತೆ ಯಾವುದೇ ಧನಾತ್ಮಕ ಕೊಡುಗೆ ನೀಡದಂತಹ ನಿರರ್ಥಕ ಕಿತ್ತಾಟವಾಗಿಬಿಡುವ, ಆ ಮೂಲಕ ರಾಷ್ಟ್ರದ ಅಮೂಲ್ಯ ಸಮಯ ವ್ಯರ್ಥವಾಗಿಬಿಡುವ ಅಪಾಯವೂ ಇದೆ. ಅಂದರೆ, 2014ರ ಲೋಕಸಭಾ ಚುನಾವಣೆಗಳಲ್ಲಿ ಸೋತ ರಾಜಕೀಯ ಪಕ್ಷಗಳು ಮತ್ತವುಗಳ ಸಾಂಸ್ಕೃತಿಕ-ಸಾಹಿತ್ಯಕ ಲೋಕದ ಬೆಂಬಲಿಗರು ಪ್ರತೀ ಪ್ರಮುಖ ರಾಜ್ಯ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲೂ ವಿವಾದವೊಂದನ್ನು ಹುಟ್ಟುಹಾಕಿ ಅದನ್ನು ರಾಷ್ಟ್ರೀಯ ಚರ್ಚೆಯಲ್ಲಿ ಮುಂಚೂಣಿಗೆ ತಂದು, ಬಿಜೆಪಿಯ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿ, ಚುನಾವಣೆಗಳು ಮುಗಿದ ಕೂಡಲೆ ಅದನ್ನು ಮರೆತುಬಿಟ್ಟಂತಹ ರಾಜಕೀಯ ಕುತಂತ್ರಗಳ ಸರಣಿಯಲ್ಲಿ ಪ್ರಸಕ್ತ ಚರ್ಚೆಯೂ ಒಂದಾಗಿಹೋಗಿಬಿಡಬಹುದು. ಅದಾಗಬಾರದು ಎನ್ನುವ ಉದ್ದೇಶದಿಂದ ನಗರ ನಕ್ಸಲ್ ಸಮಸ್ಯೆಯ ವಿವಿಧ ಆಯಾಮಗಳನ್ನು, ಅಂಕಣಬರಹದ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ನಿಮ್ಮ ಮುಂದಿಡಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ. ಯಾಕೆಂದರೆ ಹಿಂದಿನ ಅಸಹಿಷ್ಣುತೆ, ಜಸ್ಟಿಸ್ ಲೋಧಾ ಸಾವು ಮುಂತಾದ ಕಲ್ಪಿತ ಸಮಸ್ಯೆಗಳಂತೆ ಈ ನಗರ ನಕ್ಸಲ್ ಸಮಸ್ಯೆ ಅಮಾವಾಸ್ಯೆ ರಾತ್ರಿಯಲ್ಲಿ, ಕತ್ತಲ ಕೋಣೆಯಲ್ಲಿ, ಇಲ್ಲದ ಕರೀಬೆಕ್ಕನ್ನು ಹಿಡಿದುಬಿಟ್ಟೆ ಎಂದು ಹೇಳಿ ಅಮಾಯಕರನ್ನು ನಂಬಿಸುವಂತಹ ರಾಜಕೀಯ ಕಳ್ಳಾಟವಲ್ಲ. ನಮ್ಮೆದುರು ಭೂತಾಕಾರದಂತೆ ಎದ್ದು ನಿಂತಿರುವ, ತನ್ನ ಅಸ್ತಿತ್ವದ ಬಗ್ಗೆ ನಿರಾಕರಿಸಲಾಗದ ಕುರುಹುಗಳನ್ನು ನಮ್ಮ ಮುಂದೆ ತೆರೆದಿಡುತ್ತಿರುವ ನೈಜ ಸಮಸ್ಯೆ ಇದು.

ಮೊದಲಿಗೆ ನಕ್ಸಲ್ ಅಥವಾ ಮಾವೋವಾದಿ ಸಮಸ್ಯೆಯನ್ನೇ ತೆಗೆದುಕೊಳ್ಳೋಣ. ಎಲ್ಲರಿಗೂ ಗೊತ್ತೇ ಇರುವ, ಅರ್ಧ ಶತಮಾನದಿಂದ ದೇಶವನ್ನು ಕಾಡುತ್ತಿರುವ, ಚೀನಾ-ಪಾಕಿಸ್ತಾನಗಳ ಜತೆಗಿನ ಎಲ್ಲ ಯುದ್ಧಗಳಲ್ಲಿ ಕಳೆದುಕೊಂಡದ್ದಕ್ಕಿಂತಲೂ ಹೆಚ್ಚು ಸುರಕ್ಷಾ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿರುವ ಇದರ ಅಸ್ತಿತ್ವವನ್ನು ನಾನಿಲ್ಲಿ ಪ್ರತ್ಯೇಕವಾಗಿ ನಿರೂಪಿಸುವ ಅಗತ್ಯವಿಲ್ಲ. ಜಮೀನುದಾರದಿಂದ ಭೂರಹಿತ ಬಡಜನತೆಯ ಶೋಷಣೆಯನ್ನು ತಡೆಗಟ್ಟುವ, ಭೂರಹಿತರನ್ನು ಭೂಮಾಲೀಕರನ್ನಾಗಿ ಮಾಡುವ ಉದ್ದೇಶದೊಂದಿಗೆ ಚಲಾವಣೆಗಿಳಿದ ನಕ್ಸಲ್​ವಾದದ ನಿರರ್ಥಕತೆಯನ್ನು ಅದು ಹುಟ್ಟುವ ಮೊದಲೇ ಆಚಾರ್ಯ ವಿನೋಬಾ ಭಾವೆ ಜಗತ್ತಿಗೆ ಸಾರಿಬಿಟ್ಟಿದ್ದರು. ಭೂದಾನ ಚಳವಳಿಯ ಮೂಲಕ ಅವರು ಸುಮಾರು ಐದು ಲಕ್ಷ ಎಕರೆಗಿಂತಲೂ ಹೆಚ್ಚು ಜಮೀನನ್ನು ಜಮೀನುದಾರರಿಂದ ಶಾಂತಿಯುತ ಮಾರ್ಗದಲ್ಲಿ ದಾನವಾಗಿ ಪಡೆದು ಭೂರಹಿತರಿಗೆ ಹಂಚಿದರು. ಇದಕ್ಕೆ ವಿರುದ್ಧವಾಗಿ ನಕ್ಸಲ್​ವಾದಿಗಳು ಐವತ್ತು ವರ್ಷಗಳ ಹಿಂಸಾತ್ಮಕ ಹೋರಾಟದಲ್ಲಿ ಭೂರಹಿತರಿಗೆ ದೊರಕಿಸಿಕೊಟ್ಟ ಜಮೀನೆಷ್ಟು? ಭಾವೆಯವರ ಶಾಂತಿಯುತ ಮಾರ್ಗ ಜನತೆಯಿಂದ ಮರೆಯಾಗಿ, ನಕ್ಸಲ್​ವಾದ ಹಳ್ಳಿಗಾಡಿನ ಅಶಿಕ್ಷಿತರ ಜತೆ ನಗರಗಳ ಸುಶಿಕ್ಷಿತರಿಗೂ ಪ್ರಿಯವಾದ ದುರಂತಕ್ಕೆ ಕಳೆದರ್ಧ ಶತಮಾನದ ಇತಿಹಾಸ ಸಾಕ್ಷಿಯಾಗಿದೆ. ಕೇವಲ ಐದೇ ವರ್ಷಗಳ ಹಿಂದೆ ಅರಬ್ಬೀ ಸಮುದ್ರ ತೀರದಿಂದ ಹಿಡಿದು ಬಾಂಗ್ಲಾದೇಶದ ಗಡಿಯವರೆಗಿನ ಕರ್ನಾಟಕ, ಆಂಧ್ರ ಪ್ರದೇಶ, ಛತ್ತೀಸ್​ಗಢ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್, ಬಿಹಾರ ಮತ್ತು ಪಶ್ಚಿಮ ಬಂಗಾಳಗಳ ಸುಮಾರು ನೂರಾ ಮೂವತ್ತೈದು ಜಿಲ್ಲೆಗಳಲ್ಲಿ ನಕ್ಸಲರು ಸಕ್ರಿಯರಾಗಿದ್ದರು. ಆದರೀಗ ಅವರ ಕಾರ್ಯಕ್ಷೇತ್ರ ಕೇವಲ ಇಪ್ಪತ್ತೈದು ಜಿಲ್ಲೆಗಳಿಗಷ್ಟೇ ಸೀಮಿತವಾಗಿದೆ, ನೂರಾರು ನಕ್ಸಲರು ಹಿಂಸಾಮಾರ್ಗ ತೊರೆದು ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಬಡ, ಶೋಷಿತ ಜನತೆಯ ಉದ್ಧಾರಕ್ಕೆ ಸರ್ಕಾರವೇ ಮುಂದಾದರೆ ತಾವು ಹಿಂಸಾಮಾರ್ಗ ಹಿಡಿಯುವ ಅಗತ್ಯವಿಲ್ಲ ಎಂದವರು ಅರಿಯುತ್ತಿರುವುದರ ಪರಿಣಾಮ ಇದು. ಈ ಬಗ್ಗೆ ರಾಷ್ಟ್ರ ನೆಮ್ಮದಿಯ ಉಸಿರು ಬಿಡುತ್ತಿದ್ದಂತೇ ಎಲ್ಲ ಶಾಂತಿಪ್ರಿಯರ ಮುಂದೆ ದುಃಸ್ವಪ್ನವಾಗಿ ಕಾಣಿಸಿಕೊಂಡದ್ದು ವರ್ಷಾರಂಭದ ಭೀಮಾ-ಕೋರೆಗಾಂವ್ ಹಿಂಸಾಚಾರ. ಅದರ ಬೆನ್ನು ಹತ್ತಿಹೋದ ಪುಣೆ ಪೊಲೀಸರಿಗೆ ಸಿಕ್ಕಿದ ಸುಳಿವುಗಳು ಅವರನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದು ನವದೆಹಲಿಯ ಮುನಿರ್ಕಾ ಡಿಡಿಎ ಫ್ಲಾಟ್ಸ್​ನಲ್ಲಿದ್ದ ರೋನಾ ವಿಲ್ಸನ್ ಎಂಬ 47 ವರ್ಷಗಳ ತಥಾಕಥಿತ ಮಾನವ ಹಕ್ಕುಗಳ ಹೊರಾಟಗಾರರೊಬ್ಬರ ಮನೆ ಬಾಗಿಲಿಗೆ.

ಮುನಿರ್ಕಾ ಡಿಡಿಎ ಫ್ಲಾಟ್ಸ್ ನಾನು ಬೆಳೆದ ಸ್ಥಳ. ಅಲ್ಲಿನ ಇಂಚಿಂಚೂ ನನಗೆ ಪರಿಚಿತ. 1974-75ರಲ್ಲಿ ಅಸ್ತಿತ್ವಕ್ಕೆ ಬಂದ ಆ ಬಹುಮಹಡಿಗಳ ವಸತಿಪ್ರದೇಶ ಅತಿಶೀಘ್ರದಲ್ಲಿ ದೆಹಲಿಯ ಅತ್ಯಂತ ಪ್ರತಿಷ್ಠಿತ, ಸುಸಜ್ಜಿತ ಬಡಾವಣೆಗಳಲ್ಲೊಂದಾಗಿ ಬೆಳೆಯಿತು. ಸಂಜಯ್ ಗಾಂಧಿಯವರ ಪತ್ನಿ ಮೇನಕಾ ಗಾಂಧಿ ಮತ್ತು ಪ್ರಧಾನಿಪುತ್ರನ ಹತ್ತಿರದ ಸ್ನೇಹಿತ ಅರ್ಜುನ್ ದೇವ್​ರ ಫ್ಲಾಟುಗಳೂ ಅಲ್ಲಿದ್ದುದು ಈ ಪ್ರದೇಶ ಒಳ್ಳೆಯ ರಸ್ತೆಗಳನ್ನೂ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ತ್ವರಿತವಾಗಿ ಪಡೆದುಕೊಳ್ಳಲು ಕಾರಣ ಎಂಬ ಮಾತನ್ನು ನಾವು ಆಗ ಕೇಳುತ್ತಿದ್ದೆವು.

ಮುನಿರ್ಕಾ ಡಿಡಿಎ ಫ್ಲಾಟ್ಸ್ ಬಗ್ಗೆ ಇಷ್ಟೇಕೆ ಹೇಳುತ್ತಿದ್ದೇನೆಂದರೆ ಅಲ್ಲಿನ ನಿವಾಸಿಯಾಗಿದ್ದ ರೋನಾ ವಿಲ್ಸನ್​ರ ಲ್ಯಾಪ್​ಟಾಪ್​ನಲ್ಲಿ ಅವರು ಮತ್ತು ನಕ್ಸಲರ ನಡುವಿನ ಘನಿಷ್ಟ ಸಂಬಂಧದ ಬಗ್ಗೆ ದಾಖಲೆಸಹಿತ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಪುಣೆ ಪೊಲೀಸರು ನ್ಯಾಯಾಲಯಕ್ಕೆ ಮತ್ತು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಗರದಲ್ಲಿದ್ದುಕೊಂಡು ಕಾಡಿನಲ್ಲಿರುವ ನಕ್ಸಲರ ಜತೆ ಸಂಬಂಧವಿರಿಸಿಕೊಂಡಿರುವ ಕಾರಣದಿಂದ ರೋನಾ ವಿಲ್ಸನ್​ರನ್ನು (ಅವರು ನನ್ನ ಮಾಜಿ ವಿದ್ಯಾರ್ಥಿ ಎನ್ನುವುದು ಇಲ್ಲಿ ಅಮುಖ್ಯ) ‘ನಗರ ನಕ್ಸಲ್’ ಎಂದು ಕರೆಯಬಹುದು ಎಂಬ ವಾದ ಮಾಧ್ಯಮ ಹಾಗೂ ಜನತೆಯಲ್ಲಿ ವ್ಯಾಪಕವಾಗುತ್ತಿದೆ. ಇದೇ ರೋನಾ ವಿಲ್ಸನ್​ರಿಂದ ಪುಣೆ ಪೊಲೀಸರು ಸಂಗ್ರಹಿಸಿರುವ ಮಾಹಿತಿಗಳು ಅವರಂತೇ ನಗರಗಳಲ್ಲಿದ್ದುಕೊಂಡು ಕಾಡಿನಲ್ಲಿರುವ ಭೂಗತ ನಕ್ಸಲರ ಜತೆ ಸಂಪರ್ಕವಿರಿಸಿಕೊಂಡಿರುವ ಇತರ ಹಲವರ ಬಗ್ಗೆ ವಿವರಗಳನ್ನು ಒದಗಿಸುತ್ತವೆ. ಇದು ನಗರ ನಕ್ಸಲ್​ರ ಜಾಲ ದೇಶದ ವಿವಿಧೆಡೆ ಹರಡಿಹೋಗಿರುವುದನ್ನು ಸೂಚಿಸುತ್ತದೆ.

ಈ ಮಾಹಿತಿಗಳ ಜಾಡು ಹಿಡಿದು ಹೋದ ಪುಣೆ ಪೊಲೀಸರಿಗೆ ಸಿಕ್ಕಿದ ವಿವರಗಳು ಈ ಅರ್ಬನ್ ನಕ್ಸಲರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ಹೂಡಿದ್ದರ ಜತೆಗೇ 2025ರ ಹೊತ್ತಿಗೆ ಇಡೀ ದೇಶದಲ್ಲಿ ಸಶಸ್ತ್ರ ಕ್ರಾಂತಿಯನ್ನೆಸಗಿ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಯೋಜಿಸಿದ್ದರು ಎಂಬ ಭಯಾನಕ ಸಂಚಿನ ಸುಳಿವು ನೀಡುತ್ತವೆ. ಇದರರ್ಥ, ಕಳೆದ ನಾಲ್ಕು ವರ್ಷಗಳಲ್ಲಿ ನಕ್ಸಲ್​ವಾದ ತಹಬಂದಿಗೆ ಬಂದಿತು ಎಂದುಕೊಳ್ಳುತ್ತಿದ್ದಾಗಲೇ ಅದು ಅತ್ಯುಗ್ರವಾಗಿ ತಲೆಯೆತ್ತುತ್ತಿದೆ! ನಾವಿಂದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಿದು.

ನಮ್ಮ ಭಾರತ ಒಂದು ರಾಜಕೀಯ ವ್ಯವಸ್ಥೆ ಹಾಗೂ ಇಲ್ಲಿ ರಾಜಕೀಯ ಅಧಿಕಾರದ ಹಸ್ತಾಂತರದ ಪ್ರಕ್ರಿಯೆ ಅತ್ಯಂತ ಸಹಜ ಹಾಗೂ ಅಗತ್ಯ. ಆದರೆ, ಈ ಅಧಿಕಾರ ಹಸ್ತಾಂತರ ಶಾಂತಿಯುತವಾಗಿರಬೇಕೆಂಬುದು ನಮ್ಮ ಸಂವಿಧಾನಪಿತೃಗಳ ಆಶಯವಾಗಿತ್ತು. ಅಂತಹ ಶಾಂತಿಯುತ ಹಸ್ತಾಂತರಕ್ಕೆ ಅವಕಾಶವಿರಲೆಂದೇ ಅವರು ಭಾರತವನ್ನು ‘ಗಣರಾಜ್ಯ’ ಎಂದು ಸಂವಿಧಾನಾತ್ಮಕವಾಗಿ ಘೊಷಿಸಿದರು. ಅದರರ್ಥ, ಭಾರತದ ನಾಯಕ (ಹೆಡ್ ಆಫ್ ಸ್ಟೇಟ್) ಅಂದರೆ ರಾಷ್ಟ್ರಪತಿ ಪ್ರಜೆಗಳಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಯ್ಕೆಗೊಳ್ಳಬೇಕು. ಮುಂದುವರಿದು, ದೇಶದಲ್ಲಿ ಸಂಸದೀಯ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯಿರಬೇಕೆಂದು ಬಯಸಿದ ಸಂವಿಧಾನ ನಿರ್ವತೃಗಳು ಅದಕ್ಕನುಗುಣವಾದ ಕಲಮುಗಳನ್ನು ಸಂವಿಧಾನದಲ್ಲಿ ಅಳವಡಿಸಿದರು. ಇದರರ್ಥ, ಸರ್ಕಾರದ ನಾಯಕ (ಹೆಡ್ ಆಫ್ ಗವರ್ನ್​ವೆುಂಟ್) ಮತ್ತವನ ನೇತೃತ್ವದ ಮಂತ್ರಿಮಂಡಳ ಪ್ರಜೆಗಳಿಂದ ಆಯ್ಕೆಯಾದ ಸಂಸತ್​ನ ಭಾಗವಾಗಿರಬೇಕು ಮತ್ತು ಸಂಸತ್​ಗೆ ಉತ್ತರದಾಯಿಯಾಗಿರಬೇಕು ಎಂದು. ಇದೆಲ್ಲದರ ಒಟ್ಟಾರೆ ಅರ್ಥವೆಂದರೆ ನಮ್ಮಲ್ಲಿನ ಶಾಸಕಾಂಗ, ಸರ್ಕಾರದ ನಾಯಕ, ರಾಷ್ಟ್ರದ ನಾಯಕ ಪ್ರಜೆಗಳಿಂದ ಆಯ್ಕೆಗೊಳ್ಳಬೇಕು, ಅಷ್ಟೇ. ಇನ್ನಾವ ವಿಧಾನದಲ್ಲೂ ಅಧಿಕಾರ ಹಸ್ತಾಂತರ ಆಗುವ ಹಾಗಿಲ್ಲ. ಅಂದರೆ ಸಶಸ್ತ್ರ ಕ್ರಾಂತಿಯ ಮೂಲಕ ಅಧಿಕಾರ ಗಳಿಸಿಕೊಳ್ಳಲು ಯಾರಾದರೂ ಪ್ರಯತ್ನಿಸಿದರೆ ಅದು ಸಂವಿಧಾನಕ್ಕೆ, ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ವಿರೋಧಿಯಾದ ನಡೆ. ಇದು ಸರಳ ಸತ್ಯ.

ಅರವತ್ತೆಂಟು ವರ್ಷಗಳ ಹಿಂದೆ ನಾವು ನಮ್ಮ ಸಂವಿಧಾನವನ್ನು ಅಂಗೀಕರಿಸಿಕೊಂಡ ದಿನದಿಂದ ಅದರ ಆಶಯಕ್ಕೆ ಧಕ್ಕೆಯಾಗುವ ಸನ್ನಿವೇಶ ಎದುರಾದದ್ದು ಒಂದೇಒಂದು ಸಲ. ಸಂವಿಧಾನಕ್ಕೆ ತಿದ್ದುಪಡಿ ತರಲು ಅವಕಾಶವಿದೆ, ಆದರೆ ಆ ತಿದ್ದುಪಡಿಗಳು ಸಂವಿಧಾನದ ಮೂಲ ಸಂರಚನೆಯನ್ನು ಬದಲಾಯಿಸಬಾರದು ಎಂಬ ತೀರ್ಪೆಂದನ್ನು ಸಂವಿಧಾನಾತ್ಮಕವಾಗಿಯೇ ಸ್ಥಾಪಿತವಾಗಿರುವ ಸರ್ವೇಚ್ಚ ನ್ಯಾಯಾಲಯ 1973ರಲ್ಲಿ ನೀಡಿತು. ಅಂದರೆ, ಭಾರತವೊಂದು ಗಣರಾಜ್ಯ ಮತ್ತು ಇಲ್ಲಿರುವುದು ಸಂಸದೀಯ ಪ್ರಜಾಪ್ರಭುತ್ವ ಎನ್ನುವ ಮೂಲ ಸಂರಚನೆಗಳನ್ನು ಬದಲಾಯಿಸಲು ಅವಕಾಶವಿಲ್ಲ ಎಂದರ್ಥ. ನ್ಯಾಯಾಲಯ ಇಂತಹ ಮಹತ್ವದ ತೀರ್ಮಾನ ಘೊಷಿಸಲು ಕಾರಣವಾದದ್ದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿದ್ದ ಭಟ್ಟಂಗಿಗಳ ಬೆಂಬಲದಿಂದ ತಮ್ಮನ್ನು ಭಾರತದ ಚಕ್ರವರ್ತಿನಿ ಎಂದು ಘೊಷಿಸಿಕೊಳ್ಳಹೊರಟಿದ್ದನ್ನು ತಡೆಯುವುದಾಗಿತ್ತು ಎಂದು ಹೇಳಲಾಗುತ್ತದೆ.

ಇಂತಹ ಇತಿಹಾಸ ನಮ್ಮ ಬೆನ್ನಿಗಿರುವಾಗ ಕ್ರಾಂತಿಯ ಮೂಲಕ ಸಂವಿಧಾನದ ಮೂಲ ಸಂರಚನೆಯನ್ನು ಬದಲಾಯಿಸಲು ಅಥವಾ ಸಂವಿಧಾನವನ್ನೇ ಕಿತ್ತೊಗೆಯಲು ಅವಕಾಶವಿಲ್ಲ ಎನ್ನುವುದು ಸುಸ್ಪಷ್ಟ. ಇದಲ್ಲದೇ, ಸಶಸ್ತ್ರ ಕ್ರಾಂತಿಯಿಂದ ದೇಶ ಧನಾತ್ಮಕ ಪರಿಣಾಮಗಳನ್ನು ಕಾಣುವುದಿಲ್ಲ ಎನ್ನುವುದನ್ನು ಸಾಮಾನ್ಯ ಜ್ಞಾನದಿಂದಲೂ ನಾವು ಅರಿಯಬಹುದು. ಕ್ರಾಂತಿಯಿಂದ ಸಮಾಜವನ್ನು ಬದಲಾಯಿಸಲಾಗದು, ಅದಾಗುವುದು ಉತ್ಕ್ರಾಂತಿ ಅಂದರೆ ವಿಕಾಸದಿಂದ ಮಾತ್ರ; ಕ್ರಾಂತಿ ತರುವ ಬದಲಾವಣೆಗಳು ತಾತ್ಕಾಲಿಕ, ಆದರೆ ಉತ್ಕ್ರಾಂತಿ ತರುವ ಬದಲಾವಣೆಗಳು ಶಾಶ್ವತ ಎಂದು ಜಾಗತಿಕ ಇತಿಹಾಸ ಸ್ಪಷ್ಟವಾಗಿ ಸಾರುತ್ತದೆ. ಬೊರ್ಬೇನ್ ರಾಜಸತ್ತೆಯನ್ನು ಕಿತ್ತೊಗೆದು, ಪ್ರಜೆಗಳ ಕೈಗೆ ಅಧಿಕಾರ ನೀಡುವ ಉದ್ದೇಶದಿಂದ 1789ರಲ್ಲಿ ಫ್ರೆಂಚ್ ಕ್ರಾಂತಿಯಾದದ್ದು. ಆದರೆ ಅದರ ಕೂಸಾಗಿ ಹೊರಹೊಮ್ಮಿದ ನೆಪೋಲಿಯನ್ ತಾನೇ ರಾಜನಾದ. ಅಷ್ಟೇ ಅಲ್ಲ, ಕ್ರಾಂತಿಯಾದ ಕೇವಲ ಇಪ್ಪತ್ತಾರು ವರ್ಷಗಳಲ್ಲಿ ಅಧಿಕಾರ ಮತ್ತೆ ಬೊರ್ಬೇನ್ ಅರಸರ ಕೈಗೆ ಬಿತ್ತು. 1917ರಲ್ಲಿ ರಷಿಯಾದಲ್ಲಿ ಕಮ್ಯೂನಿಸ್ಟ್ ಕ್ರಾಂತಿಯೇನೋ ಆಯಿತು. ಆದರೆ ಅದರಿಂದೇನೂ ಪ್ರಯೋಜನವಾಗಲಿಲ್ಲವೆಂದು ರಷಿಯನ್ನರು 1990-91ರಲ್ಲಿ ಕಮ್ಯೂನಿಸ್ಟ್ ವ್ಯವಸ್ಥೆಯನ್ನು ಕಿತ್ತೊಗೆದರು. ಚೀನಾದಲ್ಲೂ ಕ್ರಾಂತಿಯ ಮೂಲಕ 1949ರಲ್ಲಿ ಬಂದ ಕಮ್ಯೂನಿಸ್ಟ್ ವ್ಯವಸ್ಥೆ ಹೆಚ್ಚು ಕಾಲವೇನೂ ಬಾಳಲಿಲ್ಲ. ಚೀನೀ ಕಮ್ಯೂನಿಸ್ಟರು ಕಮ್ಯೂನಿಸಂಗೆ ತಿಲಾಂಜಲಿ ಇಡುವ ಕೆಲಸವನ್ನು 1978ರಲ್ಲಿ ಆರಂಭಿಸಿ 1994ರ ಹೊತ್ತಿಗೆ ಸಂಪೂರ್ಣಗೊಳಿಸಿದರು. ಈಗ ಚೀನಾದಲ್ಲಿ ಕಮ್ಯೂನಿಸಂ ಇರುವುದು ರಾಜಕೀಯ ಕ್ಷೇತ್ರದಲ್ಲಷ್ಟೇ. ಆರ್ಥಿಕವಾಗಿ ಅದು ಎಂದೋ ಬಂಡವಾಳಶಾಹಿ ದೇಶವಾಗಿಹೋಗಿದೆ. ಅಂದರೆ ಮಾವೋನ ವಾದವನ್ನು ಅವನ ಅನುಯಾಯಿಗಳೇ ತಿಪ್ಪೆಗೆಸೆದಿದ್ದಾರೆ!

ಇದಕ್ಕೆ ವಿರುದ್ಧವಾಗಿ, 1215ರಲ್ಲಿ ಮ್ಯಾಗ್ನಾ ಕಾರ್ಟಾ ಮೂಲಕ ರಾಜಸತ್ತೆಯ ಅಧಿಕಾರವನ್ನು ಸೀಮಿತಗೊಳಿಸಿ, ಪ್ರಜೆಗಳ ಕೈಗೆ ಅಧಿಕಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದ ಬ್ರಿಟನ್​ನಲ್ಲಿ ಪ್ರಜಾಪ್ರಭುತ್ವ ವಿಕಾಸದ ಮಾರ್ಗ ಹಿಡಿದು ಅದಿಂದು ಹೆಮ್ಮರವಾಗಿ ಬೆಳೆದು ನಿಂತಿದೆ. 1789-1848ರ ಅವಧಿಯಲ್ಲಿ ನಾಲ್ಕು ಕ್ರಾಂತಿಗಳ ಮೂಲಕ ಬದಲಾವಣೆ ತರಲು ಪ್ರಯತ್ನಿಸಿ ಸೋತ ಫ್ರೆಂಚರು ಅಂತಿಮವಾಗಿ 1871ರಲ್ಲಿ ಸಂವಿಧಾನಾತ್ಮಕ ಮಾರ್ಗಕ್ಕಿಳಿದರು. ಪರಿಣಾಮವಾಗಿ ಅಲ್ಲಿ ವಿಕಾಸ ಹೊಂದತೊಡಗಿದ ಪ್ರಜಾಪ್ರಭುತ್ವ ಅಲ್ಲೀಗ ಸದೃಢವಾಗಿ ನಿಂತಿದೆ.

ಇದೆಲ್ಲವೂ ಹೇಳುವುದು ನಮ್ಮಲ್ಲೂ ಬದಲಾವಣೆಯಾಗಬೇಕಿರುವುದು ಕ್ರಾಂತಿಯ ಮೂಲಕವಲ್ಲ, ಉತ್ಕ್ರಾಂತಿಯ ಅಂದರೆ ವಿಕಾಸದ ಮೂಲಕ. ಕ್ರಾಂತಿಗಳು ಎಂತಹ ಜೀವಹಾನಿಗೆ, ಸಾಮಾಜಿಕ ಅಲ್ಲೋಲಕಲ್ಲೋಲಕ್ಕೆ ಕಾರಣವಾಗುತ್ತವೆಂದು ಫ್ರಾನ್ಸ್, ರಷಿಯಾ, ಚೀನಾಗಳಲ್ಲಿ ನಾವು ನೋಡಿಯೇ ಇದ್ದೇವೆ. ಅದೀಗ ಹಲವು ಪಟ್ಟು ದೊಡ್ಡದಾಗಿ 130 ಕೋಟಿ ಜನರ ಈ ದೇಶದಲ್ಲಿ ಆಗುವುದು ಬೇಡ. ವಿಕಾಸದ ಮೂಲಕವೇ ನಾವು ಬದಲಾವಣೆ ತರೋಣ. ಈ ವಿಕಾಸದ ಪ್ರಕ್ರಿಯೆ 1950ರ ಜನವರಿ 26ರಂದೇ ಆರಂಭವಾಗಿದೆ. ಅದು ಹೀಗೇ ಸದೃಢಗೊಳ್ಳುತ್ತಾ ಸಾಗಲಿ. ಅದರಲ್ಲೇ ನಮ್ಮೆಲ್ಲರ ಹಿತವಿದೆ. ‘ನಾನೂ ನಗರ ನಕ್ಸಲ್’ ಎಂದು ಫಲಕ ನೇತುಹಾಕಿಕೊಂಡು, ವೇದಿಕೆಗಳಲ್ಲಿ ಕೂಗಿ ಅಮಾಯಕರನ್ನು ಅಡ್ಡದಾರಿಗೆಳೆಯುತ್ತಿರುವ ಬೇಜವಾಬ್ದಾರಿಯ ಜನ ಅರಿಯಬೇಕಾದ ಸರಳ ಸತ್ಯವಿದು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *

Back To Top