ಇನ್ನು ಕರ್ನಾಟಕದಲ್ಲಿ ಕಾಲ ವೇಗವಾಗಿ ಸರಿಯುತ್ತದೆ!

| ಪ್ರೇಮಶೇಖರ

2004ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ, ನಿರಾಶೆಯಿಂದಲೋ ಹತಾಶೆಯಿಂದಲೋ ರಾಜಕೀಯ ಬೇಜವಾಬ್ದಾರಿ ವರ್ತನೆ ತೋರತೊಡಗಿತ್ತು. ಆದರೆ 2013ರ ಆರಂಭದಿಂದ ಬಿಜೆಪಿಯ ನಡವಳಿಕೆಯಲ್ಲಿ ಅಭೂತಪೂರ್ವ ಬದಲಾವಣೆ ಕಂಡಿತು; ಸಂಸತ್ತಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸತೊಡಗಿತು.

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು ಎರಡು ವಾರಗಳು ಕಳೆದಿವೆ. ಆದರೆ ಸರ್ಕಾರವೊಂದು ರಾಜ್ಯಕ್ಕಿನ್ನೂ ದೊರೆತಿಲ್ಲ. ಬಿಜೆಪಿ ನಾಯಕ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ ಸಂಪುಟ ರಚಿಸಿ ಸರ್ಕಾರವನ್ನು ಸ್ಥಾಪಿಸುವ ಅವಕಾಶ ಸಿಗದೇ ರಾಜಿನಾಮೆ ನೀಡಿದ ನಂತರ ಜೆಡಿ(ಎಸ್) ಮತ್ತು ಕಾಂಗ್ರೆಸ್ ಒಟ್ಟುಗೂಡಿ, ಸಮ್ಮಿಶ್ರ ಸರ್ಕಾರ ರಚನೆಗೆ ಸಾಂವಿಧಾನಿಕ ಅವಕಾಶ ಪಡೆದಾಗ್ಯೂ ಖಾತೆಗಳ ಹಂಚಿಕೆಯಲ್ಲಿ ಕ್ಯಾತೆಯಾಗಿ ಸರ್ಕಾರವಿನ್ನೂ ರಚನೆಯಾಗಿಲ್ಲ. ಈ ಅನಿಶ್ಚಿತ ಸನ್ನಿವೇಶದ ನಿರ್ವಣಕ್ಕೆ ಯಾರನ್ನು ಜವಾಬ್ದಾರರನ್ನಾಗಿಸಬೇಕು ಎಂದು ಹುಡುಕಹೊರಟರೆ ಸಿಗುವ ಉತ್ತರ ತಪ್ಪು ಎಲ್ಲರಿಂದಲೂ ಆಗಿದೆ ಮತ್ತು ಆಗುತ್ತಿದೆ ಎನ್ನುವುದು. ಇದನ್ನು ನಿಷ್ಪಕ್ಷಪಾತವಾಗಿ ವಿಶದಪಡಿಸಲು ಹೋದರೆ ಒಂದಕ್ಕಿಂತ ಹೆಚ್ಚು ಕಹಿಸತ್ಯಗಳನ್ನು ಅನಿವಾರ್ಯವಾಗಿ ಹೇಳಲೇಬೇಕಾಗುತ್ತದೆ.

ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಗಳಿಸುವ ಸಾಧ್ಯತೆ ಇಲ್ಲವೆನ್ನುವುದು ಚುನಾವಣೆಗೂ ಮೊದಲೇ ಎಲ್ಲರಿಗೂ ಗೊತ್ತಿದ್ದ ಸತ್ಯ. ಚುನಾವಣೆ ಸಂದರ್ಭದಲ್ಲಿ ಆ ಸರ್ಕಾರಕ್ಕೆದುರಾಗಿದ್ದ ಸವಾಲುಗಳ ಮೂಲ ಸಾಂರ್ದಭಿಕವಷ್ಟೇ ಅಲ್ಲದೆ ಸ್ವಯಂಕೃತಾಪರಾಧವೂ ಅಗಿತ್ತು. ಚುನಾವಣಾ ರಾಜಕೀಯದಲ್ಲಿ ಸಾಮಾನ್ಯವಾಗಿ ಕಂಡುಬರುವ, ರಾಜಕೀಯ ಪರಿಭಾಷೆಯಲ್ಲಿ ‘ಅಠಿಜಿಜ್ಞಿcಞಚಿಛ್ಞಿ್ಚ ್ಛ್ಚಟ್ಟ‘ ಎಂದು ಕರೆಯಲಾಗುವ ಆಡಳಿತ-ವಿರೋಧಿ ಅಂಶ ಎಲ್ಲ ಸರ್ಕಾರಗಳನ್ನೂ ಕಾಡುವಂತೆ ಕಾಂಗ್ರೆಸ್ ಸರ್ಕಾರವನ್ನೂ ಕಾಡಲು ತಯಾರಾಗಿದ್ದುದು ಸಹಜವೇ ಆಗಿತ್ತು. ಆದರೆ ಈ ಅಂಶವನ್ನು ಮೀರಿ ನಿಲ್ಲುವುದು ಸರ್ಕಾರಗಳಿಗೆ ಅಸಾಧ್ಯವೇನೂ ಅಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲೇ ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ರಂಗಗಳೆರಡರಲ್ಲೂ ಒಂದಕ್ಕಿಂತ ಹೆಚ್ಚು ಬಾರಿಯೇ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಆ ತಡೆಯನ್ನು ಮೀರಿ ನಿಲ್ಲಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸಬಹುದಾಗಿತ್ತು. ಆದರೆ, ಸಿಕ್ಕಿದ ಒಂದು ಅವಧಿಯಲ್ಲಿ ತನಗೆ ಬೇಕೆನಿಸಿದಂತೆ ರಾಜ್ಯಭಾರ ಮಾಡಿ ಹೊರಟುಹೋದರೆ ಅದೇ ತನಗೆ ದೊಡ್ಡ ‘ಭಾಗ್ಯ’, ಐದು ವರ್ಷದಾಚೆಗೆ ಅಧಿಕಾರದಲ್ಲಿರುವ ಇರಾದೆಯೇ ತನಗಿಲ್ಲ ಎನ್ನುವ ಆತ್ಮಹತ್ಯೀಯ ಮನೋಭಾವವನ್ನು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಪ್ರದರ್ಶಿಸುತ್ತಾ ಬಂದಿತು. ಆ ಸರ್ಕಾರದ ಕುಶಾಸನದ ಪರಿಚಯ ರಾಜ್ಯದ ಜನತೆಗೆ ಆಗಿಯೇ ಇದೆ. ಅದನ್ನಿಲ್ಲಿ ಮತ್ತೆ ಹೇಳುವ ಅಗತ್ಯವಿಲ್ಲದಿದ್ದರೂ ಈ ಲೇಖನದ ಪೂರ್ಣತೆಯ ದೃಷ್ಟಿಯಿಂದ ಸೂಚ್ಯವಾಗಿ ಕೆಲವು ಮಾತುಗಳನ್ನು ದಾಖಲಿಸುವ ಅಗತ್ಯವಿದೆ.

ಕಾಂಗ್ರೆಸ್ ಸರ್ಕಾರ ಧಾರ್ವಿುಕ ಅಲ್ಪಸಂಖ್ಯಾತರಿಗಷ್ಟೇ ಅನುಕೂಲವಾಗುವ ಕಾರ್ಯಯೋಜನೆಗಳನ್ನು ಹಮ್ಮಿಕೊಂಡದ್ದಲ್ಲದೇ, ಶಾಲಾಮಕ್ಕಳಿಗೆ ನೀಡುವ ಊಟದಲ್ಲೂ ಭೇದಭಾವ ಪ್ರದರ್ಶಿಸುವಂತಹ ಅಕ್ಷಮ್ಯ ಅಪರಾಧವನ್ನೆಸಗಿತು. ಅಲ್ಪಸಂಖ್ಯಾತ, ಹಿಂದುಳಿದ, ದಲಿತ ವರ್ಗಗಳ ಉದ್ಧಾರ ತನ್ನ ಗುರಿಯೆಂದೂ, ತಾನು ‘ಅಹಿಂದ’ ಎಂದೂ ಘೊಷಿಸಿಕೊಳ್ಳುವ ಮೂಲಕ ಮತ ಯಾಚಿಸಿ, ಅಧಿಕಾರ ಕೈಗೆ ದಕ್ಕಿದೊಡನೆ ‘ಅಹಿಂದ’ವನ್ನು ‘ಅಲ್ಪಸಂಖ್ಯಾತರನ್ನಾಗಿಸಿ ಹಿಂದೂಗಳನ್ನು ದಮನಿಸು’ ಎಂದು ಬದಲಾಯಿಸಿ, ಆ ಉದ್ದೇಶ ಸಾಧನೆಗಾಗಿ ಜಾತಿಜಾತಿಗಳ ನಡುವೆ ವೈಷಮ್ಯ ಅಧಿಕವಾಗುವಂತೆ ಮಾಡಿದ್ದಲ್ಲದೇ ಅಂತಿಮವಾಗಿ ಹಿಂದೂಧರ್ಮವನ್ನೇ ಒಡೆಯಲು ಹುನ್ನಾರ ನಡೆಸಿತು. ಹಿಂದೂ ದೇವಾಲಯಗಳಲ್ಲಿ ಕಾಣಿಕೆಗಳಿಂದ ಬಂದ ಆದಾಯವನ್ನು, ಹಿಂದೂಧರ್ಮದ ವಿರುದ್ಧ ಕಾರ್ಯಾಚರಣೆ ನಡೆಸುವ ಇತರ ಧರ್ವಿುೕಯರ ಪೂಜಾ/ಪ್ರಾರ್ಥನಾ ಗೃಹಗಳ ಅನುಕೂಲಕ್ಕಾಗಿ ಬಳಸತೊಡಗಿತು. ತನ್ನ ಕೆಲ ಹೇಯಕೃತ್ಯಗಳಿಂದಾಗಿ ಹಿಂದೂಗಳ ತಿರಸ್ಕಾರಕ್ಕೊಳಗಾಗಿದ್ದ ಟಿಪ್ಪು ಸುಲ್ತಾನ್​ನ ‘ಜಯಂತಿ’(?) ಆಚರಿಸುವಂತಹ ಅಧಾರ್ವಿುಕ, ಅರ್ತಾಕ, ಉದ್ದಟ ಕ್ರಮವನ್ನು ಆ ಸರ್ಕಾರ ಅನುಸರಿಸಿದ್ದರಲ್ಲಿ ಹಿಂದೂಗಳನ್ನು ಕೆಣಕುವ ಕಿಡಿಗೇಡಿತನವಲ್ಲದೇ ಬೇರಾವ ಘನ ಉದ್ದೇಶವೂ ಇರಲಿಲ್ಲ. ಸಾಮಾಜಿಕ, ಧಾರ್ವಿುಕ ಅಶಾಂತಿಗೆ, ರಕ್ತಪಾತಕ್ಕೆ ಕಾರಣವಾಗಿರುವ ಧಾರ್ವಿುಕ ಭಯೋತ್ಪಾದನಾ ಸಂಘಟನೆಯಾದ ಪಿಎಫ್​ಐ ಮೇಲಿನ ಪ್ರತಿಬಂಧವನ್ನು ತೆಗೆದುಹಾಕಿ, ಬಂಧಿತ ಶಾಂತಿಕಂಟಕರನ್ನು ಬಿಡುಗಡೆಗೊಳಿಸಿದ್ದಲ್ಲದೇ, ಒಂದಾದ ಮೇಲೊಂದರಂತೆ ಘಟಿಸಿದ ಹಿಂದೂಗಳ ಹತ್ಯೆಯನ್ನು ತಣ್ಣಗೆ ನೋಡುತ್ತಾ ಕುಳಿತುಬಿಟ್ಟಿತು. ಹಾಗೆ ಮಾಡುವ ಮೂಲಕ, ಮತ್ತಷ್ಟು ಹಿಂದೂಗಳ ಹತ್ಯೆಗೆ ಪ್ರಚೋದನೆ ನೀಡಿತು. ಈ ನಕಾರಾತ್ಮಕ ನೀತಿಗಳಿಂದಾಗಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯ ಬಹುದೊಡ್ಡ ವರ್ಗವನ್ನು ದೂರ ಮಾಡಿಕೊಂಡಿತು. ಇದು ಸಾಲದು ಎಂಬಂತೆ ಮುಖ್ಯಮಂತ್ರಿಯೂ ಸೇರಿದಂತೆ ಕೆಲವು ಸಚಿವರು ತಮ್ಮ ಸ್ಥಾನಕ್ಕೆ ತಕ್ಕುದಲ್ಲದ ಕೆಲ ಅನುಚಿತ ನಡೆನುಡಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಲ್ಲದೇ ಸರ್ಕಾರಕ್ಕೆ ತೀರಾ ಹತ್ತಿರದಲ್ಲಿದ್ದ ಮತ್ತೆ ಕೆಲವರು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವೈಚಾರಿಕ ವಿರೋಧಿಗಳ ವಿರುದ್ಧ ತೋರಿದ ಅಸಹ್ಯಕರ ದುರಹಂಕಾರದ ವರ್ತನೆಗಳು ಯುವ ಮತದಾರರ ಬಹು ದೊಡ್ಡ ವರ್ಗವನ್ನು ಕಾಂಗ್ರೆಸ್​ನಿಂದ ವಿಮುಖಗೊಳಿಸಿದವು.

ಈ ಎಲ್ಲಾ ಸ್ವಯಂಕೃತಾಪರಾಧಗಳಿಂದಾಗಿ ಸಿದ್ದರಾಮಯ್ಯ ಸರ್ಕಾರ ಮತ್ತೆ ಜನಾದೇಶ ಗಳಿಸುವುದು ಸಾಧ್ಯವೇ ಇಲ್ಲ ಎನ್ನುವುದು ಜನತೆಗಿರಲಿ, ಸರ್ಕಾರದಲ್ಲಿದ್ದವರಿಗೇ ತಿಳಿದುಹೋಗಿತ್ತು. ಆದಾಗ್ಯೂ, ಬಿಜೆಪಿ ಪೂರ್ಣ ಬಹುಮತ ಗಳಿಸಿದೇಹೋದದ್ದಕ್ಕೆ ಸಕಾರಣಗಳಿವೆ. ಕಳೆದ ಲೋಕಸಭಾ ಚುನಾವಣೆ ತರುವಾಯ ಮೋದಿ ಸರ್ಕಾರದ ವಿರುದ್ಧ ಹಗರಣಗಳ ಆಪಾದನೆ ಹೊರಿಸಲಾಗದ ಕಾಂಗ್ರೆಸ್ ಪ್ರತಿ ವಿಧಾನಸಭಾ ಚುನಾವಣೆಗಳ ಸಂದರ್ಭದಲೂ ಯಾವುದಾದರೊಂದು ವಿಷಯವನ್ನೆತ್ತಿಕೊಂಡು ಬಿಜೆಪಿ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸುವ ತಂತ್ರ ರೂಢಿಸಿಕೊಂಡಿದೆ. ಅಸಹಿಷ್ಣುತೆ, ಜಸ್ಟಿಸ್ ಲೋಧಾ ಸಾವು ಅಂತಹ ಕೆಲವು ತಂತ್ರಗಳು. ಕರ್ನಾಟಕ ಚುನಾವಣೆಯಲ್ಲಿ ಬಿಜಿಪಿ ವಿರುದ್ಧ ಅಪಪ್ರಚಾರಕ್ಕಾಗಿ ಕಾಂಗ್ರೆಸ್ ದುರುಪಯೋಗಪಡಿಸಿಕೊಂಡದ್ದು ಉನ್ನಾವ್ ಮತ್ತು ಕಠುವಾ ಅತ್ಯಾಚಾರಗಳನ್ನು. ಜತೆಗೆ, ಬಿಜೆಪಿಯ ಕೆಲ ಉತ್ಸಾಹಿ ನಾಯಕರ ಹೇಳಿಕೆಗಳನ್ನು ತಿರುಚಿ ಆ ಮೂಲಕ ಸಮಾಜದ ಕೆಲವರ್ಗಗಳನ್ನು ಬಿಜೆಪಿಯಿಂದ ವಿಮುಖಗೊಳಿಸುವಲ್ಲೂ ಕಾಂಗ್ರೆಸ್ ತಕ್ಕಮಟ್ಟಿಗೆ ಯಶಸ್ವಿಯಾಯಿತು. ಇವೆಲ್ಲವೂ ಬಿಜೆಪಿಗೆ ಬಹುಮತ ಬಾರದಿರಲು ಸಣ್ಣಪುಟ್ಟ ಕಾರಣಗಳಷ್ಟೇ. ಪ್ರಮುಖ ಕಾರಣಗಳನ್ನು ಹುಡುಕಹೊರಟರೆ ಬಿಜೆಪಿಯ ಸ್ವಯಂಕೃತಾಪರಾಧಗಳಿಗೇ ನಾವು ಮುಖಾಮುಖಿಯಾಗುತ್ತೇವೆ. ಇದು ಮನದಟ್ಟಾಗಬೇಕಾದರೆ ವಿರೋಧಪಕ್ಷವಾಗಿ ಬಿಜೆಪಿ ಕೇಂದ್ರದಲ್ಲಿ ತೋರಿದ ನಡವಳಿಕೆಯನ್ನು ರಾಜ್ಯದಲ್ಲಿ ತೋರಿದ ನಡವಳಿಕೆಯೊಂದಿಗೆ ಹೋಲಿಸುವುದು ಅಗತ್ಯವಾಗುತ್ತದೆ.

ಹಲವಾರು ಒಳ್ಳೆಯ ಕಾರ್ಯಗಳನ್ನು ಮಾಡಿದಾಗ್ಯೂ 2004ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ, ನಿರಾಶೆಯಿಂದಲೋ ಹತಾಶೆಯಿಂದಲೋ ರಾಜಕೀಯ ಬೇಜವಾಬ್ದಾರಿ ವರ್ತನೆ ತೋರತೊಡಗಿದ್ದು ನಿಮಗೆ ನೆನಪಿರಲೇಬೇಕು. ಸಂಸತ್ತಿನಲ್ಲಿ ಚಂಡಿಯಂತೆ ಮೊಂಡು ಹಿಡಿದು ಕಲಾಪಗಳಿಗೆ ಮತ್ತೆ ಮತ್ತೆ ಅಡ್ಡಿಪಡಿಸಿದ ಆ ಪಕ್ಷ 2009ರ ಚುನಾವಣೆಗಳ ವೈಫಲ್ಯದಿಂದಲೂ ಪಾಠ ಕಲಿಯಲಿಲ್ಲ. ಆದರೆ 2013ರ ಅರಂಭದಿಂದ ಬಿಜೆಪಿಯ ನಡವಳಿಕೆಯಲ್ಲಿ ಅಭೂತಪೂರ್ವ ಬದಲಾವಣೆ ಕಂಡಿತು. ಲೋಕಸಭಾ ಚುನಾವಣೆ ಇನ್ನೊಂದು ವರ್ಷ ಇರುವಂತೇ ಬಿಜೆಪಿ ಸಂಸತ್ತಿನಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸತೊಡಗಿದ್ದಲ್ಲದೇ ಯುಪಿಎ ಸರ್ಕಾರದ ಪೆನ್ಷನ್ ಯೋಜನೆಯಂತಹ ಜನಹಿತ ಕಾರ್ಯಕ್ರಮಗಳಿಗೆ ಬೆಂಬಲ ನೀಡಿ, ಆ ಕುರಿತ ಮಸೂದೆಗಳು ಅಂಗೀಕಾರವಾಗಲು ಅವಕಾಶ ಮಾಡಿಕೊಟ್ಟಿತು. ಆಹಾರ ಸುರಕ್ಷಾ ಮಸೂದೆಗೂ ಬಿಜೆಪಿಯ ಬೆಂಬಲವಿದ್ದಾಗ್ಯೂ ಯುಪಿಎ ಸರ್ಕಾರ ಅದನ್ನು ಸಂಸತ್ತಿನಲ್ಲಿ ಮಂಡಿಸಿ ಕಾನೂನು ಮಾಡುವ ಬದಲು ಆ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ ತಾನು ಮಾತ್ರ ಜನಹಿತಕಾರಿ ಎಂದು ಬಿಂಬಿಸಿಕೊಳ್ಳಲು ನೋಡಿ ನಗೆಪಾಟಲಿಗೀಡಾಯಿತು.

ಒಟ್ಟಿನಲ್ಲಿ ವಿರೋಧಪಕ್ಷವಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಬಿಜೆಪಿ ಸದಾ ಸುದ್ದಿಯಲ್ಲಿತ್ತು. ಮೊದಲ ಎಂಟು-ಎಂಟೂವರೆ ವರ್ಷಗಳಲ್ಲಿ ತನ್ನ ಮೊಂಡಾಟಗಳ, ವಾಗ್ದಾಳಿಗಳ ಮೂಲಕ ಆಡಳಿತಾರೂಢ ಯುಪಿಎ ಅನ್ನು ಸದಾ ಕೆಂಡದ ಮೇಲೆ ನಿಲ್ಲಿಸಿತ್ತು. ಬಿಜೆಪಿಯ ಈ ವರ್ತನೆ 1977-79ರಲ್ಲಿ ಜನತಾ ಸರ್ಕಾರದ ವಿರುದ್ಧ ಇಂದಿರಾ ಕಾಂಗ್ರೆಸ್ ಅನುಸರಿಸಿದ್ದ ನೀತಿಯನ್ನು ಬಹುಮಟ್ಟಿಗೆ ಹೋಲುತ್ತದೆ. ನಂತರ ಕೊನೆಯ ಒಂದು-ಒಂದೂವರೆ ವರ್ಷದಲ್ಲಿ ಬಿಜೆಪಿ ಮತದಾರರ ನಾಡಿಮಿಡಿತಕ್ಕನುನುಗುಣವಾಗಿ ಚುನಾವಣಾ ರಣತಂತ್ರಗಳನ್ನು ರೂಪಿಸಿಕೊಂಡು ಯುಪಿಎ ಅನ್ನು ಎದುರಿಸಲು ಸಜ್ಜಾಯಿತು. ನರೇಂದ್ರ ಮೋದಿಯಂತಹ ವಾಗ್ಮಿ ವರ್ಚಸ್ವೀ ನಾಯಕನನ್ನು ಮುಂದಿಟ್ಟುಕೊಂಡು ಕಣಕ್ಕಿಳಿಯಿತು. ಒಟ್ಟಿನಲ್ಲಿ, ಮತದಾರರ ಗಮನದಿಂದ ಬಿಜೆಪಿ ಎಂದೂ ದೂರಾಗಲಿಲ್ಲ.

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಈ ನಡವಳಿಕೆಯನ್ನು ರಾಜ್ಯ ಬಿಜೆಪಿಯ ನಡವಳಿಕೆಗೆ ಹೋಲಿಸಿದರೆ ನಿರಾಶೆ ಕಾಣುತ್ತದೆ. ಎರಡು ಹೋಳಾಗಿ 2013ರ ಚುನಾವಣೆಯನ್ನೆದುರಿಸಿದ ಬಿಜೆಪಿ ಹೀನಾಯ ಸೋಲಿನ ನಂತರ ಮತ್ತೆ ಒಂದಾದರೂ ಬಿರುಕಿನ ಗುರುತು ಮಾಸಲಿಲ್ಲ. ಪಕ್ಷದಲ್ಲಿನ ಆಂತರಿಕ ಭಿನ್ನಮತ ಹಲವೊಮ್ಮೆ ಸಾರ್ವಜನಿಕವಾಗಿಯೇ ವ್ಯಕ್ತವಾಗಿ ಪಕ್ಷದ ವರ್ಚಸ್ಸಿಗೆ ಮಸಿ ಬಳಿಯುವುದೂ ನಡೆಯಿತು. ಜತೆಗೆ, ವಿರೋಧಪಕ್ಷವಾಗಿ ಬಿಜೆಪಿ ಒಂದಷ್ಟು ಕಾಲ ಮುದುರಿಯೇಹೋಯಿತು. 2014ರ ನಂತರ ಅತ್ತ ಲೋಕಸಭೆಯಲ್ಲಿ ಕಾಂಗ್ರೆಸ್ ಕೇವಲ ನಲವತ್ತನಾಲ್ಕು ಸದಸ್ಯರನ್ನಿಟ್ಟುಕೊಂಡು ಮೋದಿ ಸರ್ಕಾರದ ವಿರುದ್ಧ ನಿರಂತರ ಸುದ್ದಿ ಮಾಡುತ್ತಿದ್ದರೆ ಇತ್ತ ನಲವತ್ತಾರು ಸದಸ್ಯರನ್ನಿಟ್ಟುಕೊಂಡು ಬಿಜೆಪಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಯಾವುದೇ ಪರಿಣಾಮಕಾರಿ ಕಾರ್ಯಾಚರಣೆಗೆ ತೊಡಗಲು ಹಿಂದೆಗೆಯಿತು. ದೇಶದ ಯಾವುದೋ ಮೂಲೆಯಲ್ಲಿ ಘಟಿಸಿದ ಅಲ್ಪಸಂಖ್ಯಾತರ, ದಲಿತರ ಹತ್ಯೆಗಳನ್ನು ಬಿಜೆಪಿಯ, ಹಿಂದೂ ಸಂಘಟನೆಗಳ ತಲೆಗೆ ಕಟ್ಟಿ ಕಾಂಗ್ರೆಸ್ ಲೋಕಸಭೆಯ ಒಳಗೆ ಹೊರಗೆ ನಿರಂತರ ಗದ್ದಲವೆಬ್ಬಿಸುತ್ತಿದ್ದರೆ ಒಂದು ಹಂತದಲ್ಲಂತೂ ಕರ್ನಾಟಕದಲ್ಲಿ ವಿರೋಧ ಪಕ್ಷ ಇದೆಯೇ ಎಂಬ ಪ್ರಶ್ನೆ ಮೂಡುವಂತಹ ಸ್ಥಿತಿ ನಿರ್ವಣವಾಗಿತ್ತು. ರಾಜ್ಯ ಬಿಜೆಪಿ ಸಾಮಾನ್ಯ ಮತದಾರರ ಗಮನದಿಂದ ದೂರವಾದದ್ದು ಹೀಗೆ. ಚುನಾವಣೆ ಹತ್ತಿರಾಗುತ್ತಿದ್ದಂತೇ ಪಕ್ಷ ಮೈ ಕೊಡವಿ ಮೇಲೆದ್ದರೂ ಅದಕ್ಕೆ ಸಿಕ್ಕಿದ ಸಮಯ ಬಹಳ ಕಡಿಮೆಯಿತ್ತು. ದಿನವಿಡೀ ಹೋಂವರ್ಕ್ ನಿರ್ಲಕ್ಷಿಸಿದ ವಿದ್ಯಾರ್ಥಿಯೊಬ್ಬ ಇನ್ನೇನು ಶಾಲೆಗೆ ಹೊರಡುವ ಹೊತ್ತಿನಲ್ಲಿ ಆತುರಾತುರವಾಗಿ ಪುಸ್ತಕ ತೆರೆದಿಟ್ಟುಕೊಂಡು ಕೂತಂತಹ ಸ್ಥಿತಿ ಬಿಜೆಪಿಯದು. ಹೀಗಾಗಿ, ಆಡಳಿತ-ವಿರೋಧಿ ಅಲೆಯನ್ನು ತನಗನು ಕೂಲವಾಗುವಂತೆ ತಿರುಗಿಸಿಕೊಳ್ಳುವುದರಲ್ಲಿ ಬಿಜೆಪಿಗೆ ಯಶಸ್ಸು ದಕ್ಕಲಿಲ್ಲ.

ಹಾಗೆಂದ ಮಾತ್ರಕ್ಕೆ ರಾಜ್ಯ ಬಿಜೆಪಿಗೆ ಅಧಿಕಾರದ ಬಾಗಿಲು ಪೂರ್ಣವಾಗಿ ಮುಚ್ಚಿಹೋಗಿದೆ ಎಂದರ್ಥವಲ್ಲ. ಈಗ ಅಧಿಕಾರಕ್ಕಾಗಿ ಜತೆಗೂಡಿರುವ ಕಾಂಗ್ರೆಸ್ ಮತ್ತು ಜೆಡಿ(ಎಸ್)ಗಳಲ್ಲಿ ಸಮಾನ ಅಂಶಗಳಿಲ್ಲ. ‘ಅಧಿಕಾರ ಸಿಗದಿದ್ದರೆ ಬದುಕುವುದಿಲ್ಲ’ ಎಂದು, ಆತ್ಮಾಭಿಮಾನವನ್ನು ಗಾಳಿಗೆ ತೂರಿ ಮತದಾರರ ಮುಂದೆ ಸೆರಗೊಡ್ಡಿ ಬೇಡಿಕೊಂಡ ಎಚ್. ಡಿ. ಕುಮಾರಸ್ವಾಮಿಯವರಿಗಿರುವುದು ಕೇವಲ ಮುಖ್ಯಮಂತ್ರಿ ಸ್ಥಾನದ ಹಪಾಹಪಿಯಷ್ಟೇ. ಕಾಂಗ್ರೆಸ್​ಗಿರುವ ಒತ್ತಡ ಬೇರೆ ಬಗೆಯದು. ರಾಜ್ಯದಲ್ಲಿ ಅಧಿಕಾರದ ಅಗತ್ಯ ರಾಜ್ಯ ಕಾಂಗ್ರೆಸ್​ಗಿಂತಲೂ ಕಾಂಗ್ರೆಸ್ ಹೈಕಮಾಂಡ್​ಗೆ ಹೆಚ್ಚಾಗಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳ ಸಂಖ್ಯೆ ವೇಗವಾಗಿ ಕುಗ್ಗುತ್ತಾ ಬಂದು ವರ್ಷದ ಹಿಂದೆ ಅದು ಕೇವಲ ಕರ್ನಾಟಕ, ಪಂಜಾಬ್, ಮಿಜೋರಾಂ ಮತ್ತು ಪಾಂಡಿಚೆರಿಗೆ ಸೀಮಿತಗೊಂಡಿತಷ್ಟೇ. ಈ ಹಿನ್ನೆಲೆಯಲ್ಲಿ, ಕರ್ನಾಟಕವನ್ನು ಕಳೆದುಕೊಂಡರೆ ಹೈಕಮಾಂಡ್​ಗೆ ಮುಖ್ಯ ಆದಾಯದ ಮೂಲ ಕೈಜಾರಿಹೋದಂತಾಗುತ್ತದೆ. ಹೀಗಾಗಿ, ಲೋಕಸಭಾ ಚುನಾವಣೆಗಳನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಕರ್ನಾಟಕವನ್ನು ಕಳೆದುಕೊಳ್ಳುವುದು ಕಾಂಗ್ರೆಸ್​ಗೆ ಬಲು ದೊಡ್ಡ ಹೊಡೆತ ನೀಡುತ್ತದೆ. ಮುಂದಿನ ವರ್ಷ ತಾನು ಪ್ರಧಾನಮಂತ್ರಿಯಾಗುವ ಕನಸನ್ನು ಬಹಿರಂಗಗೊಳಿಸಿದ ಬೆನ್ನಲ್ಲೇ ‘ಕರ್ನಾಟಕದ ಚುನಾವಣಾ ಫಲಿತಾಂಶ ನನ್ನ ಭವಿಷ್ಯವನ್ನೂ ನಿರ್ಧರಿಸಲಿದೆ’ ಎಂದು ರಾಹುಲ್ ಗಾಂಧಿ ಅಲವತ್ತುಕೊಂಡದ್ದು ಈ ಕಾರಣದಿಂದಾಗಿ. ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿ ತನಗೆ ನೇರ ಅಧಿಕಾರ ಸಿಗದಿದ್ದರೂ ಅದು ತನ್ನ ಬದ್ಧವೈರಿಯ ಕೈಗೆ ದಕ್ಕಬಾರದು ಎನ್ನುವುದು ಕಾಂಗ್ರೆಸ್​ನ ಸದ್ಯದ ಜರೂರು. ಈ ವ್ಯವಸ್ಥೆಯಿಂದ ಆಸೆಬುರುಕ ಜೆಡಿ(ಎಸ್)ಗೆ ಮುಖ್ಯಮಂತ್ರಿ ಸ್ಥಾನವೂ, ಕಾಂಗ್ರೆಸ್​ಗೆ ಖಜಾನೆಯೂ ದಕ್ಕಿದರೆ ಇಬ್ಬರೂ ಖುಷ್. ಈ ವ್ಯವಸ್ಥೆ ದೇಶದ ಕಾಕ (ಕಾಂಗ್ರೆಸ್-ಕಮ್ಯೂನಿಸ್ಟ್)ವಿಚಾರವಾದಿಗಳಿಗೂ ಅನುಕೂಲಕರ. ಏಕೆಂದರೆ ಮೋದಿ ಸರ್ಕಾರದ ವಿರುದ್ಧ ಕಾಕಗಳ ಎಲ್ಲ ನೌಟಂಕಿಗಳಿಗೂ ವೇದಿಕೆ ಕಲ್ಪಿಸುತ್ತಿದ್ದುದು ಕರ್ನಾಟಕ.

ಆದರೆ, ಪ್ರಶ್ನೆಯೆಂದರೆ, ಈ ಅನುಕೂಲಸಿಂಧು ಮದುವೆ ಎರಡೂ ಪಕ್ಷಗಳಿಗೆ ಎಲ್ಲಿಯವರೆಗೆ ಸಹನೀಯವೆನಿಸಬಹುದು? ಮುಖ್ಯಮಂತ್ರಿಯ ಸ್ಥಾನಕ್ಕಿಂತ ಆತ್ಮಾಭಿಮಾನ ಮುಖ್ಯ ಎಂದು ಕುಮಾರಸ್ವಾಮಿ ಅರಿಯುವವರೆಗೆ ಅಥವಾ ಮುಖ್ಯಮಂತ್ರಿಯ ಸ್ಥಾನದ ಜತೆಗೆ ಖಜಾನೆಯನ್ನೂ ಕಳೆದುಕೊಂಡು, ತನ್ನ ಪರಿಸ್ಥಿತಿ ‘ಕಾಸೂ ಕೇಡು, ತಲೆಯೂ ಬೋಳು’ ಎನ್ನುವಂತಾಗಿದೆ ಎಂಬ ಜ್ಞಾನೋದಯ ಕಾಂಗ್ರೆಸ್​ಗೆ ಆಗುವವರೆಗೆ! ಅಲ್ಲಿಗೆ ಜೆಡಿ(ಎಸ್) ಕಣದಿಂದ ನಿರ್ಗಮಿಸಿದಂತೆಯೇ. ಅಖಾಡದಲ್ಲಿ ಉಳಿಯುವುದು ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ. ಆಗ ನಡೆಯುವ ನೇರ ಹಣಾಹಣಿಗೆ ಬಿಜೆಪಿ ಈಗಿಂದೀಗಲೇ ತಯಾರಿ ಆರಂಭಿಸಬೇಕು. ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕತ್ವದ ಪ್ರಸಕ್ತ ನಡೆನುಡಿಗಳನ್ನು ನೋಡಿದರೆ ಆ ತಯಾರಿ ಈಗಾಗಲೇ ಆರಂಭವಾಗಿದೆ ಎಂಬ ಸೂಚನೆ ಸಿಗುತ್ತದೆ. ಇಲ್ಲಿಂದಾಚೆಗೆ ಕರ್ನಾಟಕದಲ್ಲಿ ಕಾಲ ವೇಗವಾಗಿ ಸರಿಯುತ್ತದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *