ಮೋದಿ ಮುಂದಿರುವುದು ಅದೆಂತಹ ಕಠಿಣಹಾದಿ!

| ಪ್ರೇಮಶೇಖರ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ವರ್ಚಸ್ಸು ಶತ್ರುರಾಷ್ಟ್ರಗಳಿಗೆ ತಲೆನೋವು ತಂದಿದೆ. ಅದರಲ್ಲೂ, ಚೀನಾ ಮತ್ತು ಪಾಕಿಸ್ತಾನ ಭಾರತವನ್ನು ಹಣಿಯಲು ಒಂದಿಲ್ಲೊಂದು ತಂತ್ರ ರೂಪಿಸುತ್ತಿದ್ದು, ನಮ್ಮ ದೇಶದ ಕೆಲ ಶಕ್ತಿಗಳು ಇದಕ್ಕೆ ಬೆಂಬಲವಾಗಿ ನಿಂತಿವೆ ಎಂಬುದು ವಿಪರ್ಯಾಸ. ಈ ಎಲ್ಲ ಸವಾಲುಗಳನ್ನು ಮೋದಿ ಹೇಗೆ ಗೆಲ್ಲುತ್ತಾರೆ ಎಂಬುದು ಮುಂದಿನ ಕುತೂಹಲ.

ಇತಿಹಾಸದ ಚಕ್ರ ಒಂದು ಸುತ್ತು ತಿರುಗಿದೆ.

ಐವತ್ತರ ದಶಕದಲ್ಲಿ ಏಷ್ಯಾದಲ್ಲಿ ಕಮ್ಯೂನಿಸಂ ಹರಡುವಿಕೆಯ ಚೀನಿ ಯೋಜನೆಗಳಿಗೆ ತಡೆಗೋಡೆಯಾಗಿ ನಿಲ್ಲಬಲ್ಲ ದೇಶವೆಂದು ಅಮೆರಿಕ ಗುರುತಿಸಿದ್ದು ಭಾರತವನ್ನು. ಆದರೆ, ಅಮೆರಿಕದ ಸಖ್ಯವನ್ನು ತಿರಸ್ಕರಿಸಿದ ಜವಾಹರಲಾಲ್ ನೆಹರು ಚೀನಾ ಜತೆಗೇ ಮೈತ್ರಿಗೆ ಮುಂದಾದರು. ನೆರಳಿಗಾಗಿ ಹಾವಿನ ಹೆಡೆಯ ಕೆಳಗೆ ಆಶ್ರಯ ಪಡೆಯುವಂತಹ ಈ ಅವಿವೇಕಿ ನೀತಿ ರ್ತಾಕವಾಗಿ ಅಂತ್ಯಗೊಳ್ಳಬೇಕಾದ್ದು ದೇಶದ ಸುರಕ್ಷೆಗೆ ಬಲುದೊಡ್ಡ ಪೆಟ್ಟು ಬೀಳುವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನವಾಗುವ ಮೂಲಕವಷ್ಟೇ. 1962ರಲ್ಲಿ ಅದಾಯಿತು.

ಇಂದು ಚೀನಾ, ಏಷ್ಯಾದಿಂದ ಹೊರಗೆ ತನ್ನ ಪ್ರಭಾವವನ್ನು ವಿಸ್ತರಿಸಹೊರಟಿದೆ; ಉತ್ತರ ಅಮೆರಿಕ ಮತ್ತು ಪಶ್ಚಿಮ ಯುರೋಪ್​ಗಳನ್ನು ಹೊರತುಪಡಿಸಿ ಇಡೀ ಭೂಮಂಡಲವನ್ನು ತನ್ನ ಆರ್ಥಿಕ, ಸೇನಾ, ರಾಜಕೀಯ ಪ್ರಭಾವದ ತೆಕ್ಕೆಯಲ್ಲಿ ಸಿಲುಕಿಸಿಕೊಳ್ಳಲು ಜಾಲ ಹೆಣೆಯುತ್ತಿದೆ. ಆರೇಳು ದಶಕಗಳ ಹಿಂದೆ ಸೋವಿಯತ್ ಒಕ್ಕೂಟ ಹೂಡಿದ್ದ ಹೂಟಕ್ಕಿಂತಲೂ ಭಯಾನಕವಾದ ಯೋಜನೆ ಇದು. ಹಿಂದೆ ತನ್ನ ಸೇನಾ-ರಾಜಕೀಯ ಚಟುವಟಿಕೆಗಳನ್ನು ಪೂರ್ಣವಾಗಿ ಜಾರಿಗೊಳಿಸುವ ಆರ್ಥಿಕ ತಾಕತ್ತು ಸೋವಿಯತ್ ಒಕ್ಕೂಟಕ್ಕೆ ಇರಲೇ ಇಲ್ಲ. ಆದರೆ ಅಂತಹ ಸಾಮರ್ಥ್ಯ ಚೀನಾಗಿದೆ. ಅಗತ್ಯವಾದ ಆರ್ಥಿಕ ಸಾಮರ್ಥ್ಯನ್ನು ಮೊದಲು ಗಳಿಸಿಕೊಂಡೇ ಚೀನಾ ಅಂತಾರಾಷ್ಟ್ರೀಯ ಸೇನಾ-ರಾಜಕೀಯ ಕ್ಷೇತ್ರಕ್ಕೆ ಧುಮುಕಿರುವುದು.

ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿ ಅಮೆರಿಕ ಮತ್ತದರ ಸಹಯೋಗಿಗಳು ಚೀನಾದ ವಿರುದ್ಧ ಹೂಡಬೇಕಾದ ಪ್ರತಿಕ್ರಮಗಳನ್ನು ಜಾಣ್ಮೆ, ತಾಳ್ಮೆಯಿಂದ ರೂಪಿಸುತ್ತಿವೆ. ಅವುಗಳ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ್ದು ಸಹಜವಾಗಿಯೇ ಭಾರತ. ಇತಿಹಾಸದ ಚಕ್ರ ಒಂದು ಸುತ್ತು ತಿರುಗಿದೆ.

ಐವತ್ತರ ದಶಕಕ್ಕೂ, ಇಂದಿನ ದಿನಮಾನಕ್ಕೂ ಇರುವ ವ್ಯತ್ಯಾಸವೆಂದರೆ ನವದೆಹಲಿಯಲ್ಲಿ ನೆಹರು ಸರ್ಕಾರದ ಬದಲಾಗಿ ಮೋದಿ ಸರ್ಕಾರವಿದೆ. ಭಾರತದ ಹಿತಾಸಕ್ತಿಗಳಿಗೆ ಅತಿಹೆಚ್ಚಿನ ಅಪಾಯವಿರುವುದು ಚೀನಾದಿಂದ ಎಂದು ಮೋದಿ ಅರಿತಿದ್ದಾರೆ. ಚೀನಾ ಜತೆ ಸಹಕಾರ ಅಗತ್ಯವಿರುವ ಕ್ಷೇತ್ರಗಳಲ್ಲಿ ರಾಜಿ ಮಾಡಿಕೊಳ್ಳುತ್ತಲೇ, ಪ್ರತಿರೋಧ ಒಡ್ಡಬೇಕಾದ ಕ್ಷೇತ್ರಗಳಲ್ಲಿ ದ್ವಂದ್ವಕ್ಕೆಡೆಯಿಲ್ಲದ ವಿರೋಧ ವ್ಯಕ್ತಪಡಿಸುವ ವಿವೇಕಿ, ವ್ಯಾವಹಾರಿಕ ನೀತಿಯನ್ನು ಮೋದಿ ಅನುಸರಿಸುತ್ತಿದ್ದಾರೆ. ಇದನ್ನು ಚೀನಾ ನಿರೀಕ್ಷಿಸಿರಲಿಲ್ಲ. 2013ರ ಮಾರ್ಚ್​ನಲ್ಲಿ ಅಧಿಕಾರಕ್ಕೆ ಬಂದ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸತೊಡಗಿದಾಗ ಅವನ್ನು ವಿರೋಧಿಸುವಂತಹ ಎದುರಾಳಿಯೊಬ್ಬ ಇನ್ನೊಂದೇ ವರ್ಷದಲ್ಲಿ ಸೃಷ್ಟಿಯಾಗುತ್ತಾನೆಂದು ಅವರು ನಿರೀಕ್ಷಿಸಿರಲಿಲ್ಲ. ಭಾರತದ ಸುರಕ್ಷೆಯ ಬಗ್ಗೆ ಹಿಂದಿನ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ರೂಪಿಸಿದ್ದ, ನಂತರದ ಯುಪಿಎ ಸರ್ಕಾರದಿಂದ ನಿರ್ಲಕ್ಷ್ಯಕ್ಕೊಳಗಾದ ಯೋಜನೆಗಳನ್ನು ಮತ್ತಷ್ಟು ವಿಸ್ತರಿಸಿ ಮೋದಿ ಸರ್ಕಾರ ದೃಢನಿಶ್ಚಯದಿಂದ ಕಾರ್ಯರೂಪಕ್ಕಿಳಿಸಹೊರಟಾಗ ತಮ್ಮ ಸಂಶಯಗಳು ನಿಜವಾಗತೊಡಗಿದ್ದನ್ನು ಜಿನ್​ಪಿಂಗ್ ಅರಿತರು.

ಮೋದಿ ಕುರಿತಾಗಿ ಚೀನಾದ ಕಳವಳಗಳು ಹೀಗಿದ್ದರೆ, ಪಾಕಿಸ್ತಾನದ ಆತಂಕಗಳು ಇನ್ನೊಂದು ಬಗೆಯವು. ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತವನ್ನು ರಾಜತಾಂತ್ರಿಕವಾಗಿ ಪೇಚಿಗೆ ಸಿಕ್ಕಿಸುವುದಲ್ಲದೆ, ಭಯೋತ್ಪಾದಕ ಕೃತ್ಯಗಳ ಮೂಲಕ ಈ ದೇಶವನ್ನು ಮತ್ತೆಮತ್ತೆ ಕುಟುಕುವುದು ಪಾಕಿಸ್ತಾನಕ್ಕೆ ಸುಲಭವಾಗಿತ್ತು. ಆದರೆ, ಭಾರತದ ಜತೆಗಿನ ತನ್ನ ಸಂಬಂಧಗಳ ಬಗ್ಗೆ, ಮುಖ್ಯವಾಗಿ ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಇಲ್ಲಿಯವರೆಗಿನ ಮಾತು ಮತ್ತು ಕೃತಿಗಳು ಒಂದಕ್ಕೊಂದು ತಾಳಮೇಳವಿಲ್ಲದ, ಸಂಪೂರ್ಣ ವಿರೋಧಾಭಾಸಗಳ ಸರಣಿ; ಭಾರತದ ಪ್ರಾದೇಶಿಕ ಸಮಗ್ರತೆಗೆ, ಸುರಕ್ಷೆಗೆ, ಆರ್ಥಿಕ ಹಿತಾಸಕ್ತಿಗಳಿಗೆ ಹಾನಿಯೆಸಗುವ ಕಾರ್ಯಕ್ರಮಗಳನ್ನು ತೆರೆಯ ಹಿಂದೆ ನಿರಂತರವಾಗಿ ರೂಪಿಸಿ ಅನುಷ್ಠಾನಗೊಳಿಸುತ್ತಲೇ, ತಾನೆ ಅನ್ಯಾಯಕ್ಕೊಳಗಾಗಿರುವಂತೆ ಎಲ್ಲೆಡೆ ಗೋಳಾಡುವುದು ಪಾಕಿಸ್ತಾನದ ವಿದೇಶನೀತಿಯಾಗಿದೆ ಎಂದು ಪ್ರಧಾನಿ ಮೋದಿ 2014ರ ಆಗಸ್ಟ್​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಮನಗಾಣಿಸುವುದರಿಂದ ಆರಂಭಿಸಿ ಪಶ್ಚಿಮದ ಹಾಗೂ ಪಶ್ಚಿಮ ಏಷ್ಯಾದ ಪ್ರಮುಖ ದೇಶಗಳ ನಾಯಕರ ಜತೆಗಿನ ನೇರಭೇಟಿಯಲ್ಲಿ ವಾಸ್ತವವನ್ನು ತೆರೆದಿಡತೊಡಗಿದಂತೆ ಪಾಕಿಸ್ತಾನ ವಿಶ್ವರಂಗದಲ್ಲಿ ಒಂಟಿಯಾಗತೊಡಗಿತು. ಇದಕ್ಕೆ ವಿರುದ್ಧವಾಗಿ, ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಪಾಕಿಸ್ತಾನ ಕಂಗೆಡುವ ಮಟ್ಟಿಗೆ ಅಂತಾರಾಷ್ಟ್ರಿಯ ರಂಗದಲ್ಲಿ ಭಾರತಕ್ಕೆ ಪ್ರಾಮುಖ್ಯ ದೊರಕಿಸಿಕೊಡುವುದರಲ್ಲಿ ಮೋದಿ ಯಶಸ್ವಿಯಾದರು. ಯುಪಿಎ ಸರ್ಕಾರ ಕೇವಲ ಸಹಿಹಾಕಿ ಮರೆತುಬಿಟ್ಟಿದ್ದ ಭಾರತ-ಅಮೆರಿಕ ಅಣುಒಪ್ಪಂದದ ಕೆಲ ಅಹಿತಕರ ಕಲಮುಗಳನ್ನು ದೇಶಕ್ಕೆ ಹಿತಕಾರಿಯಾಗುವಂತೆ ಬದಲಾಯಿಸಿ ಒಪ್ಪಂದವನ್ನು ಅನುಷ್ಠಾನಗೊಳಿಸುವ ಮೋದಿಯವರ ಪ್ರಯತ್ನಕ್ಕೆ ಒಬಾಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿತು. ಅದಕ್ಕನುಗುಣವಾಗಿ, ಕೆನಡಾ ಮತ್ತು ಆಸ್ಟ್ರೇಲಿಯಾ ಭಾರತಕ್ಕೆ ಯುರೇನಿಯಂ ಪೂರೈಸಲು ಸಮ್ಮತಿಸಿದವು. ಮೋದಿಯವರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮಕ್ಕೆ ಅನುಕೂಲವಾಗುವಂತೆ ಭಾರತದಲ್ಲಿ ಬೃಹತ್ ಪ್ರಮಾಣದ ಬಂಡವಾಳ ಹೂಡಲು ಜಪಾನ್, ಅಮೆರಿಕವಷ್ಟೇ ಅಲ್ಲದೆ ಚೀನಿ ಕಂಪನಿಗಳೂ ಮುಂದಾದವು. ಇಸ್ರೇಲ್ ಮತ್ತು ಫ್ರಾನ್ಸ್​ಗಳು ಒಂದು ಹೆಜ್ಜೆ ಮುಂದೆಹೋಗಿ ರಕ್ಷಣಾಸಾಮಗ್ರಿಗಳ ಉತ್ಪಾದನೆಯಲ್ಲಿ ಭಾರತವನ್ನು ಸಹಭಾಗಿಯಾಗಿ ತೆಗೆದುಕೊಳ್ಳಲು ತಯಾರಾದವು. ಪಾಕಿಸ್ತಾನದ ಆತಂಕವನ್ನು ಹೆಚ್ಚಿಸುವಂತೆ, ಪಶ್ಚಿಮ ಏಷ್ಯಾದ ಪ್ರಮುಖ ಮುಸ್ಲಿಂ ದೇಶಗಳು ಭಾರತಕ್ಕೆ ಹತ್ತಿರಾದವು. ಭಾರತದ ಜತೆ ಬೃಹತ್ ಆರ್ಥಿಕ ಹಾಗೂ ರಕ್ಷಣಾ ಸಹಯೋಗಕ್ಕೆ ಇರಾನ್ ತಯಾರಾಯಿತು. ತನ್ನ ಕೆಲವು ರಫ್ತುನಿಯಮಗಳನ್ನು ಸಡಿಲಿಸಿ ಭಾರತದ ತೈಲ ಆಮದಿನ ವೆಚ್ಚವನ್ನು ಕಡಿಮೆಗೊಳಿಸಲು ಸೌದಿ ಅರೇಬಿಯಾ ಸಮ್ಮತಿಸಿತು. ಇದೆಲ್ಲದರ ಅರ್ಥ ಮುಸ್ಲಿಂ ರಾಷ್ಟ್ರಗಳೂ ಮೋದಿಯವರನ್ನು ಭಾರತೀಯರ ನೇತಾರನನ್ನಾಗಿ ಗುರುತಿಸಿದವು ಮತ್ತು ಗೌರವಿಸಿದವು. ಇದು ಸಾಲದು ಎಂಬಂತೆ, 1947ರಿಂದಲೂ ಪಾಕ್ ಸೇನೆಯ ದಬ್ಬಾಳಿಕೆಯನ್ನು ವಿರೋಧಿಸುತ್ತಿರುವ ಬಲೂಚಿಗಳು ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳ ಪರವಾಗಿ ಮೋದಿ ದನಿಯೆತ್ತಿ ಅವರ ಸಂಕಷ್ಟಗಳನ್ನು ಅಂತಾರಾಷ್ಟ್ರಿಯ ಸಮುದಾಯದ ಗಮನಕ್ಕೆ ತಂದರು. ಇದು ಪಾಕಿಸ್ತಾನಕ್ಕೆ ಮರ್ವಘಾತ. ಇದೆಲ್ಲದರಿಂದಾಗಿ, ಪಾಕಿಸ್ತಾನದ ಸೇನೆ ಮತ್ತು ರಾಜಕೀಯ ನಾಯಕರು ಮೋದಿಯವರನ್ನು ತಮ್ಮ ಪ್ರಮುಖ, ಬಹುಶಃ ಏಕೈಕ ಶತ್ರು ಎಂದು ಭಾವಿಸುತ್ತಾರೆ. ಮೋದಿ ಸರ್ಕಾರ ಪತನವಾಗದಿದ್ದರೆ, ಪಾಕಿಸ್ತಾನದ ಪತನವನ್ನು ನೋಡಲು ತಾವು ತಯಾರಾಗಬೇಕೆಂಬ ಆತಂಕ ಅವರನ್ನು ಕಾಡತೊಡಗಿದೆ.

ಹೀಗೆ, ಎರಡು ಪ್ರಮುಖ ವಿದೇಶಿ ಸರ್ಕಾರಗಳು ಮೋದಿ ಸರ್ಕಾರದ ಪತನವನ್ನು ತಮ್ಮ ಗುರಿಯಾಗಿಸಿಕೊಂಡಂತೆಯೇ, ವಿವಿಧ ಕಾರಣಗಳಿಗಾಗಿ ಅದೇ ಗುರಿಯನ್ನು ಹೊಂದಿದ ಶಕ್ತಿಗಳು ಮತ್ತು ವ್ಯಕ್ತಿಗಳು ದೇಶದೊಳಗೂ ಇವೆ. ಅಂತಾರಾಷ್ಟ್ರೀಯ ರಂಗದಲ್ಲಿ ಮೋದಿಯವರನ್ನು ಖಳನಾಯಕನನ್ನಾಗಿ ಚಿತ್ರಿಸಲು ಹನ್ನೆರಡು ವರ್ಷಗಳಿಂದಲೂ ನಿರಂತರವಾಗಿ ಹೆಣಗಿದ್ದ ದೇಶೀಯ ಶಕ್ತಿಗಳ ಪ್ರಯತ್ನ ಸೋತು ಮೋದಿ ಭಾರತೀಯ ಮತದಾರರಿಗೆ ಸ್ವೀಕಾರಾರ್ಹವಾಗಿಬಿಟ್ಟದ್ದರ ಜತೆಗೇ ವಿದೇಶಗಳಲ್ಲೂ ಗೌರವ ಗಳಿಸತೊಡಗಿದ್ದು, ಮುಸ್ಲಿಂ ಬಹುಸಂಖ್ಯಾತ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸರ್ಕಾರದಲ್ಲಿ ಬಿಜೆಪಿ ಸಹಭಾಗಿಯಾಗುವ ಮಟ್ಟಕ್ಕೆ ಬೆಳೆದುನಿಂತದ್ದು ಮೋದಿ-ವಿರೋಧಿಗಳ ಹತಾಶೆಯನ್ನು ತಾರಕಕ್ಕೇರಿಸಿತು. ಒಂದೇ ವರ್ಷದಲ್ಲಿ ಮೋದಿ ಇಷ್ಟೆಲ್ಲ ಸಾಧಿಸುವುದಾದರೆ, ಮುಂದಿನ ನಾಲ್ಕು ವರ್ಷಗಳಲ್ಲಿ ಅವರು ಮತ್ತು ಬಿಜೆಪಿ ಜನತೆಗೆ ಮತ್ತೆಷ್ಟು ಪ್ರಿಯವಾಗಬಹುದು, ಅದು ತಮಗೆ ಅದೆಷ್ಟು ಮುಳುವಾಗಬಹುದು ಎಂದು ಲೆಕ್ಕ ಹಾಕಿದ ಕಾಂಗ್ರೆಸ್ ಮೋದಿಯವರ ಯೋಜನೆಗಳನ್ನೆಲ್ಲ ಹಾಳುಗೆಡವಲು ದಾರಿ ಹುಡುಕತೊಡಗಿತು. ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲಾಗುವಂತೆ ತಂತ್ರ ಹೂಡಿ, ಆ ಮೂಲಕ ಮೋದಿಯವರ ವರ್ಚಸ್ಸನ್ನು ಹಂತಹಂತವಾಗಿ ಕುಗ್ಗಿಸಿ 2019ರ ಲೋಕಸಭಾ ಚುನಾವಣೆಗಳ ಹೊತ್ತಿಗೆ ಅವರನ್ನು ನಿರ್ವಿಣ್ಣಗೊಳಿಸಿ, ಅವರು ಮತ್ತೆಂದೂ ರಾಜಕೀಯವಾಗಿ ತಲೆಯೆತ್ತದಂತೆ ಮಾಡಬೇಕೆಂಬುದು ಕಾಂಗ್ರೆಸ್​ನ ಹಂಚಿಕೆಯಾಯಿತು. ಈ ಯೋಜನೆ ಕಾರ್ಯರೂಪಕ್ಕೆ ಬಂದದ್ದು ಬಿಹಾರ ಚುನಾವಣೆಗಳ ಒಂದು ತಿಂಗಳ ಮೊದಲು, ದಾದ್ರಿ ಘಟನೆ ಮತ್ತು ಕಲಬುರ್ಗಿ ಹತ್ಯೆಗಳನ್ನು ನೆಪವಾಗಿಟ್ಟುಕೊಂಡು ‘ಅಸಹಿಷ್ಣುತೆ’ಯ ಬೊಬ್ಬೆ ಹಾಕುವುದರ ಮೂಲಕ. ನಂತರ ಮೋದಿಯವರಿಗೆ ವೈಯಕ್ತಿಕವಾಗಿ ಮುಖ್ಯವಾದ ಗುಜರಾತ್ ಚುನಾವಣೆಗಳಿಗೆ ತಿಂಗಳ ಮೊದಲು, ಮೂರು ವರ್ಷಗಳ ಹಿಂದೆ ಘಟಿಸಿದ್ದ ಜಸ್ಟಿಸ್ ಲೋಯಾ ಸಾವನ್ನು ಎಳೆದುತಂದು ವಿವಾದ ಸೃಷ್ಟಿಸಲಾಯಿತು. ಈಗ ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೊಷಣೆಯಾಗುತ್ತಿದ್ದಂತೆಯೇ, 8 ತಿಂಗಳ ಹಿಂದೆ ಘಟಿಸಿದೆಯೆನ್ನಲಾದ ಉನ್ನಾವ್ ಅತ್ಯಾಚಾರ ಹಾಗೂ ಎರಡು ತಿಂಗಳ ಹಿಂದಿನ ಹೇಯ ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ‘ಆಯ್ದು’ಕೊಂಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಲಾಗುತ್ತಿದೆ.

ಕರ್ನಾಟಕ ಚುನಾವಣೆ ಕಾಂಗ್ರೆಸ್​ಗೆ ಅಳಿವು ಉಳಿವಿನ ಪ್ರಶ್ನೆ. ಕೇಸರಿ ಭಯೋತ್ಪಾದನೆ ಎಂಬ ಹಸಿಸುಳ್ಳನ್ನು ಹುಟ್ಟುಹಾಕಿ ಸಿಕ್ಕಿಕೊಂಡಿರುವುದು, ಕರ್ನಲ್ ಶ್ರೀಕಾಂತ್ ಪುರೋಹಿತ್ ಮತ್ತು ಸಾಧಿ್ವ ಪ್ರಜ್ಞಾ ಅವರನ್ನು ವಿನಾಕಾರಣ ಬಂಧಿಸಿ, ಮಾಲೆಗಾಂವ್ ಸ್ಪೋಟಕ್ಕೆ ಅವರನ್ನು ಜವಾಬ್ದಾರರನ್ನಾಗಿಸಲು ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ್ದು ಬಯಲಾಗಿರುವುದು, ತನ್ನ ಕೆಲವು ಪ್ರಮುಖ ನಾಯಕರು ಮತ್ತವರ ರಕ್ತಸಂಬಂಧಿಗಳು 2004-14ರ ಅವಧಿಯಲ್ಲಿ ಅಪಾರ ಆಸ್ತಿಪಾಸ್ತಿ ಗಳಿಸಿದ್ದರ ಬಗ್ಗೆ ಸಿಬಿಐ, ಎನ್​ಐಎ ತನಿಖೆ ನಡೆಸುತ್ತಿರುವುದು- ಕಾಂಗ್ರೆಸ್ ಅನ್ನು ಅತೀವ ಆತಂಕಕ್ಕೊಳಪಡಿಸಿರುವ ವಿಷಯಗಳು. ಈ ಎಲ್ಲ ಪ್ರಕರಣಗಳನ್ನೂ ನಿವಾರಿಸಿಕೊಳ್ಳಬೇಕಾದರೆ ತಾನು 2019ರಲ್ಲಿ ಅಧಿಕಾರವನ್ನು ಕೈವಶ ಮಾಡಿಕೊಳ್ಳಲೇಬೇಕು ಎಂದು ನಂಬುವ ಹತಾಶ ಸ್ಥಿತಿಗೀಗ ಆ ಪಕ್ಷ ತಲುಪಿದೆ. ಅದಕ್ಕಾಗಿ ಯಾವ ಮಾರ್ಗವನ್ನಾದರೂ ಹಿಡಿಯಲು ಅದು ತಯಾರಾಗಿದೆ.

ಕಾಂಗ್ರೆಸ್​ನ ಯೋಜನೆಗಳಲ್ಲಿ ಕೆಲ ಪ್ರಮುಖ ಮಾಧ್ಯಮಗಳೂ ಭಾಗಿಯಾಗಿವೆ. 2015ರ ಅಸಹಿಷ್ಣುತೆ ಬೊಬ್ಬೆ ಮತ್ತು ಪ್ರಶಸ್ತಿ ವಾಪ್ಸಿ ನೌಟಂಕಿಗಳಿಗೆ ಪ್ರಚಾರ ನೀಡಿದ್ದೇ ಇವು. ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯೆಂದು ಬಿಂಬಿಸಿ, ವಿದೇಶಿ ಬಂಡವಾಳ ಹೂಡಿಕೆದಾರರು ಇತ್ತ ಬಾರದಂತೆ ಮಾಡಿ ‘ಮೇಕ್ ಇನ್ ಇಂಡಿಯಾ’ ಕಾರ್ಯಯೋಜನೆ ವಿಫಲಗೊಳ್ಳುವಂತೆ ಮಾಡಲು, ಆ ಮೂಲಕ ಮೋದಿಯವರ ಜನಪ್ರಿಯತೆ ಕುಗ್ಗಿಸಲು ದೇಶವಿದೇಶಗಳ ನೂರೈವತ್ತು ಪತ್ರಕರ್ತರ ಪಡೆಯನ್ನು ಹಣ ನೀಡಿ ಸಂಘಟಿಸಲಾಗಿತ್ತು. ಅಂಥದೇ ಬೆಳವಣಿಗೆಗಳು ಈಗಲೂ ಮುಂದುವರಿದಿವೆ. ಹಲವಾರು ಪತ್ರಕರ್ತರು, ಲೇಖಕರು, ಚಲನಚಿತ್ರ ನಟ-ನಟಿಯರು ಮೋದಿ ವಿರುದ್ಧ ಬರೆಯಲು ಮಾತಾಡಲು ತೊಡಗಿದ್ದಾರೆ. ಮೋದಿ ಸರ್ಕಾರದ ಒಳ್ಳೆಯ ಕೃತ್ಯಗಳನ್ನೆಲ್ಲ ಪಕ್ಕಕ್ಕೆ ಸರಿಸಿ, ಕೇವಲ ಋಣಾತ್ಮಕ ಸುದ್ದಿಗಳಿಗಷ್ಟೇ ಕೆಲ ಮಾಧ್ಯಮಗಳು ಪ್ರಾಮುಖ್ಯ ನೀಡುತ್ತಿರುವುದರ ಹಿಂದಿನ ಮರ್ಮ ಇದೇ. ಭಾರತಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಸಂಖ್ಯೆಯ ಅತ್ಯಾಚಾರಗಳು ಅಮೆರಿಕದಲ್ಲಿ ಘಟಿಸುತ್ತಿದ್ದರೂ ಅದರ ಬಗ್ಗೆ ಜಾಣಮೌನ ಅನುಸರಿಸಿ, ‘ರೇಪ್ ಕಲ್ಚರ್ ಆಫ್ ಇಂಡಿಯಾ’ ಎಂಬಂತಹ ತಲೆಬರಹಗಳ ಲೇಖನಗಳನ್ನು ಅಮೆರಿಕದ ಪತ್ರಿಕೆಗಳು ಪ್ರಕಟಿಸುವ, ಅವು ಭಾರತದಲ್ಲಿ ಸುದ್ದಿಯಾಗುವ ಚೋದ್ಯದ ಬೆನ್ನು ಹತ್ತಿಹೋದರೆ ಅದೆಷ್ಟು ಹಣಕಾಸಿನ ವಹಿವಾಟು ಬಯಲಾಗುತ್ತದೋ.

ಭಾರತದ ರಾಜಕಾರಣದಲ್ಲಿ ಚೀನಿ ಮತ್ತು ಪಾಕ್ ಹಣ ಇತ್ತೀಚಿನವರೆಗೂ ಹರಿದಾಡುತ್ತಿತ್ತು. ಹಿಂದೆ ಕಾಶ್ಮೀರದಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಪಾಕ್ ಹಣ 2014ರಿಂದ ದೆಹಲಿಯಲ್ಲದೆ ದಕ್ಷಿಣ ಭಾರತಕ್ಕೂ ಹರಿಯತೊಡಗಿದೆ. ಮೊದಲೆಲ್ಲ ನಕ್ಸಲರಿಗಷ್ಟೇ ಸಿಗುತ್ತಿದ್ದ ಚೀನಿ ಹಣ ಒಂದೆರಡು ದಶಕಗಳಿಂದೀಚೆಗೆ ರಾಜಕಾರಣಿಗಳ, ಪತ್ರಕರ್ತರ ಕೈಗೂ ಬೀಳತೊಡಗಿದೆ. ಕಾಂಗ್ರೆಸ್ ಸರ್ಕಾರವೇ ಸಹಿ ಹಾಕಿದ್ದ ಭಾರತ-ಅಮೆರಿಕ ಅಣು ಒಪ್ಪಂದದ ವಿರುದ್ಧ ಜನಾಭಿಪ್ರಾಯ ರೂಪಿಸಲು, ಆ ಮೂಲಕ ಒಪ್ಪಂದವನ್ನು ಪತನಗೊಳಿಸಲು ಕೆಲ ಭಾರತೀಯ ಪತ್ರಕರ್ತರು ಮತ್ತು ರಾಜಕಾರಣಿಗಳು ಚೀನಿ ಸರ್ಕಾರದಿಂದ ಹೇರಳ ಹಣ ಪಡೆದಿದ್ದರು. ಜತೆಗೆ, ಇಲ್ಲಿ ಧಾರ್ವಿುಕ ಕಂದರ ಮೂಡಿಸಲೂ ವಿದೇಶಿ ಹಣ ಹರಿದುಬರುತ್ತಿತ್ತು. ಇದೆಲ್ಲವನ್ನೂ ತಡೆಗಟ್ಟಲು ಅನಾಣ್ಯೀಕರಣ ಹಾಗೂ ಡಿಜಿಟಲ್ ಅರ್ಥವ್ಯವಸ್ಥೆಗೆ ಒತ್ತುನೀಡುವ ಕ್ರಮಗಳನ್ನು ಮೋದಿ ಕೈಗೊಂಡರು. ವಿದೇಶಗಳಿಂದ ರಹಸ್ಯವಾಗಿ ಹಣ ಪಡೆಯುತ್ತಿದ್ದ ಲಕ್ಷಾಂತರ ಸಂಘಸಂಸ್ಥೆಗಳ ನೋಂದಣಿಯನ್ನು ಸರ್ಕಾರ ರದ್ದುಮಾಡಿದೆ.

ಇದೆಲ್ಲವನ್ನೂ ಮೋದಿ ಮಾಡುತ್ತಿರುವುದು ದೇಶಹಿತಕ್ಕಾಗಿ. ದೇಶವನ್ನು ಲೂಟಿ ಮಾಡಿ ವಿದೇಶಿ ಬ್ಯಾಂಕ್​ಗಳಲ್ಲಿ ಬಚ್ಚಿಡುತ್ತಿಲ್ಲ. ತಮ್ಮ ‘ಡೈನ್ಯಾಸಿ’ಯನ್ನೂ ಅವರು ಸ್ಥಾಪಿಸಹೋಗುತ್ತಿಲ್ಲ. ಇಷ್ಟಾಗಿಯೂ ಜನತೆ, ‘ಕಾಕ’ಗಳ ಸುಳ್ಳು, ಕುತಂತ್ರಕ್ಕೆ ಬಲಿಯಾಗುವಷ್ಟು ವಿವೇಕಶೂನ್ಯರಾದರೆ ಅದು ಕೇವಲ ಮೋದಿಯವರ ಸೋಲಲ್ಲ, ಇಡೀ ಭಾರತದ ಸೋಲು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *