ಭಾರತಕ್ಕೆ ಭಾರವಾಗಿರುವ ಕಾಕ ಸಂಕೋಲೆಗಳು

| ಪ್ರೇಮಶೇಖರ

ಭೂಮಿ ಆಕಾಶಗಳ ನಡುವಿನ ಎಲ್ಲದರ ಬಗೆಗೂ ‘ಅಧಿಕಾರಯುತವಾಗಿ’ ಮಾತಾಡುವ ಇಷ್ಟೊಂದು ಬುದ್ಧಿಜೀವಿಗಳು, ಸಂಸ್ಕತಿ ಚಿಂತಕರಿರುವ ಈ ದೇಶ ವ್ಯಕ್ತಿ ಸ್ವಾತಂತ್ರ್ಯ ಉಳಿಸಿಕೊಂಡೇ ಆರ್ಥಿಕ ಅಭ್ಯುದಯ ಸಾಧಿಸಬಹುದಾದ ವ್ಯವಸ್ಥೆಯೊಂದನ್ನು ಸೃಷ್ಟಿಸುವುದರಲ್ಲಿ ವಿಫಲವಾದದ್ದೇಕೆ? ಅಮೆರಿಕ, ಬ್ರಿಟನ್, ಜರ್ಮನಿ, ಜಪಾನ್​ಗಳಿಗೆ ಸಾಧ್ಯವಾದದ್ದು ನಮಗೇಕೆ ಸಾಧ್ಯವಾಗುತ್ತಿಲ್ಲ?

ವರ್ಷಕ್ಕೂ ಹಿಂದೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಗದ್ದುಗೆಗೇರಿದಾಗ ಜಾಗತೀಕರಣ ಕುರಿತಾದ ತಮ್ಮ ನಕಾರಾತ್ಮಕ ನಿಲುವುಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿ, ಜಾಗತೀಕರಣ ಪ್ರಕ್ರಿಯೆಯಿಂದ ಅಮೆರಿಕವನ್ನು ಹೊರಗೊಯ್ಯುವುದಾಗಿ ಘೊಷಿಸಿದಾಗ ತಕ್ಷಣ ಪ್ರತಿಕ್ರಿಯಿಸಿದ ಚೀನೀ ಅಧ್ಯಕ್ಷ ಕ್ಸಿ ಜಿನ್​ಪಿಂಗ್, ಅಮೆರಿಕ ತೆರವು ಮಾಡುವ ಸ್ಥಾನವನ್ನು ತುಂಬಲು ಚೀನಾ ತಯಾರಾಗಿರುವುದೆಂದು ಘೊಷಿಸಿದರು. ಅವರ ಮಾತಿನ ಅರ್ಥ, ವಿಶ್ವ ಆರ್ಥಿಕ ವ್ಯವಸ್ಥೆ ನಾಯಕತ್ವವನ್ನು ಅಮೆರಿಕದಿಂದ ತನ್ನ ಕೈಗೆ ತೆಗೆದುಕೊಳ್ಳಲು ಚೀನಾ ಸಿದ್ಧವಾಗಿದೆ ಎಂದಾಗಿತ್ತು. ಹೀಗೆ ನಾಯಕತ್ವ ಬದಲಾವಣೆ ಅಸಹಜವೂ ಅಲ್ಲ, ಅಭೂತಪೂರ್ವವೂ ಅಲ್ಲ. ನೂರು ವರ್ಷಗಳ ಹಿಂದೆ ವಿಶ್ವ ಅರ್ಥವ್ಯವಸ್ಥೆಯ ನಾಯಕನಾಗಿದ್ದದ್ದು ಬ್ರಿಟನ್, ವಿಶ್ವ ವ್ಯಾಪಾರ ಹಾಗೂ ಹಣಕಾಸು ವ್ಯವಹಾರದ ಕೇಂದ್ರವಾಗಿದ್ದದ್ದು ಲಂಡನ್. ಪ್ರಥಮ ಮಹಾಯುದ್ಧ ಮುಗಿಯುತ್ತಿದ್ದಂತೇ ಲಂಡನ್​ನ ಸ್ಥಾನವನ್ನು ನ್ಯೂಯಾರ್ಕ್ ಆಕ್ರಮಿಸಿಕೊಂಡಿತು. ಎರಡನೆಯ ಮಹಾಯುದ್ಧದ ಹೊತ್ತಿಗೆ ವಿಶ್ವ ವ್ಯಾಪಾರದ ನಾಯಕತ್ವ ಬ್ರಿಟನ್​ನ ಕೈತಪ್ಪಿ ಪೂರ್ಣ ವಾಗಿ ಅಮೆರಿಕದ ಹಿಡಿತಕ್ಕೆ ಹೋಯಿತು, ಜತೆಗೇ ಪೌಂಡ್ ರ್ಸrಂಗ್ ತನ್ನ ಸ್ಥಾನ ಕಳೆದುಕೊಳ್ಳುತ್ತಿದ್ದಂತೆ ಜಾಗತಿಕ ಅರ್ಥವ್ಯನಸ್ಥೆ ‘Dance of the Dollar’ ಆಯಿತು. ಈಗ ಜಿನ್​ಪಿಂಗ್ ಹೇಳುತ್ತಿರುವುದು ಹಿಂದೆ ಬ್ರಿಟನ್​ನ ಉತ್ತರಾಧಿಕಾರಿ ಅಮೆರಿಕ ಆದಂತೆ, ಈಗ ಇತಿಹಾಸದ ಚಕ್ರ ಮತ್ತೊಂದು ಸುತ್ತು ಸುತ್ತಿ ಇಂದು ಅಮೆರಿಕದ ಉತ್ತರಾಧಿಕಾರಿಯಾಗಿ ಚೀನಾ ಹೊರಹೊಮ್ಮುತ್ತಿದೆ ಎಂದು.

ಅಗತ್ಯವಾದ ಪೂರ್ವಭಾವಿ ತಯಾರಿಗಳನ್ನೆಲ್ಲ ಮಾಡಿಕೊಂಡೇ ಜಿನ್​ಪಿಂಗ್ ಇಂತಹ ಒಂದು ಯುಗಪರಿವರ್ತಕ ಹೆಜ್ಜೆಯಿಟ್ಟಿದ್ದಾರೆ. ಚೀನಾ ಈಗ ವಿಶ್ವದ ಎರಡನೆಯ ದೊಡ್ಡ ಅರ್ಥವ್ಯವಸ್ಥೆ, ಅದೀಗ ಮೂರು ಟ್ರಿಲಿಯನ್ ಡಾಲರ್​ಗಳ ವಿದೇಶಿ ವಿನಿಮಯ ಬೆಟ್ಟದ ಮೇಲೆ ಕುಳಿತಿದೆ, ಅದರ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪಾದನೆ ಹನ್ನೊಂದು ಟ್ರಿಲಿಯನ್ ಡಾಲರ್​ಗಳಿಗೂ ಅಧಿಕ. ಈ ಅಗಾಧ ಆರ್ಥಿಕ ಸಾಮರ್ಥ್ಯನ್ನು ರಾಜಕೀಯ-ಸೇನಾ ಶಕ್ತಿಯನ್ನಾಗಿಯೂ ಜಿನ್​ಪಿಂಗ್ ಬದಲಾಯಿಸುತ್ತಿದ್ದಾರೆ. ಹದಿನೆಂಟನೆಯ ಶತಮಾನದಲ್ಲಿ ಬ್ರಿಟನ್, ಇಪ್ಪತ್ತನೆಯ ಶತಮಾನದಲ್ಲಿ ಅಮೆರಿಕ ಮಾಡಿದ್ದು ಅದನ್ನೇ. ರಾಜಕೀಯ-ಸೇನಾ ಶಕ್ತಿಯಾಗಿ ಬೆಳೆಯಲು ಆರ್ಥಿಕ ಸಾಮರ್ಥ್ಯ ಅಗತ್ಯ, ರಾಜಕೀಯ-ಸೇನಾ ಸಾಮರ್ಥ್ಯನ್ನು ಕಾಪಾಡಿಕೊಳ್ಳಲು ನಿರಂತರ ಆರ್ಥಿಕ ಅಭಿವೃದ್ಧಿ ಅತ್ಯಗತ್ಯ ಎಂಬ ಸ್ವರ್ಣಸೂತ್ರವನ್ನು ಜಿನ್​ಪಿಂಗ್ ಅರ್ಥ ಮಾಡಿಯೇಕೊಂಡಿದ್ದಾರೆ. ಮಹಾ ಸೇನಾ ಶಕ್ತಿಯಾಗಿದ್ದರೂ ಪೂರಕ ಆರ್ಥಿಕ ಬೆಳವಣಿಗೆಗಳಿಲ್ಲದ ಕಾರಣ ಕುಸಿದುಹೋದ ಸೋವಿಯೆತ್ ಯೂನಿಯನ್​ನ ಉದಾಹರಣೆ ಅವರ ಕಣ್ಣಮುಂದೆಯೇ ಇದೆ. ಹೀಗಾಗಿಯೇ ಅವರು ಇದುವರೆಗೆ ಹಿಂದುಳಿದೇ ಇರುವ ಚೀನಾದ ಪಶ್ಚಿಮ ಭಾಗದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ ಅಲ್ಲಿನ ಉತ್ಪನ್ನಗಳನ್ನು ತ್ವರಿತವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ರಫ್ತು ಮಾಡಲು, ಆ ಮೂಲಕ 2030ರ ಹೊತ್ತಿಗೆ ಚೀನೀ ರಾಷ್ಟ್ರೀಯ ನಿವ್ವಳ ಉತ್ಪಾದನೆಯನ್ನು ದ್ವಿಗುಣಗೊಳಿಸಲು ಎರಡು ಯೋಜನೆಗಳನ್ನು ರೂಪಿಸಿದ್ದಾರೆ. ಒಂದು, ‘ಚೀನಾ-ಪಾಕಿಸ್ತಾನ ಇಕನಾಮಿಕ್ ಕಾರಿಡಾರ್’ (ಸಿಪಿಇಸಿ). ಈ ಯೋಜನೆ ಪಶ್ಚಿಮ ಚೀನಾವನ್ನು ಅರಬ್ಬೀ ಸಮುದ್ರ ತೀರದಲ್ಲಿರುವ ಪಾಕಿಸ್ತಾನದ ಗ್ವಾದಾರ್ ಬಂದರಿಗೆ ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಜೋಡಿಸಲಿದೆ. ಅಲ್ಲಿಂದಾಚೆಗೆ ಹಡಗುಗಳ ಮೂಲಕ ಅರೇಬಿಯನ್ ಪರ್ಯಾಯದ್ವೀಪ ತಲುಪಲು ಕೆಲವು ಗಂಟೆಗಳು ಸಾಕು. ಈಗಿರುವ ಹಿಂದೂ ಮಹಾಸಾಗರ- ಪೆಸಿಫಿಕ್ ಸಾಗರ ಮಾರ್ಗದ ಮೂಲಕ ಪಶ್ಚಿಮ ಏಷ್ಯಾದಿಂದ ಚೀನಾದ ಪೂರ್ವ ತೀರದ ಬಂದರುಗಳಿಗೆ ತೈಲವನ್ನೂ, ಅದೇ ಬಂದರುಗಳಿಂದ ಪಾಕಿಸ್ತಾನ ಮತ್ತು ಪಶ್ಚಿಮ ಏಷ್ಯಾಗೆ ಸಿದ್ಧವಸ್ತುಗಳನ್ನು ಸಾಗಿಸಲು ತಗಲುವ ಸಮಯ ಇಪ್ಪತ್ತೊಂದು ದಿನಗಳು. ಆದರೆ, ಈ ಸಿಪಿಇಸಿ ಯೋಜನೆ ಯಶಸ್ವಿಯಾದರೆ ಈ ಸಾಗಾಟಕ್ಕೆ ಬೇಕಾಗುವ ಸಮಯ ಕೇವಲ ನಲವತ್ತೆಂಟು ಗಂಟೆಗಳಷ್ಟೇ! ಅಲ್ಲದೆ, ಈ ವ್ಯವಹಾರ ನಡೆಯುವುದು ಹಿಂದೂ ಮಹಾಸಾಗರ-ಪೆಸಿಫಿಕ್ ಸಾಗರಗಳಲ್ಲಿ ಈಗ ಸಕ್ರಿಯವಾಗಿರುವ ಬಲಿಷ್ಠ ಭಾರತೀಯ ಮತ್ತು ಅಮೆರಿಕಗಳ ನೌಕಾದಳಗಳ ಕಣ್ಣು ತಪ್ಪಿಸಿ ಮತ್ತು ಅವುಗಳಿಂದ ಯಾವುದೇ ಹಾನಿಗೂ ಒಳಗಾಗದೇ!

ಎರಡು-ಜಿನ್​ಪಿಂಗ್​ರ ಮಹತ್ವಾಕಾಂಕ್ಷೆಯ ‘One Belt One Road’ ಯೋಜನೆ. ಇದರಂಗವಾಗಿ ಮಧ್ಯ ಏಷ್ಯಾ ಮೂಲಕ ಪೂರ್ವ ಯುರೋಪ್, ಪಾಕಿಸ್ತಾನದ ಮೂಲಕ ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾ ಸೇರಿದಂತೆ ಪ್ರಪಂಚದ ಬಹುತೇಕ ಭಾಗಗಳನ್ನು ಚೀನಾ ಜತೆ ಸಂರ್ಪಸಲಾಗುತ್ತದೆ. ಇದರ ಮಹತ್ವ ಕೇವಲ ಆರ್ಥಿಕವಷ್ಟೇ ಅಲ್ಲ, ಬೇಕೆಂದಾಗ ಬೇಕಾದೆಡೆ ತ್ವರಿತವಾಗಿ ಚೀನೀ ಸೇನೆಯನ್ನೂ ಕಳುಹಿಸಬಹುದಾಗಿದೆ. ಒಂದರ್ಥದಲ್ಲಿ ಈ ಯೋಜನೆ ಯಶಸ್ವಿಯಾದರೆ ಚೀನಾ ನಿಕಟಭವಿಷ್ಯದಲ್ಲಿ ನವವಸಾಹತುಶಾಹಿ ಶಕ್ತಿಯಾಗಿ ಬೆಳೆದು ನಿಲ್ಲಲೂಬಹುದು.

ವಿಶ್ವದ ಆರ್ಥಿಕ-ರಾಜಕೀಯ ರಂಗದಲ್ಲಿ ಚೀನಾ ಈ ಬಗೆಯಾಗಿ ನಾಗಾಲೋಟ ಹಾಕುತ್ತಿರುವಾಗ ಭಾರತ ಯಾವ ಸ್ಥಿತಿಯಲ್ಲಿದೆ? ಇಂದಿನ ವಿಶ್ಲೇಷಣೆಗೆ ನಾನೆತ್ತಿಕೊಂಡಿರುವ ಪ್ರಶ್ನೆ ಇದು.

ನೆಹರು ತಪು್ಪ ಧೋರಣೆ: ಆರ್ಥಿಕ ರಂಗದ ಬಗ್ಗೆ ಹೇಳುವುದಾದರೆ ಚೀನಾದ ಹನ್ನೊಂದು ಟ್ರಿಲಿಯನ್ ಜಿಡಿಪಿಯ ಮುಂದೆ ಭಾರತದ್ದು ಎರಡೂವರೆ ಟ್ರಿಲಿಯನ್ ಅಷ್ಟೇ. ಇನ್ನು, ವಿದೇಶಿ ವಿನಿಮಯ ತೆಗೆದುಕೊಂಡರೆ ಚೀನಾದ ಮೂರು ಟ್ರಿಲಿಯನ್ ಮುಂದೆ ನಮ್ಮದು ನಾನೂರ ಇಪ್ಪತ್ತು ಬಿಲಿಯನ್ ಅಷ್ಟೇ. ವಿಶ್ವದ ಇತರೆಡೆ ನಮ್ಮ ರಾಜಕೀಯ ಹಾಗೂ ಸೇನಾ ಪ್ರಭಾವ ಸಹ ಅಷ್ಟಕ್ಕಷ್ಟೇ. ದೂರ ದೇಶಗಳನ್ನು ಬಿಡಿ, ನಮ್ಮ ನೆರೆಯ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶಗಳೇ ಚೀನಾದ ಮಾತಿಗೆ ಪುಂಗಿಯ ನಾದಕ್ಕೆ ತಲೆಯಾಡಿಸುವ ಹಾವಿನಂತೆ ತಲೆಯಾಡಿಸುತ್ತಿವೆ.

ಇಲ್ಲಿ ನಾವು ಗಮನಿಸಬೇಕಾದ್ದೆಂದರೆ, ಅಧ್ಯಕ್ಷ ಜಿನ್​ಪಿಂಗ್​ರ ಮಹತ್ವಾಕಾಂಕ್ಷೆಗೆ ಪೂರಕವಾಗಿ ನಿಂತಿರುವ ಅಗಾಧ ಅರ್ಥಿಕ ಬಲ ಹಾಗೂ ರಾಜಕೀಯ-ಸೇನಾ ಬಲದ ಹಿಂದೆ ಹಲವು ದಶಕಗಳ ನಿಷ್ಠಾವಂತ ಪರಿಶ್ರಮವಿದೆ. ಐವತ್ತರ ದಶಕದ ಆರಂಭದಲ್ಲಿ ಭಾರತದ ಆರ್ಥಿಕ ಸಾಮರ್ಥ್ಯ ವಿಶ್ವಸ್ತರದಲ್ಲಿ ಕನಿಷ್ಠವಾಗಿದ್ದರೂ ಅದು ಚೀನಾಕ್ಕಿಂತ ಹೆಚ್ಚಿಗಿತ್ತು. ನಿಜ ಹೇಳಬೇಕೆಂದರೆ, ಆಗ ಸ್ವತಂತ್ರವಾಗುತ್ತಿದ್ದ ತೃತೀಯ ಜಗತ್ತಿನ ದೇಶಗಳಿಗೆ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಾದರಿಯಾಗುವುದು ಭಾರತವೋ ಅಥವಾ ಚೀನಾವೋ ಎಂಬ ಪ್ರಶ್ನೆ ಜಗತ್ತಿನ ಉನ್ನತ ವಲಯಗಳಲ್ಲಿ ಗಹನವಾಗಿ ರ್ಚಚಿತವಾಗುತ್ತಿತ್ತು. ಏಷ್ಯಾ ಹಾಗೂ ಆಫ್ರಿಕಾದ ವಸಾಹತುಗಳು ವರ್ಷಕ್ಕೆ ಡಜನ್​ಗಟ್ಟಲೆಯಲ್ಲಿ ಸ್ವತಂತ್ರವಾಗುತ್ತಿದ್ದ ಆ ದಿನಗಳಲ್ಲಿ ಅವುಗಳಿಗೆ ಕಮ್ಯೂನಿಸ್ಟ್ ಸರ್ವಾಧಿಕಾರಿ ಚೀನಾಗಿಂತಲೂ ಪ್ರಜಾಪ್ರಭುತ್ವವಾದಿ ಭಾರತ ಮಾದರಿಯಾಗಬೇಕೆಂದು, ಆಗುತ್ತದೆಂದೂ ಪಶ್ಚಿಮದ ದೇಶಗಳು ಆಶಿಸುತ್ತಿದ್ದವು. ಕಮ್ಯೂನಿಸಂನ ಹರಡುವಿಕೆ ತಡೆಯಲು ಇದು ಪರಿಣಾಮಕಾರಿ ವಿಧಾನ ಎಂದವುಗಳ ನಂಬಿಕೆಯಾಗಿತ್ತು. ಅದಕ್ಕೆ ಪೂರಕವಾಗಿ ಭಾರತಕ್ಕೆ ಅಗತ್ಯ ನೆರವು ನೀಡಲು ಅಮೆರಿಕ, ಬ್ರಿಟನ್, ಕೆನಡಾ ಸೇರಿದಂತೆ ಪಶ್ಚಿಮದ ಪ್ರಜಾಪ್ರಭುತ್ವವಾದಿ ದೇಶಗಳು ತಯಾರಾಗಿಯೂ ಇದ್ದವು. ಆದರೆ ಅದೆಲ್ಲವನ್ನೂ ಹಾಳು ಮಾಡಿದ್ದು ಜವಾಹರ್​ಲಾಲ್ ನೆಹರು. ಫೇಬಿಯನ್ ಸೋಷಿಯಲಿಸ್ಟ್ ಆಗಿದ್ದುಕೊಂಡು ಕಮ್ಯೂನಿಸಂ ಬಗ್ಗೆ ಒಲವಿದ್ದ ನೆಹರು, ಆರ್ಥಿಕ ಸಹಕಾರದ ನೆಪವೊಡ್ಡಿ ಪಶ್ಚಿಮದ ದೇಶಗಳು ಭಾರತದ ಸ್ವಾತಂತ್ರ್ಯವನ್ನು ಮುಕ್ಕಾಗಿಸಬಹುದೆಂದು ಅರ್ತಾಕವಾಗಿ ಸಂದೇಹಿಸಿದರು. ಹಾಗಾಗಿ, ಪಶ್ಚಿಮದ ದೇಶಗಳ ಜತೆಗಿನ ವ್ಯವಹಾರಗಳನ್ನು ಸೀಮಿತಗೊಳಿಸಿ ಬಿಟ್ಟರು. ಪರಿಣಾಮವಾಗಿ ‘ಬಡ’ ಭಾರತದ ತ್ವರಿತ ಅಭಿವೃದ್ಧಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಬಂಡವಾಳ ಮತ್ತು ತಂತ್ರಜ್ಞಾನ ನಮಗೆ ಲಭ್ಯವಾಗಲಿಲ್ಲ. ಅವೆಲ್ಲವನ್ನೂ ಪಡೆದುಕೊಂಡ ಜಪಾನ್ ಹಾಗೂ ದಕ್ಷಿಣ ಕೊರಿಯಾ ನಮ್ಮನ್ನು ದಾಟಿ ನಾಗಾಲೋಟದಲ್ಲಿ ಮುಂದುವರಿದವು. ಜತೆಗೆ, ಅವುಗಳ ರಕ್ಷಣಾ ಸ್ಥಿತಿಯೂ ಉತ್ತಮಗೊಂಡು ವೈರಿಗಳನ್ನು ದೂರದಲ್ಲೇ ಇಟ್ಟಿತು. ನೆಹರು ಅನುಮಾನಿಸಿದಂತೆ ಆ ದೇಶಗಳೇನೂ ತಮ್ಮ ಸ್ವಾತಂತ್ರ್ಯವನ್ನು ಅಮೆರಿಕೆಗೆ ಮಾರಿಕೊಳ್ಳಲಿಲ್ಲ.

ಪಶ್ಚಿಮದ ದೇಶಗಳನ್ನು ಧಿಕ್ಕರಿಸಿ ನೆಹರು ಅಪ್ಪಿಕೊಂಡ ಸೋವಿಯೆತ್ ಯೂನಿಯನ್​ನಿಂದ ನಮಗೆ ಸಿಕ್ಕಿದ್ದು ಕಳಪೆ ತಂತ್ರಜ್ಞಾನ ಹಾಗೂ ಶೂನ್ಯ ಬಂಡವಾಳ. ಅಷ್ಟೇ ಅಲ್ಲ, ರೂಪಾಯಿ-ರೂಬಲ್ ವಿನಿಮಯ ದರವನ್ನು ಅಂತಾರಾಷ್ಟ್ರೀಯ ವಿನಿಮಯ ದರದ ನಿಯಮಗಳಿಗೆ ವಿರುದ್ಧವಾಗಿ ತನಗನುಕೂಲ ವಾಗುವಂತೆ ಬದಲಾಯಿಸಿ ಅದನ್ನು ಭಾರತದ ಮೇಲೆ ಹೇರಿ ಈ ದೇಶವನ್ನು ಸೋವಿಯೆತ್ ಯೂನಿಯನ್ ಕೊಳ್ಳೆ ಹೊಡೆದ ದಾರುಣ ಸತ್ಯಗಳು ಇತಿಹಾಸದ ಕತ್ತಲ ಕೋಣೆಗೆ ತಳ್ಳಲ್ಪಟ್ಟಿವೆ. ನೆಹರು ಎಂತಹ ನಾಯಕನಾಗಿದ್ದರು ಎನ್ನಲು ಇದೊಂದು ಉದಾಹರಣೆ. ಇದು ಸಾಕಾಗದು ಎಂಬಂತೆ, ರಫ್ತುಗಳ ಮೂಲಕ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಕ್ಷೇತ್ರಕ್ಕೆ ಲಗ್ಗೆಯಿಡುವುದನ್ನು ನೆಹರು ತಿರಸ್ಕರಿಸಿದರು. ಅವರು ಒತ್ತುಕೊಟ್ಟದ್ದು ಆಂತರಿಕ ಬಳಕೆಗಾಗಿ ಸರಕುಗಳ ಉತ್ಪಾದನೆಗೆ ಮಾತ್ರ. ಇದರಲ್ಲೂ ಉತ್ಪಾದಕರಿಗೆ ನೂರೊಂದು ತೊಡಕುಗಳನ್ನು ನೆಹರು ಸರ್ಕಾರ ನಿರ್ವಿುಸಿತ್ತು. ಇದರಿಂದಾಗಿ, ದೇಶದ ಒಳಗೆ ಅಥವಾ ಹೊರಗೆ ವಿದೇಶಿ ವಸ್ತುಗಳ ಜತೆ ಪೈಪೋಟಿಯಿಲ್ಲದ ಕಾರಣ ಭಾರತೀಯ ಉತ್ಪಾದಕರು ವಸ್ತುಗಳ ಗುಣಮಟ್ಟದ ಕಡೆ ಕೊಡಬೇಕಾದಷ್ಟು ಗಮನ ಕೊಡಲೇ ಇಲ್ಲ. ನೆಹರುರ ಈ ಎಲ್ಲ ಪ್ರತಿಗಾಮಿ ನಿಲುವುಗಳು ಅದೆಷ್ಟರ ಮಟ್ಟಿಗೆ ಸರ್ಕಾರಿ ನೀತಿಗಳಾಗಿಹೋಗಿದ್ದವೆಂದರೆ ಅವುಗಳನ್ನು ಬದಲಾಯಿಸಲು ಮುಂದಿನ ಸರ್ಕಾರಗಳಿಗೂ ಸುಲಭವಾಗಿರಲಿಲ್ಲ. ಅದರಲ್ಲೂ ಇಂದಿರಾ ಗಾಂಧಿ ಅವಧಿಯಲ್ಲಿ ರಾಷ್ಟ್ರದ ಬಹುತೇಕ ಎಲ್ಲ ಕ್ಷೇತ್ರಗಳ ನಾಯಕತ್ವ ಪ್ರಗತಿಪರತೆಯ ಸೋಗು ಹಾಕಿದ ಪ್ರತಿಗಾಮಿ ಎಡಪಂಥೀಯ ‘ಕಾಕ’ಗಳ (ಕಾಂಗ್ರೆಸ್-ಕಮ್ಯೂನಿಸ್ಟ್) ಕೈಗೆ ಬಿದ್ದ ಮೇಲಂತೂ ಭಾರತ ಬದಲಾಗುವ ಸಾಧ್ಯತೆ ದೂರದೂರವಾಗಿಹೋಯಿತು.

ಆರ್ಥಿಕ ಶಕ್ತಿಯಾದ ಚೀನಾ: ಇದೇ ಅವಧಿಯಲ್ಲಿ ಚೀನಾ ಹಿಡಿದ ದಾರಿಯೇ ಬೇರೆ. ಕಮ್ಯೂನಿಸಂನಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲವೆಂದರಿತ ಚೀನಿಯರು ಆ ತತ್ತ್ವವನ್ನು ರಾಜಕೀಯ ರಂಗಕ್ಕಷ್ಟೇ ಸೀಮಿತಗೊಳಿಸಿ ಆರ್ಥಿಕ ಕ್ಷೇತ್ರದಲ್ಲಿ ಬಂಡವಾಳಶಾಹಿ ತತ್ತ್ವಗಳ ಅನುಷ್ಠಾನವನ್ನು 1978ರಿಂದ ಹಂತಹಂತವಾಗಿ ಜಾರಿಗೊಳಿಸತೊಡಗಿದರು. ಪರಿಣಾಮವಾಗಿ ಕೇವಲ ಕಾಲು ಶತಮಾನದಲ್ಲಿ ಚೀನಾ ಬೃಹತ್ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿತು.

ಕಮ್ಯೂನಿಸ್ಟ್ ದೇಶ ಚೀನಾ ಆರ್ಥಿಕ ಉದಾರೀಕರಣವನ್ನು 1978ರಲ್ಲಿ ಆರಂಭಿಸಿದರೆ ಅಂಥದನ್ನು ಪ್ರಜಾಪ್ರಭುತ್ವ ಭಾರತದಲ್ಲಿ ಕಾಣಲು ನಾವು 1991-92ರವರೆಗೆ ಕಾಯಬೇಕಾಯಿತು! ನರಸಿಂಹ ರಾವ್-ಮನಮೋಹನ್ ಸಿಂಗ್ ಜೋಡಿ ಇದನ್ನು ಆರಂಭಿಸಿದರೂ ಅದಿನ್ನೂ ಕುಂಟುತ್ತಲೇ ಸಾಗಿದೆ. ಇದಕ್ಕೆ ಕಾರಣ, ಹಳೆಯ ಗುಂಗಿನಿಂದ ಪೂರ್ಣವಾಗಿ ಹೊರಬರಲಾಗದ ಸರ್ಕಾರಗಳ ಕಡಿಮೆ ನಿಷ್ಠೆ ಒಂದು ಕಡೆಯಾದರೆ, ಮಾಧ್ಯಮ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಟ್ಟಿಯಾಗಿ ತಳವೂರಿರುವ ತಥಾಕಥಿತ ಪ್ರಗತಿಪರರು ಋಣಾತ್ಮಕ ನಡೆನುಡಿಗಳಿಂದ ಜನರನ್ನು ಅಡ್ಡದಾರಿಗೆಳೆದು ಸರ್ಕಾರದ ನೀತಿಗಳಿಗೆ ವಿರೋಧ ಸೃಷ್ಟಿಸುತ್ತಿರುವುದಾಗಿದೆ. ಪರಿಣಾಮವಾಗಿ ಅಭಿವೃದ್ಧಿಯೂ ಕುಂಟುತ್ತಲೇ ಇದೆ. ಈ ದೇಶದ ದುರಂತವೆಂದರೆ ಇಲ್ಲಿ ಸ್ವಾತಂತ್ರ್ಯ ಅಧಿಕವಾಗಿದೆ ಮತ್ತು ಅದು ಯಾವುದೇ ನಿರ್ಬಂಧವಿಲ್ಲದೆ, ಶಿಕ್ಷೆಯ ಭಯವಿಲ್ಲದೆ ಸ್ವಚ್ಛಂದವಾಗಿ ಉಪಯೋಗಿಸಲ್ಪಡುತ್ತಿದೆ. ಇದಕ್ಕೆ ಹೋಲಿಸಿದರೆ ಚೀನಾದ ಪರಿಸ್ಥಿತಿ ಬೇರೆಯೇ ಇದೆ. ವಿರೋಧಕ್ಕೆ ಅವಕಾಶವೇ ಇಲ್ಲದ ಅಲ್ಲಿ ದೇಶಹಿತವನ್ನು ಗುರಿಯಾಗಿಟ್ಟುಕೊಂಡ ನೇತಾರ ಅಥವಾ ಸರ್ಕಾರ ಸೂಕ್ತ ನೀತಿಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ರೂಪಿಸಿ ಅನುಷ್ಠಾನಗೊಳಿಸಬಹುದು. ಅಂತಹ ಸರ್ವಾಧಿಕಾರಿ ವ್ಯವಸ್ಥೆ ಆರ್ಥಿಕ ಅಭಿವೃದ್ಧಿ ಸಾಧಿಸಿದರೂ ಸಮಾಜದ, ರಾಷ್ಟ್ರದ ಸರ್ವತೋಮುಖ ಬೆಳವಣಿಗೆಗೆ ಮಾರಕವಾಗಿರುವ ಕಾರಣ ನಮಗದು ರುಚಿಸದು. ಭೂಮಿ ಆಕಾಶಗಳ ನಡುವಿನ ಎಲ್ಲದರ ಬಗೆಗೂ ‘ಅಧಿಕಾರಯುತವಾಗಿ’ ಮಾತಾಡುವ ಇಷ್ಟೊಂದು ಬುದ್ಧಿಜೀವಿಗಳು, ಸಂಸ್ಕೃತಿ ಚಿಂತಕರಿರುವ ಈ ದೇಶ ವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಂಡೇ ಆರ್ಥಿಕ ಅಭ್ಯುದಯ ಸಾಧಿಸಬಹುದಾದ ವ್ಯವಸ್ಥೆಯೊಂದನ್ನು ಸೃಷ್ಟಿಸುವುದರಲ್ಲಿ ವಿಫಲವಾದದ್ದೇಕೆ? ಅಮೆರಿಕ, ಬ್ರಿಟನ್, ಈಗಿನ ಜರ್ಮನಿ ಹಾಗೂ ಜಪಾನ್​ಗಳಿಗೆ ಸಾಧ್ಯವಾದದ್ದು ನಮಗೇಕೆ ಸಾಧ್ಯವಾಗುತ್ತಿಲ್ಲ?

ಅಂತಿಮವಾಗಿ ನಮ್ಮನ್ನು ಅಣಕಿಸುತ್ತಿರುವ ವಾಸ್ತವವೆಂದರೆ, ಇಂದು ವಿಶ್ವ ಆರ್ಥಿಕರಂಗದಲ್ಲಿ ಚೀನಾ ಗಳಿಸಿರುವ ಪ್ರಭಾವದ ಕಾಲು ಭಾಗದಷ್ಟು ಸಾಧಿಸುವುದು ಭಾರತಕ್ಕಿನ್ನೂ ಸಾಧ್ಯವಾಗಿಲ್ಲ. ಇನ್ನು ರಾಜಕೀಯ-ಸೇನಾ ರಂಗಕ್ಕಿಳಿದರೆ ಅಲ್ಲಿಯೂ ಎದುರಾಗುವುದು ಕರುಣಕಥೆಯೇ. ಇದರ ವಿವರಣೆ ಹಾಗೂ ಈ ಎಲ್ಲ ಸಂಕೋಲೆಗಳಿಂದ ಭಾರತವನ್ನು ಮುಕ್ತಗೊಳಿಸಿ, ಈ ಪುರಾತನ ನಾಡಿಗೆ ವಿಶ್ವ ಆರ್ಥಿಕ-ರಾಜಕೀಯ-ಸೇನಾ ರಂಗದಲ್ಲಿ ಗೌರವದ ಸ್ಥಾನವನ್ನು ದೊರಕಿಸಿಕೊಡಲು ಪ್ರಸಕ್ತ ಮೋದಿ ಸರ್ಕಾರ ನಡೆಸುತ್ತಿರುವ ಹೆಣಗಾಟದ ವಿಶ್ಲೇಷಣೆ ಮುಂದಿನವಾರ.

(ಮುಂದುವರಿಯುವುದು)

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

Leave a Reply

Your email address will not be published. Required fields are marked *