Wednesday, 12th December 2018  

Vijayavani

Breaking News

ಐತಿಹಾಸಿಕ ದುಃಸ್ವಪ್ನಗಳ ಮೂಟೆ ಜಿನ್​ಪಿಂಗ್

Wednesday, 21.03.2018, 3:05 AM       2 Comments

| ಪ್ರೇಮಶೇಖರ

ಜಿನ್​ಪಿಂಗ್​ರ ನೀತಿಯ ಪರಿಚಯ ಡೋಕ್ಲಾಮ್ಲ್ಲಿ ಭಾರತಕ್ಕಾಗಿದೆ. ಪ್ರಧಾನಿ ಮೋದಿ ದಿಟ್ಟ ನಿಲುವು ಪ್ರದರ್ಶಿಸಿ ಚೀನಾ ಹಿಂದೆಗೆಯುವಂತೆ ಮಾಡಿದರೇನೋ ನಿಜ, ಆದರೆ ಜಿನ್​ಪಿಂಗ್ ಸುಮ್ಮನೆ ಕೂತಿಲ್ಲ. ಡೋಕ್ಲಾಮ್ ಉತ್ತರದ ಚೀನಿ ಪ್ರದೇಶದಲ್ಲಿ ಸೇನಾ ಠಿಕಾಣೆಗಳನ್ನು ಯುದ್ಧಸನ್ನದ್ಧ ಸ್ಥಿತಿಯಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ.

ಐದು ವರ್ಷಗಳ ಹಿಂದೆ ಪ್ರಥಮ ಬಾರಿಗೆ ಚೀನಾದ ಅಧ್ಯಕ್ಷರಾದಾಗ ಜಿನ್​ಪಿಂಗ್​ರ ಕೈಗೆ ಬಂದದ್ದು, ಗಾಬರಿಗೊಳಿಸುವ ಮಟ್ಟಕ್ಕಲ್ಲದಿದ್ದರೂ ಹಿಂದಿನ ದಶಕಕ್ಕೆ ಹೋಲಿಸಿದರೆ ನಿರಾಶಾದಾಯಕವೆಂದೇ ತೋರುತ್ತಿದ್ದ ಅರ್ಥವ್ಯವಸ್ಥೆಯಾದರೂ ಸೇನಾ ಸಾಮರ್ಥ್ಯದಲ್ಲಿನ ಬೆಳವಣಿಗೆಗಳು ತೃಪ್ತಿಯೆನಿಸುವ ಮಟ್ಟಕ್ಕೇ ಇದ್ದವು. ಇದಕ್ಕೆ ಕೆಲವೇ ತಿಂಗಳುಗಳ ಹಿಂದೆ ಅಧ್ಯಕ್ಷ ಹು ಜಿಂಟಾವೋ ಚೀನಾಗೆ ಪ್ರಪ್ರಥಮ ವಿಮಾನವಾಹಕ ನೌಕೆಯನ್ನು ದೊರಕಿಸಿಕೊಟ್ಟಿದ್ದರು. ಅದರೊಂದಿಗೇ ಪಶ್ಚಿಮ ಪೆಸಿಫಿಕ್ ವಲಯದಲ್ಲಿ ತನ್ನ ಹಾಜರಿ ಹಾಗೂ ಪ್ರಭಾವವನ್ನು ವಿಸ್ತರಿಸುವ ಚೀನಿ ಬಯಕೆಯ ಸೂಚನೆ ಜಗತ್ತಿಗೆ ಕಂಡಿತ್ತು. ಆದರೆ, ಸಮಾಧಾನದ ವಿಷಯವೆಂದರೆ ತನ್ನ ಗುರಿಗಳನ್ನು ಚೀನಾ ಶಾಂತಿಯುತ ವಿಧಾನದಲ್ಲೇ ಸಾಧಿಸುವ ಸೂಚನೆಗಳನ್ನೂ ಅಧ್ಯಕ್ಷ ಜಿಂಟಾವೋ ದ್ವಂದ್ವವಿಲ್ಲದೆ ನೀಡಿದ್ದರು. ಹಾಗೆ ನೋಡಿದರೆ ಕಳೆದ ಕಾಲು ಶತಮಾನದಿಂದಲೂ ಚೀನಾದ ನೀತಿ ಅದೇ ಆಗಿತ್ತು. 1979ರಲ್ಲಿ ಪುಟ್ಟ ವಿಯೆಟ್ನಾಂನಿಂದ ರಣರಂಗದಲ್ಲಿ ಮುಖಭಂಗ ಅನುಭವಿಸಿದ ನಂತರ ಚೀನಾ ಯಾವುದೇ ಸೇನಾ ದುಸ್ಸಾಹಸಕ್ಕೂ ಕೈಹಾಕಿರಲಿಲ್ಲ. ಅಷ್ಟೇ ಅಲ್ಲ, 1987ರಲ್ಲಿ ಭಾರತದ ವಿರುದ್ಧ ಅನಿವಾರ್ಯವಾಗಿ ಕದನಕ್ಕಿಳಿಯಬೇಕಾದ್ದನ್ನೂ, ಅದರಲ್ಲಿ ಅನುಭವಿಸಿದ ಹಿನ್ನಡೆಯನ್ನೂ ಚೀನಾ ಜಗತ್ತಿನ ಗಮನಕ್ಕೆ ತರಲೂ ಹಿಂಜರಿದಿತ್ತು.

ಆದರೆ ಅದೆಲ್ಲ ಬದಲಾದದ್ದು ಕ್ಸಿ ಜಿನ್​ಪಿಂಗ್ ಅಧ್ಯಕ್ಷರಾದಾಗ. 2013ರ ಜೂನ್​ನಲ್ಲಿ ವಾಷಿಂಗ್ಟನ್​ಗೆ ಅವರು ನೀಡಿದ ಅಧಿಕೃತ ಭೇಟಿಗೆ ಚೀನಿ ಸರ್ಕಾರಿ ನಿಯಂತ್ರಿತ ಮಾಧ್ಯಮಗಳು ನೀಡಿದ ಅಬ್ಬರದ ಪ್ರಚಾರ, ‘ಸಮಾನಸ್ಕಂದರ ನಡುವಿನ ಭೇಟಿ’ ಎಂಬಂತೆ ಬಿಂಬಿಸಲು ಅವು ನಡೆಸಿದ ದೊಂಬರಾಟಗಳು ಜಿನ್​ಪಿಂಗ್​ರಿಂದ ಜಗತ್ತು ಏನನ್ನು ನಿರೀಕ್ಷಿಸಬಹುದು ಎಂಬ ಸ್ಪಷ್ಟ ಸೂಚನೆಯನ್ನು ನೀಡಿಬಿಟ್ಟವು.

ಮೊದಲಿಗೆ, ಸೂಪರ್ ಪವರ್ ಆಗುವ ಹುಚ್ಚು ಹತ್ತಿಸಿಕೊಂಡ ಜಿನ್​ಪಿಂಗ್​ರ ಚೀನಾ ತನ್ನ ಸೇನಾ ಸಾಮರ್ಥ್ಯನ್ನು ಯದ್ವಾತದ್ವಾ ಹೆಚ್ಚಿಸಿಕೊಳ್ಳತೊಡಗಿ ಅದರ ವಾರ್ಷಿಕ ರಕ್ಷಣಾವೆಚ್ಚ ಕಳೆದ ಸಾಲಿನಲ್ಲಿ 150 ಶತಕೋಟಿ ಡಾಲರ್​ಗಳಿಗೇರಿತು. ಇದು ಭಾರತದ ವಾರ್ಷಿಕ ರಕ್ಷಣಾವೆಚ್ಚದ ಮೂರುಪಟ್ಟು! ದುರಂತವೆಂದರೆ, ಹಿಂದಿನ ಅಧ್ಯಕ್ಷರುಗಳ ನೀತಿಗಳಿಗೆ ವಿರುದ್ಧವಾಗಿ ಜಿನ್​ಪಿಂಗ್ ಆಯ್ದುಕೊಂಡ ಮಾರ್ಗ, ಚೀನಾದ ಸೂಪರ್ ಪವರ್ ಹಾದಿ ಶಾಂತಿಯುತವೇನಲ್ಲ ಎನ್ನುವುದು ಸುತ್ತಲಿನ ದೇಶಗಳ ಅನುಭವಕ್ಕೆ ಬರಲು ಹೆಚ್ಚುಕಾಲ ಬೇಕಾಗಲಿಲ್ಲ.

ಜಿನ್​ಪಿಂಗ್​ರ ವಿಸ್ತರಣಾವಾದ ಚೀನಾದ ಪೂರ್ವದ ನೆರೆಹೊರೆಯ ದೇಶಗಳಿಗೆ ಅನುಭವಕ್ಕೆ ಬಂದ ವಿಧಾನವನ್ನಿಲ್ಲಿ ನಿಮಗೆ ಸೂಕ್ಷ್ಮವಾಗಿ ಪರಿಚಯಿಸುತ್ತೇನೆ.

ಎಲ್ಲ ಸಾಗರಗಳಲ್ಲೂ ಅಲ್ಲಲ್ಲಿ ಬಂಡೆಗಳು ಎದ್ದುನಿಂತಿರುತ್ತವೆ. ಪೂರ್ವ ಚೀನಾ ಸಮುದ್ರ ಹಾಗೂ ದಕ್ಷಿಣ ಚೀನಾ ಸಮುದ್ರಗಳಲ್ಲೂ ಹಾಗೆಯೇ. ಜಗತ್ತಿನ ಇತರೆಡೆ ಇವುಗಳ ಮೇಲೆ ಸಾಮಾನ್ಯವಾಗಿ ಯಾವ ದೇಶವೂ ಒಡೆತನ ಸ್ಥಾಪಿಸಹೋಗುವುದಿಲ್ಲ. ಆದರೆ ಜಿನ್​ಪಿಂಗ್ ಹಿಡಿದ ದಾರಿಯೇ ಬೇರೆ. ಆ ಎರಡು ಸಮುದ್ರಗಳಲ್ಲಿ ತನಗೆ ಬೇಕೆನಿಸಿದ ಬಂಡೆಗಳನ್ನು ಆಯ್ದುಕೊಳ್ಳುವುದರ ಮೂಲಕ ತನ್ನ ಕುಟಿಲ ಕಾರ್ಯಾಚರಣೆ ಆರಂಭಿಸುವ ಚೀನಾ, ಬಂಡೆಗಳನ್ನು ಸುತ್ತುವರಿದಿರುವ ಹವಳದ ದಿಬ್ಬಗಳ ನಡುವಿನ ಸಾಗರಪ್ರದೇಶಕ್ಕೆ ಹಡಗುಗಟ್ಟಲೆ ಕಲ್ಲುಮರಳು ತಂದು ಸುರಿಯುವುದರ ಮೂಲಕ ಕೆಲವೇ ವಾರಗಳಲ್ಲಿ ಅಲ್ಲೊಂದು ಪುಟ್ಟ ಕೃತಕದ್ವೀಪ ನಿರ್ವಿುಸಿಬಿಡುತ್ತದೆ. ಆಮೇಲೆ ಅಲ್ಲಿ ಚೀನಿ ಧ್ವಜ, ಅದರ ಹಿಂದೆಯೇ ರೆಡಾರ್​ಗಳು, ಒಂದಷ್ಟು ಸೈನಿಕರು, ಪುಟ್ಟ ಯುದ್ಧವಿಮಾನಗಳು ಉಪಯೋಗಿಸಬಹುದಾದ ರನ್​ವೇ ಕಾಣಿಸಿಕೊಳ್ಳುತ್ತವೆ. ಅಲ್ಲಿಗೆ ಆ ನೆಲದ ಮೇಲೆ ಚೀನಾದ ಸಾರ್ವಭೌಮತ್ವ! ಹೀಗೇಕೆಂದು ನೆರೆಯ ದೇಶಗಳು ಪ್ರಶ್ನಿಸಿದರೆ ಜಿನ್​ಪಿಂಗ್​ರ ಚೀನಾ ಹಳೆಯ ಕಡತಗಳಿಂದ ಪುರಾತನ ಉಲ್ಲೇಖಗಳನ್ನೂ, ಭೂಪಟಗಳನ್ನೂ ಹೊರತೆಗೆಯುತ್ತದೆ, ಸಾವಿರ ಎರಡು ಸಾವಿರ ವರ್ಷಗಳ ಹಿಂದೆಯೇ ಚೀನಿ ನಾವಿಕರು ಅಲ್ಲಿಗೆಲ್ಲ ಹೋಗಿ ಚೀನಿ ಪತಾಕೆ ಹಾರಿಸಿದ್ದರು ಎನ್ನುತ್ತದೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಚೀನಿಯರಷ್ಟೇ ಏಕೆ, ಭಾರತೀಯರು, ಅರಬ್ಬರು ಹಾಗೂ ಇನ್ನಿತರರು ವ್ಯಾಪಾರಿ ಹಡಗುಗಳಲ್ಲಿ ಇಲ್ಲೆಲ್ಲ ಅಲೆದಾಡಿದ್ದುಂಟು. ಆದರೆ ಆ ಆಧಾರದ ಮೇಲೆ ಆ ದೇಶಗಳಾವುವೂ ಸಾಗರದಲ್ಲಿ ದಿಕ್ಕಿಲ್ಲದೆ ನಿಂತಿರುವ ಬಂಡೆಗಳ ಮೇಲೆ ತಮ್ಮ ಅಧಿಕಾರ ಸ್ಥಾಪಿಸುತ್ತಿಲ್ಲ. ಜಿನ್​ಪಿಂಗ್ ಎಂತಹ ಶಾಂತಿಕಂಟಕ ನೀತಿಗೆ ಚಾಲನೆಯಿತ್ತಿದ್ದಾರೆ ಎನ್ನುವುದು ಇದರಿಂದ ವ್ಯಕ್ತವಾಗುತ್ತದೆ.

ಹೀಗೆ ಬಂಡೆಯೊಂದನ್ನು ಕೃತಕ ದ್ವೀಪವನ್ನಾಗಿ ಬದಲಾಯಿಸಿ ಚೀನಾ ತನ್ನದೆಂದು ಘೊಷಿಸಿಕೊಂಡ ಘಳಿಗೆ ದ್ವೀಪದ ಸುತ್ತಲೂ ಹನ್ನೆರಡು ಕಿ.ಮೀ.ವರೆಗಿನ ಸಾಗರದ ಮೇಲೆ ಚೀನಾದ ಸಾರ್ವಭೌಮತ್ವ ಏರ್ಪಡುತ್ತದೆ ಮತ್ತು ಇನ್ನೂರು ಕಿ.ಮೀ. ವಿಸ್ತಾರದವರೆಗಿನ ಸಾಗರಪ್ರದೇಶ ಚೀನಾದ ಅನನ್ಯ ಆರ್ಥಿಕ ವಲಯ (Exclusive Economic Zone-EEZ) ಆಗಿಬಿಡುತ್ತದೆ. ಅಂದರೆ ಆಷ್ಟೂ ಪ್ರದೇಶದಲ್ಲಿ ತೈಲಶೋಧನೆಯಂತಹ ಆರ್ಥಿಕ ಚಟುವಟಿಕೆ ಕೈಗೊಳ್ಳುವ ಸಂಪೂರ್ಣ ಅಧಿಕಾರ ಚೀನಾಕ್ಕೆ ಮಾತ್ರ ಇರುತ್ತದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಇಂತಹ ಒಂದೆರಡು ದ್ವೀಪಗಳನ್ನು ನಿರ್ವಿುಸಿಕೊಂಡ ಚೀನಾ, ಇಡೀ ಸಮುದ್ರವನ್ನು ತನ್ನದೆಂದು ಘೊಷಿಸಿಕೊಳ್ಳಲು ಹವಣಿಸುತ್ತಿದೆ, ಅಲ್ಲಿ ಇತರ ದೇಶಗಳು ತೈಲ ಶೋಧನೆಯಂಥ ಕೆಲಸಕಾರ್ಯಗಳನ್ನು ಕೈಗೊಳ್ಳದಂತೆ ತಡೆಯುತ್ತಿದೆ. ಇದರೊಂದಿಗೆ, ನಿರಾತಂಕವಾಗಿ ಸಾಗುತ್ತಿದ್ದ ವ್ಯಾಪಾರಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗುವ ಸ್ಥಿತಿಯೂ ಉಂಟಾಗುವ ಸೂಚನೆ ಸಿಗತೊಡಗಿದೆ. ಇದರ ಜತೆಗೆ, ಈ ಕೃತಕ ದ್ವೀಪಗಳನ್ನು ನೆಲೆಗಳನ್ನಾಗಿ ಉಪಯೋಗಿಸಿಕೊಂಡು ಇತರ ದೇಶಗಳಿಗೆ ಸೇರಿದ ಪುಟ್ಟ ದ್ವೀಪಗಳ ಮೇಲೂ ತನ್ನ ಅಧಿಕಾರ ಸ್ಥಾಪಿಸಲು ಚೀನಾ ಹವಣಿಸುತ್ತಿದೆ.

ಜಿನ್​ಪಿಂಗ್​ರ ಈ ನೀತಿಯಿಂದಾಗಿ ದಕ್ಷಿಣದಲ್ಲಿ ಮಲೇಷ್ಯಾದಿಂದ ಹಿಡಿದು ಉತ್ತರದಲ್ಲಿ ಜಪಾನ್​ವರೆಗೆ ಎಲ್ಲ ದೇಶಗಳೂ ತೊಂದರೆ ಅನುಭವಿಸುತ್ತಿವೆ. ಇದರ ಜತೆಗೆ, ಆರ್ಥಿಕ ಹಾಗೂ ಸೇನಾಶಕ್ತಿಯ ದೃಷ್ಟಿಯಲ್ಲಿ ಬಲಹೀನವೆನಿಸಿರುವ ಜಗತ್ತಿನ ಹಲವಾರು ದೇಶಗಳಲ್ಲಿ ಜಿನ್​ಪಿಂಗ್ ತನ್ನ ದೇಶಕ್ಕಾಗಿ ವಿಶಾಲ ಜಾಗಗಳನ್ನು ಖರೀದಿಸಿದ್ದಾರೆ. ಅವುಗಳ ಸದ್ಯದ ಉಪಯೋಗ ಕೇವಲ ಆರ್ಥಿಕ ಚಟುವಟಿಕೆಗಳಷ್ಟೇ ಆಗಿದ್ದರೂ, ಆ ದೇಶಗಳಲ್ಲಿ ರಾಜಕೀಯ ಗೊಂದಲವುಂಟಾದರೆ ತಾನು ಖರೀದಿಸಿರುವ ಪ್ರದೇಶಗಳನ್ನು ಚೀನಾದ ‘ಸಾಗರೋತ್ತರ ಪ್ರದೇಶಗಳು’ ಎಂದು ಘೊಷಿಸಿ, ಅವುಗಳ ಮೇಲೆ ಚೀನಿ ಸಾರ್ವಭೌಮತ್ವವನ್ನು ಸ್ಥಾಪಿಸಿ, ತನ್ನ ಸೇನಾಬಲದಿಂದ ಅವುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಜಿನ್​ಪಿಂಗ್ ಮುಂದಾಗಬಹುದೆಂಬ ಆತಂಕ ವ್ಯಕ್ತವಾಗತೊಡಗಿದೆ. ಐದಾರು ಶತಮಾನಗಳ ಹಿಂದೆ ಯುರೋಪಿನ ದೇಶಗಳು ಜಗತ್ತಿನ ಎಲ್ಲೆಡೆ ವಸಾಹತುಗಳನ್ನು ಸ್ಥಾಪಿಸಿದ್ದು ಈ ವಿಧಾನದಿಂದಲೇ ಎಂಬುದನ್ನು ನೆನಪಿಸಿಕೊಂಡರೆ ಜಿನ್​ಪಿಂಗ್​ರ ಕೃತ್ಯಗಳು ಮುಂದಿನ ದಿನಗಳ ಜಾಗತಿಕ ಇತಿಹಾಸವನ್ನು ಹೇಗೆ ಹಾಳುಗೆಡವಬಹುದೆಂಬ ಸ್ಥೂಲಚಿತ್ರಣ ನಿಮಗೆ ದಕ್ಕಬಹುದು. ಜಿನ್​ಪಿಂಗ್ ಆರಂಭಿಸಿರುವ ‘One Belt One Road’ (OBOR) ಯೋಜನೆಯ ಒಳಹುನ್ನಾರವೆಂದರೆ ಜಗತ್ತಿನ ದೂರದೂರದ ದೇಶಗಳನ್ನು ತನ್ನ ಆರ್ಥಿಕ ಕಬಂಧಬಾಹುವಿನಲ್ಲಿ ಸಿಲುಕಿಸಿಕೊಳ್ಳಲು ಹಾಗೂ ಅಗತ್ಯ ಬಿದ್ದರೆ ಅಲ್ಲಿಗೆಲ್ಲ ಚೀನಿ ಸೇನೆಯನ್ನು ಕ್ಷಿಪ್ರಕಾಲದಲ್ಲಿ ಸಾಗಿಸುವುದೇ ಆಗಿದೆ. ಇಂತಹ ಮನುಷ್ಯನ ಕೈಗೆ ಚೀನಾದಂತಹ ಆರ್ಥಿಕ ಮಹಾಶಕ್ತಿಯ ಸಂಪೂರ್ಣ ಅಧಿಕಾರ ಜೀವಾವಧಿಯವವರೆಗೆ ದೊರಕಿದರೆ ಏನಾಗಬಹುದು ಎಂದು ತಿಳಿಯಲು ನಮಗೆ ಯಾವ ಸ್ಪಟಿಕ ಗೋಳವೂ ಬೇಕಾಗಿಲ್ಲ.

ಜಿನ್​ಪಿಂಗ್​ರ ಈ ಕರಾಳ ಯೋಜನೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅರಿವಿಗೆ ಬಂದೇ ಇದೆ. ಹೀಗಾಗಿಯೇ ಅವರುಗಳು ತಮ್ಮ ಜತೆ ಆಸ್ಟ್ರೇಲಿಯಾ ಹಾಗೂ ವಿಯೆಟ್ನಾಂಗಳನ್ನೂ ಸೇರಿಸಿಕೊಂಡು ಚೀನಿ ದುಸ್ಸಾಹಸಕ್ಕೆ ತಡೆಯೊಡ್ಡುವ ಮಾರ್ಗೇಪಾಯಗಳನ್ನು ರೂಪಿಸುತ್ತಿದ್ದಾರೆ. ಆದರೆ, ಚೀನಿ ಆರ್ಥಿಕ ಸಹಾಯವನ್ನಷ್ಟೇ ಪರಿಗಣಿಸಿ, ಅದರ ಹಿಂದಿನ ಅಪಾಯವನ್ನು ಗುರುತಿಸದಿರುವ ಹೆಚ್ಚಿನ ದೇಶಗಳ ಅಸಹಕಾರದಿಂದಾಗಿ ಇವರ ಕೆಲಸ ಕಠಿಣವಾಗುತ್ತಿದೆ.

ಸದ್ಯಕ್ಕೆ, ಚೀನಿ ನಡೆಗಳಿಗೆ ವಿಶ್ವರಂಗದಲ್ಲಿ ಪ್ರೋತ್ಸಾಹದಾಯಕವಾಗಿ ನಡೆದುಕೊಂಡು, ತನ್ನದೇ ದೇಶದ ಜತೆಗೆ ಇಡೀ ಜಗತ್ತಿನ ಭವಿಷ್ಯವನ್ನೇ ಬಲಿಗೊಡುತ್ತಿರುವ ವಿಶ್ವಸ್ತರೀಯ ನಾಯಕನೆಂದರೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್. ಚಾಣಾಕ್ಷತೆಯಲ್ಲಿ, ಮಹತ್ವಾಕಾಂಕ್ಷೆಯಲ್ಲಿ ಪುತಿನ್ ಮಹಾಶಯ ಜಿನ್​ಪಿಂಗ್​ಗೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಆದರೆ, ಪುತಿನ್​ರ ದುರಂತವೆಂದರೆ ಅವರ ಮಹತ್ವಾಕಾಂಕ್ಷೆಗಳನ್ನು ಕಾರ್ಯಗತಗೊಳಿಸಲು ಅಗತ್ಯವಾದ ಆರ್ಥಿಕ ಶಕ್ತಿ ರಷ್ಯಾಕ್ಕಿಲ್ಲ. ಇಂತಹ ಸ್ಥಿತಿಯಲ್ಲಿ ಅವರು ತಮ್ಮ ಸೀಮಿತ ಶಕ್ತಿಯನ್ನು ಅನಗತ್ಯವಾಗಿ ಪಶ್ಚಿಮದ ದೇಶಗಳನ್ನು ಕೆರಳಿಸುವುದರಲ್ಲಿ ವ್ಯರ್ಥಮಾಡುತ್ತಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ರಷ್ಯಾಕ್ಕೆ ಅಪಾಯ ಇರುವುದು ಅಮೆರಿಕ, ಬ್ರಿಟನ್ ಅಥವಾ ಜರ್ಮನಿಗಳಿಂದಲ್ಲ. ಆದರೆ, ಇತಿಹಾಸದ ಹಳದಿ ಕನ್ನಡಕವನ್ನು ತೆಗೆದೊಗೆಯಲು ಪುತಿನ್ ನಿರಾಕರಿಸುತ್ತಿರುವ ಕಾರಣ ಅವರಿಗೆ ನಿಜವಾದ ಶತ್ರು ಕಾಣಿಸುತ್ತಿಲ್ಲ.

ಮಾವೋ ಯುಗದಲ್ಲೇ ಚೀನಾ ತನ್ನ ಐದೂವರೆ ಲಕ್ಷ ಚದರ ಕಿ.ಮೀ. ವಿಸ್ತಾರದ ಪ್ರದೇಶವನ್ನು ರಷ್ಯಾ ಆಕ್ರಮಿಸಿಕೊಂಡಿದೆಯೆಂದು ಆಪಾದಿಸಿ, ಅದನ್ನು ಹಿಂದಿರುಗಿಸಬೇಕೆಂದು ತಗಾದೆಯೆತ್ತಿತ್ತು. ಇದನ್ನು ಪುತಿನ್ ಮರೆತಿರಬಹುದು, ಆದರೆ ಜಿನ್​ಪಿಂಗ್ ಖಂಡಿತಾ ಮರೆತಿರಲಾರರು. ರಷ್ಯಾ ಬಗ್ಗೆ ಜಿನ್​ಪಿಂಗ್ ಅನುಸರಿಸುತ್ತಿರುವ ನೀತಿಗಳನ್ನು ನೋಡಿದರೆ ಅವರು ರಷ್ಯಾದ ಕೊರಳಿನ ಸುತ್ತಲೂ ಯಾವ ಸದ್ದುಗದ್ದಲವೂ ಇಲ್ಲದೆ ಉರುಳು ಬಿಗಿಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಭಾಗಗಳಾಗಿದ್ದ, ಈಗ ಸ್ವತಂತ್ರ ದೇಶಗಳಾಗಿರುವ ಮಧ್ಯ ಏಷ್ಯಾದ ಮುಸ್ಲಿಂ ಗಣರಾಜ್ಯಗಳನ್ನು ಈಗಾಗಲೇ ಆರ್ಥಿಕವಾಗಿ ಚೀನಾ ಜತೆ ಬಂಧಿಸಿಬಿಟ್ಟಿದ್ದಾರೆ. ರಷ್ಯಾದ ಮೃದು ಹೊಟ್ಟೆಯ ಕೆಳಗಿರುವ ಈ ದೇಶಗಳಲ್ಲಿ ಚೀನಾದ ಸೇನಾಪ್ರಭಾವವೂ ದಿನೇದಿನೆ ತೆರೆಮರೆಯಲ್ಲೇ ವೃದ್ಧಿಯಾಗುತ್ತಿದೆ. ಪಶ್ಚಿಮದ ದೇಶಗಳೊಡನೆ ರಷ್ಯಾದ ಘರ್ಷಣೆ ಹೆಚ್ಚಿದಷ್ಟೂ ಜಿನ್​ಪಿಂಗ್​ರ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುತ್ತದೆ. ರಷ್ಯಾವನ್ನು ಆರ್ಥಿಕ ಸಂಕಷ್ಟಗಳಿಂದ ಮೇಲೆತ್ತಬಲ್ಲ ಸಾಮರ್ಥ್ಯ ಹಾಗೂ ಮನೋಭಾವಗಳೆರಡನ್ನೂ ಹೊಂದಿರುವ ಅಮೆರಿಕ ಮತ್ತು ಜರ್ಮನಿಗಳ ವಿರೋಧವನ್ನು ಪುತಿನ್ ಕಟ್ಟಿಕೊಂಡಷ್ಟೂ ರಷ್ಯಾ ಆರ್ಥಿಕ ದಿಗ್ಬಂಧನಕ್ಕೊಳಗಾಗಿ ನಿಶ್ಶಕ್ತವಾಗುತ್ತದೆಂದು ಜಿನ್​ಪಿಂಗ್​ಗೆ ಗೊತ್ತು. ಸಮಯ ನೋಡಿ ಅವರು ರಷ್ಯಾ ಮೇಲೆ ಎರಗುತ್ತಾರೆ. ಚೀನಾದ್ದೆಂದು ಗುರುತಿಸಿರುವ ಪ್ರದೇಶಗಳನ್ನು ನಿರಾಯಾಸವಾಗಿ ತಮ್ಮದಾಗಿಸಿಕೊಳ್ಳುತ್ತಾರೆ. ಅದನ್ನು ತಡೆಯುವ ಸಾಮರ್ಥ್ಯ ರಷ್ಯಾಗಿರುವುದಿಲ್ಲ. ಅಲ್ಲಿಗೆ ಚೀನಾ ಅಮೆರಿಕಕ್ಕೆ ಎದುರಾಗಿ ನಿಲ್ಲುವ ಜಗತ್ತಿನ ಎರಡನೆಯ ಸೂಪರ್ ಪವರ್ ಆಗುತ್ತದೆ. ತನ್ನ ದೇಶವನ್ನು ಆ ಹಂತಕ್ಕೊಯ್ಯುವುದು ಜಿನ್​ಪಿಂಗ್​ರ ಗುರಿ.

ಹೀಗೆ ಬದಲಾಗಲಿರುವ ವಿಶ್ವರಾಜಕಾರಣದಲ್ಲಿ ಭಾರತದ ಮುಂದಿರುವ ಸವಾಲುಗಳೇನು? ಜಿನ್​ಪಿಂಗ್​ರ ನೀತಿಯ ಪರಿಚಯ ಕಳೆದ ವರ್ಷವಷ್ಟೇ ಡೋಕ್ಲಾಮ್ಲ್ಲಿ ಭಾರತಕ್ಕಾಗಿದೆ. ಪ್ರಧಾನಿ ಮೋದಿ ದಿಟ್ಟ ನಿಲುವು ಪ್ರದರ್ಶಿಸಿ ಚೀನಾ ಹಿಂದೆಗೆಯುವಂತೆ ಮಾಡಿದರೇನೋ ನಿಜ, ಆದರೆ ಜಿನ್​ಪಿಂಗ್ ಸುಮ್ಮನೆ ಕೂತಿಲ್ಲ. ಡೋಕ್ಲಾಮ್ ಉತ್ತರದ ಚೀನಿ ಪ್ರದೇಶದಲ್ಲಿ ಸೇನಾ ಠಿಕಾಣೆಗಳನ್ನು ಜಿನ್​ಪಿಂಗ್ ಯುದ್ಧಸನ್ನದ್ಧ ಸ್ಥಿತಿಯಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇದರರ್ಥ, ಭಾರತದೊಡನೆ ಮತ್ತೊಂದು ಮುಖಾಮುಖಿಗೆ ಚೀನಾ ತಯಾರಾಗುತ್ತಿದೆ. ಜಿನ್​ಪಿಂಗ್ ಸೂಕ್ತ ಸಮಯಕ್ಕಾಗಿ ತಾಳ್ಮೆಯಿಂದ ಕಾಯಬಲ್ಲರು. ವಾಸ್ತವವಾಗಿ, ಸೇನಾಶಕ್ತಿಗೆ ಸಂಬಂಧಿಸಿದಂತೆ ಐದುವರ್ಷದ ಹಿಂದಿನ ಭಾರತಕ್ಕೂ, ಕಳೆದ ವರ್ಷದ ಭಾರತಕ್ಕೂ ಅಂತಹ ವ್ಯತ್ಯಾಸವೇನಿರಲಿಲ್ಲ. ಆದರೆ ಕಳೆದ ವರ್ಷ ಭಾರತಕ್ಕೆ ವರದಾನವಾದದ್ದು ದಿಟ್ಟ ನಾಯಕತ್ವ. ಅಂತಹುದೇ ನಾಯಕತ್ವ ಮುಂದೆಯೂ ಲಭ್ಯವಿರುತ್ತದೆ ಎಂದು ಹೇಳಲಾಗುವುದಿಲ್ಲ. ಜಿನ್​ಪಿಂಗ್​ರಂತೆ ಮೋದಿ ಜೀವಾವಧಿ ಪ್ರಧಾನಿಯಾಗುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಮಹಾಯುದ್ಧವನ್ನು ಜಯಿಸಿದ ವಿನ್​ಸ್ಟನ್ ರ್ಚಚಿಲ್, ಶೀತಲ ಸಮರದಲ್ಲಿ ಕಮ್ಯೂನಿಸಂ ಅನ್ನು ಮಣಿಸಿದ ಜಾರ್ಜ್ ಬುಷ್ ಸೀನಿಯರ್ ಚುನಾವಣೆಗಳಲ್ಲಿ ಸೋತ ಉದಾಹರಣೆಗಳಿರುವಾಗ ಮೋದಿಯವರೂ ಸೋತು ಅಯೋಗ್ಯನೊಬ್ಬ ಭಾರತದ ಪ್ರಧಾನಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಚಾಣಾಕ್ಷ ಜಿನ್​ಪಿಂಗ್​ಗೆ ಇದು ಗೊತ್ತೇ ಇದೆ.

ಒಟ್ಟಾರೆಯಾಗಿ ನೋಡುವುದಾದರೆ, ಇಂದು ಜಿನ್​ಪಿಂಗ್​ರ ಚೀನಾ, ವಿಶ್ವರಾಜಕೀಯದಲ್ಲಿ ಒಂದಕ್ಕಿಂತ ಹೆಚ್ಚು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದು 15-16ನೇ ಶತಮಾನಗಳ ಯುರೋಪಿಯನ್ ವಸಾಹತುಶಾಹಿ ರಾಷ್ಟ್ರಗಳ ಇಪ್ಪತ್ತೊಂದನೇ ಶತಮಾನದ ಅವತಾರದಂತಿದೆ. ಅದೇ ಸಮಯದಲ್ಲಿ 1933-39ರ ನಡುವಿನ ಅಡಾಲ್ಪ್ ಹಿಟ್ಲರ್ ನಾಯಕತ್ವದ ಜರ್ಮನಿಯ ಅಪರಾವತಾರದಂತೆಯೂ ಕಾಣುತ್ತಿದೆ. ಈ ಸನ್ನಿವೇಶದಲ್ಲಿ ಮೋದಿ ಅಥವಾ ಅವರಂತಹ ನಾಯಕನಿಲ್ಲದ ಭಾರತಕ್ಕೂ 1939ರ ಫ್ರಾನ್ಸ್​ಗೂ ಅಂತಹ ವ್ಯತ್ಯಾಸವೇನೂ ಇರುವುದಿಲ್ಲ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

2 thoughts on “ಐತಿಹಾಸಿಕ ದುಃಸ್ವಪ್ನಗಳ ಮೂಟೆ ಜಿನ್​ಪಿಂಗ್

Leave a Reply

Your email address will not be published. Required fields are marked *

Back To Top