ತಿರುಚಿದ ಇತಿಹಾಸ, ಆತ್ಮಾಭಿಮಾನ ಕಳೆದುಕೊಂಡ ಭಾರತೀಯ

ಮೆಕಾಲೆ ಭಾರತೀಯ ಶಾಲೆಗಳಿಗಾಗಿ ರಚಿಸಿದ ಇತಿಹಾಸ ಪಠ್ಯದ ಮೂಲಕ ಸದಾ ಹೊರಗಿನವರ ಆಕ್ರಮಣಕ್ಕೊಳಗಾದ ದೇಶವೆಂದು ಭಾರತ ಚಿತ್ರಿತವಾಯಿತು. ದ್ರಾವಿಡರು, ಆರ್ಯರು, ಮುಸ್ಲಿಮರು, ಬ್ರಿಟಿಷರು ಭಾರತವನ್ನು ಪದಾಕ್ರಾಂತಗೊಳಿಸಿಕೊಂಡು ಆಳಿದರೆಂದು ಬಣ್ಣಿತವಾದ ಈ ಇತಿಹಾಸದಲ್ಲಿ ಭಾರತದ ಹಿರಿಮೆ-ಗರಿಮೆಗಳನ್ನು ಉದ್ದೇಶಪೂರ್ವಕವಾಗಿ ಮರೆಗೆ ಸರಿಸಲಾಯಿತು.

ಇಂದು ನಮ್ಮ ಶಾಲೆಗಳಲ್ಲಿ ಕಲಿಸಲಾಗುತ್ತಿರುವ ಇತಿಹಾಸ ಪೂರ್ಣವಲ್ಲ, ಪೂರ್ಣಸತ್ಯವಲ್ಲ ಎಂಬ ಮಾತುಗಳನ್ನು ನಾವು ಕೇಳುತ್ತಲೇ ಇದ್ದೇವೆ. ಹಾಗೆ ನೋಡಿದರೆ ಇತಿಹಾಸವನ್ನು ಪೂರ್ಣವಾಗಿ ಕಟ್ಟಿಕೊಡುವುದು, ಇದೇ ಇತಿಹಾಸ ಎಂದು ಅಂತಿಮಗೆರೆ ಎಳೆದುಬಿಡುವುದು ಸಾಧ್ಯವೇ ಇಲ್ಲ. ನಮ್ಮ ಸಂಗ್ರಹದ ಪಟ್ಟಿಗೆ ಹೊಸಹೊಸ ಲಿಖಿತ ಹಾಗೂ ಪ್ರಾಕ್ತನ ಆಧಾರಗಳು ಸೇರುತ್ತ ಹೋದಂತೆ, ಅವುಗಳ ವಸ್ತುನಿಷ್ಠ ಅಧ್ಯಯನ ಹೊಸಹೊಸ ವಿಷಯ-ವಿವರಗಳನ್ನು ಅನಾವರಣಗೊಳಿಸತೊಡಗಿದಂತೆ ಇತಿಹಾಸದ ಚಿತ್ರ ಬದಲಾಗುತ್ತ ಹೋಗುತ್ತದೆ, ಬದಲಾಗಲೇಬೇಕು.

ಆದರೆ ಇಲ್ಲೊಂದು ತೊಡಕಿದೆ. ಇತಿಹಾಸವನ್ನು ರಚಿಸುವುದು ಗೆದ್ದವರಂತೆ. ಗೆದ್ದವರು ರಚಿಸುವ ಇತಿಹಾಸದಲ್ಲಿ ಅವರ ಸಾಧನೆಗಳು ವೈಭವೀಕರಿಸಲ್ಪಡುತ್ತವೆ, ಸೋತವರ ಬಹುತೇಕ ಸಾಧನೆಗಳು ಮರೆಮಾಚಲ್ಪಡುತ್ತವೆ, ಉಳಿದವು ಲೇವಡಿಗೊಳಗಾಗುತ್ತವೆ. ಹಾಗೆ ತಮಗೆ ಪ್ರಿಯವಾಗುವಂತೆ, ಅನುಕೂಲವಾಗುವಂತೆ ಇತಿಹಾಸದ ಪಠ್ಯಪುಸ್ತಕಗಳನ್ನು ಅವರು ರಚಿಸುವಾಗ ಕಣ್ಣೆದುರೇ ಇರುವ ಲಿಖಿತ-ಪ್ರಾಕ್ತನ ಮೂಲಗಳಲ್ಲಿ ತಮಗೆ ಬೇಕಾದ್ದನ್ನು ಮಾತ್ರ ತೆಗೆದುಕೊಳ್ಳುತ್ತಾರೆ, ಬೇಡದ್ದನ್ನು ತಣ್ಣಗೆ ನಿರ್ಲಕ್ಷಿಸಿಬಿಡುತ್ತಾರೆ. ಹೀಗಾಗಿ ಆ ಪಠ್ಯಪುಸ್ತಕಗಳಲ್ಲಿ ಇರುವುದಷ್ಟೇ ಇತಿಹಾಸ ಎಂದು ನಂಬಿದವರ ಇತಿಹಾಸಜ್ಞಾನ ಗೆದ್ದವರ ಆಶಯಕ್ಕನುಗುಣವಾಗಷ್ಟೇ ಸೀಮಿತವಾಗಿ ಉಳಿಯುತ್ತದೆ. ಪಠ್ಯಪುಸ್ತಕಗಳಾಚೆಗೂ ಇತಿಹಾಸವಿದೆ ಎಂದು ನಂಬಿಯೋ ಅಥವಾ ಮಾನವಸಹಜ ಕುತೂಹಲದಿಂದಲೋ ಅಥವಾ ಅಧ್ಯಯನ ಶೀಲತೆಯಿಂದಲೋ ಐತಿಹಾಸಿಕ ದಾಖಲೆಗಳನ್ನೂ, ಪ್ರಾಕ್ತನ ಅವಶೇಷಗಳನ್ನೂ ಶೋಧಿಸಹೊರಟವರ ಮುಂದೆ ಪಠ್ಯಪುಸ್ತಕ ಗಳಲ್ಲಿರುವುದಕ್ಕಿಂತಲೂ ಬೇರೆಯದೇ ಇತಿಹಾಸ ತೆರೆದುಕೊಳ್ಳುತ್ತದೆ!

ನಮ್ಮ ಇತಿಹಾಸವನ್ನು, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಇತಿಹಾಸದ ಪಠ್ಯಪುಸ್ತಕಗಳನ್ನು ರಚಿಸಿದವರು ಗೆದ್ದವರು, ಮೊದಲಿಗೆ ಬ್ರಿಟಿಷರು, ನಂತರ ಕಾಂಗ್ರೆಸ್​ನ ಒಂದು ವರ್ಗ ಮತ್ತು ಅದರ ಜತೆ ಕೈಗೂಡಿಸಿದ ಎಡಪಂಥೀಯರು. ಕಾಂಗ್ರೆಸ್​ನ ಆ ವರ್ಗ 1946-47ರ ರಾಜಕೀಯ ಹಗ್ಗಜಗ್ಗಾಟದಲ್ಲಿ ಮೋಸದಿಂದ ಗೆದ್ದು ರಾಜಕೀಯ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡವರಾದರೆ, ಎಡಪಂಥೀಯರು ಕಾಂಗ್ರೆಸ್​ನ ಗೆದ್ದ ಬಣದ ಜತೆ ಕೈಜೋಡಿಸಿ ಸ್ವತಂತ್ರ ಭಾರತದ ಸಾಂಸ್ಕೃತಿಕ-ಸಾಹಿತ್ಯಕ-ಶೈಕ್ಷಣಿಕ ಕ್ಷೇತ್ರಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡವರು. ಹೀಗೆ ‘ಗೆದ್ದ’ ಬ್ರಿಟಿಷರು ಮತ್ತು ಕಾಕಗಳು (ಕಾಂಗ್ರೆಸ್-ಕಮ್ಯೂನಿಸ್ಟರು) ರಚಿಸಿದ ಇತಿಹಾಸ ಪಠ್ಯಪುಸ್ತಕಗಳಾಚೆಗೂ ಇರುವ ಇತಿಹಾಸದ ಕಿರುಪರಿಚಯವನ್ನು ಎರಡು ಭಾಗಗಳ ಈ ಲೇಖನದಲ್ಲಿ ಮಾಡುತ್ತಿದ್ದೇನೆ. ಇದರ ಉದ್ದೇಶ ಪಠ್ಯಪುಸ್ತಕಗಳನ್ನು ಮೂಲವಾಗಿಟ್ಟುಕೊಂಡೇ ಅವುಗಳಾಚೆಯೂ ಇರುವ ನಮ್ಮ ಇತಿಹಾಸವನ್ನು ಶೋಧಿಸಲು ನಿಮ್ಮನ್ನು ಪ್ರೇರೇಪಿಸುವುದಾಗಿದೆ.

ಭಾರತದಲ್ಲಿ ಇಂಗ್ಲಿಷ್ ಶಿಕ್ಷಣದ ಅಡಿಪಾಯ ಹಾಕಿದ ಲಾರ್ಡ್ ಮೆಕಾಲೆಗಿದ್ದ ಭಾರತೀಯ ಸಾಹಿತ್ಯದ ಪರಿಚಯ ಸೀಮಿತವಾಗಿತ್ತು. ‘ಇಡೀ ಭಾರತ ಮತ್ತು ಅರೇಬಿಯಾದ ಸಾಹಿತ್ಯ ಒಂದು ಶೆಲ್ಪ್​ನಲ್ಲಿರಬಹುದಾದ ಯುರೋಪಿಯನ್ ಕೃತಿಗಳಿಗೆ ಸಮ’ ಎಂದಾತ 1835ರಲ್ಲಿ ಮಾಡಿದ ‘ಲೇವಡಿ’ಯೇ ಇದಕ್ಕೆ ಸಾಕ್ಷಿ. ಆದರೆ ಆತನ ಕಣ್ಣೆದುರಿಗಿದ್ದ ಅಂದಿನ ಭಾರತದ ಹಲವು ವಾಸ್ತವಗಳು ಅವನನ್ನು ಅಚ್ಚರಿಗೊಳಿಸಿದ್ದವು. ಭಾರತೀಯರ ಧರ್ಮನಿಷ್ಠೆ, ಭಿಕ್ಷೆಗಿಳಿಯದ ಅವರಲ್ಲಿದ್ದ ಆತ್ಮಾಭಿಮಾನ, ಇವೆರಡನ್ನೂ ರೂಪಿಸುತ್ತಿದ್ದ ಭಾರತೀಯ ಗುರುಕುಲ ಶಿಕ್ಷಣಪದ್ಧತಿ ಮೆಕಾಲೆಯನ್ನು ಅಚ್ಚರಿಗೊಳಿಸಿದ್ದಷ್ಟೇ ಅಲ್ಲ, ಭಾರತೀಯರನ್ನು ಇಂಗ್ಲಿಷರ ಗುಲಾಮರಾಗಿಸಬೇಕಾದರೆ ಇಲ್ಲಿನ ಶಿಕ್ಷಣ ಪದ್ಧತಿಯನ್ನೇ ಬದಲಾಯಿಸಬೇಕೆಂದು ನಿರ್ಧರಿಸಲು ಅವನನ್ನು ಪ್ರೇರೇಪಿಸಿದವು. ಭಾರತದ ನೆಲವನ್ನಷ್ಟೇ ಅಲ್ಲದೆ ಭಾರತೀಯರ ಮನಸ್ಸುಗಳನ್ನೂ ಬ್ರಿಟಿಷರ ವಹಾಹತನ್ನಾಗಿಸಲು ಆತ ವ್ಯವಸ್ಥಿತ ಪ್ರಯತ್ನ ಆರಂಭಿಸಿದ್ದು ಭಾರತದ ಇತಿಹಾಸವನ್ನು ವಿರೂಪಗೊಳಿಸುವ ಮೂಲಕ. ಇಲ್ಲಿನ ಶಾಲೆಗಳ ಇತಿಹಾಸ ಪಠ್ಯಪುಸ್ತಕಗಳನ್ನು ರಚಿಸಲು ಆತ ಮೂಲವಾಗಿ ಬಳಸಿಕೊಂಡದ್ದು ಜೇಮ್್ಸ ಮಿಲ್ಸ್ ಮತ್ತು ಚಾರ್ಲ್್ಸ ಗ್ರಾ್ಯಂಟ್ 1808ರಲ್ಲಿ ಹೈಲಿಬರಿ ಕಾಲೇಜ್​ಗಾಗಿ ರಚಿಸಿದ್ದ ಭಾರತದ ಇತಿಹಾಸದ ಪಠ್ಯಕ್ರಮವನ್ನು.

ಮಿಲ್ಸ್ ಮತ್ತು ಗ್ರಾ್ಯಂಟ್ ಭಾರತಕ್ಕೆ ಒಮ್ಮೆಯೂ ಭೇಟಿ ನೀಡದೆ, ಇಲ್ಲಿನ ಬದುಕನ್ನು ನೋಡದೆ, ಇಲ್ಲಿನ ಸಾಹಿತ್ಯಕ-ಧಾರ್ವಿುಕ-ಐತಿಹಾಸಿಕ ಆಧಾರಗಳನ್ನು ಖುದ್ದಾಗಿ ಪರಿಶೀಲಿಸದೆ ರಚಿಸಿದ್ದ ಆ ಪಠ್ಯಕ್ರಮದಲ್ಲಿ ಭಾರತದ ಇತಿಹಾಸ ಏಕಪ್ರಕಾರವಾಗಿ ತುಂಬಿಹರಿಯದೆ ಅಲ್ಲಲ್ಲಿ ಒಂದಕ್ಕೊಂದು ಸಂಪರ್ಕವಿಲ್ಲದ ನೀರಿನ ಗುಂಡಿಗಳನ್ನು ಹೊಂದಿದ ಬೇಸಗೆಯ ನದೀಪಾತ್ರವಾಗಿತ್ತು. ಅಂದು ಭಾರತೀಯರು ಇತಿಹಾಸವೆಂದೇ ನಂಬಿದ್ದ ರಾಮಾಯಣವನ್ನು ಕಲ್ಪಿತಕತೆಯೆಂದು ಮಿಲ್ಸ್ ಆಂಡ್ ಗ್ರಾ್ಯಂಟ್ ಬರೆದಿದ್ದರು. ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು 800 ವರ್ಷಗಳ ಹಿಂದೆ ಅಲ್ ಬೆರೂನಿ ನೀಡಿದ್ದ! 11ನೆಯ ಶತಮಾನದ ಆದಿಯಲ್ಲಿ ಭಾರತಕ್ಕೆ ಭೇಟಿನೀಡಿದ್ದ ಪರ್ಷಿಯನ್ ಇತಿಹಾಸಕಾರ ಅಲ್ ಬೆರೂನಿ ಇಲ್ಲಿನ ಜನಜೀವನ, ಧಾರ್ವಿುಕತೆ, ಇತಿಹಾಸ ಎಲ್ಲವನ್ನೂ ಅಧ್ಯಯನ ಮಾಡಿ ಬರೆದ ‘ತೆಹ್ಖೀಖ್ ಮಾ ಲಿ-ಲ್ ಹಿಂದ್’ ಕೃತಿ ಭಾರತದ ಬಗ್ಗೆ ಅಮೂಲ್ಯ ವಿವರಗಳನ್ನು ನೀಡುತ್ತದೆ. ತನ್ನ ಕೃತಿಯಲ್ಲಿ ಅಲ್ ಬೆರೂನಿ ದಾಖಲಿಸಿರುವ ಹಲವು ವಿಷಯಗಳಲ್ಲಿ ಒಂದು- ರಾಮ ಒಬ್ಬ ಐತಿಹಾಸಿಕ ವ್ಯಕ್ತಿ ಮತ್ತು ರಾಮಾಯಣ ಐತಿಹಾಸಿಕ ಘಟನಾವಳಿಗಳ ದಾಖಲೆ ಎಂಬುದು. ಆದರೆ ಮೆಕಾಲೆ ರಚಿಸಿದ ಪಠ್ಯಕ್ರಮದಲ್ಲಿ ಅಲ್ ಬೆರೂನಿಯ ಮಾತು ಹಿಂದಕ್ಕೆ ಸರಿಯಿತು, ಮಿಲ್ಸ್ ಆಂಡ್ ಗ್ರಾಂಟ್ ಮಾತು ಮುಂದಕ್ಕೆ ಬಂತು, ಅಲ್ಲಿಂದೀಚೆಗೆ ‘ಶಿಕ್ಷಿತ’ ಭಾರತೀಯರು ರಾಮಾಯಣವನ್ನು ತಿರಸ್ಕರಿಸತೊಡಗಿದರು. ಅದರ ಪರಿಣಾಮವನ್ನು ನಾವೀಗ ಸರಿಸುಮಾರು ದಿನವೂ ನೋಡುತ್ತಿದ್ದೇವೆ.

ಮಿಲ್ಸ್ ಆಂಡ್ ಗ್ರಾ್ಯಂಟ್ ಪಠ್ಯಕ್ರಮದ ಆಧಾರದ ಮೇಲೆ ಅಂತಿಮವಾಗಿ ಮೆಕಾಲೆ ಭಾರತೀಯ ಶಾಲೆಗಳಿಗಾಗಿ ರಚಿಸಿದ ಇತಿಹಾಸ ಪಠ್ಯಪುಸ್ತಕದ ಮೂಲಕ ಭಾರತದ ಶಾಲೆಗಳಲ್ಲಿ ಬೋಧಿಸಲಾದ ಇತಿಹಾಸದಲ್ಲಿ ಸದಾ ಹೊರಗಿನವರ ಆಕ್ರಮಣಕ್ಕೊಳಗಾದ ದೇಶವೆಂದು ಭಾರತ ಚಿತ್ರಿತವಾಯಿತು. ಹೊರಗಿನಿಂದ ಬಂದ, ಮೊದಲಿಗೆ ದ್ರಾವಿಡರು, ನಂತರ ಆರ್ಯರು, ಆಮೇಲೆ ಮುಸ್ಲಿಮರು, ಕೊನೆಯಲ್ಲಿ ಬ್ರಿಟಿಷರು ಭಾರತವನ್ನು ಪದಾಕ್ರಾಂತಗೊಳಿಸಿಕೊಂಡು ಆಳಿದರೆಂದು ಬಣ್ಣಿತವಾದ ಈ ಇತಿಹಾಸದಲ್ಲಿ ಭಾರತದ ಹಿರಿಮೆ-ಗರಿಮೆಗಳನ್ನು ಉದ್ದೇಶಪೂರ್ವಕವಾಗಿ ಮರೆಗೆ ಸರಿಸಲಾಯಿತು. ಹೊರಗಿನಿಂದ ಬಂದವರೆಲ್ಲರ ಮುಂದೆ ಸೋತು ಮಂಡಿಯೂರಿದ, ವಿಜಯವನ್ನೆಂದೂ ಕಾಣದ ಜನರನ್ನಾಗಿ ಭಾರತೀಯರನ್ನು ಚಿತ್ರಿಸಲಾಯಿತು. ಈ ಬಗ್ಗೆ ಕೆಲವು ಉದಾಹರಣೆಗಳನ್ನು ಪರಿಶೀಲಿಸೋಣ.

ಅರಬ್ ದಂಡನಾಯಕ ಮಹಮದ್ ಬಿನ್ ಖಾಸಿಂ ಕ್ರಿ.ಶ. 711-12ರಲ್ಲಿ ಸಿಂಧ್ ಮೇಲೆ ದಾಳಿಯೆಸಗಿ ಆ ಪ್ರಾಂತ್ಯವನ್ನು ಆಕ್ರಮಿಸಿಕೊಂಡದ್ದು ಭಾರತದ ಇತಿಹಾಸದ ಅತಿಮುಖ್ಯ ಘಟನೆಗಳಲ್ಲಿ ಒಂದೆಂದು ದಾಖಲಾಗಿದೆ. ಆದರೆ ಮುಂದಿನ 2 ದಶಕಗಳಲ್ಲಿ ಭಾರತದ ಮೇಲೆ ಅರಬ್ಬರು 3 ಸಲ ದಂಡೆತ್ತಿ ಬಂದಾಗ ಮೂರು ಸಲವೂ ಅವರನ್ನು ಭಾರತೀಯ ಅರಸ ಲಲಿತಾದಿತ್ಯ ಸೋಲಿಸಿ ಓಡಿಸಿದ್ದು ಇತಿಹಾಸ ಪಠ್ಯಪುಸ್ತಕಗಳಲ್ಲಿ ದಾಖಲಾಗಲಿಲ್ಲ. ಇರಾನ್, ಇರಾಕ್, ಸಿರಿಯಾ, ಅಫ್ಘಾನಿಸ್ತಾನದಂತಹ ದೇಶಗಳು 2-3 ದಶಕಗಳಲ್ಲಿ ಸುಲಭವಾಗಿ ಅರಬ್-ತುರ್ಕಿ ಮುಸ್ಲಿಮರ ವಶವಾದರೆ ಅವರು ಪಂಜಾಬ್ ಪ್ರವೇಶಿಸದಂತೆ ಗಡಿನಾಡಿನ ಹಿಂದೂಶಾಹಿ ರಾಜಮನೆತನ ಸತತ 300 ವರ್ಷಗಳವರೆಗೆ ತಡೆದು ನಿಲ್ಲಿಸಿತ್ತು. ಇಂತಹ ತಡೆ ಮುಸ್ಲಿಂ ಆಕ್ರಮಣಕಾರರಿಗೆ ಬೇರೆಲ್ಲೂ ಎದುರಾಗಲಿಲ್ಲ. ಆದರೆ ಭಾರತೀಯರ ಈ ಶೌರ್ಯ ಇತಿಹಾಸದಲ್ಲಿ ಒಂದು ಅಡಿಟಿಪ್ಪಣಿಯಾಗಷ್ಟೇ ಕಾಣಿಸಿಕೊಳ್ಳುತ್ತದೆ. ಹಿಂದೂಶಾಹಿಗಳ ಸಮಕಾಲೀನರಾದ ರಾಷ್ಟ್ರಕೂಟರು ಒಂದು ಹಂತದಲ್ಲಿ ಸಿಂಧ್​ನಲ್ಲಿದ್ದ ಅರಬ್ ಆಡಳಿತಗಾರರನ್ನು ಸೋಲಿಸಿದರೂ ಅವರನ್ನು ಅಲ್ಲಿಂದ ಓಡಿಸದೆ ಸಾಮಂತರನ್ನಾಗಿ ಮಾಡಿಕೊಂಡು ಅವರಿಂದ ಕಪ್ಪ ಸ್ವೀಕರಿಸಿದರು. ಇದು ಸಾರುವುದು- ‘ಯಾರೂ ಹೊರಗಿನವರಲ್ಲ, ನಾವು-ಅವರು ಎಂಬ ವಿಂಗಡಣೆ ಸಲ್ಲ, ಎಲ್ಲರೂ ಒಂದೇ’ ಎಂಬ ಭಾರತೀಯ ಮನೋಭಾವವನ್ನು, ‘ವಸುಧೈವ ಕುಟುಂಬಕಂ’ ಎಂಬ ಭಾರತೀಯ ಮೌಲ್ಯವನ್ನು. ಆದರೆ ಈ ಉದಾತ್ತ ಭಾರತೀಯ ನೀತಿ ಮತ್ತು ಆಚರಣೆ ಇತಿಹಾಸ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆಯಲೇ ಇಲ್ಲ.

ನಂತರ ಮಹಮದ್ ಘಜ್ನಿಯ ದಂಡಯಾತ್ರೆಗಳು ಪಠ್ಯಪುಸ್ತಕಗಳಲ್ಲಿ ದೊಡ್ಡದಾಗಿ ದಾಖಲಾದವು. ಅವನ ಉತ್ತರಾಧಿಕಾರಿಗಳು ಭಾರತದಲ್ಲೂ, ಅಫ್ಘಾನಿಸ್ತಾನದಲ್ಲೂ ಮತ್ತೆಮತ್ತೆ ಸೋಲು ಅನುಭವಿಸಿದರು. ಆದರೆ ಅಫ್ಘಾನಿಸ್ತಾನದಲ್ಲಿ ಅನುಭವಿಸಿದ ಸೋಲುಗಳು ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆದರೆ ಭಾರತದಲ್ಲಿ ಉಂಡ ಸೋಲುಗಳು ದಾಖಲಾಗಲೇ ಇಲ್ಲ! ಭಾರತದ ಮೇಲಾದ ವಿದೇಶಿ ಸೇನಾ ಆಕ್ರಮಣಗಳು, ವಿದೇಶಿ ಅಧಿಪತ್ಯಕ್ಕೆ ಇತಿಹಾಸ ಪಠ್ಯಪುಸ್ತಕಗಳಲ್ಲಿ ದೊರೆತಷ್ಟು ಸ್ಥಾನ ಭಾರತ ತನ್ನ ಧರ್ಮ, ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಇಡೀ ಆಗ್ನೇಯ ಏಷ್ಯಾಕ್ಕೆ, ಚೀನಾಕ್ಕೆ ಶಾಂತಿಮಾರ್ಗದಲ್ಲಿ ಹರಡಿ ಅವೆಲ್ಲವನ್ನೂ ಸಾಂಸ್ಕೃತಿಕ ಬೃಹತ್ ಭಾರತಕ್ಕೆ ಸೇರಿಸಿದ್ದಕ್ಕೆ ಸಿಗಲಿಲ್ಲ. ಭಾರತೀಯರು ಭಾರತದ ಭೌಗೋಳಿಕ ಗಡಿಗಳಾಚೆ ತಮ್ಮ ರಾಜಕೀಯ ಅಧಿಕಾರ ಸ್ಥಾಪಿಸಿದ ಉದಾಹರಣೆಗಳೂ ಇತಿಹಾಸದಲ್ಲಿವೆ. ಪೂರ್ವ ಭಾರತದ ಕ್ಷತ್ರಿಯ ರಾಜವಂಶಸ್ಥರು ಕ್ರಿ.ಪೂ. 4ನೆಯ ಶತಮಾನದಲ್ಲೇ ಸಯಾಂ, ಲಾವೋಸ್​ಗಳನ್ನು ದಾಟಿ ಯುನಾನ್ ಸೇರಿದಂತೆ ದಕ್ಷಿಣ ಚೀನಾದ ಬಹುಪಾಲು ಪ್ರದೇಶಗಳಲ್ಲಿ ಹಿಂದೂ ರಾಜ್ಯಗಳನ್ನು ಸ್ಥಾಪಿಸಿದ್ದ ವಿವರಗಳು ಆ ದಿನಗಳ ಚೀನಿ ಗ್ರಂಥಗಳಲ್ಲಿ ಉಲ್ಲೇಖಗೊಂಡಿವೆ. ಆ ಕಾಲದ ಹಲವು ಹಿಂದೂ ಮಂದಿರಗಳ ಅವಶೇಷಗಳು ಅಲ್ಲೆಲ್ಲ ದೊರೆತಿವೆ. ಈ ಐತಿಹಾಸಿಕ ವಿವರಗಳು ಅದೆಷ್ಟು ಭಾರತೀಯರಿಗೆ ಇತಿಹಾಸದ ಪಠ್ಯಪುಸ್ತಕಗಳ ಮೂಲಕ ತಲುಪಿವೆ? ತಲುಪುತ್ತಿರುವುದೆಲ್ಲವೂ ‘ಭಾರತೀಯ ಎಲ್ಲೆಲ್ಲೂ ಸೋತವನು’ ಎಂದು!

ಮತ್ತೆ ಲಲಿತಾದಿತ್ಯನತ್ತ ತಿರುಗೋಣ. ಅಶೋಕ, ಅಕ್ಬರ್, ಔರಂಗಜೇಬ, ಕೊನೆಯಲ್ಲಿ ಬ್ರಿಟಿಷ್ ಭಾರತೀಯ ಸಾಮ್ರಾಜ್ಯ ಭಾರತ ಕಂಡ ಅತಿದೊಡ್ಡ ಸಾಮ್ರಾಜ್ಯಗಳು ಎಂದು ಬ್ರಿಟಿಷರು ರಚಿಸಿದ, ಇಂದೂ ಅದೇ ಜಾಡಿನಲ್ಲಿರುವ ನಮ್ಮ ಪಠ್ಯಪುಸ್ತಕಗಳು ಹೇಳುತ್ತವೆ. ಇದು ಇತಿಹಾಸಕ್ಕೆ ಅಪಚಾರವೆಸಗುವ ಮಾಹಿತಿ. ಭಾರತದ ಇತಿಹಾಸದಲ್ಲೇ ಅತ್ಯಂತ ಬೃಹತ್ತಾದ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ಕಾಶ್ಮೀರದ ಅರಸನಾದ ಲಲಿತಾದಿತ್ಯ. ಈತ ಜನಿಸಿದ್ದು ಕ್ರಿ.ಶ. 699ರಲ್ಲಿ. ಈತ ಅರಬ್ ದಾಳಿಕೋರರನ್ನಷ್ಟೇ ಸೋಲಿಸಲಿಲ್ಲ, ದಾಳಿಯೆಸಗಿದ ಟಿಬೆಟನ್ ಮತ್ತು ಚೀನಿಯರನ್ನೂ, ಕನೌಜ್​ನ ಬಲಾಢ್ಯ ಯಶೋವರ್ಮನನ್ನೂ ಸೋಲಿಸಿದ. ಲಲಿತಾದಿತ್ಯ ತನ್ನ ಜೀವಮಾನದಲ್ಲಿ ಒಮ್ಮೆಯೂ ಸೋಲು ಅನುಭವಿಸಲಿಲ್ಲ. ಇಂತಹ ‘ರೆಕಾರ್ಡ್’ ಇರುವ ಮತ್ತೊಬ್ಬ ಐತಿಹಾಸಿಕ ವ್ಯಕ್ತಿ ಅಲೆಕ್ಸಾಂಡರ್ ಮಾತ್ರ. ತನ್ನೆಲ್ಲ ಗೆಲುವುಗಳಿಂದ ಲಲಿತಾದಿತ್ಯ ಕಟ್ಟಿದ ಸಾಮ್ರಾಜ್ಯ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರದಿಂದ ಪೂರ್ವದಲ್ಲಿ ಟಿಬೆಟ್-ಚೀನಾ ಗಡಿಯವರೆಗೆ, ಉತ್ತರದಲ್ಲಿ ಅಫ್ಘಾನಿಸ್ತಾನದಿಂದ ದಕ್ಷಿಣದಲ್ಲಿ ಒಡಿಶಾವರೆಗೆ ಹರಡಿತ್ತು. ಅಕ್ಬರನ ಸಾಮ್ರಾಜ್ಯ ಲಲಿತಾದಿತ್ಯನ ಸಾಮ್ರಾಜ್ಯದ ಅರ್ಧದಷ್ಟೂ ಇರಲಿಲ್ಲ. ಇಂತಹ ಬೃಹತ್ ಸಾಮ್ರಾಜ್ಯವನ್ನು ಲಲಿತಾದಿತ್ಯ ಕಟ್ಟಿದ್ದು ಮುಂದೊತ್ತಿ ಬರುತ್ತಿದ್ದ ಅರಬ್ಬರ ವಿರೋಧದ ನಡುವೆ ಎನ್ನುವುದನ್ನು ಗಮನಿಸಿ. ಆಷ್ಟೇ ಅಲ್ಲ, ಅದೇ ದಿನಗಳಲ್ಲಿ ಅರಬ್ಬರು ಮತ್ತು ಹಿಂದಿನ/ಮುಂದಿನ ಶತಮಾನಗಳಲ್ಲಿ ಕ್ರಿಶ್ಚಿಯನ್ನರು ತಾವು ಆಕ್ರಮಿಸಿಕೊಂಡ ನಾಡುಗಳಲ್ಲೆಲ್ಲ ತಂತಮ್ಮ ಧರ್ಮವನ್ನು ಹೇರಿದರೆ ಅಂತಹ ಪ್ರಯತ್ನವನ್ನೂ ಲಲಿತಾದಿತ್ಯ ತನ್ನ ಆಡಳಿತದಲ್ಲಿದ್ದ ನಾಡುಗಳಲ್ಲಿ ಮಾಡಲಿಲ್ಲ. ಲಲಿತಾದಿತ್ಯ ತನ್ನ 60ನೆಯ ವಯಸ್ಸಿನಲ್ಲಿ ಭಾರತೀಯ ಜೀವನಧರ್ಮದಂತೆ ಸಿಂಹಾಸನ ತ್ಯಜಿಸಿ ಸಂನ್ಯಾಸ ಸ್ವೀಕರಿಸಿ ಹಿಮಾಲಯಕ್ಕೆ ಹೊರಟುಹೋದ. ಇಂತಹ ಮಹಾನ್ ಅರಸನ ಬಗ್ಗೆ ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಒಂದಕ್ಷರವೂ ಇಲ್ಲ! ಒಟ್ಟಿನಲ್ಲಿ ಬ್ರಿಟಿಷ್ ಶಿಕ್ಷಣಪದ್ಧತಿ ಭಾರತೀಯರಿಗೆ ಕಲಿಸಿದ್ದು- ‘ನೀವು ಯಶಸ್ಸನ್ನೆಂದೂ ಕಾಣದವರು, ಸದಾ ಸೋತು ಇತರರಿಂದ ಆಳಿಸಿಕೊಂಡವರು’ ಎಂಬುದನ್ನು! ಅಂದರೆ ಅಲ್ಲಿಗೆ, ಮೆಕಾಲೆ ಬಯಸಿದ್ದಂತೆ ಭಾರತೀಯ ತನ್ನ ಆತ್ಮಾಭಿಮಾನವನ್ನು ಕಳೆದುಕೊಂಡ.

ಈ ಶೈಕ್ಷಣಿಕ ನೀತಿಯಿಂದ ಬ್ರಿಟಿಷರು ಸಾಧಿಸಬಯಸಿದ್ದು ಮೂಲಭೂತವಾಗಿ ಎರಡು ಉದ್ದೇಶಗಳು. ಒಂದು- ಬ್ರಿಟಿಷ್ ಆಡಳಿತಶಾಹಿಗೆ ಗುಲಾಮಿ ಮನೋಭಾವದ ನಿಷ್ಠ ನೌಕರರನ್ನು ಪೂರೈಸುವುದು. ಈ ದೇಶದಲ್ಲಿ ಬ್ರಿಟಿಷ್ ಅಡಳಿತವಿದ್ದ ಸರಿಸುಮಾರು 200 ವರ್ಷಗಳ ಯಾವ ಸಂದರ್ಭದಲ್ಲೂ ಇಲ್ಲಿದ್ದ ಬ್ರಿಟಿಷ್ ಅಧಿಕಾರಿಗಳು ಹಾಗೂ ಸೈನಿಕರ ಒಟ್ಟು ಸಂಖ್ಯೆ 30,000ವನ್ನು ದಾಟಿರಲಿಲ್ಲ. ಈ ವಿಶಾಲ ಜನನಿಬಿಡ ದೇಶವನ್ನು ಬ್ರಿಟಿಷರು ಆಳಿದ್ದು ಇಲ್ಲಿನ ಜನರ ಸಹಕಾರದಿಂದಲೇ. ಹೀಗಾಗಿ, ತಮಗೆ ನಿಷ್ಠೆಯನ್ನೂ, ತಮ್ಮ ಆಡಳಿತಕ್ಕೆ ಅನುಕೂಲಕರವಾದ ಮನೋಭಾವವನ್ನೂ ಇಲ್ಲಿನ ಜನರಲ್ಲಿ ಮೂಡಿಸುವುದು ಬ್ರಿಟಿಷ್ ವಸಾಹತುಶಾಹಿ ಸರ್ಕಾರಕ್ಕೆ ಅತ್ಯಗತ್ಯವಾಗಿತ್ತು. ಎರಡು- ಕ್ರಿಶ್ಚಿಯನ್ ಮಿಷನರಿಗಳ ಮತಾಂತರ ಕಾರ್ಯಗಳಿಗೆ ಸಹಕಾರಿಯಾಗುವಂತಹ ವಾತಾವರಣವನ್ನು ಸೃಷ್ಟಿಸುವುದು. ಇದಕ್ಕಾಗಿ, ತಮ್ಮದೇ ಇತಿಹಾಸದ ಬಗ್ಗೆ ಕೀಳರಿಮೆಯನ್ನೂ, ತಮ್ಮದೇ ಸಾಮಾಜಿಕ-ಧಾರ್ವಿುಕ ನಂಬಿಕೆಗಳು, ಮೌಲ್ಯಗಳು ಮತ್ತು ಸಂಪ್ರದಾಯಗಳ ಬಗ್ಗೆ ಅಸಹ್ಯದ ಭಾವನೆಯನ್ನೂ ಭಾರತೀಯರಲ್ಲಿ ಮೂಡಿಸುವುದು ಬ್ರಿಟಿಷರಿಗೆ ಅವಶ್ಯಕವಾಯಿತು.

ಸ್ವಾತಂತ್ರ್ಯ ಬಂದ ನಂತರ ಭಾರತೀಯರು ಇತಿಹಾಸ ರಚನೆಯನ್ನು ತಮ್ಮ ಕೈಗೆ ತೆಗೆದುಕೊಂಡು ಪುನಾರಚಿಸಿ ಗುಲಾಮಿ ಮನೋಭಾವವನ್ನು ತೊಡೆದುಹಾಕಬಹುದಾಗಿತ್ತು. ಆದರೆ 1947ರ ನಂತರ ಇಲ್ಲಿ ಘಟಿಸಿದ್ದು ಇನ್ನೊಂದು ದೊಡ್ಡ ದುರಂತ. ಅದರ ಪರಿಚಯ ಮುಂದಿನವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)