ರಾವಣನಿಗಿಂತಲೂ ಕುಟಿಲ ಇಂದಿನ ಲಂಕಾಧಿಪತಿಗಳು!

ರಾಜಪಕ್ಸರ ಸೋಲಿಗಾಗಿ ವಿಪಕ್ಷಗಳು 4 ವರ್ಷಗಳ ಹಿಂದೆಯೇ ರಹಸ್ಯ ಯೋಜನೆ ರಚಿಸಿದ್ದವು. ಅಧ್ಯಕ್ಷನೊಬ್ಬ 3ನೇ ಅವಧಿಗೆ ಸ್ಪರ್ಧಿಸಲು ಇದ್ದ ಸಾಂವಿಧಾನಿಕ ತೊಡಕನ್ನು ರಾಜಪಕ್ಸ ಸಂವಿಧಾನಕ್ಕೇ ತಿದ್ದುಪಡಿ ತರುವ ಮೂಲಕ ನಿವಾರಿಸಿಕೊಂಡಾಗಲೇ ಈ ರಹಸ್ಯ ಕಾರ್ಯಯೋಜನೆ ರೂಪುತಳೆಯಿತೆನ್ನಬೇಕು. ರಾಜಪಕ್ಸ ರಾಷ್ಟ್ರದ ಕಾರ್ಯಾಂಗ, ನ್ಯಾಯಾಂಗಗಳಿಗೆ ತಮ್ಮವರನ್ನೇ ತುಂಬಿದ್ದರು.

ಇತ್ತೀಚಿನ ವರ್ಷಗಳಲ್ಲಿ, ದಕ್ಷಿಣದ ದ್ವೀಪರಾಷ್ಟ್ರ ಶ್ರೀಲಂಕಾದ ಆಂತರಿಕ ರಾಜಕಾರಣದಲ್ಲಿ ನಡೆಯುತ್ತಿರುವುದೆಲ್ಲವೂ ನಾಟಕೀಯವೇ. ನಾಲ್ಕು ವರ್ಷಗಳ ಹಿಂದೆ ಮಹಿಂದ ರಾಜಪಕ್ಸ ರಾಷ್ಟ್ರದ ಅಧ್ಯಕ್ಷ ಸ್ಥಾನ ಕಳೆದುಕೊಂಡದ್ದೂ ನಾಟಕೀಯ ಬಗೆಯಲ್ಲೇ, ಇಂದು ಅವರು ದೇಶದ ಪ್ರಧಾನಮಂತ್ರಿಯಾಗಿರುವುದೂ ನಾಟಕೀಯವೇ. ಅದೇ ಸ್ಥಾನದಲ್ಲಿ ಅವರು ಉಳಿದರೂ, ಹೊರಬಿದ್ದರೂ ಅದಾಗುವುದು ನಾಟಕೀಯ ಬಗೆಯಲ್ಲೇ. ಒಟ್ಟಿನಲ್ಲಿ ಶ್ರೀಲಂಕಾದ ರಾಜಕೀಯವೆಂದರೆ ಚಕ್ರದೊಳಗೆ ಎರಡು ಚಕ್ರಗಳು, ಆ ಚಕ್ರಗಳೊಳಗೆ ನಾಲ್ಕು ಚಕ್ರಗಳು, ಅವುಗಳೊಳಗೆ ಎಂಟು ಚಕ್ರಗಳು… ಇಂದಿನ ಲಂಕಾಧಿಪತಿಗಳ ಮಿದುಳು ಕೆಲಸಮಾಡುವ ವೇಗದಲ್ಲಿ ಪುರಾಣಕಾಲದ ರಾವಣನ ಮಿದುಳೂ ಕೆಲಸ ಮಾಡಿರಲಾರದು.

ಅಕ್ಟೋಬರ್ 26ರಿಂದ ಕೊಲಂಬೋದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕದ ವಿಶ್ಲೇಷಣೆಗೆ ಪೂರಕ ಪೀಠಿಕೆಯಾಗಿ ನಾಲ್ಕು ವರ್ಷಗಳ ಹಿಂದಿನ ನಾಟಕವನ್ನೊಮ್ಮೆ ಗಮನಿಸೋಣ. 2005ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪೆರ್ಸಿ ಮಹಿಂದ ರಾಜಪಕ್ಸ 2010ರಲ್ಲಿ ಪುನರಾಯ್ಕೆಗೊಂಡರು. ಮೂರನೆಯ ಬಾರಿಗೂ ಜಯ ನಿಶ್ಚಿತ ಎಂಬ ಹುಮ್ಮಸ್ಸಿನಲ್ಲಿ ಅಧಿಕಾರಾವಧಿ ಇನ್ನೂ ಒಂದು ವರ್ಷ ಉಳಿದಿದ್ದಾಗಲೇ 2014ರ ನವೆಂಬರ್ 20ರಂದು ಚುನಾವಣೆ ಘೊಷಿಸಿದರು. ಆದರೆ, ತಮ್ಮ ಅವನತಿಗೆ ವ್ಯೂಹ ರಚನೆಯಾಗುತ್ತಿದೆಯೆಂದು ಆ ಚಾಣಾಕ್ಷ ರಾಜಕಾರಣಿಗೆ ಗೊತ್ತಾಗಲೇ ಇಲ್ಲ.

ರಾಜಪಕ್ಸರ ಸೋಲಿಗಾಗಿ ವಿರೋಧಪಕ್ಷಗಳು ನಾಲ್ಕು ವರ್ಷಗಳ ಹಿಂದೆಯೇ ರಹಸ್ಯ ಯೋಜನೆ ರಚಿಸಿದ್ದವು. ಅಧ್ಯಕ್ಷನೊಬ್ಬ ಮೂರನೆಯ ಅವಧಿಗಾಗಿ ಸ್ಪರ್ಧಿಸಲು ಇದ್ದ ಸಾಂವಿಧಾನಿಕ ತೊಡಕನ್ನು ರಾಜಪಕ್ಸ 2011ರಲ್ಲಿ ಸಂವಿಧಾನಕ್ಕೇ ತಿದ್ದುಪಡಿ ತರುವ ಮೂಲಕ ನಿವಾರಿಸಿಕೊಂಡಾಗಲೇ ಅವರ ವಿರುದ್ಧ ರಹಸ್ಯ ಕಾರ್ಯಯೋಜನೆ ಅವರ ಬೆನ್ನ ಹಿಂದೆಯೇ ರೂಪುತಳೆಯಿತು. ರಾಜಪಕ್ಸ ರಾಷ್ಟ್ರದ ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ತಮ್ಮವರನ್ನೇ ತುಂಬಿದ್ದರು. ಹೀಗಾಗಿ ಮೂರನೆಯ ಬಾರಿಗೂ ಅಧ್ಯಕ್ಷರಾದರೆ ರಾಷ್ಟ್ರವನ್ನವರು ಸರ್ವಾಧಿಕಾರದತ್ತ ಕೊಂಡೊಯ್ಯಬಹುದೆಂಬ ಆತಂಕ ಅವರ ರಾಜಕೀಯ ವಿರೋಧಿಗಳನ್ನು ಕಾಡಿದ್ದು ಸಹಜ. ಈ ಹಿನ್ನೆಲೆಯೊಂದಿಗೆ, ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗ, ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ಶರತ್ ಫೊನ್ಸೇಕ ಒಟ್ಟುಗೂಡಿ ವ್ಯೂಹವೊಂದನ್ನು ರಚಿಸಿದರು. ಒಂದು ಕಾಲದಲ್ಲಿ ಪರಸ್ಪರ ವಿರೋಧಿ ಪಾಳಯದಲ್ಲಿದ್ದ ಈ ಮೂವರೂ ಒಟ್ಟುಗೂಡಲು ವಿವಿಧ ಕಾರಣಗಳಿದ್ದವು. ಮಾಜಿ ರಾಷ್ಟ್ರಪತಿಗಳಾದ ಜಯವರ್ಧನೆ ಮತ್ತು ಪ್ರೇಮದಾಸ ರೂಢಿಸಿದ್ದ ಅರೆ-ಸರ್ವಾಧಿಕಾರಿ ವ್ಯವಸ್ಥೆಯನ್ನು ಮುರಿದು ತಾವು ರಾಷ್ಟ್ರದಲ್ಲಿ ಮರುಚೇತನಗೊಳಿಸಿದ ಪ್ರಜಾಪ್ರಭುತ್ವಕ್ಕೆ ರಾಜಪಕ್ಸರಿಂದ ಧಕ್ಕೆಯೊದಗುತ್ತಿದೆಯೆಂಬ ಕಾಳಜಿ ಚಂದ್ರಿಕಾರದ್ದಾದರೆ, ತಾವು ರಾಷ್ಟ್ರ ರಾಜಕಾರಣದಲ್ಲಿ ಮೂಲೆಗುಂಪಾಗುತ್ತಿರುವ ಆತಂಕ ವಿಕ್ರಮಸಿಂಘಯವರನ್ನು ಕಾಡಿತ್ತು. ಈ ನಡುವೆ ಫೊನ್ಸೇಕರದ್ದು ಮತ್ತೊಂದು ಬಗೆಯ ಚಿಂತೆ. 2009ರ ತಮಿಳು ಉಗ್ರಗಾಮಿ ಪ್ರಭಾಕರನ್ ಹತ್ಯೆ ಮತ್ತು ಎಲ್​ಟಿಟಿಇ ವಿರುದ್ಧದ ಸಮರದ ಗೆಲುವಿನ ರೂವಾರಿ ಈ ಫೊನ್ಸೇಕ. ಕಾಲು ಶತಮಾನದ ಅಂತರ್ಯುದ್ಧವನ್ನು ಕೊನೆಗೊಳಿಸಿ ಅಗಾಧ ಜನಪ್ರಿಯತೆ ಗಳಿಸಿದ ಫೊನ್ಸೇಕ ತಮಗೇ ಪ್ರತಿಸ್ಪರ್ಧಿಯಾಗಬಹುದೆಂದು ಬಗೆದ ಅಧ್ಯಕ್ಷ ರಾಜಪಕ್ಸ, ಆ ಸೇನಾಧಿಕಾರಿಗೆ ಯಾವ ಬಗೆಯ ಕಿರುಕುಳ ಕೊಟ್ಟರೆಂದರೆ ಫೊನ್ಸೇಕ ಜೀವ ಉಳಿಸಿಕೊಂಡದ್ದೇ ಒಂದು ಪವಾಡ. ಈಗ ಈ ರಹಸ್ಯವ್ಯೂಹದ ಅತಿರಹಸ್ಯ ವಿಷಯಕ್ಕೆ ಬರೋಣ. ರಾಜಪಕ್ಸರ ಎದುರಾಳಿಗಳು ಆ ಚಾಣಾಕ್ಷ ರಾಜಕಾರಣಿಯ ವಿರುದ್ಧ ಸೆಣಸಲು ಸಮರ್ಥರೆಂದು ಮೊದಲಿಗೆ ಎಣಿಸಿದ್ದು ಅವರ ಸರ್ಕಾರದಲ್ಲೇ ಮಂತ್ರಿಗಳಾಗಿದ್ದ ಮೈತ್ರಿಪಾಲ ಸಿರಿಸೇನ ಮತ್ತು ರಜಿತ ಸೇನಾರತ್ನೆಯವರನ್ನು. ಕೊನೇಹಂತದಲ್ಲಿ ರನಿಲ್ ವಿಕ್ರಮಸಿಂಘ ಹೆಸರೂ ಸೇರಿಕೊಂಡರೂ ಅಂತಿಮವಾಗಿ ಸಿರಿಸೇನರ ಹೆಸರೊಂದೇ ಗಟ್ಟಿಯಾಯಿತು. ಹೀಗೆ, ರಾಜಪಕ್ಸ ವಿರುದ್ಧದ ಚುನಾವಣಾ ಸಮರತಂತ್ರವನ್ನು ‘ಗಟ್ಟಿ’ಯಾಗಿಸಿದ್ದು ಭಾರತದ ‘ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್’ (ರಾ) ಗುಪ್ತಚರ ಸಂಸ್ಥೆ.

‘ರಾ’ನ ಕೊಲಂಬೋ ಶಾಖೆಯ ಮುಖ್ಯಸ್ಥ ಶ್ರೀಲಂಕಾದ 2014-15ರ ಚುನಾವಣಾ ನಾಟಕದ ನಿರ್ದೇಶಕ. ರಾಜಪಕ್ಸರ ಮಂತ್ರಿಮಂಡಲ ತೊರೆದು ಅವರ ವಿರುದ್ಧವೇ ಕಣಕ್ಕಿಳಿಯಲು ಸಿರಿಸೇನರನ್ನು ಪುಸಲಾಯಿಸಿ ತಯಾರುಮಾಡಿದ್ದು, ಅವರೇ ಒಮ್ಮತದ ಅಭ್ಯರ್ಥಿಯಾಗುವಂತೆ ಇತರ ನಾಯಕರ, ಮುಖ್ಯವಾಗಿ ರನಿಲ್ ವಿಕ್ರಮಸಿಂಘಯವರ ಮನವೊಲಿಸಿದ್ದು, ವಿರೋಧಪಕ್ಷಗಳ ನಾಯಕರುಗಳ ನಡುವೆ ಪರಸ್ಪರ ಸಂಪರ್ಕ, ಕಾರ್ಯಸಂಯೋಜನೆಗಳಿಗೆ ಅನುವುಮಾಡಿಕೊಟ್ಟದ್ದು ನಮ್ಮೀ ಗುಪ್ತಚರ ಅಧಿಕಾರಿಯೇ.

ಮುಂದಿನ ದೊಡ್ಡಕತೆಯನ್ನು ಚಿಕ್ಕದಾಗಿಸಿ ಹೇಳುವುದಾದರೆ, ಅಂತಿಮವಾಗಿ 2014ರ ನವೆಂಬರ್ 20ರಂದು ಅಧ್ಯಕ್ಷೀಯ ಚುನಾವಣೆಗಳು ಘೊಷಿತವಾದವು, ರಾಜಪಕ್ಸರ ಮಂತ್ರಿಮಂಡಳದಿಂದ ಸಿರಿಸೇನ ಹೊರಬಂದರು, ಚುನಾವಣೆಯಲ್ಲಿ ಉಮೇದುವಾರಿಕೆ ಘೊಷಿಸಿದರು, ರಾಜಪಕ್ಸರ ವಿರುದ್ಧದ ಮತಗಳು ಹಂಚಿಹೋಗುವುದನ್ನು ತಡೆಯಲು ಮೊದಲೇ ರಹಸ್ಯವಾಗಿ ಏರ್ಪಾಡಾಗಿದ್ದಂತೆ ಎಲ್ಲ ಸಿಂಹಳೀ ರಾಜಕೀಯ ಪಕ್ಷಗಳೂ ಸಿರಿಸೇನರ ಬೆನ್ನಿಗೆ ನಿಂತವು, ತಮಿಳ್ ನ್ಯಾಷನಲ್ ಅಲಯನ್ಸ್ ಮತ್ತು ಮುಸ್ಲಿಂ ಕಾಂಗ್ರೆಸ್ ಸಹ ಸಿರಿಸೇನರಿಗೆ ಬೆಂಬಲ ವ್ಯಕ್ತಪಡಿಸಿದವು, 2015ರ ಜನವರಿ 8ರಂದು ನಡೆದ ಚುನಾವಣೆಯಲ್ಲಿ ರಾಜಪಕ್ಸ ಸೋತರು, ಸಿರಿಸೇನ ಜಯಭೇರಿ ಬಾರಿಸಿ ಅಧ್ಯಕ್ಷರಾದರು, ವಿಕ್ರಮಸಿಂಘ ಪ್ರಧಾನಮಮಂತ್ರಿಯದರು, ಫೊನ್ಸೇಕ ರಕ್ಷಣಾ ಮಂತ್ರಿಯಾದರು.

ಮುಂದೆ ಅವರೆಲ್ಲರೂ ಬಹುಕಾಲ ಸುಖವಾಗಿ ಬಾಳಿದರು! ಇಲ್ಲ, ಹಾಗೇನಿಲ್ಲ. ರಾವಣನ ಅಂತ್ಯವಾಗಿ ವಿಭೀಷಣನ ಪಟ್ಟಾಭಿಷೇಕವಾಗುತ್ತಿದ್ದಂತೆಯೇ ಲಂಕೆ ಶಾಂತಿ-ಸಮೃದ್ಧಿಯಿಂದ ಬೀಗತೊಡಗಿದ್ದು ಪುರಾಣಕಾಲದ ಕತೆ. ಈಗಿನದು ಬೇರೆಯೇ ವ್ಯಥೆ.

ರಾಜಪಕ್ಸ ಅಧಿಕಾರದಿಂದ ಇಳಿಯುವುದನ್ನು ಭಾರತ ಬಯಸಿದ್ದಂತೆಯೇ, ಶ್ರೀಲಂಕಾದ ಬೆಳವಣಿಗೆಗಳಿಂದ ಕಂಗೆಟ್ಟದ್ದು ಮತ್ತು ಪ್ರತಿವ್ಯೂಹಕ್ಕೆ ತಯಾರಾದದ್ದು ಚೀನಾ. ಇಂದು ಆ ದ್ವೀಪರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕದ ಒಳಸುಳಿಯಿದು. ಇದನ್ನು ಬ್ರಸೆಲ್ಸ್​ನಲ್ಲಿರುವ ಸೌತ್ ಏಷ್ಯಾ ಡೆಮಕ್ರಾಟಿಕ್ ಫೋರಂ (ಎಸ್​ಎಡಿಎಫ್) ಅಧ್ಯಯನ ಸಂಸ್ಥೆಯ ಸೀಗ್​ಫ್ರೀಡ್ ಓ ವೂಲ್ಪ್ ವಿವರಿಸುವುದು ಹೀಗೆ- ‘ಶ್ರೀಲಂಕಾ ಸಮಸ್ಯೆ ಸಿರಿಸೇನ ಮತ್ತು ರಾಜಪಕ್ಸರಿಗೆ ಹೆಚ್ಚೇನೂ ಸಂಬಂಧಿಸಿಲ್ಲ. ನಾವದನ್ನು ನೋಡಬೇಕಾದ್ದು ಆ ವಲಯದಲ್ಲಿ ಭಾರತ ಮತ್ತು ಚೀನಾಗಳ ನಡುವಿನ ಹಗ್ಗಜಗ್ಗಾಟದ ಹಿನ್ನೆಲೆಯಲ್ಲಿ’. ವೂಲ್ಪ್​ರ ಈ ವ್ಯಾಖ್ಯಾನವನ್ನು ಪೂರ್ಣವಾಗಿ ಅರ್ಥೈಸಿಕೊಳ್ಳಬೇಕಾದರೆ ನಾವು ನಮ್ಮೀ ವಿಶ್ಲೇಷಣೆಯ ದೇಶಕಾಲವನ್ನು ವಿಸ್ತರಿಸಬೇಕು. 9/11 ದಾಳಿ ನಂತರ ಅಮೆರಿಕ ತನ್ನ ಗಮನವನ್ನು ಅಫ್ಘಾನಿಸ್ತಾನದಲ್ಲಿ ಪೂರ್ವ ಮೆಡಿಟರೇನಿಯನ್​ವರೆಗಷ್ಟೇ ಸೀಮಿತಗೊಳಿಸಿದ ಪರಿಣಾಮವಾಗಿ ಒದಗಿದ ಅವಕಾಶವನ್ನು ಉಪಯೋಗಿಸಿಕೊಂಡ ಚೀನಾ, ಉತ್ತರ ಹಿಂದೂ ಮಹಾಸಾಗರ-ಪಶ್ಚಿಮ ಪೆಸಿಫಿಕ್ ಸಾಗರ ವಲಯದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲುದ್ಯುಕ್ತವಾಯಿತು. ಅದರಲ್ಲೂ, ಅಮೆರಿಕದ ಒಬಾಮಾ ಸರ್ಕಾರ ಮತ್ತು ಭಾರತದ ಮನಮೋಹನ್ ಸಿಂಗ್ ಸರ್ಕಾರ ಅಂತಾರಾಷ್ಟ್ರೀಯ ಆಗುಹೋಗುಗಳ ಬಗ್ಗೆ ನಿರ್ಲಿಪ್ತ ನೀತಿ ಅನುಸರಿಸಿದ್ದರಿಂದಾಗಿ ಪಶ್ಚಿಮದಲ್ಲಿ ಪಾಕಿಸ್ತಾನದಿಂದ ಹಿಡಿದು ಪೂರ್ವದಲ್ಲಿ ಪಾಪುವಾ ನ್ಯೂಗಿನಿಯವರೆಗಿನ ದ್ವೀಪರಾಷ್ಟ್ರಗಳಲ್ಲಿ ಚೀನಾ ತನ್ನ ಆರ್ಥಿಕ ಪ್ರಭಾವವನ್ನು ಬೆಳೆಸಿ ಅದನ್ನು ಸೇನಾಪ್ರಭಾವವಾಗಿ ವಿಸ್ತರಿಸಲು ಮುಂದಾಯಿತು. ಈ ವಿಸ್ತರಣೆ ಉಗ್ರರೂಪ ತಾಳಿದ್ದು ಮಹತ್ವಾಕಾಂಕ್ಷಿ, ಅಷ್ಟೇ ಕುತಂತ್ರಿ ಷಿ ಜಿನ್​ಪಿಂಗ್ 2013ರ ಮಾರ್ಚ್​ನಲ್ಲಿ ಚೀನಾದ ಅಧ್ಯಕ್ಷರಾದಾಗ. ಅವರು ಆರಂಭಿಸಿದ ನವವಸಾಹತುಶಾಹಿ ‘ಬೆಲ್ಟ್ ಆಂಡ್ ರೋಡ್’ ಯೋಜನೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾಗಳ ಹೊರತಾಗಿ ಈ ವಲಯದ ಬಹುತೇಕ ಎಲ್ಲ ದೇಶಗಳೂ ಚೀನಾದ ಜತೆ ಆರ್ಥಿಕವಾಗಿ ಬಂಧಿಸಲ್ಪಡುವುದರ ಜತೆಗೆ ಬೀಜಿಂಗ್​ಗೆ ಸೇನಾಸವಲತ್ತುಗಳನ್ನೂ ನೀಡುವಂತಾಯಿತು. ಉತ್ತರ ಹಿಂದೂ ಮಹಾಸಾಗರ ವಲಯದಲ್ಲಿ ಪಾಕಿಸ್ತಾನದ ನಂತರ ಈ ಯೋಜನೆಯ ಮುಖ್ಯಕೊಂಡಿ ಶ್ರೀಲಂಕಾ ಮತ್ತು ಚೀನಾದ ಪ್ರಮುಖ ದಾಳ ಮಹಿಂದ ರಾಜಪಕ್ಸ.

ರಾಜಪಕ್ಸರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನವನ್ನು ಚೀನೀಯರು ಆತ ಅಧಿಕಾರಕ್ಕೆ ಬರುತ್ತಿದ್ದಂತೇ ಆರಂಭಿಸಿದ್ದರು. ಒಂಭತ್ತು ವರ್ಷಗಳ ಅಧ್ಯಕ್ಷಾವಧಿಯಲ್ಲಿ ರಾಜಪಕ್ಸ ಚೀನಾಗೆ ಏಳು ಬಾರಿ ಭೇಟಿಯಿತ್ತರು ಎನ್ನುವುದನ್ನು ನೋಡಿದರೆ ಚೀನಿ ನಾಯಕರ ಜತೆ ಅವರ ‘ಹೊಕ್ಕುಬಳಕೆ’ಯ ಆಳ ಮತ್ತು ಉದ್ದಗಲದ ಬಗ್ಗೆ ನಿಮಗೊಂದು ಕಲ್ಪನೆ ಬರಬಹುದು. ದಕ್ಷಿಣ ಶ್ರೀಲಂಕಾದ ಹಂಬನತೋಟ ಬಂದರನ್ನು ಒಂದು ಶತಕೋಟಿ ಡಾಲರ್ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುತ್ತಿಗೆಯನ್ನು ರಾಜಪಕ್ಸ 2007ರಲ್ಲಿ ಚೀನಾಗೆ ನೀಡುವುದರೊಂದಿಗೆ ಆರಂಭವಾದ ರಾಜಪಕ್ಸ-ಜಿನ್​ಪಿಂಗ್ ‘ಹೊಕ್ಕುಬಳಕೆ’ ಮುಂದುವರಿದದ್ದು ಕೊಲಂಬೋ ಬಂದರನ್ನು ಅಭಿವೃದ್ಧಿಪಡಿಸುವ ಏಕಸ್ವಾಮ್ಯವನ್ನು ಚೀನಾ ಪಡೆದುಕೊಳ್ಳುವವರೆಗೆ. ಇದರರ್ಥ, ಹೊರಜಗತ್ತಿನ ಜತೆ ಶ್ರೀಲಂಕಾದ ಸಂಪರ್ಕದ ಏಕೈಕ ಕೊಂಡಿ ಚೀನಾದ ಕೈಗೆ ಬಿತ್ತು ಮತ್ತು ಜಿನ್​ಪಿಂಗ್​ರ ನವವಸಾಹತುಶಾಹಿ ಯೋಜನೆಯ ಪ್ರಮುಖಕೊಂಡಿ ಶ್ರೀಲಂಕಾ ಆಯಿತು.

ರಾಜಪಕ್ಸರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ನರೇಂದ್ರ ಮೋದಿ ಸರ್ಕಾರ ಯೋಚಿಸಿದ್ದರ ಹಿನ್ನೆಲೆ ಇದು. ಹೀಗಾಗಿಯೇ, ಹಿಂದಿನ ಮನಮೋಹನ್ ಸಿಂಗ್ ಸರ್ಕಾರ ಭಾರತಕ್ಕೆ ತೊಡಿಸಿದ್ದ ಜಡತ್ವದ ಸಂಕೋಲೆಯನ್ನು ಕಿತ್ತೊಗೆದ ಮೋದಿ, ತಾವು ಪ್ರಧಾನಿಯಾದ ಎಂಟು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮಹಿಂದ ರಾಜಪಕ್ಸರನ್ನು ಕೆಳಗಿಳಿಸಿ, ಸಿರಿಸೇನರನ್ನು ಕೊಲಂಬೋ ಗಾದಿಯಲ್ಲಿ ಕೂರಿಸಿದರು.

ನಂತರದ 45 ತಿಂಗಳುಗಳಲ್ಲಿ ಪಾಕ್ ಜಲಸಂಧಿಯಲ್ಲಿ ಅದೆಷ್ಟು ಅಲೆಗಳೆದ್ದವೋ, ಸಿರಿಸೇನರ ಭಾರತ-ಪ್ರೀತಿ ಅವುಗಳಲ್ಲಿ ಕೊಚ್ಚಿಹೋಯಿತು. ಸಿರಿಸೇನರನ್ನು ನೇರವಾಗಿ, ರಾಜಪಕ್ಸರ ಮೂಲಕ ಪರೋಕ್ಷವಾಗಿ ಸಂರ್ಪಸುವ ನೀತಿ ಅನುಸರಿಸಿದ ಜಿನ್​ಪಿಂಗ್ ಶ್ರೀಲಂಕಾದ ಹೊಸ ಅಧ್ಯಕ್ಷರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗತೊಡಗುವ ಪ್ರಕ್ರಿಯೆಗೆ ಸಮಸಮನಾಗಿಯೇ ಪ್ರಧಾನಿ ವಿಕ್ರಮಸಿಂಘ ತಮ್ಮ ದೇಶವನ್ನು ಚೀನಾದಿಂದ ದೂರ ಒಯ್ಯುವ ಪ್ರಕ್ರಿಯೆಯೂ ಘಟಿಸಿತು. ಹಂಬನತೋಟದಲ್ಲಿ ಚೀನಿಯರ ಬಂದರು ನಿರ್ಮಾಣ ಯೋಜನೆಯನ್ನು ತಡೆಹಿಡಿದ ವಿಕ್ರಮಸಿಂಘ, ದೇಶದಲ್ಲಿ ಚೀನಿಯರ ಆರ್ಥಿಕ ಚಟುವಟಿಕೆಗಳನ್ನು ಪ್ರತಿಬಂಧಿಸಲು ಕ್ರಮಗಳನ್ನು ರೂಪಿಸತೊಡಗಿದರು. ಜತೆಗೆ ಭಾರತವಲ್ಲದೆ ಅಮೆರಿಕ ಮತ್ತು ಪಶ್ಚಿಮ ಯುರೋಪಿನ ದೇಶಗಳ ಜತೆಗೂ ಸಂಬಂಧಗಳನ್ನು ವೃದ್ಧಿಸತೊಡಗಿದರು. ಹಿಂದೂ ಮಹಾಸಾಗರದಲ್ಲಿ ಪೂರ್ವ-ಪಶ್ಚಿಮಗಳ ಸಂಪರ್ಕಹಾದಿಯ ಆಯಕಟ್ಟಿನ ಸ್ಥಳದಲ್ಲಿರುವ ಶ್ರೀಲಂಕಾ ತಮ್ಮ ಹಿಡಿತದಿಂದ ಜಾರಿಹೋಗುತ್ತಿದೆಯೆಂದು ಜಿನ್​ಪಿಂಗ್​ರಿಗೆ ಅರಿವಾಗತೊಡಗಿತು. ಇಷ್ಟಾಗಿಯೂ, ಅವರು ಚಾಟಿಬೀಸಲು ಅಕ್ಟೋಬರ್ ಅಂತ್ಯವನ್ನೇ ಏಕೆ ಆಯ್ದುಕೊಂಡರು ಎನ್ನುವುದಕ್ಕೆ ಸ್ವಾರಸ್ಯಕರ ಕಾರಣವಿದೆ.

ಜಿನ್​ಪಿಂಗ್ ಮಾಲ್ದೀವ್ಸ್​ನ ಅಧ್ಯಕ್ಷ ಅಬ್ದುಲ್ಲಾ ಯಮೀನ್​ರನ್ನೂ ಬಲೆಗೆ ಕೆಡವಿಕೊಂಡಿದ್ದರಷ್ಟೇ. ಆದರೆ ಸೆಪ್ಟೆಂಬರ್ 23ರ ಚುನಾವಣೆಯಲ್ಲಿ ಯಮೀನ್ ಸೋತು ಚೀನಾದ ಕಟ್ಟಾವಿರೋಧಿ ಮಹಮದ್ ನಶೀದ್​ರ ಸಹಯೋಗಿ ಇಬ್ರಾಹಿಮ್ ಮಹಮದ್ ಸೋಲಿಹ್ ಜಯಶಾಲಿಯಾದದ್ದು ಜಿನ್​ಪಿಂಗ್​ಗೆ ಕಹಿಗುಳಿಗೆ. ಅಧಿಕಾರದಲ್ಲೇ ಉಳಿಯುವ ಯಮೀನ್​ರ ಪ್ರಯತ್ನಕ್ಕೆ ಸರ್ವೇಚ್ಚ ನ್ಯಾಯಾಲಯ ಕೂಡ ತಣ್ಣೀರೆರಚಿದಾಗ ಕಳೆದುಹೋಗಲಿರುವ ಮಾಲ್ದೀವ್ಸ್​ಗೆ ಬದಲಾಗಿ ಶ್ರೀಲಂಕಾವನ್ನು ಕೈವಶ ಮಾಡಿಕೊಳ್ಳುವ ತರಾತುರಿಗೆ ಜಿನ್​ಪಿಂಗ್ ಒಳಗಾದರು. ಅವರ ತೆರೆಮರೆಯ ಆಟದ ಹೊರರೂಪ ಕೊಲಂಬೋದಲ್ಲಿ ಅನಾವರಣಗೊಳ್ಳತೊಡಗಿತು. ಅತ್ತ ರಾಜಪಕ್ಸ ಮತ್ತು ಜಿನ್​ಪಿಂಗ್​ರ ಕೈವಶರಾಗಿಹೋಗಿದ್ದ ಸಿರಿಸೇನ ‘ಭಾರತದ ‘ರಾ’ ನನ್ನ ಹತ್ಯೆಗೆ ಪ್ರಯತ್ನಿಸುತ್ತಿದೆ’ ಎಂದು ಬಹಿರಂಗವಾಗಿ ಆರೋಪಿಸಿದರೆ ಇತ್ತ ಪ್ರಧಾನಿ ವಿಕ್ರಮಸಿಂಘ ಅಕ್ಟೋಬರ್ 18-20ರ ಅವಧಿಯಲ್ಲಿ ನವದೆಹಲಿಗೆ ಮೂರು ದಿನಗಳ ಭೇಟಿನೀಡಿ ಮೋದಿಯವರ ಜತೆ ‘ಮಾತುಕತೆ’ ನಡೆಸಿದರು. ಜಿನ್​ಪಿಂಗ್-ರಾಜಪಕ್ಸ-ಸಿರಿಸೇನ ತ್ರಯರು ತಕ್ಷಣ ಕಾರ್ಯಶೀಲಗೊಂಡರು. ಅಕ್ಟೋಬರ್ 26ರಂದು ವಿಕ್ರಮಸಿಂಘಯವರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿದ ಅಧ್ಯಕ್ಷ ಸಿರಿಸೇನ ರಾಜಪಕ್ಸರನ್ನು ನೇಮಿಸಿದರು.

ಆದರೆ ವಿಕ್ರಮಸಿಂಘ ಸೋಲೊಪ್ಪಿಕೊಳ್ಳಲು ತಯಾರಿಲ್ಲ. ಸಂಸತ್ತಿನಲ್ಲಿ ಬಹುಮತವಿರುವುದು ತಮಗೇ ಎಂದು ಸ್ಪಷ್ಟವಾಗಿ ಅರಿತಿರುವ ಅವರು ಸಮರಕ್ಕೆ ಸಿದ್ಧರಾದರು. ಪರಿಸ್ಥಿತಿ ಪ್ರತಿಕೂಲವಾಗಿದೆಯೆಂದರಿತ ಸಿರಿಸೇನ (ಅಂದರೆ ರಾಜಪಕ್ಸ, ಅಂದರೆ ಜಿನ್​ಪಿಂಗ್!) ಸಂಸತ್ತನ್ನೇ ವಿಸರ್ಜಿಸಿ ಹೊಸ ಚುನಾವಣೆ ನಡೆಸಲು ಮುಂದಾದರು. ಆದರೆ ಅದನ್ನೀಗ ಸರ್ವೇಚ್ಚ ನ್ಯಾಯಾಲಯ ತಡೆಹಿಡಿದಿದೆ. ಸ್ಪೀಕರ್ ಕಾರು ಜಯಸೂರಿಯ ಪದಚ್ಯುತ ಪ್ರಧಾನಿಯ ಪರ ಪಟ್ಟಾಗಿ ನಿಂತಿದ್ದಾರೆ. ಸಂಸತ್ತಿನಲ್ಲಿ ನಡೆದ ಎರಡೂ ವಿಶ್ವಾಸಮತ ಯಾಚನೆಯಲ್ಲಿ ರಾಜಪಕ್ಷ ಸೋತ ನಂತರ ಮೂರನೆಯದಕ್ಕೆ ಸಿರಿಸೇನ ಅವಕಾಶ ನೀಡಲಿಲ್ಲ. ಪರಿಣಾಮವಾಗಿ ಸಂಸತ್ತಿನಲ್ಲಿ ತೀವ್ರ ಅಶಾಂತಿ ಉಂಟಾಗಿ ಸಂಸದರು ಕುರ್ಚಿಗಳನ್ನು ಹಿಡಿದು ಬಡಿದಾಡಿದ್ದಾರೆ, ಮೆಣಸಿನಪುಡಿ ಎರಚಾಡಿದ್ದಾರೆ. ಈ ವಿಷಮ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆದುಕೊಳ್ಳಬಹುದು, ಇದರಿಂದ ನಾವು ಭಾರತೀಯರು ಯಾವ ಪಾಠ ಕಲಿಯಬಹುದು ಎಂಬ ಅವಲೋಕನ ಮುಂದಿನ ವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)