ಭಾರತದ ನಿಜವಾದ ರಾಷ್ಟ್ರಪಿತ ಸರ್ದಾರ್ ಪಟೇಲ್

ದೇಶ ಕಟ್ಟುವವರಿಗಿಂತ ಒಡೆಯುವವರೇ ಹೆಚ್ಚಾಗಿರುವ ಈ ದಿನದಲ್ಲಿ ಸರ್ದಾರ್ ಪಟೇಲರು ನಮಗೆ ಅತಿಯಾಗಿ ಮುಖ್ಯವಾಗುತ್ತಾರೆ. ತಮಗೆ ನ್ಯಾಯವಾಗಿ ದಕ್ಕಿದ್ದ ಪ್ರಧಾನಮಂತ್ರಿಯ ಸ್ಥಾನವನ್ನು ಬಿಟ್ಟುಕೊಟ್ಟು, ಚೂರುಚೂರಾಗಿದ್ದ ಈ ದೇಶವನ್ನು ಒಂದುಗೂಡಿಸಿ ಮರುನಿರ್ವಿುಸಿದ ಧೀಮಂತ ಅವರು. ಅವರ ನೆನಕೆಯೇ ನಮಗೆ ಹರಕೆ…

‘ನನ್ನನ್ನು ನಾನು ಹಿಂದೂಸ್ಥಾನದ ಸೇವೆಯಲ್ಲಿರುವ ಒಬ್ಬ ಸೈನಿಕ ಎಂದು ತಿಳಿಯುತ್ತೇನೆ ಮತ್ತು ನನ್ನ ಬದುಕಿನ ಅಂತ್ಯದವರೆಗೂ ಸೈನಿಕನಾಗಿಯೇ ಉಳಿಯುತ್ತೇನೆ. ಈ ಸೇವಾಪಥದಿಂದ ವಿಮುಖನಾದ ಘಳಿಗೆ ನನ್ನ ಅಂತ್ಯವಾಗಲಿ’- ಅಪ್ರತಿಮ ದೇಶಪ್ರೇಮಿ, ದೇಶಸೇವಕ, ಆಧುನಿಕ ಭಾರತದ ನಿರ್ವತೃ ಸರ್ದಾರ್ ವಲ್ಲಭಭಾಯ್ ಝುವೇರ್​ಭಾಯಿ ಪಟೇಲ್ ತಮ್ಮ ನಿಧನಕ್ಕೆ ಒಂದು ವರ್ಷದ ಮೊದಲು ಹೇಳಿದ ಮಾತುಗಳಿವು.

1947ರಲ್ಲಿ ದೇಶವಿಭಜನೆಯ ದುರಂತದಿಂದಾಗಿ ತನ್ನ ಭೂಭಾಗದ ಕಾಲುಭಾಗದಷ್ಟನ್ನು ಕಳೆದುಕೊಂಡ ಭಾರತ, ಕೆಲ ಸಂಕುಚಿತ, ರಾಷ್ಟ್ರಘಾತಕ ಮನೋಭಾವದ ದೇಶೀಯ ನವಾಬ-ಅರಸರಿಂದಾಗಿ ಮತ್ತಷ್ಟು ನೆಲವನ್ನು ಕಳೆದುಕೊಂಡು ಭೂಪಟದಲ್ಲಿ ಇಲಿ-ಹೆಗ್ಗಣಗಳು ಕಚ್ಚಿ ತೂತುಮಾಡಿದ ಬಟ್ಟೆಯಂತೆ ಕಾಣುವುದನ್ನು ತಡೆದ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ, ಕಛ್​ನಿಂದ ಕೊಹಿಮಾದವರೆಗಿನ ಈ ವಿಶಾಲನೆಲದಲ್ಲಿ ಏಕೀಕೃತ ಭಾರತವನ್ನು ನಿರ್ವಿುಸಿದ ಮಹಾನ್ ನೇತಾರ ಸರ್ದಾರ್ ವಲ್ಲಭಭಾಯ್ ಪಟೇಲ್. ರಾಷ್ಟ್ರನಿರ್ವಣದ ಈ ಮಹಾನ್ ಕಾರ್ಯದಲ್ಲಿ ಅವರು ಅನುಸರಿಸಿದ ವಿವೇಕಯುತ ನೀತಿಗಳು, ತೆಗೆದುಕೊಂಡ ಸಂದರ್ಭೇಚಿತ ಕ್ರಮಗಳು ಅವರನ್ನು ‘ಉಕ್ಕಿನ ಮನುಷ್ಯ’, ‘ಭಾರತದ ಬಿಸ್ಮಾರ್ಕ್’ ಎಂಬ ಗೌರವಗಳಿಗೆ ಪಾತ್ರರಾಗಿಸಿವೆ. ಬ್ರಿಟಿಷ್ ಇತಿಹಾಸಕಾರ ಪ್ಯಾಟ್ರಿಕ್ ಫ್ರೆಂಚ್ ಅಂತೂ ಸರ್ದಾರರನ್ನು ‘ಭಾರತದ ನಿಜವಾದ ರಾಷ್ಟ್ರಪಿತ’ ಎಂದು ಬಣ್ಣಿಸುತ್ತಾರೆ.

ಆಧುನಿಕ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಇಂತಹ ಮಹಾನ್ ನಾಯಕನ ಹೆಸರು ಮಿಥ್ಯಾ ಇತಿಹಾಸದ ಕಸದರಾಶಿಯ ಅಡಿಗೆ ಸಿಲುಕಿ ದಶಕಗಳ ಕಾಲ ಮರೆಗೆ ಸರಿಸಲ್ಪಟ್ಟಿತ್ತು. 562 ಸಣ್ಣ-ದೊಡ್ಡ ಚೂರುಗಳಾಗಿದ್ದ ಈ ದೇಶವನ್ನು ಒಂದುಗೂಡಿಸಿ ಇಂದು ನಾವು ಕಾಣುತ್ತಿರುವ ಭಾರತವನ್ನು ಸೃಷ್ಟಿಸಿ, ಆ ಪುಣ್ಯಕಾರ್ಯ ಯಶಸ್ವಿಯಾಗಿ ಪೂರೈಸುತ್ತಿದ್ದಂತೇ ಕಾಲನ ಕರೆಗೆ ಓಗೊಟ್ಟು ಹೊರಟುಹೋದ ಆ ನಾಯಕನ ಹೆಸರನ್ನು 41 ದೀರ್ಘ ವರ್ಷಗಳ ನಂತರ ಮರೆಯಿಂದ ಮೇಲೆತ್ತಿ ಇಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ಮಾಡಿದ್ದು ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್, 1991ರಲ್ಲಿ ಸರ್ದಾರರನ್ನು ಮರಣೋತ್ತರವಾಗಿ ‘ಭಾರತ ರತ್ನ’ ಪುರಸ್ಕಾರದಿಂದ ಸನ್ಮಾನಿಸುವುದರೊಂದಿಗೆ. ಅದರ ಮುಂದುವರಿಕೆಯಾಗಿ, ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ, ‘ಏಕತಾ ಪ್ರತಿಮೆ’ ಎಂದು ಅನ್ವರ್ಥವಾಗಿ ನಾಮಕರಣಗೊಂಡಿರುವ ಸರ್ದಾರರ 182 ಮೀಟರ್ ಎತ್ತರದ ಪ್ರತಿಮೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ, ಸರ್ದಾರರ ರಾಷ್ಟ್ರಸೇವೆಯ ಪರಿ, ರಾಜಕೀಯ ಸೋಗುಗಾರರಿಂದ ಅವರು ಮರೆಗೆ ತಳ್ಳಲ್ಪಟ್ಟ ದುರಂತ ಮತ್ತು ಇಂದು ಸರ್ದಾರರು ನಮಗೇಕೆ ಪ್ರಸ್ತುತವಾಗುತ್ತಾರೆ ಎಂಬ ವಾಸ್ತವ ಪರಿಶೀಲನೆ ಈ ಲೇಖನದ ವಸ್ತುವಿಷಯ.

ವಲ್ಲಭಭಾಯ್ ಝುವೇರ್​ಭಾಯ್ ಪಟೇಲ್ ಹುಟ್ಟಿದ್ದು ಗುಜರಾತ್​ನ ಖೇಡಾ ಜಿಲ್ಲೆಯ ನಡಿಯಾಡ್​ನಲ್ಲಿ. ನಿಖರ ಜನ್ಮದಿನಾಂಕ ಯಾರಿಗೂ ಗೊತ್ತಿಲ್ಲ. ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಸಂಬಂಧಿಸಿದ ಕಾಗದಪತ್ರಗಳಲ್ಲಿ ಜನ್ಮದಿನಾಂಕವನ್ನು ನಮೂದಿಸಲೇಬೇಕಾಗಿದ್ದುದರಿಂದ ಮನಸ್ಸಿಗೆ ಬಂದ ದಿನಾಂಕವೊಂದನ್ನು ಪಟೇಲರು ನೀಡಿದರಂತೆ. ಅದೇ 1875ರ ಅಕ್ಟೋಬರ್ 31. ಅದರಂತೆ ಇಂದು ಸರ್ದಾರರ 143ನೆಯ ಜಯಂತಿಯನ್ನು ದೇಶವು ಶ್ರದ್ಧೆ-ಗೌರವಗಳಿಂದ ಆಚರಿಸುತ್ತಿದೆ.

ಸರ್ದಾರರ ಪ್ರಾಥಮಿಕ ಶಿಕ್ಷಣ ನಡೆದದ್ದು ನಡಿಯಾಡ್, ಪೆಟ್ಲಾಡ್ ಮತ್ತು ಬೊರ್ಸಾಡ್​ಗಳಲ್ಲಿ. ಸ್ವಾವಲಂಬನೆಯ ಬದುಕಿನ ಮೂಲಕ ಶಿಕ್ಷಣ ಪೂರೈಸಿ ಗೋಧ್ರಾ ಪಟ್ಟಣದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ ಸರ್ದಾರರು ಮುಂದೆ 36ನೇ ವಯಸ್ಸಿನಲ್ಲಿ ಇಂಗ್ಲೆಂಡಿಗೆ ಹೋಗಿ ಕಾನೂನು ಶಿಕ್ಷಣ ಪಡೆದು ಹಿಂದಿರುಗಿ ಅಹಮದಾಬಾದ್​ನಲ್ಲಿ ಬ್ಯಾರಿಸ್ಟರ್ ವೃತ್ತಿ ಆರಂಭಿಸಿದರು. ಈ ನಡುವೆ ಅವರಿಗೆ ವಿವಾಹವಾಗಿ, ಇಬ್ಬರು ಮಕ್ಕಳೂ ಜನಿಸಿ, ಪತ್ನಿ ಝುವೇರ್​ಬಾ ಗತಿಸಿಯೂ ಆಗಿತ್ತು.

ತಾವು ಕೈಗೆತ್ತಿಕೊಂಡ ಕಾರ್ಯವನ್ನು ಪರಿಶ್ರಮ, ನಿಷ್ಠೆಯಿಂದ ಪೂರೈಸುವ ಮನೋಭಾವ ಸರ್ದಾರರದು. ಪ್ರಾಥಮಿಕ ಶಿಕ್ಷಣ ಪಡೆಯುವಾಗ ಯಾರಿಗೂ ಹೊರೆಯಾಗದಂತೆ ತಮ್ಮ ಅಗತ್ಯಗಳನ್ನು ತಾವೇ ನಿಭಾಯಿಸಿಕೊಂಡರು. ನಂತರ ಕಾನೂನು ಕಲಿಯುವಾಗ ಹಿರಿಯ ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ಎರವಲು ಪಡೆದು ಅಭ್ಯಾಸ ಸಾಗಿಸಿದರು. ಇಂಗ್ಲೆಂಡಿನ ಮಿಡ್ಲ್ ಟೆಂಪಲ್ ಇನ್​ನಲ್ಲಂತೂ 36 ತಿಂಗಳುಗಳ ಕಾನೂನು ಶಿಕ್ಷಣವನ್ನು ಮೂವತ್ತೇ ತಿಂಗಳುಗಳಲ್ಲಿ, ಅದೂ ತರಗತಿಗೆ ಪ್ರಥಮರಾಗಿ ಪೂರೈಸಿದರು. ಇಲ್ಲಿ ಮತ್ತೊಂದು ಪ್ರಕರಣವೂ ಉಲ್ಲೇಖನೀಯ. ಪಟೇಲರ ಪತ್ನಿ ಝುವೇರ್​ಬಾ ಕ್ಯಾನ್ಸರ್​ನಿಂದಾಗಿ ಮುಂಬೈನ ಆಸ್ಪತ್ರೆಯೊಂದರಲ್ಲಿ ನಿಧನರಾದ ಸುದ್ದಿ ಹೊತ್ತ ಟೆಲಿಗ್ರಾಂ ಪಟೇಲರ ಕೈಸೇರಿದ್ದು ಅವರು ನ್ಯಾಯಾಲಯದಲ್ಲಿ ಸಾಕ್ಷಿಯೊಬ್ಬರನ್ನು ಪಾಟೀಸವಾಲಿಗೆ ಒಳಪಡಿಸಿದ್ದಾಗ. ಟೆಲಿಗ್ರಾಂ ನೋಡಿದ ಪಟೇಲರು ಅದನ್ನು ಜೇಬಿಗೆ ಸೇರಿಸಿ ಪಾಟೀಸವಾಲು ಮುಂದುವರಿಸಿದರು. ಪತ್ನಿಯ ಮರಣದ ಸುದ್ದಿಯನ್ನು ಅವರು ಇತರರೊಂದಿಗೆ ಹಂಚಿಕೊಂಡದ್ದು ನ್ಯಾಯಾಲಯದಲ್ಲಿ ತಮ್ಮ ಅಂದಿನ ಕರ್ತವ್ಯ ಮುಕ್ತಾಯವಾದ ನಂತರ. ಆಗ ಪಟೇಲರ ವಯಸ್ಸು 34 ವರ್ಷಗಳು! ನಂತರ ರೈತನಾಯಕರಾಗಿ ಹೊರಹೊಮ್ಮಿ, ಸ್ವಾತಂತ್ರ್ಯಾಂದೋಲನದಲ್ಲಿ ಧುಮುಕಿ, ಭಾರತದ ಪ್ರಥಮ ಗೃಹಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸುವಾಗಲೂ ನಾವು ಸರ್ದಾರರಲ್ಲಿ ಕಾಣುವುದು ಇದೇ ಸ್ವಾರ್ಥರಹಿತ ಕರ್ತವ್ಯನಿಷ್ಠೆಯನ್ನು. ಹೀಗಾಗಿಯೇ ಅವರು ಜನಮನದಲ್ಲಿ ಅಸಾಧಾರಣ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯವಾದದ್ದು. 1947ರಲ್ಲಿ ಗಾಂಧಿಯವರ ನಂತರ ಕಾಂಗ್ರೆಸ್ ಪಕ್ಷ ಪೂರ್ಣ ಗೌರವ, ವಿಶ್ವಾಸ ತೋರುತ್ತಿದ್ದ ಎರಡನೆಯ ನಾಯಕ ವಲ್ಲಭಭಾಯ್ ಪಟೇಲ್. ಅಂದು ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗಲೆಂದು ಕಾಂಗ್ರೆಸ್ ಪಕ್ಷ ಬಯಸಿದ್ದು ಪಟೇಲರನ್ನು. ಅದು ಆ ಮಹಾನ್ ನಾಯಕನ ಕೈತಪ್ಪಿಹೋದದ್ದರ ದುರಂತ ಕತೆಯನ್ನು ಹೇಳುವ ಮೊದಲು ಪೀಠಿಕೆಯಾಗಿ, ನಾಲ್ಕು ದಶಕಗಳ ಹಿಂದೆ ಅಂಥದೇ ಅವಕಾಶವೊಂದನ್ನು ಪಟೇಲರು ನಿರ್ವೇಹದಿಂದ ತ್ಯಜಿಸಿದ ಪ್ರಕರಣವೊಂದನ್ನು ನಿಮಗಿಲ್ಲಿ ನಾನು ಹೇಳಲೇಬೇಕು.

22ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಪೂರೈಸಿದ ನಂತರ, ತಾವೇ ಉಳಿಸಿದ್ದ ಹಣದಲ್ಲಿ ಇಂಗ್ಲೆಂಡ್​ನಲ್ಲಿ ಕಾನೂನು ಶಿಕ್ಷಣ ಪಡೆಯಲೆಂದು ಸರ್ದಾರರು ಬಯಸಿದ್ದರು. ಅದಕ್ಕಾಗಿ ಪಾಸ್ ಮತ್ತು ಟಿಕೆಟ್​ಗಳಿಗೆ ಅರ್ಜಿ ಸಲ್ಲಿಸಿದಾಗ ಅವು ಬಂದದ್ದು ಅವರ ‘ವಲ್ಲಭಭಾಯ್ ಝುವೇರ್​ಭಾಯ್ ಪಟೇಲ್’ ಎಂಬ ಹೆಸರಿನ ಸಂಕ್ಷಿಪ್ತ ರೂಪ ‘ವಿ.ಜೆ. ಪಟೇಲ್’ ಎಂಬ ಹೆಸರಿನಲ್ಲಿ. ಅವರ ಹಿರಿಯಣ್ಣ ವಿಠ್ಠಲಭಾಯ್ ಝುವೇರ್​ಭಾಯ್ ಪಟೇಲರ ಸಂಕ್ಷಿಪ್ತ ನಾಮವೂ ‘ವಿ.ಜೆ. ಪಟೇಲ್’ ಎಂದೇ. ಲಂಡನ್​ನಲ್ಲಿ ಶಿಕ್ಷಣ ಪಡೆಯುವ ಬಯಕೆ ಅವರಿಗೂ ಇತ್ತು. ಆದರೆ ಅವಕಾಶ ಸಿಕ್ಕಿರದಿದ್ದ ಅವರು ಸರ್ದಾರ್​ಗೆ ಹೇಳಿದ್ದು ಹೀಗೆ- ‘ತಮ್ಮನಾದ ನೀನು ಶಿಕ್ಷಣ ಪಡೆಯಲು ಲಂಡನ್​ಗೆ ತೆರಳಿದರೆ ಅದು ಹಿರಿಯವನಾದ ನನಗೆ ಅವಮಾನ, ಮನೆತನಕ್ಕೆ ಅವಮಾನ’. ತಮಗೆ ದಕ್ಕಿದ್ದ ಅವಕಾಶವನ್ನು ಅಣ್ಣ ಉಪಯೋಗಿಸಿಕೊಳ್ಳಲು ಸರ್ದಾರರು ಮಾತಿಲ್ಲದೇ ಸಮ್ಮತಿಸಿಬಿಟ್ಟರು. ಹೀಗೆ ಹಿರಿಯರ ಮನಸ್ಸನ್ನು ನೋಯಿಸದ, ಅವರ ಭಾವನೆಗೆ ಬೆಲೆ ಕೊಟ್ಟು ಸ್ವಂತ ಹಿತವನ್ನು ತ್ಯಾಗಮಾಡುವ ಹೃದಯವೈಶಾಲ್ಯವನ್ನು ಸರ್ದಾರರು ಚಿಕ್ಕಂದಿನಲ್ಲೇ ಬದುಕಿನ ಮೌಲ್ಯವಾಗಿ ರೂಢಿಸಿಕೊಂಡರು. ಈ ‘ದೊಡ್ಡ ಗುಣ’ 1947ರಲ್ಲಿ ದೇಶದ ಮುಂದೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ಬ್ರಿಟಿಷರು ಕಾಲ್ತೆಗೆಯುತ್ತಿದ್ದಂತೆ ಸ್ವತಂತ್ರ ಭಾರತದ ಆಡಳಿತ ಕಾಂಗ್ರೆಸ್ ಹೆಗಲಿಗೆ ಎಂದು ತೀರ್ವನವಾದಾಗ ಕಾಂಗ್ರೆಸ್ ಅಧ್ಯಕ್ಷರೇ ದೇಶದ ಪ್ರಧಾನಿಯಾಗುವಂತೆ ವ್ಯವಸ್ಥೆಯಾಗಿತ್ತು. ಕಾಂಗ್ರೆಸ್ ಅಧ್ಯಕ್ಷರು ಆಯ್ಕೆಯಾಗುತ್ತಿದ್ದುದು ಪಕ್ಷದ ಪ್ರಾಂತೀಯ ಸಮಿತಿಗಳಿಂದ. ಆಗ ಅಧ್ಯಕ್ಷರಾಗಿದ್ದ ಮೌಲಾನಾ ಅಬುಲ್ ಕಲಮ್ ಅಜಾದ್​ರಿಗೆ ತಾವೇ ಮತ್ತೊಂದು ವರ್ಷಕ್ಕೆ ಅಧ್ಯಕ್ಷರಾಗಿ, ಪ್ರಧಾನಿಯೂ ಆಗುವ ಇರಾದೆಯಿತ್ತು. ಆದರೆ ಅದಕ್ಕೆ ತಣ್ಣೀರೆರಚಿದವರು ಗಾಂಧಿ. ನಂತರ 15 ಕಾಂಗ್ರೆಸ್ ಪ್ರಾಂತೀಯ ಸಮಿತಿಗಳಲ್ಲಿ 12 ಸಮಿತಿಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸರ್ದಾರ್ ಪಟೇಲ್​ರನ್ನು ನಾಮಕರಣ ಮಾಡಿದವು. ಆ ಸ್ಥಾನಕ್ಕಾಗಿ ಹಪಹಪಿಸುತ್ತಿದ್ದ ಜವಾಹರಲಾಲ್ ನೆಹರುರಿಗೆ ಒಂದಾದರೂ ಪ್ರಾಂತೀಯ ಸಮಿತಿಯ ಬೆಂಬಲ ಸಿಕ್ಕಿರಲಿಲ್ಲ. ಆದರೆ ಅಡಿಯಿಂದ ಮುಡಿಯವರೆಗೆ ಅಧಿಕಾರದ ದುರಾಸೆಯಿಂದ ತುಂಬಿಹೋಗಿದ್ದ ನೆಹರು ಹಠಹಿಡಿದು ನಿಂತರು. ಅದಕ್ಕೆ ಸಮ್ಮತಿಸಿದ ಗಾಂಧಿ, ಪ್ರಧಾನಿಯಾಗಲು ನೆಹರುರೇ ಸೂಕ್ತವ್ಯಕ್ತಿ ಎಂದು ಉಳಿದೆಲ್ಲರನ್ನೂ ನಂಬಿಸುವುದರಲ್ಲಿ ಯಶಸ್ವಿಯಾದರು. ಅವರ ಅಭಿಪ್ರಾಯಕ್ಕೆ ಬೆಲೆಕೊಟ್ಟ ಸರ್ದಾರರು ಸ್ಪರ್ಧೆಯಿಂದ ಹಿಂದೆ ಸರಿದರು. ಅಂತಿಮವಾಗಿ, ಗಾಂಧಿಯವರ ಸೂಚನೆಯಂತೆ ಆಚಾರ್ಯ ಕೃಪಲಾನಿ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆ ಕರೆದು ಅಲ್ಲಿ ನಿಯಮಬಾಹಿರವಾಗಿ ಕಾಂಗ್ರೆಸ್ ಅಧ್ಯಕ್ಷಸ್ಥಾನಕ್ಕೆ (ನಂತರ ಪ್ರಧಾನಮಂತ್ರಿ ಸ್ಥಾನಕ್ಕೆ) ನೆಹರುರನ್ನು ಆಯ್ಕೆ ಮಾಡಿಸಿದರು. ನೆಹರುರಂತೆಯೇ ಪಟೇಲರೂ ವಿದೇಶದಲ್ಲಿ ಕಾನೂನು ಕಲಿತಿದ್ದರು, ನೆಹರುಗಿಂತಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಅಷ್ಟೇ ಅಲ್ಲ, ನೆಹರು ಒಂದು ದಿನವಾದರೂ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸಿದ ಉದಾಹರಣೆಯಿಲ್ಲ. ಆದರೆ ಪಟೇಲರು ವಕೀಲಿ ವೃತ್ತಿ ಕೈಗೊಂಡು ಯಶಸ್ವಿ ಬ್ಯಾರಿಸ್ಟರ್ ಎಂದು ಹೆಸರು ಗಳಿಸಿದ್ದರು. ರೈತನಾಯಕರಾಗಿ ರಾಷ್ಟ್ರಸೇವೆಗಿಳಿದ ಸರ್ದಾರರು ಸ್ವಾತಂತ್ರಾ್ಯಂದೋಲನಕ್ಕೆ ಧುಮುಕಿ ಹಲವಾರು ಸತ್ಯಾಗ್ರಹಗಳ, ಚಳವಳಿಗಳ ಧೀಮಂತ, ಅರ್ಥಪೂರ್ಣ ಮುಂದಾಳತ್ವ ವಹಿಸಿದರು.

ಇಷ್ಟಾಗಿಯೂ ಸರ್ದಾರರ ನಿಸ್ವಾರ್ಥತೆ, ವಿದ್ವತ್ತು, ಕಾರ್ಯಕ್ಷಮತೆ, ಆಡಳಿತದ ಅನುಭವ, ರಾಷ್ಟ್ರನಿಷ್ಠೆಗಳನ್ನು ಗಾಂಧಿ ನಿರ್ಲಕ್ಷಿಸಿದ್ದಾದರೂ ಹೇಗೆ? ಪಟೇಲರ ಗುಣಗಳು ಗಾಂಧಿಯವರಿಗೆ ಗೊತ್ತಿರಲಿಲ್ಲವೆಂದಲ್ಲ. ಇಬ್ಬರೂ ಬೇರೆಬೇರೆ ಕಾರಾಗೃಹಗಳಲ್ಲಿದ್ದಾಗೊಮ್ಮೆ ಪಟೇಲರಿಗೆ ಗಾಂಧಿ ಬರೆದ ಪತ್ರವೊಂದು ಹೀಗಿದೆ- ‘ನನ್ನ ದೊಡ್ಡ ತೊಂದರೆಯೆಂದರೆ ಈಗ ನೀವು ನನ್ನ ಪಕ್ಕದಲ್ಲಿಲ್ಲ. ಹೀಗಾಗಿ ನಾನು ಏಕಲವ್ಯನನ್ನು ಅನುಕರಿಸಿ… ನಿಮ್ಮ ಚಿತ್ರವನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ನನ್ನ ಪ್ರಶ್ನೆಗಳನ್ನು ಅದರ ಮುಂದಿಡುತ್ತೇನೆ’. ತಾವು ಇಷ್ಟೊಂದು ಗೌರವಾದರಗಳನ್ನಿಟ್ಟುಕೊಂಡಿದ್ದ ಪಟೇಲರನ್ನು ಹಿಂದೆ ತಳ್ಳಿ ನೆಹರುರಂತಹ ಸ್ವಾರ್ಥಿಯ ಕೈಗೆ ಈ ದೇಶವನ್ನಿಡಲು ‘ಮಹಾತ್ಮ’ ಅದೆಂತಹ ದಾಕ್ಷಿಣ್ಯಕ್ಕೊಳಗಾಗಿದ್ದಿರಬಹುದು ಎಂದು ಅರ್ಥವಾಗುವುದಿಲ್ಲ. ಹೀಗೆ, ಅಧಿಕಾರಲಾಲಸಿಗಳ, ಅವರಿಗೆ ಬೆಂಬಲವಾಗಿ ನಿಂತ ಹಿರಿಯರ ಕುತಂತ್ರಕ್ಕೆ ಬಲಿಯಾಗಿ ಪ್ರಧಾನಮಂತ್ರಿಯ ಸ್ಥಾನವನ್ನು ಕಳೆದುಕೊಂಡ ಸರ್ದಾರರು ತಮ್ಮ ಪಾಲಿಗೆ ಬಂದ ಉಪಪ್ರಧಾನಿ/ಗೃಹಮಂತ್ರಿ ಸ್ಥಾನದ ಮಿತಿಯಲ್ಲೇ ಅಸಾಮಾನ್ಯ ಕಾರ್ಯಶೀಲತೆ ಪ್ರದರ್ಶಿಸಿ, ಹರಿದು ಹಂಚಿಹೋಗಬಹುದಾಗಿದ್ದ ಭಾರತವನ್ನು ಒಂದುಗೂಡಿಸಿ ರಾಷ್ಟ್ರವನ್ನು ಕಟ್ಟಿದ್ದೊಂದು ಅಸಾಧಾರಣ ಸಾಹಸಗಾಥೆ. ನೂರಾರು ದೇಶೀಯ ಸಂಸ್ಥಾನಗಳು ಸ್ವಯಂಪ್ರೇರಣೆಯಿಂದ ಭಾರತ ಒಕ್ಕೂಟದಲ್ಲಿ ಸೇರಿದರೂ ಕೆಲವು ಪ್ರಮುಖ ಹಾಗೂ ಆಯಕಟ್ಟಿನ ಸ್ಥಾನದಲ್ಲಿದ್ದ ಸಂಸ್ಥಾನಗಳು ಪಾಕಿಸ್ತಾನಕ್ಕೆ ಸೇರಲು ಅಥವಾ ಸ್ವತಂತ್ರವಾಗಲು ಯೋಜಿಸಿದ್ದವು. ಹೈದರಾಬಾದ್, ತಿರುವಾಂಕೂರು, ಜುನಾಗಢ್, ಜೋಧ್​ಪುರ್, ಉದಯಪುರ್ ಅಂತಹ ಕೆಲವು ಸಂಸ್ಥಾನಗಳು. ಬಗೆಬಗೆಯ ಆಮಿಷವನ್ನೊಡ್ಡಿ ಅವನ್ನು ನುಂಗಲು ಪಾಕಿಸ್ತಾನ ಸಂಚು ನಡೆಸುತ್ತಿತ್ತು. ಆದರೆ ಸರ್ದಾರರು ದಿಟ್ಟ ಕ್ರಮಗಳ ಮೂಲಕ ಆ ಸಂಸ್ಥಾನಗಳನ್ನೆಲ್ಲ ಭಾರತದ ಒಕ್ಕೂಟದೊಳಕ್ಕೆ ಎಳೆದುತಂದು ಇಂದಿನ ಭಾರತವನ್ನು ನಿರ್ವಿುಸಿದರು. ಕಾಶ್ಮೀರ ಭಾರತದಲ್ಲಿ ವಿಲೀನವಾಗಲು ಕೂಡ ಸರ್ದಾರರು ಪ್ರಮುಖ ಕಾರಣ. ಹೀಗಾಗಿಯೇ, ಸರ್ದಾರರು ‘ಭಾರತದ ನಿಜವಾದ ರಾಷ್ಟ್ರಪಿತ’ ಎಂದು ಇತಿಹಾಸಕಾರ ಪ್ಯಾಟ್ರಿಕ್ ಫ್ರೆಂಚ್ ಅಭಿಪ್ರಾಯಪಡುವುದು. ಆದರೆ ಅಧಿಕಾರಲಾಲಸಿಗಳು ಪ್ರಜಾಪ್ರಭುತ್ವವಿರೋಧಿ ಮಾರ್ಗದಿಂದ ಅಧಿಕಾರ ದಕ್ಕಿಸಿಕೊಂಡ ಮೇಲೆ ವ್ಯವಸ್ಥಿತವಾಗಿ ಆರಂಭವಾದ ಮಿಥ್ಯಾ ಇತಿಹಾಸದ ರಚನೆ ಸರ್ದಾರರನ್ನು, ನೇತಾಜಿಯವರನ್ನು, ಅಂಬೇಡ್ಕರ್​ರನ್ನು ಮರೆಗೆ ತಳ್ಳಿತು, ಸೋಗುಗಾರರನ್ನು ವೈಭವೀಕರಿಸಿತು.

ದೇಶ ಕಟ್ಟುವವರಿಗಿಂತ ಒಡೆಯುವವರೇ ಹೆಚ್ಚಾಗಿರುವ ಈ ದಿನದಲ್ಲಿ ಸರ್ದಾರರು ನಮಗೆ ಅತಿಯಾಗಿ ಮುಖ್ಯವಾಗುತ್ತಾರೆ. ಇಂದು ಅವರಂತಹವರ ಅಗತ್ಯ ನಮಗೆ ಮನದಟ್ಟಾಗುವುದು ಇನ್ನೂ ಒಂದು ಕಾರಣದಿಂದ. ಕರಾಚಿಯಲ್ಲಿ ತಮ್ಮ ಸಹಭಾಗಿತ್ವದಲ್ಲಿದ್ದ ಉದ್ಯಮವೊಂದನ್ನು ಕಳೆದುಕೊಂಡ ಸರ್ದಾರರ ಮಗ ದಹ್ಯಾಭಾಯಿ, ಪಾಕಿಸ್ತಾನಕ್ಕೆ ಓಡಿಹೋಗಿದ್ದಾತನೊಬ್ಬ ಮುಂಬೈನಲ್ಲಿ ಬಿಟ್ಟುಹೋಗಿದ್ದ ಕಟ್ಟಡವೊಂದನ್ನು ಪರಿಹಾರವಾಗಿ ಪಡೆಯಲು ಗೃಹಮಂತ್ರಿ ಸರ್ದಾರರ ಬಳಿ ಹೋದಾಗ ಅವರು ಮಗನನ್ನು ಬೈದು ಕಳಿಸಿದರು.

ತಮಗೆ ನ್ಯಾಯವಾಗಿ ದಕ್ಕಿದ್ದ ಪ್ರಧಾನಮಮಂತ್ರಿಯ ಸ್ಥಾನವನ್ನು ಸರ್ದಾರರು ಬಿಟ್ಟುಕೊಟ್ಟರು, ದೇಶ ಕಟ್ಟಿದರು, ಅಂದು ಸರ್ಕಾರದ ನೀತಿಯಂತೆ ತಮ್ಮ ಮಗನಿಗೆ ನ್ಯಾಯಯುತವಾಗಿ ದಕ್ಕಬೇಕಾಗಿದ್ದ ಪರಿಹಾರವನ್ನು ತಡೆಹಿಡಿದರು. ಆದರೆ, ಇಂದು ನಾವು ಕಾಣುತ್ತಿರುವುದೇನು? ಪ್ರಜಾಪ್ರಭುತ್ವವಿರೋಧಿ ವಿಧಾನದಿಂದ ಅಧಿಕಾರ ಲಪಟಾಯಿಸಿ ಅದನ್ನು ವಂಶಕ್ಕೆ ಮೀಸಲಾಗಿಸಿದವರು, ಒಮ್ಮೆ ಸಿಕ್ಕಿದ ಅಧಿಕಾರವನ್ನು ಕುಟುಂಬಕ್ಕೆ ಸೀಮಿತಗೊಳಿಸಿಕೊಂಡವರು, ಅಧಿಕಾರವನ್ನು ಮಕ್ಕಳ ಆರ್ಥಿಕಲಾಭಕ್ಕೆ ದುರುಪಯೋಗಪಡಿಸಿಕೊಳ್ಳುವವರು- ನೆಹರು, ಇಂದಿರಾ, ಸೋನಿಯಾ, ಶೇಖ್/ಫಾರೂಕ್ ಅಬ್ದುಲ್ಲಾ, ಕರುಣಾನಿಧಿ, ಲಾಲು, ಚಂದ್ರಶೇಖರ ರಾವ್, ಶರದ್ ಪವಾರ್, ಪಿ. ಚಿದಂಬರಂ… ಪಟ್ಟಿ ಮುಂದುವರಿಯುತ್ತದೆ, ಇಂದು ಸರ್ದಾರರು ನಮಗೆಷ್ಟು ಅಗತ್ಯವಾಗಿದ್ದಾರೆ ಎಂದು ಸಾರಿಹೇಳುತ್ತದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)