ಇವರಿಗೆ ಯಾವ ಶಿಕ್ಷೆ ವಿಧಿಸಬೇಕು ಹೇಳಿ….?

| ಪ್ರೇಮಶೇಖರ

ಎಡಪಂಥೀಯ ಇತಿಹಾಸಕಾರರು ರಚಿಸಿದ ಇತಿಹಾಸ ಪಠ್ಯಗಳಲ್ಲಿ ಪ್ರಾಚೀನ ಭಾರತದ ಇತಿಹಾಸವನ್ನು ಅಸಮಾನತೆಯ, ಧಾರ್ವಿುಕ ಆಚರಣೆಯ ಕಟ್ಟುಪಾಡುಗಳಿಂದ ತುಂಬಿದ ಕಾಲವೆಂದು ಚಿತ್ರಿಸಲಾಯಿತು. ಲೆಬನಾನ್, ಸಿರಿಯಾದಂಥ ಮುಸ್ಲಿಂ ದೇಶಗಳಲ್ಲಿನ ಶಾಲಾಪಠ್ಯಗಳಲ್ಲಿ ಪ್ರಾಚೀನ ಕಾಲದಲ್ಲಿ ಆ ದೇಶಗಳಿಗೆ ಭಾರತೀಯ ವಾಸ್ತುಶಿಲ್ಪಿಗಳು, ವಿದ್ವಾಂಸರು ನೀಡಿದ ಕೊಡುಗೆಗಳ ವಿವರಗಳಿವೆ.

ನಮ್ಮ ಇತಿಹಾಸದ ಮೇಲೆ ಆಕ್ರಮಣವೆಸಗಲು, ವರ್ತಮಾನದ ಮೇಲೆ ದಬ್ಬಾಳಿಕೆ ನಡೆಸಲು, ಭವಿಷ್ಯವನ್ನು ಸಾಕುನಾಯಿಯಾಗಿಸಿಕೊಳ್ಳಲು ಕಾಂಗ್ರೆಸ್ ಪ್ರಭುತ್ವ, ಮೊದಲು ನೆಹರು ನೇತೃತ್ವದಲ್ಲಿ, ನಂತರ ಮತ್ತಷ್ಟು ಉಗ್ರವಾಗಿ ಇಂದಿರಾ ನೇತೃತ್ವದಲ್ಲಿ ವ್ಯವಸ್ಥಿತ ಪ್ರಯತ್ನ ನಡೆಸಿದ್ದು ಎಡಪಂಥೀಯ ಇತಿಹಾಸಕಾರರನ್ನು, ಚಿಂತಕರನ್ನು ಉಪಯೋಗಿಸಿಕೊಂಡು. ಇವರಿಗೆ ಸರ್ಕಾರಿ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಲಯಗಳಲ್ಲಿ ಪ್ರಾಮುಖ್ಯ ಒದಗಿಸಲೆಂದೇ ಸ್ಥಾಪಿಸಲ್ಪಟ್ಟ ಸಂಸ್ಥೆಗಳು ಮೊದಲಿಗೆ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ (1950), ಎನ್​ಸಿಇಆರ್​ಟಿ (1960) ನಂತರ ಜವಾಹರಲಾಲ್ ನೆಹರು ಯೂನಿವರ್ಸಿಟಿ (1969) ಮತ್ತು ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್ (1972). ಕಾಂಗ್ರೆಸ್ ಪರವಾಗಿದ್ದ ಎಡಪಂಥೀಯ ಅಧ್ಯಾಪಕರಿಗೂ ಬೇಕಾಗಿದ್ದದ್ದು ಪ್ರಭುತ್ವದ ಇಂತಹ ಕೃಪಾಕಟಾಕ್ಷವೇ. ಸರ್ಕಾರದ ವಿವಿಧ ಮಂತ್ರಾಲಯಗಳಲ್ಲಿ ಸಲಹೆಗಾರರ ಸ್ಥಾನ, ವಿವಿಧ ಸಾಂಸ್ಕೃತಿಕ, ಸಾಹಿತ್ಯಕ ಸಂಸ್ಥೆಗಳಲ್ಲಿ ಸದಸ್ಯತ್ವ, ನಿವತ್ತಿಯ ನಂತರ ಭಾರತದ ರಾಯಭಾರಿಯ ಹುದ್ದೆಯೂ ಸೇರಿದಂತೆ ವಿದೇಶಗಳಲ್ಲಿ ವಿವಿಧ ಸ್ತರಗಳ ರಾಜತಂತ್ರಜ್ಞರಾಗಿ ನೇಮಕ- ಈ ಕಾರಣಗಳಿಂದಾಗಿಯೇ ಕಾಲಡಿ ಬಂದುಬಿದ್ದ ಪ್ರತಿಷ್ಠೆ, ಪ್ರಾಮುಖ್ಯ, ಹಣ, ಪ್ರಭಾವ, ವಿದೇಶಪ್ರವಾಸ- ಇವೆಲ್ಲವನ್ನೂ ಎರಡೂ ಕೈಗಳಿಂದಲೂ ಬಾಚಿಕೊಂಡ ಇವರು ಅದಕ್ಕೆ ಪ್ರತಿಯಾಗಿ ತಮ್ಮದೇ ಶಿಷ್ಯರನ್ನೂ, ಅನುಯಾಯಿಗಳನ್ನೂ ಸೃಷ್ಟಿಸಿಕೊಂಡು ಕಾಂಗ್ರೆಸ್ ಚಿಂತನೆಗಳನ್ನು ಪ್ರಸಾರ ಮಾಡತೊಡಗಿದರು. ಈ ‘ಕಾಕ’ (ಕಾಂಗ್ರೆಸ್-ಕಮ್ಯೂನಿಸ್ಟ್) ಸಮಾಜವಿಜ್ಞಾನಿಗಳ ಶಿಷ್ಯಗಣಗಳು ಮತ್ತು ಅನುಯಾಯಿಪಡೆಗಳು ಮುಂದಿನ ಕಾಲುಶತಮಾನದಲ್ಲಿ ಹುಲುಸಾಗಿ ವೃದ್ಧಿಸಿ ರಾಷ್ಟ್ರದ ಶಿಕ್ಷಣ, ಸಾಹಿತ್ಯ ಮತ್ತು ಸಮೂಹಮಾಧ್ಯಮ ಕ್ಷೇತ್ರಗಳಲ್ಲಿ ಭದ್ರವಾಗಿ ತಳವೂರಿಬಿಟ್ಟವು. ತಮ್ಮ ಗುರುಗಳ ಕಾಯಕವನ್ನು ನಿಷ್ಠೆಯಿಂದ ಮುಂದುವರಿಸಿಕೊಂಡು ಹೋಗಲು ಈ ಶಿಷ್ಯೋತ್ತಮರಿಗೆ ಸೂಕ್ತ ಕುರ್ಚಿಗಳನ್ನು ಒದಗಿಸುವುದಕ್ಕೆಂದೇ 70-80ರ ದಶಕಗಳಲ್ಲಿ ಹೈದರಾಬಾದ್ ಯೂನಿವರ್ಸಿಟಿಯೂ ಸೇರಿದಂತೆ ದೇಶದ ವಿವಿಧೆಡೆ ಮತ್ತಷ್ಟು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ತೆರೆಯಲಾಯಿತು.

ಇಂದಿರಾ ಗಾಂಧಿ, ನೂರುಲ್ ಹಸನ್, ಜಿ. ಪಾರ್ಥಸಾರಥಿ ಹಾಕಿದ ಗೆರೆಗನುಗುಣವಾಗಿ ಎಡ ಇತಿಹಾಸಕಾರರು ರಚಿಸಿದ ಇತಿಹಾಸ ಪಠ್ಯಪುಸ್ತಕಗಳಲ್ಲಿ ಪ್ರಾಚೀನ ಭಾರತದ ಇತಿಹಾಸವನ್ನು ಅಸಮಾನತೆಯ ಹಾಗೂ ಧಾರ್ವಿುಕ ಆಚರಣೆಯ ಕಟ್ಟುಪಾಡುಗಳಿಂದ ತುಂಬಿದ ಕಾಲವೆಂದು ಚಿತ್ರಿಸಲಾಯಿತು. ಬೌದ್ಧಧರ್ಮವನ್ನು ಸಮಾನತೆಯ ಧರ್ಮವೆಂದು ಸಾರಿ ಅದನ್ನು ನಾಶಮಾಡಿದ ಹೊಣೆಯನ್ನು ಹಿಂದೂಗಳ ಮೇಲೆ ಹೊರಿಸಲಾಯಿತು. ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಅಲ್ಲದೆ ಭಾರತದಲ್ಲಿಯೂ ಬೌದ್ಧಧರ್ಮದ ಅವನತಿಗೆ ನಿಜವಾಗಿ ಕಾರಣವಾದದ್ದು ಅರಬ್ಬರು ಮತ್ತು ತುರ್ಕರು. ಭಾರತದಲ್ಲಿ ಅದು ಆರಂಭವಾಗುವುದೇ ಈ ದೇಶದ ಮೇಲೆ ಅರಬ್ಬರ ಮೊಟ್ಟಮೊದಲ ದಾಳಿಯಿಂದ. ಆದರೆ ಆ ಪ್ರಕರಣ ಪಠ್ಯಪುಸ್ತಕಗಳಲ್ಲಿ ದಾಖಲಾದದ್ದೇ ಬೇರೆ ಬಗೆಯಲ್ಲಿ. ಕ್ರಿ.ಶ. 711-12ರಲ್ಲಿ ಸಿಂಧ್ ಮೇಲೆ ಮಹಮದ್ ಬಿನ್ ಖಾಸಿಂ ಎಸಗಿದ ಆಕ್ರಮಣದ ಬಗ್ಗೆ ನಮಗೆ ಲಭ್ಯವಿರುವ ಏಕೈಕ ಲಿಖಿತ ಆಧಾರವೆಂದರೆ 1216ರಲ್ಲಿ ಆಲಿ ಬಿನ್ ಹಮೀದ್ ಅಲ್ ಕೂಫಿಯಿಂದ ರಚಿತವಾದ, ಕಳೆದುಹೋಗಿರುವ ಅರಬ್ ಕೃತಿಯೊಂದರ ಅನುವಾದವೆಂದು ನಂಬಲಾಗಿರುವ, ‘ಚಾಚ್​ನಾಮಾ’ ಎಂಬ ಪರ್ಷಿಯನ್ ಕೃತಿ. ಅದರ ಪ್ರಕಾರ ದೇಬಲ್​ನಲ್ಲಿದ್ದ ಅಧಿಕ ಸಂಖ್ಯೆಯ ಬೌದ್ಧರು ಅಹಿಂಸಾವಾದವನ್ನು ಮುಂದೊಡ್ಡಿ ಖಾಸಿಂನ ಸೇನೆಯನ್ನು ಎದುರಿಸಲು ಹಿಂದೂಗಳ ಜತೆಗೂಡಲಿಲ್ಲ. ಅದರಿಂದಾಗಿ ದೇಬಲ್ ಅನ್ನು ಸುಲಭವಾಗಿ ಆಕ್ರಮಿಸಿಕೊಂಡ ಖಾಸಿಂ, ಅಲ್ಲಿನ ಹಿಂದೂಗಳ ಜತೆಗೆ ಬೌದ್ಧರನ್ನೂ ಇಸ್ಲಾಮ್ೆ ಮತಾಂತರಿಸಿದ, ಒಪ್ಪದವರನ್ನು ಅವನ ಸೇನೆ ಕೊಚ್ಚಿಹಾಕಿತು. ಈ ವಿವರ ಪಠ್ಯಪುಸ್ತಕಗಳಿಂದ ಮರೆಯಾಯಿತು (ದೇಬಲ್​ನ ‘ಅಹಿಂಸಾವಾದಿಗಳು’ ತಮ್ಮ ಹೊಸ ನಂಬಿಕೆಗಳ ಪ್ರಕಾರ ಮುಂದಿನ ಶತಮಾನಗಳಲ್ಲಿ ಹಿಂಸಾವಾದಿಗಳಾಗಿ ಬದಲಾಗಿಹೋದರು, ಅವರಲ್ಲಿ ಪ್ರತ್ಯೇಕತೆಯ ಮನೋಭಾವ ಬೆಳೆಯಿತು, ಈಗ ಪಾಕಿಸ್ತಾನವಾಗಿರುವ ಪ್ರದೇಶದಲ್ಲಿ 1946ರ ಚುನಾವಣೆಗಳಲ್ಲಿ ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ಅನ್ನು ಚುನಾಯಿಸಿದ ಏಕೈಕ ಪ್ರಾಂತ್ಯ ಸಿಂಧ್, ಮತ್ತು ಪಾಕಿಸ್ತಾನದ ಸ್ಥಾಪನೆಗೆ ಅಸ್ತು ನೀಡಿದ ಏಕೈಕ ಪ್ರಾಂತೀಯ ಅಸೆಂಬ್ಲಿ ಸಿಂಧ್​ನದು ಎನ್ನುವುದು ಬೇರೆಯೇ ದುರಂತ ಇತಿಹಾಸ ಬಿಡಿ).

ಸಿಂಧ್ ಆಕ್ರಮಣಾನಂತರದ ಶತಮಾನಗಳಲ್ಲಿ ಬೌದ್ಧಮತವನ್ನು ಸಂಪೂರ್ಣವಾಗಿ ನಾಶಮಾಡಿದವರು ಈ ದೇಶವನ್ನು ಆಕ್ರಮಿಸಿಕೊಂಡ ತುರ್ಕರು. ಅಂತಿಮವಾಗಿ ಬೌದ್ಧ ಶೈಕ್ಷಣಿಕ ಕ್ಷೇತ್ರಗಳನ್ನು ನಾಶಮಾಡಿ ಭಾರತದಲ್ಲಿ ಬೌದ್ಧ ಧರ್ಮದ ಅಧ್ಯಯನವನ್ನು ನಿಲುಗಡೆಗೆ ತಂದವನು ಬಕ್ತಿಯಾರ್ ಖಿಲ್ಜಿ, 13ನೆಯ ಶತಮಾನದ ಆರಂಭದಲ್ಲಿ. ಶತಮಾನಗಳಿಂದಲೂ ಬೌದ್ಧ ಶಿಕ್ಷಣ ಕ್ಷೇತ್ರವಾಗಿದ್ದುಕೊಂಡು ಭಾರತವಲ್ಲದೆ ಸಿಂಹಳ, ಟಿಬೆಟ್, ಚೀನಾ, ಅಫ್ಘಾನಿಸ್ತಾನ, ಆಗ್ನೇಯ ಏಷ್ಯಾ ಮುಂತಾದ ಸುತ್ತಮುತ್ತಲಿನ ಎಲ್ಲ ಬೌದ್ಧನಾಡುಗಳ ಸುಮಾರು 10 ಸಾವಿರ ಶಿಕ್ಷಣಾರ್ಥಿಗಳ ಜ್ಞಾನಾರ್ಜನಾ ಕೇಂದ್ರವಾಗಿದ್ದ ನಳಂದಾ ವಿಶ್ವವಿದ್ಯಾಲಯವನ್ನು ಆತ ಹಾಳುಗೆಡವಿ ಅಲ್ಲಿನ ಅಗಾಧ ಪುಸ್ತಕ ಭಂಡಾರಕ್ಕೆ ಬೆಂಕಿಹಚ್ಚಿದ. ಆದರೆ ಬೌದ್ಧಧರ್ಮವನ್ನು ನಾಶಮಾಡಿದ ಹೊಣೆಯನ್ನು ಹಿಂದೂಗಳ ಮೇಲೆ ನಮ್ಮ ಪಠ್ಯಪುಸ್ತಕಗಳು ಹೊರಿಸುತ್ತವೆ! ಇಷ್ಟೇ ಅಲ್ಲ, 13ನೆಯ ಶತಮಾನದಲ್ಲಿ ಭಾರತದ ಮೇಲೆ ಮುಸ್ಲಿಂ ಆಕ್ರಮಣ ಮತ್ತು ಆಳ್ವಿಕೆ ಆರಂಭವಾದಾಗ ಸುಮಾರು 4 ಕೋಟಿ ಹಿಂದೂಗಳನ್ನು ಕೊಲ್ಲಲಾಯಿತು, ಲಕ್ಷಗಟ್ಟಲೆ ಹಿಂದೂಗಳನ್ನು ಗುಲಾಮರನ್ನಾಗಿ ಮಾಡಲಾಯಿತು ಎಂದು ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯದ ಆರಂಭವನ್ನು ದಾಖಲಿಸಿರುವ ‘ತಾರಿಖ್-ಇ-ಫರಿಸ್ತಾ’ ಕೃತಿಯಲ್ಲಿ ಫರಿಸ್ತಾ (ಮಹಮದ್ ಖಾಸಿಂ ಹಿಂದೂ ಶಾ) ಬರೆದಿದ್ದಾನೆ.

‘ಕಾಕ’ ಇತಿಹಾಸಕಾರು ಇಡೀ ದೇಶಕ್ಕೆ ಸುಳ್ಳು ಹೇಳಿ ಅಂತಃಸಾಕ್ಷಿಯನ್ನೇ ಮಾರಿಕೊಂಡ ಪ್ರಸಂಗವೊಂದನ್ನು ಇಲ್ಲಿ ಹೇಳಲೇಬೇಕು. ಅಯೋಧ್ಯೆಯಲ್ಲಿ ಬಾಬ್ರಿಕಟ್ಟಡವಿದ್ದ ಸ್ಥಳದಲ್ಲಿ ಪ್ರಾಚೀನ ಹಿಂದೂಮಂದಿರವೊಂದು ಇದ್ದುದನ್ನು ಗಣ್ಯ ಪ್ರಾಕ್ತನಶಾಸ್ತ್ರಜ್ಞ ಡಾ. ಬಿ. ಬಿ. ಲಾಲ್ ನೇತೃತ್ವದ ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್​ಐ) ಸಂಸ್ಥೆಯ ತಂಡ 1975-76ರಲ್ಲಿ ಪತ್ತೆಹಚ್ಚಿತು. ಎಡಪಂಥೀಯರಿಂದಲೇ ತುಂಬಿದ್ದ ಮುಖ್ಯವಾಹಿನಿ ಮಾಧ್ಯಮ ಇದನ್ನು ಜನತೆಗೆ ತಲುಪಿಸಲಿಲ್ಲ. ಅಷ್ಟೇ ಅಲ್ಲ, ಅಂತಹದೇನೂ ಸಿಕ್ಕೇ ಇಲ್ಲ ಎಂದು ಇತಿಹಾಸಕಾರರು ಹೇಳತೊಡಗಿದರು! ಆದರೆ ಪ್ರಜ್ಞಾವಂತ ಮುಸ್ಲಿಂ ಮುಂದಾಳುಗಳು ಎಎಸ್​ಐ ಸಂಶೋಧನಾ ತಂಡದ ಶೋಧನೆಗಳನ್ನು ಒಪ್ಪಿಕೊಂಡು ಅಯೋಧ್ಯಾದ ವಿವಾದಿತ ಕ್ಷೇತ್ರವನ್ನು ಹಿಂದೂಗಳಿಗೆ ಬಿಟ್ಟುಕೊಡಲು ತಯಾರಾದರು. ಆದರೆ ಈ ಸಕಾರಾತ್ಮಕ ನಿಲುವಿನಿಂದ ಅವರನ್ನು ವಿಮುಖಗೊಳಿಸಿದ್ದು ಇತಿಹಾಸಕಾರ ಇರ್ಫಾನ್ ಹಬೀಬ್. ಇದನ್ನವರು ಮಾಡಿದ್ದು, ಐಸಿಎಚ್​ಆರ್ ಸಂಸ್ಥೆಯ ತಮ್ಮ ಅಧಿಕೃತ ಕಚೇರಿಯಲ್ಲೇ ಮುಸ್ಲಿಂ ಮುಂದಾಳುಗಳನ್ನು ಸೇರಿಸಿಕೊಂಡು, ‘ಉತ್ಖನನದಲ್ಲಿ ಏನೂ ಸಿಕ್ಕಿಲ್ಲ, ವಿವಾದಿತ ಸ್ಥಳದ ಮೇಲೆ ನಿಮ್ಮ ಹಕ್ಕನ್ನು ಬಿಡಬೇಡಿ’ ಎಂದವರಿಗೆ ಹೇಳುವುದರ ಮೂಲಕ! ಈ ವಿವರಗಳನ್ನು ಹೇಳುವವರು ಎಎಸ್​ಐ ಸಂಶೋಧನಾ ತಂಡದ ಸದಸ್ಯರಲ್ಲೊಬ್ಬರಾಗಿದ್ದ, ನಂತರ ಎಎಸ್​ಐ ಉತ್ತರ ಪ್ರಾಂತೀಯ ನಿರ್ದೇಶಕರಾದ ಡಾ. ಕೆ.ಕೆ. ಮಹಮದ್. ಮೂರು ದಶಕಗಳ ಹಿಂದೆಯೇ ಪರಿಹಾರವಾಗಿಹೋಗುತ್ತಿದ್ದ ರಾಮಜನ್ಮಭೂಮಿ ವಿವಾದವನ್ನು ಇರ್ಫಾನ್ ಹಬೀಬ್ ಹೀಗೆ ಭುಗಿಲೆಬ್ಬಿಸಿದ ಬಗ್ಗೆ ಡಾ. ಮಹಮದ್ ವಿಷಾದಪಡುತ್ತಾರೆ.

ವೈಜ್ಞಾನಿಕವಾಗಿ ಸಾಬೀತಾದ ವಿವರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ ‘ಕಾಕ’ ಇತಿಹಾಸಕಾರರು, ವಿವಾದಾಸ್ಪದ ಸ್ಥಳದ ಮೇಲೆ ತನ್ನ ಅಧಿಕಾರವನ್ನು ಮಾನ್ಯ ಮಾಡುವಂತೆ ಸುನ್ನಿ ವಕ್ಪ್ ಬೋರ್ಡ್ ಅಲಹಾಬಾದ್ ಹೈಕೋರ್ಟ್​ನಲ್ಲಿ ದಾವೆ ಹೂಡಿದಾಗ ಅದರ ಪರವಾಗಿ ಸುಳ್ಳುಸಾಕ್ಷಿ ಹೇಳಿದರು. ತಮಾಷೆಯೆಂದರೆ ತಮಗೆ ಸಂಸ್ಕೃತವಾಗಲಿ, ಪರ್ಷಿಯನ್ ಆಗಲಿ ತಿಳಿಯದೆಂದೂ, ಹಾಗಾಗಿ ಅಯೋಧ್ಯಾಗೆ ಸಂಬಂಧಿಸಿದ ಮೂಲದಾಖಲೆಗಳನ್ನು ತಾವು ಓದಿಲ್ಲವೆಂದೂ ಇವರು ನ್ಯಾಯಾಲಯಕ್ಕೆ ಹೇಳಿದರು! ಇರ್ಫಾನ್ ಹಬೀಬ್​ರಂಥವರ ಕ್ಯಾತೆಯಿಂಗಾಗಿಯೇ 2003ರಲ್ಲಿ ಎಎಸ್​ಐ ಅಯೋಧ್ಯಾದಲ್ಲಿ ಮತ್ತೊಮ್ಮೆ ಉತ್ಖನನ ಕೈಗೊಂಡಿತು. ಆಗ 52 ಸ್ತಂಭಗಳು, ಪೂರ್ಣಕಲಶ, ಮಕರನಾಲಿ ಸೇರಿದಂತೆ ಹಿಂದೂಮಂದಿರಕ್ಕೆ ಸಂಬಂಧಿಸಿದ 263 ಅವಶೇಷಗಳು ಪತ್ತೆಯಾದವು. ಆದರೆ ಅಷ್ಟರಲ್ಲಾಗಲೆ ಅಯೋಧ್ಯಾವಿವಾದ ಒಂದು ರಾಷ್ಟ್ರೀಯ ಸಮಸ್ಯೆಯಾಗಿಹೋಗಿತ್ತು, ಅದನ್ನೊಂದು ಪ್ರತಿಷ್ಠೆಯ ವಿಷಯವನ್ನಾಗಿಸಿಕೊಂಡ ಮುಸ್ಲಿಂ ಮುಂದಾಳುಗಳು ತಮ್ಮ ನಿಲುವಿನಿಂದ ಹಿಂದೆ ಸರಿಯಲು ತಯಾರಾಗಿರಲಿಲ್ಲ. ಅಯೋಧ್ಯಾ ವಿವಾದ ದೇಶದ ಕೋಮುಸೌಹಾರ್ದವನ್ನು ನಿರ್ಣಾಯಕವಾಗಿ ಹಾಳುಗೆಡವಿಬಿಟ್ಟಿತ್ತು. ಈ ದುರಂತಕ್ಕೆ ನೇರವಾಗಿ ಕಾರಣರಾದವರು ಇರ್ಫಾನ್ ಹಬೀಬ್ ನೇತೃತ್ವದ ನಮ್ಮ ಇತಿಹಾಸಕಾರರು! ಇವರಿಗೆ ಯಾವ ಶಿಕ್ಷೆ ವಿಧಿಸಬೇಕು?

ಮನುಜಕುಲದ ನಾಗರಿಕತೆಯ ತೊಟ್ಟಿಲೆಂಬ ಹಿರಿಮೆಗೆ ಭಾರತ ಹಕ್ಕುದಾರನಾಗಬಹುದಾದ ಐತಿಹಾಸಿಕ ಸಂಶೋಧನೆಯೊಂದನ್ನು ‘ಕಾಕ’ ಇತಿಹಾಸಕಾರರು ಕಡೆಗಣಿಸಿದ್ದು, ಅದರ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವೂ ಇದ್ದಿರಬಹುದಾದ ಪ್ರಕರಣವೊಂದನ್ನು ನಿಮಗೆ ಹೇಳಬೇಕು. ನಾಲ್ಕು-ನಾಲ್ಕೂವರೆ ಸಾವಿರ ವರ್ಷಗಳ ಹಿಂದೆ ಈಜಿಪ್ಟ್​ನಲ್ಲಿ ನಿರ್ವಣವಾದ ಪಿರಮಿಡ್​ಗಳು ಇಂದಿನ 21ನೆಯ ಶತಮಾನದಲ್ಲಿ ನಮಗೆ ಅತ್ಯದ್ಭುತಗಳಾಗಿ ಕಾಣುತ್ತವೆ. ಅದಕ್ಕೂ ಅಚ್ಚರಿಯ ವಿಷಯವೆಂದರೆ, ನಮಗೆ ಅತಿಪ್ರಾಚೀನವೆನಿಸುವ ಪಿರಮಿಡ್​ಗಳನ್ನು ನಿರ್ವಿುಸಿದವರೇ ‘ಅಬ್ಬ, ಇದೆಷ್ಟು ಪ್ರಾಚೀನ!’ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ‘ಅತಿ ಅತಿ ಪ್ರಾಚೀನ’ ನಗರದ ಅವಶೇಷಗಳು ಭಾರತದಲ್ಲಿ ಪತ್ತೆಯಾಗಿವೆ. ಗುಜರಾತ್ ತೀರದ ಖಂಭಾತ್ ಕೊಲ್ಲಿಯಲ್ಲಿ ವೈಜ್ಞಾನಿಕ ವಿಧಾನಗಳ ಮೂಲಕ ಈ ಅವಶೇಷಗಳು ಸ್ಪಷ್ಟವಾಗಿ ಪತ್ತೆಯಾದದ್ದು 1999-2001ರಲ್ಲಿ. ಆಗ ಕೇಂದ್ರದಲ್ಲೂ, ಗುಜರಾತ್ ರಾಜ್ಯದಲ್ಲೂ ಇದ್ದದ್ದು ಬಿಜೆಪಿ ಸರ್ಕಾರ. ಅವಶೇಷಗಳ ಬಗ್ಗೆ 2001ರ ಉತ್ತರಾರ್ಧದಲ್ಲಿ ಮಾಹಿತಿಗಳು ಹೊರಬರತೊಡಗಿದಂತೇ ‘ಕಾಕ’ ಇತಿಹಾಸಕಾರರು ಅಯೋಧ್ಯಾ ವಿಷಯದಲ್ಲಿ ಮಾಡಿದ್ದಂತೆ ಅದೆಲ್ಲವನ್ನೂ ಅಲ್ಲಗಳೆಯಲು ಟೊಂಕಕಟ್ಟಿ ನಿಂತರು. ಭಾರತದಲ್ಲಿ ಇತಿಹಾಸ ರಚನೆ, ಅಧ್ಯಯನ ಹಾಗೂ ಬೋಧನೆ ದಶಕಗಳಿಂದಲೂ ಎಡಪಂಥೀಯರ ಕಪಿಮುಷ್ಟಿಯಲ್ಲಿದೆ ಮತ್ತು ಮಾಧ್ಯಮದಲ್ಲೂ ಅವರ ದಟ್ಟಪ್ರಭಾವವಿದೆ ಎಂಬ ಕಹಿವಾಸ್ತವಗಳನ್ನು ನಾವಿಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳಬೇಕು.

ಖಂಭಾತ್ ಅವಶೇಷಗಳ ಪತ್ತೆಯ ಸುದ್ದಿ ಅಂದಿನ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಮಂತ್ರಿ ಮುರಳಿ ಮನೋಹರ್ ಜೋಷಿಯವರ ಹೇಳಿಕೆಯೊಂದಿಗೆ ಬಿಬಿಸಿ ಮೂಲಕ ಜಗತ್ತಿಗೆ ದೊಡ್ಡದಾಗಿ ಬಿತ್ತರವಾದದ್ದು 2002ರ ಜನವರಿ 19ರಂದು. ಅದಾಗಿ ಸರಿಯಾಗಿ ಎಂಟೇ ದಿನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಮುಸ್ಲಿಮರು ಗೋಧ್ರಾದಲ್ಲಿ ಸಬರ್​ವುತಿ ಎಕ್ಸ್​ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿಹಚ್ಚಿ 56 ಕರಸೇವಕರನ್ನು ಕೊಂದು ಪಾಕಿಸ್ತಾನಕ್ಕೆ ಓಡಿಹೋಗಿ ಆಶ್ರಯ ಪಡೆದರು. ಪ್ರತಿಕ್ರಿಯೆಯಾಗಿ ಗುಜರಾತ್ ಹಿಂಸಾಚಾರದಲ್ಲಿ ಹೊತ್ತಿ ಉರಿಯತೊಡಗಿತು. ಇತ್ತೀಚಿನ ದಿನಗಳ ಮಹಾನ್ ಪುರಾತತ್ತ್ವ ಸಂಶೋಧನೆಗಾಗಿ, ನಾಗರಿಕತೆಯ ತವರು ಎಂದು ವಿಶ್ವಾದ್ಯಂತ ಎಲ್ಲ ಆಸಕ್ತರ ಗಮನಸೆಳೆಯಬೇಕಾಗಿದ್ದ ಗುಜರಾತ್, ಮತೀಯ ಅಸಹಿಷ್ಣುಗಳ, ಹಿಂದೂ ಮೂಲಭೂತವಾದಿಗಳ ತವರು ಎಂದು ಜಗತ್ತಿನೆಲ್ಲೆಡೆ ಮಾಧ್ಯಮಗಳಿಂದ ಚಿತ್ರಿತಗೊಂಡಿತು!

ನಂತರ ಯುಪಿಎ ಆಳ್ವಿಕೆಯಲ್ಲಿ ರಚಿತವಾದ ಎನ್​ಸಿಇಆರ್​ಟಿ ಇತಿಹಾಸ ಪಠ್ಯಪುಸ್ತಕಗಳಲ್ಲಿ ಖಂಭಾತ್ ಶೋಧನೆ ಸ್ಥಾನ ಪಡೆಯಲಿಲ್ಲ; ಬದಲಾಗಿ ದೊಡ್ಡದಾಗಿ ಕಾಣಿಸಿಕೊಂಡದ್ದು ಗೋಧ್ರೋತ್ತರ ಹಿಂಸಾಚಾರ. ‘ಕಾಕ’ ಸಮಾಜವಿಜ್ಞಾನಿಗಳ ಗರಡಿಯಲ್ಲಿ ತಯಾರಾಗಿದ್ದ ಪತ್ರಕರ್ತ-ಪತ್ರಕರ್ತೆಯರು ಗೋಧ್ರೋತ್ತರ ಹಿಂಸಾಚಾರದ ಬಗ್ಗೆ ಏಕಮುಖ ವರದಿಗಳನ್ನು ಮಾಡಿದ್ದು ಈಗ ಇತಿಹಾಸ. ಈ ಕುಕೃತ್ಯವನ್ನು ‘ಕಾಕ’ ಇತಿಹಾಸಕಾರರು ಮುಂದುವರಿಸಿದರು. ಎಂಟನೆಯ ತರಗತಿಯ ಪಠ್ಯಪುಸ್ತಕದಲ್ಲಿ ಗೋಧ್ರೋತ್ತರ ಹಿಂಸಾಚಾರವನ್ನು ‘ಈ ಕಾಲದ ಜಗತ್ತಿನ ಯುದ್ಧಗಳಲ್ಲೇ ಅತ್ಯಂತ ಕೆಟ್ಟದಾಗಿತ್ತು’ ಎಂದು ವರ್ಣಿಸುವ ಹಾಗೂ ‘ಇದನ್ನು ಮಾಡಿದವರು ಜಗತ್ತಿನ ಜನಸಂಖ್ಯೆಯಲ್ಲಿ ಐದನೆಯ ಒಂದು ಭಾಗದಷ್ಟಿರುವ ಮೂಲಭೂತವಾದಿ ಹಿಂದೂಗಳು’ ಎನ್ನುವ ಮಾತುಗಳನ್ನು 2007ರಲ್ಲಿ ಸೇರಿಸಲಾಯಿತು. ಎಳೆ ಭಾರತೀಯರಿಗೆ ಸೆಕ್ಯೂಲರಿಸಂನ ಬೋಧನೆ ಹೀಗೆ! ಹಿಂಸಾಚಾರಕ್ಕೆ ಕಾರಣವಾದದ್ದು ಕಾಂಗ್ರೆಸ್ ಬೆಂಬಲಿತ ಘಾಂಚಿ ಮುಸ್ಲಿಮರು ರೈಲುಬೋಗಿಗೆ ಬೆಂಕಿಹಚ್ಚಿ ಮಹಿಳೆಯರೂ, ಮಕ್ಕಳೂ ಸೇರಿದಂತೆ 56 ಹಿಂದೂಗಳನ್ನು ಜೀವಂತ ಸುಟ್ಟ ಅಮಾನುಷ ಪ್ರಕರಣ. ಈ ಬಗ್ಗೆ ‘ಕಾಕ’ ಇತಿಹಾಸಕಾರರು ಬರೆದ ಇತಿಹಾಸ ಪಠ್ಯಪುಸ್ತಕದಲ್ಲಿ ಒಂದಕ್ಷರವೂ ಇಲ್ಲ! ಇದು ಇವರ ವಸ್ತುನಿಷ್ಠ ಇತಿಹಾಸ! ಈಗ ಹೇಳಿ- ಗೋಧ್ರಾ ಹತ್ಯಾಕಾಂಡ, ಗೋಧ್ರೋತ್ತರ ಹಿಂಸಾಚಾರ, ಅದರ ಬಗ್ಗೆ ಮಾಧ್ಯಮದ ವರದಿ, ನಂತರ ಅದು ಇತಿಹಾಸ ಪಠ್ಯಪುಸ್ತಕಗಳಲ್ಲಿ ದಾಖಲಾದ ಬಗೆ- ಇವುಗಳ ಹಿಂದೆ ಯಾವುದೇ ರಾಷ್ಟ್ರೀಯ-ಅಂತಾರಾಷ್ಟ್ರೀಯ ಷಡ್ಯಂತ್ರ ಇರಲಿಲ್ಲವೇ? ಅದರಲ್ಲಿ ನಮ್ಮ ‘ಕಾಕ’ ಮಾಧ್ಯಮಗಳ, ಇತಿಹಾಸಕಾರರ ಪಾತ್ರ ಇರಲಿಲ್ಲವೇ?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)