Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ರಾಷ್ಟ್ರೀಯ ಶಕ್ತಿ ವರ್ಧನೆಗೆ ಹಲವು ಸವಾಲುಗಳು

Wednesday, 18.07.2018, 3:03 AM       No Comments

| ಪ್ರೇಮಶೇಖರ

1998ರ ಮಾರ್ಚ್​ನಲ್ಲಿ ಸೀತಾರಾಮ ಕೇಸರಿಯವರನ್ನು ಅವಮಾನಕರವಾಗಿ ಕೆಳಗೆ ತಳ್ಳಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡರು. ಅದಾದ 2 ತಿಂಗಳಲ್ಲಿ ವ್ಲಾದಿಮಿರ್ ಪುತಿನ್ ರಷ್ಯಾ ಮಂತ್ರಿಮಂಡಲದ ಚೇರ್ಮನ್ ಆದರು. ಅದರ ಮರುತಿಂಗಳು ಪಾಕಿಸ್ತಾನ ಕಾರ್ಗಿಲ್ ಮೂಲಕ ಹಾದುಹೋಗುವ ಶ್ರೀನಗರ-ಲೇಹ್ ಹೆದ್ದಾರಿಯನ್ನು ಕತ್ತರಿಸಲು ಶೆಲ್ ದಾಳಿ ಆರಂಭಿಸಿತು. ಈ ಮೂರೂ ಬೆಳವಣಿಗೆಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡರೂ ಅವೆಲ್ಲವೂ ಒಟ್ಟುಗೂಡಿ ಭಾರತದ ರಾಷ್ಟ್ರೀಯ ಶಕ್ತಿಗೆ ಮಾರಕವಾದದ್ದಕ್ಕೆ ಮುಂದಿನ ವರ್ಷಗಳು ಸಾಕ್ಷಿಯಾದವು. ಇವೆಲ್ಲವೂ ಕೇವಲ ಕಾಕತಾಳೀಯವೇ ಅಥವಾ ಭಾರತವನ್ನು ಹಾನಿಗೀಡಾಗಿಸುವ ರಹಸ್ಯ ಷಡ್ಯಂತ್ರವೇ ಎನ್ನುವುದನ್ನು ಪರಿಶೀಲಿಸೋಣ. ಅದಕ್ಕಾಗಿ ಇತಿಹಾಸ, ವರ್ತಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ.

ಅಂತೋನಿಯಾ ಮೈನೋ ಎಂಬ ಹುಟ್ಟು ಹೆಸರಿನ ಸೋನಿಯಾ ಗಾಂಧಿಯವರ ತಂದೆ ಸ್ಟೆಫಾನೋ ಮೈನೋ ಎರಡನೆಯ ಮಹಾಯುದ್ಧದಲ್ಲಿ ರಷಿಯನ್ ಸೇನೆಗೆ ಸೆರೆಸಿಕ್ಕಿ ಸೋವಿಯತ್ ಕಾರಾಗೃಹದಲ್ಲಿ ಎರಡುವರ್ಷ ಬಂಧನದಲ್ಲಿದ್ದರು. ಅಲ್ಲಿ ಅವರನ್ನು ಸೋವಿಯತ್ ಗುಪ್ತಚರ ಸಂಸ್ಥೆ ಕೆಜಿಬಿ ತನ್ನ ಹಸ್ತಕನನ್ನಾಗಿ ಬದಲಿಸಿಕೊಂಡಂತೆ ಕಾಣುತ್ತದೆ. ಇತರ ಯುದ್ಧಕೈದಿಗಳಿಗಿಂತ ಬೇಗನೆ ಬಿಡುಗಡೆಯಾಗಿ ಇಟಲಿಗೆ ಹಿಂತಿರುಗಿದ ಸ್ಟೆಫಾನೋ ಮೈನೋ ಕೆಜಿಬಿಗಾಗಿ ಕೆಲಸ ಮಾಡತೊಡಗಿದರು ಎಂದೂ ಹೇಳಲಾಗುತ್ತದೆ.

ಇದೇ ಸಮಯದಲ್ಲಿ ಸೋವಿಯತ್ ಯೂನಿಯನ್ ಭಾರತದ ಬಗ್ಗೆ ಆಸಕ್ತಿ ತಳೆಯಿತು. ಭಾರತವನ್ನು 17 ಸಣ್ಣ ಸ್ವತಂತ್ರ ದೇಶಗಳಾಗಿ ವಿಂಗಡಿಸುವಂತೆ ಭಾರತೀಯ ಕಮ್ಯೂನಿಸ್ಟ್ ಪಕ್ಷ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿಕೊಂಡದ್ದರ ಹಿಂದಿದ್ದದ್ದು ಸೋವಿಯತ್ ಷಡ್ಯಂತ್ರ. ಭಾರತವೆಂಬ ವಿಶಾಲ ಭೌಗೋಳಿಕ ವಲಯದಲ್ಲಿ ಹಲವಾರು ಪುಟ್ಟಪುಟ್ಟ ದೇಶಗಳಿದ್ದರೆ ಅವುಗಳ ಮೇಲೆ (ಪೂರ್ವ ಯುರೋಪಿನಲ್ಲಿ ಮಾಡಿದಂತೆ) ಕಮ್ಯೂನಿಸ್ಟ್ ಸರ್ಕಾರಗಳನ್ನು ಹೇರುವುದು ಸುಲಭ ಮತ್ತು ಆ ಮೂಲಕ ಈ ಪ್ರದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಹಿಂದೂ ಮಹಾಸಾಗರ ತೀರದಲ್ಲಿ ಬಂದರುಗಳನ್ನು ಹೊಂದುವ ರಷ್ಯಾದ ಐತಿಹಾಸಿಕ ಬಯಕೆಯನ್ನು ಪೂರ್ಣಗೊಳಿಸಿಕೊಳ್ಳಬಹುದು ಎಂಬುದು ಸೋವಿಯತ್ ನಾಯಕರ ಹಂಚಿಕೆಯಾಗಿತ್ತು. ಆದರೆ ಈ ಹಂಚಿಕೆಗೆ ಬ್ರಿಟಿಷರು ತಣ್ಣೀರೆರಚಿದ್ದರಿಂದ ಇಲ್ಲಿ ಪ್ರಭಾವ ವಿಸ್ತರಿಸಲು ಮಾಸ್ಕೋ ಬೇರೆ ವಿಧಾನಗಳನ್ನು ಹುಡುಕತೊಡಗಿತು. ಸ್ವಾತಂತ್ರಾ್ಯನಂತರ ಭಾರತದ ನೀತಿಗಳನ್ನು ತನಗನುಕೂಲವಾಗುವಂತೆ ರೂಪಿಸುವುದು ನೆಹರುರ ಸಹಕಾರದಿಂದಾಗಿ ಮಾಸ್ಕೋಗೆ ತಕ್ಕಮಟ್ಟಿಗೆ ಸಾಧ್ಯವಾಯಿತು. ಆದರೆ ನೆಹರು ನಿಧನಾನಂತರ ಪ್ರಧಾನಿ ಲಾಲ್ ಬಹಾದ್ದುರ್ ಶಾಸ್ತ್ರಿ ಭಾರತವನ್ನು ವಿದೇಶಗಳ ಪ್ರಭಾವದಿಂದ ಮುಕ್ತಗೊಳಿಸಿ ಸ್ವತಂತ್ರ ಹಾದಿಗೊಯ್ಯತೊಡಗಿದರು. ಇದು ಮಾಸ್ಕೋಗೆ ಆಘಾತದ ಬೆಳವಣಿಗೆ.

ಅದೇ ಸಮಯಕ್ಕೆ ಸರಿಯಾಗಿ, ಕೆಜಿಬಿ ಜತೆ ಸಂಬಂಧವಿದ್ದ ಸ್ಟೆಫಾನೋ ಮೈನೋ ತಮ್ಮ ಹಿರಿಯ ಮಗಳು ಅಂತೋನಿಯಾರನ್ನು ಇಂಗ್ಲೆಂಡಿಗೆ ಕಳುಹಿಸಿದರು. ಯಾಕಾಗಿ ಎನ್ನುವುದು ಸ್ಪಷ್ಟವಿಲ್ಲ. ಕೇಂಬ್ರಿಜ್ ವಿ.ವಿ.ಯಲ್ಲಿ ಅಂತೋನಿಯಾ ವಿದ್ಯಾರ್ಥಿನಿಯಾಗಿದ್ದ ಯಾವ ದಾಖಲೆಯೂ ಇಲ್ಲ. (ತಾವು ಕೇಂಬ್ರಿಜ್ ಯುನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದಾಗಿ ಲಿಖಿತವಾಗಿ ಘೊಷಿಸಿಕೊಳ್ಳುತ್ತಿದ್ದ ಸೋನಿಯಾ ಆ ಬಗ್ಗೆ ನ್ಯಾಯಾಲಯದಲ್ಲಿ ಕೇಸ್ ದಾಖಲಾದ ಮೇಲೆ ಹಾಗೆ ಹೇಳಿಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎನ್ನುವುದು ಗಮನಿಸಬೇಕಾದ ಅಂಶ). ಆದರೆ ಕೇಂಬ್ರಿಜ್​ನ ರೆಸ್ಟೋರೆಂಟ್ ಒಂದರಲ್ಲಿ ಸೋನಿಯಾ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದರು. ಆಗ ಇಂದಿರಾ ಪುತ್ರ ರಾಜೀವ್ ಗಾಂಧಿ ಕೇಂಬ್ರಿಜ್​ನಲ್ಲಿ ವಿದ್ಯಾರ್ಥಿಯಾಗಿದ್ದರು. ರಾಜೀವ್ ಮತ್ತು ಅಂತೋನಿಯಾ ಭೇಟಿಯಾದರು, ಇಬ್ಬರ ನಡುವೆ ಪ್ರೇಮ ಅಂಕುರಿಸಿತು ಎನ್ನುವುದೀಗ ಇತಿಹಾಸ. 1968ರಲ್ಲಿ ರಾಜೀವ್-ಸೋನಿಯಾ ವಿವಾಹವಾಯಿತು, ಸೋನಿಯಾ ಭಾರತದ ಪ್ರಧಾನಮಂತ್ರಿಯ ಸೊಸೆಯಾದರು, 1984ರಲ್ಲಿ ಇಂದಿರಾ ಗಾಂಧಿ ಹತ್ಯೆ ತರುವಾಯ ಸೋನಿಯಾ ಪ್ರಧಾನಮಂತ್ರಿಯ ಪತ್ನಿಯಾದರು. ಗಮನಿಸಬೇಕಾದ ವಿಷಯವೆಂದರೆ ಆ ದಿನಗಳಲ್ಲಿ ರಾಜೀವ್ ಮತ್ತವರ ಕುಟುಂಬದವರಿಗೆ ಕೆಜಿಬಿಯಿಂದ ನಿಯತವಾಗಿ ಹಣ ಸಂದಾಯವಾಗುತ್ತಿತ್ತು ಎಂಬ ದಾಖಲೆಗಳಿರುವ ಕೆಜಿಬಿ ಫೈಲ್​ಗಳ ಸಂಖ್ಯೆಗಳನ್ನೇ ಉಲ್ಲೇಖಿಸಿ ಡಾ. ಯೆವ್ಗೆನಿಯಾ ಆಲ್ಬಾತ್ಸ್ ತಮ್ಮ ಱಖಜಛಿ ಖಠಿಚಠಿಛಿ ಡಿಜಿಠಿಜಜ್ಞಿ ಚ ಖಠಿಚಠಿಛಿ, ಖಜಛಿ ಓಎಆ ಜ್ಞಿ ಖಟಡಜಿಛಿಠಿ ಖ್ಞಿಜಿಟ್ಞಱ ಕೃತಿಯಲ್ಲಿ ಬರೆದಿದ್ದಾರೆ. ಡಾ. ಅಲ್ಬಾತ್ಸ್ ಸಾಮಾನ್ಯರೇನಲ್ಲ. ಕೆಜಿಬಿಯ ವ್ಯವಹಾರಗಳನ್ನು ಪರಿಶೀಲಿಸಲು ರಷ್ಯಾ ಅಧ್ಯಕ್ಷ ಬೊರಿಸ್ ಯೆಲ್ತ್​ಸಿನ್ 1991ರಲ್ಲಿ ನೇಮಿಸಿದ ಕೆಜಿಬಿ ಕಮಿಶನ್​ನ ಸದಸ್ಯೆ ಈಕೆ. ಹೀಗಾಗಿ ಈ ಪತ್ರಕರ್ತೆಗೆ ಕೆಜಿಬಿ ರಹಸ್ಯ ಫೈಲ್​ಗಳನ್ನು ಖುದ್ದಾಗಿ ನೋಡಿ ವಿವರಗಳನ್ನು ದಾಖಲಿಸಿಕೊಳ್ಳುವ ಅವಕಾಶವಿತ್ತು.

ಸೋನಿಯಾ ಮಾರ್ಚ್ 1998ರಲ್ಲಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಮೇನಲ್ಲಿ ರಷ್ಯಾ ಮಂತ್ರಿಮಂಡಲದ ಚೇರ್ಮನ್ ಆದ ವ್ಲಾದಿಮಿರ್ ಪುತಿನ್ ಕಳೆದೆರಡು ದಶಕಗಳಲ್ಲಿ ಪ್ರಧಾನಮಂತ್ರಿ ಅಥವಾ ಅಧ್ಯಕ್ಷ ಸ್ಥಾನಕ್ಕಂಟಿಕೊಂಡು ನಿರಂತರವಾಗಿ ರಷ್ಯಾದ ಅಘೊಷಿತ ಸರ್ವಾಧಿಕಾರಿಯಾಗಿದ್ದಾರೆ. ಈ ಪುತಿನ್ ಮಾಜಿ ಕೆಜಿಬಿ ಉನ್ನತಾಧಿಕಾರಿ! ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲೇ ಹಸ್ತಕ್ಷೇಪ ಎಸಗಬಹುದಾದ ಈ ಮಹತ್ವಾಕಾಂಕ್ಷಿಗೆ 2004ರ ಭಾರತೀಯ ಲೋಕಸಭಾ ಚುನಾವಣೆಯಲ್ಲಿ ಕೈಯಾಡಿಸುವುದೇನೂ ಕಷ್ಟವಾಗಿದ್ದಿರಲಾರದು. ಇಲ್ಲದಿದ್ದರೆ, ದೇಶದ ಹಿತಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿ ನಿಷ್ಠೆಯಿಂದ ಕಾರ್ಯಗತಗೊಳಿಸುತ್ತಿದ್ದ ವಾಜಪೇಯಿ ಸರ್ಕಾರ ಸೋಲಲೆಲ್ಲಿ ಸಾಧ್ಯವಿತ್ತು?

2004ರಲ್ಲಿ ಸೋನಿಯಾ ನೇತೃತ್ವದ ಯುಪಿಎ ಅಧಿಕಾರಕ್ಕೆ ಬರುತ್ತಿದ್ದಂತೆ ಅಧ್ಯಕ್ಷ ಪುತಿನ್ ದೆಹಲಿಗೆ ರಷ್ಯನ್ ರಾಯಭಾರಿಯಾಗಿ ಕಳುಹಿಸಿದ್ದು ವ್ಯಾಚೆಸ್ಲಾವ್ ಇವಾನೊವಿಚ್ ತ್ರಬ್ನಿಕೋವ್​ರನ್ನು. ಈ ತ್ರಬ್ನಿಕೋವ್ ಯಾರು ಗೊತ್ತೇ? ಎಪ್ಪತ್ತರ ದಶಕದ ಆದಿಯಲ್ಲಿ ಸೋನಿಯಾ ಭಾರತದ ಪ್ರಧಾನಮಂತ್ರಿಯ ಸೊಸೆಯಾಗಿ ಅವರ ಮನೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದ್ದ ಹಾಗೂ ಭಾರತ ಸೋವಿಯತ್ ಕಪಿಮುಷ್ಟಿಗೆ ಬಲವಾಗಿ ಸಿಲುಕಿಹೋಗುತ್ತಿದ್ದ ಕಾಲದಲ್ಲಿ ನವದೆಹಲಿಯಲ್ಲಿದ್ದ ಕೆಜಿಬಿ ಗೂಢಾಚಾರಿಕಾ ಕಾರ್ಯಾಲಯದ ಮುಖ್ಯಸ್ಥ! ಆತ ಗೂಢಚಾರಿಕೆ ನಡೆಸುತ್ತಿದ್ದುದು ಸೋವಿಯತ್ ವಾರ್ತಾಸಂಸ್ಥೆ ನೊವೋಸ್ತಿ ಪ್ರೆಸ್ ಏಜೆನ್ಸಿಯ ವರದಿಗಾರನ ಮುಖವಾಡ ಧರಿಸಿ! ಪುತಿನ್​ರ ‘ಭಾರತಪ್ರೀತಿ’ಯ ಬಗ್ಗೆ ಇನ್ನು ನಾನು ಹೆಚ್ಚಿಗೇನೂ ಹೇಳಬೇಕಾಗಿಲ್ಲ ಅಲ್ಲವೇ?

ಇನ್ನು ಪಾಕಿಸ್ತಾನದತ್ತ ಹೊರಳೋಣ. ಪೀಠಿಕೆಯಾಗಿ, ಸೋನಿಯಾರ ಪಾಕ್ ಸಖ್ಯದ ಆರಂಭಿಕ ಕುರುಹೊಂದನ್ನು ನಿಮಗೆ ನೀಡುತ್ತೇನೆ. 1966ರಲ್ಲಿ ರಾಜೀವ್ ಗಾಂಧಿ ಕೇಂಬ್ರಿಜ್​ನಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ತೊರೆದು ಲಂಡನ್​ನ ಇಂಪೀರಿಯಲ್ ಕಾಲೇಜ್ ಆಫ್ ಇಂಜಿನಿಯರಿಂಗ್​ಗೆ ಹೋದಾಗ ಸೋನಿಯಾ ಕೂಡ ಲಂಡನ್​ಗೆ ಹೋಗಿ ಅಲ್ಲೊಂದು ನೌಕರಿ ಹಿಡಿದರು. ಇದರರ್ಥ, ರಾಜೀವ್ ಇಲ್ಲದ ಕೇಂಬ್ರಿಜ್​ನಲ್ಲಿ ಇರಬೇಕಾದ ಅಗತ್ಯ ಸೋನಿಯಾರಿಗಿರಲಿಲ್ಲ! ಲಂಡನ್​ನಲ್ಲಿ ಸೋನಿಯಾ ನೌಕರಿ ಹಿಡಿದದ್ದು ಪಾಕಿಸ್ತಾನಿ ಕೈಗಾರಿಕೋದ್ಯಮಿ ಸಲ್ಮಾನ್ ತಸ್ಸೀರ್​ನ ಒಡೆತನದ ಕಾರ್ಯಾಲಯವೊಂದರಲ್ಲಿ! ತಸ್ಸೀರ್​ರ ಕಾರ್ಯಕ್ಷೇತ್ರ ದುಬೈ ಆಗಿದ್ದರೂ ಅವರು ಹೆಚ್ಚುಸಮಯ ಕಳೆಯುತ್ತಿದ್ದುದು ಲಂಡನ್​ನಲ್ಲಿ. ಅವರು ‘ಕೇವಲ’ ಕೈಗಾರಿಕೋದ್ಯಮಿಯಷ್ಟೇ ಆಗಿದ್ದರು ಎಂದು ಖಡಾಖಂಡಿತವಾಗಿ ಹೇಳಲು ಕಷ್ಟವಿದೆ!

ಈಗ ಪಾಕ್ ನೀತಿಗಳನ್ನು ಪರಿಶೀಲಿಸೋಣ. ನೇರ ಯುದ್ಧದಲ್ಲಿ ಭಾರತವನ್ನು ಮಣಿಸಲಾಗದು ಎಂಬ ‘ಜ್ಞಾನೋದಯ’ ಪಾಕ್ ಆಳರಸರಿಗೆ 1971ರ ಯುದ್ಧದಲ್ಲಿ ಆದ ಮೇಲೆ ಅವರು ಹಿಡಿದ ದಾರಿ ಪರೋಕ್ಷ ಸಮರ ಅಂದರೆ ಭಯೋತ್ಪಾದನೆಯ ಮೂಲಕ ಭಾರತದ ರಾಷ್ಟ್ರೀಯ ಶಕ್ತಿಯನ್ನು ಕುಗ್ಗಿಸುವುದು. ಈ ನಿಟ್ಟಿನಲ್ಲಿ ಪಾಕಿಸ್ತಾನದ ಕುಖ್ಯಾತ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್​ಐ) ಸಂಸ್ಥೆಯ ನಿರ್ದೇಶಕ ಹಮೀದ್ ಗುಲ್ ‘ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡುತ್ತೇವೆ’ ಎಂಬ ನೀತಿಯನ್ನು ರೂಪಿಸಿ ಕಾರ್ಯಾಚರಣೆಗೆ ತಂದರು. 1981ರಲ್ಲಿ ಪಂಜಾಬ್​ನಲ್ಲಿ ಖಲಿಸ್ತಾನ್ ಚಳವಳಿ ಆರಂಭವಾಗಿ ನಂತರ ಆ ಪಿಡುಗು ಕಾಶ್ಮೀರಕ್ಕೂ ಹಬ್ಬಿತಷ್ಟೇ. ಪಂಜಾಬ್​ನಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಪಣತೊಟ್ಟ ಇಂದಿರಾ ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆಸಿದರು. ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋದ ರಾಜೀವ್ ಗಾಂಧಿ ಪಂಜಾಬ್​ನಲ್ಲಿ ಪಾಕಿಸ್ತಾನ ಎಸಗುತ್ತಿದ್ದ ಕುಕೃತ್ಯಗಳಿಗೆ ಪ್ರತಿಯಾಗಿ ಅಂತಹದೇ ಕೃತ್ಯಗಳನ್ನು ಸಿಂಧ್ ಮತ್ತು ಬಲೂಚಿಸ್ತಾನದಲ್ಲಿ ಆರಂಭಿಸಿದರು. ಪರಿಣಾಮವಾಗಿ ಕಂಗೆಟ್ಟ ಪಾಕಿಸ್ತಾನ ನಮ್ಮ ಪಂಜಾಬ್​ನಲ್ಲಿ ತನ್ನ ಕರಾಳ ಕೃತ್ಯಗಳನ್ನು ನಿಲುಗಡೆಗೆ ತರುವ ಒತ್ತಡಕ್ಕೊಳಗಾಯಿತು. ಆದರೆ ಮರುವರ್ಷವೇ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನಾರಂಭಿಸಿತು. ಕಾಶ್ಮೀರದ ಮೇಲಿನ ಸಾರ್ವಭೌಮತ್ವಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ರಂಗದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ನೀತಿಗಳನ್ನು ಹಮ್ಮಿಕೊಂಡ ನರಸಿಂಹರಾವ್ 1995ರ ಹೊತ್ತಿಗೆ ಕಣಿವೆಯಲ್ಲಿ ಗಣನೀಯವೆನ್ನಿಸುವ ಮಟ್ಟಿಗೆ ಶಾಂತಿ ಸ್ಥಾಪಿಸಿದರು.

1998ರ ನಂತರ ಕಾಂಗ್ರೆಸ್​ನ ನಕಾರಾತ್ಮಕ ನಡವಳಿಕೆಗಳಿಂದಾಗಿ ಪಾಕ್ ವಿರುದ್ಧದ ನೀತಿಗಳ ಖಡಕ್ ಅನುಷ್ಠಾನದಲ್ಲಿ ವಾಜಪೇಯಿ ಸರ್ಕಾರ ತೊಡಕು ಅನುಭವಿಸಬೇಕಾಯಿತು. ಇದರಿಂದ ಪಾಕಿಸ್ತಾನ ತನ್ನ ಕುಕೃತ್ಯಗಳನ್ನು ವೃದ್ಧಿಸಿ ಕಾರ್ಗಿಲ್ ಯುದ್ಧವನ್ನು ಭಾರತದ ಮೇಲೆ ಹೇರಿದ್ದಲ್ಲದೆ ಭಾರತೀಯ ವಿಮಾನಾಪಹರಣದ ಮೂಲಕ ಮೂವರು ಘಾತಕ ಭಯೋತ್ಪಾದಕರನ್ನು ಬಿಡುಗಡೆಗೊಳಿಸುವ ಇಕ್ಕಟ್ಟಿಗೆ ವಾಜಪೇಯಿ ಸರ್ಕಾರವನ್ನು ಸಿಲುಕಿಸಿತು. ಯುಪಿಎ ಅಧಿಕಾರಕ್ಕೆ ಬಂದ ಮೇಲಂತೂ ಭಾರತವನ್ನು ಆಂತರಿಕವಾಗಿ ವಿಚ್ಛಿದ್ರಗೊಳಿಸಿ ಆ ಮೂಲಕ ದೇಶದ ಸ್ಥೈರ್ಯವನ್ನು ಹಾಳುಗೆಡಹುವ ಪಾಕಿಸ್ತಾನದ ಹುನ್ನಾರಕ್ಕೆ ಭಾರತ ಸರ್ಕಾರದಿಂದಲೇ ಸಹಕಾರ ದೊರೆಯತೊಡಗಿತು. ಜಯಚಂದ್ರರು, ಮೀರ್ ಜಾಫರ್​ರು ಸರ್ಕಾರಿವಲಯದಲ್ಲೇ ಅವತರಿಸಿದರು. ಅವರು ಬಹಿರಂಗವಾಗಿ ಕಾಣಿಸಿಕೊಂಡದ್ದು ಮಾಲೆಗಾಂವ್ ಸ್ಫೋಟ ಮತ್ತು ಸಂಜೌತಾ ಎಕ್ಸ್​ಪ್ರೆಸ್ ಬಾಂಬ್ ದಾಳಿಗಳಾದಾಗ. ಈ ಪ್ರಕರಣಗಳನ್ನು ಅವಲೋಕಿಸಿದರೆ ಕಾಂಗ್ರೆಸ್ ಸರ್ಕಾರ ಹಾಗೂ ಭಯೋತ್ಪಾದಕ ಸಂಘಟನೆಗಳ ನಡುವಿನ ತಾಳಮೇಳ ಗೋಚರವಾಗುತ್ತದೆ. ಹಿಂದೆಲ್ಲ ಭಯೋತ್ಪಾದಕ ಚಟುವಟಿಕೆಗಳಾದಾಗ ಅದರ ಹಿಂದಿದ್ದ ಸಂಘಟನೆಗಳು ರಾಜಾರೋಷವಾಗಿ ಅದನ್ನು ದೊಡ್ಡ ಸಾಧನೆಯೆಂಬಂತೆ ಬಣ್ಣಿಸಿಕೊಳ್ಳುತ್ತಿದ್ದವು. ಆದರೆ ಯುಪಿಎ ಅಧಿಕಾರ ಹಿಡಿಯುತ್ತಿದ್ದಂತೆ ಅವುಗಳ ನೀತಿ ಬದಲಾಯಿತು. ಭಯೋತ್ಪಾದಕ ಕೃತ್ಯಗಳನ್ನೆಸಗಿ ಮೌನವಾಗಿಬಿಡುತ್ತಿದ್ದವು. ಪರಿಣಾಮವಾಗಿ ಭಯೋತ್ಪಾದಕ ಕೃತ್ಯಗಳ ಹಿಂದೆ ಯಾರಿದ್ದಾರೆಂದು ದೇಶಕ್ಕೆ ತಿಳಿಯದೇಹೋದಾಗ ಆಗಿನ ಕೇಂದ್ರ ಮಂತ್ರಿಗಳಾದ ಪಿ. ಚಿದಂಬರಂ ಮತ್ತು ಸುಶೀಲ್ ಕುಮಾರ್ ಶಿಂಧೆ ‘ಕೇಸರಿ ಭಯೋತ್ಪಾದನೆ’, ‘ಹಿಂದೂ ಭಯೋತ್ಪಾದನೆ’ ಎಂಬ ಎಂದೂ ಕೇಳರಿಯದ ಭಯೋತ್ಪಾದನೆಯನ್ನು ಸೃಷ್ಟಿಸಿ ಹರಡತೊಡಗಿದರು. ರಾಹುಲ್ ಗಾಂಧಿಯವರಂತೂ ‘ಲಷ್ಕರ್-ಎ-ತೋಯ್ಬಾಗಿಂತಲೂ ಕೇಸರಿ ಭಯೋತ್ಪಾದನೆ ಹೆಚ್ಚು ಅಪಾಯಕಾರಿ’ ಎಂದು 2009ರ ಜುಲೈ 20ರಂದು ಅಮೆರಿಕದ ರಾಯಭಾರಿಗೇ ಹೇಳಿದರು! ಪರಿಣಾಮ, ಭಯೋತ್ಪಾದನೆಯ ವಿರುದ್ಧದ ಸಮರವೇ ದಿಕ್ಕುತಪ್ಪಿತು. ಪಾಕಿಸ್ತಾನಕ್ಕೆ ಬೇಕಾಗಿದ್ದದ್ದು ಇದೇ. ಭಾರತವನ್ನು ಹಾಳುಗೆಡಹುವ ಅತ್ಯುತ್ತಮ ವಿಧಾನವೆಂದರೆ ಇಲ್ಲಿನ ಬಹುಸಂಖ್ಯಾತರ ಮನೋಸ್ಥೈರ್ಯ ಕುಗ್ಗಿಸುವುದು ಎಂದು ಪಾಕ್ ನಾಯಕರಿಗೆ ಗೊತ್ತೇ ಇತ್ತು.

ಇದೆಲ್ಲದರ ಅರ್ಥ 1998-2004ರ ಅವಧಿಯಲ್ಲಿ ಭಾರತದ ವಿರುದ್ಧ ಷಡ್ಯಂತ್ರಗಳು ಹಾಗೂ ನಂತರ 2004-14ರ ಅವಧಿಯಲ್ಲಿ ಭಾರತದ ಆಂತರಿಕ ಹಾಗೂ ವಿದೇಶ ನೀತಿಗಳು ರೂಪಿತವಾದದ್ದು ಇಸ್ಲಾಮಾಬಾದ್ ಮತ್ತು ಮಾಸ್ಕೋಗಳಲ್ಲಿ! 2014ರಲ್ಲಿ ಮೋದಿ ಸರ್ಕಾರ ಬಂದಾಗಿನಿಂದ ಇದಕ್ಕೆ ತಡೆಬಿದ್ದಿದೆ. ಈ 4 ವರ್ಷಗಳಲ್ಲಿ ಕಾಶ್ಮೀರದ ಹೊರತಾಗಿ ದೇಶದೊಳಗೆ ಒಂದಾದರೂ ಭಯೋತ್ಪಾದಕ ಕೃತ್ಯಗಳು ಘಟಿಸಿಲ್ಲದಿರುವುದು ಏನು ಹೇಳುತ್ತದೆ? ಭಯೋತ್ಪಾದಕ ಕೃತ್ಯಗಳಿಗೆ ಅವಕಾಶ ನೀಡಿ ಅವನ್ನು ಹಿಂದೂಗಳ (ಅಥವಾ ಇನ್ನಾರದೇ) ತಲೆಗೆ ಕಟ್ಟುವ ಅಗತ್ಯ ಪ್ರಸಕ್ತ ಸರ್ಕಾರಕ್ಕಿಲ್ಲ ಎನ್ನುವುದನ್ನು ಅಲ್ಲವೇ!

ತನ್ನ ನೀತಿಗಳು ಹೀಗೆ ಮಣ್ಣುಗೂಡುತ್ತಿರುವುದನ್ನು ಕಂಡು ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುವ ಅವಕಾಶವನ್ನು ಬಿಟ್ಟುಕೊಡುತ್ತಿಲ್ಲ. ಪಾಕ್ ವಿರುದ್ಧದ ಮೋದಿ ಸರ್ಕಾರದ ಖಡಕ್ ನೀತಿಗಳನ್ನು ಉನ್ಮಾದಗೊಂಡಂತೆ ಖಂಡಿಸು

ತ್ತಿದೆ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನೇತಾರರ ಹೇಳಿಕೆಗಳೂ, ಎಲ್​ಇಟಿ ನಾಯಕ ಹಫೀಜ್ ಸಯೀದ್ ಹೇಳಿಕೆಗೂ ಸಾಮ್ಯತೆಗಳು ಕಾಣುತ್ತಿವೆ. ಜತೆಗೆ, ಪುತಿನ್​ರ ರಷ್ಯಾ ಬಹಿರಂಗವಾಗಿಯೇ ಪಾಕ್ ಪರ, ಭಾರತದ ವಿರುದ್ಧ ನಿಲ್ಲತೊಡಗಿದೆ.

ಇದೆಲ್ಲವೂ ಸೂಚಿಸುವುದು 2019ರಲ್ಲಿ ಮೋದಿ ಸರ್ಕಾರವನ್ನು ಕೆಳಗಿಳಿಸುವುದು ಕಾಂಗ್ರೆಸ್, ಪಾಕಿಸ್ತಾನ ಹಾಗೂ ಪುತಿನ್​ರ ರಷ್ಯಾದ ಗುರಿ ಎನ್ನುವುದನ್ನು. ದೇಶದ ಶತ್ರುಗಳು ‘ಸೋನಿಯಾ ಕಾ ಚಿಡಿಯಾ’ ಮಾಡಿಟ್ಟಿದ್ದ ಭಾರತವನ್ನು ‘ಸೋನೆ ಕಾ ಚಿಡಿಯಾ’ ಮಾಡಿ ಅದರ ರಾಷ್ಟ್ರೀಯ ಶಕ್ತಿಯನ್ನು ವೃದ್ಧಿಸುವ ಮೋದಿಯವರ ಕನಸಿಗೆ ಒಳಗೂ ಹೊರಗೂ ಎಷ್ಟೆಲ್ಲ ವಿರೋಧವಿದೆ! ಈ ವಾಸ್ತವದ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ಮುಂದಿರುವ ಸವಾಲುಗಳು ನಿಶ್ಚಯವಾಗಿಯೂ ಕಠಿಣ. ದೇಶದ ಪ್ರಜ್ಞಾವಂತ ಜನತೆಯ ಸಹಕಾರವಿಲ್ಲದೆ ಈ ಸವಾಲುಗಳನ್ನು ನಿಭಾಯಿಸುವುದು ಮೋದಿ ಅವರಿಗೆ ಸಾಧ್ಯವಾಗಲಾರದು. ಮುಂದಿನ ವರ್ಷದ ಚುನಾವಣೆಗಳ ಮಹತ್ವ ಅಡಗಿರುವುದು ಇಲ್ಲಿ.

Leave a Reply

Your email address will not be published. Required fields are marked *

Back To Top