More

    ನಂಬಿ ಕೇಡು ಕಾಣದವರಿಲ್ಲವೋ ಕೇಡಿಗ ಪಾಕಿಸ್ತಾನವನು!

    ನಂಬಿ ಕೇಡು ಕಾಣದವರಿಲ್ಲವೋ ಕೇಡಿಗ ಪಾಕಿಸ್ತಾನವನು!ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಂಬಂಧಗಳ ಸುಧಾರಣೆ ಮತ್ತು ಶಾಂತಿ ಸ್ಥಾಪನೆಗಾಗಿ ಎರಡೂ ದೇಶಗಳ ನಾಯಕರು ಪ್ರಯತ್ನಿಸಿದ್ದಕ್ಕೆ ಆರೂವರೆ ದಶಕಗಳ ಇತಿಹಾಸವಿದೆ. ಈ ಪ್ರಯತ್ನಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ನಡೆ, ಒಂದು ಪ್ರಕರಣದ ಹೊರತಾಗಿ, ಪಾಕಿಸ್ತಾನದಿಂದಲೇ ಬಂದಿದೆ. ಅಲ್ಲಲ್ಲಿ ತುಸು ಮಾರ್ಪಾಡಿನೊಂದಿಗೆ ಕಾಶ್ಮೀರದ ಕದನವಿರಾಮ ರೇಖೆಯನ್ನು ಅಂತಾರಾಷ್ಟ್ರೀಯ ಗಡಿಯನ್ನಾಗಿಸಿ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಕೊಳ್ಳಲು ಪ್ರಧಾನಮಂತ್ರಿ ಜವಾಹರ್​ಲಾಲ್ ನೆಹರೂ ಮತ್ತು ಅಧ್ಯಕ್ಷ ಜನರಲ್ ಇಸ್ಕಂದರ್ ಮಿರ್ಜಾ 1957-58ರಲ್ಲಿ ಸರಿಸುಮಾರು ಒಂದು ತೀರ್ವನಕ್ಕೆ ಬಂದಿದ್ದರು. ಆದರೆ, ಅದು ಘೋಷಣೆಗೊಳ್ಳುವ ಮೊದಲೇ ಇಸ್ಕಂದರ್ ಮಿರ್ಜಾ ಸೇನಾಕ್ರಾಂತಿಯಲ್ಲಿ ಪದಚ್ಯುತಗೊಂಡರು ಮತ್ತು ಹಿಂತಿರುಗಕೂಡದೆಂಬ ಕಟ್ಟಳೆಯೊಂದಿಗೆ ಲಂಡನ್​ಗೆ

    ಸಾಗಹಾಕಲ್ಪಟ್ಟರು. ಇದಕ್ಕೆ ಕಾರಣರಾದ ಜನರಲ್ ಅಯೂಬ್ ಖಾನ್ ಒಂದು ಸಂತಸಕರ ವಿಪರ್ಯಾಸದಂತೆ ಮೂರು ವರ್ಷಗಳಲ್ಲಿ ತಾವೇ ಶಾಂತಿಗೆ ಮುಂದಾದರು. ಎರಡೂ ದೇಶಗಳ ಸೇನೆಗಳನ್ನು ಒಗ್ಗೂಡಿಸಿ ಒಂದೇ ರಕ್ಷಣಾ ವ್ಯವಸ್ಥೆಯಾಗಿ ರೂಪಿಸಬೇಕು ಮತ್ತು ಅದು ಪರಸ್ಪರ ಗಡಿಯಲ್ಲಿ ಇರಬಾರದು, ಬದಲಾಗಿ ಎರಡೂ ದೇಶಗಳ ಇತರ ಗಡಿಗಳನ್ನು ರಕ್ಷಿಸುವುದು ಅದರ ಜವಾಬ್ದಾರಿಯಾಗಬೇಕು ಎನ್ನುವುದು ಅವರ ಸಲಹೆಯಾಗಿತ್ತು. ಆದರೆ, ಇದಕ್ಕೆ ನೆಹರೂ ಪ್ರತಿಕ್ರಿಯೆ ನಕಾರಾತ್ಮಕವಾಗಿತ್ತು. ‘ಜಂಟಿ ರಕ್ಷಣಾ ವ್ಯವಸ್ಥೆ! ಯಾರ ವಿರುದ್ಧ?’ ಎಂದ ಅವರ ಪ್ರಕಾರ ಭಾರತಕ್ಕಿರುವ ಏಕೈಕ ಶತ್ರು ಪಾಕಿಸ್ತಾನ ಮಾತ್ರ, ಅದರ ಗಡಿಯಿಂದ ಸೇನೆ ತೆಗೆಯುವುದಾದರೆ ಬೇರೆಲ್ಲೂ ಸೇನೆಯಿರಿಸುವ ಅಗತ್ಯ ನಮಗೆ ಇಲ್ಲ ಎಂದಾಗಿತ್ತು. ಪಾಕಿಸ್ತಾನಕ್ಕಿಂತಲೂ ಘಾತಕವಾದ ಶತ್ರು ಭಾರತಕ್ಕಿದೆ, ಇನ್ನೊಂದೇ ವರ್ಷದಲ್ಲಿ ಅದು ಮಾರಕ ದಾಳಿ ಎಸಗುತ್ತದೆ ಎಂಬ ಅರಿವೇ ಇಲ್ಲದ್ದು ಭಾರತದ ರಕ್ಷಣಾ ಸವಾಲುಗಳು ಮತ್ತು ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ರಂಗದಲ್ಲಿ ಆಗುತ್ತಿದ್ದ ಬದಲಾವಣೆಗಳ ಬಗ್ಗೆ ನೆಹರೂಗೆ ಅರಿವೇ ಇಲ್ಲದ್ದನ್ನು ಸೂಚಿಸುತ್ತವೆ. ಅದರಲ್ಲೂ ಅಕ್ಸಾಯ್ ಚಿನ್ ಅನ್ನು ವಶಕ್ಕೆ ತೆಗೆದುಕೊಳ್ಳಲು ತಮ್ಮದೇ ಆಜ್ಞೆಯ ಮೇರೆಗೆ ಭಾರತೀಯ ಸೇನೆ ಎರಡು ವರ್ಷಗಳಿಂದಲೂ ನಡೆಸುತ್ತಿದ್ದ ಮುಂಚೂಣಿ ನೀತಿ ಚೀನೀಯರನ್ನು ಕೆರಳಿಸುತ್ತಿದೆ, ಅವರು ಪ್ರತಿ ಕಾರ್ಯಾಚರಣೆಯ ಎಚ್ಚರಿಕೆ ನೀಡುತ್ತಿದ್ದಾರೆ ಎನ್ನುವುದನ್ನು ‘ಪಂಡಿತ’ ನೆಹರೂ ನಿರ್ಲಕ್ಷಿಸಿದ್ದು ಅರ್ಥಕ್ಕೆ ನಿಲುಕುವುದಿಲ್ಲ. ಒಂದುವೇಳೆ ಅಯೂಬ್ ಖಾನ್ ಸಲಹೆಯಂತೆ ಎರಡೂ ದೇಶಗಳ ಸೇನೆಗಳನ್ನು ಒಂದುಗೂಡಿಸಿದ್ದರೆ, 1962ರ ಯುದ್ಧದಲ್ಲಿ ಪಾಕಿಸ್ತಾನಿ ಸೈನಿಕರೂ ಚೀನೀಯರ ವಿರುದ್ಧ ಕಾದಾಡಿದ್ದರೆ ಏಶಿಯಾದ ಇತಿಹಾಸವೇ ಬದಲಾಗಿಹೋಗುತ್ತಿತ್ತು. ನೆಹರೂರ ನಕಾರಾತ್ಮಕ ನಡೆಯಿಂದ ವಿಚಲಿತಗೊಳ್ಳದ ಅಯೂಬ್ ಖಾನ್ ಭಾರತದ ಮೇಲೆ ಚೀನಾ ದಾಳಿಯೆಸಗಿದಾಗ ಭಾರತದ ಪರವಾಗಿ ದನಿಯೆತ್ತಿದರು. ಇದಕ್ಕೆ ನೆಹರೂ ಸರ್ಕಾರದ ಪ್ರತಿಕ್ರಿಯೆ? ಚೀನೀ ದಾಳಿ ಆರಂಭವಾದ ಮರುದಿನ ಬಾಂಬೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ನಿಂತು ರಕ್ಷಣಾ ಮಂತ್ರಿ ವಿ.ಕೆ. ಕೃಷ್ಣ ಮೆನನ್ ವಾಗ್ದಾಳಿ ಎಸಗಿದ್ದು ಪಾಕಿಸ್ತಾನದ ವಿರುದ್ಧ! ಭಾರತ ಮತ್ತು ಪಾಕಿಸ್ತಾನಗಳ ನಡುವೆ ಶಾಂತಿ ಸ್ಥಾಪನೆಯ ನಿರ್ಣಾಯಕ ಅವಕಾಶವೊಂದು ಆಗ ಕಳೆದುಹೋಯಿತು ಎಂದು ನನಗನಿಸುತ್ತದೆ.

    ಆ ಅವಕಾಶ ಕಳೆದುಹೋದ ಮೇಲೆ ಏಶಿಯಾದ ರಾಜಕಾರಣ ವೇಗವಾಗಿ ಬದಲಾಯಿತು. ಭಾರತದ್ವೇಷವನ್ನು ರಕ್ತದಲ್ಲೇ ಮೈಗೂಡಿಸಿಕೊಂಡು ಬಂದಿದ್ದ ಝುುಲ್ಪಿಕಾರ್ ಆಲಿ ಭುಟ್ಟೋರ ದುಷ್ಟ ಪ್ರಭಾವಕ್ಕೆ ಸಿಲುಕಿದ ಅಯೂಬ್ ಖಾನ್ ಭಾರತದಿಂದ ಪೂರ್ಣವಾಗಿ ಮುಖ ಹೊರಳಿಸಿ ಚೀನಾ ಜತೆ ಸ್ನೇಹ ಸಾಧಿಸಿದರು. ಆಮೇಲೇನಾಯಿತೆಂದು ನಾವೆಲ್ಲರೂ ನೋಡುತ್ತಲೇ ಇದ್ದೇವೆ.

    ಇಷ್ಟಾಗಿಯೂ, ಲಾಲ್ ಬಹಾದುರ್ ಶಾಸ್ತ್ರಿ ಸದ್ಭಾವನೆಯ ಸಂಕೇತವಾಗಿ 1965ರ ಗಣರಾಜ್ಯೋತ್ಸವಕ್ಕೆ ಪಾಕಿಸ್ತಾನದ ಕೃಷಿ ಮತ್ತು ಆಹಾರ ಮಂತ್ರಿ ರಾಣಾ ಅಬ್ದುಲ್ ಹಮೀದ್​ರನ್ನು ವಿಶೇಷ ಅತಿಥಿಯಾಗಿ ಆಮಂತ್ರಿಸಿದರು. ಆದರೆ, ಅಷ್ಟು ಹೊತ್ತಿಗಾಗಲೇ ಭಾರತದೊಂದಿಗೆ ಶಾಂತಿಗಾಗಿ ಪ್ರಯತ್ನಿಸುವುದು ವ್ಯರ್ಥ ಎಂಬ ತೀರ್ವನಕ್ಕೆ ಪಾಕಿಸ್ತಾನ ಬಂದಿತ್ತು ಮತ್ತು ದುರುಳ ಭುಟ್ಟೋರ ಒತ್ತಾಯದಿಂದ ರಣ್​ನಲ್ಲಿ ತಂಟೆ ತೆಗೆಯಲು, ಕಾಶ್ಮೀರದಲ್ಲಿ ಅಶಾಂತಿಯೆಬ್ಬಿಸಿ ಅದನ್ನು ಕಬಳಿಸಲು ಅಯೂಬ್ ಖಾನ್ ಸರ್ಕಾರ ಯೋಜನೆ ರೂಪಿಸುತ್ತಿತ್ತು. ರಾಣಾ ಸಾಹೇಬರು ದೆಹಲಿಗೆ ಬಂದುಹೋದ ಮೂರೇ ತಿಂಗಳಲ್ಲಿ ಅದು ಆರಂಭವೂ ಆಗಿಹೋಯಿತು.

    ನೆಹರೂ ಮತ್ತು ಮಿರ್ಜಾ ಮಾಡಿದ್ದನ್ನೇ 1987ರಲ್ಲಿ ಜಿಯಾ-ಉಲ್-ಹಕ್ ಮತ್ತು ರಾಜೀವ್ ಗಾಂಧಿ, 2007ರಲ್ಲಿ ಪರ್ವೆಜ್ ಮುಷರ›ಫ್ ಮತ್ತು ಮನಮೋಹನ್ ಸಿಂಗ್ ಮಾಡಹೊರಟರೂ ಕಾಣದ ಕೈಗಳು ಅಡ್ಡಬಂದವು. 1957-2007ರ ನಡುವಿನ ಶಾಂತಿ ಪ್ರಯತ್ನಗಳನ್ನು ಅವಲೋಕಿಸಿದರೆ, ಮೊದಲಿಗೆ ಭಾರತದ್ವೇಷ ಪ್ರದರ್ಶಿಸಿದ ಸೇನಾ ಸರ್ವಾಧಿಕಾರಿಗಳೇ ಕೊನೆಗೆ ಶಾಂತಿಗಾಗಿ ಪ್ರಯತ್ನಿಸಿದ್ದು ವೇದ್ಯವಾಗುತ್ತದೆ. ಆದರೆ, ಅವರೆಲ್ಲರ ಪ್ರಯತ್ನಗಳೂ ಕಾಣದ ಕೈಗಳ ಕೇಡಿಗತನಕ್ಕೆ ಒಳಗಾಗಿ ವಿಫಲಗೊಂಡವು. ಇಸ್ಕಂದರ್ ಮಿರ್ಜಾ ಮತ್ತು ಪರ್ವೆಜ್ ಮುಷರ›ಫ್ ಗದ್ದಿಗೆ ಕಳೆದುಕೊಂಡು ದೇಶಭ್ರಷ್ಟರಾದರೆ ಅಯೂಬ್ ಖಾನ್ ದುರುಳರ ದುಸ್ಸಹವಾಸಕ್ಕೆ ಸಿಲುಕಿ ಮತ್ತೆ ದ್ವೇಷದ ಹಾದಿ ಹಿಡಿದು ಅದರಲೂ ಯಶಸ್ವಿಯಾಗದೆ ಸೇನೆಯೊಳಗೇ ಅರಮನೆ ಕ್ಷಿಪ್ರಕ್ರಾಂತಿಗೆ ಬಲಿಯಾಗಿ ಮೂಲೆಗುಂಪಾದರು. ಜಿಯಾರದಂತೂ ದುರಂತ ಅಂತ್ಯ.

    ಮೇಲಿನ ನಾಲ್ಕೂ ವಿಫಲ ಪ್ರಯತ್ನಗಳು ಒಟ್ಟಿಗೆ ಸೇರಿ ಶಾಂತಿಗಾಗಿ ಪ್ರಯತ್ನಿಸಿದ್ದರ ಉದಾಹರಣೆಗಳು. ಇವುಗಳಿಗೆ ಹೊರತಾಗಿ ಏಕಪಕ್ಷೀಯ ಪ್ರಯತ್ನಗಳ ಮೊದಲ ಉದಾಹರಣೆ ಅಯೂಬ್ ಖಾನ್ ಅವರದ್ದು ಮತ್ತು ಅದನ್ನು ಹಾಳುಗೆಡವಿದ ಮೊದಲ ಹಾಗೂ ಏಕೈಕ ಭಾರತೀಯ ಉದಾಹರಣೆ ನೆಹರೂ ಅವರದ್ದು. ಅದಾದ ನಲವತ್ತು ವರ್ಷಗಳ ನಂತರ ಆರಂಭವಾಗುವ ಶಾಂತಿ ಪ್ರಸ್ತಾಪ ಸರಣಿ ಉದಾಹರಣೆಯಾಗುವುದು ಭಾರತದ ಪ್ರಯತ್ನಗಳಿಗೆ ಮತ್ತು ಅದನ್ನು ಹಾಳುಗೆಡಹುವ ಪಾಕಿಸ್ತಾನದ ಕೇಡಿಗತನಕ್ಕೆ.

    ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಫೆಬ್ರವರಿ 20, 1999ರಂದು ಲಾಹೋರ್​ಗೆ ಭೇಟಿ ನೀಡಿ, ಮಿನಾರ್-ಎ-ಪಾಕಿಸ್ತಾನ್ ಅನ್ನು ಸಂದರ್ಶಿಸುವ ಮೂಲಕ ರಾಷ್ಟ್ರೀಯವಾದಿ ಭಾರತೀಯ ನಾಯಕನೊಬ್ಬನಿಗೆ ಮನಸ್ಸೊಪ್ಪದ ಕಾರ್ಯವನ್ನೂ ಮಾಡಿ ಶಾಂತಿಯ ಅಭೂತಪೂರ್ವ ಸಂದೇಶವನ್ನು ಪಾಕಿಸ್ತಾನಕ್ಕೆ ನೀಡಿದರು. ಅದಕ್ಕೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು ಕಾರ್ಗಿಲ್ ಆಕ್ರಮಣ ಮತ್ತು ಐಸಿ-814 ಅಪಹರಣದಂತಹ ಘಾತಕ ಕೃತ್ಯಗಳ ಮೂಲಕ. ದುರಂತವೆಂದರೆ, ಪಾಕಿಸ್ತಾನದ ಕಾರ್ಗಿಲ್ ದುರಾಕ್ರಮಣ ಆ ಚಳಿಗಾಲದಲ್ಲೇ ಆರಂಭವಾಗಿತ್ತು ಮತ್ತು ಇಸ್ಲಾಮಾಬಾದ್ ವಾಜಪೇಯಿಯವರನ್ನು ಆದರಪೂರ್ವಕವಾಗಿ ಸ್ವಾಗತಿಸುವ ನಾಟಕವಾಡಿತ್ತು!

    ನಂತರ ನರೇಂದ್ರ ಮೋದಿಯವರದ್ದು ಅಭೂತಪೂರ್ವ ನಡೆಗಳು. ಮೊದಲಿಗೆ ಪ್ರಮಾಣವಚನ ಸಮಾರಂಭಕ್ಕೆ ಪಾಕ್ ಪ್ರಧಾನಮಂತ್ರಿ ನವಾಜ್ ಶರೀಫ್ ಸೇರಿದಂತೆ ಎಲ್ಲ ಸಾರ್ಕ್ ನಾಯಕರನ್ನು ಆಹ್ವಾನಿಸಿದರು. ಮೂರೇ ತಿಂಗಳಲ್ಲಿ ಪಾಕಿಸ್ತಾನಿ ಸೇನೆ ಕಾಶ್ಮೀರ ಹತೋಟಿ ರೇಖೆಯುದ್ದಕ್ಕೂ ಕದನವಿರಾಮ ಉಲ್ಲಂಘಿಸತೊಡಗಿತು! ಇನ್ನೊಂದು ತಿಂಗಳು ಕಳೆಯುವುದರೊಳಗೆ ಪ್ರಧಾನಿ ನವಾಜ್ ಶರೀಫ್ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ವಿರುದ್ಧವಾದ ನಡೆನುಡಿ ಪ್ರದರ್ಶಿಸಿದರು.

    ಇಷ್ಟಾಗಿಯೂ ಸದ್ಭಾವನೆಯ ಪ್ರಯತ್ನ ಮುಂದುವರಿಸಿದ ಪ್ರಧಾನಿ ಮೋದಿ ಡಿಸೆಂಬರ್ 25, 2015ರಂದು ಅಧಿಕೃತ ಆಹ್ವಾನವೂ ಇಲ್ಲದೇ ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿ, ನವಾಜ್ ಶರೀಫರ ಮೊಮ್ಮಗಳ ಮದುವೆಗೆ ಹಾಜರಾಗಿ, ಮದುವೆಮನೆಯಲ್ಲಿ ಪಾಯಸ ಸ್ವೀಕರಿಸಿದರು. ವಿಶ್ವ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಸದ್ಭಾವನೆಯ ನಡೆ ಇದು. ಆದರೆ, ಶರೀಫ್ ನೀಡಿದ ಪಾಯಸ ಒಂದೇ ವಾರದಲ್ಲಿ ಪಠಾಣ್​ಕೋಟ್ ದಾಳಿಯೊಂದಿಗೆ ಕಹಿಗಟ್ಟಿತು. ಅದಾಗ್ಯೂ ಮೋದಿ ತಾಳ್ಮೆ ತೋರಿದರು. ಕೊನೆಗೂ ಅವರ ಸಹನೆಯ ಕಟ್ಟೆಯೊಡೆದದ್ದು ಉರಿ ದಾಳಿಯಾದಾಗ. ಆಗ ಕೇವಲ ಪಾಕ್ ಆಕ್ರಮಿತ ಕಾಶ್ಮೀರದ ಮೇಲಷ್ಟೇ ನಡೆದ ಸರ್ಜಿಕಲ್ ಕಾರ್ಯಾಚರಣೆ ಪುಲ್ವಾಮಾ ದಾಳಿಯ ನಂತರ ಖಾಸಾ ಪಾಕಿಸ್ತಾನಕ್ಕೇ ವಿಸ್ತರಿಸಿ ಖೈಬರ್ ಪಖ್ತೂನ್​ಖ್ವಾ ಪ್ರಾಂತ್ಯದ ಬಾಲಾಕೋಟ್ ಮೇಲೆ ನಮ್ಮ ವಿಮಾನದಳ ಎರಗಿತು.

    ಪಾಕಿಸ್ತಾನ ಇಂದು ಶಾಂತಿಯ ಮಾತಾಡುತ್ತಿದೆ. ಇದರಲ್ಲೆಷ್ಟು ಪ್ರಾಮಾಣಿಕತೆ ಇದೆ? ಉತ್ತರ ಹುಡುಕಲು ಪ್ರಯತ್ನಿಸೋಣ.

    ಭಾರತದೊಂದಿಗೆ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದು, ವ್ಯಾಪಾರ ಸಂಬಂಧಗಳನ್ನು ಸಹಜಗೊಳಿಸುವುದು ಪಾಕಿಸ್ತಾನಕ್ಕೇ ಹಿತಕಾರಿ ಎಂಬ ಸಲಹೆಯನ್ನು ‘ಪಾಕಿಸ್ತಾನದ ಅಂಬಾನಿ’ ಎಂದೇ ಖ್ಯಾತರಾಗಿರುವ ಕೈಗಾರಿಕೋದ್ಯಮಿ ಮಿಂಯಾ ಮಹಮದ್ ಮಾನ್​ಶಾ ಕಳೆದ ವರ್ಷವೆ ನೀಡಿದ್ದರು. ಕಳೆದ ಜುಲೈ, ಆಗಸ್ಟ್​ನಲ್ಲಿ ಭೀಕರ ಮಳೆ ಮತ್ತು ಪ್ರವಾಹದಿಂದಾಗಿ ಬೆಳೆ ಮಾಯವಾಗಿ ಹತ್ತಿ ಸಾರಾಸಗಟಾಗಿ ನಾಶವಾದಾಗ ಇಂತಹ ದನಿಗಳು ದೊಡ್ಡದಾಗುತ್ತಾ ಹೋದವು. ಹತ್ತಿ ಮತ್ತು ಅದರ ಉತ್ಪಾದನೆಗಳು ಪಾಕಿಸ್ತಾನದ ಅತಿ ದೊಡ್ಡ ವಿದೇಶೀ ವಿನಿಮಯ ಗಳಿಕೆಯ ಸಾಧನಗಳು. ಆದರೆ, ಈ ಬಾರಿ ಅದಕ್ಕೆ ಹೊಡೆತ ಬಿದ್ದದ್ದರಿಂದ ರಫ್ತು ನಿಲುಗಡೆಗೊಂಡು ಡಾಲರ್ ಗಳಿಕೆ ಕುಸಿಯಿತು. ಜತೆಗೆ ಹತ್ತಿ ಗಿರಣಿಗಳು ಮುಚ್ಚಿಹೋಗಿ ಸುಮಾರು ಹತ್ತು ಲಕ್ಷ ಜನ ಉದ್ಯೋಗ ಕಳೆದುಕೊಂಡರು. ಈ ಸಂಕಷ್ಟವನ್ನು ಸರಿದೂಗಿಸಲು ಭಾರತದಿಂದ ಹತ್ತಿ ಆಮದೊಂದೇ ಮಾರ್ಗ ಎಂಬ ಸಲಹೆಗಳನ್ನು ಶೆಹ್​ಬಾಜ್ ಶರೀಫ್ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಭಾರತದೊಂದಿಗೆ ವ್ಯಾಪಾರ ಸಂಬಂಧಗಳ ವ್ಯವಹಾರಕ್ಕಾಗಿಯೇ ಒಬ್ಬರು ಮಂತ್ರಿಯನ್ನು ಶರೀಫ್ ನೇಮಿಸಿದ್ದೇನೋ ನಿಜ. ಆದರೆ, ಆ ಮಂತ್ರಿಗೇನೂ ಕೆಲಸ ಕೊಡಲಿಲ್ಲ.

    ಇದು ಸರ್ಕಾರದ ನೀತಿಯಾದರೆ ಆ ದೇಶದಲ್ಲಿ ಎಲ್ಲವನ್ನೂ ನಿರ್ಧರಿಸುವ ಸೇನೆಯ ನಡವಳಿಕೆಯನ್ನು ನೋಡೋಣ. ಸರಿಯಾಗಿ ವರ್ಷದ ಹಿಂದೆ ಸೇನೆ ಬಿಡುಗಡೆ ಮಾಡಿದ ಸುರಕ್ಷಾ ದಸ್ತಾವೇಜು ಇನ್ನು ಕನಿಷ್ಠ ನೂರು ವರ್ಷಗಳವರೆಗೆ ಭಾರತದೊಂದಿಗೆ ಯುದ್ಧ ಮಾಡಬಾರದೆಂದು ಹೇಳಿತು. ಆದರೆ, ಐಎಸ್​ಐ ಮಹಾನಿರ್ದೇಶಕರಾಗಿ ಲೆ.ಜ. ನದೀಂ ಅಂಜುಂ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕಾಶ್ಮೀರದಲ್ಲಿ ರಕ್ತಪಾತದ ಮತ್ತೊಂದು ಯುಗವನ್ನು ಆರಂಭಿಸಿದರು!

    ಭಾರತದೊಂದಿಗೆ ನಮಗೆ ಶಾಂತಿ ಬೇಕು, ಪ್ರಧಾನಿ ಮೋದಿ ಸ್ಪಂದಿಸಬೇಕು ಎಂದು ಪ್ರಧಾನಿ ಶರೀಫ್ ದುಬೈನ ಅಲ್-ಅರೇಬಿಯಾ ವಾರ್ತಾವಾಹಿನಿಯ ಮೂಲಕ ಭಾರತಕ್ಕೆ ಸಂದೇಶ ನೀಡಿ, ಮಧ್ಯಸ್ಥಿಕೆ ವಹಿಸುವಂತೆ ಯುಎಇ ಅಧ್ಯಕ್ಷರಿಗೆ ಮನವಿ ಮಾಡಿಕೊಂಡ ಮರುದಿನವೇ ಇತ್ತ ಇಸ್ಲಾಮಾಬಾದ್​ನಲ್ಲಿ ಅವರ ಕಾರ್ಯಾಲಯ ಟ್ವೀಟ್ ಮಾಡಿ 370 ಮತ್ತು 35ಎ ವಿಧಿಗಳು ಮತ್ತೆ ಅನುಷ್ಠಾನಗೊಳ್ಳುವವರೆಗೆ ಭಾರತದೊಂದಿಗೆ ಮಾತುಕತೆ ಸಾಧ್ಯವಿಲ್ಲ, ಸಂಬಂಧ ಸುಧಾರಣೆಯಾಗದು ಎಂದು ಸಾರಿದೆ! ಉಪ ವಿದೇಶಾಂಗ ಮಂತ್ರಿ ಹೀನಾ ರಬ್ಬಾನಿ ಖಾರ್ ದಾವೋಸ್​ನ ವಿಶ್ವ ಆರ್ಥಿಕ ಮೇಳದಲ್ಲಿ ಹೇಳಿದ್ದು ‘ನಮ್ಮ ಜತೆ ಮಾತುಕತೆಗೆ ಮೋದಿ ಭಾಗಿದಾರ ಅಲ್ಲ ಅವರು ವಾಜಪೇಯಿ ಮತ್ತು ಮನ್​ವೋಹನ್ ಸಿಂಗ್​ರಂತೆ ಅಲ್ಲ’ ಎಂದು! ಇವು ಹೇಳುವುದು ಭಾರತದ ಕುರಿತಾಗಿ ಪ್ರಸಕ್ತ ಸರ್ಕಾರದಲ್ಲೇ ಹಾಗೂ ಸರ್ಕಾರದ ಎರಡು ಪ್ರಮುಖ ಭಾಗಿದಾರರಾದ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಗಳ ನಡುವೆಯೇ ತಾಳಮೇಳ ಇಲ್ಲ ಎನ್ನುವುದನ್ನು. ಗೊಂದಲ ತಿಳಿಯಾಗಿ ಒಮ್ಮತದ ಅಭಿಪ್ರಾಯ ಮೂಡಬೇಕಾದರೆ ನಾವು ಸ್ವಲ್ಪ ಕಾಯಬೇಕು. ಅದನ್ನು ತೀರ್ವನಿಸುವುದು ಈಗ ಜರುಗುತ್ತಿರುವ ಎರಡು ಬೆಳವಣಿಗೆಗಳು.

    ಒಂದು- ರೇಷನ್ ಸಿಗದ ಪಾಕ್ ಸೈನಿಕರು ಖೈಬರ್ ಪಖ್ತೂನ್​ಖ್ವಾ ಪ್ರಾಂತ್ಯದ ವಿವಿಧೆಡೆ ಚೌಕಿಗಳನ್ನು ತೊರೆದು ಓಡಿಹೋಗುತ್ತಿದ್ದಂತೆ ಪಾಕ್ ತಾಲಿಬಾನ್ ಅಲ್ಲೆಲ್ಲಾ ಜನವರಿ 24ರಿಂದ ತೆರಿಗೆ ಸಂಗ್ರಹಿಸಲು ಆರಂಭಿಸಿದೆ ಮತ್ತು ಪ್ರಾಂತೀಯ ರಾಜಧಾನಿ ಪೆಷಾವರ್​ನಲ್ಲಿ ಜನವರಿ 30ರಂದು ಮಸೀದಿಯಲ್ಲಿ ಬಾಂಬ್ ಸ್ಪೋಟಿಸಿ 100ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಎರಡು- ಮರುದಿನ ಜನವರಿ 30ರಂದು ಈ ಲೇಖನ ಬರೆಯುವ ಹೊತ್ತಿನಲ್ಲಿ ಇಸ್ಲಾಮಾಬಾದ್​ನಲ್ಲಿ ಐಎಂಎಫ್ ಅಧಿಕಾರಿಗಳು 23ನೇ ಸಾಲಕ್ಕೆ ಪಾಕಿಸ್ತಾನ ಯೋಗ್ಯವೇ ಎಂದು ಪರಿಶೀಲಿಸುತ್ತಿದ್ದಾರೆ. ಸದ್ಯಕ್ಕೆ ಪಾಕಿಸ್ತಾನದ ಭವಿಷ್ಯ ನಿರ್ಧರಿಸಲಿರುವ ಎರಡು ಪ್ರಮುಖ ಅಂಶಗಳಿವು. ಪಾಕ್ ತಾಲಿಬಾನ್ ವಿರುದ್ಧ ನಿಲ್ಲಬಲ್ಲ ಶರೀಫ್ ಸರ್ಕಾರದ ಸ್ಥೈರ್ಯ ಮತ್ತು ಪಾಕ್ ಬಾಯಿಗೆ ಬೀಳಬಹುದಾದ ಐಎಂಎಫ್ ಗಂಜಿಯ ಪ್ರಮಾಣ ಶರೀಫ್​ಗಳು ಮತ್ತು ಭುಟ್ಟೊಗಳು ಭಾರತದ ಬಗ್ಗೆ ಹೊಂದಿರುವ ಪ್ರಾಮಾಣಿಕತೆಯ ಮಟ್ಟವನ್ನು ನಿರ್ಧರಿಸುತ್ತವೆ. ಅದಾಗುವವರೆಗೆ ನಾವು ಮೌನವಾಗಿ ಗಮನಿಸುತ್ತಾ ಇರುವುದು ವಿಹಿತ. ಮೋದಿ ಸರ್ಕಾರ ಅದನ್ನೇ ಮಾಡುತ್ತಿದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

    ರಾಜ್ಯಕ್ಕೆ ಎದುರಾಗಿದೆ ಒಂದು ಹೊಸ ಆತಂಕ; ಸರ್ಕಾರದ ಮೊರೆ ಹೋದ ರೇಡಿಯಾಲಜಿ ಇಮೇಜಿಂಗ್ ಅಧಿಕಾರಿಗಳ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts