More

    ಮೇಡ್ ಇನ್ ಪಾಕಿಸ್ತಾನ್ ಜಾಪಾಳ ಮಾತ್ರೆ ಪಾಕ್ ಬಾಯಿಗೇ!

    ಮೇಡ್ ಇನ್ ಪಾಕಿಸ್ತಾನ್ ಜಾಪಾಳ ಮಾತ್ರೆ ಪಾಕ್ ಬಾಯಿಗೇ!ಕಟ್ಟಾ ಇಸ್ಲಾಮ್​-ಪ್ರೀತಿ ಮತ್ತು ತಾಲಿಬಾನ್​ಪರ ನಿಲುವುಗಳಿಂದಾಗಿ ‘ತಾಲಿಬಾನ್ ಖಾನ್’ ಎಂದು ಹೆಸರಾಗಿರುವ ಇಮ್ರಾನ್ ಖಾನ್ ಪ್ರಧಾನಿಯಾಗಿದ್ದ ಕಾಲದಲ್ಲಿ ಹೆಚ್ಚುಕಡಿಮೆ ಅವರದೇ ನಿಲುವುಗಳನ್ನು ಹೊಂದಿರುವ ಲೆ.ಜ. ಫೈಜ್ ಹಮೀದ್ ಎರಡು ವರ್ಷಗಳಿಗಿಂತಲೂ ಅಧಿಕ ಕಾಲ ಐಎಸ್​ಐನ ಡೈರೆಕ್ಟರ್ ಜನರಲ್ ಆಗಿದ್ದರು. ಅದು ಅಫ್ಘನ್ ಯುದ್ಧದ ಅತಿ ಪ್ರಮುಖ ಘಟ್ಟ. ಮೂರು ದಶಕಗಳ ಹಿಂದೆ ಅಫ್ಘನ್ ತಾಲಿಬಾನ್ ಅನ್ನು ಸೃಷ್ಟಿಸಿ, 1996ರಲ್ಲಿ ಅದನ್ನು ಕಾಬೂಲ್​ನಲ್ಲಿ ಅಧಿಕಾರಕ್ಕೇರಿಸಿ, ಅಫ್ಘಾನಿಸ್ತಾನವನ್ನು ಪಾಕಿಸ್ತಾನದ ‘ಸಾಮರಿಕ ಹಿತ್ತಲು’ ಮಾಡಿಕೊಳ್ಳುವ ಪಾಕ್ ಸೇನೆಯ ಬಯಕೆ ಪೂರ್ಣಗೊಂಡಿತೆಂದು ಬೀಗಿದ್ದೇ ಐಎಸ್​ಐ. ನಂತರ 9/11 ದಾಳಿಗಳಿಗೆ ಪ್ರತೀಕಾರ ಕ್ರಮವಾಗಿ ಅಮೆರಿಕಾ ಮತ್ತು ನ್ಯಾಟೋ ಪಡೆಗಳು ಅಫ್ಘಾನಿಸ್ತಾನದ ಮೇಲೆರಗಿ ತಾಲಿಬಾನ್ ಸರ್ಕಾರನ್ನು ಉರುಳಿಸಿ, ಅಲ್-ಖೈದಾ ಭಯೋತ್ಪಾದಕರನ್ನು ಬೇಟೆಯಾಡತೊಡಗಿದಾಗ ಅಮೆರಿಕಾದ ಮೂಗಿನ ಕೆಳಗೇ ಅವೆರಡೂ ಮೂಲಭೂತವಾದಿ ಭಯೋತ್ಪಾದಕ ಸಂಘಟನೆಗಳಿಗೆ ರಹಸ್ಯವಾಗಿ ಆಶ್ರಯವಿತ್ತು ಸಾಕಿದ್ದೂ ಐಎಸ್​ಐಯೇ. ಒಸಾಮಾ ಬಿನ್ ಲಾದೆನ್, ಅಯ್ಮೆನ್ ಅಲ್-ಜವಾಹಿರಿ ಸೇರಿದಂತೆ ಪ್ರಮುಖ ಅಲ್-ಖೈದಾ ನೇತಾರರು ಮತ್ತು ಮುಲ್ಲಾ ಒಮಾರ್, ಮುಲ್ಲಾ ಹಿಬಾತುಲ್ಲಾ ಅಖುಂಡ್​ಜಾದಾ, ಮುಲ್ಲಾ ಬರದರ್ ಸೇರಿದಂತೆ ಅಫ್ಘನ್ ತಾಲಿಬಾನ್ ನಾಯಕರೆಲ್ಲರೂ ಅಡಗಿದ್ದು ಪಾಕಿಸ್ತಾನದಲ್ಲಿ, ಐಎಸ್​ಐ ರಕ್ಷಣೆಯಲ್ಲಿ. ಸೇನೆ ಮತ್ತು ಐಎಸ್​ಐ ರಹಸ್ಯವಾಗಿ ನಡೆಸುತ್ತಿದ್ದ ಈ ಕಾರಸ್ಥಾನಕ್ಕೆ ಪಾಕ್ ಸರ್ಕಾರವೂ ಪೂರ್ಣ ಬೆಂಬಲವಾಗಿ ನಿಂತದ್ದು ಆಗಸ್ಟ್ 2018ರಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾದಾಗ. ನಿಜ ಹೇಳಬೇಕೆಂದರೆ ಬೆನಜೀರ್ ಭುಟ್ಟೋ ನಂತರ ಪೂರ್ಣವಾಗಿ ಅಫ್ಘನ್ ತಾಲಿಬಾನ್ ಪರವಾಗಿ ನಿಂತ ಮೊದಲ ಪ್ರಧಾನಿ ಇಮ್ರಾನ್ ಖಾನ್. ಹತ್ತು ತಿಂಗಳ ನಂತರ ಫೈಜ್ ಹಮೀದ್ ಐಎಸ್​ಐ ಮುಖ್ಯಸ್ಥರಾದಾಗ ಪಾಕಿಸ್ತಾನ ಮತ್ತು ಅಫ್ಘನ್ ತಾಲಿಬಾನ್ ನಡುವಿನ ಸಹಕಾರ ನಿರ್ಣಾಯಕ ಹಂತ ತಲುಪಿತು. ಇಮ್ರಾನ್-ಫೈಜ್ ಹಮೀದ್ ಜೋಡಿ ಹಲವು ಅರ್ಥಗಳಲ್ಲಿ ಬೆನಜೀರ್ ಭುಟ್ಟೋ- ಹಮೀದ್ ಗುಲ್ ಜೋಡಿಯ ಹೊಸ ರೂಪ.

    ಇಮ್ರಾನ್ ಖಾನ್ ವೈಯಕ್ತಿಕವಾಗಿ ರೂಢಿಸಿಕೊಂಡಿದ್ದ ಅತೀವ ಅಮೆರಿಕಾ-ದ್ವೇಷ ಅಫ್ಘನ್ ತಾಲಿಬಾನ್​ಗೆ ವರದಾನವಾಗಿ ಪರಿಣಮಿಸಿ ಇಡೀ ಪಾಕ್ ವ್ಯವಸ್ಥೆ ಪೂರ್ಣವಾಗಿ ಅದರ ಪರವಾಗಿ ನಿಲ್ಲುವಂತಾದದ್ದು ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಸೇನಾ ಯೋಜನೆಗಳ ಮೇಲೆ ದಟ್ಟವಾದ ಕರಿನೆರಳು ಹರಡಿತು. ಅಂತಿಮವಾಗಿ ಆಗಸ್ಟ್ 15, 2021ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್​ಗೆ ಬಿಟ್ಟುಕೊಟ್ಟು ಅಮೆರಿಕಾ ಮತ್ತು ನ್ಯಾಟೋ ಸೇನೆ ಹೊರಗೆ ಓಡಿದಾಗ ಅದನ್ನು ಇಮ್ರಾನ್ ಖಾನ್ ವರ್ಣಿಸಿದ್ದು ‘ಅಫ್ಘನ್ ಜನತೆ ತಮ್ಮ ಸಂಕೋಲೆಗಳನ್ನು ಕಿತ್ತೊಗೆದಿದ್ದಾರೆ, ಅಫ್ಘಾನಿಸ್ತಾನ ಸ್ವತಂತ್ರಗೊಂಡಿದೆ’ ಎಂದು. ಅಮೆರಿಕನ್ನರು ಓಡಿದ್ದೇ ಐಎಸ್​ಐ ಕಾಬೂಲ್​ನಲ್ಲಿ ಚಟುವಟಿಕೆಗಳನ್ನು ಬಹಿರಂಗವಾಗಿಯೇ ಆರಂಭಿಸಿತು. ಫೈಜ್ ಹಮೀದ್ ಅಲ್ಲಿಗೆ ತೆರಳಿ ತಾನೇ ಯುದ್ಧವೀರನಂತೆ ಬೀಗಿದ್ದಲ್ಲದೆ, ತಾಲಿಬಾನ್ ಸರ್ಕಾರದಲ್ಲಿ ಪಾಕ್ ಹಸ್ತಕರಾದ ಹಝ್ಝಾನಿ ಸಹೋದರರಿಗೆ ಪ್ರಮುಖ ಸ್ಥಾನಗಳು ಸಿಗುವಂತೆ ನೋಡಿಕೊಂಡರು. ಅಫ್ಘಾನಿಸ್ತಾನ ಮತೊಮ್ಮೆ ‘ಸಾಮರಿಕ ಹಿತ್ತಲು’ ಆಯಿತೆಂದು ಪಾಕಿಸ್ತಾನ ಬೀಗಿತು. ಆದರೆ, ಪಾಕ್ ಸೇನಾಧಿಕಾರಿಗಳ ಮತ್ತು ಪಾಕ್ ಪತ್ರಕರ್ತರ ಊಹೆಗೂ ಸಿಕ್ಕದ ಬಗೆಯಲ್ಲಿ ಈಗ ತಾಲಿಬಾನ್ ಬದಲಾಗಿತ್ತು, ಅದರ ಮೊದಲ ಸೂಚನೆ ಸಿಕ್ಕಿದ್ದು ಕಾಬೂಲ್ ಪತನ ಸನ್ನಿಹಿತವಾದಾಗಲೇ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿಜಯ ಭಾರತದ ವಿರುದ್ಧ ನಿರ್ಣಾಯಕ ವಿಜಯಕ್ಕೆ ನಾಂದಿಯಾಗಲಿದೆ, ಸದ್ಯದಲ್ಲೇ ಕಾಶ್ಮೀರದ ವಿಮೋಚನೆಯಾಗಲಿದೆ ಎಂದು ಪಾಕ್ ಮಾಧ್ಯಮಗಳು ಉನ್ಮಾದದಲ್ಲಿ ಕೂಗತೊಡಗಿದಾಗ ತಾಲಿಬಾನ್ ಘೊಷಿಸಿದ್ದು ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವ ಯಾವ ಉದ್ದೇಶವೂ ತನಗಿಲ್ಲ ಎಂದು. ಬುದ್ಧಿವಂತರಿಗೆ ವಾಸ್ತವ ಅರಿಯಲು ಇಷ್ಟು ಸಾಕಾಗಿತ್ತು. ಆದರೆ, ಪಾಕ್ ಪ್ರಭೃತಿಗಳು ವಾಸ್ತವಕ್ಕೆ ಬೆನ್ನು ತಿರುಗಿಸಿಬಿಟ್ಟರು.

    ಕಾಬೂಲ್​ನಲ್ಲಿ ಅಧಿಕಾರ ಗಳಿಸಿಕೊಂಡ ಮೇಲೆ ಅಫ್ಘನ್ ತಾಲಿಬಾನ್ ಮಾಡಿದ ಮೊದಲ ಕೆಲಸ ಹಿಂದಿನ ಹಮೀದ್ ಕರ್ಜಾಯ್ ಮತ್ತು ಅಶ್ರಫ್ ಘಾನಿ ಸರ್ಕಾರಗಳು ಬಂಧಿಸಿದ್ದ ಐದು ಸಾವಿರದಷ್ಟು ಪಾಕ್ ತಾಲಿಬಾನಿಗಳನ್ನು ಬಿಡುಗಡೆ ಮಾಡಿ ಬಾಂಬ್​ಗಳು, ಬಂದೂಕುಗಳನ್ನೂ ಕೈತುಂಬಾ ಕೊಟ್ಟರು. ಹೀಗೆ ಶಸ್ತ್ರ›ಸಜ್ಜಿತರಾದ ಪಾಕ್ ತಾಲಿಬಾನಿಗಳು ಮುಖಮಾಡಿದ್ದು ತಮ್ಮ ಮೂಲನೆಲೆ ಪಾಕಿಸ್ತಾನದ ಖೈಬರ್ ಪಕ್ತೂನ್​ಖ್ವಾ ಪ್ರಾಂತ್ಯದತ್ತ. ಹೊರಹೋದ ಹಕ್ಕಿಗಳು (ಹಿಲರಿ ಕ್ಲಿಂಟನ್ ಮಾತಿನಲ್ಲಿ ಹಾವುಗಳು) ಮೊಟ್ಟೆಯಿಡಲು ಗೂಡಿಗೆ ಹಿಂತಿರುಗಿದ್ದವು!

    ಇಷ್ಟಾಗಿಯೂ ಪರಿಸ್ಥಿತಿ ಪೂರ್ಣವಾಗಿ ತನ್ನ ವಿರುದ್ಧ ತಿರುಗದಂತೆ ಅಥವಾ ಬದಲಾವಣೆಗೆ ಗತಿಯನ್ನು ನಿಧಾನಗೊಳಿಸುವ ಅವಕಾಶ ಪಾಕಿಸ್ತಾನಕ್ಕೆ ಇದ್ದೇ ಇತ್ತು. ಅದು ಸಾಧ್ಯವಾಗುತ್ತಿದ್ದುದು ಆ ದಿನಗಳಲ್ಲಿ ಇಮ್ರಾನ್ ಖಾನ್ ಮತ್ತು ಫೈಜ್ ಹಮೀದ್​ರಿಂದ ಮಾತ್ರ. ಆದರೆ, ಕೇಡುಗಾಲ ಬಂದಾಗ ಮನುಷ್ಯ ತನ್ನ ಕಾಲಿನ ಮೇಲೆ ತಾನೇ ಕೊಡಲಿ ಹಾಕಿಕೊಳ್ಳುತ್ತಾನಂತೆ. ಪಾಕಿಸ್ತಾನದ ವ್ಯವಹಾರಗಳಲ್ಲಿ ಯಾವಾಗಲೂ ಚಾಲಕನ ಸ್ಥಾನದಲ್ಲಿರುವ ಸೇನೆ ಮಾಡಿಕೊಂಡದ್ದು ಅದನ್ನೇ. ಮೊದಲಿಗೆ ಅದು ಇಮ್ರಾನ್ ಖಾನ್​ರ ಪ್ರಬಲ ವಿರೋಧವನ್ನೂ ನಿರ್ಲಕ್ಷಿಸಿ ಫೈಜ್ ಹಮೀದ್​ರನ್ನು ಐಎಸ್​ಐನಿಂದ ಹೊರತೆಗೆದು ನವೆಂಬರ್ 19ರಂದು ಕೋರ್ ಕಮಾಂಡರ್ ಆಗಿ ಪೆಷಾವರ್​ಗೆ ಕಳಿಸಿತು. ಅಲ್ಲಿಗೆ ಅಫ್ಘನ್ ತಾಲಿಬಾನ್ ಮತ್ತು ಪಾಕಿಸ್ತಾನದ ನಡುವಿನ ಪ್ರಮುಖ ಕೊಂಡಿ ಕಳಚಿಹೋಯಿತು. ವಿಚಿತ್ರವೆಂದರೆ ಹೊಸ ಐಎಸ್​ಐ ಮುಖ್ಯಸ್ಥ ಲೆ.ಜ. ನದೀಂ ಅಂಜುಂರಿಗೆ ಮುಖ್ಯವೆನಿಸಿದ್ದು ಕಾಶ್ಮೀರದಲ್ಲಿ ಆರಿಹೋಗಿದ್ದ ಭಯೋತ್ಪಾದನೆಯ ಕಿಡಿಯನ್ನು ಮತ್ತೆ ಹೊತ್ತಿಸುವುದು. ಕೈಗೆ ಸಿಕ್ಕಿದ್ದ ಅಫ್ಘಾನಿಸ್ತಾನವನ್ನು ಪಾಕಿಸ್ತಾನ ಕೈಯಾರೆ ಕಳೆದುಕೊಳ್ಳಹೊರಟಿದ್ದು ಹೀಗೆ. ಅಮೆರಿಕಾದ ವಿಶ್ವಾಸಪಾತ್ರರಾದ ಸೇನಾ ಮುಖ್ಯಸ್ಥ ಜ. ಬಾಜ್ವಾ ಮತ್ತು ಶೆಹ್​ಬಾಜ್ ಶರೀಫ್ ಒಟ್ಟುಗೂಡಿ ಜನವರಿ 2022ರಲ್ಲಿ ಇಮ್ರಾನ್ ಖಾನ್​ರನ್ನು ಉರುಳಿಸಲು ಆರಂಭಿಸಿದ ಪ್ರಯತ್ನ ಅಫ್ಘನ್ ತಾಲಿಬಾನ್ ಸರ್ಕಾರವನ್ನು ಪಾಕಿಸ್ತಾನದಿಂದ ಇನ್ನಷ್ಟು ದೂರ ಒಯ್ದಿತು. ಅದರೊಂದಿಗೆ ಪಾಕ್ ತಾಲಿಬಾನ್ ಸಹಾ ದೂರ ಸರಿಯುವುದು ರ್ತಾಕವೇ ಆಗಿತ್ತು. ಪರಿಣಾಮವಾಗಿ ಪಾಕಿಸ್ತಾನದಾದ್ಯಂತ ಭಯೋತ್ಪಾದಕ ದಾಳಿಗಳು ಏಕಾಏಕಿ ಹೆಚ್ಚಾದವು. 2022ರಲ್ಲಿ ಅವುಗಳ ಸಂಖ್ಯೆ ಗಾಬರಿ ಹುಟ್ಟಿಸುವಂತಹದಾಗಿತ್ತು. ಇಸ್ಲಾಮಾಬಾದ್​ನಲ್ಲಿರುವ ಸೆಂಟರ್ ಫಾರ್ ರಿಸರ್ಚ್ ಆಂಡ್ ಸೆಕ್ಯೂರಿಟಿ ಸ್ಟಡೀಸ್ (ಸಿಆರ್​ಎಸ್​ಎಸ್) ವರದಿ ಪ್ರಕಾರ ಬಲೂಚಿಸ್ತಾನದಲ್ಲಿ 110 ದಾಳಿಗಳು ಮತ್ತು 254 ಸಾವುಗಳು, ಖೈಬರ್ ಪಖ್ತೂನ್​ಖ್ವಾದಲ್ಲಿ 308 ದಾಳಿಗಳು ಮತ್ತು 348 ಸಾವುಗಳು, ಪಂಜಾಬ್​ನಲ್ಲಿ 25 ದಾಳಿಗಳು ಮತ್ತು 28 ಸಾವುಗಳು, ಸಿಂಧ್​ನಲ್ಲಿ 54 ದಾಳಿಗಳು ಮತ್ತು 56 ಸಾವುಗಳು ಘಟಿಸಿವೆ! ಸುರಕ್ಷಾ ಪಡೆಗಳನ್ನೇ ಗುರಿಯಾಗಿಸಿಕೊಂಡು ದೇಶಾದ್ಯಂತ ನಡೆದ ದಾಳಿಗಳ ಸಂಖ್ಯೆ 376 ಮತ್ತು ಅವುಗಳಲ್ಲಿ 282 ಸುರಕ್ಷಾ ಸಿಬ್ಬಂದಿ ಬಲಿಯಾಗಿದ್ದಾರೆ! ನವೆಂಬರ್ 29ರಂದು ಪಾಕ್ ತಾಲಿಬಾನ್ (ಟಿಟಿಪಿ) ಸೇನೆಯೊಂದಿಗಿನ ಕದನವಿರಾಮವನ್ನು ಅಂತ್ಯಗೊಳಿಸಿ ಬಲೂಚಿಸ್ತಾನದ ವಿಮೋಚನೆಗಾಗಿ ಹೋರಾಡುತ್ತಿರುವ ಬಲೂಚ್ ಲಿಬರೇಷನ್ ಆರ್ವಿು (ಬಿಎಲ್​ಎ) ಮತ್ತು ಬಲೂಚ್ ಲಿಬರೇಷನ್ ಫ್ರಂಟ್ (ಬಿಎಲ್​ಎಫ್) ಸಂಘಟನೆಗಳ ಜತೆ ಕೈ ಜೋಡಿಸಿದಾಗಿನಿಂದ ಪಾಕಿಸ್ತಾನ ಅಕ್ಷರಶಃ ದಿನನಿತ್ಯವೂ ರಕ್ತಪಾತವನ್ನು ಕಾಣುತ್ತಿದೆ, ಡಿಸೆಂಬರ್ ಒಂದರಲ್ಲೇ ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂನ್​ಖ್ವಾಗಳಲ್ಲಿ 40 ಸುರಕ್ಷಾ ಸಿಬ್ಬಂದಿ, ದಾಳಿಗಳಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಹೆಚ್ಚಿನ ದಾಳಿಗಳು ಸೇನಾ ಸಿಬ್ಬಂದಿಗೆ ಇದುವರೆಗೆ ಸುರಕ್ಷಿತ ಎನಿಸಿದ್ದ ಸ್ಥಳಗಳಲ್ಲಿ ಘಟಿಸಿವೆ. ಈ ಬೆಳವಣಿಗೆಗಳಲ್ಲಿ ಫೈಜ್ ಹಮೀದರ ಪಾತ್ರವಿರಬಹುದೆಂಬ ಅನುಮಾನ ಸೇನಾವಲಯದಲ್ಲಿದೆ.

    ನವೆಂಬರ್ 2021ರಲ್ಲಿ ಐಎಸ್​ಐನಿಂದ ಹೊರದೂಡಲ್ಪಟ್ಟ ನಂತರ ಲೆ.ಜ. ಫೈಜ್ ಹಮೀದ್ ಕೋರ್ ಕಮಾಂಡರ್ ಆಗಿ ಎರಡು ಸಲ ಎತ್ತಂಗಡಿಯಾಗಿದ್ದಾರೆ. ಸೇವಾ ಹಿರಿತನ ಹಾಗೂ ಅನುಭವದ ಆಧಾರಗಳ ಮೇಲೆ ಸೇನಾ ಮುಖ್ಯಸ್ಥನ ಸ್ಥಾನದ ಆಸೆ ಇಟ್ಟುಕೊಂಡಿದ್ದ ಅವರಿಗೆ ನವೆಂಬರ್ 24ರಂದು ನಿರಾಸೆಯಾಗಿದ್ದರಿಂದ ಡಿಸೆಂಬರ್ 3ರಂದು ಅವರು ಸೇನೆಯಲ್ಲಿನ ಲೆಫ್ಟಿನೆಂಟ್ ಜನರಲ್ ಹುದ್ದೆಗೆ ರಾಜಿನಾಮೆ ನೀಡಿದರು. ಇಮ್ರಾನ್ ಖಾನ್​ರ ಪಿಟಿಐ ಪಕ್ಷ ಸೇರಿ ರಾಜಕೀಯಕ್ಕಿಳಿಯುವುದು ಅವರ ಇರಾದೆಯೆಂದು ಹೇಳಲಾಗುತ್ತಿದೆ. ಆದರೆ, ನಿಯಮಗಳ ಪ್ರಕಾರ ಅದಕ್ಕಾಗಿ ಅವರು ನಿವೃತ್ತಿಯ ನಂತರ ಎರಡು ವರ್ಷ ಕಾಯಬೇಕು. ಆದರೆ, ಅವರು ಕೈಕಟ್ಟಿಯೇನೂ ಕುಳಿತಿಲ್ಲ. ಪಿಟಿಐಗೆ ಸೇರದೇ ಇಮ್ರಾನ್ ಖಾನ್​ರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಅವರು ಈಗಾಗಲೇ ಮಾಡತೊಡಗಿದ್ದಾರೆ. ಇಮ್ರಾನ್ ಮೇಲೆ ಸರ್ಕಾರ ದೇಶದ್ರೋಹದ ಆಪಾದನೆ ಹೊರಿಸಿದೆ, ಐದು ವರ್ಷಗಳವರೆಗೆ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಚುನಾವಣಾ ಆಯೋಗ ಬಹಿಷ್ಕಾರ ವಿಧಿಸಿದೆ, ಅವರ ಮೇಲೆ ಈಗಾಗಲೇ ಒಂದು ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಯ ಸುರಕ್ಷೆಯ ಬಗ್ಗೆ ಫೈಜ್ ಹಮೀದ್ ಕಾಳಜಿ ವಹಿಸುತ್ತಿದ್ದಾರೆ, ಇಮ್ರಾನ್ ಖಾನ್​ರ ಪತ್ನಿ ಬುಶ್ರಾ ಬೀಬಿಯನ್ನು ದೇಶದಿಂದ ಹೊರಗೊಯ್ದು ವಿದೇಶದಲ್ಲಿ ಸುರಕ್ಷಿತವಾಗಿರಿಸಿದ್ದಾರೆ. ಜತೆಗೆ, ಸೇನೆಯ ಗಮನವನ್ನು ಇಮ್ರಾನ್ ಖಾನ್​ರಿಂದ ದೂರ ಒಯ್ಯುವ ಉದ್ದೇಶದಿಂದ ಟಿಟಿಪಿಗೆ ಸೇನೆಯ ಕುರಿತಾದ ಸೂಕ್ಷ್ಮ ಮಾಹಿತಿಗಳನ್ನು ನೀಡಿ ಸೇನೆಗೆ ಹೊಸ ಹೊಸ ಸಂಕಟಗಳನ್ನು ಅವರು ಸೃಷ್ಟಿಸುತ್ತಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇವುಗಳ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದರೆ, ಸೇನೆ ಹಾಗೂ ಸರ್ಕಾರಕ್ಕೆ ಕಂಟಕ ಸೃಷ್ಟಿಸುವ ಸಾಮರ್ಥ್ಯ ಫೈಜ್ ಹಮೀದ್​ರಿಗೆ ಇದೆ. ಜತೆಗೀಗ ಅಫ್ಘನ್ ತಾಲಿಬಾನ್, ಟಿಟಿಪಿ, ಬಿಎಲ್​ಎ, ಬಿಎಲ್​ಎಫ್, ಇಮ್ರಾನ್ ಖಾನ್ ಮತ್ತು ಫೈಜ್ ಹಮೀದ್ ಒಟ್ಟುಗೂಡಿರುವುದೂ ನಿಜ ಮತ್ತು ಈ ಸಂಘಟಿತ ಶಕ್ತಿಯನ್ನು ಪಾಕ್ ಸೇನೆ ಸಮರ್ಥವಾಗಿ ಎದುರಿಸಬಲ್ಲುದೇ? ಈ ಪ್ರಶ್ನೆಗೆ ಸೇನೆ ಮತ್ತು ಸರ್ಕಾರದಿಂದ ಬರುತ್ತಿರುವ ಉತ್ತರಗಳು ಆಸಕ್ತಿಕರವೂ, ತಮಾಷೆಯೂ ಆಗಿವೆ.

    ಜನವರಿ 2ರಂದು ಪಾಕ್ ರಾಷ್ಟ್ರೀಯ ಸುರಕ್ಷಾ ಸಮಿತಿ ಪ್ರಸಕ್ತ ಸಮಸ್ಯೆಗಳನ್ನು ಪರಿಶೀಲಿಸಿತು. ಆಮೇಲೆ ಪ್ರಧಾನಿ ಶರೀಫ್ ಮಾಡಿದ ಟ್ವೀಟ್ ಮತ್ತು ಸುರಕ್ಷಾ ಸಮಿತಿ ಹೊರಡಿಸಿದ ಹೇಳಿಕೆಯ ಒಟ್ಟು ಸಾರಾಂಶ ಹೀಗಿತ್ತು- ‘ಭಯೋತ್ಪಾದನೆಯ ಬಗ್ಗೆ ನಾವು ಶೂನ್ಯ-ಸಹನೆ ತೋರುತ್ತೇವೆ, ಶಾಂತಿಯ ವಿಷಯದಲ್ಲಿ ಯಾವುದೇ ರಿಯಾಯಿತಿ ನೀಡಲಾಗದು, ಯಾವ ದೇಶವೂ ಭಯೋತ್ಪಾದಕರಿಗೆ ಆಶ್ರಯ ನೀಡಕೂಡದು, ಗಡಿಯಾಚೆಯಿಂದ ಬರುವ ಭಯೋತ್ಪಾದನೆಯನ್ನು ನಾವು ಸಹಿಸುವುದಿಲ್ಲ. ಗಡಿಯಾಚೆ ಇರುವ ಭಯೋತ್ಪಾದಕರ ಹಾಗೂ ಅವರ ತಾಣಗಳ ಮೇಲೆ ಏಕಪಕ್ಷೀಯವಾಗಿ ದಾಳಿ ಎಸಗುವ ಹಕ್ಕು ನಮಗಿದೆ.’ ಭೂತದ ಬಾಯಲ್ಲಿ ಭಗವದ್ಗೀತೆಯಂತಹ ಈ ಮಾತುಗಳನ್ನು ಪಾಕಿಸ್ತಾನ ಹೇಳುತ್ತಿರುವುದು ತನ್ನದೇ ಸೃಷ್ಟಿಯಾದ ಅಫ್ಘನ್ ತಾಲಿಬಾನ್ ಸರ್ಕಾರಕ್ಕೆ! 126 ಜಾಗತಿಕ ಭಯೋತ್ಪಾದಕ ಸಂಘಟನೆಗಳಿಗೆ ಮತ್ತು ಜಾಗತಿಕ ಭಯೋತ್ಪಾದಕರೆಂದು ವಿಶ್ವಸಂಸ್ಥೆಯಿಂದ ಘೊಷಿತರಾದ 27 ಭಯೋತ್ಪಾದಕರಿಗೆ ಆಶ್ರಯ ನೀಡಿ, ಭಾರತದ ವಿರುದ್ಧ ಎಲ್ಲ ಬಗೆಯ ಅನಾಚಾರಗಳನ್ನೂ ಮಾಡಿದ/ಮಾಡುತ್ತಿರುವ ಪಾಕಿಸ್ತಾನ ಇಂದು ಅಂತಹದೇ ಅನಾಚಾರಗಳನ್ನು ಮಾಡಕೂಡದೆಂದು ತಾನೇ ಗದ್ದಿಗೆಗೇರಿಸಿದ ತಾಲಿಬಾನ್ ಸರ್ಕಾರಕ್ಕೆ ಹೇಳುತ್ತಿರುವುದು ಇತಿಹಾಸದ ಕ್ರೂರ ವ್ಯಂಗ್ಯವೇ ಸರಿ.

    ಪಾಕಿಸ್ತಾನದಿಂದ ಎಚ್ಚರಿಕೆಗಳು ಬಂದೊಡನೇ, ‘ಪಾಕ್-ವಿರೋಧಿ ಭಯೋತ್ಪಾದಕರ್ಯಾರೂ ನಮ್ಮಲ್ಲಿಲ್ಲ, ಎಲ್ಲರೂ ಇರುವುದು ಪಾಕಿಸ್ತಾನದಲ್ಲೇ’ ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಅಫ್ಘನ್ ತಾಲಿಬಾನ್ ನಾಯಕ ಅಹ್ಮದ್ ಯಾಸಿರ್ ಅಂತೂ, ‘ನಿಮ್ಮನ್ನೇನು ತುರ್ಕಿ, ನಮ್ಮನ್ನೇನು ಸಿರಿಯಾದ ಕುರ್ದ್​ಗಳು ಅಂದುಕೊಳ್ಳಬೇಡಿ. ನಮ್ಮ ಮೇಲೇನಾದರೂ ನೀವು ಆಕ್ರಮಣ ಮಾಡಿದರೆ ಇದರ ಪುನರಾವರ್ತನೆಯಾಗುತ್ತದೆ ಅಷ್ಟೇ’ ಎಂದು ಟ್ವೀಟ್ ಮಾಡಿ 1971ರ ಯುದ್ಧದಲ್ಲಿ ಪಾಕ್ ಸೇನಾಧಿಕಾರಿ ಎ.ಎ.ಕೆ. ನಿಯಾಜಿ ನಮ್ಮ ಸೇನಾಧಿಕಾರಿ ಜೆ.ಎಸ್ ಅರೋರಾ ಸಮ್ಮುಖದಲ್ಲಿ ಶರಣಾಗತಿ ಪತ್ರಕ್ಕೆ ಸಹಿ ಹಾಕುತ್ತಿರುವ ಜಗತ್​ಪ್ರಸಿದ್ಧ ಚಿತ್ರವನ್ನು ಲಗತ್ತಿಸಿದ್ದಾರೆ! ಅದ್ಭುತ ಅಲ್ಲವೇ?

    ತಾನೇ ತಯಾರಿಸಿದ ವೀರೇಚಕದ ಪ್ರಯೋಗ ಪಾಕಿಸ್ತಾನದ ಮೇಲೇ ಆಗುತ್ತಿರುವ ಈ ಸನ್ನಿವೇಶದಲ್ಲಿ ಪಾಕಿಸ್ತಾನ ಒಂದಾಗಿ ಉಳಿಯುವ ಸಾಧ್ಯತೆಗಳು ತೀರಾ ಕಡಿಮೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts