More

    ನಿನ್ನೆ ಕಟೋರಾ ಖಾನ್, ಇಂದು ಕಟೋರಾ ಪಾಕಿಸ್ತಾನ್!

    ನಿನ್ನೆ ಕಟೋರಾ ಖಾನ್, ಇಂದು ಕಟೋರಾ ಪಾಕಿಸ್ತಾನ್!ಸಿ-ಪೆಕ್ ಯೋಜನೆಯ ಎಲ್ಲ ಕೆಲಸಗಳನ್ನೂ ಗುತ್ತಿಗೆಯಾಗಿ ಪಡೆದುಕೊಂಡದ್ದು ಚೀನೀ ಕಂಪನಿಗಳು; ಬಹುತೇಕ ಕೆಲಸಗಾರರೂ ಚೀನೀಯರೇ. ಅಂದರೆ ಪಾಕಿಸ್ತಾನೀಯರಿಗೆ ಇಲ್ಲೇನೂ ಕೆಲಸವಿಲ್ಲ! ಅವರ ಭಾಗ್ಯದ ಬಾಗಿಲು ತೆರೆಯುವುದು ಅತ್ತ ಇರಲಿ, ಚೀನೀ ಸಾಲ ತೀರಿಸಲು ಅವರು ತಮ್ಮ ಅಗತ್ಯಗಳನ್ನು ಬಲಿಗೊಡುತ್ತಿದ್ದಾರೆ.

    ಪಾಕಿಸ್ತಾನ ಮೊದಲ ಬಾರಿಗೆ ಸಾಲಕ್ಕಾಗಿ ಇಂಟರ್​ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಮುಂದೆ ನಿಂತದ್ದು 1958ರಲ್ಲಿ. ಮತ್ತದನ್ನು ಇಲ್ಲಿಯವರೆಗೆ 22 ಸಲ ಪುನರಾವರ್ತಿಸಿದೆ! ಐಎಂಎಫ್ ಪ್ರಕಾರ ಅದರ ಮುಂದೆ ಸಾಲಕ್ಕೆ ಕೈಯೊಡ್ಡಿ ನಿಂತ ದೇಶಗಳಲ್ಲಿ ಪಾಕಿಸ್ತಾನದ್ದೇ ದಾಖಲೆ! ಐಎಂಎಫ್ ದಾಖಲೆಗಳ ಪ್ರಕಾರವೇ ಸ್ವಂತವಾಗಿ ಗಳಿಸಿದ ಆದಾಯ ಹಾಗೂ ಹೊರಗಿನಿಂದ ಬಂದ ನೆರವಿನ ಬಹುದೊಡ್ಡ ಭಾಗವನ್ನು ಪಾಕಿಸ್ತಾನ ಬಳಸಿದ್ದು ಭಾರತದೊಂದಿಗೆ ಯುದ್ಧ ನಡೆಸುವುದಕ್ಕಾಗಿ ಮತ್ತು ಸದಾ ಯುದ್ಧಕ್ಕೆ ತಯಾರಾಗಿರುವುದಕ್ಕಾಗಿ. ಇದರಿಂದಾಗಿ ಆರ್ಥಿಕ ಅಭಿವೃದ್ಧಿಗೆ ಬಂಡವಾಳದ ಕೊರತೆ ಉಂಟಾಯಿತು. ಇದು ಸರಪಳಿ ಕ್ರಿಯೆಯಂತೆ ಮುಂದುವರಿದು ಉತ್ಪಾದನೆ ಕಡಿಮೆಯಾಯಿತು, ರಫ್ತು ಕುಗ್ಗಿತು, ಡಾಲರ್ (ವಿದೇಶೀ ವಿನಿಮಯ) ಗಳಿಕೆ ನೆಲಕಚ್ಚಿತು. ಅದೇ ಸಮಯದಲ್ಲಿ ವಿದೇಶಗಳಿಂದ ತೈಲವಿರಲಿ, ಬಹುತೇಕ ಎಲ್ಲ ಅಗತ್ಯವಸ್ತುಗಳನ್ನೂ ಆಮದು ಮಾಡಿಕೊಳ್ಳಬೇಕಾದ್ದರಿಂದ ಡಾಲರ್ ಕೊರತೆ ಬಾಧಿಸತೊಡಗಿತು. ಐಎಂಎಫ್ ಮುಂದೆ ಪಾಕಿಸ್ತಾನ ಮತ್ತೆಮತ್ತೆ ನಿಂತು ‘ಐಎಂಎಫ್ ಅಡಿಕ್ಟ್’ ಎಂದು ಕುಖ್ಯಾತಿ ಪಡೆಯಲು ಇದು ಕಾರಣ. ಈಗ ಅದು 23ನೇ ಬಾರಿ ಅಲ್ಲಿ ಹೋಗಿ ನಿಂತಿದೆ.

    ಹೀಗೆ ಅರ್ಥವ್ಯವಸ್ಥೆಯನ್ನು ಕೈಯಾರೇ ಹಾಳುಮಾಡಿಕೊಂಡ ಪಾಕಿಸ್ತಾನಕ್ಕೆ ಮೇಲೇಳಲಾಗದಂತಹ ಹೊಡೆತ ನೀಡಿರುವುದು ಚೀನೀ ಸಖ್ಯ. ಅಮೆರಿಕಾದ ಪ್ರಿನ್ಸ್​ಟನ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಪಾಕಿಸ್ತಾನೀ ಅರ್ಥಶಾಸ್ತ್ರಜ್ಞ ಆತೀಫ್ ಮಿಯಾ ಪಾಕಿಸ್ತಾನದ ಆರ್ಥಿಕ ದುಸ್ಥಿತಿಯನ್ನು ‘ಡಚ್ ಡಿಸೀಸ್’ ಅಂದರೆ ಡಚ್ ರೋಗ ಎಂದು ವರ್ಣಿಸುತ್ತಾರೆ.

    ನೆದರ್​ಲ್ಯಾಂಡ್ ಅಥವಾ ಹಾಲೆಂಡ್ ಎಂಬ ಪಶ್ಚಿಮ ಯೂರೋಪಿಯನ್ ದೇಶದಲ್ಲಿ 1959ರಲ್ಲಿ ಗ್ರೋನಿಂಗನ್ ಎಂಬ ಪ್ರದೇಶದಲ್ಲಿ ಅಗಾಧ ನೈಸರ್ಗಿಕ ಅನಿಲ ನಿಕ್ಷೇಪಗಳು ಪತ್ತೆಯಾದವು. ಆ ನಿಬಿಡ ಜನಸಂಖ್ಯೆಯ ದೇಶಕ್ಕೆ ಅದೊಂದು ವರ. ಗ್ರೋನಿಂಗನ್ ಅನಿಲ ನಿಕ್ಷೇಪ ನೆದರ್​ಲ್ಯಾಂಡ್​ನ ಭಾಗ್ಯದ ಬಾಗಿಲನ್ನೇ ತೆರೆದ ಕಾರಣ ಡಚ್ಚರು ಅದೊಂದು ಕ್ರೇತ್ರಕ್ಕೆ ಮಾತ್ರ ಹೆಚ್ಚಿನ ಆರ್ಥಿಕ ಚಟುವಟಿಕೆಗಳನ್ನು ಸೀಮಿತಗೊಳಿಸಿ ಉಳಿದೆಲ್ಲಾ ಕ್ಷೇತ್ರಗಳನ್ನು ನಿರ್ಲಕ್ಷಿಸಿದರು. ತೈಲ ರಫ್ತಿನಿಂದ ಬರತೊಡಗಿದ ಆದಾಯದಲ್ಲಿ ಬೇಕಾದ್ದೆಲ್ಲವನ್ನೂ ಹೊರಗಿನಿಂದ ತರಿಸಿಕೊಳ್ಳುವ ಯೋಜನೆ (ಅಥವಾ ದುರಭ್ಯಾಸ?) ಕೆಲವು ವರ್ಷಗಳವರೆಗೆ ಸರಿಯಾಗಿರುವಂತೇ ಕಂಡಿತು. ಆದರೆ ಆಮದು ವೆಚ್ಚ ಹೆಚ್ಚುತ್ತಾ ಹೋದಂತೆ ತಾವು ಮಾಡಿದ ತಪ್ಪು ಡಚ್ಚರಿಗೆ ತಟ್ಟತೊಡಗಿತು, ಒಂದೇ ಕ್ಷೇತ್ರಕ್ಕೆ ಆದ್ಯತೆ ಕೊಟ್ಟದ್ದರ ದುಷ್ಪರಿಣಾಮದ ಫಲವನ್ನು ಅನುಭವಿಸತೊಡಗಿದರು. ನೆದರ್​ಲ್ಯಾಂಡ್​ನ ಆ ಸ್ಥಿತಿಯನ್ನು ವರ್ಣಿಸಲು ದ ಇಕಾನಮಿಸ್ಟ್ ಪತ್ರಿಕೆ ‘ಡಚ್ ಡಿಸೀಸ್’ಎಂಬ ಪದಪುಂಜವನ್ನು 1977ರಲ್ಲಿ ಸೃಷ್ಟಿಸಿತು. ಆ ನಂತರ ಈ ಪದಪುಂಜ ಜಗತ್ತಿನಲ್ಲಿ ಅಲ್ಲಲ್ಲಿ ಬಳಕೆಯಾಗುತ್ತಿದೆ. ತೈಲ ಬೆಲೆಯ ಏರಿಳಿತ ಮತ್ತು ತೈಲದ ಮೇಲಿನ ಅವಲಂಬನೆಯನ್ನು ಜಗತ್ತು ಹಂತಹಂತವಾಗಿ ಕಡಿಮೆ ಮಾಡಲು ಪ್ರಯತ್ನ ಆರಂಭಿಸಿದ ಕಾರಣ ಕೇವಲ ತೈಲ ರಫ್ತಿನ ಮೇಲೇ ಆಧಾರಿತವಾದ ತನ್ನ ಅರ್ಥವ್ಯವಸ್ಥೆ ಕುಸಿದುಹೋಗಬಹುದೆಂದು ಸಕಾರಣವಾಗಿಯೇ ಆತಂಕಗೊಂಡ ಸೌದಿ ಅರೇಬಿಯಾ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಅದನ್ನು ಬದಲಿ ಆದಾಯಮೂಲವನ್ನಾಗಿ ಬೆಳೆಸಲು ದಶಕದ ಹಿಂದೆಯೇ ಪ್ರಯತ್ನ ಆರಂಭಿಸಿತ್ತು. ಇಸ್ಲಾಮ್ ಇತಿಹಾಸದಲ್ಲಿ ಪವಿತ್ರ ಸ್ಥಾನ ಪಡೆದಿರುವ ಹಲವಾರು ಕಟ್ಟಡಗಳನ್ನು ಕೆಡವಿ ವಿದೇಶೀ ಪ್ರವಾಸಿಗರಿಗಾಗಿ ಐಷಾರಾಮಿ ಹೋಟೆಲ್​ಗಳನ್ನು ನಿರ್ವಿುಸುವುದರಿಂದ ಆರಂಭವಾದ ಈ ಯೋಜನೆ ಇಂದು ಸಂಗೀತೋತ್ಸವಗಳನ್ನು ಆಯೋಜಿಸುವ, ಅವುಗಳಲ್ಲಿ ಮಹಿಳೆಯರೂ ಹಾಡುವ ಮಟ್ಟಕ್ಕೆ ಬಂದು ನಿಂತಿದೆ!

    ಗ್ರೋನಿಂಗನ್ ಗ್ಯಾಸ್ ಫೀಲ್ಡ್ ಮೇಲಷ್ಟೇ ಗಮನ ಕೇಂದ್ರೀಕರಿಸಿ, ಉಳಿದೆಲ್ಲಾ ಕ್ಷೇತ್ರಗಳನ್ನು ನಿರ್ಲಕ್ಷಿಸಿ ಡಚ್ ಡಿಸೀಸ್​ಗೊಳಗಾದ ನೆದರ್​ಲ್ಯಾಂಡ್​ನಂತೆ ಪಾಕಿಸ್ತಾನ ತನ್ನೆಲ್ಲಾ ಗಮನವನ್ನು ಚೈನಾ-ಪಾಕಿಸ್ತಾನ್ ಇಕಾನಮಿಕ್ ಕಾರಿಡಾರ್ (ಸಿ-ಪೆಕ್) ಯೋಜನೆಗಷ್ಟೇ ಸೀಮಿತಗೊಳಿಸಿ ತಾನೂ ಡಚ್ ಡಿಸೀಸ್​ಗೊಳಗಾಗಿದೆ ಎಂದು ಆತೀಫ್ ಮಿಯಾ ಹೇಳುತ್ತಾರೆ. ಅವರ ವಿವರಣೆ ಸರಿಯಾಗಿದೆಯೇ ಎಂದು ನಾವೀಗ ಪರಿಶೀಲಿಸೋಣ.

    ಅತ್ಯಧಿಕವೆನಿಸುವ 6.5% ವಾರ್ಷಿಕ ಬಡ್ಡಿದರದಲ್ಲಿ ಅಗಾಧ 80 ಬಿಲಿಯನ್ ಡಾಲರ್​ಗಳ ಚೀನೀ ಸಾಲದೊಂದಿಗೆ ಸಿ-ಪೆಕ್ ಯೋಜನೆಯನ್ನು ಪಾಕಿಸ್ತಾನ ಹಮ್ಮಿಕೊಂಡ ಮೊದಲ ದಿನಗಳಲ್ಲಿ ಅದು ದೇಶದ ಭಾಗ್ಯದ ಬಾಗಿಲನ್ನೇ ತೆರೆದುಬಿಡುತ್ತದೆ ಎಂದು ಚೀನೀ ಸರ್ಕಾರ ಹಾಗೂ ನವಾಜ್ ಶರೀಫ್ ಸರ್ಕಾರಗಳೆರಡೂ ಪಾಕ್ ಜನತೆಯನ್ನು ನಂಬಿಸಿದ್ದವು. ಯೋಜನೆಯ ಅಂಗವಾಗಿ ನಿರ್ವಣವಾಗುವ ಸಹಸ್ರಾರು ಕಿಲೋಮೀಟರ್​ಗಳ ರಸ್ತೆ-ರೈಲು ಮಾರ್ಗ, ಡಜನ್​ಗಟ್ಟಲೆ ವಿದ್ಯುತ್ ಸಂಯಂತ್ರಗಳು, ಅಣೆಕಟ್ಟೆಗಳು ಮತ್ತು ಭಾರಿ ಕೈಗಾರಿಕಾ ಸಮುಚ್ಚಯಗಳು ಲಕ್ಷಾಂತರ ಪಾಕ್ ನಾಗರಿಕರಿಗೆ ಉದ್ಯೋಗ ಒದಗಿಸುತ್ತವೆ, ಅವರ ಆದಾಯ ಏರಿ ಅವರ ಕುಟುಂಬಗಳ ಜೀವನಮಟ್ಟ ಏರುತ್ತದೆ; ಯೋಜನೆ ಪೂರ್ಣಗೊಂಡಾಗ ಪಾಕಿಸ್ತಾನ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗುವುದಷ್ಟೇ ಅಲ್ಲ, ದೊಡ್ಡ ರಫ್ತುದಾರ ದೇಶವಾಗಿಯೂ ಬದಲಾಗುತ್ತದೆ, ಆಗ ಹರಿದುಬರುವ ಡಾಲರ್ ಹೊಳೆಯಿಂದ ಪಾಕಿಸ್ತಾನ ಚೀನೀ ಸಾಲವನ್ನು ತೀರಿಸಿಬಿಡುತ್ತದೆ ಮತ್ತು ಇನ್ನುಳಿದ ಹಣವನ್ನು ಇನ್ನಷ್ಟು ಅಭಿವೃದ್ಧಿಗೆ ಬಂಡವಾಳವಾಗಿ ಹೂಡಿ, ಬೃಹತ್ ಆರ್ಥಿಕ ಶಕ್ತಿಯಾಗಿ ಇತರರ (ಭಾರತೀಯರ!) ಕಣ್ಣು ಕಿಸುರಾಗುವಂತೆ ಬೆಳೆದುನಿಲ್ಲುತ್ತದೆ ಎಂದು ಹಣ ಹೂಡಿದ ಜಿನ್​ಪಿಂಗ್ ಮತ್ತು ಹಣ ತಿಂದ ಶರೀಫ್ ಮತ್ತವರ ಹೆಣ್ಣುಮಕ್ಕಳು ಹೇಳಿದ್ದೇ ಹೇಳಿದ್ದು. ಆದರೆ ಈ ಏಳು ವರ್ಷಗಳಲ್ಲಿ ಏನಾಗಿದೆ?

    ಸಿ-ಪೆಕ್ ಯೋಜನೆಯ ಎಲ್ಲ ಕೆಲಸಗಳನ್ನೂ ಗುತ್ತಿಗೆಯಾಗಿ ಪಡೆದುಕೊಂಡದ್ದು ಚೀನೀ ಕಂಪನಿಗಳು; ಎಲ್ಲ ಇಂಜಿನಿಯರ್​ಗಳು, ಅಧಿಕಾರಿಗಳು ಮತ್ತು ಬಹುತೇಕ ಕೆಲಸಗಾರರೂ ಚೀನೀಯರೇ. ಅಂದರೆ ಪಾಕಿಸ್ತಾನೀಯರಿಗೆ ಇಲ್ಲೇನೂ ಕೆಲಸವಿಲ್ಲ! ಅವರ ಭಾಗ್ಯದ ಬಾಗಿಲು ತೆರೆಯುವುದು ಅತ್ತ ಇರಲಿ, ಚೀನೀ ಸಾಲ ತೀರಿಸಲು ಅವರು ತಮ್ಮ ಅಗತ್ಯಗಳನ್ನು ಬಲಿಗೊಡುತ್ತಿದ್ದಾರೆ. ನೀವು ಟೀ ಕುಡಿಯುವುದನ್ನೂ ಕಡಿಮೆ ಮಾಡಿ, ಅದರಿಂದಾಗಿ ಟೀ ಆಮದು ತಗ್ಗಿ ನಾವು ಒಂದಷ್ಟು ಡಾಲರ್ ಉಳಿಸಬಹುದು ಎಂದು ಪಾಕ್ ಸರ್ಕಾರ ಜನರಿಗೆ ಹೇಳುತ್ತಿದೆ!

    ಚೀನೀ ಸಾಲದಿಂದ ಹೀಗೆಲ್ಲಾ ಆಗುತ್ತದೆ ಎಂದು ಪಾಕ್ ನಾಯಕರಿಗೆ ತಿಳಿದಿರಲಿಲ್ಲವೇ? ಚೆನ್ನಾಗಿಯೇ ತಿಳಿದಿತ್ತು, ಆದರೆ ಚೀನೀ ಲಂಚದಡಿಯಲ್ಲಿ ನವಾಜ್ ಶರೀಫ್​ರ ನಾಲಿಗೆ ಹೂತುಹೋಗಿತ್ತು. ಹೀಗೆ ಎಲ್ಲವನ್ನೂ ಚೀನೀಯರ ಕೈಗೊಪ್ಪಿಸಿದ ನವಾಜ್ ಶರೀಫ್ ನೀತಿಯನ್ನು ‘ಪಾಕಿಸ್ತಾನ ತನ್ನ ಅಭಿವೃದ್ಧಿಯನ್ನು ಚೀನಾಗೆ ಔಟ್​ಸೋರ್ಸ್ ಮಾಡಿದೆ’ ಎಂದು ಅರ್ಥಶಾಸ್ತ್ರಜ್ಞ ಆತೀಫ್ ಮಿಯಾ ಬೇಸರದಿಂದ ಹೇಳುತ್ತಾರೆ.

    ಶರೀಫ್​ರ ಉತ್ತರಾಧಿಕಾರಿ ಶಾಹಿದ್ ಕಾಖರ್ ಅಬ್ವಾಸಿ ಚೀನಾ ಬಗ್ಗೆ ಖಡಕ್ ನಿಲುವು ತಳೆದರು. ಸಿ-ಪೆಕ್ ಯೋಜನೆ ಪಾಕಿಸ್ತಾನಕ್ಕೆ ಲಾಭಕರವಲ್ಲವೆಂದರಿತ ಅವರ ಸರ್ಕಾರ ಯಾವುದೇ ಹೊಸ ಯೋಜನೆಗಳಿಗೆ ಅವಕಾಶ ನೀಡಬಾರದೆಂದು ನವೆಂಬರ್ 2017ರಲ್ಲಿ ನಿರ್ಣಯ ತೆಗೆದುಕೊಂಡಿತು. ಆದರೆ ಅದೇನೂ ಯಾವ ಪ್ರಭಾವವನ್ನೂ ಬೀರಲಿಲ್ಲ. ಅಲ್ಲಿಯವರೆಗೆ ಆರಂಭವಾಗಿದ್ದ ಯೋಜನೆಗಳನ್ನು ನಿರಾತಂಕವಾಗಿ ಸಾಗಿಸುವಂತಹ ಅವಕಾಶವನ್ನು ಮೂಲ ಒಪ್ಪಂದಗಳಲ್ಲೇ ಸೇರಿಸಿತ್ತು ಚಾಣಾಕ್ಷ ಚೀನಾ! ಅಷ್ಟೇ ಅಲ್ಲ, ಯೋಜನೆಯ ಮೂಲ ಒಪ್ಪಂದಗಳನ್ನು ಯಾರ ಮುಂದೆಯೂ ಬಯಲುಮಾಡಬಾರದೆಂಬ ನಿಯಮಕ್ಕೂ ಪಾಕಿಗಳಿಂದ ಸಹಿ ಹಾಕಿಸಿಕೊಂಡಿದ್ದರು ಕುಟಿಲ ಜಿನ್​ಪಿಂಗ್!

    ಸಿ-ಪೆಕ್ ಯೋಜನೆಯಿಂದ ಪಾಕಿಸ್ತಾನಕ್ಕೆ ಲಾಭವಂತೂ ಇಲ್ಲ, ಆದರೆ ಚೀನೀ ಸಾಲವಂತೂ ಹಾಗೇ ಉಳಿದಿದೆ. ವಾರ್ಷಿಕ ಬಡ್ಡಿಯೂ ಹೊರಲಾಗದ ಹೊರೆಯೇ. ಇದನ್ನು ಅಧಿಕಾರಕ್ಕೆ ಬರುವ ಮೊದಲೇ ಅರಿತಿದ್ದ ಇಮ್ರಾನ್ ಖಾನ್ ಸಿ-ಪೆಕ್ ಯೋಜನೆಯನ್ನು ದೊಡ್ಡ ದನಿಯಲ್ಲಿ ವಿರೋಧಿಸಿದ್ದರು. ಆಗಸ್ಟ್ 2018ರಲ್ಲಿ ಪ್ರಧಾನಿಯಾದ ಮೇಲೆ ಅದನ್ನು ನಿಲ್ಲಿಸಲು ಪ್ರಯತ್ನವನ್ನೇನೋ ಮಾಡಿದರು. ಆದರೆ ಅದು ವೈಫಲ್ಯದಲ್ಲಿ ಕೊನೆಯಾಗುವುದು ಪೂರ್ವನಿರ್ಧಾರಿತವಾಗಿತ್ತು.

    ಹಿಂದಿನ ಮೂರುನಾಲ್ಕು ವರ್ಷಗಳಲ್ಲಿ ಸಿ-ಪೆಕ್ ಹೊರತಾಗಿ ಬೇರೆ ಯಾವ ಕ್ಷೇತ್ರಗಳಲ್ಲೂ ಬಂಡವಾಳ ಹೂಡದೆ, ಆಮೆವೇಗದಲ್ಲಿ ಸಾಗುತ್ತಿರುವ ಸಿ-ಪೆಕ್ ಯೋಜನೆಯಿಂದ ಬಿಡಿಗಾಸೂ ಲಾಭ ಬಾರದಿರುವಂತಹ ಸ್ಥಿತಿಯಲ್ಲಿ ಚೀನೀ ಸಾಲಕ್ಕೆ ಬಡ್ಡಿ ಕಟ್ಟಲು ಮತ್ತು ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ವಿದೇಶೀ ವಿನಿಮಯವು ಕಡಿಮೆಯಾಗುತ್ತಾ ಹೋದಾಗ ಇಮ್ರಾನ್ ಖಾನ್​ಗೆ ಕಂಡದ್ದು ಐಎಂಎಫ್. ಆದರೆ ತಾನು ಇದುವರೆಗೆ ನೀಡಿದ ನೆರವನ್ನೆಲ್ಲಾ ವ್ಯರ್ಥಮಾಡಿದಂತೆ ಇದನ್ನೂ ಮಾಡಬಹುದು, ಜತೆಗೆ ಚೀನೀ ಸಾಲಕ್ಕೆ ಬಡ್ಡಿ ಪಾವತಿಸಲೂ ಬಳಸಿಕೊಳ್ಳಬಹುದು ಎಂದು ಸಕಾರಣವಾಗಿಯೇ ಶಂಕಿಸಿದ ಐಎಂಎಫ್, ಚೀನೀ ಸಾಲ ಒಪ್ಪಂದದ ನಿಯಮಗಳನ್ನು ತನಗೆ ನೀಡುವಂತೆ ಕೇಳಿತು. ಇದರಿಂದಾಗಿ ತನ್ನ ಸಾಲಸಂಕೋಲೆ ಕುತಂತ್ರ ಬಯಲಾಗಬಹುದೆಂದು ಚೀನಾ ಐಎಂಎಫ್ ಕೇಳಿಕೆಗೆ ಒಪ್ಪಬಾರದೆಂದು ಖಾನ್ ಮೇಲೆ ಉಗ್ರ ಒತ್ತಡ ಹಾಕಿತು. ದಾರಿಗಾಣದ ಖಾನ್ ಸಾಹೇಬರು ‘ನಾನು ಆತ್ಮಹತ್ಯೆಯನ್ನಾದರೂ ಮಾಡಿಕೊಳ್ಳುತ್ತೇನೆ, ಆದರೆ ಐಎಂಎಫ್ ಮುಂದೆ ಕೈಯೊಡ್ಡಲಾರೆ!’ ಎಂದು ಸಾರ್ವಜನಿಕವಾಗಿ ಘೊಷಿಸಿ ಚೀನೀಯರನ್ನು ಸಮಾಧಾನಿಸಲು ನೋಡಿದರು. ಈ ನಿಲುವಿನಿಂದ ಚೀನಾ ಸಂತೃಪ್ತಗೊಳ್ಳುತ್ತದೆ, ಸಾಲಮರುಪಾವತಿ ಗಡುವನ್ನು ವಿಸ್ತರಿಸುತ್ತದೆ, ಒಂದಷ್ಟು ಸಾಲವನ್ನು ಮನ್ನಾ ಸಹಾ ಮಾಡಬಹುದು ಎಂದು ಖಾನ್ ಅಂದುಕೊಂಡರು. ಬರೀ ಅಂದುಕೊಂಡದ್ದೇ ಬಂತು, ಅಮೆರಿಕಾ, ಬ್ರಿಟನ್, ಜರ್ಮನಿಯಂತಹ ಉದಾರವಾದಿ ಬಂಡವಾಳಶಾಹಿಗಳು ಕರುಣೆ ತೋರಬಹುದೇನೋ. ಈ ಪಟ್ಟಿಗೆ ಭಾರತವನ್ನೂ ಸೇರಿಸಬಹುದು. ಸಣ್ಣಮೊತ್ತವಾದರೂ ಸರಿ, ಇಪ್ಪತ್ತು ಮಿಲಿಯನ್ ಡಾಲರ್​ಗಳನ್ನು ಪಾಕಿಸ್ತಾನಕ್ಕೆ 2010ರಲ್ಲಿ ನೀಡಿದ್ದ, ಈ ವರ್ಷದ ಏಳೇ ತಿಂಗಳುಗಳಲ್ಲಿ 3.8 ಬಿಲಿಯನ್ ಡಾಲರ್ ನೆರವನ್ನು ಶ್ರೀಲಂಕಾಗೆ ನೀಡಿರುವ ಭಾರತಕ್ಕೆ ಇಂದು ಪಾಕಿಸ್ತಾನ ಕೇಳಿಕೊಂಡರೆ ಸಹಾಯ ನೀಡುವುದೇನೂ ಕಷ್ಟವಲ್ಲ. ಆದರೆ ಶೈಲಾಕ್​ನ ಅಪರಾವತಾರವಾದ ಚೀನೀ ‘ಕಮ್ಯೂನಿಸ್ಟ್ ಬಂಡವಾಳಶಾಹಿ’ಗಳಿಂದ ಇಮ್ರಾನ್ ಖಾನ್​ರಿಗೆ ಯಾವ ರಿಯಾಯಿತಿಯೂ ಸಿಗಲಿಲ್ಲ. ರಿಯಾಯಿತಿ ಇರಲಿ, ಸಾಲದ ಕುಣಿಕೆಯನ್ನು ಇನ್ನಷ್ಟು ಬಿಗಿಗೊಳಿಸಿದರು. ಚೀನೀಯರ ಈ ನಿಜರೂಪ ಕಂಡ ಇಮ್ರಾನ್ ಖಾನ್ ನೇರ ಐಎಂಎಫ್ ಮುಂದೆ ಹೋಗಿ ನಿಂತದ್ದಲ್ಲದೇ, ಚೀನೀ ಸಾಲ ಒಪ್ಪಂದದ ನಿಯಮಗಳನ್ನು ಅದರ ಮುಂದೆ ಬಯಲುಗೊಳಿಸಿಬಿಟ್ಟರು! ಅದರಿಂದ ಅವರು ಕೇಳಿದ 7.5 ಬಿಲಿಯನ್ ಡಾಲರ್​ಗಳಲ್ಲಿ ಒಂದೂವರೆ ಬಿಲಿಯನ್ ಡಾಲರ್​ಗಳಷ್ಟೇ ಸಿಕ್ಕಿದ್ದು. ಉಳಿದದ್ದನ್ನು ಪಡೆಯಬೇಕಾದರೆ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಐಎಂಎಫ್ ಹೇಳಿತು. ಅಲ್ಲದೆ, ಅಂತಾರಾಷ್ಟ್ರೀಯ ಭಯೋತ್ಪಾದನೆಯಲ್ಲಿ ತೊಡಗಿರುವ ಕಾರಣಕ್ಕಾಗಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್​ಎಟಿಎಫ್) ಸಂಸ್ಥೆಯ ಬೂದು ಪಟ್ಟಿಗೆ ಬಿದ್ದಿರುವ ಪಾಕಿಸ್ತಾನಕ್ಕೆ ಮುಕ್ತವಾಗಿ ಸಾಲ ನೀಡುವುದು ಐಎಂಎಫ್ ಅಥವಾ ಯಾವುದೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಸಾಧ್ಯವಿಲ್ಲ.

    ದೇಶ ಉಳಿಯಬೇಕಾದರೆ ಮುಂದಿನ ಎರಡು ವರ್ಷಗಳಲ್ಲಿ 56 ಬಿಲಿಯನ್ ಡಾಲರ್​ಗಳು ಬೇಕೆಂದೂ, ಅದರಲ್ಲಿ 4.5 ಬಿಲಿಯನ್ ಮಾತ್ರ ಆಂತರಿಕ ಮೂಲಗಳಿಂದ ಬರುತ್ತದೆಂದೂ, ಉಳಿದ 51.5 ಬಿಲಿಯನ್​ಗಳು ಹೊರಗಿನಿಂದಲೇ ಬರಬೇಕೆಂದೂ, ಬಾರದಿದ್ದರೆ ಅಲ್ಲಿಗೆ ಪಾಕಿಸ್ತಾನದ ಕಥೆ ಮುಗಿಯುತ್ತದೆಂದೂ ಎರಡು ವರ್ಷಗಳ ಹಿಂದೆ ಇಮ್ರಾನ್ ಖಾನ್ ಶ್ರೀಮಂತ ಸೌದಿ ಅರೇಬಿಯಾದಿಂದ ಬಡ ಕಝಾಕ್​ಸ್ತಾನ್ ಸೇರಿದಂತೆ ಹಲವು ಹತ್ತು ದೇಶಗಳ ಮುಂದೆ ಭಿಕ್ಷಾಪಾತ್ರೆ ಹಿಡಿದರು. ಪರಿಣಾಮವಾಗಿ ಅವರಿಗೆ ಸಿಕ್ಕಿದ್ದು ‘ಕಟೋರಾ ಖಾನ್’ (ಭಿಕ್ಷಾಪಾತ್ರೆ ಖಾನ್) ಎಂಬ ಹೆಸರೇ ಹೊರತು ದೇಶಕ್ಕೆ ಬೇಕಿದ್ದಷ್ಟು ಹಣವಲ್ಲ.

    ಇಂದು ಪಾಕಿಸ್ತಾನದಲ್ಲಿ ಉಳಿದಿರುವ ವಿದೇಶೀ ವಿನಿಮಯ ಕೇವಲ 7.8 ಬಿಲಿಯನ್ ಡಾಲರ್​ಗಳು. ಇದರಲ್ಲಿ ಆರು ಬಿಲಿಯನ್ ವಿದೇಶೀ ಸಾಲದ ಬಡ್ಡಿಗಾಗಿ ಹೋಗಬೇಕಾಗಿದೆ. ಉಳಿದ ಒಂದೂಮುಕ್ಕಾಲು ಬಿಲಿಯನ್​ನಲ್ಲಿ ಪಾಕಿಸ್ತಾನ ಇನ್ನೆಷ್ಟು ದಿನ ಜೀವ ಹಿಡಿದುಕೊಂಡಿರಲು ಸಾಧ್ಯ? ಪ್ರಧಾನಿ ಶೆಹ್​ಬಾಜ್ ಶರೀಫ್ ಇಡೀ ಮಂತ್ರಿಮಂಡಲವನ್ನು ಜತೆಗೆ ಕಟ್ಟಿಕೊಂಡು ಹಣಕ್ಕಾಗಿ ದೇಶದೇಶಗಳನ್ನು ಅಲೆಯುತ್ತಿದ್ದಾರೆ, ಸೇನಾ ದಂಡನಾಯಕ ಕಮರ್ ಜಾವೆದ್ ಬಾಜ್ವಾ ಅಮೆರಿಕಾ ಮುಂದೆ ಅಂಗಲಾಚುತ್ತಿದ್ದಾರೆ. ಇವರೆಲ್ಲರೂ ಸೇರಿ ದೇಶಕ್ಕೆ ‘ಕಟೋರಾ ಪಾಕಿಸ್ತಾನ್’ ಎಂಬ ಹೆಸರು ತಂದಿದ್ದಾರೆ. ‘ಪಾಕ್ ಪಾತ್ರೆ’ ತುಂಬುವುದೇ? ಇದನ್ನು ಮುಂದಿನವಾರ ಲೇಖನಸರಣಿಯ ಕೊನೆಯ ಭಾಗದಲ್ಲಿ ನೋಡೋಣ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts